SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕುಕ್ಕೆ ಸುಬ್ರಹ್ಮಣ್ಯನಿಗೆ ನೂತನ ಬ್ರಹ್ಮರಥ


This slideshow requires JavaScript.

ಸುಬ್ರಹ್ಮಣ್ಯ: ಕರ್ನಾಕದ ದಕ್ಷಿಣ ಕನ್ನಡ ಜಿಲ್ಲೆಯ ದಟ್ಟ ಕಾನನದ ಮಧ್ಯೆ ಕುಮಾರ ಪರ್ವತ ಮತ್ತು ಶೇಷ ಪರ್ವತಗಳ ರಮಣೀಯ ಪರಿಸರದಲ್ಲಿ ಇರುವ ಕುಕ್ಕೆ ಸುಬ್ರಹ್ಮಣ್ಯ ಕರ್ನಾಟಕದ ಏಳು ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದು.

ಭಾರತದ 108 ಶೈವ ಕ್ಷೇತ್ರಗಳಲ್ಲಿ ಒಂದಾಗಿರುವ ಕುಕ್ಕು ಸುಬ್ರಹ್ಮಣ್ಯ  ಅಗಾಧ ಶಕ್ತಿಯ ಕಾರ್ಣಿಕೆ ಇರುವ ಕ್ಷೇತ್ರ ಎಂದೇ ಪ್ರತೀತಿ. ಮಳೆ, ಬೆಳೆ, ಸಂಪತ್ತು, ಸಂತಾನಪ್ರಾಪ್ತಿ, ರೋಗಗಳಿಂದ ಮುಕ್ತಿಗಾಗಿ ಭಕ್ತರು ಇಲ್ಲಿ ಸಲ್ಲಿಸುವ ಪ್ರಾರ್ಥನೆ ಫಲ ನೀಡುತ್ತದೆ ಎಂಬ ನಂಬಿಕೆ ಪುರಾತನ ಕಾಲದಿಂದಲೇ ಇದೆ. ಕುಮಾರಧಾರಾ ನದಿಯಲ್ಲಿ ಒಂದು ಮುಳುಗು ಹಾಕಿ ಸುಬ್ರಹ್ಮಣ್ಯನಿಗೆ ಉರುಳು ಸೇವೆ ಸಲ್ಲಿಸುವುದರಿಂದ ಚರ್ಮರೋಗಗಳಿಂದ ಮುಕ್ತಿ ದೊರೆಯುವುದು ಎಂಬ ನಂಬಿಕೆ ಇದೆ.

ಈ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇದೀಗ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದೆ. ನೂತನ ಬ್ರಹ್ಮರಥದ ಕೆಲಸ ಕಾರ್ಯಗಳು ಬಹುತೇಕ ಪೂರ್ತಿಗೊಂಡಿದೆ.

ವಿವಿಧ ಜಾತಿಯ 2000 ಸಿ ಎಫ್ ಟಿ  ಮರ ಬಳಸಿ ಈ ಬ್ರಹ್ಮರಥವನ್ನು ನಿರ್ಮಿಸಲಾಗಿದೆ. ಕೋಟೇಶ್ವರದಲ್ಲಿ ಕೇವಲ 7 ತಿಂಗಳಲ್ಲಿ ಸುಂದರವಾದ ಕೆತ್ತನೆಗಳೊಂದಿಗೆ ನೂತನ ಬ್ರಹ್ಮರಥ ನಿರ್ಮಾಣವಾಗಿದೆ.

ನವರಾತ್ರಿ ಆರಂಭವಾಗುವ ಹೊತ್ತಿಗೆ,  ಸೆಪ್ಟೆಂಬರ  29 ರಂದು ರಥವನ್ನು ದೇವಾಲಯಕ್ಕೆ ಬಿಟ್ಟು ಕೊಡಲಾಗುತ್ತದೆ. ಸೆಪ್ಟೆಂಬರ  30 ರಂದು ಬೆಳಗ್ಗೆ ರಥವು ಟ್ರಾಲಿಯ ಮೂಲಕ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಸ್ತುತ  ಸುಮಾರು 400 ವರ್ಷಗಳ ಪುರಾತನವಾದ ರಥ ಇದೆ. ಈ ಪುರಾತನ ರಥದ ಅಳತೆಗೆ, ಶಾಸ್ತ್ರಕ್ಕೆ ಯಾವುದೇ ಧಕ್ಕೆಯಾಗದಂತೆ ಅದೇ ಮಾದರಿಯಲ್ಲಿ ಈಗ ಹೊಸ ಬ್ರಹ್ಮರಥ ನಿರ್ಮಾಣ ಮಾಡಲಾಗಿದೆ.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಮಾರ್ಗದರ್ಶನದಲ್ಲಿ ಕೋಟೇಶ್ವರದ  ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಶಾಲೆಯಲ್ಲಿ ಬ್ರಹ್ಮರಥ ನಿರ್ಮಾಣಗೊಂಡಿದೆ. ಉದ್ಯಮಿ ಮುತ್ತಪ್ಪ ರೈ ಮತ್ತು ಅಜಿತ್ ರೈ ಕಡಬ ದಾನ ರೂಪದಲ್ಲಿ ಸುಮಾರು 2 ಕೋಟಿ ರೂ ವೆಚ್ಚದಲ್ಲಿ  ರಥವನ್ನು ನಿರ್ಮಿಸಿಕೊಡುತ್ತಿದ್ದಾರೆ.

ಹೇಗಿದೆ ನೂತನ ರಥ ?

ನೂತನ ಬ್ರಹ್ಮರಥವು ಹಳೆಯ ಬ್ರಹ್ಮರಥದ ಮಾದರಿಯಲ್ಲೇ ನಿರ್ಮಾಣಗೊಂಡಿದೆ.  ರಥವು ನೆಲದಿಂದ ಕಲಶದ ತುದಿವರೆಗೆ 63 ಅಡಿ ಎತ್ತರವಿದೆ.  ನೆಲದಿಂದ ರಥದ ಜಿಡ್ಡೆಯ ತನಕ 17 ಅಡಿ ಎತ್ತರವಿದ್ದರೆ,  ಚಕ್ರ 8 ಅಡಿ ಎತ್ರರವಿದೆ. ಅಂದಾಜು 22 ಟನ್ ತೂಕವನ್ನು ರಥ ಹೊಂದಿದೆ. 16 ಅಂತಸ್ತುಗಳನ್ನು ಹೊಂದಿದೆ.

ರಥಕ್ಕೆ ಬೇಕಾದ ಮರಗಳನ್ನು ಉತ್ತರ ಭಾರತದಿಂದ ಸಾಗುವಾನಿ,  ಗುಜರಾತಿನಿಂದ ಭೋಗಿಮರ ಹಾಗೂ ಸುಬ್ರಹ್ಮಣ್ಯ ಪ್ರಾಂತ್ಯದಿಂದ ಕಿರಾಲ್ ಬೋಗಿ  ಮರ  ಬಳಸಲಾಗಿದೆ.

ರಥಲ್ಲಿ ಸುಂದರವಾದ ವಿವಿಧ ಕೆತ್ತನೆಗಳು ಇವೆ.  ಪ್ರಮುಖವಾಗಿ ಸುಬ್ರಹ್ಮಣ್ಯ ಸ್ವಾಮಿಯ ಲೀಲಾವಳಿಗಳು, ಅಷ್ಟ ದಿಗ್ಫಾಲಕರು, ಮಹಾಭಾರತ, ಪಾರ್ವತಿ ಕಲ್ಯಾಣ, ದಕ್ಷಯಜ್ಞ, ಪುತ್ರಕಾಮೇಷ್ಠಿಯಾಗ , ಚತುರ್ವಂಶಿ ವಿಗ್ರಹ, ಶಿವನ ವಿವಿಧ ಲೀಲಾವಳಿಗಳು ಹಾಗೂ ಪ್ರಪಂಚದ ಸಕಲ ಜೀವರಾಧಿಗಳಿರುವ  ಚಿತ್ರಗಳ ಕೆತ್ತನೆಯಿಂದ ರಥವು ಮನ ಸೆಳೆಯುತ್ತದೆ. ರಥದಲ್ಲಿನ ಕಲೆಗಾಗಿ ಸಾಗುವಾನಿ ಮರ ಬಳಸಿಕೊಳ್ಳಲಾಗಿದೆ. ಚಕ್ರ ಮತ್ತು ಅಚ್ಚಿಗೆ ಬೋಗಿಮರ ಉಪಯೋಗಿಸಲಾಗಿದೆ.

ಸೆಪ್ಟೆಂಬರ 29 ರಂದು  ರಥ ದಾನಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರ ಉಪಸ್ಥಿತಿಯಲ್ಲಿ ರಥವನ್ನು  ಹಸ್ತಾಂತರ ಮಾಡಲಾಗುತ್ತದೆ. ಬಳಿಕ  ಕೋಟೇಶ್ವರದ ವಿಶ್ವಕರ್ಮ ಕರಕುಶಲ ಶಿಲ್ಪಾಕಲಾ ಶಾಲೆಯಿಂದ ರಥ ಕುಕ್ಕೆಗೆ ಹೊರಡಲಿದೆ.

ಮಂಗಳೂರು ಪಡೀಲ್ ಉಪ್ಪಿನಂಗಡಿ-ಕಡಬ ಮಾರ್ಗವಾಗಿ ಕುಕ್ಕೆಸುಬ್ರಹ್ಮಣ್ಯಕ್ಕೆ  ಅಕ್ಟೋಬರ 3 ರಂದು ತಲುಪಲಿದೆ ಎಂದು ಕುಕ್ಕೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ತಿಳಿಸಿದ್ದಾರೆ.

ನೂತನ ಬ್ರಹ್ಮರಥದ ಚಿತ್ರ ಮಾಹಿತಿ ಕೃಪೆ: ಸುಳ್ಯನ್ಯೂಸ್.ಕಾಮ್

ನೆತ್ರಕೆರೆ ಉದಯಶಂಕರ

September 1, 2019 - Posted by | ದಕ್ಷಿಣ ಕನ್ನಡ ಜಿಲ್ಲೆ, culture, Dakshina Kannada District, General Knowledge, News, Spardha, Temples, Temples, ದೇವಾಲಯಗಳು

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ