SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮರಡು ಫ್ಲ್ಯಾಟ್ ನೆಲಸಮ: ಸುಪ್ರೀಂಕೋರ್ಟ್ ಕಟ್ಟಾಜ್ಞೆ


27 maradu-supreme-court

ಮಾಲೀಕರಿಗೆ ತಲಾ ೨೫ ಲಕ್ಷ ರೂ ಮಧ್ಯಂತರ ಪರಿಹಾರಕ್ಕೆ ಆದೇಶ

ನವದೆಹಲಿ: ಕರಾವಳಿ ನಿಯಂತಣ ವಲಯ ನಿಯಮಾವಳಿಗಳನ್ನು ಉಲ್ಲಂಘಿಸಿ ಕೋಚಿಯ ಮರಡುವಿನಲ್ಲಿ ನಿರ್ಮಿಸಲಾದ ನಾಲ್ಕು ಅಪಾರ್ಟ್‌ಮೆಂಟ್‌ಗಳ  ನೆಲಸಮ ಕಾರ್ಯವನ್ನು ತಡೆಯಲು ಕೇರಳ ಸರ್ಕಾರವು ನಡೆಸಿದ ಕೊನೆಯ ಕ್ಷಣದ ಯತ್ನಗಳನ್ನು  2019 ಸೆಪ್ಟೆಂಬರ್ 27ರ ಶುಕ್ರವಾರ ಖಂಡತುಂಡವಾಗಿ ತಿರಸ್ಕರಿಸಿದ ಸುಪ್ರೀಂಕೋರ್ಟ್ ಪ್ರತಿಯೊಬ್ಬ ಫ್ಲ್ಯಾಟ್ ಮಾಲೀಕರಿಗೂ ಮಧ್ಯಂತರ ಪರಿಹಾರವಾಗಿ ೨೫ ಲಕ್ಷ ರೂಪಾಯಿಗಳನ್ನು ಪಾವತಿ ಪಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ  ನೀಡಿತು.

‘ಏನಾದರೂ ಸರಿ, ಕಟ್ಟಡಗಳನ್ನು ನೆಲಸಮ ಮಾಡಲೇಬೇಕು’ ಎಂದು ಕಟ್ಟಾಜ್ಞೆ ನೀಡಿದ ಸುಪ್ರೀಂಕೋರ್ಟ್ ’ಅಕ್ರಮ ಮುಂದುವರಿಕೆಗೆ ಕೋರ್ಟ್ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ದೃಢವಾಗಿ ಹೇಳಿತು. ಕಟ್ಟಡಗಳಲ್ಲಿ ವಾಸವಾಗಿರುವವರನ್ನು ತೆರವುಗೊಳಿಸುವುದಾಗಿಯೂ, ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲು ಅನುಮತಿ ನೀಡುವಂತೆಯೂ ಕೇರಳ ಸರ್ಕಾರ ಕೋರಿತು.

‘ನಿಮಗೆ ಅಪಾರ್ಟ್‌ಮೆಂಟ್ ಸಮುಚ್ಚಯಗಳನ್ನು ನೆಲಸಮ ಮಾಡಲು ಆಗುತ್ತದೆಯೋ ಇಲ್ಲವೋ ಹೇಳಿ. ರಾಜ್ಯ ಸರ್ಕಾರಕ್ಕೆ ಈ ಕೆಲಸ ಮಾಡಲು ಆಗುವುದಿಲ್ಲವಾದರೆ ಅದನ್ನು ನೆಲಸಮ ಮಾಡಿಸಲು ನ್ಯಾಯಾಲಯಕ್ಕೆ ಗೊತ್ತಿದೆ’ ಎಂದು ನ್ಯಾಯಮೂರ್ತಿಗಳು ಕೇರಳ ಸರ್ಕಾರಕ್ಕೆ ಹೇಳಿದರು.

ಶುಕ್ರವಾರ ವಿಚಾರಣೆಯ ಕೊನೆಗೆ ಕಟ್ಟಡ ನೆಲಸಮಗೊಳಿಸಿ ಅವಶೇಷಗಳನ್ನು ತೆರವುಗೊಳಿಸಲು ೧೩೮ ದಿನಗಳ ಕಾಲಮಿತಿಯನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿತು.

ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಸಮುಚ್ಚಯಗಳಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸಿದವರಿಗೆ ತಲಾ ೨೫ ಲಕ್ಷ ರೂಪಾಯಿಗಳ ಮಧ್ಯಂತರ ಪರಿಹಾರವನ್ನು ಪಾವತಿಸಲು ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿತು.

ಮರಡು ಫ್ಲ್ಯಾಟ್‌ಗಳ ಮೌಲ್ಯಮಾಪನ ಮಾಡಿ ಸಿಆರ್‌ಝಡ್ ವಲಯದಲ್ಲಿ ನಿರ್ಮಾಣಕ್ಕೆ ಅನುಮತಿ ನೀಡಿದವರ ಮೇಲೆ ಹೊಣೆಗಾರಿಕೆ ನಿಗದಿ ಪಡಿಸಲು ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ನೇತೃತ್ವದ ಸಮಿತಿಯೊಂದನ್ನು  ರಚಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿತು.

ಫ್ಲ್ಯಾಟ್ ಮಾಲೀಕರಿಗೆ ಪಾವತಿ ಮಾಡುವ ಪರಿಹಾರದ ಹಣವನ್ನು ಕಟ್ಟಡ ನಿರ್ಮಾಪಕರಿಂದ ರಾಜ್ಯ ಸರ್ಕಾರವು ವಸೂಲಿ ಮಾಡಬಹುದು. ಸಮುಚ್ಚಯ ನಿರ್ಮಾಣ ಮಾಡಿದ ಕಂಪೆನಿಯ ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲೂ ಬಹುದು ಎಂದು ಸುಪ್ರೀಂಕೋರ್ಟ್ ಹೇಳಿತು.

ಕರಾವಳಿ ನಿಯಂತ್ರಣ ವಲಯ ನಿಯಮಾವಳಿಗಳನ್ನು ಉಲ್ಲಂಘಿಸಿ ಹಿನ್ನೀರಿಗೆ ಅಭಿಮುಖವಾಗಿ ನಿರ್ಮಿಸಲಾದ ೩೫೭ ಫ್ಲ್ಯಾಟ್‌ಗಳನ್ನು ನಿರ್ನಾಮ ಮಾಡುವಂತೆ ಸುಪ್ರೀಂಕೋರ್ಟ್ ಈ ವರ್ಷ ಮೇ ತಿಂಗಳಲ್ಲಿ ಆಜ್ಞಾಪಿಸಿತ್ತು. ಸರ್ಕಾರ ವಿಳಂಬಧೋರಣೆ ಅನುಸರಿಸಿದ್ದಕ್ಕಾಗಿ ಅದನ್ನು ಝಾಡಿಸಿದ್ದ ಸುಪ್ರೀಂಕೋರ್ಟ್ ಈ ತಿಂಗಳಲ್ಲೇ ಧ್ವಂಸ ಕಾರ್‍ಯಾಚರಣೆ ಕೈಗೊಳ್ಳುವಂತೆ ಆಜ್ಞಾಪಿಸಿತ್ತು.

ಫ್ಲ್ಯಾಟ್ ಸಮುಚ್ಚಯಗಳು ಇರುವ ಮರಡು ಪ್ರದೇಶದ ನಗರಸಭೆಯು ಈ ವಾರ ಅಲ್ಲಿನ ನಿವಾಸಿಗಳು ಫ್ಲ್ಯಾಟ್ ತೆರವುಗೊಳಿಸಲು ನಿರಾಕರಿಸಿದಾಗ ವಿದ್ಯುತ್ ಮತ್ತು ನೀರು ಸರಬರಾಜನ್ನು ಸ್ಥಗಿತಗೊಳಿಸಿತ್ತು. ಸಂಪರ್ಕಗಳನ್ನು ಕಡಿಯುವಂತೆ ನಗರಸಭೆಯು ರಾಜ್ಯ ವಿದ್ಯುಚ್ಛಕ್ತಿ ಮಂಡಳಿ ಮತ್ತು ರಾಜ್ಯ ಜಲ ನಿಗಮಕ್ಕೆ ಸೂಚಿಸಿತ್ತು.

ಇದಲ್ಲದೆ ತೆರವು ಹಾಗೂ ನೆಲಸಮ ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಕಿರಿಯ ಐಎಎಸ್ ಅಧಿಕಾರಿ ಸ್ನೇಹಿಲ್ ಕುಮಾರ್ ಅವರನ್ನೂ ರಾಜ್ಯ ಸರ್ಕಾರವು ನೇಮಕ ಮಾಡಿತ್ತು.

September 27, 2019 - Posted by | ಪ್ರಧಾನಿ, ಬೆಂಗಳೂರು, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, ಸುಪ್ರೀಂಕೋರ್ಟ್, Bengaluru, Bangalore,, Commerce, Consumer Issues, Education, Finance, Flash News, General Knowledge, India, Nation, News, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ