SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಹರಿಯಾಣ, ಮಹಾರಾಷ್ಟ್ರ ಅಸೆಂಬ್ಲಿಗಳಿಗೆ ಏಕಹಂತದ ಚುನಾವಣೆ


21 sunil arora
ಅಕ್ಟೋಬರ್ ೨೧ರಂದು ಮತದಾನ, ೨೪ರಂದು ಫಲಿತಾಂಶ,  ಕರ್ನಾಟಕ, ಉ.ಪ್ರ. ಸಹಿತ ೧೮ ರಾಜ್ಯಗಳ ೬೪ ಸ್ಥಾನಗಳಿಗೂ ಉಪಚುನಾವಣೆ

ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಿಗೆ ಅಕ್ಟೋಬರ್ ೨೧ರಂದು ಏಕಹಂತದ ಚುನಾವಣೆಯನ್ನು ಚುನಾವಣಾ ಆಯೋಗವು 2019 ಸೆಪ್ಟೆಂಬರ್  21ರ  ಶನಿವಾರ ಪ್ರಕಟಿಸಿತು. ಅದೇ ದಿನ ೧೮ ರಾಜ್ಯಗಳ ೬೪ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯನ್ನೂ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಿಸಿತು. ಇದರೊಂದಿಗೆ ಇನ್ನೊಂದು ಹಂತದ ರಾಜಕೀಯ ಸಮರಕ್ಕೆ ದೇಶ ಅಣಿಯಾಯಿತು.

ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಿಗೆ ಚುನಾವಣೆ ಮತ್ತು ೧೮ ರಾಜ್ಯಗಳ ೬೪ ಸ್ಥಾನಗಳಿಗೆ ಹಾಗೂ ಬಿಹಾರದ ಸಮಷ್ಟಿಪುರಪುರ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಅಕ್ಟೋಬರ್ ೨೧ರಂದು ಏಕಕಾಲಕ್ಕೆ ನಡೆಯಲಿದ್ದು, ಅಕ್ಟೋಬರ್ ೨೪ರಂದು ಮತಗಳ ಎಣಿಕೆ ನಡೆಯುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಅರುಣಾಚಲ ಪ್ರದೇಶ, ಅಸ್ಸಾಮ್, ಬಿಹಾರ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪುದುಚೆರಿ, ಪಂಜಾಬ್, ರಾಜಸ್ಥಾನ, ಸಿಕ್ಕಿಮ್, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಖಾಲಿ ಬಿದ್ದಿರುವ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಉಪಚುನಾವಣೆ ನಡೆಯಲಿರುವ ೧೮ ರಾಜ್ಯಗಳ ೬೪ ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕದ ೧೫ ಮತ್ತು ಉತ್ತರಪ್ರದೇಶದ ೧೧ ವಿಧಾನಸಭಾ ಕ್ಷೇತ್ರಗಳೂ ಸೇರಿವೆ.

ಕರ್ನಾಟಕದಲ್ಲಿ ಇತ್ತೀಚೆಗೆ ಅನರ್ಹಗೊಂಡಿರುವ ಶಾಸಕರ ಸ್ಥಾನಗಳು ಸೇರಿದಂತೆ ಖಾಲಿ ಬಿದ್ದಿರುವ ಸ್ಥಾನಗಳಿಗೆ ಉಪಚುನಾವಣೆಗಳು ನಡೆಯಲಿವೆ ಎಂದು ಸುನಿಲ್ ಅರೋರಾ ಹೇಳಿದರು.

ಉತ್ತರ ಪ್ರದೇಶದ ೧೧ ವಿಧಾನಸಭಾ ಸ್ಥಾನಗಳು ಬಹುತೇಕ ಸದಸ್ಯರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಗಳಿಸಿದ ಬಳಿಕ ರಾಜ್ಯ ವಿಧಾನಸಭೆಗಳಿಗೆ ರಾಜೀನಾಮೆ ನೀಡಿದ್ದರಿಂದ ಖಾಲಿ ಬಿದ್ದಿದ್ದವು.

ಬಿಹಾರದ ಸಮಷ್ಟಿಪುರ ಲೋಕಸಭಾ ಕ್ಷೇತ್ರದ ಹಾಲಿ ಲೋಕಸಭಾ ಸದಸ್ಯ ಲೋಕ ಜನಶಕ್ತಿ ಪಕ್ಷದ ರಾಮ ಚಂದ್ರ ಪಾಸ್ವಾನ್ ಅವರು ಜುಲೈ ತಿಂಗಳಲ್ಲಿ ಸಾವನ್ನಪ್ಪಿದ ಪರಿಣಾಮವಾಗಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆಸಬೇಕಾಗಿ ಬಂದಿದೆ.

ಅಕ್ಟೋಬರ್ ೨೧ರಂದು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಗಳ ಜೊತೆಗೇ ಸತಾರ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ನಡೆಸಲಾಗುವುದಿಲ್ಲ ಎಂದು ಅರೋರಾ ಅವರು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.

ಸತಾರ ಲೋಕಸಭಾ ಕ್ಷೇತ್ರದ ಸದಸ್ಯ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಉದಯನ್‌ರಾಜೆ ಭೋಸಲೆ ಅವರು ಇತ್ತೀಚೆಗೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಿದ ಬಳಿಕ ಸತಾರ ಲೋಕಸಭಾ ಕ್ಷೇತ್ರ ಖಾಲಿ ಬಿದ್ದಿದೆ.

ರಾಜ್ಯ ಸರ್ಕಾರವು ದುರ್ಗಾಪೂಜೆ ಉತ್ಸವದ ಕಾರಣ ಉಪಚುನಾವಣಾ ಪ್ರಕ್ರಿಯೆಗಳನ್ನು ಮುಂದೂಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಈಗ ಉಪಚುನಾವಣೆಗಳು ಘೋಷಣೆಯಾಗಿಲ್ಲ. ಉತ್ತರಾಖಂಡದಲ್ಲಿ ಕೂಡಾ ಪಂಚಾಯತ್ ಚುನಾವಣೆಗಳು ನಡೆಯುತ್ತಿರುವುದರಿಂದ ಉಪಚುನಾವಣೆಗಳು ನಡೆಯುವುದಿಲ್ಲ. ರಾಜ್ಯ ಆಡಳಿತ ಯಂತ್ರವು ಈಗಾಗಲೇ ಪಂಚಾಯತ್ ಚುನಾವಣಾ ಪ್ರಕ್ರಿಯೆಯಲ್ಲಿ ಮಗ್ನವಾಗಿದೆ ಎಂದು ಅರೋರಾ ನುಡಿದರು.

ಇತರ ಕೆಲವು ಸ್ಥಾನಗಳಿಗೆ  ಸಂಬಂಧಿಸಿದಂತೆ  ಸಂಬಂಧಪಟ್ಟ ಹೈಕೋರ್ಟ್‌ಗಳು ಚುನಾವಣಾ ಅರ್ಜಿಗಳಿಗೆ ಸಂಬಂಧಿಸಿದಂತೆ ವಿಚಾರಣೆಗಳನ್ನು ನಡೆಸುತ್ತಿರುವುದರಿಂದ ವಿಷಯಗಳು ನ್ಯಾಯಾಂಗ ವ್ಯಾಪ್ತಿಗೆ (ಸಬ್‌ಜ್ಯುಡಿಸ್) ಬರುತ್ತವೆ. ಈ ಕಾರಣದಿಂದ ಉಪಚುನಾವಣೆಗಳನ್ನು ನಡೆಸಲಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದರು.

ಅರುಣಾಚಲ ಪ್ರದೇಶ, ಛತ್ತೀಸ್‌ಗಢ, ತೆಲಂಗಾಣ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ ಮತ್ತು ಪುದುಚೆರಿ ರಾಜ್ಯಗಳಲ್ಲಿ ತಲಾ ಒಂದು ಸ್ಥಾನಗಳಿಗೆ ಉಪಚುನಾವಣೆಗಳು ನಡೆಯಲಿವೆ. ಬಿಹಾರ ಮತ್ತು ಕೇರಳದಲ್ಲಿ ತಲಾ ೫, ಅಸ್ಸಾಮ್, ಗುಜರಾತ್ ಮತ್ತು ಪಂಜಾಬಿನಲ್ಲಿ ತಲಾ ೪, ಹಿಮಾಚಲ ಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡಿನಲ್ಲಿ ತಲಾ ೨, ಹಾಗೂ ಸಿಕ್ಕಿಮ್ ನಲ್ಲಿ ೩ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಲೋಕಸಭಾ ಉಪಚುನಾವಣೆ ಮತ್ತು ೬೪ ವಿಧಾನಸಭಾ ಸ್ಥಾನಗಳ ಉಪಚುನಾವಣೆಗೆ ಸೆಪ್ಟೆಂಬರ್ ೨೩ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಪ್ರಕ್ರಿಯೆ ಅದೇ ದಿನ ಆರಂಭವಾಗುವುದು.

ಚುನಾವಣಾ ವೇಳಾಪಟ್ಟಿ

ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ:

ಅಧಿಸೂಚನೆ ಪ್ರಕಟಣೆ: ಸೆಪ್ಟೆಂಬರ್ ೨೭

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಅಕ್ಟೋಬರ್ ೪

ನಾಮಪತ್ರ ಪರಿಶೀಲನೆ: ಅಕ್ಟೋಬರ್ ೫

ಅಭ್ಯರ್ಥಿಯಿಂದ ನಾಮಪತ್ರ ವಾಪಸಾತಿಗೆ ಕೊನೆಯ ದಿನ: ಅಕ್ಟೋಬರ್ ೭

ಮತದಾನದ ದಿನಾಂಕ: ಅಕ್ಟೋಬರ್ ೨೧

ಮತಗಳ ಎಣಿಕೆ: ಅಕ್ಟೋಬರ್ ೨೪

ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ: ಅಕ್ಟೋಬರ್ ೨೭

ಉಪಚುನಾವಣೆಗಳ ವೇಳಾಪಟ್ಟಿ

ಅಧಿಸೂಚನೆ ಪ್ರಕಟಣೆ: ಸೆಪ್ಟೆಂಬರ್ ೨೩

ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ: ಸೆಪ್ಟೆಂಬರ್ ೩೦

ನಾಮಪತ್ರ ಪರಿಶೀಲನೆ: ಅಕ್ಟೋಬರ್ ೧.

ಅಭ್ಯರ್ಥಿಯಿಂದ ನಾಮಪತ್ರ ವಾಪಸಾತಿಗೆ ಕೊನೆಯ ದಿನ: ಅಕ್ಟೋಬರ್ ೩

ಮತದಾನದ ದಿನಾಂಕ: ಅಕ್ಟೋಬರ್ ೨೧

ಮತಗಳ ಎಣಿಕೆಯ ದಿನಾಂಕ: ಅಕ್ಟೋಬರ್ ೨೪

ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ: ಅಕ್ಟೋಬರ್ ೨೭

September 21, 2019 - Posted by | ಭಾರತ, ರಾಜ್ಯ, ರಾಷ್ಟ್ರೀಯ, ಲೋಕಸಭೆ, Bengaluru, Bangalore,, General Knowledge, India, Nation, News, Politics, Spardha | , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ