SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕ್ರೆಡಿಟ್ ಕಾರ್ಡಿನ ಬಹುಮಾನ ಜಮೆಯಾಗಲೇ ಇಲ್ಲ..!

grahak-credit-card-prize

ಕ್ರೆಡಿಟ್ ಕಾರ್ಡಿನ ಬಹುಮಾನ ಜಮೆಯಾಗಲೇ ಇಲ್ಲ..!

ತನ್ನದೇ ಯೋಜನೆಯಂತೆ ನೀಡಬೇಕಾಗಿದ್ದ ಬಹುಮಾನದ ಹಣವನ್ನು ನೀಡದೇ ಇರುವುದರ ಜೊತೆಗೆ, ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಬಡ್ಡಿಗಾಗಿ ವರ್ಗಾಯಿಸಿ, 2008ರ ಏಪ್ರಿಲಿನಿಂದ ಕ್ರೆಡಿಟ್ ಕಾರ್ಡನ್ನೂ ತಡೆ ಹಿಡಿದ ಪ್ರತಿವಾದಿಯ ಏಕಪಕ್ಷೀಯ ಕ್ರಮದಿಂದಾಗಿ ಅರ್ಜಿದಾರರಿಗೆ ಮಾನಸಿಕ ಯಾತನೆ ಹಾಗೂ ಹಣಕಾಸು ನಷ್ಟ ಸಂಭವಿಸಿದ್ದು ಸಹಜ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನೆತ್ರಕೆರೆ ಉದಯಶಂಕರ

ಕ್ರೆಡಿಟ್ ಕಾರ್ಡ್ ಈಗ ಸರ್ವ ವ್ಯಾಪಿ. ಈ ಕ್ರೆಡಿಟ್ ಕಾರ್ಡನ್ನು ಜನಪ್ರಿಯಗೊಳಿಸುವ ಸಲುವಾಗಿ ವಿವಿಧ ಸಂಸ್ಥೆಗಳು ಆಡುವ ಆಟಗಳು ಅಷ್ಟಿಷ್ಟಲ್ಲ. ಇಂತಹ ಆಟ, ಪ್ರಚಾರಗಳ ಆಕರ್ಷಣೆಗೆ ಒಳಗಾಗಿ ನಷ್ಟ ಅನುಭವಿಸಿದವರ ಗತಿ ಏನು? ಗ್ರಾಹಕ ಸಂರಕ್ಷಣಾ ಕಾಯ್ದೆ ನೆರವಿಗೆ ಬರುತ್ತದೆಯೇ?

ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರ ವಿಚಾರಣೆ ನಡೆಸಿದ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿದೆ.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಕಾವೇರಿ ನಗರದ ಅಶೋಕ ಕುಮಾರ ಎಸ್. ಪ್ರತಿವಾದಿಗಳು: 1) ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಮೈಟ್ರೀ ಕೇಂದ್ರ, ಬೊಮ್ಮನಹಳ್ಳಿ ಹೊಸೂರು ರಸ್ತೆ, ಬೆಂಗಳೂರು. 2) ಐಸಿಐಸಿಐ ಬ್ಯಾಂಕ್ ಲಿಮಿಟೆಡ್, ಹೈದರಾಬಾದ್.
ಅರ್ಜಿದಾರ ಅಶೋಕ ಕುಮಾರ ಅವರು 2007ರ ಮಾರ್ಚ್ ತಿಂಗಳಲ್ಲಿ ಪ್ರತಿವಾದಿ ಐಸಿಐಸಿಐ ಬ್ಯಾಂಕಿನ ಇತರ ಸವಲತ್ತುಗಳ ಜೊತೆಗೆ ಕ್ರೆಡಿಟ್ ಕಾರ್ಡ್ ಸವಲತ್ತನ್ನೂ ಪಡೆದುಕೊಂಡಿದ್ದರು. ‘ಐಸಿಐಸಿಐ ಬ್ಯಾಂಕ್ ಎಕ್ಸ್ ಪ್ರೆಸ್ ರಿವಾರ್ಡ್’ ಎಂಬ ಕಾರ್ಯಕ್ರಮದ ಅಡಿಯಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿದ ಪ್ರತಿಯೊಬ್ಬ ಗ್ರಾಹಕರೂ ತಾವು ಕ್ರೆಡಿಟ್ ಕಾರ್ಡ್ ಬಳಸಿ ಮಾಡುವ ಪ್ರತಿ 200 ರೂಪಾಯಿ
ವೆಚ್ಚಕ್ಕೆ 10 ಬಹುಮಾನ ಪಾಯಿಂಟುಗಳನ್ನು (ರಿವಾರ್ಡ್ ಪಾಯಿಂಟ್ಸ್) ಪಡೆಯಲು ಅರ್ಹರಾಗಿದ್ದರು.

2007ರ ಏಪ್ರಿಲಿನಿಂದ ಕ್ರೆಡಿಟ್ ಕಾರ್ಡ್ ಬಳಸಿದ್ದ ಅರ್ಜಿದಾರ ಅಶೋಕ ಕುಮಾರ ಅವರು ತಾವು ಪಾವತಿ ಮಾಡಬೇಕಾಗಿದ್ದ ಬಾಕಿ ಹಣವನ್ನು ಕರಾರುವಾಕ್ಕಾಗಿ ಪಾವತಿ ಮಾಡುತ್ತಾ ಬಂದಿದ್ದರು. ಲೆಕ್ಕಾಚಾರದ ಪ್ರಕಾರ ಅವರಿಗೆ 26119 ಬಹುಮಾನ ಪಾಯಿಂಟುಗಳು ಜಮೆಯಾಗಿದ್ದವು. ಯೋಜನೆಯ ಪ್ರಕಾರ ಪ್ರತಿವಾದಿ ಐಸಿಐಸಿಐ ಬ್ಯಾಂಕ್ ಅಶೋಕ ಕುಮಾರ ಅವರಿಗೆ ಪ್ರತಿ ಪಾಯಿಂಟಿಗೆ ತಲಾ ಒಂದು ರೂಪಾಯಿಯಂತೆ ಬಹುಮಾನ ಕೊಡಬೇಕಾಗಿತ್ತು. ಈ ಬಹುಮಾನದ ಹಣವನ್ನು ತಾನು ಪಾವತಿ ಮಾಡಬೇಕಾಗಿದ್ದ ಬಾಕಿ ಹಣಕ್ಕೆ ಹೊಂದಾಣಿಕೆ ಮಾಡುವಂತೆ ಅಶೋಕ ಕುಮಾರ ಅವರು ಮನವಿ ಮಾಡಿದರು.

ಆದರೆ ಪ್ರತಿವಾದಿ ಬ್ಯಾಂಕು ಈ ಮನವಿಯನ್ನು ಪರಿಗಣಿಸಲಿಲ್ಲ. ಅರ್ಜಿದಾರ ಅಶೋಕ ಕುಮಾರ ಅವರು ಹಲವಾರು ಬಾರಿ ಮನವಿ ಮಾಡಿ ಪತ್ರಗಳನ್ನು ಬರೆದರೂ ಸ್ಪಂದಿಸಲಿಲ್ಲ. ತನ್ನ ಉಳಿತಾಯ ಖಾತೆಯನ್ನು ಪರಿಶೀಲಿಸಿದಾಗ ಬಹುಮಾನದ ಹಣ ಹೊಂದಾಣಿಕೆ ಮಾಡುವ ಬದಲು ಉಳಿತಾಯ ಖಾತೆಯಲ್ಲಿ ಇದ್ದ ಹಣವನ್ನೇ ಅನ್ಯಾಯವಾಗಿ ಬಾಕಿ ಹಣಕ್ಕಾಗಿ ವರ್ಗಾಯಿಸಿದ್ದು ಗೊತ್ತಾಯಿತು. ಬಡ್ಡಿ ಮನ್ನಾ ಮಾಡುವಂತೆ ಅರ್ಜಿದಾರರು ಮತ್ತೆ ಮತ್ತೆ ಮಾಡಿದ ಮನವಿ ನೀರ ಮೇಲಣ ಹೋಮವಾಯಿತು.

ಬಹುಮಾನದ ಹಣ ಹೊಂದಾಣಿಕೆ ಮಾಡದೇ ಇರುವುದರ ಜೊತೆಗೆ ಉಳಿತಾಯ ಖಾತೆಯಿಂದ 8,747 ರೂಪಾಯಿಗಳನ್ನು ತೆಗೆದದ್ದು ಸೇವಾಲೋಪ ಎಂಬುದಾಗಿ ಅರ್ಜಿದಾರರು ಪರಿಗಣಿಸಿದರು. ಇದರ ಜೊತೆಗೇ 2008ರ ಏಪ್ರಿಲಿನಿಂದ ಕ್ರೆಡಿಟ್ ಕಾರ್ಡನ್ನೂ ತಡೆ ಹಿಡಿಯಲಾಯಿತು. ತನ್ನದಲ್ಲದ ತಪ್ಪಿಗಾಗಿ ಅರ್ಜಿದಾರರು ಮಾನಸಿಕ ಯಾತನೆ ಮತ್ತು ಹಣಕಾಸು ನಷ್ಟ ಅನುಭವಿಸುವಂತಾಯಿತು.

ನ್ಯಾಯಕ್ಕಾಗಿ ಅರ್ಜಿದಾರ ಅಶೋಕ ಕುಮಾರ ಅವರು ಗ್ರಾಹಕ ನ್ಯಾಯಾಲಯದ ಕದ ತಟ್ಟಿದರು. ಅಧ್ಯಕ್ಷ ಎ.ಎಂ. ಬೆನ್ನೂರು ಮತ್ತು ಸದಸ್ಯ ಎ. ಮುನಿಯಪ್ಪ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಆರ್. ಎಸ್. ರವಿ ಮತ್ತು ಇತರರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಅರ್ಜಿದಾರರ ದೂರನ್ನು ದಾಖಲಿಸಿಕೊಂಡು ಕಳುಹಿಸಲಾದ ನೋಟಿಸಿಗೆ ಪ್ರತಿವಾದಿ ಐಸಿಐಸಿಐ ಬ್ಯಾಂಕು ಉತ್ತರಿಸಲಿಲ್ಲ. ಯಾವುದೇ ಸೂಕ್ತ ಕಾರಣವನ್ನೂ ನೀಡದೆ ನ್ಯಾಯಾಲಯ ಕಲಾಪಕ್ಕೂ ಗೈರು ಹಾಜರಾಯಿತು. ಹೀಗಾಗಿ ಪ್ರತಿವಾದಿಯ ಗೈರು ಹಾಜರಿಯಲ್ಲೇ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದುವರೆಸಿತು.

ಅರ್ಜಿದಾರರು ತಮ್ಮ ದೂರಿಗೆ ಸಮರ್ಥನೆಯಾಗಿ ಪ್ರಮಾಣ ಪತ್ರದ ಜೊತೆಗೆ ಕೆಲವು ದಾಖಲೆಗಳನ್ನೂ ಹಾಜರು ಪಡಿಸಿದರು. ಅರ್ಜಿದಾರರು ಪ್ರತಿವಾದಿ ಬ್ಯಾಂಕಿನಿಂದ ಇತರ ಸವಲತ್ತುಗಳ ಜೊತೆಗೆ ಕ್ರೆಡಿಟ್ ಕಾರ್ಡ್ ಸವಲತ್ತನ್ನೂ ಪಡೆದುಕೊಂಡದ್ದನ್ನು ನ್ಯಾಯಾಲಯ ಗಮನಿಸಿತು. ಪ್ರತಿ ಕ್ರೆಡಿಟ್ ಕಾರ್ಡನ್ನೂ ಬಳಸಿ ವೆಚ್ಚ ಮಾಡಲಾಗುವ 200 ರೂಪಾಯಿಗಳಿಗೆ 10 ಬಹುಮಾನ ಪಾಯಿಂಟುಗಳನ್ನು ನೀಡುವ ಬಗ್ಗೆ ವಿವರಿಸಿ ಬ್ಯಾಂಕು ವಿತರಿಸಿದ್ದ ಪ್ರಚಾರ ಕರಪತ್ರಗಳನ್ನೂ ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಒಂದು ವರ್ಷ ಕಾಲ ಈ ಕ್ರೆಡಿಟ್ ಕಾರ್ಡನ್ನು ಅರ್ಜಿದಾರರು ಬಳಸಿಕೊಂಡಿದ್ದರು. 2007ರ ಏಪ್ರಿಲ್ ತಿಂಗಳವರೆಗೂ ಅವರು ಸಮರ್ಪಕವಾಗಿ ಬಾಕಿ ಪಾವತಿ ಮಾಡಿದ್ದರು. ಈ ಅವಧಿಯಲ್ಲಿ ಪ್ರತಿ ಪಾಯಿಂಟಿಗೆ ಒಂದು ರೂಪಾಯಿಯಂತೆ ತಮಗೆ ಒಟ್ಟು 26,119 ರೂಪಾಯಿಗಳು ಪ್ರತಿವಾದಿ ಬ್ಯಾಂಕಿನಿಂದ ಬರಬೇಕು ಎಂದು ಅರ್ಜಿದಾರರು ನಿರೀಕ್ಷಿಸಿದ್ದರು.

ಈ ಹಣವನ್ನು ಬಾಕಿ ಹಣಕ್ಕೆ ಹೊಂದಾಣಿಕೆ ಮಾಡುವಂತೆ ಕೋರಿದಾಗ, ಉಳಿತಾಯ ಖಾತೆ ತೆರೆಯುವಂತೆ ಒತ್ತಾಯಿಸಿದ ಪ್ರತಿವಾದಿ ಬ್ಯಾಂಕು ನಂತರ ಉಳಿತಾಯ ಖಾತೆಯಲ್ಲಿದ್ದ ಹಣವನ್ನೇ ಬಡ್ಡಿಗಾಗಿ ವರ್ಗಾಯಿಸಿದ್ದನ್ನೂ ನ್ಯಾಯಾಲಯ ಗಮನಿಸಿತು.
ಈ ಬಗ್ಗೆ ಪ್ರತಿವಾದಿಗೆ ಬರೆದ ಪತ್ರಗಳು, ಮನವಿಗಳನ್ನು ಗಮನಿಸಿದ ನ್ಯಾಯಾಲಯ ಅರ್ಜಿದಾರರು ಹಾಜರು ಪಡಿಸಿದ ಸಾಕ್ಷ್ಯಾಧಾರಗಳು ಸಹಜವೂ, ವಿಶ್ವಾಸಾರ್ಹವಾಗಿಯೂ ಇವೆ ಎಂದು ಭಾವಿಸಿತು. ನ್ಯಾಯಾಲಯದ ನೋಟಿಸ್ ಬಂದರೂ ಅದನ್ನು ನಿರ್ಲಕ್ಷಿಸಿ, ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಪ್ರತಿವಾದಿಯು ಅರ್ಜಿದಾರರ ಎಲ್ಲ ಆರೋಪಗಳನ್ನೂ ಒಪ್ಪಿಕೊಂಡಿದ್ದಾರೆ ಎಂಬ ನಿರ್ಣಯಕ್ಕೆ ತಾವು ಬರುವಂತೆ ಮಾಡಿದೆ ಎಂದು ಪೀಠವು ಹೇಳಿತು.

ತನ್ನದೇ ಯೋಜನೆಯಂತೆ ನೀಡಬೇಕಾಗಿದ್ದ ಬಹುಮಾನದ ಹಣವನ್ನು ನೀಡದೇ ಇರುವುದರ ಜೊತೆಗೆ, ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಬಡ್ಡಿಗಾಗಿ ವರ್ಗಾಯಿಸಿ, 2008ರ ಏಪ್ರಿಲಿನಿಂದ ಕ್ರೆಡಿಟ್ ಕಾರ್ಡನ್ನೂ ತಡೆ ಹಿಡಿದ ಪ್ರತಿವಾದಿಯ ಏಕಪಕ್ಷೀಯ ಕ್ರಮದಿಂದಾಗಿ ಅರ್ಜಿದಾರರಿಗೆ ಮಾನಸಿಕ ಯಾತನೆ ಹಾಗೂ ಹಣಕಾಸು ನಷ್ಟ ಸಂಭವಿಸಿದ್ದು ಸಹಜ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಪ್ರತಿವಾದಿಯಿಂದ ಸೇವಾಲೋಪ ಆಗಿರುವ ವಿಚಾರವನ್ನು ಸಾಬೀತು ಪಡಿಸುವಲ್ಲಿ ಅರ್ಜಿದಾರರು ಸಫಲರಾಗಿದ್ದಾರೆ ಎಂಬುದನ್ನು ಈ ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳು ಖಚಿತಪಡಿಸಿವೆ. ಆದ್ದರಿಂದ ಅರ್ಜಿದಾರರು ಪರಿಹಾರಕ್ಕೆ ಅರ್ಹರು ಎಂದು ಹೇಳಿದ ನ್ಯಾಯಾಲಯವು ಸಿಗಬೇಕಾದ ಬಹುಮಾನ ಪಾಯಿಂಟುಗಳ ಮೌಲ್ಯ 26,119 ರೂಪಾಯಿಗಳನ್ನು 2000 ರೂಪಾಯಿ ಪರಿಹಾರ ಮತ್ತು 500 ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ಅರ್ಜಿದಾರರಿಗೆ ನಾಲ್ಕು ವಾರಗಳ ಒಳಗೆ ಪಾವತಿ ಮಾಡುವಂತೆ ಪ್ರತಿವಾದಿ ಐಸಿಐಸಿಐ ಬ್ಯಾಂಕಿಗೆ ಆಜ್ಞಾಪಿಸಿತು.

August 20, 2009 Posted by | consumer cases, Consumer Issues, Spardha | , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ