SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಬಾಲಾಕೋಟ್: ಜೈಶ್ ಶಿಬಿರಗಳು ಮತ್ತೆ ಸಂಪೂರ್ಣ ಸಕ್ರಿಯ


This slideshow requires JavaScript.

ಭಾರತಿಯ ವಾಯುಪಡೆ ಬಾಂಬ್ ಹಾಕಿದ್ಧ ಸ್ಥಳದಲ್ಲಿ ಪುನಃ ಭಯೋತ್ಪಾದಕರ ಚಟುವಟಿಕೆ

ನವದೆಹಲಿ: ಭಾರತೀಯ ವಾಯುಪಡೆ ವಿಮಾನಗಳು ಬಾಂಬ್ ದಾಳಿ ನಡೆಸಿದ ಸುಮಾರು ಏಳು ತಿಂಗಳುಗಳ ಬಳಿಕ ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯು ತನ್ನ ಸಮುಚ್ಚಯವನ್ನು ಪುನರುಜ್ಜೀವನಗೊಳಿಸಿ ಜಮ್ಮು ಮತ್ತು ಕಾಶ್ಮೀರ ಅಥವಾ ಭಾರತದ ಬೇರೆ ಎಲ್ಲಾದರೂ ದಾಳಿ ನಡೆಸಲು ಸುಮಾರು ೪೦ಕ್ಕೂ ಹೆಚ್ಚು ಮಂದಿ ಜೆಹಾದಿಗಳಿಗೆ ಸಕ್ರಿಯ ತರಬೇತಿ ನೀಡುತ್ತಿರುವುದು ಬೆಳಕಿಗೆ ಬಂದಿತು.

ಈ ಬಾರಿಯ ದಾಳಿಯನ್ನು ಅಂತಾರಾಷ್ಟ್ರೀಯ ತಪಾಸಣೆಯ ಕಣ್ಣು ತಪ್ಪಿಸುವ ಸಲುವಾಗಿ ಹೊಸ ಹೆಸರಿನಲ್ಲಿ ನಡೆಸಲು ಜೆಇಎಂ ಉದ್ದೇಶಿಸಿದೆ ಎಂದು ಸುದ್ದಿ ಸಂಸ್ಥೆಯೊಂದರ ವರದಿ ತಿಳಿಸಿದೆ. ಇದರ ಜೊತೆಗೆ ಕಾಶ್ಮೀರ ಕಾರ್‍ಯಾಚರಣೆಗಾಗಿ ಲಷ್ಕರ್ -ಇ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಕೂಡಾ ಭರದ ಸಿದ್ಧತೆಯಲ್ಲಿವೆ ಎಂದು ವರದಿಗಳು ಹೇಳಿದವು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಭಾರತೀಯ ಸಂವಿಧಾನದ ೩೭೦ನೇ ವಿಧಿಯನ್ನು ಭಾರತವು ಆಗಸ್ಟ್ ೫ರಂದು ರದ್ದು ಪಡಿಸಿ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಶೀರ್ವಾದದೊಂದಿಗೇ ಈ ಬೆಳವಣಿಗೆಯಾಗಿದೆ.

ವಿಶ್ವಸಂಸ್ಥೆ ಮಹಾಸಭೆಯಲ್ಲಿ ಸೆಪ್ಟೆಂಬರ್ ೨೩ರಂದು ’ಭಯೋತ್ಪಾದನೆ ಮತ್ತು ಉಗ್ರವಾದಕ್ಕೆ ದೋರಣಾತ್ಮಕ ಪ್ರತಿಕ್ರಿಯೆ’ ಕುರಿತ ನಾಯಕರ ಸಂಭಾಷಣೆ ಕಾರ್‍ಯಕ್ರಮದ ಮುನ್ನಾದಿನ ಭಾರತವನ್ನು ಗುರಿಯಾಗಿಟ್ಟುಕೊಂಡೇ ಪಾಕಿಸ್ತಾನವು ಆಗಸ್ಟ್ ೫ರ ಬಳಿಕ ಭಯೋತ್ಪಾದಕ ಗುಂಪುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾಷಣ ಮಾಡಲಿದ್ದು, ಬಳಿಕ ಮೈಕ್ರೋಸಾಫ್ಟ್ ಕಾರ್ಪೋರೇಷನ್ನಿನ ಸಿಇಒ ಸತ್ಯ ನಾದೆಲ್ಲ ಮತ್ತು ಇತರರು ಮಾತನಾಡಲಿದ್ದಾರೆ.

ಜೈಶ್ -ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ಜಮ್ಮು -ಕಾಶ್ಮೀರದ ಪುಲ್ವಾಮದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸಿ  ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ೪೦ ಮಂದಿ ಯೋಧರನ್ನು ಬಲಿ ಪಡೆದುದಕ್ಕೆ ಪ್ರತಿಯಾಗಿ ಫೆಬ್ರುವರಿ ೨೭ರಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳು ಪಾಕಿಸ್ತಾನದ ಖೈಬರ್ ಫಖ್ತೂನ್‌ಖ್ವಾ ಪ್ರಾಂತದ ಮನಶೇರಾದಲ್ಲಿನ ಬಾಲಾಕೋಟ್‌ನಲ್ಲಿ ಮರ್ಕಝ್ ಸೈಯದ್ ಅಹಮದ್ ಶಹೀದ್ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ್ದವು. ಈ ವಿದ್ಯಮಾನಗಳ ಪರಿಣಾಮವಾಗಿ ಉಪಖಂಡದ ಈ ನೆರೆಹೊರೆಯ ರಾಷ್ಟ್ರಗಳ ಮಧ್ಯೆ ಪ್ರಕ್ಷುಬ್ಧತೆ ತೀವ್ರಗೊಂಡಿತ್ತು.

ಪುಲ್ವಾಮ ಭಯೋತ್ಪಾದಕ ದಾಳಿ ಹಾಗೂ ಭಾರತದ  ಪ್ರತಿದಾಳಿಯ ಬಳಿಕ ಭಯೋತ್ಪಾದಕ ಚಟುವಟಿಕೆಗಳು ಕಡಿಮೆಯಾಗಿದ್ದವು. ಆದರೆ ಆಗಸ್ಟ್ ೫ರ ಬಳಿಕ, ಜೆಇಎಂ ಕಾರ್‍ಯಾಚರಣಾ ಕಮಾಂಡರ್ ಮುಫ್ತಿ ಅಬ್ದುಲ್ ರೌಫ್ ಅಸ್ಘರ್ ಮತ್ತು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ – ಸರ್ವೀಸಸ್ ಇಂಟಲಿಜೆನ್ಸ್ (ಐಎಸ್‌ಐ) ಪ್ರಮುಖರ ನಡುವೆ ಮಾತುಕತೆಗಳು ನಡೆದಿದ್ದು, ಮರುದಿನದಿಂದಲೇ ಕಾಶ್ಮೀರ ಕುರಿತ ಭಾರತದ ಕ್ರಮಗಳಿಗೆ ವಿರುದ್ಧವಾಗಿ ಜೆಹಾದಿ ಪ್ರಕ್ರಿಯೆಗೆ ರಾವಲ್ಪಿಂಡಿಯಲ್ಲಿ ಕಾರ್‍ಯತಂತ್ರ ರೂಪುಗೊಂಡಿತ್ತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಮಾತ್ರವೇ ಅಲ್ಲ ಗುಜರಾತ್, ಮಹಾರಾಷ್ಟ್ರದಲ್ಲೂ ಅಂತಾರಾಷ್ಟ್ರೀಯ ತಪಾಸಣೆಯನ್ನು ತಪ್ಪಿಸಿಕೊಳ್ಳುವ ಸಲುವಾಗಿ ಹೊಸ ಸಂಘಟನೆಯ ಹೆಸರಿನಲ್ಲಿ ಜೈಶ್-ಇ-ಮೊಹಮ್ಮದ್ ದಾಳಿಗಳನ್ನು ನಡೆಸಬಹುದು ಎಂದು ಗುಪ್ತಚರ ಮೂಲಗಳು ತಿಳಿಸಿದವು.

ಕಾಶ್ಮೀರ ಮೂಲದ ಭಯೋತ್ಪಾದಕರನ್ನು ಈಕೃತ್ಯಗಳಲ್ಲಿ ಬಳಸಿಕೊಳ್ಳಲು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪುಗಳಿಗೆ ಸೂಚಿಸಲಾಗಿದ್ದು,  ಈ ಹಿನ್ನೆಲೆಯಲ್ಲಿ  ಮುಷ್ತಾಖ್ ಝರ್ಗಾರ್ ಯಾನೆ ಲಟ್ರಮ್ ನೇತೃತ್ವದ ಅಲ್ ಉಮ್ಮರ್ ಮುಜಾಹಿದೀನ್‌ನಂತಹ ಗುಂಪುಗಳನ್ನು ಬಳಸಿಕೊಳ್ಳಲು ಸೂಚನೆ ನೀಡಲಾಗಿದೆ.

ಅತ್ಯಾಧುನಿಕ ತರಬೇತಿ: ಜೈಶ್ ಸಂಘಟನೆಯು ಅತ್ಯಾಧುನಿಕ ’ದೌರ್‍ಯಾ ಟರ್ಬಿಯ’ ಕೋರ್ಸ್‌ಗಳನ್ನು ೫೦ ಮಂದಿ ಜೆಹಾದಿಗಳಿಗೆ ಬಹವಾಲ್ಪುರದ ಮರ್ಕಜ್ ಸುಭಾನ್ ಅಲ್ಲಾಹ್ ಮತ್ತು ಮರ್ಕಜ್ ಉಸ್ಮಾನ್ -ಒ- ಅಲಿ ಶಿಬಿರಗಳಲ್ಲಿ ನೀಡುತ್ತಿದೆ. ಪೇಶಾವರದಲ್ಲಿ ಮತ್ತು ಜಮ್ರೂಡ್‌ನಲ್ಲಿ ಕೂಡಾ ಕಾಶ್ಮೀರ ಕಾರ್‍ಯಾಚರಣೆಗಾಗಿ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಸಂಘಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದೌರ್‍ಯಾ ಟರ್ಬಿಯಾವು ಹೊಸದಾಗಿ ಬಂದ ವ್ಯಕ್ತಿಯನ್ನು ಉಗ್ರಗಾಮಿಯನ್ನಾಸುವ ಉದ್ದೇಶದ ಧಾರ್ಮಿಕ ಕಾರ್‍ಯಕ್ರಮವಾಗಿದ್ದು, ಶಸ್ತ್ರಾಸ್ತ್ರ  ಮತ್ತು ವಿಧ್ವಂಸಕ ತರಬೇತಿಯ ಪೂರ್ವಭಾವಿ ಕಾರ್ಯಕ್ರಮವಾಗಿದೆ ಎನ್ನಲಾಗಿದೆ.

ಮನ್ಶೇರಾ, ಗುಲ್ಪುರ್ ಮತ್ತು ಕೋಟ್ಲಿಯಲ್ಲಿ ರಿಫ್ರಶರ್ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಭಾರತೀಯ ವಾಯುದಾಳಿಯ ಬಳಿಕ ಇದೇ ಮೊದಲ ಬಾರಿಗೆ ಬಾಲಾಕೋಟ್ ಶಿಬಿರದಲ್ಲಿ ಜಿಹಾದ್‌ಗಾಗಿ ತರಬೇತಿಯನ್ನು ಪುನಃ ಸಕ್ರಿಯಗೊಳಿಸಲಾಗಿದೆ. ಬಾಲಾಕೋಟ್ ಶಿಬಿರ ಸಕ್ರಿಯಗೊಳಿಸಲಾಗಿರುವುದನ್ನು ಭಾರತೀಯ ರಾಷ್ಟ್ರೀಯ ಭದ್ರತಾ ಸಂಸ್ಥೆ ದೃಢ ಪಡಿಸಿದ್ದು, ಸರ್ಕಾರದ ಉನ್ನತ ಮಟ್ಟಗಳಿಗೂ ಮಾಹಿತಿ ನೀಡಿದೆ.

ಖೈಬರ್ ಫಖ್ತೂಖ್ವಾದ ಚಾರ್‍ಸಡ, ಮರ್ಡನ್ ಮತ್ತು  ಸ್ವಾಬಿಯಂತ ಸ್ಥಳಗಳಲ್ಲಿ ಕಾಶ್ಮೀರ ಕಾರ್‍ಯಾಚರಣೆಗಾಗಿ ನೇಮಕಾತಿ ಅಭಿಯಾನವನ್ನೂ ಜೈಶ್ ತೀವ್ರಗೊಳಿಸಿದೆ. ಜೊತೆಗೆ ಪ್ರಸ್ತುತ ತೀವ್ರವಾಗಿ ಅಸ್ವಸ್ಥಗೊಂಡಿರುವ ಜಾಗತಿಕ ಭಯೋತ್ಪಾದಕ ಮಸೂದ್ ಅಜ್ಹರ್ ನೇತೃತ್ವದ ಭಯೋತ್ಪಾದಕ ಸಂಘಟನೆಯು ಆಫ್ಘಾನಿಸ್ಥಾನದಿಂದ ತನ್ನ ಸದಸ್ಯರನ್ನು ಹಂತಹಂತವಾಗಿ ಜಮ್ಮು-ಕಾಶ್ಮೀರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ.

ಗುಪ್ತಚರ ವರದಿಗಳ ಪ್ರಕಾರ, ಸುಮಾರು ೧೦೦ ಜೈಶ್ ಸದಸ್ಯರು ನೀಲುಮ್/ಲೀಪಾ ಕಣಿವೆಯಲ್ಲಿನ ಪೂಂಚ್ ಮತ್ತು ರಾಜೌರಿ ವಿಭಾಗಗಳಲ್ಲಿ ಭಯೋತ್ಪಾದಕ ರವಾನೆ ಕೇಂದ್ರಗಳಲ್ಲಿ ಆದೇಶಕ್ಕಾಗಿ ಕಾಯುತ್ತಿದ್ದಾರೆ ಮತ್ತು ಅವರು ಶ್ರೀನಗರವಲ್ಲ ಜಮ್ಮುವಿನಲ್ಲಿ ದಾಳಿಗಳನ್ನು ನಡೆಸಲು ಗಮನ ಹರಿಸಿದ್ದಾರೆ ಎನ್ನಲಾಗಿದೆ. ಆಗಸ್ಟ್ ೧೧ರಂದೇ ಮುಫ್ತಿ ಅಸ್ಘರ್ ತನ್ನ ಸಂಘಟನೆಯ ಸದಸ್ಯರಿಗೆ ಸಿಯಾಲ್ ಕೋಟ್‌ನಲ್ಲಿ ಜಮ್ಮುವಿನ ದಂಡು ಪ್ರದೇಶದಲ್ಲಿ ದಾಳಿಗಾಗಿ ಗಮನ ಕೇಂದ್ರೀಕರಿಸುವಂತೆ ಸೂಚನೆ ನೀಡಿದ್ದಾನೆ ಎಂದು ಮಾಹಿತಿ ಮೂಲಗಳು ಹೇಳಿವೆ. ಜಮ್ಮುವಿನಲ್ಲಿ ಭದ್ರತಾ ಪಡೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕಾರಣ ಅಲ್ಲಿ ದಾಳಿ ನಡೆಸುವ ಬಗ್ಗೆ ಗಮನ ಕೇಂದ್ರೀಕರಿಸಬೇಕು ಎಂದು ಮುಫ್ತಿ ಅಸ್ಘರ್ ಹೇಳಿದ್ದಾನೆ ಎನ್ನಲಾಗಿದೆ.

’ರಾಜ್ಯದಲ್ಲಿ ದೂರವಾಣಿ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವುದಕ್ಕಾಗಿ ಜೈಶ್ ಫಿಯಾದೀನ್ (ಆತ್ಮಹತ್ಯಾ ದಾಳಿಕೋರರು) ಕಾಯುತ್ತಿದ್ದಾರೆ ಎಂಬ ವರದಿಗಳು ನಮಗೆ ಬಂದಿವೆ. ನಿರ್ಬಂಧ ರದ್ದಾದ ಬೆನ್ನಲ್ಲೇ ರಾಜ್ಯದೊಳಕ್ಕೆ ನುಸುಳಿ ದಾಳಿಗಳನ್ನು ನಡೆಸಲು ಯೋಜಿಸಲಾಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ರಾಷ್ಟ್ರೀಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದರು.

ಜೈಶ್‌ನ ಪಾಕ್ಷಿಕ ಪತ್ರಿಕೆಯಾಗಿರುವ ’ಮದೀನಾ ಮದೀನಾ’ದಲ್ಲಿ ಮಸೂದ್ ಅಜ್ಹರ್ ಪರವಾಗಿ ತಲ್ಹಾ ಸೈಫ್ ಅಮೆರಿಕದ ಪ್ರಭಾವಕ್ಕೆ ಒಳಗಾಗಿರುವ ಕೆಲವು ಮುಸ್ಲಿಂರಾಷ್ಟ್ರಗಳ ನಾಯಕರನ್ನು ಟೀಕಿಸಿದ್ದಾನೆ ಮತ್ತು ನರೇಂದ್ರ ಮೋದಿ ಸರ್ಕಾರದ ವಿರುದ್ಧ ದನಿ ಎತ್ತಲು ಭಾರತೀಯ ಮುಸ್ಲಿಮರನ್ನು ಆಗ್ರಹಿಸಿದ್ದಾನೆ.

ರಾವಲ್ಪಿಂಡಿಯ ಇನ್ನೊಂದು ಭಯೋತ್ಪಾದಕ ಸಂಘಟನೆಯಾಗಿರುವ ಲಷ್ಕರ್-ಇ-ತೊಯ್ಬಾ (ಎಲ್‌ಇಟಿ) ಮೀರ್ ಪುರ ಮಂಗ್ಲಾ ಮತ್ತು ಸಿಯಾಲ್ ಕೋಟ್‌ನ ಹೆಡ್ ಮರಲ್ ನಲ್ಲಿ ಭಯೋತ್ಪಾದಕ ಶಿಬಿರಗಳಿಗೆ ಮರುಜೀವ ನೀಡಿದೆ. ಸಂಘಟನೆಯ ನಾಯಕ ಹಫೀಜ್ ಸಯೀದ್ ಪ್ರಸ್ತುತ ಲಾಹೋರಿನಲ್ಲಿ ಪೊಲೀಸ್ ವಶದಲ್ಲಿ ಇದ್ದಾನೆ.

ಲಭ್ಯ ವರದಿಗಳ ಪ್ರಕಾರ, ಲಷ್ಕರ್ ಸಂಘಟನೆಯು ಖೈಬರ್ ಫಖ್ತೂನ್ ಖ್ವಾ ಪ್ರಾಂತ್ಯ ಮನ್ಶೇರಾದ ತನ್ನ ಶಿಬಿರದಲ್ಲಿ ಎರಡು ತಿಂಗಳುಗಳ ರಿಫ್ರಿಶರ್ ಕೋರ್ಸ್‌ಗಳನ್ನು ಆರಂಭಿಸಿದ್ದು, ಅದರ ಎರಡನೇ ಹಂತದ ನಾಯಕ ಸಯೀದ್ ಪುತ್ರ ತಟ್ಹಾ ನೇತೃತ್ವದಲ್ಲಿ ಉಪನ್ಯಾಸ ಮತ್ತು ವಿಡಿಯೋ ಸಂದೇಶಗಳ ಮೂಲಕ ಕಾಶ್ಮೀರದಲ್ಲಿ ಜಿಹಾದ್‌ಗಾಗಿ ಪ್ರಚಾರ ಮಾಡುತ್ತಿದೆ.

ಮೂರನೇ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಕೂಡಾ ಐಎಸ್ ಐ ನಾಯಕರ ಜೊತೆಗೆ ಆಗಸ್ಟ್ ೨೬ರಂದು ಮಾತುಕತೆ ನಡೆಸಿದ ಬಳಿಕ ಸಕ್ರಿಯಗೊಂಡಿದ್ದು ಗುರೆಜ್ ವಿಭಾಗದಲ್ಲಿ ಭಯೋತ್ಪಾದಕರನ್ನು ಭಾರತದೊಳಕ್ಕೆ ತೂರಿಸುವ ಕೆಲಸವನ್ನು ವಹಿಸಿಕೊಂಡಿದೆ.

September 22, 2019 - Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Politics, Spardha, Terror, World | , ,

1 Comment »

  1. […] ಭಾರತೀಯ ವಾಯುಪಡೆ ಬಾಂಬ್ ದಾಳಿ ನಡೆಸಿದ್ದ ಭಯೋತ್ಪಾದಕ ಶಿಬಿರ ಇತ್ತೀಚೆಗೆ ಮತ್ತೆ ಸಕ್ರ…ಗೊಂಡಿದ್ದು,  ಕನಿಷ್ಠ ೫೦೦ ಭಯೋತ್ಪಾದಕರು […]

    Pingback by ಬಾಲಾಕೋಟ್ ಉಗ್ರ ಶಿಬಿರ ಸಕ್ರಿಯ:  ದೃಢಪಡಿಸಿದ  ಜನರಲ್ ಬಿಪಿನ್ ರಾವತ್ « SPARDHA | September 23, 2019 | Reply


Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ