SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಡಿಕೆ ಶಿವಕುಮಾರ್‌ಗೆ ದೆಹಲಿ ಹೈಕೋರ್ಟ್ ಶರತ್ತಿನ ಜಾಮೀನು

23 dk shivakumar೪೮ ದಿನಗಳ ಸೆರೆವಾಸದ ಬಳಿಕ ಲಭಿಸಿದ ನಿರಾಳತೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ (ಇಡಿ) ಒಂದೂವರೆ ತಿಂಗಳ ಹಿಂದೆ ಬಂಧನಕ್ಕೆ ಒಳಗಾಗಿ ತಿಹಾರ್ ಸೆರೆಮನೆ ಸೇರಿದ್ದ ಕರ್ನಾಟಕದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರಿಗೆ  ದೆಹಲಿ ಹೈಕೋರ್ಟ್ 2019 ಅಕ್ಟೋಬರ್ 23ರ ಬುಧವಾರ ಶರತ್ತಿನ ಜಾಮೀನು ಮಂಜೂರು ಮಾಡಿತು. ಇದರೊಂದಿಗೆ ಬಂಧನಕ್ಕೆ ಒಳಗಾದ ೪೮ ದಿನಗಳ ಬಳಿಕ ೫೭ರ ಹರೆಯದ ಕಾಂಗ್ರೆಸ್ ನಾಯಕನಿಗೆ ನಿರಾಳತೆ ಲಭಿಸಿತು.

ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರು ಐಪಿಸಿ ಸೆಕ್ಷನ್ ೧೨೦ ಬಿ ಬಗ್ಗೆ ವಿವರಣೆ ನೀಡಿ ತೀರ್ಪನ್ನು ಪ್ರಕಟಿಸಿದರು. ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತು ವಾದ, ಪ್ರತಿವಾದ ಆಲಿಸಿದ್ದ ನ್ಯಾಯಮೂರ್ತಿ ತಮ್ಮ ತೀರ್ಪನ್ನು 2019 ಅಕ್ಟೋಬರ್ 23ರ ಬುಧವಾರಕ್ಕೆ ಕಾಯ್ದಿರಿಸಿದ್ದರು.

ತಿಹಾರ್ ಜೈಲು ವಾಸ ಅನುಭವಿಸುತ್ತಿದ್ದ ಶಿವಕುಮಾರ್ ಅವರ ಆರೋಗ್ಯ ಸ್ಥಿತಿ ಗಮನಿಸಿ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಅವರ ಏಕಸದಸ್ಯ ಪೀಠ  ಜಾಮೀನು ಮಂಜೂರು ಮಾಡಿತು. ಇದರ ಜೊತೆಗೆ ೨೫ ಲಕ್ಷ  ರೂಪಾಯಿ ಮೌಲ್ಯದ ಎರಡು ಬಾಂಡುಗಳನ್ನು ಒದಗಿಸಬೇಕು, ಪಾಸ್ ಪೋರ್ಟ್‌ನ್ನು ಒಪ್ಪಿಸಬೇಕು ಮತ್ತು ವಿಚಾರಣೆಗೆ ಸಹರಿಸಬೇಕು ಎಂಬ ಶರತ್ತುಗಳನ್ನು ವಿಧಿಸಿತು.

ಕಾಂಗ್ರೆಸ್ ನಾಯಕ ವಿದೇಶಕ್ಕೆ ಪರಾರಿಯಾಗಬಹುದು ಎಂಬುದನ್ನು ತೋರಿಸುವಂತಹ ಯಾವುದೇ ಸಾಕ್ಷ್ಯಧಾರವೂ ಇಲ್ಲವಾದ್ದರಿಂದ ಅವರು ಜಾಮೀನು ಪಡೆಯಲು ಅರ್ಹರಾಗಿದ್ದಾರೆ ಎಂದು ಜಾಮೀನು ಮಂಜೂರು ಮಾಡುತ್ತಾ ನ್ಯಾಯಮೂರ್ತಿ ಸುರೇಶ್ ಕೈಟ್ ಹೇಳಿದರು.

ದಾಖಲೆಗಳು ತನಿಖಾ ಸಂಸ್ಥೆಯ ಬಳಿ ಇರುವುದರಿಂದ ಶಿವಕುಮಾರ್ ಅವರು ಸಾಕ್ಷ್ಯಾಧಾರ ನಾಶಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಹೇಳಿದರು.

ಶಿವಕುಮಾರ್ ಅವರು ಅಧಿಕಾರದಲ್ಲಿ ಇಲ್ಲ ಮತ್ತು ಅವರು ಅಥವಾ ಅವರ ಕುಟುಂಬ ಸದಸ್ಯರು  ಅಥವಾ ನಿಕಟವರ್ತಿಗಳು ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಯತ್ನಿಸಿದ್ದಾರೆ ಎಂಬುದನ್ನು ತೋರಿಸುವಂತಹ ಯಾವುದೇ ಪುರಾವೆ ಇಲ್ಲ ಎಂದೂ ಪೀಠ ಹೇಳಿತು.

ಆದಾಗ್ಯೂ, ಶಿವಕುಮಾರ್ ಅವರನ್ನು ೨೫ಲಕ್ಷ ರೂಪಾಯಿಗಳ ಬಾಂಡ್ ಮತ್ತು ಎರಡು ಖಾತರಿಗಳನ್ನು ಹಾಜರು ಪಡಿಸಿದ ಬಳಿಕ ಬಿಡುಗಡೆ ಮಾಡಬೇಕು ಎಂದು ನ್ಯಾಯಾಲಯ ನಿರ್ದೇಶನ ನೀಡಿತು.

ಶಿವಕುಮಾರ್ ಅವರು ವಿಚಾರಣಾ ನ್ಯಾಯಾಲಯದ ಅನುಮತಿ ಇಲ್ಲದೆ ದೇಶದಿಂದ ಹೊರ ಹೋಗುವಂತಿಲ್ಲ, ತನಿಖೆಗೆ ಲಭ್ಯರಿರಬೇಕು/ ಸಹಕರಿಸಬೇಕು ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು ಎಂದೂ ಹೈಕೋರ್ಟ್ ಜಾಮೀನು ಮಂಜೂರು ಮಾಡುತ್ತಾ ಶರತ್ತುಗಳನ್ನು ವಿಧಿಸಿತು.

ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ತನಿಖೆಗಾಗಿ ದೆಹಲಿಗೆ ಕರೆಸಿಕೊಂಡು ನಾಲ್ಕು ದಿನಗಳ ಬಳಿಕ ಸೆಪ್ಟೆಂಬರ್ ೩ರಂದು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಬಂಧಿಸಿತ್ತು. ಜಾರಿ ನಿರ್ದೇಶನಾಲಯ ತನಿಖೆಯ ಬಳಿಕ ಅವರನ್ನು ತಿಹಾರ್ ಸೆರೆಮನೆಯಲ್ಲಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು.

ತಮಗೆ ಜಾರಿ ನಿರ್ದೇಶನಾಲಯದ (ಇಡಿ) ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಡಿಕೆ ಶಿವಕುಮಾರ್ ಅವರು ದೆಹಲಿ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ಶಿವಕುಮಾರ್ ಅವರು ಪ್ರಭಾವಶಾಲಿ ವ್ಯಕ್ತಿಯಾಗಿದ್ದು, ಬಿಡುಗಡೆಯಾದರೆ ಸಾಕ್ಷ್ಯದಲ್ಲಿ ಕೈಯಾಡಿಸುವ ಹಾಗೂ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂಬುದಾಗಿ ವಾದಿಸುವ ಮೂಲಕ ಜಾರಿ ನಿರ್ದೇಶನಾಲಯವು ಅವರಿಗೆ ಜಾಮೀನು ಮಂಜೂರು ಮಾಡಲು ತೀವ್ರ ವಿರೋಧ ವ್ಯಕ್ತ ಪಡಿಸಿತ್ತು.

ಕರ್ನಾಟಕದಲ್ಲಿ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಿವಕುಮಾರ್ ಅವರ ವಿರುದ್ಧ ನವದೆಹಲಿಯ ಕರ್ನಾಟಕ ಭವನದ ನೌಕರ ಹನುಮಂತಯ್ಯ ಮತ್ತು ಇತರರ ಜೊತೆಗೆ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್ ಎ) ಕಾಯ್ದೆಯ ಅಡಿಯಲ್ಲಿ ವಿವಿಧ ಅಪರಾಧ ಎಸಗಿದ ಆರೋಪಕ್ಕಾಗಿ ಪ್ರಕರಣ ದಾಖಲಿಸಲಾಗಿತ್ತು.

ಜಾರಿ ನಿರ್ದೇಶನಾಲಯದಿಂದ ಸೆಪ್ಟೆಂಬರ್ ೩ರಂದು ಬಂಧಿತರಾದ ಒಂದೂವರೆ ತಿಂಗಳ ಸೆರೆ ವಾಸದ ಬಳಿಕೆ ಡಿಕೆ ಶಿವಕುಮಾರ್ ಬಂಧಮುಕ್ತಿಯ ಆದೇಶವನ್ನು ಪಡೆದರು.

ಪ್ರಕರಣದ ಹಿನ್ನೆಲೆ:

ಆದಾಯ ತೆರಿಗೆ ಇಲಖೆಯು ಕಳೆದ ವರ್ಷ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಿಸಿದ್ದ ಕೋಟ್ಯಂತರ ರೂಪಾಯಿಗಳ ಹವಾಲಾ ವಹಿವಾಟು ಮತ್ತು ತೆರಿಗೆ ವಂಚನೆ ಆರೋಪದ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ವಗಾವಣೆ ಪ್ರಕರಣವನ್ನು ದಾಖಲಿಸಿತ್ತು.

ಶಿವಕುಮಾರ್ ಮತ್ತು ಅವರ ನಿಕಟವರ್ತಿ ಎಸ್‌ಕೆ ಶರ್ಮ ಅವರು ಭಾರೀ ಮೊತ್ತದ ಲೆಕ್ಕರಹಿತ ಹಣವನ್ನು ಇತರ ಮೂವರು ಆರೋಪಿಗಳ ನೆರವಿನೊಂದಿಗೆ ನಿಯಮಿತವಾಗಿ ಹವಾಲಾ ಜಾಲದ ಮೂಲ ಕಳುಹಿಸುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆ ತನ್ನ ದೋಷಾರೋಪ ಪಟ್ಟಿಯಲ್ಲಿ ಆಪಾದಿಸಿತ್ತು.

೨೦೧೭ರ ನಿರ್ಣಾಯಕ ರಾಜ್ಯಸಭಾ ಚುನಾವಣೆಗೆ ಮುನ್ನ ಗುಜರಾತಿನ ಶಾಸಕರಿಗೆ ಕರ್ನಾಟಕದ ರಾಜಧಾನಿ ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಆಶ್ರಯ ಒದಗಿಸುವಲ್ಲಿ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇದೇ ವೇಳೆಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆದಾಳಿ ನಡೆಸಿದ್ದರು.

ಈ ದಾಳಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಶಿವಕುಮಾರ್ ಅವರ ದೆಹಲಿ ಮನೆಯಲ್ಲಿ ೮.೮೨ ಕೋಟಿ ರೂಪಾಯಿಗಳ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡಿದ್ದರು.

 

ಮುಖ್ಯಾಂಶಗಳು:

* ಡಿಕೆ ಶಿವಕುಮಾರ್‌ಗೆ ಶರತ್ತಿನ ಜಾಮೀನು ನೀಡಿದ ದೆಹಲಿ ಹೈಕೋರ್ಟ್

* ಅನಾರೋಗ್ಯದ ಕಾರಣ ನೀಡಿ ಜಾಮೀನು ಮಂಜೂರು

* ವಿದೇಶಕ್ಕೆ ಪಲಾಯನ ಮಾಡುವ ಸಾಧ್ಯತೆ ಇಲ್ಲ

* ವಿದೇಶಕ್ಕೆ ಹೋಗಲು ಕೋರ್ಟ್ ಅನುಮತಿ ಪಡೆಯಬೇಕು

* ೨೫ ಲಕ್ಷ ರೂಪಾಯಿ ಬಾಂಡ್ ನೀಡಬೇಕು

* ಸಾಕ್ಷ್ಯ ನಾಶಕ್ಕೆ ಪುರಾವೆ ಇಲ್ಲ

* ಡಿ.ಕೆ. ಶಿವಕುಮಾರ್ ಪಾಸ್ ಪೋರ್ಟ್‌ನ್ನು ನ್ಯಾಯಾಲಯದ ವಶಕ್ಕೆ ಒಪ್ಪಿಸಬೇಕು.

 

ತಿಹಾರ್ ಜೈಲಿನಲ್ಲಿ ಭೇಟಿಯಾಗಿದ್ದ ಸೋನಿಯಾ, ಎಚ್ಡಿಕೆ

ಈ ಮಧ್ಯೆ, ತಿಹಾರ್ ಸೆರೆಮನೆಯಲ್ಲಿದ್ದ ಕರ್ನಾಟಕ ಮೈತ್ರಿಸರ್ಕಾರದ ಪ್ರಮುಖ ’ಸಂಕಷ್ಟ ನಿವಾರಕ’ರಾಗಿದ್ದ ಡಿಕೆ ಶಿವಕುಮಾರ್ ಅವರನ್ನು ಮಂಗಳವಾರ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಮತ್ತು ಬುಧವಾರ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಭೇಟಿಯಾಗಿದ್ದರು.

ಈ ಮಧ್ಯೆ, ಶಿವಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯವು ಸುಪ್ರೀಂಕೋರ್ಟಿಗೆ ಮನವಿ ತತ್ ಕ್ಷಣವೇ ಮನವಿ ಸಲ್ಲಿಸಿದ್ದು, ಮೇಲ್ಮನವಿಯು 2019 ಅಕ್ಟೋಬರ್ 24ರ ಗುರುವಾರ ವಿಚಾರಣೆಗೆ ಬರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದವು.

October 23, 2019 Posted by | ಆರ್ಥಿಕ, ಭಾರತ, ರಾಜ್ಯ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Politics, Social Media, Spardha | , | Leave a comment

ಭಾರತೀಯ ಮೂಲದ ಅರ್ಥಶಾಸ್ತ್ರಜ್ಞ ಅಭಿಜಿತ್, ಪತ್ನಿ ಎಸ್ತರ್ ಸೇರಿ ಮೂವರಿಗೆ ನೊಬೆಲ್ ಪ್ರಶಸ್ತಿ

14 abhijit_banerjee,_esther_duflo_and_michael_kremer Noble award
ಸ್ಟಾಕ್‌ಹೋಮ್‌:
 ಜಾಗತಿಕ ಬಡತನ ನಿವಾರಣೆ ಕುರಿತ ಅಧ್ಯಯನಕ್ಕಾಗಿ ಭಾರತೀಯ ಮೂಲದ ಅಮೆರಿಕನ್ ಅರ್ಥ ಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ, ಪತ್ನಿ ಎಸ್ತರ್ ಡ್ಯುಫ್ಲೋ ಹಾಗೂ ಮೈಕೆಲ್ ಕ್ರೇಮರ್ ಸೇರಿದಂತೆ ಮೂವರು 2019ರ ಸಾಲಿನ  ಪ್ರತಿಷ್ಠಿತ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಭಾಜನರಾದರು. ಜಾಗತಿಕ ಬಡತನವನ್ನು ನಿವಾರಿಸುವ ಪ್ರಾಯೋಗಿಕ ವಿಧಾನಕ್ಕಾಗಿ ಇವರಿಗೆ ನೊಬೆಲ್‌ ಪ್ರಶಸ್ತಿ ನೀಡಲಾಗಿದೆ ಪ್ರಶಸ್ತಿ ಸಮಿತಿಯು 2019ರ ಅಕ್ಟೋಬರ್ 14ರ ಸೋಮವಾರ ಪ್ರಕಟಿಸಿತು.

‘ಈ ವರ್ಷದ ಪ್ರಶಸ್ತಿ ವಿಜೇತರು ನಡೆಸಿದ ಸಂಶೋಧನೆಯು ಜಾಗತಿಕ ಬಡತನದ ವಿರುದ್ಧ ಹೋರಾಡುವ ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಸುಧಾರಿಸಿದೆ. ಕೇವಲ ಎರಡು ದಶಕಗಳಲ್ಲಿ, ಅವರ ಹೊಸ ಪ್ರಯೋಗ ಆಧಾರಿತ ವಿಧಾನವು ಅಭಿವೃದ್ಧಿ ಅರ್ಥಶಾಸ್ತ್ರವನ್ನೇ ಮಾರ್ಪಡಿಸಿದೆ, ಇದು ಈಗ ಅಭಿವೃದ್ಧಿ ಹೊಂದುತ್ತಿರುವ ಸಂಶೋಧನಾ ಕ್ಷೇತ್ರವಾಗಿದೆ,” ಎಂದು ಈ ಸಂಬಂಧ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನೊಬೆಲ್‌ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿತು.

ಅಭಿಜಿತ್ ವಿನಾಯಕ ಬ್ಯಾನರ್ಜಿ ಮೂಲತಃ ಕೋಲ್ಕತಾದವರು. ಅವರು ಪ್ರಸ್ತುತ ಮೆಸ್ಯಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಎಂಐಟಿ) ಅರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬ್ಯಾನರ್ಜಿ ಅವರು 2003ರಲ್ಲಿ ಅಬ್ದುಲ್ ಲತೀಫ್ ಜಮೀಲ್ ಪವರ್ಟಿ ಆ್ಯಕ್ಷನ್ ಲ್ಯಾಬನ್ನು  ಪತ್ನಿ, ಅರ್ಥಶಾಸ್ತ್ರಜ್ಞೆ ಎಸ್ತರ್ ಡ್ಯುಫ್ಲೋ  ಹಾಗೂ ಸೆಂಧಿಲ್ ಮುಲ್ಲಯ್ಯನಾಥನ್ ಅವರ ಜೊತೆಗೆ ಸ್ಥಾಪನೆ ಮಾಡಿದ್ದರು. ಬ್ಯಾನರ್ಜಿ ಅವರು ಇಂದಿಗೂ ಇದರ ನಿರ್ದೇಶಕರಾಗಿದ್ದಾರೆ.

58 ವರ್ಷದ ಬ್ಯಾನರ್ಜಿ ಕೊಲ್ಕತ್ತಾ ವಿಶ್ವ ವಿದ್ಯಾಲಯ,  ದೆಹಲಿಯ ಜವಹರ್‌ಲಾಲ್‌ ನೆಹರೂ ವಿಶ್ವ ವಿದ್ಯಾಲಯಗಳಲ್ಲಿ (ಜೆನ್‌ಯು) ನಲ್ಲಿ ಉನ್ನತ ವ್ಯಾಸಾಂಗ ಮಾಡಿದ್ದು, 1988ರಲ್ಲಿ ಹಾರ್ವರ್ಡ್‌ ವಿಶ್ವ ವಿದ್ಯಾಲಯದಿಂದ  ಎಚ್‌.ಡಿ ಪದವಿ ಪಡೆದುಕೊಂಡಿದ್ದಾರೆ.

2015ರ ನಂತರದ ಅಭಿವೃದ್ಧಿ ಅಜೆಂಡಾಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಗಣ್ಯ ವ್ಯಕ್ತಿಗಳ ಉನ್ನತ ಮಟ್ಟದ ಸಮಿತಿಯಲ್ಲಿಯೂ ಇವರು ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ ಮೊತ್ತ 6.51 ಕೋಟಿ ರೂಪಾಯಿಗಳನ್ನು ಒಳಗೊಂಡಿದ್ದು ಇದನ್ನು ಬ್ಯಾನರ್ಜಿ, ಡ್ಯುಫ್ಲೋ ಮತ್ತು ಕ್ರೇಮರ್‌ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ.

ಸುಮಾರು 700 ಮಿಲಿಯನ್ (70 ಕೋಟಿ)ಜನರು ಈಗಲೂ ಕಡಿಮೆ ಆದಾಯ ಗಳಿಸುತ್ತಿದ್ದಾರೆ. ಪ್ರತಿವರ್ಷ 5 ಮಿಲಿಯನ್ ಮಕ್ಕಳು ಐದನೇ ವರ್ಷದ ಹುಟ್ಟುಹಬ್ಬದ ಆಚರಣೆಗೂ ಮುನ್ನವೇ ಸಾವನ್ನಪ್ಪುತ್ತಿದ್ದಾರೆ. ಅದಕ್ಕೆ ಕಾರಣ ಅಗ್ಗದ ಹಾಗೂ ಸಾಧಾರಣ ಚಿಕಿತ್ಸೆ ಎಂಬುದಾಗಿ ಬ್ಯಾನರ್ಜಿ ತಮ್ಮ ಅಧ್ಯಯನದಲ್ಲಿ ತಿಳಿಸಿದ್ದರು.

October 15, 2019 Posted by | Award, ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, ಸಾಮಾಜಿಕ  ಮಾಧ್ಯಮ, Finance, Flash News, General Knowledge, India, Nation, News, Social Media, Spardha, World | | Leave a comment

೫೦ ಕಟ್ಟಾ ಭಯೋತ್ಪಾದಕರು, ಅತ್ಮಹತ್ಯಾ ಬಾಂಬರ್‌ಗಳಿಗೆ  ಬಾಲಾಕೋಟ್  ಜೆಇಎಂ ಶಿಬಿರದಲ್ಲಿ ತರಬೇತಿ

14 balakot-archive-image
ನವದೆಹಲಿ:
 ಆತ್ಮಹತ್ಯಾ ಬಾಂಬರ್‌ಗಳು ಸೇರಿದಂತೆ ೪೦-೫೦ ಮಂದಿ ಕಟ್ಟಾ ಭಯೋತ್ಪಾದಕರಿಗೆ ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದು  2019ರ ಅಕ್ಟೋಬರ್ 14ರ ಸೋಮವಾರ ವರದಿಯಾಯಿತು.

ಇದೇ ಭಯೋತ್ಪಾದಕ ಶಿಬಿರದ ಮೇಲೆ ಎಂಟು ತಿಂಗಳ  ಹಿಂದೆ  ಭಾರತೀಯ ವಾಯುಪಡೆ ವಿಮಾನಗಳು ವೈಮಾನಿಕ  ದಾಳಿ  ನಡೆಸಿದ್ದವು.

‘ಸುಮಾರು ೪೫-೫೦ ಆತ್ಮಹತ್ಯಾ ಬಾಂಬರ್‌ಗಳಿಗೆ ಪಾಕಿಸ್ತಾನದ ಬಾಲಾಕೋಟ್‌ನ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ  ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ’ ಎಂದು ಉನ್ನತ ಸರ್ಕಾರಿ ಮೂಲಗಳು  ತಿಳಿಸಿದವು.

ಬಾಲಾಕೋಟ್‌ನ ಜೈಶ್-ಎ-ಮೊಹಮ್ಮದ್ ತರಬೇತಿ ಶಿಬಿರದ ಚಟುವಟಿಕೆಗಳ ಮೇಲೆ ನಾವು ಕಣ್ಣಿಟ್ಟಿದ್ದೇವೆ ಮತ್ತು ಅಲ್ಲಿನ ಬೆಳವಣಿಗೆಗಳ ಬಗ್ಗೆ ಅರಿತುಕೊಳ್ಳ್ಳುವುದಕ್ಕಾಗಿ ತಾಂತ್ರಿಕ ಕಣ್ಗಾವಲನ್ನು ಹೆಚ್ಚಿಸಿದ್ದೇವೆ ಎಂದು ಮೂಲಗಳು ಹೇಳಿದವು.

ಈ ಉಗ್ರ ಶಿಬಿರದಲ್ಲಿ ತರಬೇತಿ ಪಡೆದ ಕೆಲವು ಭಯೋತ್ಪಾದಕರನ್ನು ಭಾರತೀಯ ಭದ್ರತಾ ನೆಲೆಗಳ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಸಲುವಾಗಿ ಕಾಶ್ಮೀರಕ್ಕೆ ಕಳುಹಿಸಲಾಗಿದೆ ಎಂದೂ ಮೂಲಗಳು ತಿಳಿಸಿದವು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತವು ರದ್ದು ಪಡಿಸಿದ ಬಳಿಕ ಕಣಿವೆಯಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಸಿಕೊಡುವ ಗುರಿ ಇಟ್ಟುಕೊಂಡು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವುದು ಪಾಕಿಸ್ತಾನದ ಯೋಜನೆಯಾಗಿದೆ ಎಂದು ಮೂಲಗಳು ಹೇಳಿದವು.

ಸೇನೆಯು ಕಟ್ಟೆಚ್ಚರದಲ್ಲಿದ್ದು, ಯಾವುದೇ ಭದ್ರತಾ ಸವಾಲಿನ ಜೊತೆ ’ಪರಿಣಾಮಕಾರಿ’ಯಾಗಿ ವ್ಯವಹರಿಸಲು ಅದಕ್ಕೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿದವು.

ಭಾರತೀಯ ವಾಯುಪಡೆಯ ವೈಮಾನಿಕ ದಾಳಿಯಲ್ಲಿ ಧ್ವಂಸವಾಗಿದ್ದ ಬಾಲಾಕೋಟ್ ಭಯೋತ್ಪಾದಕ ಸಮುಚ್ಚಯವು ಮತ್ತೆ ’ಸಕ್ರಿಯಗೊಂಡಿದ್ದು’ ಸುಮಾರು ೫೦೦ ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ಭಾರತದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಕಳೆದ ತಿಂಗಳು ಹೇಳಿದ್ದರು. ಕಳೆದ ಆರು ತಿಂಗಳುಗಳಿಂದ ಪಾಕ್ ಮೂಲದ ಭಯೋತ್ಪಾದಕರ ನುಸುಳುವಿಕೆ ಸ್ಥಗಿತಗೊಂಡಿತ್ತು ಎಂದೂ ಅವರು ನುಡಿದಿದ್ದರು.

‘ಬಾಲಾಕೋಟ್ ಶಿಬಿರವನ್ನು ಪಾಕಿಸ್ತಾನವು ತೀರಾ ಇತ್ತೀಚೆಗೆ ಮತ್ತೆ ಸಕ್ರಿಯಗೊಳಿಸಿದೆ. ಬಾಲಾಕೋಟ್ ಶಿಬಿರದ ಮೇಲೆ ದಾಳಿಯ ಪರಿಣಾಮವಾಗಿತ್ತು ಎಂಬುದನ್ನು ಇದು ಸಾಬೀತು ಪಡಿಸಿದೆ. ಅದು ಹಾನಿಗೊಂಡಿತ್ತು ಮತ್ತು ನಾಶಗೊಂಡಿತ್ತು. ಈ ಕಾರಣದಿಂದಲೇ ಅಲ್ಲಿದ್ದ ಜನರು ಬೇರೆ ಕಡೆಗೆ ಸ್ಥಳಾಂತರಗೊಂಡಿದ್ದರು. ಈಗ ಮತ್ತೆ ಅದು ಸಕ್ರಿಯಗೊಂಡಿದೆ’ ಎಂದು ರಾವತ್ ಅವರು ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಮಾತನಾಡುತ್ತಾ ಹೇಳಿದ್ದರು.

ಭಾರತೀಯ ವಾಯುಪಡೆಯು ಕೆಲವೊಂದು ಕ್ರಮಗಳನ್ನು ಕೈಗೊಂಡಿತ್ತು. ಈಗ ಅವರು (ಪಾಕಿಸ್ತಾನ) ಮತ್ತೆ ಅಲ್ಲಿಗೆ ಜನರನ್ನು ಮರಳಿ ಕರೆತರುತ್ತಿದ್ದಾರೆ ಎಂದು ಸೇನಾ ಮುಖ್ಯಸ್ಥರು  ಹೇಳಿದ್ದರು.

ಭಾರತೀಯ ವಾಯುಪಡೆಯ ವಿಮಾನಗಳ ತಂಡವೊಂದು ಬಾಲಾಕೋಟ್‌ನ ಭಯೋತ್ಪಾದಕರ ಉಡಾವಣಾ ಸ್ಥಳಗಳ ಮೇಲೆ ಫೆಬ್ರುವರಿ ೨೭ರಂದು ಸೂರ್‍ಯೋದಯಕ್ಕೂ ಮುನ್ನ ವೈಮಾನಿಕ ದಾಳಿ ನಡೆಸಿತ್ತು. ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಸುಮಾರು ೧೫ ದಿನಗಳ ಬಳಿಕ ಪ್ರತೀಕಾರದ ಕ್ರಮವಾಗಿ ಭಾರತ ಈ ಕಾರ್ಯಾಚರಣೆ ಕೈಗೊಂಡಿತ್ತು.

October 15, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Politics, Social Media, Spardha, Terror | , | Leave a comment

ಜಮ್ಮು – ಕಾಶ್ಮೀರದಲ್ಲಿ ಮತ್ತೆ ರಿಂಗಣಿಸಿದವು ಮೊಬೈಲ್ ಫೋನುಗಳು..

14 kashmir-phones
ಭಾವೋದ್ವೇಗದ ಕರೆ, ಶುಭಾಶಯ ವಿನಿಮಯದ ಹರ್ಷ, ಕಾಶ್ಮೀರಿಗಳಲ್ಲಿ ಖುಷಿಯ ಅಲೆ

ಶ್ರೀನಗರ:  ಎಲ್ಲೆಂದರಲ್ಲಿ ರಿಂಗಣಿಸುತ್ತಿದ್ದ ಮೊಬೈಲ್ ಫೋನುಗಳು, ಪರಸ್ಪರ ’ಮುಬಾರಕ್’ ವಿನಿಮಯ, ಉಭಯು ಕುಶಲೋಪರಿಯ ಖುಷಿ- ಇದು ಜಮ್ಮು ಮತ್ತು ಕಾಶ್ಮೀರದಲಿ  2019 ಅಕ್ಟೋಬರ್ 14ರ ಸೋಮವಾರ ಕಂಡು ಬಂದ ಖುಷಿಯ ಅಲೆಗಳ ದೃಶ್ಯ..

ಜಮ್ಮು  ಮತ್ತು ಕಾಶ್ಮೀರದಲ್ಲಿ ಸಂಪೂರ್ಣ ಸಂಪರ್ಕ ನಿರ್ಬಂಧ ಹೇರಿಕೆಯ ಸುಮಾರು ೭೦ ದಿನಗಳ ಬಳಿಕ ಸೋಮವಾರ ಪೋಸ್ಟ್ ಪೇಯ್ಡ್ ಮೊಬೈಲ್ ಫೋನುಗಳ ಸಂಪರ್ಕ ಪುನಾರಂಭಗೊಂಡಿದ್ದು ಕಾಶ್ಮೀರಿಗಳು ಖುಷಿಯೊಂದಿಗೆ ತಮ್ಮ ಆಪ್ರರೊಂದಿಗೆ ಮೊಬೈಲ್ ಮಾತುಕತೆ ನಡೆಸಿದ್ದು ಕಂಡು ಬಂತು.

ಸುಮಾರು ೭೦ ದಿನಗಳ ಸಂಪೂರ್ಣ ಸಂಪರ್ಕ ನಿರ್ಬಂಧದ ಬಳಿಕ ಮುಜಮ್ಮಿಲ್ ಅಹ್ಮದ್‌ಗೆ ಬಂದ ಮೊತ್ತ ಮೊದಲ ಕರೆ- ಆತನ ಅಜ್ಜಿಯದ್ದು. ಕಾನೂನು ವಿದ್ಯಾರ್ಥಿಯಾದ ಶಾ ತನ್ನ ಹೆತ್ತವರ ಜೊತೆ ನೆರೆಹೊರೆಯವರ ಸ್ಥಿರ ದೂರವಾಣಿ ಬಳಸಿ ಯಾವಾಗಾದರೂ ಒಮ್ಮೆ ಶೋಪಿಯಾನ್ ಜಿಲ್ಲೆಯ ಗೆಹೆಂಡ್‌ನಲ್ಲಿದ್ದ ತಮ್ಮ ಹೆತ್ತವರ ಜೊತೆ ಮಾತನಾಡುತ್ತಿದ್ದರು. ಆದರೆ ಅವರಿಗೆ ಅಜ್ಜಿಯ ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ.

‘ಸೋಮವಾರದಿಂದ ಫೋನ್ ಲೈನುಗಳು ಪುನಃಸ್ಥಾಪನೆಗೊಳ್ಳಲಿವೆ ಎಂಬುದಾಗಿ ಹೇಳಿದ್ದರಿಂದ ನಾನು ರಾತ್ರಿ ೧೨ ಗಂಟೆ ಆಗುವುದನ್ನೇ ಕಾಯುತ್ತಿದ್ದೆ. ನನಗೆ ಯಾವಾಗಲೂ ನನ್ನ ಹೆತ್ತವರ ಆರೋಗ್ಯದ ಬಗ್ಗೆ ಚಿಂತೆಯಿತ್ತು. ಸ್ಥಿರ ದೂರವಾಣಿಯಲ್ಲಿ ಯಾವಾಗಾದರೂ ಒಮ್ಮೆ ಸಂಪರ್ಕ ಸಾಧ್ಯವಾಗುತ್ತಿದ್ದರೂ, ಹಲವಾರು ಅಡಚಣೆಗಳ ಕಾರಣ ಅದು ಅಷ್ಟೊಂದು ಉತ್ತಮ ಸಂವಹನ ಮಾಧ್ಯಮವಾಗಿರಲಿಲ್ಲ. ನಾನು ಹೆತ್ತವರ ಜೊತೆಗೆ ಕೆಲವು ಬಾರಿ ಮಾತನಾಡಿದ್ದರೂ, ಸ್ಥಿರ ದೂರವಾಣಿ ಇದ್ದ ಮನೆಗೆ ಬರುವುದು ಅಜ್ಜಿಗೆ ಕಷ್ಟವಾದ ಕಾರಣ ಅವರ ಜೊತೆಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಈದಿನ ಅಜ್ಜಿಯ ಸ್ವರ ಕೇಳಿದಾಗ ನನಗೆ ಅತ್ಯಂತ ಖುಷಿಯಾಯಿತು’ ಎಂದು ಶಾ ತಮ್ಮ ಸಂತಸ ಹಂಚಿಕೊಂಡರು.

ಶ್ರೀನಗರದ ಲಾಲ್ ಚೌಕಕ್ಕೆ ಸೋಮವಾರ ಹೊಸ ಜೀವಕಳೆ ಬಂದಿತ್ತು. ಜನರು ಎರಡು ತಿಂಗಳುಗಳ ಬಳಿಕ ಮೊಬೈಲು ಫೋನುಗಳಲ್ಲಿ ಮಾತನಾಡುತ್ತಾ ಖುಷಿಯೊಂದಿಗೆ ಚಟುವಟಿಕೆ ನಿರತರಾಗಿದ್ದರು. ಈದ್ ಸಂದರ್ಭದಲ್ಲಿ ಮಾತ್ರ ಕೇಳಿ ಬರುತ್ತಿದ್ದ ’ಮುಬಾರಕ್’ ಸೋಮವಾರ ಎಲ್ಲೆಡೆಯಲ್ಲೂ ಮಾರ್ದನಿಸಿತ್ತು.

ಪೋಸ್ಟ್ ಪೇಯ್ಡ್ ಮೊಬೈಲ್ ಸಂಪರ್ಕ ಹೊಂದಿದ್ದ ಹಲವರು ಸೋಮವಾರ ಕರೆಗಳನ್ನು ಮಾಡುವುದರಲ್ಲಿ ಮಗ್ನರಾಗಿದ್ದರೆ, ಪೋಸ್ಟ್ ಪೇಯ್ಡ್ ಸಂಪರ್ಕ ಇಲ್ಲದೇ ಇದ್ದವರು ಕರೆಗಳನ್ನು ಮಾಡುವ ಸಲುವಾಗಿ ಪೋಸ್ಟ್ ಪೇಯ್ಡ್ ಮೊಬೈಲ್ ಹೊಂದಿದ್ದವರನ್ನು ಸುತ್ತುಗಟ್ಟಿದ್ದರು.

ವಾಹನ ಚಲಾಯಿಸುತ್ತಿದ್ದವರೂ ಮೊಬೈಲುಗಳಲ್ಲಿ ಮಾತನಾಡುತ್ತಾ ವಾಹನಗಳನ್ನು ಚಲಾಯಿಸುತ್ತಿದ್ದ ದೃಶ್ಯಗಳು ಕಂಡು ಬಂದವು. ಇದೇ ವೇಳೆಗೆ ಸಂಚಾರಿ ಪೊಲೀಸರು ವಾಹನ ಚಲಾಯಿಸುತ್ತಾ ಮೊಬೈಲ್ ಕರೆ ಮಾಡುವವರಿಗೆ ನೋಟಿಸ್ ನೀಡಲು ಸಿದ್ಧತೆ ಆರಂಭಿಸಿದರು. ’ಇಷ್ಟರಲ್ಲೇ ನಮ್ಮ ಚಲನ್ ಬುಕ್ ಹೊರ ತೆಗೆಯುತ್ತೇವೆ’ ಎಂದು ಸಂಚಾರಿ ಪೊಲೀಸ್ ಒಬ್ಬರು ಮಾಧ್ಯಮದ ಜೊತೆಗೆ ಮಾತನಾಡುತ್ತಾ ಹೇಳಿದರು.

ಹಲವಾರು ಕರೆಗಳನ್ನು ಮಾಡಿದ ಅಂಗಡಿಕಾರನೊಬ್ಬ ’ಫೋನ್ ಲೈನುಗಳ ಪುನಃಸ್ಥಾಪನೆಯು ನಮಗೆ ಸಹಜ ಬದುಕು ಅಂದರೆ ಏನು ಮತ್ತು ಅದನ್ನು ಹೇಗೆ ಕಿತ್ತುಕೊಳ್ಳಬಹುದು ಎಂಬುದನ್ನು ಅರಿವಿಗೆ ತಂದಿತು’ ಎಂದು ಹೇಳಿದರು.

ಖುಷಿಯ ಫೋನ್ ಕರೆಗಳ ಮಧ್ಯೆ ಕೆಲವರು ಬಿಡುವಿಲ್ಲದಂತೆ ಸೇವಾದಾg ಕಂಪೆನಿಗಳಿಗೆ ಕರೆಗಳನ್ನು ಮಾಡುತ್ತಿದ್ದರು. ಫೋನು ಲೈನುಗಳ ಪುನಃಸ್ಥಾಪನೆಯಾದಾಗಲಷ್ಟೇ ಇಂಟರ್ ನೆಟ್ ಇಲ್ಲದ್ದರಿಂದ ತಾವು ಫೋನ್ ಬಿಲ್ಲುಗಳನ್ನೇ ಕಟ್ಟಿಲ್ಲ ಎಂಬುದು ಅವರ ಅರಿವಿಗೆ ಬಂದಿತ್ತು. ಹಲವರು ಪ್ರಾವಿಷನ್ ಸ್ಟೋರ್ ಮತ್ತು ಕಮ್ಯೂನಿಕೇಷನ್ ಸ್ಟೋರ್ ಗಳಿಗೆ ಧಾವಿಸಿ ಸೇವಾದಾರರಿಂದ ತಮ್ಮ ಫೋನುಗನ್ನು ಚಾರ್ಜ್ ಮಾಡಿಸಿಕೊಂಡರು.

ಕಣಿವೆಯಲ್ಲಿ ಒಟ್ಟು ೮೪ ಲಕ್ಷ ಫೋನ್ ಸಂಪರ್ಕಗಳಿವೆ. ಈ ಪೈಕಿ ೪೦ ಲಕ್ಷದಷ್ಟು ಪೋಸ್ಟ್ ಪೇಯ್ಡ್ ಮೊಬೈಲ್ ಫೋನುಗಳು ಸೋಮವಾರದಿಂದ ಪುನಾರಂಭವಾಗಲಿವೆ ಎಂದು ಜಮ್ಮು ಮತ್ತು ಕಾಶ್ಮೀರ ಆಡಳಿತವು ಶನಿವಾರ ಪ್ರಕಟಿಸಿತ್ತು.

ಮೊಬೈಲ್ ಇಂಟರ್ ನೆಟ್ ಮತ್ತು ವೆಬ್ ಸೇವೆಗಳು ಸಧ್ಯಕ್ಕೆ ಇನ್ನೂ ಚಾಲನೆಗೊಂಡಿಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸುವ ಕೇಂದ್ರ ಸರ್ಕಾರದ ಪ್ರಮುಖ ನಿರ್ಣಯವನ್ನು ಆಗಸ್ಟ್ ೫ರಂದು ಗೃಹ ಸಚಿವ ಅಮಿತ್ ಶಾ ಅವರು ಪ್ರಕಟಿಸುವುದರೊಂದಿಗೆ ಜಮ್ಮು ಮತ್ತು  ಕಾಶ್ಮೀರದಲ್ಲಿ ಫೋನ್ ಲೈನುಗಳನ್ನು ಸ್ಥಗಿತಗೊಳಿಸಲಾಗಿತ್ತು.

ಅಂದಿನಿಂದ ಕಾಶ್ಮೀರದ ಜನರು ಸಂಪರ್ಕ ಬ್ಲ್ಯಾಕ್ ಔಟ್ ಸ್ಥಿತಿಯಲ್ಲೇ ವಾಸವಾಗಿದ್ದರು. ಸ್ಥಿರ ದೂರವಾಣಿಗಳ ಪುನಃಸ್ಥಾಪನೆಯೊಂದಿಗೆ ಕಡಿಮೆಯಾಗಿದ್ದ ಸಂಪರ್ಕ ಬ್ಲ್ಯಾಕ್ ಔಟ್‌ನ ಕಾವು ಸೋಮವಾರ ಪೋಸ್ಟ್ ಪೇಯ್ಡ್ ಫೋನ್ ಲೈನುಗಳ ಪುನಾರಂಭದೊಂದಿಗೆ ಇನ್ನಷ್ಟು ಇಳಿಯಿತು.

October 15, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, News, Social Media, Spardha | | Leave a comment

ಆರೇ ಕಾಲೋನಿ ಮರಗಳಿಗೆ ಕೊಡಲಿ: ಸೋಮವಾರ ಸುಪ್ರೀಂ ವಿಶೇಷ ವಿಚಾರಣೆ

06 aaray supreme court
ನವದೆಹಲಿ:
ಮುಂಬೈ ಮೆಟ್ರೋ ೩ನೇ ಹಂತದ ಕಾಮಗಾರಿಗಾಗಿ ಉತ್ತರ ಮುಂಬೈಯ ಆರೇ ಕಾಲೋನಿಯಲ್ಲಿ ನಡೆಸಲಾಗುತ್ತಿರುವ ಸಹಸ್ರಾರು ಮರಗಳ ಮಾರಣಹೋಮವನ್ನು  ಭಾನುವಾರ ಸ್ವ ಇಚ್ಛೆಯಿಂದ ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್  2019 ಅಕ್ಟೋಬರ್ 07ರ ಸೋಮವಾರ ಪ್ರಕರಣದ ವಿಶೇಷ ವಿಚಾರಣೆ ನಡೆಸುವುದಾಗಿ 2019 ಅಕ್ಟೋಬರ್ 06ರ ಭಾನುವಾರ ಪ್ರಕಟಿಸಿತು.

ಗ್ರೇಟರ್ ನೋಯ್ಡಾದ ಲಾಯ್ಡ್ ಕಾನೂನು ಕಾಲೇಜಿನ  ವಿದ್ಯಾರ್ಥಿ  ರಿಶವ್ ರಂಜನ್ ಮತ್ತು ಇತರರ ಗುಂಪು ಸಲ್ಲಿಸಿದ ಪತ್ರವನ್ನು ಪರಿಗಣನೆಗೆ ತೆಗೆದುಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಪ್ರಕರಣದ ವಿಚಾರಣೆಗೆ ವಿಶೇಷ ಪೀಠವನ್ನು ರಚಿಸಿ ಸೋಮವಾರ ಬೆಳಗ್ಗೆ 10 ಗಂಟೆಗೆ ಪೀಠವು ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ವೆಬ್ ಸೈಟಿನಲ್ಲಿ ಪ್ರಕಟಿಸಿದರು.

ಕಾನೂನು ವಿದ್ಯಾರ್ಥಿಗಳ ಗುಂಪೊಂದು ಸಲ್ಲಿಸಿದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಖಟ್ಲೆಯಾಗಿ ಸುಪ್ರೀಂಕೋರ್ಟ್  ಮಾರ್ಪಾಡು ಮಾಡಿತು.

ವಿಶೇಷ ನ್ಯಾಯಪೀಠವು  ಆರೇ ಕಾಲೋನಿಯ ಪ್ರತಿನಿಧಿಗಳು ಮತ್ತು ಮುಂಬೈನ ಮೆಟ್ರೋ ಅಧಿಕಾರಿಗಳ ವಾದ-ಪ್ರತಿವಾದ ಆಲಿಸಲಿದೆ. ಬಳಿಕ ಮುಂಬೈ ಹೈಕೋರ್ಟ್​​ನ ಮತ್ತೊಮ್ಮೆ ಪರಿಶೀಲಿಸಲಿದೆ ಎನ್ನಲಾಯಿತು.

ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಆರೆ ಕಾಲೋನಿಯ 38  ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈ ನ್ಯಾಯಲಯವೇ ಪ್ರತಿಭಟನಕಾರರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದಲ್ಲದೆ  55 ಮಂದಿಯನ್ನು ವಶಕ್ಕೆ ಪಡೆದಿದ್ದರು.

ಆರೇ ಕಾಲೋನಿಯಲ್ಲಿ ಮರ ಕಡಿಯುವುದರ ವಿರುದ್ಧ ನಡೆದ ಪ್ರತಿಭಟನೆಯ ಕಾಲದಲ್ಲಿ ಬಂಧಿತರಾದ ೨೯ ಮಂದಿ ಪರಿಸರವಾದಿಗಳಿಗೆ ಸ್ಥಳೀಯ ನ್ಯಾಯಾಯವು ಈದಿನ  ಶರತ್ತಿನ ಜಾಮೀನು ಮಂಜೂರು ಮಾಡಿತು.  ಮತ್ತೆ ಪ್ರತಿಭಟನೆಗೆ ಇಳಿಯದಂತೆ ಬಂಧಿತರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತಾ ನಿರ್ದೇಶಿಸಿತು.

ಇದೇ ವೇಳೆಗೆ ಮುಂಬೈ ಮೆಟ್ರೋ ೩ನೇ ಹಂತದ ಕಾಮಗಾರಿಗಾಗಿ ಮರಗಳನ್ನು ಕಡಿಯುವುದು ಅನಿವಾರ್ಯ ಎಂಬು ಮುಂಬೈ ಮೆಟ್ರೋ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಪ್ರತಿಪಾದಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಅವರ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಯಿತು.

ಮುಂಬೈ ಮೆಟ್ರೋ ಆರೇ ಕಾಲೋನಿಯ  2,500ಕ್ಕೂ ಹೆಚ್ಚು ಮರಗಳನ್ನು ಕಡಿಯಲು ಉದ್ದೇಶಿಸಿತ್ತು. ಆದರೆ, ಇದನ್ನು ವಿರೋಧಿಸಿದ್ದ ಪಡಿಸರವಾದಿಗಳು ಹಾಗೂ ಸ್ಥಳೀಯರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು  ಅಕ್ಟೋಬರ್ 4ರ ಶುಕ್ರವಾರ  ಈ ಅರ್ಜಿಯ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್ ಅರ್ಜಿಯನ್ನೇ ವಜಾಗೊಳಿಸಿತ್ತು. ಬೆನ್ನಲ್ಲೇ ಅದೇ ದಿನ ನಡುರಾತ್ರಿಯಲ್ಲಿ ಅಧಿಕಾರಿಗಳು ಮರ ಕಡಿಯುವ ಕೆಲಸಕ್ಕೆ ಮುಂದಾಗಿದ್ದರು.  ಈ ಸಂದರ್ಭದಲ್ಲಿ ಇದನ್ನು ವಿರೋಧಿಸಿ ಸ್ಥಳೀಯರು ಸಹ ಬೀದಿಗಿಳಿದ ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ ಸ್ಥಳದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು.

ಮರ ಕಡಿಯುವುದರ ವಿರುದ್ದ  ಪ್ರತಿಭಟನೆ ನಡೆಸುತ್ತಿರುವವರಲ್ಲಿ 38 ಮಂದಿಯನ್ನು ಬಂಧಿಸಲಾಗಿದ್ದು, 55 ಕಾರ್ಯಕರ್ತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿದ್ದವು.. ಪರಿಸರ ಹೋರಾಟಗಾರರ ಬಂಧನಕ್ಕೆ ಕಾಂಗ್ರೆಸ್​ ಸೇರಿದಂತೆ ವಿರೋಧ ಪಕ್ಷಗಳು ಮತ್ತು ಶಿವಸೇನೆಯ  ಆದಿತ್ಯ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದ ಸೋರು ಬಥೇನಾ ಟ್ವೀಟ್ ಮೂಲಕ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದು, “ಆರೇ ಕಾಲೋನಿಯ  ಮೆಟ್ರೋ ಡಿಪೋದಲ್ಲಿ ಮರಗಳನ್ನು ಅಕ್ರಮವಾಗಿ ಕತ್ತರಿಸಲಾಗುತ್ತಿದೆ. ಕಾನೂನಿನ ಪ್ರಕಾರ ಮರಗಳನ್ನು ಕಡಿಯಲು ಹೈಕೋರ್ಟ್ ಅನುಮತಿ ನೀಡಿದರೂ ಸಹ 15 ದಿನಗಳ ನಂತರವೇ ಅದನ್ನು ಕಡಿಯಬೇಕು. ಆದರೆ, ಈ ಕುರಿತು ಹೈಕೋರ್ಟ್ ವೆಬ್​ಸೈಟಿನಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಅನುಮತಿ ಪತ್ರವನ್ನು ಅಪ್ಲೋಡ್ ಮಾಡಲಾಗಿದೆ. ರಾತ್ರಿಯೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ದಯವಿಟ್ಟು ಈ ಅಕ್ರಮ ಹಾಗೂ ಕಾನೂನು ಬಾಹಿರ ಕೃತ್ಯವನ್ನು ನಿಲ್ಲಿಸಿ” ಎಂದು ಬರೆದಿದ್ದರು.

October 6, 2019 Posted by | ಭಾರತ, ವಿಶ್ವ/ ಜಗತ್ತು, ಸುಪ್ರೀಂಕೋರ್ಟ್, Flash News, General Knowledge, Health, India, News, Politics, Social Media, Spardha, supreme court, World | , , , , , , | 1 Comment

ಈ ಫೋನುಗಳಲ್ಲಿ ಮುಂದಿನ ಫೆಬ್ರುವರಿಯಿಂದ ವಾಟ್ಸಪ್ ಕೆಲಸ ಮಾಡದು!

30 whatsapp
ನವದೆಹಲಿ
: ಆಪರೇಟಿಂಗ್ ಸಿಸ್ಟಂನ ಹೊಸ ಆವೃತ್ತಿಗೆ ದೀರ್ಘಕಾಲದವರೆಗೆ ಅಪ್‌ಗ್ರೇಡ್ ಮಾಡದ ಐಫೋನ್ ಬಳಕೆದಾರರು, ಹಾಗೆ ಮಾಡಲು ಇನ್ನೂ ಒಂದು ಕಾರಣವಿದೆ. ನಿಮ್ಮ ಐಒಎಸ್ ೮ ಸಾಧನದಲ್ಲಿ ಪ್ರಸ್ತುತ ವಾಟ್ಸಪ್ ಸಕ್ರಿಯವಾಗಿದ್ದರೆ, ತ್ವರಿತ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನ ಪ್ರಕಟಣೆಯ  ಪ್ರಕಾರ, ಫೆಬ್ರವರಿ ೧, ೨೦೨೦ ರವರೆಗೆ ಮಾತ್ರ ನೀವು ಅದನ್ನು ಬಳಸಲು ಸಾಧ್ಯವಾಗುತ್ತದೆ.

ಆಂಡ್ರಾಯ್ಡ್ ಆವೃತ್ತಿ ೨.೩.೭ ಮತ್ತು ಅದಕ್ಕಿಂತ ಹೆಚ್ಚಿನ ಹಳೆಯ ಬಳಕೆದಾರರು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಮರುಪರಿಶೀಲಿಸಲು ಸಾಧ್ಯವಾಗುವುದಿಲ್ಲ ಎಂದು ವಾಟ್ಸಪ್  ಹೇಳಿದೆ. ಆದರೂ ಅವರು ಫೆಬ್ರವರಿ ೧, ೨೦೨೦ ರವರೆಗೆ ವಾಟ್ಸಪ್  ಬಳಕೆಯನ್ನು ಮುಂದುವರಿಸಲು ಸಾಧ್ಯ ಎಂದು ಸಂಸ್ಥೆ ತಿಳಿಸಿದೆ.

“ಐಒಎಸ್ ೮ ನಲ್ಲಿ, ನೀವು ಇನ್ನು ಮುಂದೆ ಹೊಸ ಖಾತೆಗಳನ್ನು ತೆರೆಯಲು ಅಥವಾ ಅಸ್ತಿತ್ವದಲ್ಲಿರುವ ಖಾತೆಗಳನ್ನು ಪರಿಶೀಲಿಸಲು ಸಾಧ್ಯವಿಲ್ಲ” ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.

‘ ಆದ್ದರಿಂದ ಐಫೋನ್ ಬಳಕೆದಾರರಿಗೆ  ವಾಟ್ಸಪ್ ಬಳಸಲು  ಐಒಎಸ್ ೯ ಅಥವಾ ನಂತರದ  ಅವೃತ್ತಿಯ ಅಗತ್ಯವಿದೆ. ಹೀಗಾಗಿ ನಿಮ್ಮ ಫೋನ್‌ಗೆ ಲಭ್ಯವಿರುವ ಐಒಎಸ್‌ನ ಇತ್ತೀಚಿನ ಆವೃತ್ತಿಯನ್ನು ಬಳಸಲು ನಾವು ಶಿಫಾರಸು ಮಾಡುತ್ತೇವೆ” ಎಂದು ವಾಟ್ಸಪ್  ಹೇಳಿದೆ.

“ಜೈಲ್ ಬ್ರೋಕನ್ ಅಥವಾ ಅನ್ಲಾಕ್ ಮಾಡಲಾದ ಸಾಧನಗಳ ಬಳಕೆಯನ್ನು ನಾವು ಸ್ಪಷ್ಟವಾಗಿ ನಿರ್ಬಂಧಿಸುವುದಿಲ್ಲ. ಆದರೂ, ಈ ಮಾರ್ಪಾಡುಗಳು ನಿಮ್ಮ ಸಾಧನದ ಕ್ರಿಯಾತ್ಮಕತೆಯ ಮೇಲೆ ಪರಿಣಾಮ ಬೀರಬಹುದು, ಐಫೋನ್‌ನ ಆಪರೇಟಿಂಗ್ ಸಿಸ್ಟಂನ ಮಾರ್ಪಡಿಸಿದ ಆವೃತ್ತಿಗಳನ್ನು ಬಳಸುವ ಸಾಧನಗಳಿಗೆ ನಾವು ಬೆಂಬಲವನ್ನು ನೀಡಲು ಸಾಧ್ಯವಿಲ್ಲ” ಎಂದು ಸಂಸ್ಥೆ  ಹೇಳಿದೆ.

September 30, 2019 Posted by | ಆರ್ಥಿಕ, ತಂತ್ರಜ್ಞಾನ, ವಿಶ್ವ/ ಜಗತ್ತು, Commerce, Consumer Issues, Finance, Flash News, General Knowledge, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Science, Social Media, Spardha, Technology | , | Leave a comment

ಕಾಶ್ಮೀರ: ಬೆಂಬಲ ಗಳಿಕೆಯ ವೇದಿಕೆಗಾಗಿ ಇನ್ನೂ ಇಮ್ರಾನ್ ಖಾನ್ ಹುಡುಕಾಟ!

26 Imran_khan
ಭಯೋತ್ಪಾದನೆ ಶಿಬಿರಗಳಿಗೆ ಲಷ್ಕರ್, ಜಮಾತ್-ಉದ್-ದವಾ ಮರುಚಾಲನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ತನ್ನ ನಿಲುವಿಗೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಕ್ರೋಡೀಕರಿಸಲು ಹೆಣಗಿ, ಎಲ್ಲೂ ಬೆಂಬಲ ಸಿಗುತ್ತಿಲ್ಲ ಎಂಬುದಾಗಿ ಗೊಣಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ಮಹಾಅಧಿವೇಶನದಲ್ಲೂ ಭಾರತದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಮುಂದುವರೆಸುತ್ತಾ ಬೆಂಬಲ ಗಳಿಕೆಗಾಗಿ ಹೊಸ ವೇದಿಕೆಗಳ ಹುಡುಕಾಟ ನಡೆಸಿದರು.

ಇತ್ತ ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ವಿವಿಧ ಮಾದರಿಯ ದಾಳಿಗಳಿಗೆ ಸಿದ್ದತೆಗಳನ್ನು ನಡೆಸುತ್ತಿದ್ದು ತಮ್ಮ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಮತ್ತೆ ಸಕ್ರಿಯಗೊಳಿಸಿರುವ ವರದಿಗಳು ಬಂದವು.

ಭಾರತೀಯ ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಇ-ಮೊಹಮ್ಮದ್ ಏಳು ತಿಂಗಳ ಹಿಂದೆ ಭಾರತೀಯ ವಾಯುಪಡೆ ವಿಮಾನದಾಳಿಯಲ್ಲಿ ಧ್ವಂಸವಾಗಿದ್ದ ತನ್ನ ಬಾಲಾಕೋಟ್ ತರಬೇತಿ ಶಿಬಿರವನ್ನು ಪುನಾರಂಭಿಸಿರುವುದನ್ನು ಈ ವಾರದಲ್ಲಿ ದೃಢ ಪಡಿಸಿದ್ದರು.

ಆದರೆ ಜೈಶ್ ಗುಂಪು ನಡೆಸುತ್ತಿರುವ ಬಾಲಾಕೋಟ್ ತರಬೇತಿ ಶಿಬಿರವು ಭಯೋತ್ಪಾದಕರು ಇತ್ತೀಚಿನ ವಾರಗಳಲ್ಲಿ ಸದ್ದಿಲ್ಲದೆ ಪುನರಾಂಭ ಮಾಡಿರುವ ಹಲವಾರು ತರಬೇತಿ ಶಿಬಿರಗಳ ಪೈಕಿ ಒಂದು ಮಾತ್ರ ಎಂದು ಭಾರತೀಯ ಭಯೋತ್ಪಾದಕ ನಿಗ್ರಹ ಮೂಲಗಳು ಹೇಳಿದವು.

ಕಾಶ್ಮೀರದ ಪುಲ್ವಾಮದಲ್ಲಿ ೪೦ ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಭಯೋತ್ಪಾದಕ ದಾಳಿಯ ಬಳಿಕ ಅತೀವ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಮುಚ್ಚಿದ್ದ ತಮ್ಮ ಭಯೋತ್ಪಾದನಾ ಕಾರ್ಖಾನೆಗಳನ್ನು ಹಫೀಜ್ ಸಯೀದ್ ನೇತೃತ್ವದ  ಲಷ್ಕರ್ -ಇ-ತೊಯ್ಬಾ ಮತ್ತು ಜಮಾತ್-ಉದ್-ದವಾ ಮತ್ತೆ ಸಕ್ರಿಯಗೊಳಿಸಿವೆ ಎಂದು ಭಾರತೀಯ ಭಯೋತ್ಪಾದನಾ ನಿಗ್ರಹ ಮೂಲಗಳು ತಿಳಿಸಿದವು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರವು ರದ್ದು ಪಡಿಸಿದ ಬಳಿಕ ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯಗೊಳಿಸುವ ಯತ್ನಗಳನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡುತ್ತಿರುವ ವೇಳೆಯಲ್ಲೇ ಕಾಕತಾಳೀಯವಾಗಿ ಭಯೋತ್ಪಾದಕರು ಭಯೋತ್ಪಾದನಾ ತರಬೇತಿ ಶಿಬಿರಗಳಿಗೆ ಮರುಚಾಲನೆ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಇಮ್ರಾನ್ ಖಾನ್ ಮತ್ತು ಅವರ ನಿಯೋಗದ ಸದಸ್ಯರು ಕಾಶ್ಮೀರದ ವಿಚಾರವನ್ನು ಪ್ರತಿಯೊಂದು ವೇದಿಕೆ ಮತ್ತು ಸಭೆಯಲ್ಲೂ ಎತ್ತಿದ್ದಾರೆ. ಸಾಧ್ಯವಿರುವಂತಹ ಎಲ್ಲ ಯತ್ನಗಳನ್ನೂ ಮಾಡಲಾಗಿದೆ ಎಂದು ಸ್ವತಃ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದರು.  ತಾವು ಮಾತನಾಡಿದ ವಿಶ್ವ ನಾಯಕರ ಪಟ್ಟಿಯನ್ನೂ ಅವರು ಮಾಡಿದ್ದರು. ವಿಶ್ವಸಂಸ್ಥೆ ಮಹಾಸಭೆಯಷ್ಟೇ ಅಲ್ಲ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, ಜರ್ಮನಿಯ ವೈಸ್ ಚಾನ್ಸಲರ್  ಅಂಗೇಲಾ ಮರ್ಕೆಲ್ ಮತ್ತು ಫ್ರಾನ್ಸಿನ ಎಮ್ಯಾನುಯೆಲ್ ಮಾಕ್ರೋನ್ ಮತ್ತಿತರ ಘಟಾನುಘಟಿಗಳೆಲ್ಲರೂ ಈ ಪಟ್ಟಿಯಲ್ಲಿ ಸೇರಿದ್ದರು. ಆದರೆ ಅಂತಾರಾಷ್ಟ್ರೀಯ ಸಮುದಾಯದಿಂದ ಲಭ್ಯವಾಗಿರುವ ಪ್ರತಿಕ್ರಿಯೆಯಿಂದ ತನಗೆ ಭ್ರಮನಿರಸನವಾಗಿದೆ ಎಂದು ಸ್ವತಃ ಇಮ್ರಾನ್ ಖಾನ್ ಅವರೇ ಈ ವಾರ ಗೊಣಗಿದ್ದರು.

ಕಾಶ್ಮೀರದಲ್ಲಿ ದಾಳಿ ಯತ್ನಕ್ಕೆ ಪೂರಕವಾಗಿ ತನ್ನ ಬತ್ತಳಿಕೆಯನ್ನು ಭರ್ತಿ ಮಾಡಿಕೊಳ್ಳುತ್ತಿರುವ ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯು ಸ್ವಾತ್, ಪೇಶಾವರ, ಕ್ವೆಟ್ಟಾ ಮತ್ತು ಇಲ್ಲಖಾ-ಇ-ಘೈರ್‌ನಲ್ಲಿ ಹೊಸ ಭಯೋತ್ಪಾದಕರಿಗಾಗಿ ನೇಮಕಾತಿಗಳನ್ನೂ ಆರಂಭಿಸಿದೆ.

ಹಫೀಜ್ ಸಯೀದ್ ೧೯೯೦ರಷ್ಟು ಹಿಂದೆಯೇ ಸ್ಥಾಪಿಸಿದ್ದ ಲಷ್ಕರ್, ಮೀರ್‌ಪುರದ ಮಂಗ್ಲಾ ಮತ್ತು ಸಿಯಾಲ್ ಕೋಟ್ ನ ಮರಾಲ್‌ನಲ್ಲಿ ಎರಡು ಜಲವಾಸಿ ತರಬೇತಿ ಕೇಂದ್ರಗಳನ್ನೂ ಪುನರಂಭಿಸಿದೆ ಎಂದೂ ವರದಿಗಳು ತಿಳಿಸಿವೆ.

September 26, 2019 Posted by | ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, India, Nation, News, Pakistan, Politics, Prime Minister, Social Media, Spardha, Terror | , , , , , | Leave a comment

೬೯ನೇ ಜನ್ಮದಿನ:  ಮಾತೆಯ ಮಮತೆಯೊಂದಿಗೆ ಪ್ರಧಾನಿ ಮೋದಿ ಊಟ

This slideshow requires JavaScript.

ಕೇವಡಿಯಾ ಏಕತಾ ಪ್ರತಿಮೆಯತ್ತ ನೋಟ,
ಪರಿಸರ ಪ್ರವಾಸ ತಾಣದಲ್ಲಿ ಸುತ್ತಾಟ

ಗಾಂಧಿನಗರ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು  2019 ಸೆಪ್ಟೆಂಬರ್ 18ರ ಮಂಗಳವಾರ ೬೯ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಗುಜರಾತಿನ ಗಾಂಧಿನಗರದಲ್ಲಿ ತಮ್ಮ ತಾಯಿ ಹೀರಾಬೆನ್ ಅವರನ್ನು ಅವರ ನಿವಾಸದಲಿ ಭೇಟಿ ಮಾಡಿ ಅವರ ಆಶೀರ್ವಾದ  ಪಡೆದದ್ದಲ್ಲದೆ  ಹೀರಾಬೆನ್ ಅವರ ಜೊತೆಗೇ ಮಧ್ಯಾಹ್ನ ಊಟವನ್ನು ಸವಿದರು.

ಪ್ರಧಾನಿ ಮೋದಿಯವರು ತಾಯಿ ಹೀರಾಬೆನ್ ಜೊತೆಗೆ ಕುಳಿತುಕೊಂಡು ಗುಜರಾಥಿ ತಟ್ಟೆಯಲ್ಲಿ (ಗುಜರಾಥಿ ಥಾಲಿ) ಊಟ ಮಾಡುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡು ವೈರಲ್ ಆದವು.

ಇದಕ್ಕೆ ಮುನ್ನ ಪ್ರಧಾನಿಯವರು ಕೇವಡಿಯಾದಲ್ಲಿ ಸರ್ದಾರ್ ಸರೋವರ ಅಣೆಕಟ್ಟಿಗೆ ಭೇಟಿ ನೀಡಿದ್ದರು. ನರ್ಮದಾ ಜಿಲ್ಲೆಯ ಕೇವಡಿಯಾದಲ್ಲಿ ಸ್ಥಾಪಿಸಲಾಗಿರುವ ಏಕತಾ ಪ್ರತಿಮೆಯ ವಿಡಿಯೋವನ್ನೂ ಪ್ರಧಾನಿಯವರು ಟ್ವಿಟ್ಟರಿನಲ್ಲಿ ಪ್ರಕಟಿಸಿದರು.

ಭಾರತದ ಮೊದಲ ಗೃಹಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ಕೇವಡಿಯಾದಲ್ಲಿ ಕಳೆದ ವರ್ಷ ಅಕ್ಟೊಬರ್ ೩೧ರಂದು ಉದ್ಘಾಟಿಸಿದ್ದರು. ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಈ ’ಏಕತಾ ಪ್ರತಿಮೆ’ ಪಾತ್ರವಾಗಿದೆ.

‘ಮಹಾನ್ ಸರ್ದಾರ್ ಪಟೇಲ್ ಅವರಿಗೆ  ಭಾರತದ ಗೌರವವಾಗಿ ನಿರ್ಮಾಣಗೊಂಡಿರುವ ಭವ್ಯವಾದ ’ಏಕತಾ ಪ್ರತಿಮೆಯನ್ನು ವೀಕ್ಷಿಸಿ’ ಎಂದು ಟ್ವೀಟ್ ಮಾಡಿದ ಪ್ರಧಾನಿ ಅದಕ್ಕೆ ೧.೩೦ ನಿಮಿಷದ ವಿಡಿಯೋ ಲಗತ್ತಿಸಿದರು.

ಪ್ರಧಾನಿಯವರು ಸ್ವಲ್ಪ ಕಾಲವನ್ನು ಖಲ್ವಾನಿ ಪರಿಸರ ಪ್ರವಾಸ ತಾಣದಲ್ಲಿ ಮತ್ತು ಕೇವಡಿಯಾದ ಕ್ಯಾಕ್ಟಸ್ ಉದ್ಯಾನದಲ್ಲಿ ಕಳೆದರು. ಗುಜರಾತಿನ ರಾಜ್ಯಪಾಲ ಆಚಾರ್‍ಯ ದೇವವ್ರತ ಮತ್ತು ಮುಖ್ಯಮಂತ್ರಿ  ವಿಜಯ್ ರೂಪಾನಿ ಪ್ರಧಾನಿಯವರ ಜೊತೆಗಿದ್ದರು.

೨೦೧೪ರಲ್ಲಿ ಮೋದಿಯವರು ತಮ್ಮ ೬೪ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ತಾಯಿ ಹೀರಾಬೆನ್ ಅವರಿಂದ ೫೦೦೧ ರೂಪಾಯಿಗಳನ್ನು ಕೊಡುಗೆಯಾಗಿ ಪಡೆದಿದ್ದರು. ಆ ಹಣವನ್ನು ಅವರು ಜಮ್ಮು ಮತ್ತು ಕಾಶ್ಮೀರ ಪ್ರವಾಹ ಪರಿಹಾರ ನಿಧಿಗೆ ನೀಡಿದ್ದರು. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪ್ರಚಂಡ ವಿಜಯ ಗಳಿಸಿದ ಬಳಿಕ ಪ್ರಧಾನಿ ಮೋದಿಯವರು ತಮ್ಮ ತಾಯಿಯನ್ನು ಭೇಟಿ ಮಾಡಿ ಆಶೀರ್ವಾದ ಕೋರಿದ್ದರು.

೨೦೧೬ರಲ್ಲಿ ತಮ್ಮ ೬೬ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಧಾನಿಯವರು ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಕೋರಿದ್ದರು.

ಕಳೆದ ವರ್ಷ ತಮ್ಮ ೬೮ನೇ ಜನ್ಮದಿನವನ್ನು ಮೋದಿಯವರು ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲಿ ಶಾಲಾ ಮಕ್ಕಳ ಜೊತೆಗೆ ಕಳೆದಿದ್ದರು. ಪ್ರಾಥಮಿಕ ಶಾಲೆಯೊಂದಕ್ಕೆ ಭೇಟಿ ನೀಡಿದ್ದ ಪ್ರಧಾನಿಯವರು ವಿದ್ಯಾರ್ಥಿಗಳ ಜೊತೆಗೆ ಜನ್ಮದಿನವನ್ನು ಆಚರಿಸಿದ್ದರು. ಪ್ರಧಾನಿಯವರು ಈ ಸಂದರ್ಭದಲ್ಲಿ ಹಲವಾರು ಕೊಡುಗೆಗಳನ್ನೂ ವಿದ್ಯಾರ್ಥಿಗಳಿಗೆ ನೀಡಿದ್ದರು.

September 17, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಾಮಾಜಿಕ  ಮಾಧ್ಯಮ, culture, Flash News, General Knowledge, India, Nation, News, Prime Minister, Social Media, Spardha | , | Leave a comment

ಪ್ರಧಾನಿ ಮೋದಿಗೆ ಬೆದರಿಕೆ ಹಾಕಿದ್ದ ಪಾಕ್​​ ಗಾಯಕಿಗೆ 2 ವರ್ಷ ಜೈಲು ಶಿಕ್ಷೆ

This slideshow requires JavaScript.

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದ ಪಾಕಿಸ್ತಾನದ ಗಾಯಕಿಗೆ ಪಾಕಿಸ್ತಾನದ ನ್ಯಾಯಾಲಯವು 2 ವರ್ಷಗಳ ಸೆರೆವಾಸದ  ಶಿಕ್ಷೆ ವಿಧಿಸಿತು.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಭಾರತದ ಪ್ರಧಾನಿ ಮೇಲೆ ಹಾವು ಛೂ ಬಿಡುತ್ತೇನೆ ಎಂದು ಪಾಕ್​​ ಮೂಲದ ಪಾಪ್ ಗಾಯಕಿ ರಬಿ ಪಿರ್ಜಾದಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅಲ್ಲದೇ ತನ್ನ ಕೈಯಲ್ಲೇ ದೈತ್ಯ ಹಾವುಗಳನ್ನು ಹಿಡಿದು ಮೋದಿ ಮೇಲೆ ಛೂ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ಇದೀಗ ಪಾಕಿಸ್ತಾನ ನ್ಯಾಯಲಯವೂ ಈ ಗಾಯಕಿಗೆ 2 ವರ್ಷ ಜೈಲು ಜೊತೆಗೆ ದಂಡ ವಿಧಿಸಿತು.

ಟಿವಿ ನಿರೂಪಕಿ ಹಾಗೂ ಪಾಪ್ ಗಾಯಕಿ ರಬಿ ಪಿರ್ಝಾದಾ ಪ್ರಧಾನಿ ನರೇಂದ್ರ ಮೋದಿಯವರಿಗೆ ಬೆದರಿಕೆ ಹಾಕಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿತ್ತು. ಈಕೆ ಯುಟ್ಯೂಬ್ ಚಾನಲ್‍ನಲ್ಲಿ ಸೆಪ್ಟೆಂಬರ್ 2ರಂದು ಬಿಡುಗಡೆ ಮಾಡಿದ್ದ ವಿಡಿಯೋ ಸಾಕಷ್ಟು ಜನ ನೋಡಿದ್ದರು. ಸ್ಥಳೀಯ ಸುದ್ದಿ ಮಾಧ್ಯಮಗಳು ಇದನ್ನು ಪ್ರಸಾರ ಮಾಡಿದ್ದವು.

“ಪ್ರಧಾನಿ ನರೇಂದ್ರ ಮೋದಿ 370ನೇ ವಿಧಿ ರದ್ದು ಮಾಡಿದ್ದಾರೆ. ಜಮ್ಮು-ಕಾಶ್ಮೀರಿಗಳಿಗೆ ಇವರು ಭಾರೀ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ನಾನು ಮೋದಿಯವರ ಮೇಲೆ ಹಾವು ಛೂ ಬಿಡುತ್ತೇನೆ. ಬಳಿಕ ನಾವೆಲ್ಲಾ ಹಬ್ಬ ಮಾಡಬಹುದು” ಎಂದು ದೈತ್ಯ ಹಾವುಗಳನ್ನು ವಿಡಿಯೋದಲ್ಲಿ ತೋರಿಸಿದ್ದರು ಗಾಯಕಿ.

ಗಾಯಕಿ ರಬಿ ಪಿರ್ಜಾದಾ ಇಂತಹ ವಿಲಕ್ಷಣ ವಿಡಿಯೋವನ್ನು ಚೋಟಿ ಸಿ ಬಾತ್ ಎಂಬ ಹ್ಯಾಷ್ ಟ್ಯಾಗ್​ನೊಂದಿಗೆ ತಮ್ಮ ಟ್ವಿಟರ್​ನಲ್ಲಿ ಕೂಡ ಅಪ್​ಲೋಡ್ ಮಾಡಿದ್ದರು. ಬಳಿಕ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಭಾರಿ ವೈರಲ್ ಮಾಡಿದರು. 50 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಗಾಯಕಿ ಕೈಲಿ ಹಾವನ್ನು ಹಿಡಿದು, ಕಾಶ್ಮೀರ ವಿಚಾರವಾಗಿ ಮಾತನಾಡಿದರೆ ನಿಮ್ಮ ಮೇಲೆ ಹಾವುಗಳನ್ನು ಬಿಡುತ್ತೇನೆ ಎಂದು ಪ್ರಧಾನಿ ಮೋದಿಗೆ ಹೆದರಿಸಿದ್ದರು.

ಕೈಯಲ್ಲಿ ಒಂದಿಷ್ಟು ಹಾವುಗಳನ್ನು ಹಿಡಿದು ಮೋದಿಗೆ ಬೆದರಿಕೆ ಹಾಕುವ ವೇಳೆ ರಬಿ ಪಿರ್ಜಾದಾ ಹಾಡೊಂದನ್ನು ಕೂಡ ಹಾಡಿದ್ದರು.

ಹಾವುಗಳನ್ನು ತೋರಿಸುತ್ತಾ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಇದು ಉಡುಗೊರೆ. ನಿಮಗಾಗಿ ಇದನ್ನು ಸಿದ್ದಪಡಿಸಿದ್ದೇನೆ. ನರಕದಲ್ಲಿ ಸಾಯಲು ತಯಾರಾಗಿ. ನನ್ನ ಸ್ನೇಹಿತರು ಹಬ್ಬ ಆಚರಿಸಲು ಸಿದ್ದವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪಾಪ್ ಗಾಯಕಿ ವಿಡಿಯೋ ಹಾಕಿದ್ದಳು. ಈಕೆ ಪಕ್ಕದಲ್ಲಿ ಭಾರೀ ಗಾತ್ರದ ಹೆಬ್ಬಾವುಗಳು ಹರಿದಾದುತ್ತಿದ್ದ ದೃಶ್ಯವನ್ನು ಕ್ಯಾಮರಾ ಸೆರೆ ಹಿಡಿದಿತ್ತು ಈಕೆಯ ವಿಡಿಯೋವನ್ನು ಪಾಕಿಸ್ತಾನದ ಟಿವಿ ಚಾನೆಲ್ ಕೂಡಾ ಪ್ರಸಾರಮಾಡಿತ್ತು.

ವನ್ಯಜೀವಿಗಳನ್ನು ಮನೆಯಲ್ಲಿ ಸಾಕುವುದು ಅಪರಾಧವಾಗಿದ್ದು ಸ್ಥಳೀಯ ವನ್ಯಜೀವಿ ಸಂರಕ್ಷಣಾ ಸಂಸ್ಥೆಯೊಂದು ಈಕೆಯ ವಿರುದ್ಧ ದೂರು ದಾಖಲಿಸಿತು. ದೂರಿನ ಅನ್ವಯ ಪಂಜಾಬ್ ಪ್ರಾಂತ್ಯದ ವನ್ಯಜೀವಿ ಸಂರಕ್ಷಣಾ ಇಲಾಖೆ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಯಿತು.

ಈಕೆಯ ಈ ಕೃತ್ಯಕ್ಕೆ ಸಾಮಾಜಿಕ ತಾಲತಾಣಗಳಲ್ಲಿ ಭಾರತೀಯರು ಕಿಡಿಕಾರುತ್ತಿದ್ದು, ಇದು ಪಾಕಿಸ್ತಾನಿ ಪ್ರಜೆಗಳ ಹತಾಶೆಯ ಪರಮಾವಧಿ ಎಂದು ಬಣ್ಣಿಸಿದರು.

September 15, 2019 Posted by | ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಾಮಾಜಿಕ  ಮಾಧ್ಯಮ, Flash News, General Knowledge, India, Nation, News, Pakistan, Politics, Prime Minister, Social Media, Spardha, World | , , , | Leave a comment

ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಆಧಾರ್ ಲಿಂಕ್

13 Social-Media-Supreme-Court spardha webಕೇಂದ್ರ ಮಾಡದಿದ್ದರೆ ನಾವೇ  ಮಾಡ್ಬೇಕಾಗ್ತದೆ: ಸುಪ್ರೀಂ

ನವದೆಹಲಿ: ಸಾಮಾಜಿಕ  ಮಾಧ್ಯಮ (ಸೋಶಿಯಲ್ ಮೀಡಿಯಾ)  ಖಾತೆಗಳನ್ನು ಆಧಾರ್ ಕಾರ್ಡಿನೊಂದಿಗೆ ಜೋಡಣೆ (ಲಿಂಕ್)  ಮಾಡುವ ಬಗ್ಗೆ ಕೇಂದ್ರದ ಔಪಚಾರಿಕ ಪ್ರತಿಕ್ರಿಯೆ ಕೋರಿದ ಸುಪ್ರೀಂಕೋರ್ಟ್, ಈ ವಿಷಯವನ್ನು ಶೀಘ್ರವಾಗಿ ತೀರ್ಮಾನಿಸುವ ಅಗತ್ಯವಿದೆ ಎಂದು  2019 ಸೆಪ್ಟೆಂಬರ್ 13ರ ಶುಕ್ರವಾರ ಹೇಳಿತು.

ಸಾಮಾಜಿಕ ಮಾಧ್ಯಮಕ್ಕೆ  ಸಂಬಂಧಿಸಿದಂತೆ ಸರ್ಕಾರ ಏನಾದರೂ ಕಾನೂನು ಅಥವಾ ನಿಬಂಧನೆಗಳನ್ನು ರೂಪಿಸುತ್ತಿದೆಯೇ ಎಂದು ನ್ಯಾಯಮೂರ್ತಿಗಳಾದ  ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರನ್ನು ಪ್ರಶ್ನಿಸಿತು.

“ಕೇಂದ್ರವು ಇಲ್ಲಿನ  ಸಮಸ್ಯೆಗಳ ಬಗ್ಗೆ ಏನನ್ನೂ ಮಾಡದಿದ್ದರೆ ನಾವು ಏನನ್ನಾದರೂ ಮಾಡಬೇಕಾಗುತ್ತದೆ. ಈ ಹಂತದಲ್ಲಿ ನಾವು ಏನಾದರೂ ನಿರ್ಧರಿಸಬೇಕೇ ಅಥವಾ ಹೈಕೋರ್ಟ್ ನಿರ್ಧರಿಸುತ್ತದೆಯೇ ಎಂಬುದು ನಮಗೆ ಗೊತ್ತಿಲ್ಲ’  ಎಂದು  ಸುಪ್ರೀಂಕೋರ್ಟ್ ಹೇಳಿತು.

’ಪ್ರಕರಣದ ಅರ್ಹತೆ ವಿಚಾರವನ್ನು ನಾವು ಈಗ ಪರಿಶೀಲಿಸುವುದಿಲ್ಲ. ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಇರುವ ಇಂತಹ ಪ್ರಕರಣಗಳನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಕೋರಿ ಫೇಸ್ ಬುಕ್ ಸಲ್ಲಿಸಿದ ವರ್ಗಾವಣೆ ಕೋರಿಕೆ ಅರ್ಜಿಯ ಬಗ್ಗೆ ನಿರ್ಧರಿಸುತ್ತೇವೆ’ ಎಂದು ಪೀಠ ಹೇಳಿತು.

ಮದ್ರಾಸ್ ಹೈಕೋರ್ಟಿನಲ್ಲಿ  ಬಾಕಿ ಇರುವ ಆಧಾರ್ ಜೊತೆಗೆ  ಸಾಮಾಜಿಕ ಮಾಧ್ಯಮ  ಖಾತೆಗಳನ್ನು (ಸೋಷಿಯಲ್ ಮೀಡಿಯಾ  ಪ್ರೊಫೈಲ್ ) ಜೋಡಿಸುವುದಕ್ಕೆ  ಸಂಬಂಧಿಸಿದ ಪ್ರಕರಣಗಳನ್ನು ಉನ್ನತ ನ್ಯಾಯಾಲಯಕ್ಕೆ ವರ್ಗಾಯಿಸಿದರೆ  ಅದಕ್ಕೆ ಆಕ್ಷೇಪವಿಲ್ಲ ಎಂದು ತುಷಾರ ಮೆಹ್ತ ಹೇಳಿದರು.

ಸುಪ್ರೀಂಕೋರ್ಟ್ ಛೀಮಾರಿಯ ಬಳಿಕ ಸೆಪ್ಟೆಂಬರ್  ೨೪ರ ಒಳಗೆ ತನ್ನ ನಿಲುವನ್ನು ಸ್ಪಷ್ಟ ಪಡಿಸುವುದಾಗಿ ಕೇಂದ್ರವು ಒಪ್ಪಿಕೊಂಡಿತು.

“ಕೇಂದ್ರವು ಕೆಲವು ಕಾನೂನು ಅಥವಾ ನಿಬಂಧನೆಗಳನ್ನು  ರೂಪಿಸದಿದ್ದರೆ,  ನಾವು ನಮ್ಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ” ಎಂದು  ಪೀಠ ಪುನರುಚ್ಚರಿಸಿತು.

ಫೇಸ್ ಬುಕ್‌ನಂತಹ  ಸಾಮಾಜಿಕ  ಮಾಧ್ಯಮ ದೈತ್ಯರು ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯಾಗುತ್ತದೆ ಎಂಬ ನೆಪ ನೀಡಿ ಆಧಾರ್  ಸಂಖ್ಯೆಯನ್ನು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಲಿಂಕ್ ಮಾಡುವ ಸಲಹೆಯನ್ನು ವಿರೋಧಿಸಿದ್ದಾರೆ.

ಕಳೆದ ತಿಂಗಳು ನಡೆದ ವಿಚಾರಣೆಯಲ್ಲಿ, ಫೇಸ್ಬುಕ್ ತನ್ನ ತ್ವರಿತ ಸಂದೇಶ ಕಳುಹಿಸುವ  ವಾಟ್ಸಪ್‌ನಲ್ಲಿನ ವಿಷಯವು ಕೊನೆಯಿಂದ ಕೊನೆಯವರೆಗೆ ಎನ್ಕ್ರಿಪ್ಟ್  ಮಾಡಲ್ಪಟ್ಟಿದೆ  ಮತ್ತು ಅದಕ್ಕೆ ತಮಗೆ ಪ್ರವೇಶವಿಲ್ಲದ ಕಾರಣ ಮೂರನೇ ವ್ಯಕ್ತಿಯೊಂದಿಗೆ ಆಧಾರ್ ಸಂಖ್ಯೆಯನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತ್ತು.

September 13, 2019 Posted by | ಭಾರತ, ರಾಷ್ಟ್ರೀಯ, ಸಾಮಾಜಿಕ  ಮಾಧ್ಯಮ, Consumer Issues, Flash News, General Knowledge, India, Nation, News, Social Media, Spardha | , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ