SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಡಿಕೆಶಿ ಇಡಿ ಕಸ್ಟಡಿ ಸೆಪ್ಟೆಂಬರ್ ೧೭ರವರೆಗೆ ವಿಸ್ತರಣೆ


13 DK-Shivakumarನವದೆಹಲಿ:  ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾದ ಕರ್ನಾಟಕದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾರಿ ನಿರ್ದೇಶನಾಲಯ ಕಸ್ಟಡಿಯನ್ನು 2019  ಸೆಪ್ಟೆಂಬರ್ ೧೭ರವರೆಗೆ ವಿಸ್ತರಿಸಿ ದೆಹಲಿಯ ವಿಶೇಷ ನ್ಯಾಯಾಲಯವು  2019 ಸೆಪ್ಟೆಂಬರ್  13ರ ಶುಕ್ರವಾರ ಆದೇಶ ನೀಡಿತು.

ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ಸೆಪ್ಟೆಂಬರ್ ೩ರ ರಾತ್ರಿ ಬಂಧಿಸಿತ್ತು. ಅವರ ಒಂಬತ್ತು ದಿನಗಳ ಜಾರಿ ನಿರ್ದೇಶನಾಲಯ ವಶದಲ್ಲಿನ ತನಿಖೆಯ ಅವಧಿ  ಈದಿನಕ್ಕೆ ಮುಕ್ತಾಯಗೊಂಡಿತ್ತು. ನ್ಯಾಯಾಲಯವು 2019 ಸೆಪ್ಟೆಂಬರ್ ೪ರಂದು ಶಿವಕುಮಾರ್ ಅವರನ್ನು ಸೆಪ್ಟೆಂಬರ್ ೧೩ರವರೆಗೆ ಜಾರಿ ನಿರ್ದೇಶನಾಲಯ ವಶಕ್ಕೆ ಒಪ್ಪಿಸಿತ್ತು.

ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರ ಮುಂದೆ ಕಾಂಗ್ರೆಸ್ ನಾಯಕನನ್ನು ಹಾಜರು ಪಡಿಸಿದ ಜಾರಿ ನಿರ್ದೇಶನಾಲಯವು, ಕಸ್ಟಡಿ ತನಿಖಾ ಅವಧಿಯನ್ನು ೫ ದಿನಗಳವರೆಗೆ ವಿಸ್ತರಿಸಬೇಕು ಎಂದು ಕೋರಿಕೆ ಮಂಡಿಸಿತು. ಶಿವಕುಮಾರ್ ಅವರು ತನಿಖೆಯ ವೇಳೆಯಲ್ಲಿ ಹಾರಿಕೆಯ, ಅಸಂಬದ್ಧ  ಉತ್ತರಗಳನ್ನು ನೀಡುತ್ತಿದ್ದಾರೆ, ಅವರ ಬಹುತೇಕ ಆಸ್ತಿಗಳು ಬೇನಾಮಿಯಾಗಿವೆ ಎಂದು ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ತಿಳಿಸಿತು.

‘ಶಿವಕುಮಾರ್ ಅವರ ವಿರುದ್ಧದ ತನಿಖೆಯ ಕಳಂಕಿತ ಹಣದ ಮೊತ್ತ ೨೦೦ ಕೋಟಿ ರೂಪಾಯಿಗಳಿಗೂ ಹೆಚ್ಚಾಗಿದ್ದು, ಅವರ ಬಳಿ ೮೦೦ ಕೋಟಿ ರೂಪಾಯಿ ಮೌಲ್ಯದ ’ಬೇನಾಮಿ’ ಆಸ್ತಿಯೂ ಇದೆ’ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿರುವ ಭಾರೀ ಪ್ರಮಾಣದ ದಾಖಲೆಗಳೊಂದಿಗೆ ಕಾಂಗ್ರೆಸ್ ನಾಯಕನನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಬೇಕಾಗಿದೆ’ ಎಂದು ಅಡಿಷನಲ್ ಸಾಲಿಸಿಟರ್ ಹೇಳಿದರು. ಸಂಪೂರ್ಣವಾಗಿ ತಮ್ಮ ಅರಿವಿನಲ್ಲಿ ಇರುವ ಮಾಹಿತಿಯನ್ನು ಶಿವಕುಮಾರ್ ಅವರು ತಡೆಹಿಡಿದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿತು.

‘ಮುಂದಿನ ಐದು ದಿನಗಳ ಅವಧಿಯಲ್ಲೂ ಅವರು ಪ್ರಶ್ನೆಗಳಿಗೆ ಉತ್ತರ ನೀಡಲಾರರು ಎಂಬುದು ನನಗೆ ಖಚಿತವಿದೆ. ನಿಮಗೆ ಅವರನ್ನು ವಶದಲ್ಲಿ ಇಟ್ಟುಕೊಳ್ಳುವ ಅಗತ್ಯ ಏನಿದೆ?’ ಎಂದು ನ್ಯಾಯಾಧೀಶರು ಜಾರಿ ನಿರ್ದೇಶನಾಲಯವನ್ನು ಪ್ರಶ್ನಿಸಿದರು. ’ಇತರ ಕೆಲವು ಆರೋಪಿಗಳು ಹೇಳಿಕೆಗಳನ್ನು ನೀಡಿದ್ದಾರೆ. ಅವರ ಸಮ್ಮುಖದಲ್ಲಿಯೇ ಶಿವಕುಮಾರ್ ಅವರನ್ನು ಪ್ರಶ್ನಿಸುವ ಅಗತ್ಯವಿದೆ’ ಎಂದ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಉತ್ತರ ನೀಡಿತು.

‘ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದವಾದ ಕಾರಣ ರಾಜಕಾರಣಿಯನ್ನು ವಶದಲ್ಲಿ ಇಟ್ಟುಕೊಂಡು ತನಿಖೆ ಮುಂದುವರೆಸಲು ಅನುಮತಿ ನೀಡಲಾಗಿದೆ’ ಎಂದು ನ್ಯಾಯಾಲಯ ತನ್ನ ಆದೇಶದಲಿ ತಿಳಿಸಿತು.

ಈ ಮಧ್ಯೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರೂ ಗುರುವಾರ ಜಾರಿ ನಿರ್ದೇಶನಾಲಯದ ಮುಂದೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗಿದ್ದರು.

೨೨ರ ಹರೆಯದ ನಿರ್ವಹಣಾ (ಮ್ಯಾನೇಜ್ ಮೆಂಟ್) ಪದವೀಧರೆಯಾದ ಐಶ್ವರ್ಯಾ ಅವರನ್ನು  ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲಿ ಪ್ರಶ್ನಿಸಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದರು.

೨೦೧೭ರಲ್ಲಿ ಸಿಂಗಾಪುರಕ್ಕೆ ಮಾಡಲಾಗಿದ್ದ ಪ್ರವಾಸಕ್ಕೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಶಿವಕುಮಾರ್ ಅವರ ಹೇಳಿಕೆಗಳನ್ನು ಮುಂದಿಟ್ಟು ಐಶ್ವರ್ಯಾ ಅವರನ್ನು ಪ್ರಶ್ನಿಸಲಾಯಿತು ಎಂದು ಮೂಲಗಳು ಹೇಳಿದವು.

ಐಶ್ವರ್ಯಾ ಅವರು ಆಕೆ ತಂದೆ ಸ್ಥಾಪಿಸಿದ್ದ ಶಿಕ್ಷಣ ಟ್ರಸ್ಟ್ ಒಂದರ ಟ್ರಸ್ಟಿಯಾಗಿದ್ದಾರೆ. ಕೋಟಿ ಗಟ್ಟಲೆ ರೂಪಾಯಿ ಆಸ್ತಿ ಮತ್ತು ವ್ಯವಹಾರವನ್ನು ಹೊಂದಿರುವ ಟ್ರಸ್ಟ್ ಹಲವಾರು ಎಂಜಿನಿಯರಿಂಗ್ ಮತ್ತು ಇತರ ಕಾಲೇಜುಗಳನ್ನು ನಡೆಸುತ್ತಿದೆ. ಐಶ್ವರ್ಯಾ ಅವರು ಈ ವ್ಯವಹಾರಗಳ ಹಿಂದಿನ ಮುಖ್ಯ ವ್ಯಕ್ತಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿದವು.

ಮಾಜಿ ಸಂಪುಟ ಸಚಿವ ಹಾಗೂ ಕನಕಪುರದ ಶಾಸಕರಾಗಿರುವ ಶಿವಕುಮಾರ್ ಅವರು ಸೆಪ್ಟೆಂಬರ್ ೩ರಂದು ಜಾರಿನಿರ್ದೇಶನಾಲಯದ ದೆಹಲಿ ಕೇಂದ್ರ ಕಚೇರಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸುವ ಸಲುವಾಗಿ ನಾಲ್ಕನೇ ಬಾರಿಗೆ ಹಾಜರಾಗಿದ್ದರು. ಸುದೀರ್ಘ ಕಾಲ ಪ್ರಶ್ನಿಸಿದ ಬಳಿಕ ೫೭ರ ಹರೆಯದ ಶಿವಕುಮಾರ್ ಅವರನ್ನು ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ವಿಧಿಗಳ ಅಡಿಯಲ್ಲಿ ಬಂಧಿಸಲಾಗಿತ್ತು.

ಜಾರಿ ನಿರ್ದೇಶನಾಲಯವು ಕಳೆದ ವರ್ಷ ಶಿವಕುಮಾರ್, ನವದೆಹಲಿಯ ಕರ್ನಾಟಕ ಭವನದ ಉದ್ಯೋಗಿ ಹನುಮಂತಯ್ಯ ಮತ್ತು ಇತರರ ವಿರುದ್ಧ ಹಣ ವರ್ಗಾವಣೆ ಪ್ರಕರಣ ದಾಖಲಿಸಿತ್ತು.

ಜಾರಿ ನಿರ್ದೇಶನಾಲಯವು ತಮಗೆ ನೀಡಿದ್ದ ಸಮನ್ಸ್‌ನ್ನು ಪ್ರಶ್ನಿಸಿ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಪರಿಣಾಮವಾಗಿ ಕಾಂಗ್ರೆಸ್ ನಾಯಕ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಬೇಕಾಗಿ ಬಂದಿತ್ತು.

ಕಳೆದ ವರ್ಷ ಆದಾಯ ತೆರಿಗೆ ಇಲಾಖೆಯು ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಕೋಟಿ ಗಟ್ಟಲೆ ರೂಪಾಯಿ ಮೌಲ್ಯದ ತೆರಿಗೆ ವಂಚನೆ ಮತ್ತು ಹವಾಲಾ ವಹಿವಾಟಿಗೆ ಸಂಬಂಧಿಸಿದಂತೆ ಶಿವಕುಮಾರ್ ಮತ್ತು ಇತರರ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಇದರ ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಶಿವಕುಮಾರ್ ಮತ್ತು ಇತರರ ವಿರುದ್ಧ ಹಣ ವರ್ಗಾವಣೆ ಪ್ರಕರಣಗಳನ್ನು ದಾಖಲು ಮಾಡಿತ್ತು.

ಶಿವಕುಮಾರ್ ಮತ್ತು ಅವರ ನಿಕಟವರ್ತಿಯೆಂದು ಆರೋಪಿಸಲಾದ ಎಸ್ ಕೆ ಶರ್ಮ ಅವರು ಭಾರೀ ಮೊತ್ತದ ಲೆಕ್ಕಪತ್ರಗಳಿಲ್ಲದ ನಗದು ಹಣವನ್ನು ಹವಾಲಾ ಜಾಲಗಳ ಮೂಲಕ ನಿಯಮಿತವಾಗಿ ಇತರ ಮೂವರು ಆರೋಪಿಗಳ ನೆರವಿನೊಂದಿಗೆ ಸಾಗಣೆ ಮಾಡುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆ ಆಪಾದಿಸಿತ್ತು.

September 13, 2019 - Posted by | ಕರ್ನಾಟಕ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ