SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮನುಜರ ಪಾಲಿಗೆ ಯಮನಾಗುತ್ತಿರುವ ಸಾಗರ!


 ಕಾಲು ಶತಮಾನದೊಳಗೆ ಸಂಕಷ್ಟಗಳ ಸರಮಾಲೆ, ಮುಂಬೈ, ಚೆನ್ನೈ, ಕೋಚಿಗೂ ಆತಂಕ: ವಿಶ್ವಸಂಸ್ಥೆ ವರದಿ

Coast Conditions Report

ನವದೆಹಲಿ: ಸಾಗರಗಳು ಶತ ಶತಮಾನಗಳಿಂದ ಮಾನವ ನಾಗರಿಕತೆಯ ವಿಕಸನವನ್ನು ಪೋಷಿಸುತ್ತಾ ಬಂದಿವೆ. ಆದರೆ, ಸಾಗರ ಪರಿಸರವನ್ನು ಅಸ್ಥಿರಗೊಳಿಸುತ್ತಿರುವ ಇಂಗಾಲ (ಕಾರ್ಬನ್) ಮಾಲಿನ್ಯವನ್ನು ನಿವಾರಿಸಲು ಕ್ರಮ ಕೈಗೊಳ್ಳದೇ ಹೋದಲ್ಲಿ ಇದೇ ಸಾಗರಗಳು ಜಾಗತಿಕ ಮಟ್ಟದಲ್ಲಿ ಮಾನವನಿಗೆ ಸಂಕಷ್ಟಗಳ ಸರಮಾಲೆಯನ್ನೇ  ತಂದೊಡ್ಡಲಿವೆ ಎಂದು ವಿಶ್ವಸಂಸ್ಥೆಯ ಕರಡು ವರದಿಯೊಂದು ಎಚ್ಚರಿಕೆ ನೀಡಿದೆ.

ಇಂಗಾಲ ಮಾಲಿನ್ಯದ ಪರಿಣಾಮವಾಗಿ ವಿನಾಶಕಾರೀ ಬದಲಾವಣೆಗಳು ಈಗಾಗಲೇ ಸಮುದ್ರಗಳಲ್ಲಿ ಕಾಣರಂಭಿಸಿವೆ. ಮೀನುಗಳ ಸಂತತಿ ಭಾರೀ ಪ್ರಮಾಣದಲ್ಲಿ ನಶಿಸುತ್ತಿದೆ. ಇದಕ್ಕಿಂತಲೂ ನೂರಾರು ಪಟ್ಟು ಅಥವಾ ಅದಕ್ಕೂ ಹೆಚ್ಚಿನ ಹಾನಿ ಮಹಾ ಬಿರುಗಾಳಿಗಳಿಂದ ಉಂಟಾಗಲಿದೆ ಮತ್ತು ನೂರಾರು ದಶಕಲಕ್ಷ ಜನರು ಸಮುದ್ರದ ಮಟ್ಟ ಏರಿಕೆಯ ಪರಿಣಾಮವಾಗಿ ನಿರ್ಗತಿಕರಾಗಲಿದ್ದಾರೆ ಎಂದು ಹವಾಮಾನ ಬದಲಾವಣೆ ಕುರಿತ ಅಂತರ್ – ಸರ್ಕಾರಿ ಸಮಿತಿಯ (ಐಪಿಸಿಸಿ) ವರದಿ ಹೇಳಿದೆ.

ಕ್ರಯೋಸ್ಪಿಯರ್ ಎಂಬುದಾಗಿ ಪರಿಚಿತವಾಗಿರುವ ಭೂಮಿಯ ಘನೀಕೃತ ವಲಯಗಳು ಮತ್ತು ಸಾಗರಗಳ ಬಗೆಗಿನ ವರದಿಯನ್ನು ಈ ಸಮಿತಿಯು ತಯಾರಿಸಿದೆ.

ಕೋಟ್ಯಂತರ ಟನ್‌ಗಳಷ್ಟು ಕಾರ್ಬನ್ ಬಿಡುಗಡೆಗೊಂಡು ಜಾಗತಿಕ ತಾಪಮಾನ ಹಲವಾರು ಪಟ್ಟು ಹೆಚ್ವುವ ಪರಿಣಾಮವಾಗಿ ಉತ್ತರ ಭೂಗೋಳಾರ್ಧದ ಮೇಲ್ಮೈ ಭೂಪದರದ ಶೇಕಡಾ ೩೦ರಷ್ಟು ಭಾಗ ಈ ಶತಮಾನಾಂತ್ಯದ ವೇಳೆಗೆ ಕರಗಲಿದೆ ಎಂದು ವರದಿ ಹೇಳಿದೆ.

ನಾಲ್ಕು ಬೃಹತ್ ಪ್ರದೇಶಗಳಿಗೆ ಸಂಕಷ್ಟ: ಹದಗೆಡುತ್ತಿರುವ ಸಾಗರ ಮತ್ತು ಹಿಮಗಡ್ಡೆ ಕರಗುವಿಕೆಯ ಭೀಕರ ಪರಿಣಾಮಗಳು ವಿಶ್ವದ ನಾಲ್ಕು ಬೃಹತ್ ಭೂಪ್ರದೇಶಗಳಾದ ಚೀನಾ, ಅಮೆರಿಕ, ಯುರೋಪ್ ಭಾರತದ ಮೇಲೆ ಆಗಲಿದೆ. ಆದರೆ ಈ ಪ್ರದೇಶಗಳ ಪೈಕಿ ಯಾವುದೇ ಪ್ರದೇಶವೂ ಇಂಗಾಲದ ಮಾಲಿನ್ಯವನ್ನು ತಡೆಗಟುವ ಮಹತ್ವಾಕಾಂಕ್ಷಿ ಗುರಿಗಳೊಂದಿಗೆ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತಿಲ್ಲ ಎಂದು ವರದಿ ತಿಳಿಸಿದೆ.

ಪಳೆಯುಳಿಕೆ ಆಧಾರಿತ ಮಾಲಿನ್ಯ ಹೊರಸೂಸುವಿಕೆಯ ಶೇಕಡಾ ೬೦ರಷ್ಟು ಈ ಪ್ರದೇಶಗಳಲ್ಲೇ ಆಗುತ್ತಿದೆ ಎಂದು ವರದಿ ತಿಳಿಸಿದೆ.

ವರದಿಯ ಪ್ರಕಾರ ಭಾರತದಲ್ಲಿ ಪ್ರಮುಖ ಕರಾವಳಿ ನಗರಗಳಾದ ಮುಂಬೈ ಚೆನ್ನೈ ಮತ್ತು ಕೋಚಿ ಸಮುದ್ರ ಮಟ್ಟ ಏರಿಕೆಯಿಂದ ಆಗುವ ಬೀಕರ ಪರಿಣಾಮಗಳಿಗೆ ತುತ್ತಾಗಲಿದೆ.

ಚೀನಾದಲ್ಲಿ ಶಾಂಘಾಯಿ, ನಿಂಗ್ಬೊ, ಟೈಝ್ಸೊವು ಮತ್ತು ಇತರ ಆರು ಪ್ರಮುಖ ಕರಾವಳಿ ನಗರಗಳು ಅಪಾರ ಹಾನಿಗೆ ತುತ್ತಾಗಲಿದೆ ಎಂದು ವರದಿ ಹೇಳಿದೆ.

ಅಮೆರಿಕದಲ್ಲಿ ನ್ಯೂಯಾರ್ಕ್, ಮಿಯಾಮಿ ಮತ್ತು ಇತರ ನಗರಗಳು, ಯುರೋಪಿನಲ್ಲಿ ಆಮ್‌ಸ್ಟರ್‌ಡಾಮ್, ವೆನಿಸ್, ಹ್ಯಾಂಬರ್ಗ್ ಇತ್ಯಾದಿ ನಗರಗಳು ಸಮುದ್ರ ಮಟ್ಟ ಏರಿಕೆಯ ತತ್ ಕ್ಷಣದ ಅಪಾಯವನ್ನು ಎದುರಿಸಲಿವೆ.

ವರದಿಯ ಪ್ರಕಾರ ೨೦೫೦ರಿಂದ ವೇಳೆಗೆ ತಗ್ಗು ಪ್ರದೇಶಗಳ ಮಹಾನಗರಗಳು ಮತ್ತು ಸಣ್ಣ ದ್ವೀಪರಾಷ್ಟ್ರಗಳು ಪ್ರತಿವರ್ಷವೂ ಸಮುದ್ರ ಪ್ರಕೋಪವನ್ನು ಕಾಣಲಿವೆ. ೨೧೦೦ರ ವೇಳೆಗೆ ಪ್ರವಾಹ ಹಾನಿಗಳು ೧೦೦ರಿಂದ ೧೦೦೦ ಪಟ್ಟಿನಷ್ಟು ಹೆಚ್ಚಲಿವೆ. ೨,೫೦,೦೦೦ ಮಂದಿ ಸಮುದ್ರ ಮಟ್ಟ ಏರಿಕೆಯ ಪರಿಣಾಮವಾಗಿ ನಿಂತ ನೆಲ ಕಳೆದುಕೊಂಡು ನಿರ್ಗತಿಕರಾಗುವ ನಿರೀಕ್ಷೆ ಇದೆ..

’ಈಗಿನ ದಿನಗಳಲ್ಲಿ ಸಣ್ಣ ಮಟ್ಟದ ವಲಸೆಗಳಿಂದ ಉಂಟಾಗುತ್ತಿರುವ ರಾಜಕೀಯ ಅಸ್ಥಿರತೆಯನ್ನು, ತಾವು ನೆಲೆಸಿರುವ ನೆಲವನ್ನೇ ಸಮುದ್ರ ನುಂಗುವ ಕಾರಣಕ್ಕಾಗಿ ಲಕ್ಷಾಂತರ ಮಂದಿ ವಲಸೆ ಹೋಗಬೇಕಾದ ಪರಿಸ್ಥಿತಿಯೊಂದಿಗೆ ಹೋಲಿಸಿ ನೋಡಿ. ಆಗ ನಿಮಗೆ ಪರಿಸ್ಥಿತಿಯ ಅಗಾಧತೆಯ ಅರಿವಾಗುತ್ತದೆ’ ಎಂದು ಅಮೆರಿಕದ ಸಂಶೋಧನಾ ತಂಡ ಕ್ಲೈಮೇಟ್ ಸೆಂಟ್ರಲ್‌ನ ಸಿಇಒ ಮತ್ತು ಮುಖ್ಯ ವಿಜ್ಞಾನಿ ಬೆನ್ ಸ್ಟ್ರ್ರೌಸ್ ಹೇಳಿದರು.

ಸಾಗರಗಳು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ನಿವಾರಿಸಲು ಸ್ಪಂಜಿನ ರೀತಿ ಕೆಲಸ ಮಾಡುತ್ತವೆ. ೧೯೭೦ರಿಂದ ಹಸಿರುಮನೆಗಳು ಸೃಷ್ಟಿಸುತ್ತಿರುವ ಶೇಕಡಾ ೯೦ರಷ್ಟು ತಾಪವನ್ನು ಸಾಗರಗಳು ಹೀರಿಕೊಳ್ಳುತ್ತಿವೆ. ಆದರೆ ಭೂಮಿಯ ಮೇಲ್ಮೈಯಲ್ಲಿ ಅತಿಯಾದ ತಾಪ ಸೃಷ್ಟಿಯ ಪರಿಣಾಮವಾಗಿ ಸಾಗರಗಳಿಗೆ ಸ್ಪಂಜಿನಂತೆ ನಿರ್ವಹಿಸುವ ಈ ಕೆಲಸವನ್ನು ಮಾಡಲು ಆಗುತ್ತಿಲ್ಲ.

ಆಮ್ಲೀಕರಣವು (ಆಸಿಡೈಫಿಕೇಷನ್) ಸಾಗರಗಳ ಮೂಲ ಆಹಾರ ಸರಪಣಿಯನ್ನೇ ಹಾಳುಗೆಡಹುತ್ತಿವೆ. ಸಮುದ್ರದ ಮೇಲಿನ ಬಿಸಿಗಾಳಿಗಳು ಆಮ್ಲಜನಕ ರಹಿತವಾದ ’ಮೃತ ವಲಯಗಳನ್ನು’ (ಡೆಡ್ ಝೋನ್ಸ್) ನಿರ್ಮಾಣ ಮಾಡುತ್ತಿವೆ ಎಂದು ವರದಿ ತಿಳಿಸಿದೆ.

August 31, 2019 - Posted by | environment /endangered species, General Knowledge, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ