SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಯೋಧ್ಯೆ: ಹಕ್ಕು ಬಿಟ್ಟು ಕೊಡಲು ಸುನ್ನಿ ವಕ್ಫ್ ಮಂಡಳಿ ಸಿದ್ಧ

16 supreme-court Mediation committee
ಸಂಧಾನ ಸಮಿತಿ ವರದಿ ಬಗ್ಗೆ ಗುರುವಾರ ಸುಪ್ರೀಂ ರಹಸ್ಯ ಕಲಾಪ

ನವದೆಹಲಿ:  ಅಯೋಧ್ಯೆಯ ವಿವಾದಾತ್ಮಕ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂಮಿಯ ಮೇಲಿನ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಡುವ ಕೊಡುಗೆಯನ್ನು ಸುನ್ನಿ ವಕ್ಫ್ ಮಂಡಳಿಯು ಸುಪ್ರೀಂಕೋರ್ಟಿನಿಂದ ನೇಮಕಗೊಂಡ ತ್ರಿಸದಸ್ಯ ಸಂಧಾನ ಪೀಠದ ಮುಂದಿಟ್ಟಿದೆ ಎಂದು ವರದಿಯಾಗಿದ್ದು, ಸುಪ್ರೀಂಕೋರ್ಟಿನ ಪಂಚಸದಸ್ಯ ಸಂವಿಧಾನ ಪೀಠವು  2019 ಅಕ್ಟೋಬರ್ 17ರ ಗುರುವಾರ ಕೊಠಡಿಯಲ್ಲಿ ಸಂಧಾನ ಸಮಿತಿಯ ವರದಿ ಬಗ್ಗೆ ರಹಸ್ಯ ಕಲಾಪ ನಡೆಸಲಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸಂವಿಧಾನಪೀಠವು ಸಂಧಾನಸಮಿತಿಯ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ಚರ್ಚಿಸಲಿದೆ ಎಂದು  2019 ಅಕ್ಟೋಬರ್ 16ರ  ಬುಧವಾರ ವರದಿಗಳು ಹೇಳಿದವು.

ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಇಬ್ರಾಹಿಂ ಕಲೀಫುಲ್ಲ ನೇತೃತ್ವದ ಸಂಧಾನ ಸಮಿತಿಯು ಅಯೋಧ್ಯಾ ಪ್ರಕರಣದ ಕೊನೆಯ ದಿನವಾದ  2019 ಅಕ್ಟೋಬರ್ 16ರ ಬುಧವಾರ ತನ್ನ ಇತ್ತೀಚಿನ ಸಂಧಾನ ಯತ್ನಗಳ ಕುರಿತ ವರದಿಯನ್ನು ಸಂವಿಧಾನಪೀಠಕ್ಕೆ ಸಲ್ಲಿಸಿತ್ತು. ಈ ವರದಿಯಲ್ಲಿ ಅದು ಸಂಧಾನ ಪ್ರಸ್ತಾಪವನ್ನು ಇಟ್ಟಿದೆ ಎಂದು ಹೇಳಲಾಗಿತ್ತು.

ಸಂಜೆ ಟ್ವೀಟ್ ಒಂದನ್ನು ಮಾಡಿದ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಶ್ರೀ ಶ್ರೀ ರವಿಶಂಕರ ಅವರು ’ಸಂಪೂರ್ಣ ಸಂಧಾನ ಪ್ರಕ್ರಿಯೆಯನ್ನು ಎಲ್ಲ ಪಕ್ಷಗಳ ನಡುವಣ ತಿಳುವಳಿಕೆ ಮತ್ತು ಸಹೋದರತ್ವದ ಭಾವನೆಯೊಂದಿಗೆ ನಡೆಸಲಾಗಿದೆ’ ಎಂದು ತಿಳಿಸಿದರು.

ಖ್ಯಾತ ಸಂಧಾನಕಾರ ವಕೀಲ ಶ್ರೀರಾಮ್ ಪಂಚು ಅವರು ಸಂಧಾನಸಮಿತಿಯ ಇನ್ನೊಬ್ಬ ಸದಸ್ಯರಾಗಿದ್ದರು.

ಶ್ರೀ ಶ್ರೀ ರವಿಶಂಕರ ಅವರ ಟ್ವೀಟ್ ಪ್ರಕಟವಾಗುತ್ತಿದ್ದಂತೆಯೇ ಕಾಕತಾಳಿಯವಾಗಿ ಮಾಧ್ಯಮವೊಂದು ಸುನ್ನಿ ವಕ್ಫ್ ಮಂಡಳಿಯು ವಿವಾದಿತ ಭೂಮಿ ಮೇಲಿನ ತನ್ನ ಹಕ್ಕು ಬಿಟ್ಟುಕೊಡುವ ಕೊಡುಗೆ ಮುಂದಿಟ್ಟಿದೆ ಎಂಬ ವರದಿಯನ್ನು ಪ್ರಕಟಿಸಿತು. ರಾಮಮಂದಿರಕ್ಕಾಗಿ ಭೂಮಿಯನ್ನು ಸರ್ಕಾರವು ಸ್ವಾಧೀನ ಪಡಿಸಿಕೊಳ್ಳಲು ತನ್ನ ಆಕ್ಷೇಪ ಇಲ್ಲ ಎಂಬುದಾಗಿ ಮಂಡಳಿಯು ತಿಳಿಸಿರುವುದಾಗಿ ಸಂಧಾನಸಮಿತಿಯು ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಸುದ್ದಿಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿತು.

ನೆಲಸಮಗೊಂಡಿರುವ ಬಾಬರಿಮಸೀದಿ ನಿವೇಶನದ ಮೇಲಿನ ಹಕ್ಕು ಪ್ರತಿಪಾದನೆಯನ್ನು ಬಿಟ್ಟುಕೊಡಲು ಒಪ್ಪುವುದರ ಜೊತೆಗೆ ಅಯೋಧ್ಯೆಯಲ್ಲಿನ ಇತರ ಮಸೀದಿಗಳನ್ನು ಸರ್ಕಾರವು ನವೀಕರಿಸಬೇಕು ಎಂದು ವಕ್ಫ್ ಮಂಡಳಿಯು ಕೋರಿದೆ ಎಂದು ಹೇಳಲಾಯಿತು.

ಬೇರೆ ಸೂಕ್ತ ಸ್ಥಳದಲ್ಲಿ ಮಸೀದಿ ನಿರ್ಮಿಸುವ ಕೊಡುಗೆಯನ್ನೂ ಮಂಡಳಿಯು ಮುಂದಿಟ್ಟಿದೆ ಎಂದು ಮೂಲಗಳು ಹೇಳಿದವು.

ಸಂಧಾನಸಮಿತಿಯು ಸುಪ್ರೀಂಕೋರ್ಟಿಗೆ ಸಲ್ಲಿಸಿರುವ ವರದಿಯು ೧೩೪ ವರ್ಷಗಳಿಂದ ಕಗ್ಗಂಟಾಗಿರುವ ರಾಮ ಜನ್ಮಭೂಮಿ- ಬಾಬರಿ ಮಸೀದಿ ವಿವಾದವನ್ನು ಇತ್ಯರ್ಥಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಸಾಧ್ಯತೆಗಳಿವೆ ಎಂದೂ ಮೂಲಗಳನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿತು.

ಪ್ರಾರ್ಥನೆಗಾಗಿ ಬಳಸಬಹುದಾದ, ಭಾರತದ ಪ್ರಾಕ್ತನ ಸಮೀಕ್ಷೆಯ (ಎಎಸ್‌ಐ) ಮಸೀದಿಗಳ ಪಟ್ಟಿಯನ್ನು ವಕ್ಫ್ ಮಂಡಳಿಯು ಸಲ್ಲಿಸಬಹುದು ಎಂದೂ ಸಂಧಾನ ಸಮಿತಿಯ ವರದಿ ಹೇಳಿದೆ ಎನ್ನಲಾಯಿತು.

ಅಯೋಧ್ಯೆಯಲ್ಲಿ ಸೌಹಾರ್ದಕ್ಕಾಗಿ ರಾಷ್ಟ್ರೀಯ ಸಂಸ್ಥೆಯೊಂದನ್ನು ರಚಿಸುವಂತೆಯೂ ವರದಿಯೂ ಸಲಹೆ ಮಾಡಿದ್ದು, ಈ ಸಂಸ್ಥೆಗೆ ಭೂಮಿ ನೀಡಲು ಮಹಂತ ಧರಮ್ ದಾಸ್ ಮತ್ತು ಪುದುಚೆರಿಯ ಶ್ರೀ ಅರಬಿಂದೋ ಆಶ್ರಮ ಮುಂದೆ ಬಂದಿವೆ ಎಂದು ವರದಿ ಹೇಳಿತು.’

‘ಸಾಕಪ್ಪಾ ಸಾಕು’ ಎಂಬ ಉದ್ಘಾರದೊಂದಿಗೆ ಸುಪ್ರೀಂಕೋರ್ಟ್ ಈದಿನ  ತನ್ನ ದೈನಂದಿನ ವಿಚಾರಣೆಗಳನ್ನು ಮುಕ್ತಾಯಗೊಳಿಸಿದ ಬಳಿಕ ಸಂಧಾನ ಸಮಿತಿಯ ಇತ್ತೀಚಿನ ಸಂಧಾನ ಯತ್ನಗಳ ಕುರಿತ ವಿವರಗಳು ಹೊರಬಂದಿವೆ ಎಂದು ಮಾಧ್ಯಮ ವರದಿ ತಿಳಿಸಿತು.

October 16, 2019 Posted by | Award, ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, Temples, ದೇವಾಲಯಗಳು | | Leave a comment

ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್, ಪತ್ನಿ ಎಸ್ತರ್ ಸೇರಿ ಮೂವರಿಗೆ ನೊಬೆಲ್ ಪ್ರಶಸ್ತಿ

14 abhijit_banerjee,_esther_duflo_and_michael_kremer Noble award
ಸ್ಟಾಕ್‌ಹೋಮ್‌:
 ಜಾಗತಿಕ ಬಡತನ ನಿವಾರಣೆ ಕುರಿತ ಅಧ್ಯಯನಕ್ಕಾಗಿ ಭಾರತೀಯ ಮೂಲದ ಅಮೆರಿಕನ್ ಅರ್ಥ ಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಪತ್ನಿ ಎಸ್ತರ್ ಡ್ಯುಫ್ಲೋ ಹಾಗೂ ಮೈಕೆಲ್ ಕ್ರೇಮರ್ ಸೇರಿದಂತೆ ಮೂವರು 2019ರ ಸಾಲಿನ  ಪ್ರತಿಷ್ಠಿತ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾದರು. ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಇವರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ ಪ್ರಶಸ್ತಿ ಸಮಿತಿಯು 2019ರ ಅಕ್ಟೋಬರ್ 14ರ ಸೋಮವಾರ ಪ್ರಕಟಿಸಿತು.

‘ಈ ವರ್ಷದ ಪ್ರಶಸ್ತಿ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧಾರಿತ ವಿಧಾನವು ಅಭಿವೃದ್ಧಿ ಅರ್ಥಶಾಸ್ತ್ರವನ್ನೇ ಮಾರ್ಪಡಿಸಿದೆ, ಇದು ಈಗ ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರವಾಗಿದೆ,” ಎಂದು ಈ ಸಂಬಂಧ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನೊಬೆಲ್‌ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು.

ಅಭಿಜಿತ್ ವಿನಾಯಕ ಬ್ಯಾನರ್ಜಿ ಮೂಲತಃ ಕೋಲ್ಕತಾದವರು. ಅವರು ಪ್ರಸ್ತುತ ಮೆಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಯಾನರ್ಜಿ ಅವರು 2003ರಲ್ಲಿ ಅಬ್ದುಲ್ ಲತೀಫ್ ಜಮೀಲ್ ಪವರ್ಟಿ ಆ್ಯಕ್ಷನ್ ಲ್ಯಾಬನ್ನು  ಪತ್ನಿ, ಅರ್ಥಶಾಸ್ತ್ರಜ್ಞೆ ಎಸ್ತರ್ ಡ್ಯುಫ್ಲೋ  ಹಾಗೂ ಸೆಂಧಿಲ್ ಮುಲ್ಲಯ್ಯನಾಥನ್ ಅವರ ಜೊತೆಗೆ ಸ್ಥಾಪನೆ ಮಾಡಿದ್ದರು. ಬ್ಯಾನರ್ಜಿ ಅವರು ಇಂದಿಗೂ ಇದರ ನಿರ್ದೇಶಕರಾಗಿದ್ದಾರೆ.

58 ವರ್ಷದ ಬ್ಯಾನರ್ಜಿ ಕೊಲ್ಕತ್ತಾ ವಿಶ್ವ ವಿದ್ಯಾಲಯ,  ದೆಹಲಿಯ ಜವಹರ್‌ಲಾಲ್‌ ನೆಹರೂ ವಿಶ್ವ ವಿದ್ಯಾಲಯಗಳಲ್ಲಿ (ಜೆನ್‌ಯು) ನಲ್ಲಿ ಉನ್ನತ ವ್ಯಾಸಾಂಗ ಮಾಡಿದ್ದು, 1988ರಲ್ಲಿ ಹಾರ್ವರ್ಡ್‌ ವಿಶ್ವ ವಿದ್ಯಾಲಯದಿಂದ  ಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ.

2015ರ ನಂತರದ ಅಭಿವೃದ್ಧಿ ಅಜೆಂಡಾಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಗಣ್ಯ ವ್ಯಕ್ತಿಗಳ ಉನ್ನತ ಮಟ್ಟದ ಸಮಿತಿಯಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಮೊತ್ತ 6.51 ಕೋಟಿ ರೂಪಾಯಿಗಳನ್ನು ಒಳಗೊಂಡಿದ್ದು ಇದನ್ನು ಬ್ಯಾನರ್ಜಿ, ಡ್ಯುಫ್ಲೋ ಮತ್ತು ಕ್ರೇಮರ್‌ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ಸುಮಾರು 700 ಮಿಲಿಯನ್ (70 ಕೋಟಿ)ಜನರು ಈಗಲೂ ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಪ್ರತಿವರ್ಷ 5 ಮಿಲಿಯನ್ ಮಕ್ಕಳು ಐದನೇ ವರ್ಷದ ಹುಟ್ಟುಹಬ್ಬದ ಆಚರಣೆಗೂ ಮುನ್ನವೇ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಕಾರಣ ಅಗ್ಗದ ಹಾಗೂ ಸಾಧಾರಣ ಚಿಕಿತ್ಸೆ ಎಂಬುದಾಗಿ ಬ್ಯಾನರ್ಜಿ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದರು.

October 15, 2019 Posted by | Award, ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, ಸಾಮಾಜಿಕ  ಮಾಧ್ಯಮ, Finance, Flash News, General Knowledge, India, Nation, News, Social Media, Spardha, World | | Leave a comment

ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿಗೆ ಪ್ರಧಾನಿ ಮೋದಿ ಅಭಿನಂದನೆ

14 narendra-modi
ನವದೆಹಲಿ:
 ಎಸ್ತರ್  ಡ್ಯುಫ್ಲೋ ಮತ್ತು ಮೈಕೆಲ್ ಕ್ರೇಮರ್ ಜೊತೆಗೆ ೨೦೧೯ರ ಸಾಲಿನ ಅರ್ಥಶಾಸ್ತ್ರ ನೊಬೆಲ್ ಪಾರಿತೋಷಕಕ್ಕೆ ಭಾಜನರಾಗಿರುವ ಭಾರತೀಯ ಮೂಲಕ ಅಮೆರಿಕನ್ ಆರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 14ರ ಸೋಮವಾರ ಅಭಿನಂದಿಸಿದರು.

‘ಅಲ್ಫ್ರೆಡ್ ನೊಬೆಲ್ ಅವರ ನೆನಪಿಗಾಗಿ ಅರ್ಥಶಾಸ್ತ್ರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಕೊಡಲಾಗುವ ೨೦೧೯ರ ಸ್ವೆರ್ಗೆಸ್ ರಿಕ್ಸಬ್ಯಾಂಕ್ ಪ್ರಶಸ್ತಿಗೆ ಭಾಜನರಾದುದಕ್ಕಾಗಿ ಅಭಿಜಿತ್ ಬ್ಯಾನರ್ಜಿ ಅವರಿಗೆ ಅಭಿನಂದನೆಗಳು. ಬಡತನ ನಿವಾರಣೆಯ ಕ್ಷೇತ್ರಕ್ಕೆ ಅವರು ಗಮನಾರ್ಹ ಕೊಡುಗೆ ನೀಡಿದ್ದಾರೆ’ ಎಂದು ಮೋದಿ ಟ್ವೀಟ್ ಮಾಡಿದರು.

ರಾಯಲ್ ಸ್ವೀಡಿಶ್ ಅಕಾಡೆಮಿಯ ಅತ್ಯುನ್ನತ ಪ್ರಶಸ್ತಿಗೆ ಭಾಜನರಾದ ಎಸ್ತರ್ ಡ್ಯುಫ್ಲೋ ಮತ್ತು ಮೈಕೆಲ್ ಕ್ರೇಮರ್ ಅವರನ್ನೂ ಪ್ರಧಾನಿ ಅಭಿನಂದಿಸಿದರು.

ಪ್ರಧಾನಿಯವರ ಹೊರತಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಅಭಿಜಿತ್ ಬ್ಯಾನರ್ಜಿ, ಎಸ್ತರ್ ಡ್ಯೂಫ್ಲೋ ಮತ್ತು ಮೈಕೆಲ್ ಕ್ರೇಮರ್ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದರು.

ಮುಂಬೈಯಲ್ಲಿ ಜನಿಸಿದ್ದ ೫೮ರ ಹರೆಯದ ಅಭಿಜಿತ್ ಬ್ಯಾನರ್ಜಿ ಅವರು ಪ್ರಸ್ತುತ ಅಮೆರಿಕದ ಮೆಸ್ಯಾಚ್ಯುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿನ (ಎಂಐಟಿ) ಫೋರ್ಡ್ ಫೌಂಡೇಷನ್ ಇಂಟರ್ ನ್ಯಾಷನಲ್‌ನ ಅರ್ಥಶಾಸ್ರ್ರ ಪ್ರೊಫೆಸರ್ ಆಗಿದ್ದಾರೆ. ಅವರು ೧೯೮೮ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆಯುವುದಕ್ಕೆ ಮುನ್ನ ಕಲ್ಕತ್ತ ವಿಶ್ವ ವಿದ್ಯಾಲಯ ಮತ್ತು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದರು.

October 15, 2019 Posted by | Award, ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Finance, Flash News, General Knowledge, India, Nation, News, Spardha, World | | Leave a comment

ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ನಿಧನ

11 kadri gopalnath
ಬೆಂಗಳೂರು
: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ (70) ವಯೋಸಹಜ ಅನಾರೋಗ್ಯದಿಂದ 2019 ಅಕ್ಟೋಬರ್ 11ರ ಶುಕ್ರವಾರ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು.

ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕದ್ರಿಯವರು ಮಂಗಳೂರು  ಎ.ಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ವಿಶ್ವವಿಖ್ಯಾತ ಸ್ಯಾಕ್ಸೊಫೋನ್ ವಾದಕರಾದ ಗೋಪಾಲನಾಥ್‌ರವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರಿನಲ್ಲಿ. ತಂದೆ ತನಿಯಪ್ಪ ನಾಗಸ್ವರ ವಿದ್ವಾಂಸರು.  ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರಾಗಿದ್ದರು.

ವಿದೇಶಿ ವಾದ್ಯವನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಂಡು, ಅದಕ್ಕೆ ಭಾರತೀಯ ಸಂಗೀತವನ್ನು ಕರಗತ ಮಾಡಿಸಿದವರಲ್ಲಿ ಕದ್ರಿ ಗೋಪಾಲನಾಥರು ಪ್ರಮುಖರು.

ಬಾಲ್ಯದಿಂದಲೂ ಸಂಗೀತದಲ್ಲಿ ಒಲವು ಬೆಳೆಸಿಕೊಂಡ ಅವರಿಗೆ ತಂದೆಯೇ ಗುರುವಾಗಿದ್ದರು.

ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಮಿಳುನಾಡು ಸರಕಾರದ ಕಲೈಮಾಮಣಿ, ಕರ್ನಾಟಕ ಕಲಾಶ್ರೀ, ಗಾನಕಲಾ ಭೂಷಣ, ನಾದ ಗಂಧರ್ವ, ನಾದೋಪಾಸನ ಬ್ರಹ್ಮ ಸುನಾದ, ನಾದಕಲಾ ರತ್ನ, ನಾದಕಲಾನಿಧಿ, ಸಂಗೀತ ವಿದ್ಯಾರತ್ನ, ಸಂಗೀತ ರತ್ನ, ಶೃಂಗೇರಿ – ಮಂತ್ರಾಲಯ – ಅಹೋಬಿಲ ಮುಂತಾದ ಪೀಠಗಳಿಂದ ಸನ್ಮಾನ, ಕಂಚಿ ಕಾಮಕೋಠಿ ಆಸ್ಥಾನ ವಿದ್ವಾನ್, ಬೆಂಗಳೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕದ್ರಿ ಗೋಪಾಲನಾಥರನ್ನು ಅರಸಿಬಂದಿದ್ದವು.

ಕದ್ರಿ ಗೋಪಾಲನಾಥ್ ಅವರ ಬಗ್ಗೆ ಇನ್ನಷ್ಟು ಮಾಹಿತಿ:

ಕದ್ರಿ ಗೋಪಾಲನಾಥ್ ಕರ್ನಾಟಕ ಸಂಗೀತ ಪದ್ಧತಿಯ ಪ್ರಸಿದ್ಧ ಸ್ಯಾಕ್ಸೊಫೋನ್ ವಾದಕರು. ಸ್ಯಾಕ್ಸೊಫೋನ್ ವಾದನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಅಳವಡಿಕೆಯಿಂದ ಅವರು ವಿಶ್ವಪ್ರಸಿದ್ಧಿ ಪಡೆದವರಾಗಿದ್ದಾರೆ.

ಜೀವನ:

ಗೋಪಾಲನಾಥ್‌ರವರು 1950ರ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ ಜನಿಸಿದರು. ತಂದೆ ತನಿಯಪ್ಪನವರು ನಾಗಸ್ವರ ವಿದ್ವಾಂಸರಾಗಿದ್ದರಿಂದ ಸಂಗೀತವೆಂಬುದು ಗೋಪಾಲನಾಥರ ದಿನಚರಿಯಾಗಿತ್ತು. ತಾಯಿ ಗಂಗಮ್ಮನವರು.

ಕದ್ರಿ ಗೋಪಾಲನಾಥರು ಬಾಲ್ಯದಿಂದಲೇ ತಂದೆಯವರಿಂದ ನಾಗಸ್ವರ ಶಿಕ್ಷಣವನ್ನು ಪಡೆದರು. ಆದರೆ ಅವರ ಬದುಕಿಗೆ ತೆರೆದದ್ದು ಮತ್ತೊಂದು ಬಾಗಿಲು. ಒಮ್ಮೆ ಅವರು ಮೈಸೂರು ಅರಮನೆಯ ಬ್ಯಾಂಡ್ ಸೆಟ್ನೊಂದಿಗೆ ಸ್ಯಾಕ್ಸಫೋನ್ ವಾದನವನ್ನು ಕೇಳಿ ಆ ವಾದ್ಯದಲ್ಲಿರುವ ವೈವಿದ್ಯತೆಗೆ ಮನಸೋತು ಸ್ಯಾಕ್ಸಫೋನಿನಲ್ಲಿಯೇ ಪ್ರಾವೀಣ್ಯತೆ ಸಂಪಾದಿಸಬೇಕೆಂಬ ದೃಢ ನಿರ್ಧಾರ ಕೈಗೊಂಡರು. ಇದಕ್ಕಾಗಿ ಅವರು ನಡೆಸಿದ ನಿರಂತರ ತಪಸ್ಸು ಇಪ್ಪತ್ತು ವರ್ಷಗಳದ್ದು. ಕಲಾನಿಕೇತನದ ಎನ್. ಗೋಪಾಲಕೃಷ್ಣ ಅಯ್ಯರ್ ಅವರಿಂದ ಅವರು ಸ್ಯಾಕ್ಸಫೋನ್ ವಾದ್ಯದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ನುಡಿಸುವುದನ್ನು ಕಲಿತರು. ಅತ್ಯಂತ ಶ್ರದ್ಧೆಯಿಂದ ಸಂಗೀತವನ್ನು ಅಭ್ಯಾಸ ಮಾಡಿದ ಗೋಪಾಲನಾಥರು ಕರ್ನಾಟಕ ಸಂಗೀತ ಮತ್ತು ಸ್ಯಾಕ್ಸೊಫೋನ್ ವಾದ್ಯಗಳೆರಡರಲ್ಲೂ ಪ್ರಭುತ್ವ ಸಾಧಿಸಿದರು.

ಗುರು ಅನುಗ್ರಹ:

ಮುಂದೆ ಕದ್ರಿ ಗೋಪಾಲನಾಥರು ಮದ್ರಾಸಿನ ಟಿ. ವಿ. ಗೋಪಾಲಕೃಷ್ಣನ್ ಅವರ ಸಂಪರ್ಕಕ್ಕೆ ಬಂದರು. ಗೋಪಾಲನಾಥರಲ್ಲಿದ್ದ ಅಗಾಧ ಪ್ರತಿಭೆಯನ್ನು ಗಮನಿಸಿದ ಗೋಪಾಲಕೃಷ್ಣನ್ ಅವರು ಕದ್ರಿ ಗೋಪಾಲನಾಥರು ಒಬ್ಬ ಅಂತರರಾಷ್ಟ್ರೀಯ ಪ್ರತಿಭೆಯಾಗಿ ರೂಪುಗೊಳ್ಳಲು ನೀರೆರೆದರು. ಗೋಪಾಲನಾಥರು ತಮ್ಮ ಗುರುಗಳ ಅನುಗ್ರಹವೇ ತಮ್ಮ ಎಲ್ಲಾ ಸಾಧನೆಗಳ ಹಿಂದಿರುವ ಶಕ್ತಿ ಎಂದು ಭಕ್ತಿಯಿಂದ ಸ್ಮರಿಸುತ್ತಾರೆ.

ವಿಶ್ವದಾದ್ಯಂತ ಕಛೇರಿಗಳು:

ಗೋಪಾಲನಾಥರ ಪ್ರಥಮ ಕಾರ್ಯಕ್ರಮ ಮದ್ರಾಸಿನ ಚೆಂಬೈ ಮೆಮೋರಿಯಲ್ ಟ್ರಸ್ಟ್ನಲ್ಲಿ ನಡೆಯಿತು. ಅದು ಅವರಿಗೆ ಎಲ್ಲೆಡೆಯಿಂದ ಪ್ರಸಿದ್ಧಿ ತಂದಿತು. ಆಕಾಶವಾಣಿ ‘ಎ’ ಟಾಪ್ ಶ್ರೇಣಿಯ ಕಲಾವಿದರೆಂದು ಪರಿಗಣಿತರಾದ ಗೋಪಾಲನಾಥರ ಕಚೇರಿಗಳು ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ರಾಜ್ಯಗಳಲ್ಲಿಯೇ ಅಲ್ಲದೆ ಉತ್ತರ ಭಾರತದ ಪ್ರತಿಷ್ಟಿತ ಉತ್ಸವ- ವೇದಿಕೆಗಳಲ್ಲಿ, ಬಿಬಿಸಿಯ ಆಹ್ವಾನದ ಮೇರೆಗೆ ರಾಯಲ್ ಆಲ್ಬರ್ಟ್ ಹಾಲ್‌ನಲ್ಲಿ, ಫ್ರಾಗ್ ಜಾಸ್ ಫೆಸ್ಟಿವಲ್, ಬರ್ಲಿನ್ ಸಂಗೀತೋತ್ಸವ, ಮೆಕ್ಸಿಕೋದ ಸೆರ್ವಾಂಟಿನೊ ಉತ್ಸವ, ಲಂಡನ್‌ನ ಪ್ರೊಮೆನಾಡೊ, ಪ್ಯಾರಿಸ್‌ನ ಹೈಲ್ ಫೆಸ್ಟಿವಲ್ ಮುಂತಾದ ವಿಶ್ವ ಉತ್ಸವ-ವೇದಿಕೆಗಳಲ್ಲಿ ಕದ್ರಿಯವರ ಸ್ಯಾಕ್ಸೋಫೋನ್ ಮೊಳಗಿದೆ. ಯೂರೋಪ್, ಸ್ವಿಜರ್‌ಲ್ಯಾಂಡ್, ಯುನೈಟೆಡ್ ಕಿಂಗ್ಡಂ, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜರ್ಮನಿ, ಸಿಂಗಪೂರ್, ಬಹರೇನ್, ಕ್ವೆಟಾರ್, ಮಸ್ಕಟ್, ಮಲೇಷಿಯಾ, ಶ್ರೀಲಂಕಾ ಹೀಗೆ ಅವರು ವಿಶ್ವದಾದ್ಯಂತ ಯಶಸ್ವಿ ಕಚೇರಿಗಳನ್ನು ನಿರಂತರವಾಗಿ ನಡೆಸಿಕೊಡುತ್ತಾಬಂದಿದ್ದಾರೆ.

ಸ್ಯಾಕ್ಸೊಫೋನ್ಗೆ ಮತ್ತೊಂದು ಹೆಸರು:

ಕದ್ರಿಯವರ ವಾದನ ಸದಾ ಕಾವಿನಿಂದ ಕೂಡಿರುವಂಥದು. ಅವರ ಕಛೇರಿ ಮೊದಲಿನಿಂದ ಕೊನೆಯವರೆಗೂ ರಂಜನೀಯ; ಸುನಾದದ ಅಲೆ! ಚೇತೋಹಾರಿ ವಿನಿಕೆ. ತನಿಯಾಗಿ ಕರ್ನಾಟಕ ಸಂಗೀತ, ಹಿಂದುಸ್ತಾನಿ ಕಲಾವಿದರೊಂದಿಗೆ ಜುಗಲ್‌ಬಂದಿ, ಪಾಶ್ಚಾತ್ಯ ವಾದ್ಯಗಳೊಂದಿಗೆ ಜಾಸ್, ಫ್ಯೂಷನ್ ಹೀಗೆ ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ಅವರು ನೀಡುತ್ತಾ ಬಂದಿದ್ದಾರೆ. ಕಚೇರಿಗಳಲ್ಲಷ್ಟೇ ಆಲ್ಲದೆ, ಅನೇಕ ವೈಶಿಷ್ಟ್ಯಪೂರ್ಣ ಆಲ್ಬಂಗಳಲ್ಲಿ ಸಹಾ ಅವರ ಸಂಗೀತ ಶ್ರೋತೃ-ಅಭಿಮಾನಿಗಳನ್ನು ತಣಿಸುತ್ತಿದೆ. ಇಂದು ವಿದೇಶಿ ಮೂಲದ ವಾದ್ಯ ಸ್ಯಾಕ್ಸೋಫೋನ್‌ಗೆ ಶಾಸ್ತ್ರೀಯ ಸಂಗೀತದ ವೇದಿಕೆಯ ಮೇಲೆ ಒಂದು ಗೌರವಾನ್ವಿತ ಸ್ಥಾನ ದೊರಕಿರುವುದು ಅವರ ಪ್ರತಿಭೆ, ಪರಿಶ್ರಮಗಳಿಂದಲೇ. ಹಾಗಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತದ ನಿಟ್ಟಿನಲ್ಲಿ ಸ್ಯಾಕ್ಸೊಫೋನ್ಗೆ ಇನ್ನೊಂದು ಹೆಸರೇ ಕದ್ರಿ ಗೋಪಾಲನಾಥ್. ಭಾರತದಲ್ಲಿ ಮತ್ತು ಹೊರಗೆ ಅನೇಕ ‘ಸಂಗೀತ-ಕಛೇರಿ’ಗಳನ್ನು ನಡೆಸುತ್ತಾ ಬಂದಿರುವ ‘ಕದ್ರಿ ಗೋಪಾಲನಾಥ್’ ಸ್ಯಾಕ್ಸೊಫೋನ್ ಚಕ್ರವರ್ತಿ ಎಂದೇ ಹೆಸರಾಗಿದ್ದಾರೆ.

ಕಾರ್ಗಿಲ್ ಯುದ್ಧ ಸಂತ್ರಸ್ತರಿಗೆ ಕೊಡುಗೆ:

ಚೆನ್ನೈನ ನಾರದ ಗಾನಸಭಾದಲ್ಲಿ ೪00 ಮಂದಿ ಕಲಾವಿದರೊಡನೆ ನಡೆಸಿಕೊಟ್ಟ ಕಾರ್ಯಕ್ರಮದಿಂದ ಬಂದ ಲಕ್ಷಾಂತರ ಹಣವನ್ನು ಕಾರ್ಗಿಲ್ ಯುದ್ಧ ನಿಧಿಗಾಗಿ ಗೋಪಾಲನಾಥರು ಸಮರ್ಪಿಸಿದವರು.

October 14, 2019 Posted by | Award, ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ, ಭಾರತ, ಮಂಗಳೂರು, ರಾಜ್ಯ, ವಿಶ್ವ/ ಜಗತ್ತು, culture, Dakshina Kannada District, Entertrainment, Flash News, General Knowledge, India, Nation, News, Spardha, World | , , , | Leave a comment

ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿಗೆ ನೊಬೆಲ್ ಶಾಂತಿ ಪ್ರಶಸ್ತಿ

11 abiy ahmad ali
ಓಸ್ಲೋ (
ನಾರ್ವೆ): ಇಥಿಯೋಪಿಯಾದ ಪ್ರಧಾನಿ ಅಬಿ  ಅಹ್ಮದ್ ಅಲಿ ಅವರಿಗೆ ತಮ್ಮ ರಾಷ್ಟ್ರದ ಕಡುವಿರೋಧಿ ಎರಿಟ್ರಿಯಾ ಜೊತೆಗಿನ ಘರ್ಷಣೆಯನ್ನು ಕೊನೆಗೊಳಿಸುವಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಪ್ರಸ್ತುತ ಸಾಲಿನ ನೊಬೆಲ್ ಶಾಂತಿ ಪಾರಿತೋಷಕವನ್ನು ಘೋಷಿಸಲಾಗಿದೆ ಎಂದು ನೊಬೆಲ್ ಸಮಿತಿಯು  2019  ಅಕ್ಟೋಬರ್  11ರ ಶುಕ್ರವಾರ ಪ್ರಕಟಿಸಿತು.

‘ಶಾಂತಿ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಾಧನೆಗಾಗಿ ನಡೆಸಿದ ಪ್ರಯತ್ನಗಳಿಗಾಗಿ, ಅದರಲ್ಲೂ ನಿರ್ದಿಷ್ಟವಾಗಿ ನೆರೆಯ ಎರಿಟ್ರಿಯಾ ಜೊತೆಗಿನ ಗಡಿ ಘರ್ಷಣೆಯನ್ನು ಇತ್ಯರ್ಥ ಪಡಿಸಲು ನಡೆಸಿದ ನಿರ್ಣಾಯಕ ಉಪಕ್ರಕಮಕ್ಕಾಗಿ ಅಬಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ ಎಂದು ತೀರ್ಪುಗಾರರು ಹೇಳಿದರು.

೪೩ರ ಹರೆಯದ ಅಬಿ ಅವರು, ೨೦೧೮ರ ಏಪ್ರಿಲ್‌ನಲ್ಲಿ ಇಥಿಯೋಪಿಯಾದ ಪ್ರಧಾನಿಯಾದಂದಿನಿಂದ ತಮ್ಮ ದೇಶದ ಸಮಾಜದ ಚಲನಶೀಲತೆಯನ್ನು ಗಡಿಯಾಚೆಯವರೆಗೂ ಪುನರ್ರೂಪಿಸುವ ನಿಟ್ಟಿನ ನೀತಿಗಳನ್ನು ಜಾರಿಗೆ ತಂದಿದ್ದರು.

ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕೇವಲ ೬ ತಿಂಗಳಲ್ಲಿ ಅಬಿ ಅವರು ಕಡುವಿರೋಧಿ ಎರಿಟ್ರಿಯಾ ಜೊತೆಗೆ ಶಾಂತಿ ಸ್ಥಾಪನೆ ಮಾಡಿದರು ಮತ್ತು ಭಿನ್ನಮತೀಯರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿ ಸರ್ಕಾರಿ ಕ್ರೂರತ್ವಕ್ಕಾಗಿ ಕ್ಷಮೆ ಯಾಚಿಸಿದರು ಮತ್ತು  ತಮ್ಮ ಪೂರ್ವಾಧಿಕಾರಿಗಳು ’ಭಯೋತ್ಪಾದಕರು’ ಎಂಬುದಾಗಿ ಹಣೆಪಟ್ಟಿ ಹಚ್ಚಿ ದೇಶದಿಂದ ಗಡೀಪಾರು ಮಾಡಿದ್ದ ಸಶಸ್ತ್ರ ಗುಂಪುಗಳನ್ನು ಮರಳಿ ದೇಶಕ್ಕೆ ಬರುವಂತೆ ಸ್ವಾಗತಿಸಿದ್ದರು.

ತೀರಾ ಇತ್ತೀಚೆಗೆ, ಮುಂದಿನ ಮೇ ತಿಂಗಳಿಗೆ ಚುನಾವಣೆ ನಿಗದಿ ಪಡಿಸಿದ ಅವರು ಆರ್ಥಿಕತೆಯನ್ನು ಪುನರ್ರೂಪಿಸುವ ಬಗೆಗಿನ ತಮ್ಮ ದೃಷ್ಟಿಯನ್ನು ಪ್ರಕಟಿಸಿದ್ದರು.

ಆದರೆ, ಅವರ ನೀತಿಗಳು ರಾಜಕೀಯ ಹಳಬರ ಪಾಲಿಗೆ ಅತ್ಯಂತ ಕ್ಷಿಪ್ರಗಾಮಿಯಾಗಿದ್ದರೆ, ಅವರನ್ನು ಅಧಿಕಾರಕ್ಕೆ ಏರಿಸಿರುವ ಕೋಪೋದ್ರಿಕ್ತ ಯುವಕರ ಪಾಲಿಗೆ ಅತ್ಯಂತ ತಡವಾಗಿ ಬಂದಿರುವ ನೀತಿಗಳಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.

ಸವಾಲುಗಳ ಹೊರತಾಗಿಯೂ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಯ ಆಳವಾದ ಬಾವಿಯನ್ನು ಇನ್ನಷ್ಟು ವಿಸ್ತರಿಸಲು ಅಬಿ ಯತ್ನಿಸುತ್ತಿದ್ದಾರೆ ಎಂದು ಅವರ ಮಿತ್ರ ರಾಷ್ಟ್ರಗಳು ಭವಿಷ್ಯ ನುಡಿದಿದ್ದವು.

ಪ್ರಧಾನಿಯನ್ನು ಭೇಟಿ ಮಾಡಿದಾಗ ಮೊತ್ತ ಮೊದಲಿಗೆ ತನ್ನ ಗಮನಕ್ಕೆ ಬಂದದ್ದು ಅವರ ಮಹತ್ವಾಕಾಂಕ್ಷೆಯ ಯೋಜನೆಗಳು ಎಂದು ಅಬಿ ಅವರ ಗೆಳೆಯ ಹಾಗೂ ವ್ಯಾಪಾರೋದ್ಯಮಿ ತಾರಿಖ್ ಸಬ್ಟ್ ಹೇಳಿದರು. ’ಈ ವ್ಯಕ್ತಿ ಅಧಿಕಾರಕ್ಕೆ ಬಂದಾಗ ಇಥಿಯೋಪಿಯಾದಲ್ಲಿ ಭಾರೀ ಬದಲಾವಣೆಗಳನ್ನು ನೀವು ಕಾಣಲಿದ್ದೀರಿ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ’ ಎಂದು ತಾರಿಖ್ ನುಡಿದರು.

ಪಶ್ಚಿಮ ಬೆಶಾಶಾ ಪಟ್ಟಣದಲ್ಲಿ ಮುಸ್ಲಿಮ್ ತಂದೆ ಮತ್ತು ಕ್ರೈಸ್ತ ತಾಯಿಯ ಪುತ್ರನಾಗಿ ಜನಿಸಿದ್ದ ಅಬಿ ’ವಿದ್ಯುತ್ ಮತ್ತು ಕುಡಿಯಲು ನೀರಿಲ್ಲದ ಮನೆಯ ಮಹಡಿಯಲ್ಲಿ ನಿದ್ರಿಸುತ್ತಾ’ ಬೆಳೆದಿದ್ದರು.

‘ನಾವು ನದಿಯಿಂದ ನೀರು ತರುತ್ತಿದ್ದೆವು’ ಎಂದು ಕಳೆದ ತಿಂಗಳು ಶೆಗೆರ್ ಎಫ್‌ಎಂ ರೇಡಿಯೋ ಸಂದರ್ಶನದಲಿ ಅವರು ಹೇಳಿದ್ದರು. ಏಳನೇ ತರಗತಿಗೆ ಬರುವವರೆಗೆ ತಾನು ವಿದ್ಯುತ್ ಮತ್ತು ತಾರು ರಸ್ತೆಯನ್ನೇ ನೋಡಿರಲಿಲ್ಲ ಎಂದೂ ಅವರು ಹೇಳಿದ್ದರು.

೧೯೯೧ರಲ್ಲಿ ಡೆರ್ಗ್ ಮಿಲಿಟರಿ ಆಡಳಿತದಿಂದ ಅಧಿಕಾರವನ್ನು ವಹಿಸಿಕೊಂಡ ಇಥಿಯೋಪಿಯನ್ ಪೀಪಲ್ಸ್ ರೆವಲ್ಯೂಷನರಿ ಡೆಮಾಕ್ರಾಟಿಕ್ ಫ್ರಂಟ್ (ಇಪಿಆರ್‌ಡಿಎಫ್) ಅಧಿಕಾರ ವ್ಯವಸ್ಥೆಯಲ್ಲಿ ಅಬಿ ಅವರು ಅತಿ ಬೇಗನೇ ಬೆಳೆದಿದ್ದರು.

ತಂತ್ರಜ್ಞಾನದ ಮೋಹಕ್ಕೆ ಸಿಲುಕಿದ್ದ ಅಬಿ ಹದಿ ಹರೆಯದಲ್ಲೇ ರೇಡಿಯೋ ಆಪರೇಟರ್ ಆಗಿ ಸೇನೆಗೆ ಸೇರ್ಪಡೆಯಾಗಿದ್ದರು.

ಮೊತ್ತ ಮೊದಲಿಗೆ ಸೆಕ್ಯುರೋಕ್ರಾಟ್ ಆಗಿ ಸರ್ಕಾರವನ್ನು ಪ್ರವೇಶಿಸುವುದಕ್ಕೆ ಮುನ್ನ ಅವರು ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯವರೆಗೂ ಏರಿದ್ದರು. ಸೆಕ್ಯುರೋಕ್ರಾಟ್ ಆಗಿ ಸರ್ಕಾರವನ್ನು ಪ್ರವೇಶಿಸಿದ್ದ ಅವರು ಇಥಿಯೋಪಿಯಾದ ಸೈಬರ್ ಗುಪ್ತಚರ ಸಂಘಟನೆಯ (ಮಾಹಿತಿ ಜಾಲ ಭದ್ರತಾ ಸಂಸ್ಥೆ) ಸ್ಥಾಪಕ ಮುಖ್ಯಸ್ಥರಾಗಿದ್ದರು.

ಬಳಿಕ ಅವರು ರಾಜಧಾನಿ ಅಡ್ಡೀಸ್ ಅಬಾಬಾದಲ್ಲಿ ಸಚಿವರೂ, ತಮ್ಮ ಹುಟ್ಟೂರು ಪ್ರದೇಶವಾದ ಒರೋಮಿಯಾದಲ್ಲಿ ಪಕ್ಷದ ಪದಾಧಿಕಾರಿಯೂ ಆಗಿದ್ದರು.

October 13, 2019 Posted by | Award, ಪ್ರಧಾನಿ, ವಿಶ್ವ/ ಜಗತ್ತು, Flash News, General Knowledge, News, Prime Minister, Spardha, World | | Leave a comment

ಲಿಥಿಯಂ- ಅಯಾನ್ ಬ್ಯಾಟರಿ ಅವಿಷ್ಕಾರಕ್ಕಾಗಿ ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

09 nobel-prize-chemistry-2019-winners
ಸ್ಟಾಕ್
ಹೋಮ್: ಲಿಥಿಯಂ -ಅಯಾನ್ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಜಾನ್ ಡಿ ಗುಡೆನೊಫ್, ಎಂ ಸ್ಟಾನ್ಲೀ ವೈಟಿಂಗ್ಹಾಮ್ ಮತ್ತು ಅಕೀರಾ ಯೋಶಿನೊ ಈ ಮೂವರು ವಿಜ್ಞಾನಿಗಳಿಗೆ ೨೦೧೯ರ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ನೊಬೆಲ್ ಸಮಿತಿಯು 2019 ಅಕ್ಟೋಬರ್  09ರ  ಬುಧವಾರ ಪ್ರಕಟಿಸಿತು.

ಲಿಥಿಯಂ -ಅಯಾನ್ ಬ್ಯಾಟರಿಗಳು ನಮ್ಮ ಬದುಕನ್ನು ಕ್ರಾಂತಿಕಾರಕವನ್ನಾಗಿ ಮಾಡಿವೆ. ಅವುಗಳನನ್ನು ಈಗ ಮೊಬೈಲ್ ಫೋನ್‌ನಿಂದ ಹಿಡಿದು ಲ್ಯಾಪ್ ಟಾಪ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳವರೆಗೆ ಎಲ್ಲವುಗಳಲ್ಲೂ ಬಳಸುತ್ತಿದ್ದೇವೆ. ತಮ್ಮ ಶ್ರಮದ ಮೂಲಕ ಈ ಬಾರಿಯ ರಸಾಯನಶಾಸ್ರ್ರ ನೊಬೆಲ್ ಪ್ರಶಸ್ತಿ ವಿಜೇತರು ವೈರ್‌ಲೆಸ್, ಪಳೆಯುಳಿಕೆ ಇಂಧನ (ಫಾಸಿಲ್ ಫ್ಯುಯೆಲ್) ಮುಕ್ತ ಸಮಾಜಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ನೊಬೆಲ್ ಸಮಿತಿಯು ತನ್ನ ಹೇಳಿಕೆಯಲ್ಲಿ ತಿಳಿಸಿತು.

ಈ ವರ್ಷದ ರಸಾಯನಶಾಸ್ತ್ರ ಪ್ರಶಸ್ತಿ ವಿಜೇತರಾದ ಡಾ. ವೈಟಿಂಗ್ಹಾಮ್ ಅವರು ೧೯೭೦ರ ಆದಿಯಲ್ಲಿ ಲಿಥಿಯಂನ್ನು ಹೊರ ಎಲೆಕ್ಟ್ರಾನ್ ಬಿಡುಗಡೆಗಾಗಿ ಬಳಸಿ ಮೊದಲ ಕಾರ್‍ಯ ಸಾಧ್ಯ ಲಿಥಿಯಂ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸಿದ್ದರು. ಡಾ. ಗುಡೆನೊಫ್ ಅವರು ಶಕ್ತಿಶಾಲಿ ಮತ್ತು ಉಪಯಕ್ತ ಬ್ಯಾಟರಿಗೆ ಸೂಕ್ತವಾದ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಲಿಥಿಯಂ ಬ್ಯಾಟರಿಯ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿದ್ದರು.

ಮೊಬೈಲ್ ಫೋನುಗಗಳಿಂದ ಎಲೆಕ್ಟ್ರಿಕ್ ವಾಹನಗಳವರೆಗೆ ದೈನಂದಿನ ಬದುಕಿನಲ್ಲಿ ಬಳಸುವಂತಹ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಜಾನ್ ಡಿ ಗುಡೆನೊಫ್, ಎಂ. ಸ್ಟಾನ್ಲೀ ವೈಟಿಂಗ್ಹಾಮ್ ಮತ್ತು ಅಕಿರಾ ಯೋಶಿನೊ ಅವರಿಗೆ ಧನ್ಯವಾದಗಳು ಎಂದು ಸಮಿತಿಯ ಹೇಳಿಕೆ ತಿಳಿಸಿತು.

October 9, 2019 Posted by | Award, ಆಟೋ ಜಗತ್ತು, ಆರ್ಥಿಕ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Finance, Flash News, General Knowledge, News, Science, Spardha, World | , | Leave a comment

ಮೂವರು ವಿಜ್ಞಾನಿಗಳಿಗೆ 2019ರ ಸಾಲಿನ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ

SWEDEN-NOBEL-PHYSICS
ಸ್ಟಾಕ್
ಹೋಮ್:  ಜೇಮ್ಸ್ ಪೀಬಲ್ಸ್, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ 2019ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿಯು 2019 ಅಕ್ಟೋಬರ್  08ರ ಮಂಗಳವಾರ ಪ್ರಕಟಿಸಿತು.

ನಮ್ಮ ವಿಶ್ವ ಬೆಳೆದು ಬಂದದ್ದು ಹೇಗೆ, ಈ ವಿಶ್ವದಲ್ಲಿ ಭೂಮಿಯ ಸ್ಥಾನ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಈ ವಿಜ್ಞಾನಿಗಳ ಸಂಶೋಧನೆ ಮತ್ತು ಅಧ್ಯಯನ ಬಹಳ ಮಹತ್ವಪೂರ್ಣವಾದುದು ಎಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತೀರ್ಪುಗಾರರ ಸಮಿತಿ ತಿಳಿಸಿತು.

ಭೌತ ವಿಶ್ವಶಾಸ್ತ್ರದಲ್ಲಿ ಜೇಮ್ಸ್ ಪೀಬಲ್ಸ್ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ. ಇನ್ನು, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವಿಲೋಜ್ ಅವರು ಎಕ್ಸೋಪ್ಲಾನೆಟ್​ವೊಂದನ್ನು ಪತ್ತೆ ಹೆಚ್ಚಿದ್ದರು. ಎಕ್ಸೋಪ್ಲಾನೆಟ್ ಎಂಬುದು ಸೌರ ವ್ಯವಸ್ಥೆ ಹೊರಗಿರುವ ಗ್ರಹವಾಗಿದೆ. ಈ ಬಾಹ್ಯ ಗ್ರಹದ ಪತ್ತೆಯಿಂದ ವಿಶ್ವ ರಚನೆಯ ಅಭ್ಯಾಸಕ್ಕೆ ಸಹಾಯವಾಗಲಿದೆ.

2019 ಅಕ್ಟೋಬರ್ 07ರ ಸೋಮವಾರ ವೈದ್ಯವಿಜ್ಞಾನ ವಿಭಾಗದಲ್ಲಿ ವಿಜ್ಞಾನಿಗಳಾದ ವಿಲಿಯಮ್ ಕೈಲಿನ್ ಜೂನಿಯರ್, ಗ್ರೆಗ್ ಸೆಮೆಂಜಾ ಮತ್ತು ಪೀಟರ್ ರಾಟ್​ಕ್ಲಿಫ್ ಅವರಿಗೆ ವೈದ್ಯಕೀಯ ನೊಬೆಲ್ ಬಹುಮಾನ ಘೋಷಿಸಲಾಗಿತ್ತು. ಬುಧವಾರ ರಸಾಯಶಾಸ್ತ್ರ, ಗುರುವಾರ ಸಾಹಿತ್ಯ ವಿಭಾಗ ಹಾಗೂ ಶುಕ್ರವಾರ ಶಾಂತಿ ವಿಭಾಗದಲ್ಲಿ ನೊಬೆಲ್ ಬಹುಮಾನ ಘೋಷಿಸಲಾಗುತ್ತದೆ.

ಈ ಎಲ್ಲಾ ನೊಬೆಲ್ ಪ್ರಶಸ್ತಿ ವಿಜೇತರಿಗೆ ಡಿಸೆಂಬರ್ 10ರಂದು ಸ್ವೀಡನ್​ನ ಸ್ಟಾಕ್​ ಹೋಮ್ ನಗರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುತ್ತದೆ.

October 8, 2019 Posted by | Award, ವಿಶ್ವ/ ಜಗತ್ತು, ಸಂಶೋಧನೆ, ಸೌರ ವ್ಯವಸ್ಥೆ, Flash News, General Knowledge, News, Science, Space, Spardha, Technology | , | Leave a comment

ಅಮೆರಿಕದ ವಿಲಿಯಂ ಕೈಲಿನ್, ಗ್ರೆಗ್ ಸೆಮೆನ್ಜಾ,ಬ್ರಿಟನ್ನಿನ ಪೀಟರ್ ರಾಟ್ಕ್ಲಿಫ್ ಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ

SWEDEN-NOBEL-MEDICINE
ಸ್ಟಾಕ್ ಹೋಮ್:
ಆಮ್ಲಜನಕದ ಲಭ್ಯತೆಯನ್ನು ಜೀವಕೋಶಗಳು ಹೇಗೆ ಗ್ರಹಿಸುತ್ತವೆ ಮತ್ತು ಅದಕ್ಕೆ  ಹೊಂದಿಕೊಳ್ಳುತ್ತವೆ ಎಂಬ ವಿಷಯದ ಕುರಿತ ಆವಿಷ್ಕಾರಗಳಿಗಾಗಿ ಅಮೆರಿಕದ ಸಂಶೋಧಕರಾದ ವಿಲಿಯಂ ಕೈಲಿನ್ ಹಾಗೂ ಗ್ರೆಗ್ ಸೆಮೆನ್ಜಾ ಮತ್ತು ಬ್ರಿಟನ್‌ನ ಪೀಟರ್ ರಾಟ್‌ಕ್ಲಿಫ್  ಅವರು ವೈದ್ಯಕೀಯ ನೊಬೆಲ್ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ನೊಬೆಲ್ ಸಂಸ್ಥೆಯು 2019ರ ಅಕ್ಟೋಬರ್ 07ರ ಸೋಮವಾರ ಪ್ರಕಟಿಸಿತು..

“ಆಮ್ಲಜನಕದ ಮಟ್ಟವು ಜೀವಕೋಶಗಳ ಚಯಾಪಚಯ ಮತ್ತು ಶಾರೀರಿಕ ಕ್ರಿಯೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ನಮ್ಮ ತಿಳುವಳಿಕೆಗೆ ಅವರು ಆಧಾರವನ್ನು ಸ್ಥಾಪಿಸಿದ್ದಾರೆ” ಎಂದು ತೀರ್ಪುಗಾರರು ಹೇಳಿದರು, ಅವರ ಆವಿಷ್ಕಾರಗಳು “ರಕ್ತಹೀನತೆ, ಕ್ಯಾನ್ಸರ್ ಮತ್ತು ಇತರ ಅನೇಕ ಕಾಯಿಲೆಗಳ ವಿರುದ್ಧ ಹೋರಾಡಲು ಹೊಸ ತಂತ್ರಗಳನ್ನು ನೀಡುವಲ್ಲಿ ದಾರಿ ಮಾಡಿಕೊಟ್ಟಿದೆ” ಎಂದು ಅವರು ನುಡಿದರು.

ನೊಬೆಲ್ ಪಾರಿತೋಷಕದಲ್ಲಿ 9 ಮಿಲಿಯನ್ ಕ್ರೊನೋರ್ (ಸುಮಾರು 65 ಕೋಟಿ ರೂಪಾಯಿ) ನಗದು ಹಣ ಒಳಗೊಂಡಿರುತ್ತದೆ. ಈ 65 ಕೋಟಿ ಹಣವನ್ನು ಮೂವರು ವಿಜ್ಞಾನಿಗಳಿಗೆ ಸಮಾನವಾಗಿ ಹಂಚಿಕೆ ಮಾಡಲಾಗುತ್ತದೆ ಎಂದು ಕರೋಲಿಂಸ್ಕಾ ಇನ್ಸ್​ಟಿಟ್ಯೂಟ್ ಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

1901ರಿಂದಲೂ ವೈದ್ಯಕೀಯ ಅಥವಾ ಫಿಸಿಯೋಲಜಿ ವಿಭಾಗದಲ್ಲಿ ಈ ವರ್ಷದ್ದೂ ಸೇರಿ ಒಟ್ಟು 110 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಇವತ್ತು ಪ್ರಾರಂಭವಾಗಿರುವ ನೊಬೆಲ್ ಪ್ರಶಸ್ತಿ ಘೋಷಣೆ ಅ. 14ರವರೆಗೂ ಮುಂದುವರಿಯಲಿದೆ. ಅ. 12 ಮತ್ತು 13 ಹೊರತುಪಡಿಸಿ ಈ ಅವಧಿಯಲ್ಲಿ ಬರುವ ಎಲ್ಲಾ ದಿನಗಳಲ್ಲೂ ನೊಬೆಲ್ ಪ್ರಶಸ್ತಿ ಘೋಷಣೆಯಾಗಲಿದೆ.

ನೊಬೆಲ್ ಪ್ರಶಸ್ತಿ ಪ್ರಕಟವಾಗುವ ದಿನ ಮತ್ತು ವಿಭಾಗ:
ಅ. 7: ವೈದ್ಯಕೀಯ
ಅ. 8: ಭೌತಶಾಸ್ತ್ರ
ಅ. 9: ರಸಾಯನಶಾಸ್ತ್ರ
ಅ. 10: ಸಾಹಿತ್ಯ
ಅ. 11: ಶಾಂತಿ
ಅ. 14: ಅರ್ಥಶಾಸ್ತ್ರ

ನೊಬೆಲ್ ಪ್ರಶಸ್ತಿ ಬಗ್ಗೆ ಗೊತ್ತಾ?
19ನೇ ಶತಮಾನದ ಅಂತ್ಯದವರೆಗೂ ಬದುಕಿದ್ದ ಸ್ವೀಡನ್ ದೇಶದ ರಸಾಯನಶಾಸ್ತ್ರಜ್ಞ, ಎಂಜಿನಿಯರ್, ಸಂಶೋಧಕ ಆಲ್​ಫ್ರೆಡ್  ನೊಬೆಲ್ ಅವರ ಸ್ಮರಣಾರ್ಥ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ. ತಾವು ಸಾಯುವ ಮುನ್ನ ಆಲ್​ಫ್ರೆಡ್ ನೊಬೆಲ್ ಅವರು ಫಿಸಿಯಾಲಜಿ, ಕೆಮಿಸ್ಟ್ರಿ, ಲಿಟರೇಚರ್, ಪೀಸ್ ಮತ್ತು ಫಿಸಿಕ್ಸ್ ವಿಭಾಗದಲ್ಲಿ ಪ್ರಶಸ್ತಿ ನೀಡಬೇಕೆಂದು ವಿಲ್ ಬರೆದಿದ್ದರು. ಅದರಂತೆ ಸ್ವೀಡನ್ ಮತ್ತು ನಾರ್ವೆ ದೇಶದ ಸಂಸ್ಥೆಗಳು 1901ರಿಂದ ಜಗತ್ತಿನ ವಿಜ್ಞಾನಿಗಳನ್ನು ಗುರುತಿಸಿ ನೊಬೆಲ್ ಪಾರಿತೋಷಕಗಳ ನೀಡುತ್ತಾ ಬಂದಿವೆ. 1969ರಿಂದ ಅರ್ಥಶಾಸ್ತ್ರಜ್ಞರಿಗೂ ನೊಬೆಲ್ ಪ್ರಶಸ್ತಿ ನೀಡುವ ಪರಿಪಾಠ ಶುರುವಾಯಿತು.

ನೊಬೆಲ್ ಪ್ರಶಸ್ತಿಯನ್ನು ವಿಶ್ವದ ಅತ್ಯುನ್ನತ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಭಾರತ ಸಂಜಾತ ಬ್ರಿಟಿಷರಾದ ರೊನಾಲ್ಡ್ ರಾಸ್ ಮತ್ತು ರುಡ್ಯಾರ್ಡ್ ಕಿಪ್ಲಿಂಗ್ ಸೇರಿದಂತೆ ಒಟ್ಟು 10 ಭಾರತೀಯರು ನೊಬೆಲ್ ಪಾರಿತೋಷಕ ಪಡೆದಿದ್ದಾರೆ. ರಬೀಂದ್ರನಾಥ್ ಟಾಗೂರ್, ಸಿ.ವಿ. ರಾಮನ್, ಮದರ್ ತೆರೇಸಾ, ಅಮರ್ಥ್ಯ ಸೇನ್, ಹರ್​ಗೋವಿಂದ್ ಖುರಾನ, ಎಸ್. ಚಂದ್ರಶೇಖರ್ ಅವರು ಪ್ರಮುಖರು. 2014ರಲ್ಲಿ ಕೈಲಾಶ್ ಸತ್ಯಾರ್ಥಿ ಅವರು ಶಾಂತಿ ನೊಬೆಲ್ ಪಡೆದುಕೊಂಡಿದ್ದರು.

October 7, 2019 Posted by | Award, ಸಂಶೋಧನೆ, Flash News, General Knowledge, Health, Science, Spardha, Technology, World | , , | Leave a comment

ಅಯೋಧ್ಯೆ ಪ್ರಕರಣ: ಪುರಾತತ್ವ ಹಕ್ಕು ಪ್ರಶ್ನಿಸಿ ಕ್ಷಮೆ ಯಾಚಿಸಿದ ಮುಸ್ಲಿಂ ಅರ್ಜಿದಾರರು

26 ayodhya sc
ನವದೆಹಲಿ
: ಅಯೋಧ್ಯೆ ಪ್ರಕರಣದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಹಕ್ಕನ್ನು ಪ್ರಶ್ನಿಸಿದ ವಿಚಾರದಲ್ಲಿ ಮುಸ್ಲಿಂ ಅರ್ಜಿದಾರರು ಸುಪ್ರೀಂ ಕೋರ್ಟಿನಲ್ಲಿ 2019 ಸೆಪ್ಟೆಂಬರ್ 26ರ ಗುರುವಾರ ತಮ್ಮ ನಿಲುವನ್ನು ಬದಲಾಯಿಸಿಕೊಂಡರು.

2003ರ ಪುರಾತತ್ವ ಇಲಾಖೆಯ ಸಮೀಕ್ಷಾ ಹಕ್ಕಿನ ಕರ್ತೃತ್ವವನ್ನು ಪ್ರಶ್ನಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುಮಾಡಿದ್ದಾಕ್ಕಾಗಿ ಮುಸ್ಲಿಂ ಅರ್ಜಿದಾರ ಪರ ವಕೀಲರು ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಸಂವಿಧಾನ ಪೀಠದ ಕ್ಷಮಾಪಣೆಯನ್ನು ಕೇಳಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ  ಪೀಠದ ಮುಂದೆ ಈ ವಿಚಾರವನ್ನು ಪ್ರಸ್ತಾವಿಸಿದ ಮುಸ್ಲಿಂ ಅರ್ಜಿದಾರರ ಪರ ವಕೀಲ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಅವರು  ತಮ್ಮ ಕಕ್ಷಿದಾರರು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಯ ಸಾರಾಂಶವನ್ನು ಪ್ರಶ್ನಿಸಲು ಬಯಸುವುದಿಲ್ಲ ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.

‘ಸಮೀಕ್ಷೆಯ ಪ್ರತೀ ಪುಟದಲ್ಲಿ ಸಹಿ ಇರಬೇಕಿತ್ತು ಎಂದು ನಿರೀಕ್ಷಿಸುವಂತಿಲ್ಲ. ಇದರ ಕರ್ತೃತ್ವ ಮತ್ತು ಸಾರಾಂಶವನ್ನು ಪ್ರಶ್ನಿಸುವ ಅಗತ್ಯವಿಲ್ಲ. ಒಂದು ವೇಳೆ ನಾವು ಈ ವಿಚಾರದಲ್ಲಿ ಘನ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಿದ್ದಲ್ಲಿ, ನಾವು ಇದಕ್ಕಾಗಿ ಕ್ಷಮೆಯನ್ನು ಕೋರುತ್ತೇವೆ’ ಎಂದು ರಾಜೀವ್ ಧವನ್ ಅವರು ಪೀಠದ ಮುಂದೆ ಹೇಳಿದರು. ‘ಈ ವರದಿಯ ಕರ್ತೃತ್ವ ಒಂದು ಪ್ರಶ್ನೆಯಾಗಿತ್ತು ಮತ್ತು ನಾವು ಈ ಕರ್ತೃತ್ವವನ್ನು ಪ್ರಶ್ನಿಸುವುದಿಲ್ಲ’ ಎಂದೂ ಸಹ ಮುಸ್ಲಿಂ ಅರ್ಜಿದಾರ ಪಕ್ಷಗಳ ಪರ ವಕೀಲರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

2019 ಸೆಪ್ಟೆಂಬರ್ 25ರ ಬುಧವಾರದಂದು ಸಾಂವಿಧಾನಿಕ ಪೀಠದ ಮುಂದೆ ತಮ್ಮ ವಾದವನ್ನು ಮಂಡಿಸಿದ್ದ ಮುಸ್ಲಿಂ ಅರ್ಜಿದಾರರ ಪರ ವಾದ ಮಂಡಿಸುತ್ತಿರುವ ಇನ್ನೋರ್ವ ವಕೀಲರಾದ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರು ತಮ್ಮ ವಾದವನ್ನು ಮಂಡಿಸುತ್ತಾ ಭಾರತೀಯ ಪುರಾತತ್ವ ಇಲಾಖೆಯ ವರದಿಯ ಪ್ರತೀ ಅಧ್ಯಾಯದಲ್ಲಿ ಒಬ್ಬೊಬ್ಬ ಲೇಖಕರ ಹೆಸರಿದೆ ಆದರೆ ಸಾರಾಂಶ ವರದಿಯಲ್ಲಿ ಯಾವುದೇ ಲೇಖಕರ ಹೆಸರಿಲ್ಲ ಎಂದು ವಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರೊಂದಿಗೆ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಅಯೋಧ್ಯಾ ಪ್ರಕರಣದ ವಿಚಾರಣೆಯನ್ನು ಪ್ರತಿದಿನವೂ  ನಡೆಸುತ್ತಿದೆ.

ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರ ಪರ ವಕೀಲರಿಗೆ ತಮ್ಮ ವಾದ ಮಂಡನೆ ಮುಕ್ತಾಯಕ್ಕೆ ಅಂತಿಮ ದಿನವೊಂದನ್ನು ನಿಗದಿಪಡಿಸಿಕೊಳ್ಳುವಂತೆ ಪೀಠ ಸ್ಪಷ್ಟ ನಿರ್ದೇಶನವನ್ನು ನೀಡಿತು ಮತ್ತು ಅಕ್ಟೋಬರ್ 18ರ ಬಳಿಕ ಒಂದು ದಿನವನ್ನೂ ಹೆಚ್ಚುವರಿಯಾಗಿ ವಾದ ಮಂಡನೆಗೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತು.

‘ಅಕ್ಟೋಬರ್ 18ರ ನಂತರ ಒಂದು ದಿನವನ್ನೂ ಸಹ ಹೆಚ್ಚುವರಿಯಾಗಿ ನೀಡುವುದಿಲ್ಲ. ಮತ್ತು ಈ ವಿಚಾರದಲ್ಲಿ ನಾವು ನಾಲ್ಕುವಾರಗಳ ಒಳಗಾಗಿ ತೀರ್ಪು ನೀಡಲು ಸಾಧ್ಯವಾದರೆ ಅದೊಂದು ಪವಾಡವೇ ಸರಿ’ ಎಂದು ಮುಖ್ಯನ್ಯಾಯುಮೂರ್ತಿ ರಂಜನ್ ಗೊಗೋಯಿ ಅವರು ಎರಡೂ ಪಕ್ಷಗಳ ಅರ್ಜಿದಾರರಿಗೆ ಸ್ಪಷ್ಟಪಡಿಸಿದರು.

ಅಕ್ಟೋಬರ್ ತಿಂಗಳಿನಲ್ಲಿ ನ್ಯಾಯಾಲಯಕ್ಕೆ ರಜೆ ಇರುವುದರಿಂದ ನಾಲ್ಕು ಹಿಂದೂ ಅರ್ಜಿದಾರ ಪರ ಓರ್ವ ವಕೀಲರಿಗೆ ಮಾತ್ರವೇ ಪ್ರತಿವಾದ ಮಂಡಿಸಲು ಅವಕಾಶವಿದೆ ಎಂದು ತಿಳಿದುಬಂದಿತು.

September 26, 2019 Posted by | Adhyathma, Award, ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Pakistan, Politics, Spardha, supreme court, Temples, Temples, ದೇವಾಲಯಗಳು, Terror, World | , , , , , | Leave a comment

ಮುಖೇಶ ಅಂಬಾನಿ ಭಾರತದ ಅತೀ ಶ್ರೀಮಂತ

25 mukesh ambani
ಮುಂಬಯಿ
: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ ಅಂಬಾನಿ ಈಗ ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರು. ಹೀಗೆ ಅವರು ಅತಿ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಹೊಂದುತ್ತಿರುವುದು ಸತತ 8ನೇ ಬಾರಿಯಾಗಿದೆ.

3,80,700 ಕೋಟಿ ರೂ. ಆಸ್ತಿಯನ್ನು ಅವರು ಹೊಂದಿರುವುದಾಗಿ ಸಮೀಕ್ಷೆ ನಡೆಸಿದ ಐಐಎಫ್ಎಲ್‌ ವೆಲ್ತ್‌ ಹುರುನ್‌ ಇಂಡಿಯಾ ರಿಚ್‌ ಲಿಸ್ಟ್‌ 2019 ಸೆಪ್ಟೆಂಬರ್  25ರ ಬುಧವಾರ ಹೇಳಿತು.

ಎರಡನೇ ಸ್ಥಾನವನ್ನು ಲಂಡನ್‌ ಮೂಲದ ಎಸ್‌ಪಿ ಹಿಂದುಜಾ ಮತ್ತು ಕುಟುಂಬ ಹೊಂದಿದೆ. ಇವರ ಆಸ್ತಿ 1,86,500 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಪಡೆದಿದ್ದಾರೆ. ಅವರ ಆಸ್ತಿ ಮೊತ್ತ 1,17,100 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ಆರ್ಸೆಲರ್‌ ಮಿತ್ತಲ್‌ ಸಿಇಒ (1,07,300 ಕೋಟಿ ರೂ.) ಮತ್ತು 5ನೇ ಸ್ಥಾನವನ್ನು ಅದಾನಿ ಸಮೂಹದ ಗೌತಮ್‌ ಅದಾನಿ (94,500 ರೂ.) ಹೊಂದಿದ್ದಾರೆ.

ಸಮೀಕ್ಷೆ ಪ್ರಕಾರ 1 ಸಾವಿರ ಕೋಟಿ ರೂ.ಗಳಿಗೆ ಮಿಕ್ಕಿ ಆಸ್ತಿ ಹೊಂದಿದವರ ಸಂಖ್ಯೆ 953ಕ್ಕೇರಿದೆ. ಈ ಹಿಂದಿನ ವರ್ಷ ಇವರ ಸಂಖ್ಯೆ 831 ಇತ್ತು.

ಪಟ್ಟಿಯಲ್ಲಿ ಟಾಪ್‌ 25ರ ಪಟ್ಟಿಯಲ್ಲಿರುವವ ಒಟ್ಟು ಆಸ್ತಿಯ ಪ್ರಮಾಣ ಭಾರತದ ಜಿಡಿಪಿಯ ಶೇ.10ರಷ್ಟು ಆಗುತ್ತದೆ. ಹಾಗೆಯೇ 953 ಮಂದಿಯ ಒಟ್ಟು ಆಸ್ತಿಯ ಪ್ರಮಾಣ ಜಿಡಿಪಿ ಮೊತ್ತದ ಶೇ.27ರಷ್ಟು ಆಗುತ್ತದೆ.

September 25, 2019 Posted by | Auto World, Award, ಆಟೋ ಜಗತ್ತು, ಆರ್ಥಿಕ, ಬೆಂಗಳೂರು, ಭಾರತ, ಮೋಟಾರು ವಾಹನ,, ರಾಷ್ಟ್ರೀಯ, Consumer Issues, environment /endangered species, Flash News, General Knowledge, India, Nation, News, Spardha, World | , | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ