SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಹಿರಿಯ ವಕೀಲ ರಾಮ್‌ ಜೇಠ್ಮಲಾನಿ ವಿಧಿವಶ


08 ram jetmalani

ನವದೆಹಲಿ: ಕೇಂದ್ರದ ಮಾಜಿ ಕಾನೂನು ಸಚಿವ, ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ರಾಮ್ ಬೂಲ್‌ಚಂದ್ ಜೇಠ್ಮಲಾನಿ ಅವರು 2019 ಸೆಪ್ಟೆಂಬರ್ 8ರ ಭಾನುವಾರ  ಮುಂಜಾನೆ ವಿಧಿವಶರಾದರು.. ೯೫ ವರ್ಷಗಳನ್ನು ಪೂರೈಸಿ ಇನ್ನು ೬ ದಿನಗಳಲ್ಲಿ ಅವರು ೯೬ನೇ ವರ್ಷಕ್ಕೆ ಕಾಲಿಡಲಿದ್ದರು.

ವಯೋ ಸಹಜ ಆರೋಗ್ಯ ಸಮಸ್ಯೆಗಳಿಗಾಗಿ ಚಿಕಿತ್ಸೆ ಪಡೆಯುತ್ತಿದ್ದ ರಾಮ್ ಜೇಠ್ಮಲಾನಿ, ನವದೆಹಲಿಯ ತಮ್ಮ ನಿವಾಸದಲ್ಲಿ ಬೆಳಗ್ಗೆ ೭.೪೫ ಗಂಟೆಗೆ ಕೊನೆಯುಸಿರೆಳೆದರು.

ಸಿಂಧ್ ಪ್ರಾಂತ್ಯದ ಸಿಖಾರ್‌ಪುರ ಗ್ರಾಮದಲ್ಲಿ ೧೯೨೩ರ  ಸೆಪ್ಟೆಂಬರ್ ೧೪ ರಂದು ರಾಮ್ ಜೇಠ್ಮಲಾನಿ ಜನಿಸಿದ್ದರು. ತಮ್ಮ ೧೩ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಅವರು ೧೭ನೇ ವರ್ಷಕ್ಕೆ ಈಗ ಪಾಕಿಸ್ತಾನದಲ್ಲಿ ಇರುವ ಸಿಂಧ್ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು. ವಕಾಲತ್ತು ನಡೆಸಲು ೨೧ ವರ್ಷ ಆಗಬೇಕಾಗಿದ್ದುದರಿಂದ ಅವರು ವಿಶೇಷ ಅನುಮತಿ ಪಡೆಯಬೇಕಾಗಿ ಬಂದಿತ್ತು.

ಹಲವು ಮಹತ್ವದ ಪ್ರಕರಣಗಳನ್ನು ಯಶಸ್ವಿಯಾಗಿ ವಾದಿಸಿದ್ದ ಜೇಠ್ಮಲಾನಿ ಒಂದು ಕಾಲದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ಸುಪ್ರೀಂಕೋರ್ಟ್ ವಕೀಲರಾಗಿದ್ದರು. ದೇಶದ ಪ್ರಖ್ಯಾತ ಕ್ರಿಮಿನಲ್ ವಕೀಲರಲ್ಲಿ ಅವರು ಒಬ್ಬರಾಗಿದ್ದರು.

ಭಾರತೀಯ ಜನತಾ ಪಕ್ಷದಿಂದ ಮುಂಬೈಯಲಿ ಚುನಾವಣೆ ಎದುರಿಸಿದ್ದ ರಾಮ್ ಜೇಠ್ಮಲಾನಿ ಎರಡು ಬಾರಿ ಸಂಸತ್ ಸದಸ್ಯರಾಗಿದ್ದರು. ಕಾನೂನು ಸಚಿವ ಮತ್ತು ನಗರಾಭಿವೃದ್ದಿ ಸಚಿವರಾಗಿ ಕೆಲಸ ಮಾಡಿದ್ದ ಅವರು ೨೦೧೦ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು.

ಜೇಠ್ಮಲಾನಿ ಸುಪ್ರೀಂಕೋರ್ಟ್, ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಗಳಲ್ಲಿ ಹಲವು ಮಹತ್ವದ ಪ್ರಕರಣಗಳಲ್ಲಿ ವಾದ ಮಂಡಿಸಿದ್ದವರು. ವಕೀಲರಾಗಿ ವೃತ್ತಿಜೀವನ ಆರಂಭಿಸಿದ್ದ ಜೀಠ್ಮಲಾನಿ ೧೯೫೯ರಲ್ಲಿ ಬಹುಕೋಟಿ ೨ ಜಿ ಹಗರಣ, ಕೆ.ಎಂ.ನಾನಾವತಿ ಪ್ರಕರಣ ಮತ್ತು ಜೆಸ್ಸಿಕಾ ಲಾಲ್ ಪ್ರಕರಣಗಳ ವಕಾಲತ್ತು ವಹಿಸಿದ್ದಲ್ಲದೆ, ಮಹಾರಾಷ್ಟ್ರ ಸರ್ಕಾರದ  ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು.

ಆಗ ವಕೀಲರಾಗಿದ್ದು ಬಳಿಕ ಭಾರತದ ಮುಖ್ಯ ನ್ಯಾಯಮೂರ್ತಿಯಾದ ವೈವಿ ಚಂದ್ರಚೂಡ್  ಜೊತೆಗೆ ೧೯೫೯ರಲ್ಲಿ ನಾನಾವತಿ ಪ್ರಕರಣದಲ್ಲಿ ವಾದಿಸುವುದರೊಂದಿಗೆ ಜೇಠ್ಮಲಾನಿ ಪ್ರತಿಭೆ ಬೆಳಕಿಗೆ ಬಂದಿತ್ತು. ನೌಕಾ ಕಮಾಂಡರ್ ಕವಾಸ್ ನಾನಾವತಿ ತನ್ನ ಪತ್ನಿಯ ಪ್ರೇಮಿ ಪ್ರೇಮ್ ಅಹುಜಾ ಅವರನ್ನು ಕೊಂದ ಪ್ರಕರಣದಲ್ಲಿ ಚಂದ್ರಚೂಡ್ ಮತ್ತು ಜೇಠ್ಮಲಾನಿ ಅವರು ಪ್ರಾಸೆಕ್ಯೂಷನ್ ಪರವಾಗಿ ಹಾಜರಾಗಿದ್ದರು.

೧೯೬೦ರ ಕೊನೆಯ ವೇಳೆಗೆ ಅವರು ಹಲವಾರ ಕಳ್ಳಸಾಗಣೆದಾರರ ಪರ ವಕೀಲರಾಗಿದ್ದರು. ತಾವು ಕೇವಲ ವಕೀಲರ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಜೇಠ್ಮಲಾನಿ  ಆ ಸಮಯದಲ್ಲಿ ಸ್ಪಷ್ಟ ಪಡಿಸಿದ್ದರು.

೧೯೭೦ರ ಮಧ್ಯಾವಧಿಯಲ್ಲಿ ಜೇಠ್ಮಲಾನಿ ಅವರು ತುರ್ತು ಪರಿಸ್ಥಿತಿ ವೇಳೆಯಲ್ಲಿ ಬಂಧನ ತಪ್ಪಿಸಿಕೊಳ್ಳುವ ಸಲುವಾಗಿ ಭಾರತ ತ್ಯಜಿಸಿದ್ದರು. ದೇಶದ ಹೊರಗೆ  ತಮ್ಮ ಉಪಯುಕ್ತತೆ ಹೆಚ್ಚು ಎಂದು ಅವರು ನಂಬಿದ್ದರು.

೧೯೭೭ರ ಮಹಾಚುನಾವಣೆಯಲ್ಲಿ ಸೆಣಸುವ ಸಲುವಾಗಿ ಅವರು ಭಾರತಕ್ಕೆ ಹಿಂದಿರುಗಿದರು ಮತ್ತು ಲೋಕಸಭಾ ಚುನಾವಣೆಯಲ್ಲಿ ಆಗಿನ ಕಾನೂನು ಸಚಿವ ಎಚ್.ಆರ್. ಗೋಖಲೆ ಅವರನ್ನು ಪರಾಭವಗೊಳಿಸಿದರು.

ಬಹಳಷ್ಟು ಸಂದರ್ಭಗಳಲ್ಲಿ ಜೇಠ್ಮಲಾನಿ ಅವರು ಸೋತ ಪ್ರಕರಣಗಳಿಗಾಗಿ ಖ್ಯಾತಿ ಪಡೆದಿದ್ದಾರೆ. ದಿವಂಗತ ಪ್ರಧಾನಿ ಇಂದಿರಾಗಾಂಧಿಯವರನ್ನು ಕೊಲೆಗೈದ ಬಲಬೀರ್ ಮತ್ತು ಕೇಹರ್ ಸಿಂಗ್ ಅವರಿಂದ ಹಿಡಿದು, ಭೂಗತ ಜಗತ್ತಿನ ಪಾತಕಿ ಹಾಜಿ ಮಸ್ತಾನ್, ಶೇರು ವಂಚಕ ಹರ್ಷದ್ ಮೆಹ್ತ, ಖೇತನ್ ಪಾರಿಕ್,  ಮಾಜಿ ಪ್ರಧಾನಿ ರಾಜೀವ ಗಾಂಧಿ ಹಂತಕರು ಮತ್ತು ಜೆಸ್ಸಿಕಾಲಾಲ್ ಕೊಲೆಗಡುಕ ಮನು ಶರ್ಮ (೨೦೦೬ರಲ್ಲಿ) ಪರ ವಾದಿಸಿ ಅವರು ಸೋತಿದ್ದರು.

ಹಾಗೆಂದು ಅವರೇನೂ ಸೋಲುವ ಪ್ರಕರಣಗಳ ಸರದಾರರಾಗಿರಲಿಲ್ಲ. ವಕೀಲರಾದ ಕಾಮಿನಿ ಜೈಸ್ವಾಲ್ ಅವರ ಜೊತೆಗೆ ಜೇಠ್ಮಲಾನಿ ಅವರು ೨೦೦೧ರಲ್ಲಿ ಜೈಶ್-ಇ-ಮೊಹಮ್ಮದ್ ನಡೆಸಿದ್ದ ಸಂಸತ್ ಮೇಲಿನ ದಾಳಿ ಪ್ರಕರಣದಲ್ಲಿ ಶಾಮೀಲಾದ ಶಂಕಿತ ವ್ಯಕ್ತಿಯಾಗಿದ್ದ ದೆಹಲಿ ವಿಶ್ವ ವಿದ್ಯಾಲಯದ ಉಪನ್ಯಾಸಕ ಸೈಯದ್ ಅಬ್ದುಲ್ ರಹಮಾನ್ ಗೀಲಾನಿ ಅವರನ್ನು ಯಶಸ್ವಿಯಾಗಿ ರಕ್ಷಿಸಿದ್ದರು.

ಮನು ಶರ್ಮ ಪರವಾಗಿ ವಾದಿಸಲು ಜೇಠ್ಮಲಾನಿ ನಿರ್ಧರಿಸಿದಾಗ ತಾವು ಅತ್ಯಂತ ಚಿಂತೆಗೀಡಾಗಿದ್ದುದಾಗಿ ಜೈಸ್ವಾಲ್ ಹೇಳಿದ್ದರು. ತಾವು ನಿವೃತ್ತರಾಗಿದ್ದು, ರಾಷ್ಟ್ರದ ವಿಶಾಲ ಹಿತದೃಷ್ಟಿಯುಳ್ಳ ವಿಷಯಗಳಲ್ಲಿ ಮಾತ್ರವೇ ಹಾಜರಾಗುವುದಾಗಿ ಅವರು ಬಹಿರಂಗವಾಗಿ ಘೋಷಿಸಿದ್ದರು. ಆದರೆ ಈ ಪ್ರಕರಣವು  ರಾಷ್ಟ್ರದ ವಿಶಾಲ ಹಿತಾಸಕ್ತಿಯ ಪ್ರಕರಣವಾಗಿರಲಿಲ್ಲ ಎಂದು ಜೈಸ್ವಾಲ್ ಹೇಳಿದ್ದರು. ಆದರೆ ಜೇಠ್ಮಲಾನಿ ಅವರ ಆತ್ಮಸಾಕ್ಷಿ ಸ್ಪಷ್ಟವಾಗಿತ್ತು. ’ಜನಪ್ರಿಯವಲ್ಲದ ಕಾರಣಕ್ಕಾಗಿ ಪ್ರಕರಣ ಎತ್ತಿಕೊಳ್ಳುವುದರ ಫಲಿತಾಂಶ ಜನಪ್ರಿಯತೆ ಕಳೆದುಕೊಳ್ಳುವುದಾಗಿದ್ದರೆ, ಹಾಗೇ ಆಗಲಿ ಬಿಡಿ’ ಎಂದು ಜೇಠ್ಮಲಾನಿ ಹೇಳಿದ್ದರು.

’ಯಾರನ್ನು ರಕ್ಷಿಸಬೇಕು ಎಂಬುದಾಗಿ ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಾನು ನಿರ್ಧರಿಸುತ್ತೇನೆ. ಜನರು ತಪ್ಪಿತಸ್ಥರು ಎಂಬುದಾಗಿ ನಂಬುವ ವ್ಯಕ್ತಿಯ ಪರವಾಗಿ ವಕಾಲತ್ತು ನಡೆಸಲು ನಿರಾಕರಿಸುವ ವಕೀಲ ಸ್ವತಃ ವೃತ್ತಿಗೆ ಸಂಬಂಧಿಸಿದಂತೆ ಅಯೋಗ್ಯ ವರ್ತನೆ ಪ್ರದರ್ಶಿಸುವ ವ್ಯಕ್ತಿಯಾಗುತ್ತಾನೆ’ ಎಂದು ಜೇಠ್ಮಲಾನಿ ಪತ್ರಿಕಾ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ಭ್ರಷ್ಟಾಚಾರ ಪ್ರಕರಣ ಒಂದದಲ್ಲಿ ಜೇಠ್ಮಲಾನಿ ರಕ್ಷಿಸಿದ್ದರು. ಜೇಠ್ಮಲಾನಿ ಅವರ ವಿವಾದಾತ್ಮಕ ಕಕ್ಷಿದಾರರ ಪೈಕಿ ಜಯಲಲಿತಾ ಕೊನೆಯವರಾಗಿದ್ದರು. ಏನಿದ್ದರೂ ಇಂತಹ ವ್ಯಕ್ತಿಗಳು ತಮ್ಮನ್ನು ಸಂಪರ್ಕಿಸಿದಾಗ ತಾವು ಕಾನೂನಿನ ನಿರ್ಬಂಧಕ್ಕೆ ಒಳಗಾಗುತ್ತಿದ್ದುದಾಗಿ ಜೇಠ್ಮಲಾನಿ ತಿಳಿಸಿದ್ದರು. ’ಪ್ರತಿಯೊಬ್ಬನಿಗೂ, ಯಾರೆಂಬುದು ಪ್ರಶ್ನೆಯಲ್ಲ, ಕಾನೂನಿನ ರಕ್ಷಣೆ ಪಡೆಯುವ ಅರ್ಹತೆ ಇರಬೇಕು ಎಂಬುದು ಕಾನೂನಿನ ಮೂಲತತ್ವ’ ಎಂದು ಜೇಠ್ಮಲಾನಿ ಹೇಳಿದ್ದರು.

ದುಬಾರಿ ಶುಲ್ಕ ವಿಧಿಸುತ್ತಿದ್ದುದರ ಬಗ್ಗೆ ಒಮ್ಮೆ ಪತ್ರಿಕಾ ಸಂಸ್ಥೆಯೊಂದರ ಜೊತೆ ಮಾತನಾಡುತ್ತಾ ’ಹೌದು, ನಾನು ಜಯಲಲಿತಾ ಅವರಿಗೆ ದುಬಾರಿ ಶುಲ್ಕ ವಿಧಿಸುತ್ತಿದ್ದೇನೆ. ಆದರೆ ನಾನು ಹಲವಾರು ಪ್ರಕರಣಗಳಲ್ಲಿ ನಾನು ಸಾರ್ವಜನಿಕ ಹಿತಕ್ಕಾಗಿ ಹೋರಾಡಿದ್ದೇನೆ. ಒಟ್ಟಾರೆಯಾಗಿ ನನ್ನ ಕಕ್ಷಿದಾರರಲ್ಲಿ ಶೇಕಡಾ ೧೦ರಷ್ಟು ಮಂದಿಯಿಂದ ನಾನು ಹಣ ಮಾಡುತ್ತೇನೆ’ ಎಂದು ಜೇಠ್ಮಲಾನಿ ತಿಳಿಸಿದ್ದರು.

೨೦೧೫ರಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ೧೦ ಕೋಟಿ ರೂಪಾಯಿಗಳ ಪರಿಹಾರ ಕೋರಿ ಸಿವಿಲ್ ಮತ್ತು ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದಾಗ ಜೇಠ್ಮಲಾನಿ ಅವರು ಕೇಜ್ರಿವಾಲ್ ಪರ ವಕಾಲತ್ತು ಹೂಡಿದ್ದರು. ಕೇಜ್ರಿವಾಲ್ ಅವರು ಪ್ರಕರಣದಲ್ಲಿ ಸೋಲುವ ಹಂತಕ್ಕೆ ತಲುಪಿದರು ಮತ್ತು ಕ್ಷಮೆಯಾಚಿಸಿದರು. ಆದರೆ ಜೇಟ್ಲಿಯವರು ಪರಿಹಾರದ ಹಣಕ್ಕಾಗಿ ಆಗ್ರಹಿಸಲಿಲ್ಲ.

೧೯೯೬, ೧೯೯೯ರಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಕಾನೂನು ಸಚಿವರಾಗಿ ರಾಮ್ ಜೇಠ್ಮಲಾನಿ ಕರ್ತವ್ಯ ನಿರ್ವಹಿಸಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಕರ್ನಾಟಕದ ಹಾಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪರವಾಗಿ ಜೇಠ್ಮಲಾನಿ ವಾದ ಮಂಡಿಸಿದ್ದರು.

ಹವಾಲ ಪ್ರಕರಣದಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಪರ ವಕಾಲತ್ತು ವಹಿಸಿದ್ದರು. ಈ ರೀತಿ ಇನ್ನೂ ಹಲವು ಮಹತ್ವದ ಪ್ರಕರಣಗಳಲ್ಲಿ ರಾಮ್ ಜೇಠ್ಮಲಾನಿ ವಾದ ಮಂಡಿಸಿದ್ದರು.

ಭಾರತದ ಪ್ರತಿಷ್ಠಿತ ನ್ಯಾಯವಾದಿಯಾಗಿದ್ದ ಜೇಠ್ಮಲಾನಿ ಅವರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಖ್ಯಾತನಾಮರ ನೆಚ್ಚಿನ ಆಯ್ಕೆಯಾಗಿದ್ದರು. ವಿವಾದಿತ ಪ್ರಕರಣಗಳನ್ನು ಎತ್ತಿಕೊಳ್ಳುವ ಮೂಲಕ ಟೀಕೆಗೆ ಒಳಗಾಗುತ್ತಿದ್ದ ಜೇಠ್ಮಲಾನಿ ಹಲವಾರು ಸಂದರ್ಭಗಳಲ್ಲಿ ತಮ್ಮ ಹೇಳಿಕೆಗಳಿಂದಾಗಿಯೂ ವಿವಾದಕ್ಕೆ ಒಳಗಾಗುತ್ತಿದ್ದರು.

ಮುಂಬೈ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಗೆದ್ದು ಕೇಂದ್ರ ಸಚಿವರಾಗಿದ್ದ ಅವರು ಬಳಿಕ ಪಕ್ಷ ವಿರೋಧೀ ಹೇಳಿಕೆಗಳಿಗಾಗಿ ಪಕ್ಷದಿಂದ ಅಮಾನತುಗೊಂಡಿದ್ದರು. ಎರಡು ವರ್ಷಗಳ ಹಿಂದೆ ವೃತ್ತಿಗೆ ನಿವೃತ್ತಿ ಘೋಷಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಮತ್ತು ಯುಪಿಎ ಸರ್ಕಾರದ ವೈಫಲ್ಯಕ್ಕಿಂತ ಎನ್‌ಡಿಎ ಸರ್ಕಾರದ ವೈಫಲ್ಯ ದೊಡ್ಡದು ಎಂದು ಹೇಳಿದ್ದರು. ನಾನು ಜೀವಂತ ಇರುವವರೆಗೂ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಎಂದು ಅವರು ಹೇಳಿದ್ದರು.

ಸುಪ್ರೀಂಕೋರ್ಟ್ ಹಾಗೂ ಹಲವಾರು ಹೈಕೋರ್ಟ್‌ಗಳಲ್ಲಿ ಕರಿಕೋಟು ಧರಿಸಿ ಕಾನೂನು ಹೋರಾಟ ನಡೆಸಿದ್ದ ಜೇಠ್ಮಲಾನಿ, ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಶನ್ ಅಧ್ಯಕ್ಷರೂ ಆಗಿದ್ದರು.

ರಾಮ್‌ಜೇಠ್ಮಲಾನಿ ಅವರ ಪುತ್ರ ಮಹೇಶ್ ಜೇಠ್ಮಲಾನಿ ಕೂಡ ಪ್ರಸಿದ್ಧ ವಕೀಲರಾಗಿದ್ದು, ಅವರ ಪುತ್ರಿ ರಾಣಿ ಜೇಠ್ಮಲಾನಿ ೨೦೧೧ರಲ್ಲಿ ಸಾವನ್ನಪ್ಪಿದ್ದರು. ಇನ್ನೊಬ್ಬ ಮಗಳು ಅಮೆರಿಕದಲ್ಲಿದ್ದಾರೆ.

ಜೇಠ್ಮಲಾನಿ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

ಸಂಜೆಯ ವೇಳೆಗೆ ಲೋಧಿ ರಸ್ತೆಯ ಸ್ಮಶಾನದಲ್ಲಿ ರಾಮ್ ಜೇಠ್ಮಲಾನಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

September 8, 2019 - Posted by | ರಾಷ್ಟ್ರೀಯ, Nation, News, Politics, Spardha | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ