SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ್ದ ಪಾಕ್ ವಾಯುಪಡೆ

17 spice-jet-paksitan
ಸೆಪ್ಟೆಂಬರಿನಲ್ಲಿ ಘಟಿಸಿದ ಘಟನೆ ತಡವಾಗಿ ಬೆಳಕಿಗೆ

ನವದೆಹಲಿ: ದೆಹಲಿಯಿಂದ ಆಫ್ಘಾನಿಸ್ಥಾನದ ಕಾಬೂಲಿಗೆ  ೧೨೦ ಪ್ರಯಾಣಿಕರನ್ನು ಹೊತ್ತು ಹಾರುತ್ತಿದ್ದ ಸ್ಪೈಸ್ ಜೆಟ್ ವಿಮಾನವನ್ನು ಪಾಕ್ ವಾಯುಪಡೆ  ಸೆಪ್ಟೆಂಬರ್ ೨೩ರಂದು ಅಡ್ಡಗಟ್ಟಿದ್ದ ಪ್ರಕರಣದ ತಡವಾಗಿ 2019 ಅಕ್ಟೋಬರ್  17ರ ಗುರುವಾರ ಬೆಳಕಿಗೆ ಬಂದಿತು.

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನಗಳು ಅದನ್ನು ಪಾಕಿಸ್ತಾನದ ಗಡಿ ದಾಟುವವರೆಗೆ ಅದನ್ನು ಹಿಂಬಾಲಿಸಿದ್ದವು ಎಂದು ಮಾಧ್ಯಮವೊಂದು ವರದಿ ಮಾಡಿತು.

ಸ್ಪೈಸ್ ಜೆಟ್ ಸಂಸ್ಥೆಯ ’ಬೋಯಿಂಗ್ ೭೩೭’ ವಿಮಾನದ ’ಕರೆ ಸಂಕೇತ’ (ಕಾಲ್ ಸೈನ್) ವಿಚಾರದಲ್ಲಿ ಆದ ಗೊಂದಲದಿಂದಾಗಿ ಪಾಕ್ ವಾಯುಪಡೆ ತುರ್ತಾಗಿ ತನ್ನ ಯುದ್ಧ ವಿಮಾನಗಳನ್ನು ನಿಯೋಜಿಸಿತು ಎಂದು ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶಕರ ಕಚೇರಿ (ಡಿಜಿಸಿಎ) ಅಧಿಕಾರಿಗಳು ಹೇಳಿದರು.

ಸ್ಪೈಸ್ ಜೆಟ್ ವಿಮಾನವನ್ನು ಅಡ್ಡಗಟ್ಟಿದ ಪಾಕ್ ವಾಯುಪಡೆಯ ಅತ್ಯಾಧುನಿಕ ಎಫ್-೧೬ ಯುದ್ಧವಿಮಾನಗಳು ಹಾರಾಟದ ಎತ್ತರ ತಗ್ಗಿಸುವಂತೆ ಸೂಚಿಸಿದವು. ನಂತರ ಸ್ಪೈಸ್ ಜೆಟ್ ವಿಮಾನದ ಪೈಲಟ್, ಇದು ವಾಣಿಜ್ಯ ವಿಮಾನ ಎಂದು ಪಾಕ್ ವಾಯುಪಡೆಯ ಪೈಲಟ್‌ಗಳಿಗೆ ಸ್ಪಷ್ಟಪಡಿಸಿದರು ಎಂದು ಸುದ್ದಿ ಸಂಸ್ಥೆಯ ವರದಿ ತಿಳಿಸಿತು.

ಸ್ಪೈಸ್ ಜೆಟ್ ಪೈಲಟ್ ಸ್ಪಷ್ಟನೆಯ ಬಳಿಕ ವಿಮಾನಕ್ಕೆ ಹಾರಾಟ ಮುಂದುವರೆಸಲು ಪಾಕಿಸ್ತಾನ ಅನುಮತಿ ನೀಡಿತು. ಅಷ್ಟೇ ಅಲ್ಲ ವಿಮಾನವು ಪಾಕಿಸ್ತಾನದ ಗಡಿ ದಾಟುವವರೆಗೂ ಅದನ್ನು ಸುತ್ತುವರೆದಿತ್ತು ಎಂದು ಸುದ್ದಿ ಮೂಲಗಳು ಹೇಳಿವೆ. ಏನಿದ್ದರೂ ಈ ಘಟನೆಯ ಬಗ್ಗೆ ಸ್ಪೈಸ್ ಜೆಟ್  ಈವರೆಗೆ ಏನ್ನೂ ಹೇಳಿಲ್ಲ.

‘ಪ್ರತಿ ವಿಮಾನಯಾನ ಸಂಸ್ಥೆಗೂ ಒಂದು ಸಂಕೇತ (ಕೋಡ್) ಇರುತ್ತದೆ. ಸ್ಪೈಸ್ ಜೆಟ್‌ಗೆ ’ಎಸ್ಜಿ’ ಎಂಬ ಸಂಕೇತ ಇದೆ. ಇದನ್ನು ಪಾಕಿಸ್ತಾನದ ವಿಮಾನಯಾನ ನಿಯಂತ್ರಣ ಅಧಿಕಾರಿಗಳು ’ಐಎ’ ಎಂದು ತಪ್ಪಾಗಿ ಅರ್ಥೈಸಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿಯೇ ಐಎ ಎನ್ನುವುದನ್ನು ಇಂಡಿಯನ್ ಏರ್ ಫೋರ್ಸ್ ಎಂದು ತಪ್ಪಾಗಿ ಭಾವಿಸಿ ಪಾಕಿಸ್ತಾನದ ವಾಯುಪಡೆಗೆ ಸೂಚನೆ ರವಾನೆಯಾಗಿರಬಹುದು ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳ ಹೇಳಿದರು ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು.

ವಿಷಯವು ಅತ್ಯಂತ ಸೂಕ್ಷ್ಮ ಸ್ವರೂಪದ್ದಾದ ಕಾರಣ ಹೆಚ್ಚಿನ ವಿವರಗಳನ್ನು ನೀಡಲು ಡಿಜಿಸಿಎ ಅಧಿಕಾರಿಗಳು ನಿರಾಕರಿಸಿದರು.

ಫೆಬ್ರುವರಿ ೨೬ರಂದು ಭಾರತದ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ವಾಯುದಾಳಿ ನಡೆಸಿದ ಬಳಿಕ ಪಾಕಿಸ್ತಾನವು ಭಾರತಕ್ಕೆ ತನ್ನ ವಾಯುಮಾರ್ಗ ಬಳಸದಂತೆ ನಿಷೇಧ ಹೇರಿತ್ತು. ಆದರೆ ಜುಲೈ ತಿಂಗಳಲ್ಲಿ ತನ್ನ ವಾಯುಮಾರ್ಗವನ್ನು ಭಾಗಶಃ ತೆರೆದಿತ್ತು

ವಾಯುಮಾರ್ಗ ನಿರ್ಬಂಧಗಳ ಪರಿಣಾಮವಾಗಿ ತಮ್ಮ ರಾಷ್ಟವು ೫೦ ಮಿಲಿಯನ್ (೫ ಕೋಟಿ) ಡಾಲರ್‌ನಷ್ಟು ನಷ್ಟ ಅನುಭವಿಸಿತು ಎಂದು ಕೆಲವು ದಿನಗಳ ಬಳಿಕ ಪಾಕಿಸ್ತಾನದ ವಿಮಾನಯಾನ ಸಚಿವರು ಹೇಳಿದ್ದರು.

ಕಳೆದ ತಿಂಗಳು ಪಾಕಿಸ್ತಾನವು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕ ಪ್ರವಾಸಕ್ಕೆ ತನ್ನ ವಾಯುಮಾರ್ಗ ಬಳಸಲು ನಿರಾಕರಿಸಿತು. ಇದೇ ರೀತಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಐಸ್ ಲ್ಯಾಂಡ್ ಪಯಣ ಕಾಲದಲ್ಲೂ ತನ್ನ ವಾಯುಮಾರ್ಗ ಬಳಸಲು ಅನುಮತಿ ನಿರಾಕರಿಸಿತ್ತು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸಿದ ಭಾರತದ ಇತ್ತೀಚಿನ ಕ್ರಮವನ್ನು ವಿರೋಧಿಸಿ ಭಾರತದ ಪ್ರಧಾನಿ ಮತ್ತು ರಾಷ್ಟ್ರಪತಿಯವರ ವಿಮಾನ ಪಾಕಿಸ್ತಾನದ ವಾಯುಮಾರ್ಗ ಮೂಲಕ ಸಾಗದಂತೆ ನಿರ್ಬಂಧಿಸಲಾಯಿತು ಎಂದು  ಪಾಕ್ ವಿದೇಶಾಂಗ ಸಚಿವ ಮೆಹಮೂದ್ ಖುರೇಶಿ ಹೇಳಿದ್ದರು.

ಪಾಕಿಸ್ತಾನದ ನಿರ್ಧಾರಕ್ಕೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ವಿಷಾದ ವ್ಯಕ್ತ ಪಡಿಸಿತ್ತು. ವಿವಿಐಪಿಗಳ ವಿಶೇಷ ವಿಮಾನ ಹಾರಾಟಕ್ಕೆ ಯಾವುದೇ ರಾಷ್ಟ್ರ ಸಾಮಾನ್ಯವಾಗಿ ತನ್ನ ಅನುಮತಿಯನ್ನು ನೀಡುತ್ತದೆ.

‘ಅಂತಾರಾಷ್ಟ್ರೀಯ ಪದ್ಧತಿಯಿಂದ ವಿಮುಖವಾಗುವ ತನ್ನ ನಿರ್ಣಯವನ್ನು ಪಾಕಿಸ್ತಾನ ಪರಿಶೀಲಿಸಿಕೊಳ್ಳಬೇಕು ಮತ್ತು ಏಕಪಕ್ಷೀಯ ನಿರ್ಣಯಗಳನ್ನು ಕೈಗೊಳ್ಳಲು ಕಾರಣಗಳನ್ನು ತಪ್ಪಾಗಿ ಊಹಿಸಿಕೊಳ್ಳುವ ತನ್ನ ಹಳೆಯ ಚಾಳಿಯನ್ನು ಮರುಪರಿಶೀಲನೆ ಮಾಡಿಕೊಳ್ಳಬೇಕು’ ಎಂದು ವಕ್ತಾರ ರವೀಶ್ ಕುಮಾರ್ ಹೇಳಿದ್ದರು.

October 17, 2019 Posted by | Auto World, ಆಟೋ ಜಗತ್ತು, ಪಾಕಿಸ್ತಾನ, ಪೈಲಟ್, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Space, Spardha | , , | Leave a comment

ವಿಶ್ವದಲ್ಲೇ ಪ್ರಥಮ: ದೆಹಲಿ ನಿಲ್ದಾಣದಲ್ಲಿ ವಿಮಾನ ನಿರ್ವಹಣೆಗೆ ರೊಬೊಟಿಕ್ ಟ್ಯಾಕ್ಸಿ ಬೋಟ್

15 robotic taxi bot
ನವದೆಹಲಿ:
 ಪಯಾಣ ಮುಗಿಸಿ ಬಂದ ವಿಮಾನ ಮತ್ತು ಪಯಣ ಹೊರಡಲು ಸಜ್ಜಾಗಿ ರನ್ ವೇಗೆ ತೆರಳುವ ವಿಮಾನಗಳಲ್ಲಿ ಆಗುವ ಇಂಧನ ವ್ಯಯವನ್ನು ತಪ್ಪಿಸಲು ಪೈಲಟ್ ನಿರ್ದೇಶಿತ ಸೆಮಿ ರೊಬೋಟಿಕ್ ಟ್ಯಾಕ್ಸಿ ಬೋಟ್ ಎಂಬ ಹೆಸರಿನ ಟ್ರ್ಯಾಕ್ಟರ್ ಮಾದರಿಯ ಉಪಕರಣಗಳನ್ನು ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಏರ್ ಇಂಡಿಯಾ ಬಳಸಲು ಆರಂಭಿಸಿತು.

ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೊಬೋಟಿಕ್ ಟ್ಯಾಕ್ಸಿ ಬೋಟ್ ವ್ಯವಸ್ಥೆ ಮಾಡಲಾಗಿದ್ದು, ಇದು ಮೊದಲ ಬಾರಿಗೆ ಏರ್ ಬಸ್ – ೩೨೦ ದೆಹಲಿ- ಮುಂಬೈ ಎಐ ೬೬೫ ವಿಮಾನವನ್ನು  2019 ಅಕ್ಟೋಬರ್ 15ರ ಮಂಗಳವಾರ ರನ್ ವೇಗೆ ಎಳೆದು ತಂದು ನಿಲ್ಲಿಸಿತು.

ಸದ್ಯ ಏರ್ ಬಸ್ ವಿಮಾನಗಳಿಗೆ ಮಾತ್ರ ಈ ಸೇವೆ ಲಭ್ಯವಿದ್ದು ವಿಶ್ವದ ಯಾವುದೇ ಕಡೆಯಿಂದ ಬಂದ ಏರ್ ಬಸ್  ವಿಮಾನಗಳು ಇವುಗಳನ್ನು ಬಳಸಬಹುದು.

ಪಾರ್ಕಿಂಗ್ ಸ್ಥಳದಿಂದ ರನ್ ವೇಗೆ  ವಿಮಾನವನ್ನು ಎಳೆದು ತಂದು ನಿಲ್ಲಿಸುವ ಕೆಲಸವನ್ನು ಮಾತ್ರ ಸದ್ಯಕ್ಕೆ ಟ್ಯಾಕ್ಸಿ ಬೋಟ್‌ಗೆ ವಹಿಸಲಾಯಿತು.

ಏನಿದು ಟ್ಯಾಕ್ಸಿ ಬೋಟ್?

ಸಾಮಾನ್ಯವಾಗಿ ಬೇರೆಡೆಯಿಂದ ಬಂದು ನಿಂತ ವಾವನವನ್ನು ತುಸು ಆ ಕಡೆ ಅಥವಾ ಈ ಕಡೆಗೆ ತೆಗೆದುಕೊಂಡು ಹೋಗಲು ಟ್ರ್ಯಾಕ್ಟರ್ ಬಳಸುತ್ತಾರೆ. ಆದರೆ ಟ್ಯಾಕ್ಸಿ ಬೋಟ್ ಹಾಗಲ್ಲ. ಇದು ಸೆಮಿ ರೊಬೊಟಿಕ್ ಮಾದರಿಯದ್ದು. ಹೆಚ್ಚು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಪೈಲಟ್ ಸೂಚನೆ ಮೇರೆಗೆ ವಿಮಾನವನ್ನು ತೆಗೆದುಕೊಂಡು ಹೋಗಿ ಪಾರ್ಕಿಂಗ್ ಸ್ಥಳಕ್ಕೆ ಅಥವಾ ರನ್‌ವೇಗೆ  ತರುವ ಕೆಲಸವನ್ನು ಮಾಡಬಲ್ಲದು.

ವಿಮಾನದ ಎಂಜಿನ್ ಸಂಪೂರ್ಣ ಸ್ವಿಚ್ ಆಫ್ ಆಗಿದ್ದರೂ ಟ್ಯಾಕ್ಸಿ ಬೋಟ್ ಕಾರ್ಯನಿರ್ವಹಿಸುತ್ತದೆ. ಇದರಿಂದ ವಿಮಾನ ಇಳಿದ ಬಳಿಕ ರನ್ ವೇಗೆ  ಹೋಗುವಲ್ಲಿ ಅಥವಾ ರನ್‌ವೇಯಿಂದ ಪಾರ್ಕಿಂಗ್ ಜಾಗಕ್ಕೆ ಬರುವಲ್ಲಿ ಬೇಕಾಗುವ ಇಂಧನದ ಶೇ.೮೫ರಷ್ಟು ಉಳಿತಾಯವಾಗುತ್ತದೆ ಅಗಾಧ ಪ್ರಮಾಣದ ವಾಯುಮಾಲಿನ್ಯ ಕೂಡಾ ತಗ್ಗುತ್ತದೆ.

ಟ್ಯಾಕ್ಸಿಬೋಟ್ ವಿಮಾನದ ಮುಂದಿನ ಚಕ್ರವನ್ನು ಎತ್ತಿ ತನ್ನಲ್ಲಿ ಇಟ್ಟುಕೊಳ್ಳುತ್ತದೆ. ಈ ವೇಳೆ ಅದು ನಿಯಂತ್ರಣವನ್ನು ಪೈಲಟ್‌ಗೆ ವರ್ಗಾಯಿಸುತ್ತದೆ. ಟ್ಯಾಕ್ಸಿಬೋಟಿನಲ್ಲಿ ವಿಮಾನ ಇರುವ ಸಂದರ್ಭದಲ್ಲಿ ಟ್ರಾಫಿಕ್ ಕಂಟ್ರೋಲರ್, ವಿಮಾನ ನಿಲ್ದಾಣದ ನಿರ್ವಹಣೆಯವರಿಗೆ, ಪೈಲಟ್‌ಗೆ ಅದು ಸಂದೇಶಗಳನ್ನು ಕಳಿಸುತ್ತದೆ.

ವಾಯುಮಾಲಿನ್ಯವನ್ನು ನಿಗ್ರಹಿಸಲು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಇಂಧನವನ್ನು ಉಳಿಸುವ ನಿಟ್ಟಿನಲ್ಲಿ ನೆರವಾಗಲು ಏರ್ ಇಂಡಿಯಾ ಟ್ಯಾಕ್ಸಿ ಬೋಟ್‌ಗಳನ್ನು ವ್ಯವಸ್ಥೆ ಮಾಡಿದೆ.

‘ಪೈಲಟ್-ನಿಯಂತ್ರಿತ ಅರೆ-ರೊಬೊಟಿಕ್ ಯಂತ್ರಗಳು’ ವಿಮಾನಗಳನ್ನು ಪಾರ್ಕಿಂಗ್ ಸ್ಥಳದಿಂದ ರನ್‌ವೇಗೆ ಅವುಗಳ ಎಂಜಿನ್ ಸ್ವಿಚ್ ಆಫ್ ಆಗಿದ್ದರೂ ಎಳೆದು ತರುವುದರಿಂದ ವಿಮಾನದ ಇಂಧನ ವ್ಯಯ ತಪ್ಪುತ್ತದೆ.

ಕಾನ್ಪುರ ಐಐಟಿಯು ನಡೆಸಿದ ಅಧ್ಯಯನವು ಈ ಟ್ಯಾಕ್ಸಿ ಬೋಟ್‌ನಿಂದ ವಿಮಾನದ ವಾಯುಮಾಲಿನ್ಯ ನಿಯಂತ್ರಣಕ್ಕೆ ಅನುಕೂಲವಾಗುತ್ತದೆ ಎಂದು ಹೇಳಿದೆ.

ಇದನ್ನು ಬಳಸುವುದರಿಂದ ವಿಮಾನವು ರನ್ ವೇ ಪ್ರಾರಂಭದ ಹಂತವನ್ನು ತಲುಪಿದಾಗ ಮಾತ್ರ ಟೇಕ್-ಆಫ್ಗಾಗಿ ಇಗ್ನಿಷನ್ ಆನ್ ಆಗುತ್ತದೆ. ಈ ಬೋಟನ್ನು ವಿಮಾನ ನಿರ್ಗಮನಕ್ಕೆ ಮಾತ್ರ ಸಧ್ಯಕ್ಕೆ ಬಳಸಲಾಗುವುದು. ಇವುಗಳ ಬಳಕೆಯಿಂದ ವಿಮಾನವನ್ನು ರನ್ ವೇ ವರೆಗೆ ಓಡಿಸಲು ಬಳಕೆಯಾಗುವ ಇಂಧನದ ಶೇಕಡಾ ೮೦ರಷ್ಟು ಇಂಧನ ನಷ್ಟ ತಪ್ಪಿಸಲು ಸಾಧ್ಯ ಎಂಬುದು ಸಾಬೀತಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಡಿಐಎಎಲ್- ಡಯಲ್) ಅಧಿಕಾರಿಗಳು ತಿಳಿಸಿದರು.

ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ  ಟ್ಯಾಕ್ಸಿ ಬೋಟ್‌ನ್ನು ಹಾರಲು ಸಜ್ಜಾಗಿರುವ ಏಪ್ರನ್ ಪ್ರದೇಶದಲ್ಲಿ ನಿಂತಿರುವ ವಿಮಾನದ ಬಳಿಗೆ ಒಯ್ದು ವಿಮಾನಕ್ಕೆ ಜೋಡಿಸಲಾಗುತ್ತದೆ. ಟ್ಯಾಕ್ಸಿಬೋಟ್ ವಿಮಾನದ ಮೂಗಿನ ಚಕ್ರವನ್ನು ಹಿಡಿದು ಸ್ವಲ್ಪ ಎತ್ತುತ್ತದೆ. ಆಗ ವಿಮಾನದ ಪೈಲಟ್ ವಿಮಾನದ ಎಂಜಿನನ್ನು ಚಾಲನೆ ಮಾಡದೆಯೇ ರೊಬೋಟಿಕ್ ಟ್ಯಾಕ್ಸಿ ಬೋಟ್ ಮೂಲಕ ವಿಮಾನವನ್ನು ಟರ್ಮಿನಲ್ ಗೇಟ್‌ನಿಂದ ರನ್‌ವೇಗೆ ಓಡಿಸುತ್ತಾನೆ.  ವಿಮಾನ ಹಾರುವುದಕ್ಕೆ  ಸ್ವಲ್ಪ ಮುನ್ನ ಅಭ್ಯಾಸ ಮತ್ತು ತಾಂತ್ರಿಕ ತಪಾಸಣೆಗಳನ್ನು ಸಕ್ರಿಯಗೊಳಿಸುವ ಸಲುವಾಗಿ ವಿಮಾನದ ಎಂಜಿನನ್ನು ಚಾಲನೆಗೊಳಿಸಲಾಗುತ್ತದೆ ಎಂದು ಎಂದು ಡಯಲ್ ಅಧಿಕಾರಿ ವಿವರಿಸಿದರು.

ಹಾಲಿ ವ್ಯವಸ್ಥೆಯಲ್ಲಿ ಪ್ರಯಾಣಿಕರು ವಿಮಾನ ಏರಿದ ಬಳಿಕ ವಿಮಾನದ ಎಂಜಿನ್‌ಗಳು ಚಾಲನೆಗೊಳುತ್ತವೆ ಮತ್ತು ತನ್ನ ನಿಯೋಜಿತ ರನ್ ವೇ ತಲುಪುವವರೆಗೂ ಚಾಲನೆಯಲ್ಲಿಯೇ ಇರುತ್ತವೆ. ಹೀಗಾಗಿ ಅಷ್ಟು ಹೊತ್ತೂ ವಿಮಾನದ ಇಂಧನ ವ್ಯಯವಾಗುತ್ತಿರುತ್ತದೆ.

ವಿಮಾನವನ್ನು ಒಯ್ಯಲು ಬಳಸಲಾಗುವ ಈ ಟ್ಯಾಕ್ಸಿ ಬೋಟ್ ಗರಿಷ್ಠ ೨೩ ಗಂಟೆಗಳ ವೇಗವನ್ನು ಪಡೆಯಬಹುದು.

ಟ್ಯಾಕ್ಸಿ ಬೋಟ್ ಬಳಕೆಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಹಲವು ವಿಧದ ಅನುಕೂಲಗಳು ಲಭಿಸಲಿವೆ. ಟ್ಯಾಕ್ಸಿಬೋಟ್‌ಗಳು ಬೋರ್ಡಿಂಗ್ ಗೇಟುಗಳಲ್ಲಿನ ದಟ್ಟಣೆಯನ್ನು ಕಡಿಮೆ ಮಾಡುತ್ತವೆ, ಇದರ ಜೊತೆಗೆ ಇಂಗಾಲದ ಡೈ ಆಕ್ಸೈಡ್ ಮತ್ತು ಇತರ ಹಾನಿಕಾರಕ ಅನಿಲಗಳ ಹೊರಸೂಸುವಿಕೆ ಗಮನಾರ್ಹವಾಗಿ ತಗ್ಗುತ್ತದೆ. ಏಪ್ರನ್ ಪ್ರದೇಶದಲ್ಲಿ ಜೆಟ್ ಸ್ಫೋಟದ ಅಪಾಯವನ್ನೂ ಇದು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಹೇಳಿದರು.

ಟ್ಯಾಕ್ಸಿ ಬೋಟ್ ಬಳಕೆಯಿಂದ ವಿಮಾನಯಾನ ಸಂಸ್ಥೆಗಳಿಗೆ ಇಂಧನ ಉಳಿತಾಯದ ಜೊತೆಗೆ ವಿಮಾನದ ಬ್ರೇಕ್‌ಗಳಿಗೆ ಆಗುವ ಹಾನಿ ಕಡಿಮೆಯಾಗುತ್ತದೆ. ವಿಮಾನವು ಬ್ರೇಕ್‌ಗಳನ್ನು ಅನ್ವಯಿಸಿದಾಗಲೆಲ್ಲಾ, ವಿಮಾನದ ಸಂಪೂರ್ಣ ತೂಕವು ಮೂಗಿನ ಚಕ್ರದಲ್ಲಿರುತ್ತದೆ. ಟ್ಯಾಕ್ಸಿ ಬೋಟ್ ಬಳಸಿದಾಗ ಸಂಪೂರ್ಣ ಒತ್ತಡವು  ಟ್ಯಾಕ್ಸಿ ಬೋಟ್ ಮೇಲೆ ಇರುತ್ತದೆ, ಇದರಿಂದ ಬ್ರೇಕ್ ಮೇಲಿನ ಹಾನಿ ಕಡಿಮೆಯಾಗುತ್ತದೆ ಎಂದು ಅವರು ನುಡಿದರು.

ಈ ಉಪಕ್ರಮವು ವಿಮಾನ ನಿಲ್ದಾಣ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಶಬ್ದ ಮಾಲಿನ್ಯ ಮತ್ತು ಇಂಧನ ಮಾಲಿನ್ಯವನ್ನು ಕಡಿಮೆ ಮಾಡಲು ಸಹ ಇದು ಸಹಾಯ ಮಾಡುತ್ತದೆ. ಎಂದು ಅವರು ಹೇಳಿದರು.

ಟ್ಯಾಕ್ಸಿ ಬೋಟ್‌ಗಳ ಪ್ರಯೋಗವನ್ನು  ಕೆಎಸ್‌ಯು ಏವಿಯೇಷನ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದೊಂದಿಗೆ ಸೆಪ್ಟೆಂಬರಿನಲ್ಲಿ ನಡೆಸಲಾಗಿತ್ತು. ಕೆಎಸ್‌ಯು ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಒದಗಿಸಿರುವ ಟ್ಯಾಕ್ಸಿ ಬೋಟ್‌ಗಳನ್ನು  ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ಅಭಿವೃದ್ಧಿಪಡಿಸಿದೆ.

October 15, 2019 Posted by | Auto World, ಆಟೋ ಜಗತ್ತು, ಆರ್ಥಿಕ, ತಂತ್ರಜ್ಞಾನ, ಪೈಲಟ್, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, ಸಂಶೋಧನೆ, Commerce, Finance, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, Technology, World | , , , , , , | Leave a comment

122 ಕಿ.ಮೀ. ಎನ್‌ಫೀಲ್ಡ್‌ ಬೈಕ್‌ ಸವಾರಿ ಮಾಡಿದ ಅರುಣಾಚಲ ಮುಖ್ಯಮಂತ್ರಿ

13 arunachal cm bike ride
ಇಟಾನಗರ
: ಮುಖ್ಯಮಂತ್ರಿಗಳು ರಸ್ತೆ ವೀಕ್ಷಣೆಗೆ ಕಾರಿನಲ್ಲಿ,ಕೆಲವೊಮ್ಮೆ ಸಂಪುಟ ಸಚಿವರೊಂದಿಗೆ ಬಸ್ಸಿನಲ್ಲಿ ಹೋಗುವುದು ಉಂಟು, ಆದರೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಯಿಂಗ್‌ಕಿಯಾಂಗ್‌ ಮತ್ತು ಪಸಿಘಾಟ್‌ ಮಧ್ಯೆ 2019 ಅಕ್ಟೋಬರ್ 13ರ ಭಾನುವಾರ  ಬೈಕ್‌ ಸವಾರಿ ಮಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು.

ಅದೂ 122 ಕಿ.ಮೀ. ದೂರದ ದಾರಿಯನ್ನು ಅವರು ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ 650 ಬೈಕ್‌ನಲ್ಲಿ ಕ್ರಮಿಸಿದರು.

ಈ ದಾರಿ ಡಾಮರೀಕರಣವಾಗಿ ಅತ್ಯುತ್ತಮವಾಗಿದ್ದು ಬೈಕರ್‌ಗಳಿಗೆ ಹೇಳಿಮಾಡಿಸಿದ್ದಾಗಿದೆ. ಆದ್ದರಿಂದ ಆಸಕ್ತರು ಇಲ್ಲಿಗೊಮ್ಮೆ ಭೇಟಿ ಕೊಡಿ ಎಂದು ರಾಜ್ಯದ ಪ್ರವಾಸೋದ್ಯಮದ ಕುರಿತೂ ಅವರು ಪ್ರಚಾರ ಮಾಡಿದರು. ಈ ವಿಚಾರವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡರು.

October 14, 2019 Posted by | Auto World, ಆಟೋ ಜಗತ್ತು, ಭಾರತ, ಮೋಟಾರು ವಾಹನ,, ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

ಲಿಥಿಯಂ- ಅಯಾನ್ ಬ್ಯಾಟರಿ ಅವಿಷ್ಕಾರಕ್ಕಾಗಿ ಮೂವರು ವಿಜ್ಞಾನಿಗಳಿಗೆ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ

09 nobel-prize-chemistry-2019-winners
ಸ್ಟಾಕ್
ಹೋಮ್: ಲಿಥಿಯಂ -ಅಯಾನ್ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಜಾನ್ ಡಿ ಗುಡೆನೊಫ್, ಎಂ ಸ್ಟಾನ್ಲೀ ವೈಟಿಂಗ್ಹಾಮ್ ಮತ್ತು ಅಕೀರಾ ಯೋಶಿನೊ ಈ ಮೂವರು ವಿಜ್ಞಾನಿಗಳಿಗೆ ೨೦೧೯ರ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ನೊಬೆಲ್ ಸಮಿತಿಯು 2019 ಅಕ್ಟೋಬರ್  09ರ  ಬುಧವಾರ ಪ್ರಕಟಿಸಿತು.

ಲಿಥಿಯಂ -ಅಯಾನ್ ಬ್ಯಾಟರಿಗಳು ನಮ್ಮ ಬದುಕನ್ನು ಕ್ರಾಂತಿಕಾರಕವನ್ನಾಗಿ ಮಾಡಿವೆ. ಅವುಗಳನನ್ನು ಈಗ ಮೊಬೈಲ್ ಫೋನ್‌ನಿಂದ ಹಿಡಿದು ಲ್ಯಾಪ್ ಟಾಪ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳವರೆಗೆ ಎಲ್ಲವುಗಳಲ್ಲೂ ಬಳಸುತ್ತಿದ್ದೇವೆ. ತಮ್ಮ ಶ್ರಮದ ಮೂಲಕ ಈ ಬಾರಿಯ ರಸಾಯನಶಾಸ್ರ್ರ ನೊಬೆಲ್ ಪ್ರಶಸ್ತಿ ವಿಜೇತರು ವೈರ್‌ಲೆಸ್, ಪಳೆಯುಳಿಕೆ ಇಂಧನ (ಫಾಸಿಲ್ ಫ್ಯುಯೆಲ್) ಮುಕ್ತ ಸಮಾಜಕ್ಕೆ ಅಡಿಪಾಯ ಹಾಕಿದ್ದಾರೆ ಎಂದು ನೊಬೆಲ್ ಸಮಿತಿಯು ತನ್ನ ಹೇಳಿಕೆಯಲ್ಲಿ ತಿಳಿಸಿತು.

ಈ ವರ್ಷದ ರಸಾಯನಶಾಸ್ತ್ರ ಪ್ರಶಸ್ತಿ ವಿಜೇತರಾದ ಡಾ. ವೈಟಿಂಗ್ಹಾಮ್ ಅವರು ೧೯೭೦ರ ಆದಿಯಲ್ಲಿ ಲಿಥಿಯಂನ್ನು ಹೊರ ಎಲೆಕ್ಟ್ರಾನ್ ಬಿಡುಗಡೆಗಾಗಿ ಬಳಸಿ ಮೊದಲ ಕಾರ್‍ಯ ಸಾಧ್ಯ ಲಿಥಿಯಂ ಬ್ಯಾಟರಿಯನ್ನು ಅಭಿವೃದ್ಧಿ ಪಡಿಸಿದ್ದರು. ಡಾ. ಗುಡೆನೊಫ್ ಅವರು ಶಕ್ತಿಶಾಲಿ ಮತ್ತು ಉಪಯಕ್ತ ಬ್ಯಾಟರಿಗೆ ಸೂಕ್ತವಾದ ಪರಿಸ್ಥಿತಿಯನ್ನು ಸೃಷ್ಟಿಸುವ ಮೂಲಕ ಲಿಥಿಯಂ ಬ್ಯಾಟರಿಯ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿದ್ದರು.

ಮೊಬೈಲ್ ಫೋನುಗಗಳಿಂದ ಎಲೆಕ್ಟ್ರಿಕ್ ವಾಹನಗಳವರೆಗೆ ದೈನಂದಿನ ಬದುಕಿನಲ್ಲಿ ಬಳಸುವಂತಹ ಲಿಥಿಯಂ ಅಯಾನ್ ಬ್ಯಾಟರಿಗಳನ್ನು ಅಭಿವೃದ್ಧಿ ಪಡಿಸಿದ್ದಕ್ಕಾಗಿ ಜಾನ್ ಡಿ ಗುಡೆನೊಫ್, ಎಂ. ಸ್ಟಾನ್ಲೀ ವೈಟಿಂಗ್ಹಾಮ್ ಮತ್ತು ಅಕಿರಾ ಯೋಶಿನೊ ಅವರಿಗೆ ಧನ್ಯವಾದಗಳು ಎಂದು ಸಮಿತಿಯ ಹೇಳಿಕೆ ತಿಳಿಸಿತು.

October 9, 2019 Posted by | Award, ಆಟೋ ಜಗತ್ತು, ಆರ್ಥಿಕ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಂಶೋಧನೆ, Finance, Flash News, General Knowledge, News, Science, Spardha, World | , | Leave a comment

ಭಾರತದಲ್ಲಿ ೧೦,೦೦೦ ಕೋಟಿ ಡಾಲರ್ ಹೂಡಿಕೆಗೆ ಸೌದಿ ಚಿತ್ತ

29 Saudi King investment in india
ನವದೆಹಲಿ:
 ಭಾರತದ ಪ್ರಮುಖ ರಂಗಗಳಾದ ಪೆಟ್ರೋಕೆಮಿಕಲ್ಸ್, ಮೂಲಸವಲತ್ತು, ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ೧೦,೦೦೦ ಕೋಟಿ (೧೦೦ ಬಿಲಿಯನ್) ಡಾಲರ್ ಮೊತ್ತವನ್ನು ಹೂಡಿಕೆ ಮಾಡುವ ಬಗ್ಗೆ ವಿಶ್ವದ ಅತಿದೊಡ್ಡ ತೈಲ ರಫ್ತು ರಾಷ್ಟ್ರವಾದ ಸೌದಿ ಅರೇಬಿಯಾ ಪರಿಶೀಲಿಸುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು.

ಸೌದಿ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಅವರು ಭಾರತವು ದೊಡ್ಡ ಮೊತ್ತದ ಹೂಡಿಕೆಗೆ ಆಕರ್ಷಕವಾಗಿದೆ, ತಮ್ಮ ರಾಷ್ಟ್ರವು ನವದೆಹಲಿ ಜೊತೆಗೆ ತೈಲ, ಅನಿಲ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಪಾಲುದಾರಿಕೆಗಳನ್ನು ಮಾಡಿಕೊಳ್ಳುವ ಬಗ್ಗೆ ದೃಷ್ಟಿ ಹರಿಸಿದೆ ಎಂದು ಹೇಳಿದರು.

‘ಸೌದಿ ಅರೇಬಿಯಾವು ಭಾರತದ ಇಂಧನ, ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ಮೂಲ ಸವಲತ್ತು, ಕೃಷಿ, ಖನಿಜಗಳು ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ೧೦೦ ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗಳನ್ನು ಮಾಡುವ ಬಗ್ಗೆ ಪರಿಶೀಲಿಸುತ್ತಿದೆ’ ಎಂದು ಅಲ್ ಸತಿ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ  ತಿಳಿಸಿದರು.

ಸೌದಿ ಅರೇಬಿಯಾದ ಅತಿದೊಡ್ಡ ತೈಲ ದೈತ್ಯ ಅರ್ಮ್ಯಾಕೊ ಕಂಪೆನಿಯು ಮುಖೇಶ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾಪದ ಬಗ್ಗೆ ಉಲ್ಲೇಖಿಸಿದ ರಾಯಭಾರಿ, ಈ ಒಪ್ಪಂದವು ಉಭಯ ರಾಷ್ಟ್ರಗಳ ನಡುವೆ ಇಂಧನ ಬಾಂಧವ್ಯವು ಬೆಳೆಯುತ್ತಿರುವ ಆಯಕಟ್ಟಿನ ಸ್ವರೂಪವನ್ನು ಪ್ರತಿಫಲಿಸಿದೆ ಎಂದು ನುಡಿದರು.

ಈ ಹಿನ್ನೆಲೆಯಲ್ಲಿ ಭಾರತದ ಇಂಧನ ಕ್ಷೇತ್ರದಲ್ಲಿ ರಿಲಯನ್ಸ್ ಜೊತೆಗೆ ದೀರ್ಘಾವಧಿಯ ಪಾಲುದಾರಿಕೆಯ ೪೪ ಬಿಲಿಯನ್ ಡಾಲರ್ ಮೌಲ್ಯದ ಮಹಾರಾಷ್ಟ್ರದ ವೆಸ್ಟ್ ಕೋಸ್ಟ್ ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್‌ನಂತಹ ಸೌದಿಯ ಅರ್ಮ್ಯಾಕೊದ ಹೂಡಿಕೆ ಯೋಜನೆಯು ನಮ್ಮ ದ್ವಿಪಕ್ಷೀಯ ಬಾಂಧವ್ಯದ ಮೈಲುಗಲ್ಲು ಆಗಿದೆ ಎಂದು ಅವರು ನುಡಿದರು.

ಭಾರತವು ಶೇಕಡಾ ೧೭ರಷ್ಟು ಅಥವಾ ಅದಕ್ಕೂ ಹೆಚ್ಚಿನ ಕಚ್ಛಾ ತೈಲವನ್ನು ಮತ್ತು ಶೇಕಡಾ ೩೨ರಷ್ಟು ಎಲ್‌ಪಿಜಿಯನ್ನು ಸೌದಿ ಅರೇಬಿಯಾದಿಂದ ಆಮದು ಮಾಡಿಕೊಳ್ಳುತ್ತಿದೆ.

ರಾಯಭಾರಿಯ ಪ್ರಕಾರ ೨೦೧೯ರಲ್ಲಿ ಭಾರತ ಮತ್ತು ಸೌದಿ ಅರೇಬಿಯಾ ಮಧ್ಯೆ ಜಂಟಿ ಸಹಯೋಗ ಮತ್ತು ಹೂಡಿಕೆಗಾಗಿ ೪೦ಕ್ಕೂ ಹೆಚ್ಚು ಅವಕಾಶಗಳನ್ನು ವಿವಿಧ ರಂಗಗಳಲ್ಲಿ ಗುರುತಿಸಲಾಗಿದೆ. ೩೪ ಬಿಲಿಯನ್ ಡಾಲರುಗಳ ಹಾಲಿ ವ್ಯಾಪಾರವು ನಿಸ್ಸಂಶಯವಾಗಿ ಹೆಚ್ಚಲಿದೆ ಎಂದು ಅವರು ಹೇಳಿದರು..

ಸರಕು ವ್ಯಾಪಾರ, ನಿರ್ದಿಷ್ಟವಾಗಿ ತೈಲೇತರ ವ್ಯಾಪಾರ ಕ್ಷೇತ್ರದಲ್ಲಿ ಇನ್ನೂ ಗುರುತಿಸಲಾಗದ ಭಾರೀ ಅವಕಾಶಗಳಿವೆ ಮತ್ತು ಆರ್ಥಿಕ, ವಾಣಿಜ್ಯ, ಹೂಡಿಕೆ, ಸಾಂಸ್ಕೃತಿಕ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಯನ್ನು ನಾವು ಮಾಡುತ್ತಿದ್ದೇವೆ ಎಂದು ಅಲ್ ಸತಿ ನುಡಿದರು.

ಭಾರತ ಜೊತೆಗಿನ ಭವಿಷ್ಯದ ಇಂಧನ ಬಾಂಧವ್ಯಗಳ ಬಗ್ಗೆ ಪ್ರಸ್ತಾಪಿಸಿದ ಅವರು ’ದ್ವಿಪಕ್ಷೀಯ ಇಂಧನ ಬಾಂಧವ್ಯಗಳು ಕಚ್ಛಾತೈಲ, ಸಂಸ್ಕರಿತ ಉತ್ಪನ್ನಗಳು ಮತ್ತು ಎಲ್‌ಪಿಜಿ ಸರಬರಾಜನ್ನು ಮೀರಿ ಪೆಟ್ರೋ ಕೆಮಿಕಲ್ ಸಮುಚ್ಚಯಗಳು ಮತ್ತು ಅನ್ವೇಷಣಾ ಸಹಕಾರದವರೆಗೆ ವಿಸ್ತರಿಸಿದೆ ಎಂದು ಹೇಳಿದರು.

ಆಯಕಟ್ಟಿನ ಪೆಟ್ರೋಲಿಯಂ ನಿಕ್ಷೇಪ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಸೌದಿ ಅರೇಬಿಯಾಕ್ಕೆ ಭಾರತವು ನೀಡಿರುವ ಆಹ್ವಾನವು ಉಭಯ ರಾಷ್ಟ್ರಗಳ ನಡುವಣ ವಿಶ್ವಾಸ ಮತ್ತು ಸದ್ಭಾವನೆಯನ್ನು ಪ್ರತಿಫಲಿಸುತ್ತದೆ ಎಂದು ರಾಯಭಾರಿ ನುಡಿದರು.

September 29, 2019 Posted by | Auto World, ಆಟೋ ಜಗತ್ತು, ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ಮೋಟಾರು ವಾಹನ,, ರಾಷ್ಟ್ರೀಯ, ವಿಶ್ವ/ ಜಗತ್ತು, Commerce, Finance, Flash News, General Knowledge, India, Nation, News, Prime Minister, Spardha, World | , , | Leave a comment

ಮುಖೇಶ ಅಂಬಾನಿ ಭಾರತದ ಅತೀ ಶ್ರೀಮಂತ

25 mukesh ambani
ಮುಂಬಯಿ
: ರಿಲಯನ್ಸ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ ಅಂಬಾನಿ ಈಗ ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರು. ಹೀಗೆ ಅವರು ಅತಿ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಹೊಂದುತ್ತಿರುವುದು ಸತತ 8ನೇ ಬಾರಿಯಾಗಿದೆ.

3,80,700 ಕೋಟಿ ರೂ. ಆಸ್ತಿಯನ್ನು ಅವರು ಹೊಂದಿರುವುದಾಗಿ ಸಮೀಕ್ಷೆ ನಡೆಸಿದ ಐಐಎಫ್ಎಲ್‌ ವೆಲ್ತ್‌ ಹುರುನ್‌ ಇಂಡಿಯಾ ರಿಚ್‌ ಲಿಸ್ಟ್‌ 2019 ಸೆಪ್ಟೆಂಬರ್  25ರ ಬುಧವಾರ ಹೇಳಿತು.

ಎರಡನೇ ಸ್ಥಾನವನ್ನು ಲಂಡನ್‌ ಮೂಲದ ಎಸ್‌ಪಿ ಹಿಂದುಜಾ ಮತ್ತು ಕುಟುಂಬ ಹೊಂದಿದೆ. ಇವರ ಆಸ್ತಿ 1,86,500 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಪಡೆದಿದ್ದಾರೆ. ಅವರ ಆಸ್ತಿ ಮೊತ್ತ 1,17,100 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ಆರ್ಸೆಲರ್‌ ಮಿತ್ತಲ್‌ ಸಿಇಒ (1,07,300 ಕೋಟಿ ರೂ.) ಮತ್ತು 5ನೇ ಸ್ಥಾನವನ್ನು ಅದಾನಿ ಸಮೂಹದ ಗೌತಮ್‌ ಅದಾನಿ (94,500 ರೂ.) ಹೊಂದಿದ್ದಾರೆ.

ಸಮೀಕ್ಷೆ ಪ್ರಕಾರ 1 ಸಾವಿರ ಕೋಟಿ ರೂ.ಗಳಿಗೆ ಮಿಕ್ಕಿ ಆಸ್ತಿ ಹೊಂದಿದವರ ಸಂಖ್ಯೆ 953ಕ್ಕೇರಿದೆ. ಈ ಹಿಂದಿನ ವರ್ಷ ಇವರ ಸಂಖ್ಯೆ 831 ಇತ್ತು.

ಪಟ್ಟಿಯಲ್ಲಿ ಟಾಪ್‌ 25ರ ಪಟ್ಟಿಯಲ್ಲಿರುವವ ಒಟ್ಟು ಆಸ್ತಿಯ ಪ್ರಮಾಣ ಭಾರತದ ಜಿಡಿಪಿಯ ಶೇ.10ರಷ್ಟು ಆಗುತ್ತದೆ. ಹಾಗೆಯೇ 953 ಮಂದಿಯ ಒಟ್ಟು ಆಸ್ತಿಯ ಪ್ರಮಾಣ ಜಿಡಿಪಿ ಮೊತ್ತದ ಶೇ.27ರಷ್ಟು ಆಗುತ್ತದೆ.

September 25, 2019 Posted by | Auto World, Award, ಆಟೋ ಜಗತ್ತು, ಆರ್ಥಿಕ, ಬೆಂಗಳೂರು, ಭಾರತ, ಮೋಟಾರು ವಾಹನ,, ರಾಷ್ಟ್ರೀಯ, Consumer Issues, environment /endangered species, Flash News, General Knowledge, India, Nation, News, Spardha, World | , | Leave a comment

178 ವರ್ಷ ಹಳೆಯ ಥಾಮಸ್ ಕುಕ್ ಕಂಪನಿ ದಿವಾಳಿ

23 thomas-cook
ವಾಷಿಂಗ್ಟನ್
: ಪ್ರತಿಷ್ಠಿತ ಥಾಮಸ್ ಕುಕ್ ಕಂಪನಿ ಆರ್ಥಿಕ ಸಂಕಷ್ಟದಿಂದ ಪಾರಾಗಲು ಸಾಕಷ್ಟು ಪ್ರಯತ್ನ ನಡೆಸಿಯೂ ಕೊನೆಗೆ ವಿಫಲವಾದ ಹಿನ್ನೆಲೆಯಲ್ಲಿ ಥಾಮಕ್ ಕುಕ್ ಟ್ರಾವೆಲ್ ಕಂಪನಿ ದಿವಾಳಿಯಾಗಿದ್ದು, 2019 ಸೆಪ್ಟೆಂಬರ್ 23ರ ಸೋಮವಾರ ಬೆಳಗ್ಗೆ ಜಾಗತಿಕವಾಗಿ 600,000 ಟಿಕೆಟ್ಗಳನ್ನು ರದ್ದು ಮಾಡಿರುವುದಾಗಿ ಮಾಧ್ಯಮದ ವರದಿ ತಿಳಿಸಿತು.

ಥಾಮಸ್ ಕುಕ್ ಕಂಪನಿ ಐಶಾರಾಮಿ ಹೋಟೆಲ್ಗಳನ್ನು, ರೆಸಾರ್ಟ್ಸ್, ವಿಮಾನ ಯಾನ ವ್ಯವಹಾರ ನಡೆಸುತ್ತಿದ್ದು, 16 ದೇಶಗಳಲ್ಲಿ 21,000 ಉದ್ಯೋಗಿಗಳಿದ್ದಾರೆ. ಬ್ರಿಟನ್ ನಲ್ಲಿಯೇ 9000 ಸಾವಿರ ಮಂದಿ ಕೆಲಸಗಾರರಿದ್ದು, ಎಲ್ಲರೂ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ವರದಿ ವಿವರಿಸಿತು.

178 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಥಾಮಕ್ ಕುಕ್ ಕಂಪನಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ 200 ಮಿಲಿಯನ್ ಪೌಂಡ್ಸ್ ನೆರವು ಕೇಳಲಾಗಿತ್ತು. ಆದರೆ ವಾರಾಂತ್ಯದಲ್ಲಿ ಶೇರುದಾರರು ಮತ್ತು ಕ್ರೆಡಿಟರ್ಸ್ ಜತೆಗೆ ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಕಂಪನಿ ದಿವಾಳಿ ಹಂತಕ್ಕೆ ತಲುಪಿದೆ ಎಂದು ವರದಿ ತಿಳಿಸಿತು.

ಥಾಮಸ್ ಕುಕ್ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸಿದೆ. ಈ ನಿಟ್ಟಿನಲ್ಲಿ ವಿದೇಶಗಳಲ್ಲಿ ಇರುವ 150,000 ಬ್ರಿಟಿಷ್ ಕಸ್ಟಮರ್ಸ್ ಅನ್ನು ಮುಂದಿನ ಎರಡು ವಾರಗಳಲ್ಲಿ ತಾಯ್ನಾಡಿಗೆ ಕರೆತರುವ ವ್ಯವಸ್ಥೆ ಮಾಡಲಾಗುವುದು ಎಂದು ಬ್ರಿಟನ್ ನಾಗರಿಕ ವಿಮಾನ ಅಧಿಕಾರಿಗಳು ಮಾಹಿತಿ ನೀಡಿದರು.

ಇದೀಗ ಪ್ರತಿಷ್ಠಿತ ಥಾಮಸ್ ಕುಕ್ ಕಂಪನಿಗೆ ಆರ್ಥಿಕ ನೆರವು ನೀಡಲು ಸರ್ಕಾರ  ಮತ್ತು ಇನ್ಸೂರೆನ್ಸ್  ಕಂಪನಿ ಮುಂದಾಗಬೇಕಾಗಿದೆ ಎಂದು ವರದಿ ಹೇಳಿತು. ಕಂಪನಿಯನ್ನು ಆರ್ಥಿಕ ನಷ್ಟದಿಂದ ಮೇಲಕ್ಕೆತ್ತಲು ನಡೆಸಿದ ಪ್ರಯತ್ನಗಳು ವಿಫಲವಾಗಿದೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸುವುದಾಗಿ ಚೀಫ್ ಎಕ್ಸಿಕ್ಯೂಟಿವ್ ಪೀಟರ್ ಫ್ಯಾಂಕ್ ಹೌಶೆರ್ ವಿವರಿಸಿದರು.

ನಮ್ಮ ಲಕ್ಷಾಂತರ ಗ್ರಾಹಕರು, ಸಾವಿರಾರು ಉದ್ಯೋಗಿಗಳು ನಮ್ಮ ಕಂಪನಿಯನ್ನು ಹಲವಾರು ವರ್ಷಗಳಿಂದ ಬೆಂಬಲಿಸಿದ್ದೀರಿ..ಈ ಸಂದಿಗ್ದ ಪರಿಸ್ಥಿತಿಯಲ್ಲಿ ನಾನು ಎಲ್ಲರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ ಎಂದು ಫ್ಯಾಂಕ್ ಹೌಶೆರ್ ಪ್ರಕಟಣೆಯಲ್ಲಿ ತಿಳಿಸಿದರು.

September 23, 2019 Posted by | Auto World, ಆಟೋ ಜಗತ್ತು, ಆರ್ಥಿಕ, ವಿಮಾನ, ವಿಶ್ವ/ ಜಗತ್ತು, ಸುಪ್ರೀಂಕೋರ್ಟ್, Finance, Flash News, General Knowledge, News, Spardha, World | , | Leave a comment

ಕರ್ನಾಟಕದಲ್ಲಿ ನೂತನ ಸಂಚಾರ ನಿಯಮದ ದಂಡದ ಮೊತ್ತ ಇಳಿಕೆ

21 Yediyurappa fines reducedಬೆಂಗಳೂರು: ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ಈಗಾಗಲೇ ವಾಹನ ಸವಾರರು ಅಸಮಾಧಾನ ಹಿನ್ನೆಲೆಯಲ್ಲಿ ನೂತನ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ರಾಜ್ಯ ಸರ್ಕಾರ ಇಳಿಕೆ ಮಾಡಿ 2019 ಸೆಪ್ಟೆಂಬರ್ 21ರ ಶನಿವಾರ ಆದೇಶ ಹೊರಡಿಸಿತು.

ಸೆಪ್ಟೆಂಬರ್ 3ರಿಂದ ಕೇಂದ್ರದ ನೂತನ ಮೋಟಾರು ವಾಹನ ಕಾಯ್ದೆ ದೇಶಾದ್ಯಂತ ಜಾರಿಗೊಂಡಿತ್ತು. ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ಬಿಸಿ ಮುಟ್ಟಿಸಿತ್ತು.

ಭಾರೀ ದಂಡದ ಮೊತ್ತ ಬಿಸಿ ತಾಗುತ್ತಿದ್ದಂತೆಯೇ ದೇಶದ ಹಲವೆಡೆ ವಾಹನ ಸವಾರರು ಅಸಮಾಧಾನ ಹೊರಹಾಕತೊಡಗಿದ್ದರು. ಇದರಿಂದಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳಿಗೆ ರಾಜ್ಯ ಸರ್ಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಇಳಿಕೆ ಯಾವುದಕ್ಕೆ ಎಷ್ಟು?

ನೂತನ ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದಂತೆ ಭಾರೀ ಮೊತ್ತದ ದಂಡವನ್ನು ರಾಜ್ಯ ಸರ್ಕಾರ ಇಳಿಕೆ ಮಾಡಿ ಆದೇಶ ಹೊರಡಿಸಿತು. ಆದರೆ ಯಾವುದಕ್ಕೆ ಎಷ್ಟು ಇಳಿಕೆಯಾಗಿದೆ ಎಂಬುದು ಪೂರ್ತಿಯಾಗಿ  ತಿಳಿದುಬರಬೇಕಾಗಿದೆ.

ಸದ್ಯದ ಮಾಧ್ಯಮಗಳ ವರದಿ ಪ್ರಕಾರ, ಲೈಸೆನ್ಸ್ ರಹಿತ ಚಾಲನೆಗೆ 5 ಸಾವಿರ ರೂ. ಬದಲು 2,500 ರೂ. ಅಪಾಯಕಾರಿ ಚಾಲನೆ 5000 ರೂ. ಬದಲು 3 ಸಾವಿರ ರೂಪಾಯಿ, ಹೆಲ್ಮೆಟ್ ರಹಿತ ಚಾಲನೆ ಒಂದು ಸಾವಿರ ರೂ. ದಂಡದ ಬದಲು 500ರೂ.ಗೆ ಇಳಿಕೆ ಮಾಡುವ ಸಾಧ್ಯತೆ ಇದ್ದಿರುವುದಾಗಿ ತಿಳಿಸಿತ್ತು. ಈಗಾಗಲೇ ಗುಜರಾತ್ ಸರ್ಕಾರ ನೂತನ ಮೋಟಾರು ಕಾಯ್ದೆಯ ಭಾರೀ ದಂಡದ ಮೊತ್ತ ಇಳಿಕೆ ಮಾಡಿತ್ತು.

September 21, 2019 Posted by | Auto World, ಆಟೋ ಜಗತ್ತು, ಆರ್ಥಿಕ, ಕರ್ನಾಟಕ, ಬೆಂಗಳೂರು, ಭಾರತ, ಮೋಟಾರು ವಾಹನ,, ರಾಜ್ಯ, ರಾಷ್ಟ್ರೀಯ, Bengaluru, Bangalore,, Nation, News, Spardha | , | Leave a comment

ಓಲಾ ಬೈಕ್‌ 150 ನಗರಗಳಿಗೆ ಬರಲಿದೆ

13 ola bike
ನವದೆಹಲಿ: 
ಓಲಾ, ಊಬರ್‌ಗಳಿಂದಾಗಿ ಕಾರಿನ ಮಾರಾಟ ಕಡಿಮೆಯಾಗಿದೆ ಎಂಬ ಚರ್ಚೆಗಳ ಬೆನ್ನಲ್ಲೇ ದೇಶಾದ್ಯಂತ 150 ನಗರದಲ್ಲಿ ಬೈಕ್‌ ಬಾಡಿಗೆ ಸೇವೆಗೆ ಓಲಾ ಮುಂದಾಯಿತು. ಈ ಮೂಲಕ ಟ್ರಾಫಿಕ್‌ ಕಿರಿಕಿರಿ ಇರುವ ನಗರಗಳಲ್ಲಿ ಬಾಡಿಗೆ ಟ್ಯಾಕ್ಸಿಗಳ ಮಧ್ಯೆ ಇನ್ನೊಂದು ಸುತ್ತಿನ ಸ್ಪರ್ಧೆ ಏರ್ಪಡಿಸಲು ಓಲಾ ವೇದಿಕೆ ಸಿದ್ಧ ಪಡಿಸಿತು.

ಮುಂದಿನ 1 ವರ್ಷದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲೂ ಅದು ಯೋಜನೆ ರೂಪಿಸಿತು. ಸಣ್ಣ ಸಣ್ಣ ನಗರಗಳಲ್ಲೂ ಅದು ಸೇವೆ ನೀಡಲು ಉದ್ದೇಶಿಸಿತು. ಈಗಾಗಲೇ ದಿಲ್ಲಿ ಹೊರವಲಯ ಮತ್ತು ಗುರುಗ್ರಾಮದಂತಹ ಪ್ರದೇಶಗಳಲ್ಲಿ ಓಲಾ ಈ ಬೈಕ್‌ ಸೇವೆ ನೀಡುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಯುವಕರಿಗೆ ಕೆಲಸ ನೀಡುವುದು ಮತ್ತು ಗ್ರಾಹಕರನ್ನು ಮತ್ತಷ್ಟು ಸಂಪರ್ಕಿಸುವ ಉದ್ದೇಶ ಹೊಂದಿದ್ದೇವೆ ಎಂದು ಓಲಾ ಹೇಳಿತು. ಕಿ.ಮೀ.ಗೆ ಸುಮಾರು 5 ಕಿ.ಮೀ. ದರದಲ್ಲಿ ಈ ಬಾಡಿಗೆ ಬೈಕ್‌ ಸೇವೆ ಲಭಿಸುತ್ತದೆ..

ಮೊಬೈಲಿನಲ್ಲಿ ಬುಕ್‌ ಮಾಡಿದ ಕೂಡಲೇ ಒಂದು ಹೆಲ್ಮೆಟ್‌ ಜತೆಗೆ ಬೈಕ್‌ ಮತ್ತು ಸವಾರ ಗ್ರಾಹಕರ ಮುಂದೆ ಹಾಜರಾಗುತ್ತಾನೆ. ಒಬ್ಬ ಮಾತ್ರ ಇದರಲ್ಲಿ ಸಂಚರಿಸಲು ಅವಕಾಶ. ಹೆಲ್ಮೆಟ್‌ ಧರಿಸಿ ಹಿಂದೆ ಕೂತರೆ, ನಿರ್ದಿಷ್ಟ ಪ್ರದೇಶಕ್ಕೆ ಕರೆದೊಯ್ದು ಬಿಡುವ ವ್ಯವಸ್ಥೆ ಇದೆ. ಇದರೊಂದಿಗೆ ಸವಾರನಿಗೆ ಇನ್ಸೂರೆನ್ಸ್‌ ವ್ಯವಸ್ಥೆ, ನಗದು ರಹಿತ ಹಣ ಪಾವತಿಗೂ ಅವಕಾಶವಿದೆ.

September 13, 2019 Posted by | Auto World, ಆಟೋ ಜಗತ್ತು, ಭಾರತ, ರಾಷ್ಟ್ರೀಯ, Consumer Issues, Flash News, Nation, News, Spardha | | Leave a comment

‘ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆ ಕಡಿತ: ನಿತಿನ್ ಗಡ್ಕರಿ

05 nitin gadkari sparda web

ನವದೆಹಲಿ: ಹೈಬ್ರಿಡ್ ವಾಹನಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಕಡಿತ ಮಾಡುವ ಬಗ್ಗೆ ಭಾರತ ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು  2019 ಸೆಪ್ಟೆಂಬರ್ 05ರ ಗುರುವಾರ ಇಲ್ಲಿ ತಿಳಿಸಿದರು.

ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟದ (ಎಸ್‌ಐಎಎಂ) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಗಡ್ಕರಿ ಅವರು  ಗ್ರಾಹಕರ ಬೇಡಿಕೆ ದುರ್ಬಲಗೊಂಡ ಪರಿಣಾಮವಾಗಿ ಮಾರಾಟದ ತೀವ್ರ ಕುಸಿತದಿಂದ ಕಂಗೆಟ್ಟಿರುವ ವಾಹನ ವಲಯಕ್ಕೆ ಬಲ ತುಂಬಲು ಈ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಿದರು.

ಆಟೋಮೊಬೈಲ್ ವಾಹನ ವಲಯದಲ್ಲಿ ಆರ್ಥಿಕ ಹಿಂಜರಿತವಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿಯನ್ನು ಕೇಂದ್ರ ಸಾರಿಗೆ ಸಚಿವರು ನಿರಾಕರಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಬೇಕು ಎಂಬ ಸಲಹೆಯನ್ನು ಸಚಿವಾಲಯ ಸ್ವೀಕರಿಸಿದೆ ಎಂಬ ವಿಷಯ ಚರ್ಚೆಯಾಗುತ್ತಿದೆ.  ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ನಾವು ಆ ರೀತಿಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ನುಡಿದರು.

ಜಾಗತಿಕ ಆರ್ಥಿಕತೆ, ಬೇಡಿಕೆ ಮತ್ತು ಪೂರೈಕೆ ಅಸಮಾನತೆಯಿಂದಾಗಿ ಆಟೋಮೊಬೈಲ್ ವಲಯ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಆಟೋಮೊಬೈಲ್ ವಲಯದೊಂದಿಗೆ ಇದೆ.  ವಿತ್ತ ಸಚಿವಾಲಯದ ಸಹಾಯದಿಂದ ನಾವು ಇದಕ್ಕೊಂದು ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಗಡ್ಕರಿ ಹೇಳಿದರು.

ನಾವು ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಭಾರತ ನಂಬರ್ ೧ ಉತ್ಪಾದನಾ ಘಟಕವಾಗಿದೆ. ಆಟೋಮೊಬೈಲ್  ಸಂಸ್ಥೆಗಳು ಗುಣಮಟ್ಟ ಕೇಂದ್ರೀತವಾಗಬೇಕೇ ಹೊರತು ಬೆಲೆ ಕೇಂದ್ರಿತ ಆಗಬಾರದು ಎಂದು ಸಚಿವರು ನುಡಿದರು.

ಕಳೆದ ವರ್ಷ ಜುಲೈ ತಿಂಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ವರ್ಷ ಪ್ಯಾಸೆಂಜರ್ ವಾಹನಗಳ ಮಾರಾಟ ಶೇ.೩೦.೯೮ ಕುಸಿದಿದೆ. ಕಳೆದ ೧೯ ವರ್ಷಗಳಲ್ಲಿ ಇದೇ ಮೊದಲ ಬಾರಿ ಈ ರೀತಿ ಕುಸಿತವುಂಟಾಗಿದೆ.

ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಮುಂಚೂಣಿಯ  ಹಲವಾರು ವಾಹನ ತಯಾರಕ ಕಂಪೆನಿಗಳು ತಮ್ಮ ವಾಹನ ತಯಾರಿ ಘಟಕಗಳನ್ನು ಮುಚ್ಚುತ್ತಿದ್ದು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗೆಗಿನ ವರದಿಗಳ ಮಧ್ಯೆ ಸಚಿವರಿಂದ ಹೈಬ್ರಿಡ್ ವಾಹನಗಳಿಗೆ ಜಿಎಸ್ ದರ ಕಡಿತದ ಭರವಸೆ ಬಂದಿದೆ.

ಹೈಬ್ರಿಡ್ ವಾಹನಗಳಿಗೆ ಶೇಕಡಾ ೧೫ ರಷ್ಟು ತೆರಿಗೆ ಕಡಿತವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿದೆ.

ಏನಿದು ಹೈಬ್ರಿಡ್ ವಾಹನ?

ಹೈಬ್ರಿಡ್ ವಾಹನಗಳೆಂದರೆ ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಒಂದೇ ಒಂದು ಇಂಧನ ಬಳಸುವ ಬದಲು ಎರಡು ಅಥವಾ ಅದಕ್ಕಿಂತ ಹೆಚ್ಚು ಇಂಧನಗಳನ್ನು ಬಳಸುವಂತಹ ಎಂಜಿನ್ ಹೊಂದಿರುವಂತಹ ವಾಹನಗಳು ಎಂದು ಅರ್ಥ.

ಇಂತಹ ವಾಹನಗಳಲ್ಲಿ ವಿದ್ಯುತ್ ಮೋಟಾರಿಗೆ  ಶಕ್ತಿ ನೀಡುವ ವಿದ್ಯುತ್ ಜನರೇಟರ್ ಚಲಾವಣೆಗೆ ವಾಹನದ ಒಳಗೆ ಒಂದಕ್ಕಿಂತ ಹೆಚ್ಚು ಇಂಧನ ಬಳಸಲು ಸಾಧ್ಯವಾಗುವಂತೆ ಆಂತರಿಕವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಅಂದರೆ ಎಂಜಿನ್ ಎರಡು ಅಥವಾ ಹೆಚ್ಚಿನ ವಿಭಿನ್ನ ರೀತಿಯ ಇಂಧನವನ್ನು ಬಳಸುತ್ತದೆ, ಉದಾಹರಣೆಗೆ ಡೀಸೆಲ್-ಎಲೆಕ್ಟ್ರಿಕ್ ರೈಲುಗಳು. ಈ ರೈಲುಗಳು ಎಲೆಕ್ಟ್ರಿಕ್ ಮೋಟಾರಿಗೆ ಶಕ್ತಿ ತುಂಬಲು ಎಲೆಕ್ಟ್ರಿಕ್ ಜನರೇಟರ್ ಮತು ಡೀಸೆಲ್ ಎರಡನ್ನೂ ಬಳಸುತ್ತವೆ.

ಅದೇರೀತಿ ಜಲಾಂತರ್ಗಾಮಿಗಳು ನೀರೊಳಗೆ ಚಲಿಸುವಾಗ ಬ್ಯಾಟರಿಗಳನ್ನು ಮತ್ತು ನೀರಿನಿಂದ ಮೇಲಕ್ಕೆ ಕಾಣಿಸಿಕೊಳ್ಳುವಾಗ ಡೀಸೆಲನ್ನು ಬಳಸುತ್ತವೆ.

ಹೈಬ್ರಿಡ್ ವಾಹನಗಳ ಮೂಲ ತತ್ವವೆಂದರೆ ವಿಭಿನ್ನ ಮೋಟಾರುಗಳು ವಿಭಿನ್ನ ವೇಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವುದು. ಟಾರ್ಕ್ ಅಥವಾ ತಿರುಗುವ ಶಕ್ತಿಯನ್ನು ಉತ್ಪಾದಿಸುವಲ್ಲಿ ವಿದ್ಯುತ್ ಮೋಟರ್ ಹೆಚ್ಚು ಪರಿಣಾಮಕಾರಿಯಾಗಿದ್ದರೆಮ ಹೆಚ್ಚಿನ ವೇಗವನ್ನು ನಿರ್ವಹಿಸಲು ದಹನಕಾರಿ ಎಂಜಿನ್ ವಿಶಿಷ್ಟ ಎಲೆಕ್ಟ್ರಿಕ್ ಮೋಟಾರಿಗಿಂತ ಉತ್ತಮ. ವೇಗವನ್ನು ಹೆಚ್ಚಿಸುವಾಗ ಸರಿಯಾದ ಸಮಯದಲ್ಲಿ ಇಂಧನವನ್ನು ಒಂದರಿಂದ ಇನ್ನೊಂದಕ್ಕೆ ಬದಲಾಯಿಸುವುದರಿಂದ ಇಂಧ ದಕ್ಷತೆ ಹೆಚ್ಚುತ್ತದೆ.

ಪೆಟ್ರೋಲ್, ಡೀಸೆಲ್ ಜೊತೆಗೆ ವಿದ್ಯುತ್,  ಎಲ್‌ಪಿಜಿ ಅಥವಾ ಸೌರ ಶಕ್ತಿಯನ್ನು ಬಳಸಿಕೊಳ್ಳುವಂತೆಯೂ ವಾಹನಗಳ ಎಂಜಿನ್ನುಗಳ ವಿನ್ಯಾಸವನ್ನು ಮಾರ್ಪಾಡು ಮಾಡಬಹುದು.

ಸರ್ಕಾರವು ಪರಿಸರ ಸ್ನೇಹಿ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ನೀತಿ ಅನುಸರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಕ್ರಮೇಣವಾಗಿ ಪೆಟ್ರೋಲ್, ಡೀಸೆಲ್‌ನಂತಹ ಸಾಂಪ್ರದಾಯಿಕ ಇಂಧನ ಬಳಕೆ ತಗ್ಗಿಸಲು ಇಂತಹ ಹೈಬ್ರಿಡ್ ವಾಹನಗಳ ತಯಾರಿಯಿಂದ ಸಾಧ್ಯವಾಗಬಹುದು. ಇದರಿಂದ ವಾಹನ ತಯಾರಕ ಕಂಪೆನಿಗಳು ಮತ್ತು ಗ್ರಾಹಕರಿಗೆ ಅನುಕೂಲವಾಗುವ ಸಾಧ್ಯತೆ ಇದೆ.

September 5, 2019 Posted by | Auto World, ಆಟೋ ಜಗತ್ತು, ಮೋಟಾರು ವಾಹನ,, ಹೈಬ್ರಿಡ್ ವಾಹನ, Consumer Issues, Flash News, General Knowledge, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ