SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಬೆಂಗಳೂರಿನಲ್ಲಿ ಚಂದ್ರನಡಿಗೆ!


02 moon walk in Bengaluru.spardha webಬೆಂಗಳೂರು:  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ  ಅಧ್ಯಯನಕ್ಕಾಗಿ ಮೊದಲ ಮಾನವನನ್ನು ಇಳಿಸಲು ಇನ್ನೂ ಕೆಲವು ವರ್ಷಗಳು ಬೇಕಾಗಿರಬಹುದು, ಆದರೆ ಬೆಂಗಳೂರಿನ ನಾಗರಿಕ ಸವಲತ್ತಗಳನ್ನು ಪೂರೈಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಇಸ್ರೋವನ್ನು ಮೀರಿಸಿ, ಚಂದ್ರನೆಲದ ಮೇಲೆ ಮಾನವ ನಡಿಗೆಗೆ ಬೇಕಾದ ‘ಪ್ರೋಟೋಟೈಪ್’ ಗೆ ಸಿದ್ಧತೆ ನಡೆಸಿದೆ. ಬಿಬಿಎಂಪಿಗೆ ಈ ಕಾರ್ಯದಲ್ಲಿ ನೆರವಾಗುತ್ತಿರುವುದಕ್ಕಾಗಿ ಬೆಂಗಳೂರಿನ ‘ಕುಣಿಭರಿತ’ ರಸ್ತೆಗಳಿಗೆ ಧನ್ಯವಾದ ಹೇಳಲೇ ಬೇಕು.

ಬೆಂಗಳೂರಿನ ತುಂಗಾನಗರ ಬಡಾವಣೆಯ ಮುಖ್ಯರಸ್ತೆಯ ಕುಣಿಗಳು ನಗರದ ಬೀದಿ ಕಲಾವಿದ ಬಾದಲ್ ನಂಜುಂಡ ಸ್ವಾಮಿ ಅವರಿಗೆ ಚಂದ್ರ ನಡಿಗೆ ಅಭ್ಯಾಸಕ್ಕೆ ಪ್ರೇರಣೆ ನೀಡಿವೆ. ಗಗನಯಾತ್ರಿಯಂತೆ ವೇಷಭೂಷಣ ಧರಿಸಿದ ಬಾದಲ್ ಅವರು ತುಂಗಾನಗರದ ಮುಖ್ಯರಸ್ತೆಯ ಕುಣಿಗಳ ಮಧ್ಯೆ ಚಂದ್ರನಡಿಗೆ ಮಾಡುವ ಮೂಲಕ ತಮ್ಮ ಸೃಜನಶೀಲತೆಯನ್ನು ಮೆರೆದಿದ್ದಾರೆ. ಬೆಂಗಳೂರಿನ ಅವರ ‘ಚಂದ್ರ ನಡಿಗೆ’ಯ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್  ಆಗಿದೆ.

ಬಾದಲ್ ಅವರು ರಸ್ತೆ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆಯಲು ತಮ್ಮ ಸೃಜನಶೀಲ ಕಲೆಯನ್ನು ಬಳಸಿಕೊಂಡಿರುವುದು ಇದೇ ಮೊದಲು ಏನಲ್ಲ. ಬೆಂಗಳೂರಿನ ರಸ್ತೆ ಹೊಂಡಗಳನ್ನು ಅವರು ಈ ಹಿಂದೆ ‘ತಾವರೆ ಕೊಳ’ಗಳನ್ನಾಗಿಯೂ, ‘ಮೊಸಳೆ ಹೊಂಡ’ಗಳಾಗಿಯೂ ಪರಿವರ್ತಿಸಿದ್ದರು.

ಬೆಂಗಳೂರಿನ ರಸ್ತೆ ಹೊಂಡಗಳನ್ನು ಆದ್ಯತೆ ಆಧಾರದಲ್ಲಿ ಮುಚ್ಚಲು ಕ್ರಮ ಕೈಗೊಂಡಿರುವುದಾಗಿ ಬಿಬಿಎಂಪಿ ಪ್ರತಿಪಾದಿಸುತ್ತಿರುವುದರ ಮಧ್ಯೆ ನಂಜುಂಡ ಸ್ವಾಮಿ ಅವರು ‘ಚಂದ್ರ ನಡಿಗೆ’ ಮೂಲಕ ಬೆಂಗಳೂರು ರಸ್ತೆಗಳ ದುರವಸ್ಥೆಗೆ ಕನ್ನಡಿ ಹಿಡಿದರು. ಹೊಂಡಗಳ ಪರಿಣಾಮವಾಗಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಬಿಬಿಎಂಪಿಯನ್ನೇ ಹೊಣೆ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಕಳೆದ ಆಗಸ್ಟ್ ತಿಂಗಳಲ್ಲಿ ಎಚ್ಚರಿಸಿದ ಬಳಿಕ ಬಿಬಿಎಂಪಿ ಹೊಂಡಗಳನ್ನು ಮುಚ್ಚಲು ಆದ್ಯತೆ ಆಧಾರದಲ್ಲಿ ಕ್ರಮ ವಹಿಸುವುದಾಗಿ ಹೇಳಿಕೆ ನೀಡಿತ್ತು.

ರಸ್ತೆ ಅಪಘಾತಗಳಲ್ಲಿ ಮೃತರಾದವರ ಕುಟುಂಬಕ್ಕೆ ಬಿಬಿಎಂಪಿಯೇ ಪರಿಹಾರ ನೀಡಬೇಕಾಗುತ್ತದೆ ಎಂಬುದು ಹೈಕೋರ್ಟ್ ಎಚ್ಚರಿಕೆಯ ಅರ್ಥವಾಗಿತ್ತು. ‘ಸಂವಿಧಾನದ 21ನೇ ವಿಧಿಯ ವ್ಯಾಪ್ತಿಯನ್ನು ಸುಪ್ರೀಂಕೋರ್ಟ್ ವಿಸ್ತರಿಸಿದೆ, ಪ್ರತಿಯೊಬ್ಬ ಪ್ರಜೆಗೂ ಅರ್ಥಪೂರ್ಣ ಮತ್ತು ಘನತೆಯುಕ್ತ ಬದುಕು ನಡೆಸುವ ಹಕ್ಕಿದೆ ಮತ್ತು ಉತ್ತಮ ರಸ್ತೆಗಳು ಅತ್ಯಗತ್ಯವಾದ ಆವಶ್ಯಕತೆಯಾಗಿದೆ. ಹೊಂಡಮುಕ್ತವಾದ ರಸ್ತೆಗಳ ಖಾತರಿ ನೀಡಬೇಕಾದ್ದು ಬಿಬಿಎಂಪಿಯ ಸಂವಿಧಾನಬದ್ಧ ಹೊಣೆಗಾರಿಕೆ’ ಎಂದು ಮುಖ್ಯ  ನ್ಯಾಯಮೂರ್ತಿ ಎಎಸ್ ಓಕಾ ಹೇಳಿದ್ದರು.

ರಸ್ತೆ ಹೊಂಡಗಳನ್ನು ಮುಚ್ಚಲು ವಿಫಲರಾಗುವ ಎಂಜಿನಿಯರುಗಳಿಗೆ  2000 ರೂಪಾಯಿ ದಂಡ ವಿಧಿಸುವುದಾಗಿ ಬಿಬಿಎಂಪಿ ಕಳೆದವಾರ ಪ್ರಕಟಿಸಿತ್ತು.

ಇತ್ತೀಚಿನ ಮಾಹಿತಿ ಪ್ರಕಾರ ಜುಲೈ ಮಧ್ಯಾವಧಿಯ ವೇಳೆಗೆ ಬೆಂಗಳೂರು ನಗರದಲ್ಲಿ ಇದ್ದ ರಸ್ತೆ ಹೊಂಡಗಳ ಸಂಖ್ಯೆ 2840 ಮಾತ್ರ ಎಂದು ಬಿಬಿಎಂಪಿ ಪ್ರತಿಪಾದಿಸಿತ್ತು. ಆದರೆ ವಾಸ್ತವವಾಗಿ ಬೆಂಗಳೂರಿನ 198 ವಾರ್ಡುಗಳಲ್ಲಿನ  ರಸ್ತೆಹೊಂಡಗಳ ಸಂಖ್ಯೆ ಇದಕ್ಕಿಂತ ಹೆಚ್ಚು ಎಂದು ಹೇಳಲಾಗಿದೆ. ರಸ್ತೆ ಹೊಂಡಗಳು ಸಂಚಾರಕ್ಕೆ ಅಡ್ಡಿ ಉಂಟುಮಾಡುವ  ಪ್ರಮುಖ ಅಡಚಣೆಗಳಾಗಿದ್ದರೂ, ಜನರು ಅದರ ಆಚೀಚೆಯಲ್ಲಿ ಓಡಾಡುವ ಅಥವಾ ವಾಹನ ಒಯ್ಯುವ ಮೂಲಕ ಅವುಗಳಿಗೆ ಹೊಂದಿಕೊಂಡು ಬದುಕು ಸಾಗಿಸುವುದನ್ನು ರೂಢಿಸಿಕೊಂಡಿದ್ದಾರೆ. ಕೆಲವೆಡೆಗಳಲ್ಲಂತೂ ಹೊಂಡಗಳು ಬಾವಿಗಳಂತಾಗಿ ಜೀವಹಾನಿಯಾದ ಘಟನೆಗಳೂ ಘಟಿಸಿವೆ.

ಬೆಂಗಳೂರಿನಲ್ಲಿ ಚಂದ್ರ ನಡಿಗೆಯ ವಿಡಿಯೋ ನೋಡಲು ಈ ಕೆಳಗಿನ ಚಿತ್ರವನ್ನು  ಕ್ಲಿಕ್ ಮಾಡಿರಿ: 02 moon walk in Bengaluru.spardha web

 

September 2, 2019 - Posted by | ಕುಂದು-ಕೊರತೆ, ಬಿಬಿಎಂಪಿ, ಬೆಂಗಳೂರು, BBMP, Bengaluru, Bangalore,, Flash News, Moon Walk, News, Spardha, Video |

1 Comment »

  1. […] ಬಿಬಿಎಂಪಿ ಕೈಗೊಂಡ ಕ್ರಮದ ಕುರಿತ ಪತ್ರಿಕಾ ವರದಿಯ ತುಣುಕು ಮೇಲಿದೆ. ‘ಚಂದ್ರ ನಡಿಗೆ’ಯ  ವರದಿಯನ್ನು ‘ಸ್ಪರ್ಧಾ’ …. […]

    Pingback by ‘ಚಂದ್ರ ನಡಿಗೆ’ ಬಿಬಿಎಂಪಿಯ ಕಣ್ತೆರೆಸಿತು! « SPARDHA | September 4, 2019 | Reply


Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ