SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ವಿಕ್ರಮ ಲ್ಯಾಂಡರ್ ಸಂಪರ್ಕ ಸಿಗಲಿಲ್ಲ, ಮುಂದಿನ ಆದ್ಯತೆ ಗಗನಯಾನಕ್ಕೆ

21 k shivan isro
ಚಂದ್ರಯಾನ ೨ ಶೇಕಡಾ ೯೮ರಷ್ಟು ಯಶಸ್ತು: ಇಸ್ರೋ ಮುಖ್ಯಸ್ಥ ಕೆ.ಶಿವನ್

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಚಂದ್ರಯಾನ ೨ರ ವಿಕ್ರಮ್ ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸಲು ಕೊನೆಗೂ ಸಾಧ್ಯವಾಗಿಲ್ಲ, ಆದರೆ ಚಂದ್ರಯಾನ ೨ ರ ಗುರಿಗಳು ಶೇಕಡಾ ೯೮ರಷ್ಟು ಯಶಸ್ವಿಯಾಗಿವೆ. ನಮ್ಮ ಮುಂದಿನ ಆದ್ಯತೆ ಗಗನಯಾನ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು 2019  ಸೆಪ್ಟೆಂಬರ್  21ರ ಶನಿವಾರ ಇಲ್ಲಿ ಪ್ರಕಟಿಸಿದರು.

ಚಂದ್ರಯಾನ ೨ರ ವಿಕ್ರಮ್ ಲ್ಯಾಂಡರ್‌ನ ೧೪ ದಿನಗಳ (ಒಂದು ಚಾಂದ್ರ ದಿನ) ಜೀವಿತಾವಧಿಯ (ಆಯುಸ್ಸು) ಗಡುವು ಮುಕ್ತಾಯಗೊಂಡಿದ್ದು, ಅದರ ಒಳಗೆ ಅದರ ಜೊತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಸೆಪ್ಟೆಂಬರ್ ೭ರಂದು ಚಂದ್ರನ ನೆಲ ಸ್ಪರ್ಶಿಸುವ ಯತ್ನವನ್ನು ದೇಶದ ಮುಂಚೂಣಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡೆಸಿತ್ತು.

ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕ ಸಾಧನೆಗೆ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದರೂ, ಚಂದ್ರಯಾನ ೨ ಯೋಜನೆಯು ಒಂದು ದೊಡ್ಡ ಯಶಸ್ಸು. ಇದು ಚಂದ್ರನ ಇಡಿ ಮೇಲ್ಮೈಯ ನಕ್ಷೆಯನ್ನು ವಿವರವಾಗಿ ಮತ್ತು ನಿಖರವಾಗಿ ತಯಾರಿಸಲು ನೆರವಾಗಿದೆ ಎಂದು ಶಿವನ್ ಹೇಳಿದರು.

ಭುವನೇಶ್ವರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಂಟನೇ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷರು ಮಾತನಾಡುತ್ತಿದ್ದರು.

‘ಚಂದ್ರಯಾನ- ೨ ಅತ್ಯಂತ ದೊಡ್ಡ ಗಾತ್ರದ ವಿಜ್ಞಾನದ ಭಾಗ ಮತ್ತು ತಂತ್ರಜ್ಞಾನ ಪ್ರದರ್ಶನದ ಸಣ್ಣ ಭಾಗವನ್ನು ಒಳಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದ ಸಮೀಪ ಹಗುರ ಸ್ಪರ್ಶ ಮಾಡುವುದೂ ಇದರಲ್ಲಿ ಒಳಗೊಂಡಿತ್ತು. ಅಂತರ್ ಗ್ರಹ ವಿಜ್ಞಾನದಲ್ಲಿ ಬಹುತೇಕ ಪ್ರಯೋಗಗಳನ್ನು ಅರ್ಬಿಟರ್ ಮೂಲಕವೇ ನಡೆಸಲಾಗುತ್ತದೆ. ಮೂಲತಃ ಆರ್ಬಿಟರ್‌ನ ಆಯುಸ್ಸು ಒಂದು ವರ್ಷ ಮಾತ್ರ, ಆದರೆ ಗರಿಷ್ಠ ಕಾರ್‍ಯಾಚರಣೆಗಳ ಬಳಿಕ ಅದನ್ನು ೭.೫ ವರ್ಷಗಳಿಗೆ ಹೆಚ್ಚಿಸಲು ಸಾಧ್ಯವಾಗಿದೆ. ಈಗ ವಿಜ್ಞಾನಿಗಳು ನಿರೀಕ್ಷಿಸಿದ್ದಕ್ಕಿಂತ ೭.೫ ಪಟ್ಟಿನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯ. ಇದು ನಿಜವಾಗಿಯೂ ಅತ್ಯಂತ ದೊಡ್ಡ ಯಶಸ್ಸು’ ಎಂದು ಶಿವನ್ ವಿವರಿಸಿದರು.

ಚಂದ್ರಯಾನ -೨ರ ಆರ್ಬಿಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆರ್ಬಿಟರ್‌ನಲ್ಲಿ ಎಂಟು ಉಪಕರಣಗಳಿದ್ದು, ಪ್ರತಿಯೊಂದು ಉಪಕರಣವೂ ತಾನು ಮಾಡಬೇಕಾಗಿದ್ದ ಕಾರ್‍ಯವನ್ನು ಚಾಚೂ ತಪ್ಪದಂತೆ ಮಾಡುತ್ತಿವೆ. ಆದರೆ ಲ್ಯಾಂಡರ್ ಜೊತೆಗೆ ಮಾತ್ರ ನಮಗೆ ಸಂಪರ್ಕ ಸಾಧಿಸಲು ಈವರೆಗೂ ಸಾಧ್ಯವಾಗಿಲ್ಲ’ ಎಂದು ಡಾ. ಶಿವನ್ ಭುವನೇಶ್ವರದ ಘಟಿಕೋತ್ಸವ ಕಾರ್‍ಯಕ್ರಮಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘ಲ್ಯಾಂಡರ್‌ಗೆ ಏನಾಗಿದೆ ಎಂಬುದಾಗಿ ನಾವು ತಿಳಿದುಕೊಳ್ಳಬೇಕಾಗಿದೆ. ಅದು ನಮ್ಮ ಮೊದಲ ಆದ್ಯತೆ’ ಎಂದು ಶಿವನ್ ಹೇಳಿದರು. ’ನಮ್ಮ ಮುಂದಿನ  ಆದ್ಯತೆ ೨೦೨೦ಕ್ಕೆ ನಿಗದಿ ಪಡಿಸಲಾಗಿರುವ ಗಗನಯಾನ ಯೋಜನೆ’ ಎಂದು ರಾಷ್ಟ್ರದ ಉನ್ನತ ಬಾಹ್ಯಾಕಾಶ ವಿಜ್ಞಾನಿ ನುಡಿದರು.

ಸೆಪ್ಟೆಂಬರ್ ೭ರಂದು ಚಂದ್ರನ ನೆಲ ಸ್ಪರ್ಶಕ್ಕೆ ಯತ್ನ ನಡೆಸಲಾಗಿದ್ದ ಚಂದ್ರನ ದಕ್ಷಿಣ ಧ್ರುವಪ್ರದೇಶದಲ್ಲಿ |ಶನಿವಾರ ಚಂದ್ರನ ರಾತ್ರಿ ಆರಂಭವಾಗಿದೆ. ಇದರಿಂದಾಗಿ ಲ್ಯಾಂಡರ್‌ಗೆ ಸೌರ ಬೆಳಕು ಅಲಭ್ಯವಾಗಿ ತನ್ನ ಕಾರ್‍ಯ ನಿರ್ವಹಣೆಗೆ ಅದಕ್ಕೆ ಅಗತ್ಯ ಶಕ್ತಿ ಉತ್ಪಾದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಚಾಂದ್ರ ರಾತ್ರಿಯಲ್ಲಿ ಚಂದ್ರನ ಮೇಲಿನ ಉಷ್ಣಾಂಶ ಮೈನಸ್ ೨೦೦ ಡಿಗ್ರಿಗಳಿಗಿಂತಲೂ ಕೆಳಕ್ಕೆ ಇಳಿಯುವುದರಿಂದ ಅದು ಲ್ಯಾಂಡರ್‌ನ ಉಪಕರಣಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದು.

ಶಿಕ್ಷಣತಜ್ಞರು ಮತ್ತು ಇಸ್ರೋ ತಜ್ಞರ ರಾಷ್ಟ್ರೀಯ ಮಟ್ಟದ ಉನ್ನತ ಸಮಿತಿಯು ಲ್ಯಾಂಡರ್ ನಷ್ಟದ ಕಾರಣಗಳ ಬಗ್ಗೆ ವಿಶ್ಲೇಷಿಸುತ್ತಿದ್ದಾರೆ ಎಂದು ಗುರುವಾರ ಇಸ್ರೋ ತಿಳಿಸಿತ್ತು.

ಚಂದ್ರಯಾನ-೨ ವಿಕ್ರಮ್ ಲ್ಯಾಂಡರ್ ಇಳಿಯಬೇಕಾಗಿದ್ದ ಚಂದ್ರನ ಪ್ರದೇಶದ ಚಿತ್ರಗಳನ್ನು ಇಳಿಯುವ ಯತ್ನಕ್ಕೂ ಮುನ್ನ ಸೆರೆ ಹಿಡಿದಿದೆ ಎಂದು ನಾಸಾ ಗುರುವಾರ ದೃಢ ಪಡಿಸಿದೆ. ನಾಸಾದ ಲ್ಯೂನಾರ್ ರಿಕನ್ನಾಯ್ಸೆನ್ಸ್ ಆರ್ಬಿಟರ್ (ಎಲ್ ಆರ್ ಒ) ಬಾಹ್ಯಾಕಾಶ ನೌಕೆಯು ಸೆಪ್ಟೆಂಬರ್ ೧೭ರಂದ ಚಂದ್ರನಿಗೆ ಸಮೀಪವಾಗಿ ಸಾಗುವಾಗ ಈ ಪ್ರದೇಶದ ಚಿತ್ರಗಳನ್ನು ಸೆರೆ ಹಿಡಿದಿದ್ದು ಅವರು ಚಂದ್ರಯಾನ ೨ ತೆಗೆದ ಚಿತ್ರಗಳಿಗೆ ತಾಳೆಯಾಗಿವೆ ಎಂದು ನಾಸಾ ಹೇಳಿದೆ.

ಕೇವಲ ೧೦೦೦ ಕೋಟಿ ರೂಪಾಯಿ ಮೊತ್ತದಲ್ಲಿ ಚಂದ್ರಯಾನ ಯೋಜನೆ ಯಶಸ್ವಿಗೊಳಿಸುವ ಮೂಲಕ ಬಾಹ್ಯಾಕಾಶ ಇತಿಹಾಸ ನಿರ್ಮಿಸುವ ನಿರೀಕ್ಷೆ ಭಾರತದ್ದಾಗಿತ್ತು.

ಚಂದ್ರ ನೆಲ ಸ್ಪರ್ಶ ಸಾಧ್ಯವಾಗಿದ್ದರೆ ಭಾರತವು ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಈವರೆಗೆ ಅಮೆರಿಕ, ರಶ್ಯಾ ಮತ್ತು ಚೀನಾ ಚಂದ್ರನೆಲ ಸ್ಪರ್ಶ ಸಾಧನೆಯನ್ನು ಮಾಡಿವೆ. ಯೋಜನೆ ಯಶಸ್ವಿಯಾಗಿದ್ದರೆ, ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಮೊದಲ ಯತ್ನದಲ್ಲೇ ಸ್ಪರ್ಶಿಸಿದ ಮೊದಲ ರಾಷ್ಟ್ರ ಎಂಬ ಕೀರ್ತಿಗೂ ಭಾರತ ಭಾಜನವಾಗುತ್ತಿತ್ತು.

September 21, 2019 Posted by | ಇಸ್ರೋ, ಕರ್ನಾಟಕ, ಚಂದ್ರ ಲೋಕ, ಚಂದ್ರಯಾನ-2, ಭಾರತ, ರಾಜ್ಯ, ರಾಷ್ಟ್ರೀಯ, ವಿಶ್ವ/ ಜಗತ್ತು, ಸೌರ ವ್ಯವಸ್ಥೆ, Chandrayaan-2, Flash News, General Knowledge, India, Nation, News, Science, Space, Spardha, World | , | Leave a comment

‘ವಿಕ್ರಮ್’ ಸುಸ್ಥಿತಿ, ಓರೆಸ್ಥಿತಿಯಲ್ಲಿ ಪತ್ತೆ: ಇಸ್ರೋ

09 vikram in tilted positionಬೆಂಗಳೂರು: ಚಂದ್ರನ ಅಂಗಳದಲ್ಲಿ ಪತ್ತೆಯಾಗಿರುವ ವಿಕ್ರಮ್ ಲ್ಯಾಂಡರ್ ಸ್ವಲ್ಪ ಓರೆಯಾದ ಸ್ಥಿತಿಯಲ್ಲಿ ಇರುವುದು ಬೆಳಕಿಗೆ ಬಂದಿದೆ. ಯೋಜಿಸಿದ್ದಂತೆ ನಿಧಾನವಾಗಿ ನೆಲಕ್ಕಿಳಿಯಲು ಸಾಧ್ಯವಾಗದೆ, ರಭಸವಾಗಿ ನೆಲಕ್ಕೆ ಇಳಿದಿದ್ದರೂ, ವಿಕ್ರಮ್‌ಗೆ ಯಾವುದೇ ಹಾನಿ ತಟ್ಟಿಲ್ಲ, ಒಂದಿಷ್ಟು ಚೂರಾಗದೆ ಸುಸ್ಥಿತಿಯಲ್ಲಿ ಇದೆ ಎಂದು ಇಸ್ರೋ ವಿಜ್ಞಾನಿಗಳು 2019 ಸೆಪ್ಟೆಂಬರ 09ರ ಸೋಮವಾರ ತಿಳಿಸಿದರು.

ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿರುವ ಚಂದ್ರಯಾನ-೨ರ ಆರ್ಬಿಟರ್ ಹಿಂದಿನ ದಿನ ಕಳುಹಿಸಿದ್ದ ಥರ್ಮಲ್ ಚಿತ್ರದ ಪರಿಶೀಲನೆಯಿಂದ ’ವಿಕ್ರಮ್’ ಸುಸ್ಥಿತಿಯಲ್ಲಿ ಇರುವುದು ಬೆಳಕಿಗೆ ಬಂದಿದೆ ಎಂದು ವಿಜ್ಞಾನಿಗಳು ಹೇಳಿದರು.

ಓರೆಯಾಗಿದ್ದರೂ, ಸುಸ್ಥಿತಿಯಲ್ಲಿ ಇರುವುದನ್ನು ಖಚಿತ ಪಡಿಸಿಕೊಂಡಿರುವ ವಿಜ್ಞಾನಿಗಳು ’ವಿಕ್ರಮ್’ನ್ನು ಸಂಪರ್ಕಿಸಲು ಸತತ ಯತ್ನ ನಡೆಸುತ್ತಿದ್ದಾರೆ. ಆರ್ಬಿಟರ್ ತನ್ನ ಉತ್ಕೃಷ್ಟ ದರ್ಜೆಯ ಕ್ಯಾಮರಾದಲ್ಲಿ ವಿಕ್ರಮ್ ಚಿತ್ರವನ್ನು ಸೆರೆ ಹಿಡಿದಿದ್ದು, ಅದರಲ್ಲಿ ವಿಕ್ರಮ್ ಓರೆಯಾಗಿ ಇರುವುದನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

ನಿಧಾನವಾಗಿ ಇಳಿಸಲು ಯೋಜಿಸಿದ್ದ ಸ್ಥಳದ ಸಮೀಪದಲ್ಲಿಯೇ ಲ್ಯಾಂಡರ್ ರಭಸವಾಗಿ ಚಾಂದ್ರ ನೆಲದ ಮೇಲೆ ಬಿದ್ದಿದೆ ಆದರೆ ಬಿದ್ದ ರಭಸಕ್ಕೆ ಲ್ಯಾಂಡರ್ ತುಂಡಾಗಿಲ್ಲ, ಬದಲಿಗೆ ಸ್ವಲ್ಪ ಓರೆಯಾಗಿ ನಿಂತಿದೆ ಎಂದು ಇಸ್ರೋ ಅಧಿಕಾರಿಯೊಬ್ಬರು ತಿಳಿಸಿದರು.

ಸೆಪ್ಟೆಂಬರ್ ೭ರ ಶನಿವಾರ ನಸುಕಿನಲ್ಲಿ ಚಂದ್ರನ ಅಂಗಳದತ್ತ ಇಳಿಯುತ್ತಿದ್ದ ವಿಕ್ರಮ್ ಲ್ಯಾಂಡರ್ ನೆಲದಿಂದ ೨.೧ ಕಿ.ಮೀ. ಅಂತರದಲ್ಲಿದ್ದಾಗ ಇಸ್ರೋ ಜೊತೆಗಿನ ಸಂಪರ್ಕ ಕಡಿತಗೊಂಡಿತ್ತು.

’ವಿಕ್ರಮ್’ ಜೊತೆಗಿನ ಸಂಪರ್ಕ ಸಾಧ್ಯವಾಗದೇ ಇರುವುದರಿಂದ ಅದರ ಒಡಲಲ್ಲಿ ಇರುವ ’ಪ್ರಜ್ಞಾನ್’ ರೋವರ್ ಹೊರಗಿಳಿಸಿ ಶೋಧಕಾರ್ಯ ನಡೆಸಲು ಸಾಧ್ಯವಾಗುವುದಿಲ್ಲ.

ಲ್ಯಾಂಡರ್ ಮತ್ತು ರೋವರ್ ಎರಡರ ಕಾರ್ಯಾಚರಣೆ ಅವಧಿ ಒಂದು ಚಾಂದ್ರದಿನ ಅಂದರೆ ೧೪ ಭೂ ದಿನಗಳು. ಈಗಾಗಲೇ ಎರಡು ದಿನಗಳು ಗತಿಸಿಹೋಗಿರುವುದರಿಂದ ಇನ್ನು ಉಳಿದಿರುವ ಅವಧಿ ೧೨ ದಿನಗಳು ಮಾತ್ರ. ಅಷ್ಟರ ಒಳಗಾಗಿ ವಿPಮ್ ಜೊತೆಗೆ ಸಂಪರ್ಕ ಸಾಧಿಸಲು ಇಸ್ರೊ ತಂಡ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವರ್ಕ್ ಮೂಲಕ (ಐಎಸ್ಟಿಆರ್‌ಎಸಿ) ಕಾರ್ಯನಿರತವಾಗಿದೆ.

ಪೂರ್ವ ಯೋಜನೆಯಂತೆ ’ವಿಕ್ರಮ್’ ನಿಧಾನವಾಗಿ ಚಂದ್ರನ ಅಂಗಳಕ್ಕೆ ಇಳಿದಿದ್ದರೆ ಅದರೊಂದಿಗೆ ಸಂವಹನ ಸಾಧಿಸುವ ಅವಕಾಶ ದಟ್ಟವಾಗಿತ್ತು. ರಭಸದಿಂದ ಇಳದಿರುವುದರಿಂದ, ಅದರ ಒಳಗಿನ ಎಲ್ಲ ವ್ಯವಸ್ಥೆ ಸೂಕ್ತವಾಗಿ ಕಾರ್ಯನಿರ್ವಹಿಸಿದರೆ ಮಾತ್ರವೇ ಸಂಪರ್ಕ ಸಾಧ್ಯವಾಗಲಿದೆ  ಎಂದು ಇಸ್ರೋ  ವಿಜ್ಞಾನಿಯೊಬ್ಬರು ಅಭಿಪ್ರಾಯ ವ್ಯಕ್ತ ಪಡಿಸಿದರು.

’ವಿಕ್ರಮ್ ಇಳಿಯಲು ಯೋಜಿಸಲಾಗಿದ್ದ ಸ್ಥಳದ ಸಮೀಪದಲ್ಲಿಯೇ  ಅದು ರಭಸವಾಗಿ ಇಳಿದಿರುವುದನ್ನು ಆರ್ಬಿಟರ್ ತನ್ನೊಳಗಿನ ಕ್ಯಾಮರಾ ಮೂಲಕ ಸೆರೆ ಹಿಡಿದ ಚಿತ್ರಗಳು ಸ್ಪಷ್ಟ ಪಡಿಸಿವೆ. ಲ್ಯಾಂಡರ್ ಸುಸ್ಥಿತಿಯಲ್ಲಿದ್ದು ಒಂದಿಷ್ಟು ಒಡೆದಿಲ್ಲ ಅಥವಾ ಚೂರು ಚೂರಾಗಿಲ್ಲ ಆದರೆ ಅದು ಸ್ವಲ್ಪ ಓರೆಯಾದ ಸ್ಥಿತಿಯಲ್ಲಿ ಇದೆ’ ಎಂದು ಇಸ್ರೋ ಅಧಿಕಾರಿಯೊಬ್ಬರು ಹೇಳಿದರು.

ಲ್ಯಾಂಡರ್ ಜೊತೆಗೆ ಮರುಸಂಪರ್ಕ ಸಾಧಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಅವರು ನುಡಿದರು.

ಇಸ್ರೋದಲ್ಲಿ ಕೆಲಸ ಮಾಡುತ್ತಿರುವ ತಂಡವು  ಇಸ್ರೋ ಟೆಲೆಮೆಟ್ಟಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್ ವಕ್ (ಇಸ್ಟ್ರ್ಯಾಕ್) ವ್ಯವಸ್ಥೆಯನ್ನು ಹೊಂದಿದೆ. ಚಂದ್ರಯಾನ-೨ರಲ್ಲಿ ಅರ್ಬಿಟರ್, ವಿಕ್ರಮ್ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಇವೆ ಎಂದು ಅವರು ಹೇಳಿದರು.

’ವಿಕ್ರಮ್ ಲ್ಯಾಂಡರ್‌ಗೆ ಇರುವ ೧೪ ದಿನಗಳ ಆಯುಸ್ಸಿನ ಅವಧಿಯಲ್ಲಿ ಅದರ ಜೊತೆಗೆ ಸಂಪರ್ಕ ಸಾಧಿಸಲು ಯತ್ನಿಸುವುದಾಗಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಶನಿವಾರ ಹೇಳಿದ್ದರು. ಆರ್ಬಿಟರ್ ನ ಕ್ಯಾಮರಾ ಚಾಂದ್ರ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರನ್ನು ಪತ್ತೆ ಹಚ್ಚಿದೆ ಎಂದು ಅವರು ಹೇಳಿದ್ದರು.

’ಎಲ್ಲವೂ ಸುಸ್ಥಿತಿಯಲ್ಲಿ  (ಲ್ಯಾಂಡರ್) ಇಲ್ಲದೇ ಇದ್ದಲ್ಲಿ (ಮರು ಸಂಪರ್ಕ ಸಾಧನೆ) ಅತ್ಯಂತ ಕಷ್ಟ. ಅವಕಾಶಗಳು ತುಂಬಾ ಕಡಿಮೆ ಇವೆ. ನಿಧಾನವಾಗಿ ಇಳಿದಿದ್ದಲ್ಲಿ ಮತ್ತು ಅದರ ಎಲ್ಲ ವ್ಯವಸ್ಥೆಗಳೂ ಕಾರ್‍ಯ ನಿರ್ವಹಿಸುತ್ತಿದ್ದರೆ ಮಾತ್ರವೇ ಸಂವಹನ ಪುನಃಸ್ಥಾಪನೆ ಸಾಧ್ಯ. ಸಂಪರ್ಕ ಮರುಸ್ಥಾಪನೆಯ ಒಳ್ಳೆಯ ಸಾಧ್ಯತೆಗಳು ಇವೆ. ಲ್ಯಾಂಡರ್‌ಗೆ ಮರು ಜೀವ ತುಂಬುವುದನ್ನು ತಳ್ಳಿಹಾಕಲು ಸಾಧ್ಯವಿಲ್ಲ ಎಂದು ಇನ್ನೊಬ್ಬ ಹಿರಿಯ ಅಧಿಕಾರಿ ನುಡಿದಿದ್ದರು.

’ಆದರೆ ಮಿತಿಗಳಿವೆ. ಭೂಸ್ಥಾಯೀ ಕಕ್ಷೆಯಲ್ಲಿ ಸಂಪರ್ಕ ಕಳೆದುಹೋದ ಬಾಹ್ಯಾಕಾಶ ನೌಕೆಯನ್ನು ಮತ್ತೆ ಗಳಿಸಿದ ಅನುಭವ ನಮಗಿದೆ. ಆದರೆ ವಿಕ್ರಮ್ ವಿಷಯ ಹಾಗಲ್ಲ. ಅದು ಈಗಾಗಲೇ ಚಂದ್ರನ ಮೇಲ್ಮೈಯಲ್ಲಿ ನಿಂತಿದೆ. ನಮಗೆ ಅದರ ಸ್ಥಿತಿ ಬದಲಾಯಿಸಲು ಸಾಧ್ಯವಿಲ್ಲ. ಅದರ ಆಂಟೆನಾಗಳು ಭೂಮಿಯ ನಿಯಂತ್ರಣ ಕೇಂದ್ರ ಆಥವಾ ಆರ್ಬಿಟರ್‌ಗೆ ಅಭಿಮುಖವಾಗಿರಬೇಕು. ಇಂತಹ ಕಾರ್‍ಯಾಚರಣೆ ತುಂಬಾ ಕಷ್ಟಕರ. ಇದೇ ಸಮಯದಲ್ಲಿ ಸಾಧ್ಯತೆಗಳು ಉತ್ತಮವಾಗಿವೆ. ನಾವೀಗ ಬೆರಳುಗಳನ್ನು ಹೊಸೆದುಕೊಂಡು ಇರಬೇಕಾಗಿದೆ’ ಎಂದು ಅಧಿಕಾರಿ ಹೇಳಿದ್ದರು.

ವಿಕ್ರಮ್ ಲ್ಯಾಂಡರ್ ತನ್ನ ಕಾರ್‍ಯಾಚರಣೆಗೆ ಬೇಕಾದ ಶಕ್ತಿಯನ್ನು ಅದರ ಸುತ್ತಲೂ ಅಳವಡಿಸಲಾಗಿರುವ ಸೌರಫಲಕಗಳ ಮೂಲಕ ಪಡೆದುಕೊಳ್ಳುತ್ತದೆ. ಅಲ್ಲದೆ ಅದು ತನ್ನೊಳಗಿನ ಬ್ಯಾಟರಿಗಳನ್ನು ಕೂಡಾ ಈವರೆಗೂ ಹೆಚ್ಚು ಬಳಸಿಲ್ಲ. ಅದರ ಮೂಲಕವೂ ಮೂಲಕವೂ ಅಗತ್ಯ ಶಕ್ತಿಯನ್ನು ’ವಿಕ್ರಮ್’ ಪಡೆದುಕೊಳ್ಳುತ್ತದೆ.

September 9, 2019 Posted by | ಇಸ್ರೋ, ಚಂದ್ರ ಲೋಕ, ಚಂದ್ರಯಾನ-2, ಭಾರತ, ರಾಷ್ಟ್ರೀಯ, Chandrayaan-2, Flash News, General Knowledge, India, Moon Walk, Nation, News, Science, Space, Spardha | , , , | Leave a comment

ಚಂದ್ರನ ಮೇಲ್ಮೈಯಲ್ಲಿ ’ವಿಕ್ರಮ್’ ಲ್ಯಾಂಡರ್ ಪತ್ತೆ, ಸಂಪರ್ಕಕ್ಕೆ ಇಸ್ರೋ ನಿರಂತರ ಯತ್ನ

This slideshow requires JavaScript.

ಬೆಂಗಳೂರು: ಚಂದ್ರನ ನೆಲದ ಮೇಲೆ ಇಳಿಯಲು ಕೇವಲ ೨ ಕಿಮೀಗಳಷ್ಟು ಎತ್ತರದಲ್ಲಿದ್ದಾಗ ನಿಯಂತ್ರಣ ಕೇಂದ್ರದ ಜೊತೆಗಿನ ಸಂವಹನವನ್ನು ಕಳೆದುಕೊಂಡಿದ್ದ ಚಂದ್ರಯಾನ-೨ ರ ’ವಿಕ್ರಮ್ ಲ್ಯಾಂಡರ್’ ಇದೀಗ ಚಂದ್ರ ಮೇಲ್ಮೈಯಲ್ಲಿ ಪತ್ತೆಯಾಗಿದೆ, ’ವಿಕ್ರಮ್’ ಜೊತೆಗೆ ಸಂವಹನ ಮರುಸ್ಥಾಪನೆಗೆ ತೀವ್ರ ಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ಕೆ. ಶಿವನ್ ಅವರು 2019 ಸೆಪ್ಟೆಂಬರ್ 08ರ ಭಾನುವಾರ ಇಲ್ಲಿ ಪ್ರಕಟಿಸಿದರು.

‘ವಿಕ್ರಮ್’ ಲ್ಯಾಂಡರ್‌ನ ಥರ್ಮಲ್ ಚಿತ್ರವನ್ನು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಕ್ಲಿಕ್ ಮಾಡಿದೆ. ಆದರೆ ಯಾವುದೇ ಸಂವಹನ ಇನ್ನೂ ಸಾಧ್ಯವಾಗಿಲ್ಲ. ಸಂಪರ್ಕ ಸ್ಥಾಪಿಸಲು ನಾವು ಯತ್ನಿಸುತ್ತಿದ್ದೇವೆ’ ಎಂದು ಶಿವನ್ ಸುದ್ದಿ ಸಂಸ್ಥೆ ಒಂದಕ್ಕೆ ತಿಳಿಸಿದರು.

‘ವಿಕ್ರಮ್’ ಲ್ಯಾಂಡರ್ ಬಗ್ಗೆ ಏನನ್ನು ಹೇಳಲೂ ಇದು ಪಕ್ವವಾದ ಕಾಲ ಅಲ್ಲ. ಈ ಬಗ್ಗೆ ಮುಂದಕ್ಕೆ ತಿಳಿಸಲಾಗುವುದು’ ಎಂದು ಶಿವನ್ ಹೇಳಿದರು.

ಚಾಂದ್ರನೆಲದ ಮೇಲೆ ಇಳಿಯುವ ಕೊನೆಯ ಕ್ಷಣಗಳಲ್ಲಿ ’ವಿಕ್ರಮ್’ ಸಂವಹನ ಕಡಿದುಕೊಂಡ ಬಳಿಕ, ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮಸ್ಥೈರ್ಯ ನೀಡಿ ಹುರಿದುಂಬಿಸಿದ ಪರಿಯಿಂದ ವಿಜ್ಞಾನಿಗಳು ಮತ್ತು ಎಂಜಿನಿಯರುಗಳ  ತಂಡದ ನೈತಿಕ ಸ್ಥೈರ್‍ಯ ಹೆಚ್ಚಿದ್ದು, ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಇಸ್ರೋ ಮುಖ್ಯಸ್ಥರು ಹೇಳಿದರು. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ’ನಾಸಾ’ ಮುಖ್ಯಸ್ಥರು ಕೂಡಾ ಇಸ್ರೋ ಸಾಧನೆಯನ್ನು ಮೆಚ್ಚಿ ಮುಂದಿನ ಬಾಹ್ಯಾಕಾಶ ಯಾನಗಳಲ್ಲಿ ಜೊತೆಗೂಡುವ ಆಶಯ ವ್ಯಕ್ತ ಪಡಿಸಿದ್ದಾರೆ.

ಸೆಪ್ಟೆಂಬರ್ ೭ರ ಶನಿವಾರ ನಸುಕಿನ ೧.೫೩ ಗಂಟೆಯ ವೇಳೆಗೆ, ಚಂದ್ರನ ಮೇಲ್ಮೈಯನ್ನು ನಿಧಾನವಾಗಿ  ಸ್ಪರ್ಶಿಸಲು ೨ ನಿಮಿಷ ಮುನ್ನ ವಿಜ್ಞಾನಿಗಳು ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕ ಕಳೆದಕೊಂಡಿದ್ದರು.

ನಿಧಾನವಾಗಿ ಇಳಿಯುವ (ಸಾಫ್ಟ್ ಲ್ಯಾಂಡಿಂಗ್) ಕೊನೆಯ ೧೫ ನಿಮಿಷಗಳ ಪ್ರಕ್ರಿಯೆ ಅತ್ಯಂತ ಕ್ಷಿಷ್ಟಕರ ಹಾಗೂ ಉದ್ವಿಗ್ನತೆಯ ಕೆಲಸ ಎಂದು ಇಸ್ರೋ ಮುಖ್ಯಸ್ಥ ಶಿವನ್ ಇದಕ್ಕೆ ಮುನ್ನವೇ ತಿಳಿಸಿದ್ದರು.

‘ಯೋಜನೆಯ ಕೊನೆಯ ೧೫ ನಿಮಿಷಗಳಲ್ಲಿ ಲ್ಯಾಂಡರ್ ತನ್ನದೇ ಪ್ರೊಪಲ್ಷನ್ ವ್ಯವಸ್ಥೆಯ ನೆರವಿನೊಂದಿಗೆ ತನಗೆ ತಾನೇ ಮಾರ್ಗದರ್ಶನ ಮಾಡಿಕೊಳ್ಳಲು ನೆರವಾಗುತ್ತದೆ. ಈ ೧೫ ನಿಮಿಷಗಳು ’ಭಯಾನಕ ಕ್ಷಣಗಳು’ ಎಂದು ಇಸ್ರೋ ಅಧ್ಯಕ್ಷರು ಹೇಳಿದ್ದರು.

ಚಂದ್ರನ ದಕ್ಷಿಣ ಧ್ರುವದಲ್ಲಿ ’ನಿಧಾನವಾಗಿ ಇಳಿಯುವ’ ಮೂಲಕ ಭಾರತವನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ಪ್ರಥಮ ರಾಷ್ಟವನ್ನಾಗಿ ಮಾಡಲು ’ವಿಕ್ರಮ್’ ಲ್ಯಾಂಡರ್ ಯತ್ನಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಮಂಜುಗಡ್ಡೆ ರೂಪದಲ್ಲಿ ನೀರು ಇರಬಹುದು ಎಂದು ವಿಜ್ಞಾನಿಗಳು ನಂಬಿದ್ದಾರೆ.

‘ನಾವು ಎಲ್ಲ ಆಸೆಯನ್ನೂ ಕಳೆದುಕೊಂಡಿಲ್ಲ. ಚಂದ್ರಯಾನ -೨ರ ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸುವ ಸರ್ವ ಯತ್ನಗಳನ್ನೂ ವಿಜ್ಞಾನಿಗಳು ಮಾಡುತ್ತಿದ್ದಾರೆ    ಎಂದು  ಇಸ್ರೋ ಮುಖ್ಯಸ್ಥರು ಶನಿವಾರ ಹೇಳಿದ್ದರು. ವಿಕ್ರಮ್ ಲ್ಯಾಂಡರ್ ಒಂದು ಚಾಂದ್ರ ದಿನ ಅಥವಾ ೧೪ ಭೂದಿನಗಳ ಆಯುಸ್ಸನ್ನು ಹೊಂದಿದೆ. ಅಂದರೆ, ’ವಿಕ್ರಮ್’ ಜೊತೆ ಸಂವಹನ ಸಾಧಿಸಲು ಈ ೧೪ ದಿನಗಳ ಅವಕಾಶ ವಿಜ್ಞಾನಿಗಳಿಗೆ ಇದೆ.

ಚಂದ್ರಯಾನ-೨ರ ಗುರಿ ಶೇಕಡಾ ೯೦-೯೫ರಷ್ಟು ಸಾಧನೆಯಾಗಿದೆ. ಲ್ಯಾಂಡರ್ ನಷ್ಟದ ಹೊರತಾಗಿಯೂ ಚಾಂದ್ರ ವಿಜ್ಞಾನಕ್ಕೆ ಇನ್ನಷ್ಟು ಕೊಡುಗೆಯನ್ನು ಅದು ನೀಡಲಿದೆ’ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು.

ಚಂದ್ರಯಾನ -೨ ದೇಶೀ ನಿರ್ಮಿತ ಬಾಹ್ಯಾಕಾಶ ನೌಕೆಯಾಗಿದ್ದು, ಅದು ಆರ್ಬಿಟರ್, ‘ವಿಕ್ರಮ್’ ಲ್ಯಾಂಡರ್ ಮತ್ತು  ‘ಪ್ರಗ್ಯಾನ್’ ರೋವರ್‌ನ್ನು ಒಯ್ದಿತ್ತು. ’ವಿಕ್ರಮ್” ಭಾರತದ ಖ್ಯಾತ ಬಾಹ್ಯಾಕಾಶ ವಿಜ್ಞಾನಿ ವಿಕ್ರಮ್ ಸಾರಾಭಾಯಿ ಅವರ ನೆನಪಿಗಾಗಿ ಇಡಲಾದ ಹೆಸರಾಗಿದ್ದರೆ, ‘ಪ್ರಗ್ಯಾನ್’ ಎಂಬುದು ಸಂಸ್ಕೃತದ ’’ನ’ ಎಂಬ ಅರ್ಥವನ್ನು ಸೂಚಿಸುವ ಪದವಾಗಿದೆ. ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯ ಪರೀಕ್ಷೆ ನಡೆಸುವ ಉದ್ದೇಶವಿತ್ತು.

ಚಂದ್ರನ ಮೇಲ್ಮೈ ಮತ್ತು ಅಲ್ಲಿನ ಕುಳಿಗಳ ಪರಿಶೀಲನೆ ನಡೆಸುವ ಮೂಲಕ ರೋವರ್ ಸೌರ ವ್ಯವಸ್ಥೆಯ ಇತಿಹಾಸದ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಯತ್ನ ಮಾಡಲಿದೆ ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದರು.

ಚಾಂದ್ರ ಮೇಲ್ಮೈಯ ಯಶಸ್ವೀ ಸ್ಪರ್ಶದೊಂದಿಗೆ ಭಾರತವು ಚಂದ್ರನ ಮೇಲೆ ಇಳಿದ ಮೂರು ರಾಷ್ಟ್ರಗಳಾದ ಅಮೆರಿಕ, ರಶ್ಯಾ (ಯುಎಸ್‌ಎಸ್‌ಆರ್)  ಮತ್ತು ಚೀನ ದೇಶಗಳ ಸಾಲಿಗೆ ನಾಲ್ಕನೇ ದೇಶವಾಗಿ ಸೇರ್ಪಡೆಯಾಗುತ್ತಿತ್ತು.

ಚಂದ್ರನ ಮೇಲೆ ಇಳಿಯಲು ಇದ್ದ ಕೊನೆಯ ಎರಡು ನಿಮಿಷಗಳವರೆಗೂ ತನ್ನ ನಿಯೋಜಿತ ಪಥದಲ್ಲಿ ಸಾಗಿದ್ದ ’ವಿಕ್ರಮ್” ಲ್ಯಾಂಡರ್, ನಿಯಂತ್ರಣ ಕೇಂದ್ರದೊಂದಿಗಿನ ಸಂವಹನ ಕಳೆದುಕೊಂಡ ಕ್ಷಣದಲ್ಲಿ ತನ್ನ ನಿಯೋಜಿತ ಪಥದಿಂದ ಸ್ವಲ್ಪ ಆಚೆ ಸರಿದಿತ್ತು. ಆ ಬಳಿಕ ಲ್ಯಾಂಡರ್ ಚಂದ್ರನ ಮೇಲೆ ಯೋಜಿಸಿದ್ದಂತೆ ನಿಧಾನವಾಗಿ ಇಳಿದಿತ್ತೇ (ಸಾಫ್ಟ್ ಲ್ಯಾಂಡಿಂಗ್) ಅಥವಾ ಅಪ್ಪಳಿಸಿತ್ತೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಇಸ್ರೋ ಅಧ್ಯಕ್ಷ ಶಿವನ್ ಹೇಳಿದರು.

‘ಹೌದು, ನಾವು ಚಾಂದ್ರ ಮೇಲ್ಮೈಯಲ್ಲಿ ಲ್ಯಾಂಡರ್‌ನ್ನು ಪತ್ತೆ ಹಚ್ಚಿದ್ದೇವೆ. ’ಪ್ರಗ್ಯಾನ್ ರೋವರ್’ನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿರುವ ’ವಿಕ್ರಮ್’ ಲ್ಯಾಂಡರ್‌ನ ಚಿತ್ರವನ್ನು ಚಂದ್ರಯಾನ-೨ರ ಆರ್ಬಿಟರ್‌ನಲ್ಲಿ ಇರುವ ಕ್ಯಾಮರಾ ಸೆರೆ ಹಿಡಿದಿದೆ. ಚಾಂದ್ರ ಕಕ್ಷೆಯಲ್ಲಿ ಚಂದ್ರನಿಗೆ ಪ್ರದಕ್ಷಿಣೆ ಹಾಕುತ್ತಿರುವ ಆರ್ಬಿಟರ್ ಸುರಕ್ಷಿತವಾಗಿದ್ದು ತನ್ನ ಕಾರ್‍ಯವನ್ನು ನಿರ್ವಹಿಸುತ್ತಿದೆ’ ಎಂದು ಇಸ್ರೋ ಅಧ್ಯಕ್ಷರು ಹೇಳಿದರು.

ಆರ್ಬಿಟರ್‌ನಲ್ಲಿ ಇರುವ ಕ್ಯಾಮರಾ ಅತ್ಯುತ್ಕೃಷ್ಟ ದರ್ಜೆಯದ್ದಾಗಿದ್ದು ಈವರೆಗೆ ಎಲ್ಲ ಚಂದ್ರಯಾನ ನೌಕೆಗಳ ಕ್ಯಾಮರಾಗಳನ್ನೂ ಮೀರಿಸುವ ಗುಣಮಟ್ಟ ಹೊಂದಿದೆ. ಅವು ಅತ್ಯಂತ ಉತ್ಕೃಷ್ಟ ಗುಣಮಟ್ಟದ ಚಿತ್ರಗಳನ್ನು ಒದಗಿಸಲಿದ್ದು, ಜಾಗತಿಕ ಸಮುದಾಯಕ್ಕೆ ಅತ್ಯಂತ ಉಪಯುಕ್ತವಾಗಲಿವೆ ಎಂದು ಇಸ್ರೋ ಸಂಸ್ಥೆ ಹೇಳಿದೆ.

‘ಲ್ಯಾಂಡರ್ ಚಂದ್ರನ ಮೇಲ್ಮೈ ಮೇಲೆ ಅಪ್ಪಳಿಸಿದ್ದರೆ ಅದಕ್ಕೆ ಹಾನಿಯಾಗಿರಬಹುದೇ?’ ಎಂಬ ಪ್ರಶ್ನೆಗೆ ’ನಮಗೆ ಗೊತ್ತಿಲ್ಲ’ ಎಂದು ಇಸ್ರೋ ಮುಖ್ಯಸ್ಥರು ಉತ್ತರಿಸಿದರು.

ವೇಗ ತಪ್ಪಿದ ಲ್ಯಾಂಡರ್ ತನ್ನ ನಾಲ್ಕು ಕಾಲುಗಳ ಮೇಲೆ ನಿಧಾನವಾಗಿ ಇಳಿಯದೇ ಅಪ್ಪಳಿಸಿರುವ ಸಾಧ್ಯತೆಯೂ ಇದೆ, ಅಂತಹ ಸಂದರ್ಭದಲ್ಲಿ ಅದಕ್ಕೆ ಹಾನಿಯಾಗಲೂ ಬಹುದು ಎಂದು ಬಾಹ್ಯಾಕಾಶ ಅಧಿಕಾರಿಯೊಬ್ಬರು ಹೇಳಿದರು.

‘ಪ್ರಧಾನಿ ಮೋದಿಯವರು ಕೊಟ್ಟ ಪ್ರೋತ್ಸಾಹ ಹಾಗೂ ದೇಶ ನೀಡಿದ ಧನಾತ್ಮಕ ಬೆಂಬಲ’ ಬಗ್ಗೆ ಇಸ್ರೋದ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರೂ ಸಂತಸ ವ್ಯಕ್ತ ಪಡಿಸಿದರು. ‘ಇಂತಹ ಹೊತ್ತಿನಲ್ಲಿ ಇದಕ್ಕಿಂತ ಉತ್ತಮವಾದ ಬೆಂಬಲವನ್ನು ನಾವು ನಿರೀಕ್ಷಿಸಲು ಸಾಧ್ಯವಿರಲಿಲ್ಲ. ಅದ್ಭುತ’ ಎಂಬುದಾಗಿ ಪ್ರಧಾನಿ ನಡೆಯನ್ನು ಕಸ್ತೂರಿರಂಗನ್ ಬಣ್ಣಿಸಿದರು.

ನಾವು ಖಂಡಿತವಾಗಿ ರಾಷ್ಟ್ರ ಮತ್ತು ಪ್ರಧಾನಿಯವರಿಗೆ ಆಭಾರಿಯಾಗಿದ್ದೇವೆ ಎಂದು ಇಸ್ರೋದ ಇನ್ನೊಬ್ಬ ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಹೇಳಿದರು.

September 8, 2019 Posted by | ಇಸ್ರೋ, ಚಂದ್ರ ಲೋಕ, ಚಂದ್ರಯಾನ-2, ಭಾರತ, ರಾಷ್ಟ್ರೀಯ, Chandrayaan-2, Flash News, General Knowledge, India, Moon Walk, Nation, News, Science, Spardha | , , , | Leave a comment

‘ಚಂದ್ರ ಸ್ಪರ್ಶ ಸಂಕಲ್ಪ ಇನ್ನಷ್ಟು ಪ್ರಬಲ: ಪ್ರಧಾನಿ ಮೋದಿ ಆತ್ಮಸ್ಥೈರ್ಯ’

 

This slideshow requires JavaScript.

ಬೆಂಗಳೂರು:  ಭಾರತದ ಚಂದ್ರಯಾನ-2 ಯೋಜನೆ  ಯಶಸ್ಸಿನ ಕೊನೆಯ ಪಾದದ ಅಂತಿಮ ಕ್ಷಣಗಳಲ್ಲಿ  ‘ವಿಕ್ರಮ್’  ಲ್ಯಾಂಡರ್  ಬೆಂಗಳೂರಿನ  ಇಸ್ರೋ  ನಿಯಂತ್ರಣ ಕೇಂದ್ರದೊಂದಿಗಿನ  ಸಂಪರ್ಕವನ್ನು ಕಳೆದುಕೊಂಡ ಕೆಲವೇ  ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ‘2019 ಸೆಪ್ಟೆಂಬರ್ 7ರ ಶನಿವಾರ ಹೊಸ ಅರುಣೋದಯವಾಗಲಿದೆ’  ಎಂದು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳನ್ನು ಹುರಿದುಂಬಿಸಿದರು.

“ನಾಳೆ ಶೀಘ್ರದಲ್ಲೇ  ಹೊಸ ಅರುಣೋದಯವಾಗಲಿದೆ ಮತ್ತು ಅದು ಇನ್ನಷ್ಟು ಪ್ರಕಾಶಮಾನವಾಗಿರುತ್ತದೆ” ಎಂದು ಅವರು ಇಸ್ರೋ ನಿಯಂತ್ರಣ ಕೇಂದ್ರದಲ್ಲಿ  ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ  ಭಾಷಣದಲ್ಲಿ ಹೇಳಿದರು.

ಪ್ರಜ್ಞಾನ್ ರೋವರ್‌ ಸಹಿತವಾದ ವಿಕ್ರಮ್ ಲ್ಯಾಂಡರ್ ನ್ನು ಚಂದ್ರನಲ್ಲಿ ಇಳಿಯುವ  ಹೊತ್ತಿನಲ್ಲಿ ಇಸ್ರೋ  ನಿಯಂತ್ರಣ ಕೇಂದ್ರದಲ್ಲಿದ್ದ ಪ್ರಧಾನಿ, ‘ವಿಕ್ರಮ್’ ಸಂಪರ್ಕ ಕಳೆದುಕೊಂಡ ನಂತರ ಸ್ವಲ್ಪ ಸಮಯದ ನಂತರ ಅಲ್ಲಿಂದ ತಮ್ಮ ವಾಸ್ತವ್ಯ ಕೊಠಡಿಗೆ ತೆರಳಿದರು.

“ಚಂದ್ರನನ್ನು ಸ್ಪರ್ಶಿಸುವ ನಮ್ಮ ಸಂಕಲ್ಪ ನಿಶ್ಚಯವು ಇನ್ನಷ್ಟು ಪ್ರಬಲವಾಗಿದೆ, ನಾವು ಬಹಳ ಹತ್ತಿರ ಬಂದಿದ್ದೇವೆ ಆದರೆ ನಾವು ಹೆಚ್ಚಿನ ನೆಲೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ” ಎಂದು ಮೋದಿ  ಹೊರಡುವ ಮುನ್ನ ವಿಜ್ಞಾನಿಗಳೊಂದಿಗೆ ಮಾತನಾಡುತ್ತಾ ಹೇಳಿದರು.

‘ಈ ಹಿನ್ನಡೆಯು ಭಾರತದ ಬಾಹ್ಯಾಕಾಶ ಯಾತ್ರೆಯ ವೇಗಕ್ಕೆ ಧಕ್ಕೆಯಾಗದಿರಲಿ’ ಎಂದು ಮೋದಿ ಹೇಳಿದರು.

‘ಅಡೆತಡೆಗಳು ಎದುರಾಗಿದೆ ಆದರೆ ಅವುಗಳನ್ನು ಬಗೆ ಹರಿಸುವ ಕಾರ್ಯ  ದುರ್ಬಲಗೊಳ್ಳುವುದಿಲ್ಲ’  ಎಂದು ಅವರು ಹೇಳಿದರು. “ಬಾಹ್ಯಾಕಾಶ ಕಾರ್ಯಕ್ರಮದ ವಿಚಾರದಲ್ಲಿ ಇನ್ನಷ್ಟು ಉತ್ತಮ ಸಾಧನೆಗಳು ಬರಲಿವೆ  ಎಂಬ ವಿಶ್ವಾಸ ನಮಗಿದೆ.” ಎಂದು ಪ್ರಧಾನಿ ನುಡಿದರು.

ಪ್ರಧಾನಿ ಮೋದಿಯವರು  ಭಾರತದ ವಿಜ್ಞಾನಿಗಳನ್ನು ಶ್ಲಾಘಿಸಿದರು ಮತ್ತು ಅವರಿಗೆ ಇಡೀ ದೇಶದ ಬೆಂಬಲ  ಅವರಿಗೆ ಇದೆ  ಎಂದು ಭರವಸೆ ನೀಡಿದರು.

“ನಮ್ಮ ವಿಜ್ಞಾನಿಗಳಿಗೆ ಭಾರತವು ನಿಮ್ಮೊಂದಿಗೆ ಇದೆ ಎಂದು ಹೇಳಲು ನಾನು ಬಯಸುತ್ತೇನೆ. ನೀವು ರಾಷ್ಟ್ರೀಯ ಪ್ರಗತಿಗೆ ನಂಬಲಾಗದ ಕೊಡುಗೆ ನೀಡಿದ ಅಸಾಧಾರಣ ವೃತ್ತಿಪರರು, ”ಎಂದು ಅವರು ಹೇಳಿದರು.

ವಿಕ್ರಮ್ ಲ್ಯಾಂಡರ್ ಇನ್ನೇನು ಚಂದ್ರ ನೆಲ ಸ್ಪರ್ಶಿಸಬೇಕು ಎಂಬ ಹಂತಕ್ಕೆ ತಲುಪಿದ್ದಾಗ, ನಿಯಂತ್ರಣ ಕೇಂದ್ರದ ಜೊತೆ  ಸಂಪರ್ಕ ಕಡಿದು ಹೋದ  ಪರಿಣಾಮವಾಗಿ 2019 ಸೆಪ್ಟೆಂಬರ್ 7ರ ಶನಿವಾರ ನಸುಕಿನಲ್ಲಿ ಚಂದ್ರಯಾನ-2  ಯೋಜನೆ  ನಿರೀಕ್ಷೆಯಂತೆ ಪೂರ್ಣಗೊಳ್ಳದೆ ವಿಜ್ಞಾನಿಗಳಿಗೆ ತೀವ್ರ  ಬಗ್ಗೆ ನಿರಾಶೆ ತೀವ್ರವಾಗಿತ್ತು.   ವಿಕ್ರಮ್ ಲ್ಯಾಂಡರ್‌ನ ಇಳಿಯುವಿಕೆ ಯೋಜಿಸಿದಂತೆ ಪ್ರಗತಿ ಸಾಧಿಸಿತ್ತು ಮತ್ತು ೨.೧ ಕಿ.ಮೀ.ವರೆಗೂ ಯೋಜಿತ ಕಾರ್ಯಸೂಚಿಯಂತೆಯೇ ಅದು ಸಾಗಿತ್ತು.

ಈ ಹಿನ್ನಡೆಯ ಹೊರತಾಗಿಯೂ, ಮೋದಿ ಭಾರತದ ಬಾಹ್ಯಾಕಾಶ ವಿಜ್ಞಾನಿಗಳನ್ನು ಉತ್ತೇಜಿಸಿದರು, “ಎಂತಹ   ಪ್ರತಿಕೂಲ ಪರಿಸ್ಥಿತಿಯಲ್ಲೂ  ಇಸ್ರೋ  ಎಂದಿಗೂ ಯೋಜನೆಯನ್ನು  ಕೈಬಿಡುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆ ಇದು. ನಾನು ನಿನ್ನೊಂದಿಗಿದ್ದೇನೆ. ದೇಶವೂ ನಿಮ್ಮೊಂದಿಗಿದೆ. ಪ್ರತಿಯೊಂದು ಅಡಚಣೆಯು ನಮಗೆ ಹೊಸ ಪಾಠವನ್ನು  ಕಲಿಸುತ್ತದೆ. ” ಎಂದು ಪ್ರಧಾನಿ ಹೇಳಿದರು.

ಕೊನೆಯ ಹಂತದಲ್ಲಿ ಚಂದ್ರಯಾನ -2  ಯೋಜನೆಯ ಪ್ರಕಾರ ಹೋಗದಿರಬಹುದು,  ‘ಆದರೆ ಪ್ರಯಾಣವು ಅಸಾಧಾರಣವಾದುದು’ ಎಂದು ಮೋದಿ ಹೇಳಿದರು.

“ಭಾರತವು ಒಂದು ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಿದ್ದು, ಇಸ್ರೋ ವಿಜ್ಞಾನಿಗಳಿಲ್ಲದೆ ಅದು ಸಾಧ್ಯವಾಗುತ್ತಿರಲಿಲ್ಲ” ಎಂದು ಪ್ರಧಾನಿ  ನುಡಿದರು.

‘ನೀವೆಲ್ಲ ರಾತ್ರಿಯಿಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದೀರಿ. ನೀವು ನಮ್ಮ ಮಾತೃಭೂಮಿಗೆ ಅದ್ಭುತವಾದ ಕೊಡುಗೆ ನೀಡಿದ್ದೀರಿ. ಇಡೀ ದೇಶ ನಿಮ್ಮ ಸಾಧನೆಯನ್ನು ನೋಡಿದೆ. ನಿಮ್ಮ ಸಾಧನೆಯಲ್ಲಿ ಕೊಂಚ ಹಿನ್ನಡೆಯಾಗಿರಬಹುದು. ಆದರೆ, ನಿಮ್ಮ ಕಠಿಣ ಪರಿಶ್ರಮಕ್ಕೆ ನಾವು ಹೆಮ್ಮೆ ಪಡುತ್ತೇವೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಗಳಾಗುವ ಬಗ್ಗೆ ನನಗೆ ನಂಬಿಕೆಯಿದೆ. ಇಡೀ ಭಾರತವೇ ನಿಮ್ಮೊಂದಿಗಿದೆ’ ಎಂದು ಪ್ರಧಾನಿ ಹೇಳಿದರು.

ಬಾಹ್ಯಾಕಾಶ ರಂಗದಲ್ಲಿ ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಕಡಿತದಿಂದ ಅಲ್ಪ ಹಿನ್ನಡೆಯಾಗಿತ್ತು. 48 ದಿನಗಳ ಸುದೀರ್ಘ ಪ್ರಯಾಣದ ಬಳಿಕ ಶನಿವಾರ ನಸುಕಿನಲ್ಲಿ  27 ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್ ಅನ್ನು ತನ್ನೊಡಳಲ್ಲಿ ಇರಿಸಿಕೊಂಡಿದ್ದ 1471 ಕಿಲೋ ಗ್ರಾಂ ತೂಕದ ‘ವಿಕ್ರಂ ಲ್ಯಾಂಡರ್’ ಯಶಸ್ವಿಯಾಗಿ ಚಂದಿರನ ದಕ್ಷಿಣ ಧ್ರುವದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಕೊನೇ ಕ್ಷಣದಲ್ಲಿ ನಿಯಂತ್ರಣ ಕೇಂದ್ರದಿಂದ ತನ್ನ ಸಂಪರ್ಕವನ್ನು ಕಡಿದುಕೊಂಡಿತ್ತು.  ಇದು ಇಸ್ರೋ ವಿಜ್ಞಾನಿಗಳಲ್ಲಿ ನಿರಾಸೆ ಮೂಡಿಸಿತ್ತು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು ಸುದ್ದಿಗೋಷ್ಠಿ ನಡೆಸಿ ಆತ್ಮಸ್ಥೈರ್ಯ ತುಂಬಿದರು.

ಇಸ್ರೋ ಮುಖ್ಯಸ್ಥ ಶಿವನ್ ಗೆ ಸಾಂತ್ವನ

ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದ ಚಂದ್ರಯಾನ 2 ಕೊನೆ ಕ್ಷಣಗಳಲ್ಲಿ ಸಂವಹನ ಕಳೆದುಕೊಂಡು ಗುರಿಸಾಧನೆಯಲ್ಲಿ ವಿಫಲವಾದುದಕ್ಕಾಗಿ ಭಾವುಕರಾಗಿ ಕಣ್ಣೀರಿಳಿಸಿದ  ಇಸ್ರೋ  ಅಧ್ಯಕ್ಷ ಕೆ. ಶಿವನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ತಬ್ಬಿಕೊಂಡು ಸಾಂತ್ವನಗೈದ ಘಟನೆ ಘಟಿಸಿತು.

ಚಂದ್ರಯಾನ 2 ವಿಕ್ರಮ್ ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಈದಿನ  ಬೆಂಗಳೂರು ಇಸ್ರೋ ಕೇಂದ್ರದಿಂದ ಯಲಹಂಕ ವಾಯುನೆಲೆ ಕೇಂದ್ರಕ್ಕೆ ತೆರಳಿದರು. ದೆಹಲಿಗೆ ಹೋಗಲು ಯಲಹಂಕ ವಾಯುನೆಲೆಗೆ ತೆರಳಿದ್ದ ನರೇಂದ್ರ ಮೋದಿ ನಿರ್ಗಮಿಸುವ ವೇಳೆ ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾವುಕರಾಗಿ ನಿಂತಿದ್ದರು. ತಮ್ಮ ಕನಸು ಈಡೇರದ ಕಾರಣ ಹತಾಶೆಯಿಂದ ನಿಂತಿದ್ದ ಶಿವನ್ ಅವರನ್ನು ನೋಡಿದ ಪ್ರಧಾನಿ ನರೇಂದ್ರ ಮೋದಿ ಕೂಡ ಭಾವುಕರಾಗಿ ಶಿವನ್ ಅವರನ್ನು ತಬ್ಬಿ ಹಿಡಿದು ಸಾಂತ್ವನ ಮಾಡಿದರು.

ಪ್ರಧಾನಿ ಮೋದಿ ಕೆ. ಶಿವನ್ ಅವರನ್ನು ತಬ್ಬಿ ಸಾಂತ್ವನ ಮಾಡುತ್ತಿರುವ ವಿಡಿಯೋ ಟ್ವಿಟ್ಟರ್​ನಲ್ಲಿ ವ್ಯಾಪಕವಾಗಿ ಹರಿದಾಡಿತು.  ಇಸ್ರೋ ಸಾಧನೆಗೆ ಟ್ವಿಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಈಗ ಉಂಟಾದ ಹಿನ್ನಡೆಯಿಂದ ವಿಜ್ಞಾನಿಗಳ ಮೇಲಿನ ಗೌರವ ಕಡಿಮೆಯಾಗುವುದಿಲ್ಲ ಎಂದು ಟ್ವೀಟ್ ಮಾಡಿದರು.

ಸಂಪೂರ್ಣ ವಿಫಲವಲ್ಲ

ಕೊನೆಯ ಕ್ಷಣದ ಹಿನ್ನಡೆಯಾಗಿದ್ದರೂ ಚಂದ್ರಯಾನ -2 ಸಂಪೂರ್ಣ ವಿಫಲವೇನೂ ಆಗಿಲ್ಲ. ಚಂದ್ರಕಕ್ಷೆಯಲ್ಲಿರುವ ಅರ್ಬಿಟರ್  ತನ್ನ ಪ್ರದಕ್ಷಿಣೆಯನ್ನು ಮುಂದುವರೆಸಿ ಚಂದ್ರನ ವಿವಿಧ ಮಗ್ಗುಲುಗಳ ಫೋಟೋ ತೆಗೆದು ಕಳುಹಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

September 7, 2019 Posted by | ಇಸ್ರೋ, ಚಂದ್ರ ಲೋಕ, ಚಂದ್ರಯಾನ-2, ಭಾರತ, Chandrayaan-2, India, Science, Space, Spardha | 1 Comment

ಚಂದ್ರ ಲೋಕದಲ್ಲಿ ಭಾರತದ  ‘ವಿಕ್ರಮ’, ಕಡೆ ಕ್ಷಣದಲ್ಲಿ ಸಿಗ್ನಲ್ ಕಡಿತ

This slideshow requires JavaScript.

ಬೆಂಗಳೂರು: ಚಂದ್ರ ನೆಲದ ಸಮೀಪದವರೆಗೂ ಭಾರತದ ‘ಚಂದ್ರಯಾನ-2’  ಬಾಹ್ಯಾಕಾಶ ನೌಕೆಯು 2019 ಸೆಪ್ಟೆಂಬರ್ 07ರ ಶನಿವಾರ ನಸುಕಿನಲ್ಲಿ ಇಳಿಯುವುದರೊಂದಿಗೆ ಭಾರತವು  ಚಂದ್ರಲೋಕದಲ್ಲಿ  ತನ್ನ  ‘ವಿಕ್ರಮ’ವನ್ನು ಮೆರೆಯಿತು.  ನಸುಕಿನ 1.55ರ ವೇಳೆಗೆ  ಚಂದ್ರ ನೆಲದ ಮೇಲೆ ಚಂದ್ರಯಾನ -2ರ ‘ವಿಕ್ರಮ್’ ಲ್ಯಾಂಡರ್  ಚಂದ್ರನ ನೆಲದ  500 ಮೀ  ಸಮೀಪದವರೆಗೆ ಇಳಿದ  ಐತಿಹಾಸಕ ಸಂಭ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾದರು. ಆದರೆ ಆ ಬಳಿಕ ‘ವಿಕ್ರಮ್’ನಿಂದ ಸಿಗ್ನಲ್ ಕಡಿತಗೊಂಡ ಪರಿಣಾಮ ‘ವಿಕ್ರಮ್’ ಭೂ ಸ್ಪರ್ಶ  ಸ್ಪಷ್ಟವಾಗಲಿಲ್ಲ.

ಸಿಗ್ನಲ್ ಕಡಿತಗೊಂಡ ಬಳಿಕ ದತ್ತಾಂಶ ಪರಿಶೀಲನೆಗೆ ತೀರ್ಮಾನಿಸಲಾಗಿದೆ ಎಂದು ಇಸ್ರೋ ಅಧ್ಯಕ್ಷರು ಪ್ರಕಟಿಸಿದರು. ಪ್ರಧಾನಿ ಮೋದಿಯವರು ಎಲ್ಲ ವಿಜ್ಞಾನಿಗಳ ಬೆನ್ನು ತಟ್ಟಿ ಸಾಂತ್ವನ ಹೇಳಿದರು.

ಯಶಸ್ವಿಯಾಗಿ ಚಂದ್ರ ನೆಲದ ಮೇಲೆ ‘ವಿಕ್ರಮ್’ ಇಳಿದದ್ದು ಖಚಿತಗೊಂಡಿದ್ದರೆ ಚಂದ್ರನ ಮೇಲೆ ತನ್ನ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಯುಎಸ್‌ಎಸ್‌ಆರ್, ಅಮೆರಿಕ ಮತ್ತು ಚೀನಾ ದೇಶಗಳ ಸಾಲಿಗೆ ನಾಲ್ಕನೆಯ ರಾಷ್ಟ್ರವಾಗಿ ಭಾರತ ಸೇರ್ಪಡೆಗೊಳ್ಳುತ್ತಿತ್ತು.

ದೇಶದ ವಿವಿಧೆಡೆಗಳಲ್ಲಿ ವಿಶೇಷ ಬಾಹ್ಯಾಕಾಶ ರಸಪ್ರಶ್ನೆಯಲ್ಲಿ ವಿಜೇತರಾದ  60 ಮಂದಿ ವಿದ್ಯಾರ್ಥಿಗಳೊಂದಿಗೆ ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿನ ’ಇಸ್ಟ್ರಾಕ್’ನಲ್ಲಿ ಪ್ರಧಾನಿ  ಚಂದ್ರಯಾನ-2ರ  ಚಂದ್ರ ನೆಲ ಸ್ಪರ್ಶ ವೀಕ್ಷಿಸಿದರು. ‘ವಿಕ್ರಮ್’ ಚಂದ್ರ ನೆಲದ ಬಳಿಗೆ ಸಾಗುತ್ತಿದ್ದಂತೆಯೇ ವಿಜ್ಞಾನಿಗಳ ಸಮೂಹದಿಂದ ಕರತಾಡನದೊಂದಿಗೆ ಹಷೋದ್ಘಾರ ಹೊರಡಿಸಿತ್ತು.

ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ ೨ ಉಪಕರಣಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ ೩ ರಾಕೆಟ್ ಜುಲೈ ೨೨ರಂದು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡ್ಡಯನಗೊಂಡಿತ್ತು.

‘ನಾನು ಜುಲೈ ೨೨ರಂದು ಚಂದ್ರಯಾನ ೨ ಉಡಾವಣೆಗೊಂಡ ಕ್ಷಣದಿಂದಲೂ ಅದಕ್ಕೆ ಸಂಬಂಧಪಟ್ಟ ಮಾಹಿತಿ- ಬೆಳವಣಿಗೆಗಳ ಬಗ್ಗೆ ಅತ್ಯಂತ ಕಾತರದೊಂದಿಗೆ ಗಮನಿಸುತ್ತಿದ್ದೇನೆ. ಈ ಯೋಜನೆಯು ಭಾರತದ ಅತ್ಯುನ್ನತ ಪ್ರತಿಭೆ ಮತ್ತು ಸ್ಥಿರತೆಯ ಚೈತನ್ಯವನ್ನು ಪ್ರದರ್ಶಿಸಲಿದೆ. ಇದರ ಯಶಸ್ಸು ಕೋಟ್ಯಂತರ ಭಾರತೀಯರಿಗೆ ಅನುಕೂಲಕರವಾಗಲಿದೆ’ ಎಂದು 2019 ಸೆಪ್ಟೆಂಬರ್ 06ರ ಶುಕ್ರವಾರ  ಸಂಜೆ ಇಸ್ರೋ ಕೇಂದ್ರಕ್ಕೆ ತಲುಪುತ್ತಿದ್ದಂತೆಯೇ ಪ್ರಧಾನಿ ಹೇಳಿದ್ದರು.

ಚಂದ್ರ ನೆಲದ ಮೇಲೆ ಭಾರತದ ಚಂದ್ರಯಾನವು ಇಳಿಯುವ ಚಾರಿತ್ರಿಕ ಕ್ಷಣವನ್ನು ವೀಕ್ಷಿಸುವಂತೆ ಎಲ್ಲ ಭಾರತೀಯರಿಗೂ ಪ್ರಧಾನಿ ಕರೆ ನೀಡಿದ್ದರು. ‘ಚಂದ್ರಯಾನ-೨ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯವ ವಿಶೇಷ ಕ್ಷಣಗಳನ್ನು ವೀಕ್ಷಿಸುವಂತೆ ನಾನು ಎಲ್ಲರನ್ನೂ ಒತ್ತಾಯಿಸುವೆ. ನಿಮ್ಮ ಫೊಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ. ನಾನು ಅವುಗಳಲ್ಲಿ ಕೆಲವನ್ನು ರಿಟ್ವೀಟ್ ಮಾಡುವೆ’ ಎಂದು ಪ್ರದಾನಿ ಮೋದಿ ಟ್ವೀಟ್ ಮಾಡಿದ್ದರು.

ರಾಷ್ಟ್ರದ ವಿವಿಧ ಕಡೆಗಳಿಂದ ವಿಶೇಷ ಬಾಹ್ಯಾಕಾಶ ರಸಪ್ರಶ್ನೆ (ಕ್ವಿಜ್) ಆಧಾರದಲ್ಲಿ ಆಯ್ಕೆ  ಮಾಡಲಾದ ೬೦ ಮಂದಿ ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಚಂದ್ರಯಾನ -೨ರ ಚಂದ್ರ ನೆಲ ಸ್ಪರ್ಶದ ವೀಕ್ಷಣೆ ಮಾಡಿದರು. ಈ ಚಾರಿತ್ರಿಕ ಕ್ಷಣದ ವೀಕ್ಷಣೆಗಾಗಿ ಭೂತಾನಿನ ಕೆಲವು ವಿದ್ಯಾರ್ಥಿಗಳನ್ನೂ ಬೆಂಗಳೂರಿನ ಇಸ್ರೋ ಕೇಂದ್ರಕ್ಕೆ ಆಹ್ವಾನಿಸಲಾಗಿತ್ತು.

‘ನಾನು ಬೆಂಗಳೂರಿನ ಇಸ್ರೋ ಕೇಂದ್ರದಿಂದ ವಿಶೇಷ ಕ್ಷಣಗಳನ್ನು ವೀಕ್ಷಿಸುವ ಹೊತ್ತಿನಲ್ಲಿ ನನ್ನೊಂದಿಗೆ ಸಾಕ್ಷಿಯಾಗುತ್ತಿರುವ ಕಿರಿಯರು ಸಾಮಾನ್ಯರಲ್ಲ. ಅವರು ನನ್ನ ಸರ್ಕಾರದ ಕುರಿತ ಇಸ್ರೋ ಬಾಹ್ಯಾಕಾಶ ರಸಪ್ರಶ್ನೆಯ ವಿಜೇತರು. ಈ ರಸಪ್ರಶ್ನೆಯಲ್ಲಿ ದೊಡ್ಡ ಪ್ರಮಾಣದ ವಿದ್ಯಾರ್ಥಿ ಸಮೂಹವು ಪಾಲ್ಗೊಂಡದ್ದು ಯುವಕರಿಗೆ ವಿಜ್ಞಾನ ಮತ್ತು ಬಾಹ್ಯಾಕಾಶದಲ್ಲಿ ಇರುವ ಆಸಕ್ತಿಯನ್ನು ತೋರಿಸಿಕೊಟಿದೆ. ಇದು ಮಹಾನ್ ಸೂಚನೆ’ ಎಂದೂ ಮೋದಿ ಟ್ವೀಟ್ ಮಾಡಿದ್ದರು.

ವಿದೇಶಗಳ ಕೆಲವು ಪತ್ರಕರ್ತರನ್ನೂ ಒಳಗೊಂಡಂತೆ ೩೦೦ಕ್ಕೂ ಹೆಚ್ಚು ಪತ್ರಕರ್ತರು ದೇಶದ ವಿವಿಧೆಡೆಗಳಿಂದ ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-೨ರ ಚಂದ್ರ ನೆಲಸ್ಪರ್ಶದ ವರದಿ ಮಾಡಲು ಇಸ್ರೋದ ಇಸ್ಟ್ರಾಕ್ ನಲ್ಲಿ ಜಮಾಯಿಸಿದ್ದರು.

ಅಮೆರಿಕದ ನಾಸಾದ (ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಮಾಜಿ ಗಗನಯಾನಿ ಜೆರ್ರಿ ಮೈಕೆಲ್ ಲಿನೆಗರ್ ಅವರೂ ಶುಕ್ರವಾರ ರಾತ್ರಿ ೧೧.೩೦ರಿಂದ ’ವಿಶೇಷ ಶೋ’ ಸಲುವಾಗಿ ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದರು. ಅವರ ಕಾರ್ಯಕ್ರಮವು ನ್ಯಾಷನಲ್ ಜಿಯೋಗ್ರಫಿಕ್ ನಲ್ಲಿ ನೇರ ಪ್ರಸಾರಗೊಂಡಿತು. ಜೆರಿ ಮೈಕೆಲ್ ಅವರು ಅಮೆರಿಕದ ಬಾಹ್ಯಾಕಾಶ ನೌಕೆಗಳಲ್ಲಿ ಗಗನಯಾನ ಮಾಡಿದ್ದು, ರಶ್ಯಾದ ಮೀರ್ ಬಾಹ್ಯಾಕಾಶ ನಿಲ್ದಾಣದಲ್ಲಿ ೫ ತಿಂಗಳುಗಳನ್ನು ಕಳೆದಿದ್ದರು.

‘ಚಂದ್ರನೆಡೆಗೆ ಇಸ್ರೋದ ರೊಬಾಟಿಕ್ ಮಿಷನ್ ನನ್ನನ್ನು ಪ್ರಭಾವಿತನನ್ನಾಗಿ ಮಾಡಿದೆ. ’ಚಂದ್ರಯಾನ-೨’ ನೇರ ಪ್ರಸಾರವು ನನ್ನ ಕೌತುಕವನ್ನು ಹೆಚ್ಚಿಸಿದೆ’ ಎಂದು ಜೆರಿ ಹೇಳಿದ್ದರು.

‘ಚಂದ್ರಯಾನ-೨ರ ಬಗೆಗಿನ ಭಾರತೀಯರ ಸಂಭ್ರಮವನ್ನು ಹಂಚಿಕೊಳ್ಳುವ ವಿಶೇಷ ಕಾರ್ಯಕ್ರಮಕ್ಕಾಗಿ ಮತ್ತು ಮಹಾನ್ ಕ್ಷಣದ ಸಂಭ್ರಮಾಚರಣೆಗಾಗಿ ಅರ್ಧ ಜಗತ್ತನ್ನೇ ಸುತ್ತಿಕೊಂಡು ನಾನು ಬಂದಿದ್ದೇನೆ. ಭಾರತವು ಮಹಾನ್ ಕ್ಷಣವನ್ನು ನನ್ನೊಂದಿಗೆ ಹಂಚಿಕೊಳ್ಳುವುದು ಎಂದು ನಾನು ಹಾರೈಸಿದ್ದೇನೆ. ಭವಿಷ್ಯವು ಉಜ್ವಲವಾಗಿದೆ ಎಂದು ನನಗೆ ಅನಿಸುತ್ತಿದೆ’ ಎಂದು ಜೆರಿ ಹೇಳಿದ್ದರು.

‘ಚಂದ್ರನೆಲ ಸ್ಪರ್ಶ ಕಾರ್ಯಾಚರಣೆಯ ೧೫ ನಿಮಿಷಗಳು ಈ ಹಿಂದೆಂದೂ ನಡೆಸದ ಕಾರ್ಯಾಚರಣೆಯಾದ್ದರಿಂದ ನಮ್ಮ ಪಾಲಿಗೆ ’ಭಯಾನಕ ಕ್ಷಣ’ಗಳಾಗಿವೆ. ಆದರೆ ಈ ಬಗ್ಗೆ ಆತಂಕವೇನೂ ಇಲ್ಲ. ಇದು ಅದೇ ತಾನೆ ಜನಿಸಿದ ಶಿಶುವನ್ನು ಎಚ್ಚರಿಕೆಯಿಂದ ತೊಟ್ಟಿಲಲ್ಲಿ ಇಡುವಂತಹ ಕೆಲಸ’ ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್ ಮತ್ತು ಇತರ ವಿಜ್ಞಾನಿಗಳು, ಹೇಳಿದರು.

ಎಲ್ಲ ಸೆನ್ಸರುಗಳು, ಕಂಪ್ಯೂಟರುಗಳು, ಕಮಾಂಡ್ ವ್ಯವಸ್ಥೆಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ  ಎಂದು ಅವರು ಎದೆಯುಬ್ಬಿಸಿದ್ದರು.

ಇಸ್ರೋದ ಹೊಸ ಮೈಲಿಗಲ್ಲು

ಭೂಮಿಯ ಉಪಗ್ರಹವಾಗಿರುವ ಚಂದ್ರನ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ದೇಶಗಳು ಪ್ರಯತ್ನಿಸಿವೆ. ಈ ಸಾಲಿನಲ್ಲಿ ಯಶಸ್ವಿಯಾಗಿರುವುದು ಬೆರಳೆಣಿಕೆ ದೇಶಗಳು ಮಾತ್ರ. ಈ ಸಾಲಿನಲ್ಲಿ ಭಾರತವೂ ಇದೆ ಎಂಬುದು ವಿಶೇಷ. ಚಂದ್ರಯಾನ-೧ ಯಶಸ್ಸಿನ ಬಳಿಕ ಚಂದ್ರಯಾನ ೨ ಉಡಾವಣೆಗೊಂಡಿತ್ತು. ಈ ಯೋಜನೆ ಯಶಸ್ಸಿನ ಮೂಲಕ ಇಸ್ರೋ  ಹೊಸ ದಾಖಲೆ ಬರೆಯಿತು…

೨೦೦೮ ಅಕ್ಟೋಬರ್ ೨೨ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-೧ ಉಡಾವಣೆಗೊಂಡಿತ್ತು. ಈ ಯಶಸ್ವಿ ಯೋಜನೆಗೆ ಆದ ವೆಚ್ಚ ಬರೋಬ್ಬರಿ ೩೮೬ ಕೋಟಿ ರೂಪಾಯಿ. ಸುಮಾರು ಒಂದು ವರ್ಷ ಕಾಲ ಈ ಉಪ್ರಗ್ರಹ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಆಗಸ್ಟ್ ೨೮, ೨೦೦೯ರಂದು ಈ ಯೋಜನೆ ಅಂತ್ಯವಾಗಿದೆ ಎಂದು ಇಸ್ರೋ ಘೋಷಿಸಿತ್ತು. ಉಪಗ್ರಹದಲ್ಲಿ ಸೆನ್ಸಾರ್ ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದು ಸೇರಿ ಸಾಕಷ್ಟು ತಾಂತ್ರಿಕ ದೋಷಗಳು ಉಪಗ್ರಹದಲ್ಲಿ ಕಾಣಿಸಿಕೊಂಡಿದ್ದವು.

೩೧೨ ದಿನಗಳ ಕಾಲ ಕಾರ್ಯನಿರ್ವಹಿಸಿದ್ದ ಆ ಉಪಗ್ರಹ ಚಂದ್ರನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಿತ್ತು. ಇಡೀ ಜಗತ್ತಿಗೆ ಜೀವಾಳವಾಗಿರುವ ನೀರು ಚಂದ್ರನಲ್ಲೂ ಇದೆ ಎಂಬುದನ್ನು ಪತ್ತೆ ಹಚ್ಚಿದ ಹೆಗ್ಗಳಿಕೆ ಚಂದ್ರಯಾನ ೧ರದ್ದು.

ಇದಲ್ಲದೆ ಚಂದ್ರನ ಸಾಕಷ್ಟು ಫೋಟೋಗಳನ್ನು ಈ ಉಪಗ್ರಹ ಕಳುಹಿಸಿಕೊಟ್ಟಿತ್ತು. ಅಲ್ಲದೆ ಚಂದಿರನ ಅಂಗಳದಿಂದ  ಭೂಮಿ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸುವ ಚಿತ್ರಗಳನ್ನು ಚಂದ್ರಯಾನ ೧ ಒದಗಿಸಿಕೊಟ್ಟಿತ್ತು.  ಚಂದ್ರನಲ್ಲಿ  ಯಾವ ಯಾವ ಖನಿಜಗಳಿವೆ ಎನ್ನುವುದನ್ನು ಪತ್ತೆ ಹಚ್ಚಿದ ಹೆಚ್ಚುಗಾರಿಕೆ ಈ ಯೋಜನೆಯದ್ದು.

ಚಂದ್ರಯಾನ ೨ ಉಪಗ್ರಹ ಜುಲೈ ೨೨ರಂದು ಗಗನಕ್ಕೆ ಹಾರಿದೆ. ಚಂದ್ರಯಾನ-೨ ಯೋಜನೆಗಾಗಿ ಇಸ್ರೋ ಹೊಸ ಮಾದರಿಯ ನೂತನ ತಂತ್ರಜ್ಞಾನಗಳನ್ನು ಹೊಂದಿರುವ ರಾಕೆಟ್ ಒಂದನ್ನು ನಿರ್ಮಿಸಿತ್ತು. ಇದರ ಮೂಲಕ ಉಪಗ್ರಹವನ್ನು ಭೂ ಕಕ್ಷೆಯಿಂದ ಚಂದ್ರನ ಮೇಲ್ಮೈಗೆ ಉಡಾಯಿಸಲಾಗಿತ್ತು.

ಭಾರತ ಹಾಗೂ ರಶ್ಯಾ ೨೦೦೭ರಲ್ಲಿ ಚಂದ್ರಯಾನ ೨ ಯೋಜನೆ ಸಿದ್ಧಪಡಿಸಲು ಸಹಿ ಹಾಕಿದ್ದವು. ಭಾರತ ಆರ್ಬಿಟರ್ ಹಾಗೂ ರೋವರ್ ಸಿದ್ಧಪಡಿಸುವ ಜವಾಬ್ದಾರಿ ಪಡೆದಿದ್ದರೆ ರಷ್ಯಾ ಲ್ಯಾಂಡರ್ ನೀಡುವುದಾಗಿ ಒಪ್ಪಂದದಲ್ಲಿ ತಿಳಿಸಿತ್ತು. ಆಗಸ್ಟ್ ೨೦೦೯ರಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ರಷ್ಯಾ ಲ್ಯಾಂಡರ್ ನೀಡಲು ವಿಳಂಬ ಮಾಡಿದ್ದರಿಂದ ೨೦೧೩ಕ್ಕೆ ಯೋಜನೆಯನ್ನು ಮುಂದೂಡಲಾಗಿತ್ತು. ನಂತರ ೨೦೧೬ಕ್ಕೆ ಯೋಜನೆಯನ್ನು ನಿಗದಿ ಮಾಡಲಾಗಿತ್ತು. ಕೊನೆಗೆ ರಶ್ಯಾ ಲ್ಯಾಂಡರ್ ನೀಡಲು ವಿಫಲವಾದ್ದರಿಂದ ಭಾರತವೇ ಅದನ್ನು ಸಿದ್ಧಪಡಿಸಿತ್ತು.

ಚಂದ್ರಯಾನ ಹಾದಿ

ಜುಲೈ ೧೫: ಚಂದ್ರಯಾನ ಯೋಜನೆ ಹಾರಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದಕ್ಕೆ ಯೋಜನೆ ಮುಂದೂಡಲ್ಪಟ್ಟಿತ್ತು.

ಜುಲೈ ೨೨: ಜು.೨೨ರಂದು ಮಧ್ಯಾಹ್ನ ೨:೪೩ಕ್ಕೆ ಚಂದ್ರಯಾನ-೨ ಗಗನನೌಕೆ ಹೊತ್ತ ಜಿಎಸ್‌ಎಲ್ವಿ ರಾಕೆಟ್ ನಭಕ್ಕೆ ಹಾರಿತ್ತು. ಶ್ರೀಹರಿಕೋಟಾದ ಸತೀಶ್ ಧವನ್ ಕೇಂದ್ರದಿಂದ ಉಪಗ್ರಹ ಹಾರಿತ್ತು.

ಆಗಸ್ಟ್ ೨೦: ತಿಂಗಳ ಹಿಂದೆ ಆಗಸಕ್ಕೆ ನೆಗೆದಿದ್ದ ಚಂದ್ರಯಾನ ೨ ನೌಕೆಯನ್ನು ಆ.೨೨ರಂದು ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿತ್ತು. ಬೆಳಗ್ಗೆ ೮.೩೦-೯.೩೦ರ ಅವಧಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಚಂದ್ರಯಾನ ೨ ಉಪಗ್ರಹವನ್ನು ಚಂದ್ರನ ಕಕ್ಷೆಗೆ ಸೇರಿಸುವ ಕೆಲಸ ಮಾಡಿತ್ತು. ಇದೊಂದು ಕಷ್ಟದ ಕೆಲಸ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದರು.

ಆಗಸ್ಟ್ ೨೨: ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದ ಚಂದ್ರಯಾನ-೨ ಉಪಗ್ರಹ ಆ.೨೨ರಂದು ಮೊದಲ ಬಾರಿ ಚಂದ್ರನ ಚಿತ್ರಣವನ್ನು ಸೆರೆಹಿಡಿದು ಕಳುಹಿಸಿತ್ತು. ಚಂದ್ರನಿಂದ ೨,೬೫೦ ಕಿ.ಮೀ ದೂರದಿಂದ ಚಂದ್ರನ ಮೇಲ್ಮೆಯನ್ನು “ವಿಕ್ರಮ್ ಲ್ಯಾಂಡರ್” ಸೆರೆಹಿಡಿದಿತ್ತು.

ಆಗಸ್ಟ್ ೩೧: ಚಂದ್ರನ ನಾಲ್ಕನೇ ಕಕ್ಷೆಗೇರುವಲ್ಲಿಯೂ ಚಂದ್ರಯಾನ-೨ ನೌಕೆ ಆ.೩೧ರಂದು ಯಶಸ್ವಿಯಾಗಿತ್ತು.

ಸೆಪ್ಟೆಂಬರ್ ೭: ಚಂದ್ರಯಾನದ ಲ್ಯಾಂಡರ್, ಸೆಪ್ಟೆಂಬರ್ ೭ರ ಮಧ್ಯರಾತ್ರಿ ಸುಮಾರು ೧:೩೦ರಿಂದ ೨:೩೦ರ ನಡುವೆ ಇಳಿಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಘೋಷಿಸಿತ್ತು.

ವಿಶ್ವದ ಯಾವ ರಾಷ್ಟ್ರವೂ ಚಂದ್ರನ ಮತ್ತೊಂದು ಪಾರ್ಶ್ವಮುಖವಾದ ದಕ್ಷಿಣ ಧ್ರುವವವನ್ನು ಅಧ್ಯಯನ ಮಾಡಿಲ್ಲ. ಹಾಗಾಗಿ ಚಂದ್ರಯಾನ-೨ ಇದೇ ಮೊದಲ ಬಾರಿಗೆ ಚಂದ್ರನ ದಕ್ಷಿಣ ಭಾಗದ ಬಗ್ಗೆ ಅಧ್ಯಯನ ನಡೆಸಲಿದೆ.

ಈ ಉಪಗ್ರಹ ೩,೮೭೭ ಕೆಜಿ ತೂಕವಿದೆ. ಅಂದರೆ ಚಂದ್ರಯಾನ ೧ರಲ್ಲಿ ಬಳಕೆ ಮಾಡಿದ ಉಪಗ್ರಹದ ತೂಕಕ್ಕಿಂತ ನಾಲ್ಕು ಪಟ್ಟು ಹೆಚ್ಚಿನ ಭಾರವನ್ನು ಇದು ಹೊಂದಿದೆ. ಈ ಗಗನನೌಕೆಯು ಆರ್ಬಿಟರ್, ವಿಕ್ರಮ್ ಹೆಸರಿನ ಲ್ಯಾಂಡರ್ ಮತ್ತು ಪ್ರಗ್ಯಾನ್ ಹೆಸರಿನ ರೋವರ್ ಅನ್ನು ತನ್ನ ಜೊತೆಗೆ ಹೊತ್ತೊಯ್ಯುತ್ತಿದೆ.

ಈ ಯೋಜನೆಗೆ ತಗುಲುತ್ತಿರುವ ಒಟ್ಟು ವೆಚ್ಛ ೯೭೮ ಕೋಟಿ ರೂಪಾಯಿ. ಅಂದರೆ ಹಾಲಿವುಡ್ಡಿನ  ’ಅವೆಂಜರ್ ಎಂಡ್ಗೇಮ್ ’ ಸಿನಿಮಾ ಬಜೆಟ್ಗಿಂತ ಕಡಿಮೆ ಮೊತ್ತದಲ್ಲಿ ಈ ಯೋಜನೆ ಸಿದ್ಧಗೊಂಡಿದೆ. ’ಅವೆಂಜರ್ ಎಂಡ್ಗೇಮ್ ’ ಸಿನಿಮಾಗೆ ೨೪೦೦ ಕೋಟಿ ರೂ. ವೆಚ್ಛ ಮಾಡಲಾಗಿತ್ತು. ೩೮೬ ಕೋಟಿ ರೂಪಾಯಿ ಬಜೆಟಿನಲ್ಲಿ ಚಂದ್ರಯಾನ ೧ ಯೋಜನೆ ಸಿದ್ಧಗೊಂಡಿತ್ತು.

ಈ ಉಪಗ್ರಹ ಟೆರ್ರೇನ್ ಮ್ಯಾಪಿಂಗ್ ಕ್ಯಾಮರಾ ೨ ಅನ್ನು ಹೊಂದಿದೆ. ಚಂದ್ರನ ಮೇಲಿಳಿಯುವ ೨೦ ಕೆಜಿ ತೂಕದ ರೋವರ್, ಚಂದ್ರನ ಮೇಲೆ ಸಂಚಾರ ನಡೆಸಿ ಅಲ್ಲಿಯ ಹವಾಮಾನ, ಅಲ್ಲಿನ ಕಲ್ಲು ಮತ್ತು ಮಣ್ಣಿನ ಬಗ್ಗೆ ಮಾಹಿತಿ ಸಂಗ್ರಹಿಸಿ ವಿಶ್ಲೇಷಿಸುತ್ತದೆ. ನಂತರ ಅದನ್ನು ಆರ್ಬಿಟರ್ ಮೂಲಕ ಭೂಮಿಗೆ ಕಳುಹಿಸುತ್ತದೆ. ಲ್ಯಾಂಡರ್-ರೋವರ್‌ನ ಆಯುಷ್ಯ ೧೪ ದಿನಗಳಿದ್ದರೆ ಆರ್ಬಿಟರ್ ೧ ವರ್ಷದವರೆಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಈ ವರೆಗೆ ಚಂದ್ರನಲ್ಲಿಗೆ ರಶ್ಯಾ ಅಮೆರಿಕ ಮತ್ತು ಚೀನಾ ಈ ಮೂರೇ ರಾಷ್ಟ್ರಗಳು ರೋವರ್ ಕಳುಹಿಸಿವೆ. ಈಗ ಈ ಸಾಲಿಗೆ ಭಾರತ ಕೂಡ ಸೇರ್ಪಡೆಯಾಯಿತು. ಈ ಯೋಜನೆ ಯಶಸ್ವಿನೊಂದಿಗೆ  ಚಂದ್ರನ ದಕ್ಷಿಣ ಧ್ರುವ ಪ್ರದೇಶಕ್ಕೆ  ಉಪಗ್ರಹ ಕಳುಹಿಸಿದ ಭೂಮಿಯ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಯಿತು.

ಚಂದ್ರಯಾನ 2ರ  ‘ವಿಕ್ರಮ್’ ಚಂದ್ರನೆಲ ಸ್ಪರ್ಶದ  ನೇರ ಪ್ರಸಾರಕ್ಕೆ ಈ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ

 

07 chandrayaan 2 vikram

 

 

September 6, 2019 Posted by | ಚಂದ್ರ ಲೋಕ, ಚಂದ್ರಯಾನ-2, Flash News, General Knowledge, Moon Walk, News, Science, Space, Spardha, Video | 2 Comments

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ