SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ನೆಹರೂ ತಪ್ಪಿನಿಂದಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸೃಷ್ಟಿ: ಅಮಿತ್ ಶಾ


22 amith shah mumbai
ಮುಂಬೈ
: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ 2019 ಸೆಪ್ಟೆಂಬರ್ 22ರ ಭಾನುವಾರ ಇಲ್ಲಿ ತೀವ್ರ ಟೀಕಾಪ್ರಹಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ನೆಹರೂ ಅವರು ಕದನ ವಿರಾಮಕ್ಕೆ ಕೈಗೊಂಡ ಅಕಾಲಿಕ ನಿರ್ಧಾರದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸೃಷ್ಟಿಯಾಯಿತು’ ಎಂದು ಆಪಾದಿಸಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ’ಅನುಚಿತ ಸಮಯದಲ್ಲಿ ಪಕ್ಕದ ರಾಷ್ಟ್ರದೊಂದಿಗೆ ಕದನ ವಿರಾಮ ಘೋಷಿಸದೇ ಹೋಗಿದ್ದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಸೃಷ್ಟಿಯೇ ಆಗುತ್ತಿರಲಿಲ್ಲ’ ಎಂದು ಹೇಳಿದರು.

‘ಕಾಶ್ಮೀರದ ವಿಚಾರವನ್ನು ಆಗಿನ ಪ್ರಧಾನಿಗಿಂತಲೂ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಿಭಾಯಿಸಬೇಕಾಗಿತ್ತು’ ಎಂದು ಶಾ ಅಭಿಪ್ರಾಯಪಟ್ಟರು.

ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದತಿಗೆ ಕೇಂದ್ರದ ನಿರ್ಧಾರದ ಕುರಿತು ಹಾಗೂ ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು  ನಡೆಯಲಿರುವ  ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ‘ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯು ೩೭೦ನೇ ವಿಧಿ ರದ್ದತಿಯ ಕುರಿತ ಜನಮತಗಣನೆಯಾಗಲಿದೆ’ ಎಂದೂ ಹೇಳಿದರು.

‘೩೭೦ ವಿಧಿ ರದ್ದತಿಗಷ್ಟೇ ನಮ್ಮ ಕಾರ್ಯ ಪೂರ್ಣಗೊಂಡಿಲ್ಲ, ಈಗಷ್ಟೇ ನಮ್ಮ ಕೆಲಸ ಶುರುವಾಗುತ್ತಿದೆ’ ಎಂದು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ  ಅವರು ಹೇಳಿದರು.

‘ರಾಷ್ಟ್ರೀಯತೆ ಮತ್ತು ಅಭಿವೃದ್ಧಿಯ ಅಧ್ಯಾಯದೊಂದಿಗೆ ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವುದು ನಮ್ಮ ಗುರಿ’ ಎಂದು ಶಾ ನುಡಿದರು.

‘೩೭೦ನೇ ವಿಧಿ ರದ್ದತಿಯನ್ನು ಅವರು ನಾಚಿಕೆಯಿಲ್ಲದೆ ವಿರೋಧಿಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ವಿರುದ್ಧ ಅಮಿತ್ ಗುಡುಗಿದರು.

ಅಕ್ಟೋಬರ್ ೨೧ರ ಚುನಾವಣೆಯ ನಂತರ ದೇವೇಂದ್ರ ಫಡ್ನವಿಸ್ ಮತ್ತೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

‘೧೯೫೦ರಲ್ಲಿ ಸರ್ದಾರ್ ಪಟೇಲ್ ಅವರ ನಿಧನ ನಂತರ, ಭಾರತ ಸರ್ಕಾರವು ಶೇಕ್ ಅಬ್ದುಲ್ಲ ಜತೆಗೆ ದೆಹಲಿ ಒಪ್ಪಂದಕ್ಕೆ ಸಹಿ ಮಾಡಿತು. ಇದು ೩೭೦ನೇ ವಿಧಿಗೆ ತಳಹದಿಯಾಯಿತು’ ಎಂದು ಬಿಜೆಪಿ ನಾಯಕ ನುಡಿದರು.

‘ಪಾಕಿಸ್ತಾನದಿಂದ ಭಾರತಕ್ಕೆ ಬಂದವರಲ್ಲಿ ಇಬ್ಬರು, ಮನಮೋಹನ್ ಸಿಂಗ್ ಮತ್ತು ಐ.ಕೆ. ಗುಜ್ರಾಲ್ ಮುಂದೆ ಪ್ರಧಾನ ಮಂತ್ರಿಯಾದರು. ಎಲ್.ಕೆ.ಅಡ್ವಾಣಿ ಉಪ ಪ್ರಧಾನಿಯಾದರು. ಆದರೆ, ಜಮ್ಮು ಮತ್ತು ಕಾಶ್ಮೀರದತ್ತ ಹೋದವರಿಗೆ ೩೭೦ನೇ ವಿಧಿ ರದ್ದಾಗುವವರೆಗೂ ಮತದಾನದ ಹಕ್ಕು ಇರಲಿಲ್ಲ. ಆ ಜನರೂ ಸಹ ಈಗ ಮತದಾನದ ಹಕ್ಕು ಚಲಾಯಿಸಬಹುದಾಗಿದೆ’ ಎಂದು ಶಾ ವಿವರಿಸಿದರು.

‘೩೭೦ನೇ ವಿಧಿ ಮತ್ತು ೩೫ಎ ವಿಧಿಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಿತ್ತು ಹಾಕಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶಂಸಿಸಿದ ಅಮಿತ್ ಶಾ ’ನಾನು ಪ್ರಧಾನಿ ಮೋದಿ ಜಿ ಅವರ ದಿಟ್ಟತನವನ್ನು ಅಭಿನಂದಿಸುತ್ತೇನೆ. ಎರಡನೇ ಅವಧಿಗೆ ೩೦೫ ಸ್ಥಾನಗಳೊಂದಿಗೆ ಗೆದ್ದು ನಾವು ಸರ್ಕಾರ ರಚಿಸಿದ ಬಳಿಕ ಸಂಸತ್ತಿನ ಮೊದಲ ಅಧಿವೇಶನದಲ್ಲಿಯೇ ೩೭೦ ಮತ್ತು ೩೫ಎ ವಿಧಿಗಳನ್ನು ಅವರು ರದ್ದು ಪಡಿಸಿದರು’ ಎಂದು ಶಾ ನುಡಿದರು.

‘೩೭೦ನೇ ವಿಧಿ ರದ್ದು ಪಡಿಸಿದ್ದನ್ನು ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ಅವರು ವಿರೋಧಿಸುವರೇ ಹೇಗೆ ಎಂದು ಜನತೆಗೆ ತಿಳಿಸಬೇಕು’ ಎಂದು ಆಗ್ರಹಿಸುವ ಮೂಲಕ ಕಾಶ್ಮೀರದ ವಿಚಾರದಲ್ಲಿ ತಮ್ಮ ನಿಲುವು ಸ್ಪಷ್ಟ ಪಡಿಸುವಂತೆ ಅವರು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ) ಆಗ್ರಹಿಸಿದರು.

೩೭೦ನೇ ವಿಧಿ ರದ್ದತಿಯ ಹಿಂದೆ ಕಾಂಗ್ರೆಸ್ ಪಕ್ಷವನ್ನು ರಾಜಕೀಯವನ್ನು ಕಾಣುತ್ತಿದೆ ಎಂದು ಹೇಳಿದ ಕೇಂದ್ರ ಸಚಿವರು ’ಬಿಜೆಪಿಯು ೩೭೦ನೇ ವಿಧಿಯನ್ನು ರದ್ದು ಪಡಿಸಿದ್ದು ರಾಷ್ಟ್ರದ ಏಕತೆಯನ್ನು ಕಾಪಾಡುವ ಸಲುವಾಗಿ’ ಎಂದು ಸಮರ್ಥಿಸಿದರು.

September 22, 2019 - Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ರಾಷ್ಟ್ರೀಯ, Flash News, General Knowledge, India, Nation, News, Pakistan, Politics, Prime Minister, Spardha, Terror | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ