SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ವಿಕ್ರಮ ಲ್ಯಾಂಡರ್ ಸಂಪರ್ಕ ಸಿಗಲಿಲ್ಲ, ಮುಂದಿನ ಆದ್ಯತೆ ಗಗನಯಾನಕ್ಕೆ


21 k shivan isro
ಚಂದ್ರಯಾನ ೨ ಶೇಕಡಾ ೯೮ರಷ್ಟು ಯಶಸ್ತು: ಇಸ್ರೋ ಮುಖ್ಯಸ್ಥ ಕೆ.ಶಿವನ್

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಚಂದ್ರಯಾನ ೨ರ ವಿಕ್ರಮ್ ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸಲು ಕೊನೆಗೂ ಸಾಧ್ಯವಾಗಿಲ್ಲ, ಆದರೆ ಚಂದ್ರಯಾನ ೨ ರ ಗುರಿಗಳು ಶೇಕಡಾ ೯೮ರಷ್ಟು ಯಶಸ್ವಿಯಾಗಿವೆ. ನಮ್ಮ ಮುಂದಿನ ಆದ್ಯತೆ ಗಗನಯಾನ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು 2019  ಸೆಪ್ಟೆಂಬರ್  21ರ ಶನಿವಾರ ಇಲ್ಲಿ ಪ್ರಕಟಿಸಿದರು.

ಚಂದ್ರಯಾನ ೨ರ ವಿಕ್ರಮ್ ಲ್ಯಾಂಡರ್‌ನ ೧೪ ದಿನಗಳ (ಒಂದು ಚಾಂದ್ರ ದಿನ) ಜೀವಿತಾವಧಿಯ (ಆಯುಸ್ಸು) ಗಡುವು ಮುಕ್ತಾಯಗೊಂಡಿದ್ದು, ಅದರ ಒಳಗೆ ಅದರ ಜೊತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಸೆಪ್ಟೆಂಬರ್ ೭ರಂದು ಚಂದ್ರನ ನೆಲ ಸ್ಪರ್ಶಿಸುವ ಯತ್ನವನ್ನು ದೇಶದ ಮುಂಚೂಣಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡೆಸಿತ್ತು.

ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕ ಸಾಧನೆಗೆ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದರೂ, ಚಂದ್ರಯಾನ ೨ ಯೋಜನೆಯು ಒಂದು ದೊಡ್ಡ ಯಶಸ್ಸು. ಇದು ಚಂದ್ರನ ಇಡಿ ಮೇಲ್ಮೈಯ ನಕ್ಷೆಯನ್ನು ವಿವರವಾಗಿ ಮತ್ತು ನಿಖರವಾಗಿ ತಯಾರಿಸಲು ನೆರವಾಗಿದೆ ಎಂದು ಶಿವನ್ ಹೇಳಿದರು.

ಭುವನೇಶ್ವರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಂಟನೇ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷರು ಮಾತನಾಡುತ್ತಿದ್ದರು.

‘ಚಂದ್ರಯಾನ- ೨ ಅತ್ಯಂತ ದೊಡ್ಡ ಗಾತ್ರದ ವಿಜ್ಞಾನದ ಭಾಗ ಮತ್ತು ತಂತ್ರಜ್ಞಾನ ಪ್ರದರ್ಶನದ ಸಣ್ಣ ಭಾಗವನ್ನು ಒಳಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದ ಸಮೀಪ ಹಗುರ ಸ್ಪರ್ಶ ಮಾಡುವುದೂ ಇದರಲ್ಲಿ ಒಳಗೊಂಡಿತ್ತು. ಅಂತರ್ ಗ್ರಹ ವಿಜ್ಞಾನದಲ್ಲಿ ಬಹುತೇಕ ಪ್ರಯೋಗಗಳನ್ನು ಅರ್ಬಿಟರ್ ಮೂಲಕವೇ ನಡೆಸಲಾಗುತ್ತದೆ. ಮೂಲತಃ ಆರ್ಬಿಟರ್‌ನ ಆಯುಸ್ಸು ಒಂದು ವರ್ಷ ಮಾತ್ರ, ಆದರೆ ಗರಿಷ್ಠ ಕಾರ್‍ಯಾಚರಣೆಗಳ ಬಳಿಕ ಅದನ್ನು ೭.೫ ವರ್ಷಗಳಿಗೆ ಹೆಚ್ಚಿಸಲು ಸಾಧ್ಯವಾಗಿದೆ. ಈಗ ವಿಜ್ಞಾನಿಗಳು ನಿರೀಕ್ಷಿಸಿದ್ದಕ್ಕಿಂತ ೭.೫ ಪಟ್ಟಿನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯ. ಇದು ನಿಜವಾಗಿಯೂ ಅತ್ಯಂತ ದೊಡ್ಡ ಯಶಸ್ಸು’ ಎಂದು ಶಿವನ್ ವಿವರಿಸಿದರು.

ಚಂದ್ರಯಾನ -೨ರ ಆರ್ಬಿಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಆರ್ಬಿಟರ್‌ನಲ್ಲಿ ಎಂಟು ಉಪಕರಣಗಳಿದ್ದು, ಪ್ರತಿಯೊಂದು ಉಪಕರಣವೂ ತಾನು ಮಾಡಬೇಕಾಗಿದ್ದ ಕಾರ್‍ಯವನ್ನು ಚಾಚೂ ತಪ್ಪದಂತೆ ಮಾಡುತ್ತಿವೆ. ಆದರೆ ಲ್ಯಾಂಡರ್ ಜೊತೆಗೆ ಮಾತ್ರ ನಮಗೆ ಸಂಪರ್ಕ ಸಾಧಿಸಲು ಈವರೆಗೂ ಸಾಧ್ಯವಾಗಿಲ್ಲ’ ಎಂದು ಡಾ. ಶಿವನ್ ಭುವನೇಶ್ವರದ ಘಟಿಕೋತ್ಸವ ಕಾರ್‍ಯಕ್ರಮಕ್ಕೆ ತೆರಳುವ ಮುನ್ನ ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

‘ಲ್ಯಾಂಡರ್‌ಗೆ ಏನಾಗಿದೆ ಎಂಬುದಾಗಿ ನಾವು ತಿಳಿದುಕೊಳ್ಳಬೇಕಾಗಿದೆ. ಅದು ನಮ್ಮ ಮೊದಲ ಆದ್ಯತೆ’ ಎಂದು ಶಿವನ್ ಹೇಳಿದರು. ’ನಮ್ಮ ಮುಂದಿನ  ಆದ್ಯತೆ ೨೦೨೦ಕ್ಕೆ ನಿಗದಿ ಪಡಿಸಲಾಗಿರುವ ಗಗನಯಾನ ಯೋಜನೆ’ ಎಂದು ರಾಷ್ಟ್ರದ ಉನ್ನತ ಬಾಹ್ಯಾಕಾಶ ವಿಜ್ಞಾನಿ ನುಡಿದರು.

ಸೆಪ್ಟೆಂಬರ್ ೭ರಂದು ಚಂದ್ರನ ನೆಲ ಸ್ಪರ್ಶಕ್ಕೆ ಯತ್ನ ನಡೆಸಲಾಗಿದ್ದ ಚಂದ್ರನ ದಕ್ಷಿಣ ಧ್ರುವಪ್ರದೇಶದಲ್ಲಿ |ಶನಿವಾರ ಚಂದ್ರನ ರಾತ್ರಿ ಆರಂಭವಾಗಿದೆ. ಇದರಿಂದಾಗಿ ಲ್ಯಾಂಡರ್‌ಗೆ ಸೌರ ಬೆಳಕು ಅಲಭ್ಯವಾಗಿ ತನ್ನ ಕಾರ್‍ಯ ನಿರ್ವಹಣೆಗೆ ಅದಕ್ಕೆ ಅಗತ್ಯ ಶಕ್ತಿ ಉತ್ಪಾದಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಚಾಂದ್ರ ರಾತ್ರಿಯಲ್ಲಿ ಚಂದ್ರನ ಮೇಲಿನ ಉಷ್ಣಾಂಶ ಮೈನಸ್ ೨೦೦ ಡಿಗ್ರಿಗಳಿಗಿಂತಲೂ ಕೆಳಕ್ಕೆ ಇಳಿಯುವುದರಿಂದ ಅದು ಲ್ಯಾಂಡರ್‌ನ ಉಪಕರಣಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಬಹುದು.

ಶಿಕ್ಷಣತಜ್ಞರು ಮತ್ತು ಇಸ್ರೋ ತಜ್ಞರ ರಾಷ್ಟ್ರೀಯ ಮಟ್ಟದ ಉನ್ನತ ಸಮಿತಿಯು ಲ್ಯಾಂಡರ್ ನಷ್ಟದ ಕಾರಣಗಳ ಬಗ್ಗೆ ವಿಶ್ಲೇಷಿಸುತ್ತಿದ್ದಾರೆ ಎಂದು ಗುರುವಾರ ಇಸ್ರೋ ತಿಳಿಸಿತ್ತು.

ಚಂದ್ರಯಾನ-೨ ವಿಕ್ರಮ್ ಲ್ಯಾಂಡರ್ ಇಳಿಯಬೇಕಾಗಿದ್ದ ಚಂದ್ರನ ಪ್ರದೇಶದ ಚಿತ್ರಗಳನ್ನು ಇಳಿಯುವ ಯತ್ನಕ್ಕೂ ಮುನ್ನ ಸೆರೆ ಹಿಡಿದಿದೆ ಎಂದು ನಾಸಾ ಗುರುವಾರ ದೃಢ ಪಡಿಸಿದೆ. ನಾಸಾದ ಲ್ಯೂನಾರ್ ರಿಕನ್ನಾಯ್ಸೆನ್ಸ್ ಆರ್ಬಿಟರ್ (ಎಲ್ ಆರ್ ಒ) ಬಾಹ್ಯಾಕಾಶ ನೌಕೆಯು ಸೆಪ್ಟೆಂಬರ್ ೧೭ರಂದ ಚಂದ್ರನಿಗೆ ಸಮೀಪವಾಗಿ ಸಾಗುವಾಗ ಈ ಪ್ರದೇಶದ ಚಿತ್ರಗಳನ್ನು ಸೆರೆ ಹಿಡಿದಿದ್ದು ಅವರು ಚಂದ್ರಯಾನ ೨ ತೆಗೆದ ಚಿತ್ರಗಳಿಗೆ ತಾಳೆಯಾಗಿವೆ ಎಂದು ನಾಸಾ ಹೇಳಿದೆ.

ಕೇವಲ ೧೦೦೦ ಕೋಟಿ ರೂಪಾಯಿ ಮೊತ್ತದಲ್ಲಿ ಚಂದ್ರಯಾನ ಯೋಜನೆ ಯಶಸ್ವಿಗೊಳಿಸುವ ಮೂಲಕ ಬಾಹ್ಯಾಕಾಶ ಇತಿಹಾಸ ನಿರ್ಮಿಸುವ ನಿರೀಕ್ಷೆ ಭಾರತದ್ದಾಗಿತ್ತು.

ಚಂದ್ರ ನೆಲ ಸ್ಪರ್ಶ ಸಾಧ್ಯವಾಗಿದ್ದರೆ ಭಾರತವು ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತಿತ್ತು. ಈವರೆಗೆ ಅಮೆರಿಕ, ರಶ್ಯಾ ಮತ್ತು ಚೀನಾ ಚಂದ್ರನೆಲ ಸ್ಪರ್ಶ ಸಾಧನೆಯನ್ನು ಮಾಡಿವೆ. ಯೋಜನೆ ಯಶಸ್ವಿಯಾಗಿದ್ದರೆ, ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಮೊದಲ ಯತ್ನದಲ್ಲೇ ಸ್ಪರ್ಶಿಸಿದ ಮೊದಲ ರಾಷ್ಟ್ರ ಎಂಬ ಕೀರ್ತಿಗೂ ಭಾರತ ಭಾಜನವಾಗುತ್ತಿತ್ತು.

September 21, 2019 - Posted by | ಇಸ್ರೋ, ಕರ್ನಾಟಕ, ಚಂದ್ರ ಲೋಕ, ಚಂದ್ರಯಾನ-2, ಭಾರತ, ರಾಜ್ಯ, ರಾಷ್ಟ್ರೀಯ, ವಿಶ್ವ/ ಜಗತ್ತು, ಸೌರ ವ್ಯವಸ್ಥೆ, Chandrayaan-2, Flash News, General Knowledge, India, Nation, News, Science, Space, Spardha, World | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ