SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮುಂಬೈಯ ಆರೇ ಕಾಲೋನಿ: ಮೆಟ್ರೋಕಾರ್ ಶೆಡ್‌ಗಾಗಿ ಮರಗಳಿಗೆ ಕೊಡಲಿ


This slideshow requires JavaScript.

ತೀವ್ರ ಪ್ರತಿಭಟನೆ, ೩೮ ಜನರ ಸೆರೆ, ಬಂಧಿತರ ಜಾಮೀನಿಗೆ ನಕಾರ,
ತಡೆ ಕೋರಿದ ಹೊಸ ಅರ್ಜಿಗೂ ತಿರಸ್ಕಾರ

ಮುಂಬೈ:  ಮಹಾನಗರದ ಆರೇ ಕಾಲೋನಿಯಲ್ಲಿ ಮುಂಬೈ ಮೆಟ್ರೋ ರೈಲು ಕಾರ್ಪೋರೇಷನ್ನಿನ (ಎಂಎಂಆರ್‌ಸಿ) ಮೆಟ್ರೋ ಕಾರು ಶೆಡ್ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳ ನಾಶವನ್ನು ವಿರೋಧಿಸಿ ಪ್ರತಿಭಟಿಸಿದ ೩೮ ಮಂದಿಯನ್ನು ಪೊಲೀಸರು  2019 ಅಕ್ಟೋಬರ್ 05ರ ಶನಿವಾರ ಬಂಧಿಸಿದ್ದು, ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. ಇದರ ಜೊತೆಗೆ ಮರಗಳ ನಾಶಕ್ಕೆ ತಡೆ ಕೋರಿ ಪರಿಸರ ಕಾರ್ಯಕರ್ತರು ಸಲ್ಲಿಸಿದ ಹೊಸ ಅರ್ಜಿಯನ್ನೂ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತು.

ಮರ ಕಡಿಯುವುದನ್ನು ಪ್ರತಿಭಟಿಸಿದ ೩೮ ಮಂದಿ ಪರಿಸರ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಅವರಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು. ಇವರ ಹೊರತಾಗಿ ೫೫ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈಮಧ್ಯೆ ಆರೇ ಕಾಲೋನಿಯಲ್ಲಿ ಮರಗಳನ್ನು ಕಡೆಯುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವುದರ ನಡುವೆ ಮರಕಡಿಯಲು ಶುಕ್ರವಾರ ಒಪ್ಪಿಗೆ ನೀಡಿದ್ದ ಬಾಂಬೆ ಹೈಕೋರ್ಟ್, ಮರ ಕಡಿಯುವುದಕ್ಕೆ ತಡೆಯಾಜ್ಞೆ ಕೋರಿ ಪರಿಸರವಾದಿಗಳು ಹೊಸದಾಗಿ ಸಲ್ಲಿಸಿದ ಅರ್ಜಿಯನ್ನೂ  ಈದಿನ  ತಿರಸ್ಕರಿಸಿತು.

“ಮರಗಳನ್ನು ಕಡಿಯಲು ಮುನಿಸಿಪಲ್ ಕಾರ್ಪೋರೇಷನ್ನಿನ  ಮರ ಪ್ರಾಧಿಕಾರವು ಸೆಪ್ಟೆಂಬರ್ ೧೩ರಂದು ಅನುಮತಿ ನೀಡಿತ್ತು. ಹೈಕೋರ್ಟ್ ಮರ ಕಡಿಯುವುದರ ವಿರುದ್ಧ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿದ್ದಲ್ಲದೆ, ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ೫೦,೦೦೦ ರೂಪಾಯಿ ದಂಡವನ್ನೂ ವಿಧಿಸಿದೆ’ ಎಂದು ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಹೇಳಿದರು.

‘ಅವರ ಚಟುವಟಿಕೆಗಳು ಅಕ್ರಮವಷ್ಟೇ ಅಲ್ಲ, ಭಂಡತನದ್ದೂ ಆಗಿವೆ. ನೀವು ನ್ಯಾಯಾಲಯದಲ್ಲಿ ಸೋತರೆ, ಗೌರವಪೂರ್ವಕವಾಗಿ ಅದನ್ನು ಅಂಗೀಕರಿಸುವುದು ಒಳ್ಳೆಯದು, ಬೀದಿಗೆ ಒಯ್ಯುವುದಲ್ಲ’ ಎಂದು ಆಕೆ ಟ್ವೀಟ್ ಮಾಡಿದರು.

ಆರೇಯಲ್ಲಿ ಮರಗಳನ್ನು ಕಡಿಯಲು ಹೊಸದಾಗಿ ಅನುಮತಿ ಪಡೆಯಬೇಕು ಎಂಬ ಪರಿಸರವಾದಿಗಳ ಪ್ರತಿಪಾದನೆಯನ್ನು ಮುಂಬೈ ಮೆಟ್ರೋ ರೈಲು ನಿಗಮವು (ಎಂಎಂಆರ್‌ಸಿ) ತಳ್ಳಿಹಾಕಿತು.

ಹಿಂದಿನ ದಿನ ತಡರಾತ್ರಿ ಎಂಎಂಆರ್‌ಸಿಯು ಮುಂಬೈ ಮೆಟ್ರೋದ ಮೂರನೇ ಹಂತಕ್ಕಾಗಿ ಕಾರು ಶೆಡ್ ನಿರ್ಮಿಸಲು ಕಡಿಯಲು ಆರಂಭಿಸಿದಾಗ ಆರೇ ಕಾಲೋನಿಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಅವರು ಸರಣಿ ಟ್ವೀಟ್‌ಗಳ ಮೂಲಕ ಪರಿಸರವಾದಿಗಳು ನ್ಯಾಯಾಲಯದಲ್ಲಿ ತಮಗೆ ಆಗಿರುವ ಪರಾಭವವನ್ನು ಗೌರವಪೂರ್ವಕವಾಗಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಮೆಟ್ರೋ ಯೋಜನೆಗಾಗಿ ೨,೫೦೦ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನ್ಯಾಯಾಲಯ ಒಪ್ಪಿಗೆ ನೀಡಿದ ಒಂದು ದಿನದ ಬಳಿಕ ಪ್ರತಿಭಟನಕಾರರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಆರೇಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಯಿತು.

ಆರೇ ಪ್ರದೇಶವು ಕಾಡು ಎಂಬುದಾಗಿ ಮಾನ್ಯ ಮಾಡಲು ಹೈಕೋರ್ಟ್  ಅಕ್ಟೋಬರ್ 4ರ ಶುಕ್ರವಾರ ನಿರಾಕರಿಸಿ, ಅಧಿಕಾರಿಗಳಿಗೆ ಮುಂಬೈ ಮೆಟ್ರೋಕ್ಕಾಗಿ ಶೆಡ್ ನಿರ್ಮಿಸಲು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶವನ್ನು ತತ್ ಕ್ಷಣವೇ ಪಾಲಿಸಿದ ಅಧಿಕಾರಿಗಳು ಶನಿವಾರ ನಸುಕಿನ ೩.೧೫ರ ವೇಳೆಯಲ್ಲಿ ಪೊಲೀಸರ ನೆರವಿನೊಂದಿಗೆ ಸುಮಾರು ೨೦೦ ಮರಗಳನ್ನು ಕಡೆದಿದ್ದಾರೆ ಎಂದು ಪರಿಸರ ಕಾರ್‍ಯಕರ್ತರು ಆಪಾದಿಸಿದ್ದಾರೆ.

ಇದರ ಬೆನ್ನಲ್ಲೇ ಆರೇ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿತು. ವಿರೋಧ ಪಕ್ಷಗಳು ಮಾತ್ರವೇ ಅಲ್ಲ, ಬಿಜಿಪಿಯ ಮಹಾರಾಷ್ಟ್ರದ ಮಿತ್ರ ಪಕ್ಷ ಶಿವಸೇನೆ ಕೂಡಾ ಸರ್ಕಾರದ ನಿರ್ಧಾರವನ್ನು ಟೀಕಿಸಿತು. ಪೊಲೀಸರು ಬಂಧಿಸಿರುವ ಪ್ರತಿಭಟನಕಾರರಲ್ಲಿ ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಕೂಡಾ ಸೇರಿದ್ದಾರೆ. ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ’ನಮ್ಮ ಸರ್ಕಾರವು ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿದೆ ಮತ್ತು ಮರಗಳ ಈ ಕೊಲೆಗಡುಕರನ್ನು ಏನು ಮಾಡಬೇಕು ಎಂದು ನಾವು ನೋಡುತ್ತೇವೆ’ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉದ್ಧವ್ ಠಾಕ್ರೆ ಪುತ್ರ ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಕೂಡಾ ಮರಗಳನ್ನು ಕಡಿಯುವ ಕ್ರಮವನ್ನು ಖಂಡಿಸಿದರು.

ಮುಂಬೈ ಮೆಟ್ರೋ ನಿಗಮವು ಅತ್ಯಂತ ತ್ವರಿತವಾಗಿ ಮರಗಳನ್ನು ಕಡಿದು ಆರೇ ಪರಿಸರಕ್ಕೆ ಹಾನಿ ಉಂಟುತ್ತಿರುವುದು ನಾಚಿಕೆಗೇಡು ಮತ್ತು ಭ್ರಮನಿರಸನದಾಯಕ. ಈ ಅಧಿಕಾರಿಗಳನ್ನು ಪಾಕ್ ಆಕ್ರಮಿಕ ಕಾಶ್ಮಿರದಲ್ಲಿ ನಿಯೋಜಿಸಿ, ಮರಗಳನ್ನು ಕಡಿಯುವ ಬದಲಿಗೆ ಭಯೋತ್ಪಾದನಾ ಶಿಬಿರಗಳನ್ನು ನಾಶ ಪಡಿಸುವ ಹೊಣೆಗಾರಿಕೆ ವಹಿಸಿದರೆ ಹೇಗೆ?’ ಎಂದು ಟ್ವೀಟ್ ಮಾಡಿದರು.

ಈ ಕೋಲಾಹಲದ ಮಧ್ಯೆ ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು ದೆಹಲಿ ಹಾಗೂ ಮುಂಬೈ ಮಧ್ಯೆ ಕೆಲವು ಸಾಮ್ಯತೆಗಳಿವೆ ಎಂದು ಪ್ರತಿಪಾದಿಸಿದರು. ’ಬಾಂಬೆ ಹೈಕೋರ್ಟ್ ಆರೇಯು ಕಾಡು ಅಲ್ಲ ಎಂಬುದಾಗಿ ತೀರ್ಪು ನೀಡಿದೆ. ದೆಹಲಿಯಲ್ಲಿ ಮೊದಲ ಮೆಟ್ರೋ ನಿಲ್ದಾಣ ನಿರ್ಮಿಸುವಾಗ ೨೦-೨೫ ಮರಗಳನ್ನು ಕಡಿಯಲಾಗಿತ್ತು. ಜನರು ಆಗಲೂ ಪ್ರತಿಭಟಿಸಿದ್ದರು. ಆದರೆ ಕಡಿದ ಪ್ರತಿಯೊಂದು ಮರಕ್ಕೆ ಬದಲಿಯಾಗಿ ೫ ಮರಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ಸಚಿವರು ಹೇಳಿದರು.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆ ಜೊತೆಯಾಗಿ ಸಾಗಬಲ್ಲುದು ಎಂಬುದಕ್ಕೆ ದೆಹಲಿ ಉತ್ತಮ ಉದಾಹರಣೆಯಾಗಿದೆ. ಮುಂಬೈಯಲ್ಲೂ ಇದು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

೧,೨೮೭ ಹೆಕ್ಟೇರ್ ವ್ಯಾಪ್ತಿಯ ಆರೇ ಕಾಲೋನಿ ಮೆಟ್ರೋಪಾಲಿಟನ್ ನಗರದ ಪ್ರಮುಖ ಹಸಿರು ತಾಣವಾಗಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕಿಗೆ ಸೇರಿಕೊಂಡಂತಿರುವ ಪ್ರದೇಶವಾಗಿದೆ. ಹಲವಾರು ಬಾಲಿವುಡ್ ಗಣ್ಯರು ಮತ್ತು ರಾಜಕಾರಣಿಗಳು ಕೂಡಾ ಆರೇ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಪರಿಸರವಾದಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಹಸಿರುಮಯವಾಗಿದೆ ಎಂಬ ಕಾರಣಕ್ಕಾಗಿ ಆರೇಯನ್ನು ಕಾಡು ಎಂಬುದಾಗಿ ಘೋಷಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಸೆಪ್ಟಂಬರ್ ೨೦ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಯೋಜನೆಯು ಮುಂಬೈ ಮಹಾನಗರಕ್ಕೆ ಅತ್ಯಂತ ಅಗತ್ಯವಾದ ಯೋಜನೆಯಾಗಿದ್ದು ದೂರಗಾಮೀ ಮಹತ್ವವನ್ನು ಹೊಂದಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ನಿಯಮಿತವು ಪ್ರತಿಪಾದಿಸಿದೆ. ’ಸ್ಥಳೀಯ ಉಪನಗರ ರೈಲುಗಳಲ್ಲಿ ಜನಸಂದಣಿಯಿಂದಾಗಿ ಪ್ರತಿದಿನ ೧೦ ಪ್ರಯಾಣಿಕರು ಸಾವನ್ನಪ್ಪುತ್ತಾರೆ. ಮೆಟ್ರೋ ಯೋಜನೆಯು ಈ ಜನಸಂದಣಿಯ ಒತ್ತಡವನ್ನು ನಿವಾರಿಸಲಿದೆ’ ಎಂದು ಎಂಎಂಆರ್‌ಸಿಎಲ್ ವಕೀಲ ಅಶುತೋಶ್ ಕುಂಭಕೋಣಿ ಹೇಳಿದರು.

ಪತ್ರಿಕಾಹೇಳಿಕೆಯೊಂದನ್ನು ನೀಡಿರುವ ಪೊಲೀಸರು ಪ್ರತಿಭಟಿಸುತ್ತಿದ್ದ ೧೦೦ರಿಂದ ೨೦೦ರಷ್ಟು ಜನರ ಪೈಕಿ ಕೆಲವರು ಪೊಲೀಸ್ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದರು ಮತ್ತು ಹಲ್ಲೆ ನಡೆಸಿದರು. ಇದನ್ನು ಅನುಸರಿಸಿ ೬ ಮಹಿಳೆಯರು ಸೇರಿದಂತೆ ೨೯ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಅಸಂಖ್ಯಾತ ಪ್ರತಿಭಟನಕಾರರನ್ನು ಬಲವಂತವಾಗಿ ಆರೇ ಚೆಕ್ ಪೋಸ್ಟಿನಿಂದ ತೆರವುಗೊಳಿಸಿ ಗೋರೆಗಾಂವ್ ಸ್ಥಳೀಯ ಪೊಲೀಸ್ ಠಾಣೆಗೆ ಒಯ್ಯಲಾಯಿತು ಎಂದು ಪೊಲೀಸರು ಹೇಳಿದರು.

ಇದಕ್ಕೆ ಮುನ್ನ ಬೆಳಗ್ಗೆ ಪೊಲೀಸರು ಪ್ರತಿಭಟನಕಾರರು ಆರೇ ಕಾಲೋನಿ ಕಡೆಗೆ ಬಾರದಂತೆ ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿದ್ದರು.

ಮರ ಕಡಿಯುವ ಕಾರ್‍ಯಾಚರಣೆಗೆ ಕಾಂಗ್ರೆಸ್ ಪಕ್ಷವು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ. ’ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಸಂರಕ್ಷಣೆ ಬಗ್ಗೆ ’ಡಬಲ್ ಸ್ಟ್ಯಾಂಡರ್ಡ್’ ಹೊಂದಿದ್ದಾರೆ ಎಂದು ಅದು ಟೀಕಿಸಿತು.

’ಪರಿಸರ ಸಂರಕ್ಷಣೆಯ ಯೋಧ ಎಂಬಂತೆ ಜಾಗತಿಕ ವೇದಿಕೆಗಳಲ್ಲಿ ತಮ್ಮನ್ನು ಬಿಂಬಿಸಿಕೊಂಡಿರುವ ಪ್ರಧಾನಿ ಮೋದಿಯವರ ಪರಿಸರ ಸಂರಕ್ಷಣೆಯ ಪೊಳ್ಳುತನ ಅನಾವರಣಗೊಂಡಿದೆ. ದೇಶದಲ್ಲಿ ಅವರ ಸರ್ಕಾರದ ಕ್ರಮಗಳು ಸಂಪೂರ್ಣ ವಿರುದ್ಧ’ ಎಂದು ಕಾಂಗ್ರೆಸ್ ಟೀಕಿಸಿತು.

October 5, 2019 - Posted by | ಭಾರತ, ರಾಷ್ಟ್ರೀಯ, environment /endangered species, Finance, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha | , , , , , , , , , , , , ,

2 Comments »

  1. […] ಆರೇ ಕಾಲೋನಿಯಲ್ಲಿ ಮರ ಕಡಿಯುವುದರ ವಿರುದ್ಧ…ಯ ಕಾಲದಲ್ಲಿ ಬಂಧಿತರಾದ ೨೯ ಮಂದಿ ಪರಿಸರವಾದಿಗಳಿಗೆ ಸ್ಥಳೀಯ ನ್ಯಾಯಾಯವು ಈದಿನ  ಶರತ್ತಿನ ಜಾಮೀನು ಮಂಜೂರು ಮಾಡಿತು.  ಮತ್ತೆ ಪ್ರತಿಭಟನೆಗೆ ಇಳಿಯದಂತೆ ಬಂಧಿತರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡುತ್ತಾ ನಿರ್ದೇಶಿಸಿತು. […]

    Pingback by ಆರೇ ಕಾಲೋನಿ ಮರಗಳಿಗೆ ಕೊಡಲಿ: ಸೋಮವಾರ ಸುಪ್ರೀಂ ವಿಶೇಷ ವಿಚಾರಣೆ « SPARDHA | October 6, 2019 | Reply

  2. […] ೪ ರಂದು ಬಾಂಬೆ ಹೈಕೋರ್ಟ್ ಆರೇ ಕಾಲೊನಿಯನ್ನು ಅರಣ್ಯವೆಂದು ಘೋಷಿಸಲು […]

    Pingback by ಆರೇ ಕಾಲೋನಿ ಮರಗಳಿಗೆ ‘ಸುಪ್ರೀಂ ‘ ರಕ್ಷಣೆ, ಯಥಾಸ್ಥಿತಿಗೆ ಆದೇಶ « SPARDHA | October 7, 2019 | Reply


Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ