SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

‘ಹೈಬ್ರಿಡ್ ವಾಹನಗಳ ಮೇಲಿನ ತೆರಿಗೆ ಕಡಿತ: ನಿತಿನ್ ಗಡ್ಕರಿ


05 nitin gadkari sparda web

ನವದೆಹಲಿ: ಹೈಬ್ರಿಡ್ ವಾಹನಗಳ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಕಡಿತ ಮಾಡುವ ಬಗ್ಗೆ ಭಾರತ ಸರ್ಕಾರ ಪರಿಶೀಲಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು  2019 ಸೆಪ್ಟೆಂಬರ್ 05ರ ಗುರುವಾರ ಇಲ್ಲಿ ತಿಳಿಸಿದರು.

ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟದ (ಎಸ್‌ಐಎಎಂ) ವಾರ್ಷಿಕ ಸಭೆಯಲ್ಲಿ ಮಾತನಾಡಿದ ಗಡ್ಕರಿ ಅವರು  ಗ್ರಾಹಕರ ಬೇಡಿಕೆ ದುರ್ಬಲಗೊಂಡ ಪರಿಣಾಮವಾಗಿ ಮಾರಾಟದ ತೀವ್ರ ಕುಸಿತದಿಂದ ಕಂಗೆಟ್ಟಿರುವ ವಾಹನ ವಲಯಕ್ಕೆ ಬಲ ತುಂಬಲು ಈ ಬಗ್ಗೆ ಸರ್ಕಾರ ಪರಿಶೀಲಿಸುತ್ತಿದೆ ಎಂದು ಹೇಳಿದರು.

ಆಟೋಮೊಬೈಲ್ ವಾಹನ ವಲಯದಲ್ಲಿ ಆರ್ಥಿಕ ಹಿಂಜರಿತವಿರುವ ಕಾರಣ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂಬ ಸುದ್ದಿಯನ್ನು ಕೇಂದ್ರ ಸಾರಿಗೆ ಸಚಿವರು ನಿರಾಕರಿಸಿದರು.

ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸಬೇಕು ಎಂಬ ಸಲಹೆಯನ್ನು ಸಚಿವಾಲಯ ಸ್ವೀಕರಿಸಿದೆ ಎಂಬ ವಿಷಯ ಚರ್ಚೆಯಾಗುತ್ತಿದೆ.  ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ನಿಷೇಧಿಸುವ ಇರಾದೆಯನ್ನು ಕೇಂದ್ರ ಸರ್ಕಾರ ಹೊಂದಿಲ್ಲ. ನಾವು ಆ ರೀತಿಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಅವರು ನುಡಿದರು.

ಜಾಗತಿಕ ಆರ್ಥಿಕತೆ, ಬೇಡಿಕೆ ಮತ್ತು ಪೂರೈಕೆ ಅಸಮಾನತೆಯಿಂದಾಗಿ ಆಟೋಮೊಬೈಲ್ ವಲಯ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಆಟೋಮೊಬೈಲ್ ವಲಯದೊಂದಿಗೆ ಇದೆ.  ವಿತ್ತ ಸಚಿವಾಲಯದ ಸಹಾಯದಿಂದ ನಾವು ಇದಕ್ಕೊಂದು ಪರಿಹಾರ ಕಂಡುಕೊಳ್ಳುತ್ತೇವೆ ಎಂದು ಗಡ್ಕರಿ ಹೇಳಿದರು.

ನಾವು ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಭಾರತ ನಂಬರ್ ೧ ಉತ್ಪಾದನಾ ಘಟಕವಾಗಿದೆ. ಆಟೋಮೊಬೈಲ್  ಸಂಸ್ಥೆಗಳು ಗುಣಮಟ್ಟ ಕೇಂದ್ರೀತವಾಗಬೇಕೇ ಹೊರತು ಬೆಲೆ ಕೇಂದ್ರಿತ ಆಗಬಾರದು ಎಂದು ಸಚಿವರು ನುಡಿದರು.

ಕಳೆದ ವರ್ಷ ಜುಲೈ ತಿಂಗಳಿಗೆ ಹೋಲಿಸಿದರೆ ಭಾರತದಲ್ಲಿ ಈ ವರ್ಷ ಪ್ಯಾಸೆಂಜರ್ ವಾಹನಗಳ ಮಾರಾಟ ಶೇ.೩೦.೯೮ ಕುಸಿದಿದೆ. ಕಳೆದ ೧೯ ವರ್ಷಗಳಲ್ಲಿ ಇದೇ ಮೊದಲ ಬಾರಿ ಈ ರೀತಿ ಕುಸಿತವುಂಟಾಗಿದೆ.

ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಮುಂಚೂಣಿಯ  ಹಲವಾರು ವಾಹನ ತಯಾರಕ ಕಂಪೆನಿಗಳು ತಮ್ಮ ವಾಹನ ತಯಾರಿ ಘಟಕಗಳನ್ನು ಮುಚ್ಚುತ್ತಿದ್ದು ಉದ್ಯೋಗಿಗಳನ್ನು ವಜಾಗೊಳಿಸುತ್ತಿರುವ ಬಗೆಗಿನ ವರದಿಗಳ ಮಧ್ಯೆ ಸಚಿವರಿಂದ ಹೈಬ್ರಿಡ್ ವಾಹನಗಳಿಗೆ ಜಿಎಸ್ ದರ ಕಡಿತದ ಭರವಸೆ ಬಂದಿದೆ.

ಹೈಬ್ರಿಡ್ ವಾಹನಗಳಿಗೆ ಶೇಕಡಾ ೧೫ ರಷ್ಟು ತೆರಿಗೆ ಕಡಿತವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಪತ್ರಿಕಾ ವರದಿಯೊಂದು ತಿಳಿಸಿದೆ.

ಏನಿದು ಹೈಬ್ರಿಡ್ ವಾಹನ?

ಹೈಬ್ರಿಡ್ ವಾಹನಗಳೆಂದರೆ ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಒಂದೇ ಒಂದು ಇಂಧನ ಬಳಸುವ ಬದಲು ಎರಡು ಅಥವಾ ಅದಕ್ಕಿಂತ ಹೆಚ್ಚು ಇಂಧನಗಳನ್ನು ಬಳಸುವಂತಹ ಎಂಜಿನ್ ಹೊಂದಿರುವಂತಹ ವಾಹನಗಳು ಎಂದು ಅರ್ಥ.

ಇಂತಹ ವಾಹನಗಳಲ್ಲಿ ವಿದ್ಯುತ್ ಮೋಟಾರಿಗೆ  ಶಕ್ತಿ ನೀಡುವ ವಿದ್ಯುತ್ ಜನರೇಟರ್ ಚಲಾವಣೆಗೆ ವಾಹನದ ಒಳಗೆ ಒಂದಕ್ಕಿಂತ ಹೆಚ್ಚು ಇಂಧನ ಬಳಸಲು ಸಾಧ್ಯವಾಗುವಂತೆ ಆಂತರಿಕವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಅಂದರೆ ಎಂಜಿನ್ ಎರಡು ಅಥವಾ ಹೆಚ್ಚಿನ ವಿಭಿನ್ನ ರೀತಿಯ ಇಂಧನವನ್ನು ಬಳಸುತ್ತದೆ, ಉದಾಹರಣೆಗೆ ಡೀಸೆಲ್-ಎಲೆಕ್ಟ್ರಿಕ್ ರೈಲುಗಳು. ಈ ರೈಲುಗಳು ಎಲೆಕ್ಟ್ರಿಕ್ ಮೋಟಾರಿಗೆ ಶಕ್ತಿ ತುಂಬಲು ಎಲೆಕ್ಟ್ರಿಕ್ ಜನರೇಟರ್ ಮತು ಡೀಸೆಲ್ ಎರಡನ್ನೂ ಬಳಸುತ್ತವೆ.

ಅದೇರೀತಿ ಜಲಾಂತರ್ಗಾಮಿಗಳು ನೀರೊಳಗೆ ಚಲಿಸುವಾಗ ಬ್ಯಾಟರಿಗಳನ್ನು ಮತ್ತು ನೀರಿನಿಂದ ಮೇಲಕ್ಕೆ ಕಾಣಿಸಿಕೊಳ್ಳುವಾಗ ಡೀಸೆಲನ್ನು ಬಳಸುತ್ತವೆ.

ಹೈಬ್ರಿಡ್ ವಾಹನಗಳ ಮೂಲ ತತ್ವವೆಂದರೆ ವಿಭಿನ್ನ ಮೋಟಾರುಗಳು ವಿಭಿನ್ನ ವೇಗದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುವುದು. ಟಾರ್ಕ್ ಅಥವಾ ತಿರುಗುವ ಶಕ್ತಿಯನ್ನು ಉತ್ಪಾದಿಸುವಲ್ಲಿ ವಿದ್ಯುತ್ ಮೋಟರ್ ಹೆಚ್ಚು ಪರಿಣಾಮಕಾರಿಯಾಗಿದ್ದರೆಮ ಹೆಚ್ಚಿನ ವೇಗವನ್ನು ನಿರ್ವಹಿಸಲು ದಹನಕಾರಿ ಎಂಜಿನ್ ವಿಶಿಷ್ಟ ಎಲೆಕ್ಟ್ರಿಕ್ ಮೋಟಾರಿಗಿಂತ ಉತ್ತಮ. ವೇಗವನ್ನು ಹೆಚ್ಚಿಸುವಾಗ ಸರಿಯಾದ ಸಮಯದಲ್ಲಿ ಇಂಧನವನ್ನು ಒಂದರಿಂದ ಇನ್ನೊಂದಕ್ಕೆ ಬದಲಾಯಿಸುವುದರಿಂದ ಇಂಧ ದಕ್ಷತೆ ಹೆಚ್ಚುತ್ತದೆ.

ಪೆಟ್ರೋಲ್, ಡೀಸೆಲ್ ಜೊತೆಗೆ ವಿದ್ಯುತ್,  ಎಲ್‌ಪಿಜಿ ಅಥವಾ ಸೌರ ಶಕ್ತಿಯನ್ನು ಬಳಸಿಕೊಳ್ಳುವಂತೆಯೂ ವಾಹನಗಳ ಎಂಜಿನ್ನುಗಳ ವಿನ್ಯಾಸವನ್ನು ಮಾರ್ಪಾಡು ಮಾಡಬಹುದು.

ಸರ್ಕಾರವು ಪರಿಸರ ಸ್ನೇಹಿ ವಾಹನಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ನೀತಿ ಅನುಸರಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಕ್ರಮೇಣವಾಗಿ ಪೆಟ್ರೋಲ್, ಡೀಸೆಲ್‌ನಂತಹ ಸಾಂಪ್ರದಾಯಿಕ ಇಂಧನ ಬಳಕೆ ತಗ್ಗಿಸಲು ಇಂತಹ ಹೈಬ್ರಿಡ್ ವಾಹನಗಳ ತಯಾರಿಯಿಂದ ಸಾಧ್ಯವಾಗಬಹುದು. ಇದರಿಂದ ವಾಹನ ತಯಾರಕ ಕಂಪೆನಿಗಳು ಮತ್ತು ಗ್ರಾಹಕರಿಗೆ ಅನುಕೂಲವಾಗುವ ಸಾಧ್ಯತೆ ಇದೆ.

September 5, 2019 - Posted by | Auto World, ಆಟೋ ಜಗತ್ತು, ಮೋಟಾರು ವಾಹನ,, ಹೈಬ್ರಿಡ್ ವಾಹನ, Consumer Issues, Flash News, General Knowledge, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ