SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಮನಮೋಹನ ’ಪಂಚ ಸೂತ್ರ’


12 Manmohan-Singh
ನವದೆಹಲಿ:
ನೋಟು ಅಮಾನ್ಯೀಕರಣದ ಸೋಲು ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ದೋಷಪೂರಿತ ಅನುಷ್ಠಾನದ ಪರಿಣಾಮವಾಗಿ ಕುಸಿತದತ್ತ ಸಾಗಿರುವ ದೇಶದ ಹಾಲಿ ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಿ ಮತ್ತೆ ಹಳಿಗೆ ತರಲು ಮಾಜಿ ಪ್ರಧಾನಿ, ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರು  2019 ಸೆಪ್ಟೆಂಬರ್  12ರ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ’ಪಂಚ ಸೂತ್ರಗಳನ್ನು’ ಸಲಹೆ  ಮಾಡಿದರು.

ದಿನ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಮ್ಮ ಸಲಹೆಯನ್ನು ಮುಂದಿಟ್ಟಿರುವ ಮಾಜಿ ಪ್ರಧಾನಿ, ಈ ಪಂಚಸೂತ್ರಗಳ ಜಾರಿಗೆ ಮುನ್ನ ರಾಷ್ಟ್ರವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಹೇಳಿದರು.

ಹಾಲಿ ಆರ್ಥಿಕ ಹಿಂಜರಿತವು ಅಲ್ಪಕಾಲಿಕವಲ್ಲ, ದೀರ್ಘಕಾಲಿಕದ್ದಾಗಲಿದೆ. ಹೀಗಾಗಿ ಸರ್ಕಾರವು ತಜ್ಞರು ಮತ್ತು ಸಂಬಂಧಪಟ್ಟ ಎಲ್ಲರೊಂದಿಗೆ ಮುಕ್ತ ಮಾತುಕತೆ ನಡೆಸಿ ಅವರ ಮಾತು ಕೇಳಬೇಕು. ಮೋದಿ ಸರ್ಕಾರವು ಈ ನಿಟ್ಟಿನಲ್ಲಿ ಗಮನ ಕೇಂದ್ರೀಕರಿಸಿದ್ದನ್ನು ತಾವು ನೋಡಿಲ್ಲ ಎಂದು ಮನಮೋಹನ್ ಸಿಂಗ್ ನುಡಿದರು.

’ತಲೆಬರಹ (ಶೀರ್ಷಿಕೆ) ನಿರ್ವಹಣೆ’ಯ ಹವ್ಯಾಸದಿಮದ ಮೋದಿ ಸರ್ಕಾರ ಹೊರಬರಬೇಕು. ಈಗಾಗಲೇ ಸಾಕಷ್ಟು ಸಮಯ ವ್ಯರ್ಥವಾಗಿದೆ. ಭಾಗಶಃ ಪ್ರಕಟಣೆಗಳ ಬದಲಿಗೆ ಈಗ ಸಂಪೂರ್ಣ ಆರ್ಥಿಕ ಚೌಕಟ್ಟು ಸುಧಾರಣೆಗೆ ಸಮಗ್ರ ಪ್ರಯತ್ನಗಳನ್ನು ಮಾಡಬೇಕು’ ಎಂದು ಆರ್ಥಿಕತೆಯನ್ನು ಉನ್ನತ ಬೆಳವಣಿಗೆಯ ಹಾದಿಗೆ ತರಲು ಪಂಚ ಸೂತ್ರಗಳನ್ನು ಸಲಹೆ ಮಾಡುತ್ತಾ ಸಿಂಗ್ ಹೇಳಿದರು.

ಮನಮೋಹನ್ ಸಿಂಗ್ ಅವರ ಪಂಚಸೂತ್ರಗಳು

೧.           ಅಲ್ಪಾವಧಿಯಲ್ಲಿ ಆದಾಯ ಕಡಿಮೆಯಾದರೂ ಸರಕು ಮತ್ತು ಸೇವಾತೆರಿಗೆಯನ್ನು (ಜಿಎಸ್‌ಟಿ) ತರ್ಕಬದ್ಧಗೊಳಿಸುವುದು.

೨.           ಕೃಷಿ ವಲಯವನ್ನು ಪುನರುಜ್ಜೀವನಗೊಳಿಸುವುದು ಮತ್ತು ಗ್ರಾಮೀಣ ಬಳಕೆ ಮತ್ತು ಕೃಷಿ ಉತ್ಪನ್ನ ಹೆಚ್ಚಳಕ್ಕೆ ಆದ್ಯತೆ ನೀಡುವುದು. ಅದಕ್ಕಾಗಿ ಸರ್ಕಾರ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿರುವ ’ದೃಢ ಪರ್‍ಯಾಯ ಕ್ರಮಗಳನ್ನು’  ಅಂಶಗಳನ್ನು ಬಳಸಿಕೊಳ್ಳಬೇಕು.  ಕೃಷಿ ಮಾರುಕಟ್ಟೆಯನ್ನು ಮುಕ್ತಗೊಳಿಸಿ, ಹಣವು ಜನರ ಕೈಗಳಿಗೆ ತಲುಪುವಂತೆ ಮಾಡುವ ಹಲವಾರು ಕ್ರಮಗಳನ್ನು ಕಾಂಗ್ರೆಸ್ ಪ್ರಣಾಳಿಕೆ ತಿಳಿಸಿತ್ತು.

೩.           ಬಂಡವಾಳ ಸೃಷ್ಟಿಗಾಗಿ ದ್ರವ್ಯತೆ (ಲಿಕ್ವಿಡಿಟಿ) ಬಿಕ್ಕಟ್ಟನ್ನು  ನಿವಾರಿಸುವುದು. ಕೇವಲ ಸಾರ್ವಜನಿಕ ವಲಯ ಮಾತ್ರವಲ್ಲದ ಬ್ಯಾಂಕುಗಳಷ್ಟೇ ಅಲ್ಲ, ಎನ್‌ಬಿಎಫ್‌ಸಿ ಕೂಡಾ ಸಂಕಷ್ಟದಲ್ಲಿದೆ.

೪.           ಜವುಳಿ, ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್ ಮತ್ತು ಸಬ್ಸಿಡಿ ವಸತಿ ವಲಯದಂತಹ ಕಾರ್ಮಿಕ ಆಧಾರಿತ ರಂಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಸಿ ಈ ರಂಗಗಳಿಗೆ ಬಲ ತುಂಬುವುದು. ಇದಕ್ಕಾಗಿ ವಿಶೇಷವಾಗಿ ಸೂಕ್ಷ್ಮ (ಅತಿಸಣ್ಣ), ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ಸುಲಭ ಸಾಲ ಸಿಗುವಂತೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

೫.           ಚೀನಾ ಮತ್ತು ಅಮೆರಿಕ ನಡುವಣ ವಾಣಿಜ್ಯ ಸಮರದ ಈ ಸಂದರ್ಭದಲ್ಲಿ ಲಭ್ಯವಾಗುತ್ತಿರುವ ರಫ್ತು ಅವಕಾಶಗಳನ್ನು ಬಳಸಿಕೊಳ್ಳಬೇಕು ಮತ್ತು  ಹೊಸ ರಫ್ತು ಮಾರುಕಟ್ಟೆಯನ್ನು ಸರ್ಕಾರ ಗುರುತಿಸಬೇಕು.

ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರವ ವಾಣಿಜ್ಯ ದರ ಸಮರದ ಹಿನ್ನೆಲೆಯಲ್ಲಿ ಹೊಸ ರಫ್ತು ಅವಕಾಶಗಳನ್ನು ನಾವು ಗುರುತಿಸಬೇಕು. ಆವರ್ತಕ ಮತ್ತು ರಚನಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವುದು ಕಡ್ಡಾಯ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಆಗ ಮಾತ್ರವೇ ಮುಂದಿನ ೩-೪ ವರ್ಷಗಳಲ್ಲಿ ಆರ್ಥಿಕತೆಯನ್ನು ಉನ್ನತ ಬೆಳವಣಿಗೆಯತ್ತ ಒಯ್ಯಬಹುದು ಎಂದು ಮನಮೋಹನ್ ಸಿಂಗ್ ಹೇಳಿದರು.

ದೇಶದ ಆರ್ಥಿಕತೆ ನಿಭಾಯಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕಠಿಣ ದಾಳಿ ನಡೆಸಿದ ಅವರು ಆರ್ಥಿಕತೆ ಕುಸಿತ ದೇಶವನ್ನು ಹಲವು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಿದೆ. ಕುಸಿಯುತ್ತಿರುವ ಆರ್ಥಿಕತೆ ಉತ್ತೇಜನಕ್ಕೆ ಹಲವು ತುರ್ತು ಕ್ರಮಗಳನ್ನು ಕೇಂದ್ರ ಸರ್ಕಾರ ಸಂವೇದನಾಶೀಲವಾಗಿ ತೆಗೆದುಕೊಳ್ಳಬೇಕು  ಎಂದು ನುಡಿದರು.

ಆರ್ಥಿಕ ಕುಸಿತವು ಆವರ್ತಕ ಮತ್ತು ರಚನಾತ್ಮಕವಾಗಿರುವುದರಿಂದ ಇದು ದೀರ್ಘಕಾಲಿಕವಾಗಿರಲಿದೆ ಎಂದು ಅಂದಾಜು ಮಾಡಿದ ಸಿಂಗ್, ಸರ್ಕಾರ ಆರ್ಥಿಕತೆ ಸುಧಾರಣೆ ಕಡೆಗೆ ಗಮನ ಕೊಡದೆ ಐತಿಹಾಸಿಕ ನಿರೂಪಣೆಗೆ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ದೂರಿದರು.

ದೇಶ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದನ್ನು ನಾವು ನಿರಾಕರಿಸುವಂತಿಲ್ಲ. ಈಗಾಗಲೇ ಸಾಕಷ್ಟು ಸಮಯ ಕಳೆದುಹೋಗಿದೆ. ರಾಜಕೀಯ ಹಿತಾಸಕ್ತಿ ಹಾಗೂ ನೋಟು ಅಮಾನ್ಯೀಕರಣದಂತಹ ಭಾರೀ ತಪ್ಪುಗಳು ಆರ್ಥಿಕತೆ ಹಳಿ ತಪ್ಪುವಂತೆ ಮಾಡಿದೆ. ಸರ್ಕಾರ ಈಗಲಾದರೂ ಮುಂದಿನ ಪೀಳಿಗೆಗಾಗಿ ಆರ್ಥಿಕ ಸುಧಾರಣೆಗೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ಮತ್ತು ಉದ್ಯಮಗಳಲ್ಲಿ ಸಮೂಹ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡಬೇಕು ಎಂದು ಡಾ.ಮನಮೋಹನ್ ಸಿಂಗ್ ನುಡಿದರು.

ತಾವು ಹಣಕಾಸು ಸಚಿವರಾಗಿದ್ದಾಗ ಮತ್ತು ಪ್ರಧಾನಿಯಾಗಿದ್ದ ಅವಧಿಯಲ್ಲಿ ದೇಶದ ಆರ್ಥಿಕತೆ ಯಶಸ್ವಿಯಾಗಿತ್ತು ಎಂಬುದಾಗಿ ಸ್ಮರಿಸಿದ ಮನಮೋಹನ್ ಸಿಂಗ್, ಹಾಲಿ ಆರ್ಥಿಕ ಹಿಂಜರಿಕೆಗೆ ಮಾನವ ನಿರ್ಮಿತ ಬಿಕ್ಕಷ್ಟೇ ಕಾರಣ ಎಂದು ಹೇಳಿದರು.

ಹಾಲಿ ಪರಿಸ್ಥಿತಿಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ನಿರಾಕರಣೆ ಮಾಡುತ್ತಾ ಸರ್ಕಾರ ಕೂರುವಂತಿಲ್ಲ.   ಭಾರತದ ಆರ್ಥಿಕ ಹಿಂಜರಿಕೆ ಗಂಭೀರ ಸ್ವರೂಪದ್ದಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪ್ರಗತಿದರವು ಶೇಕಡಾ ೫ಕ್ಕೆ ಇಳಿದಿರುವುದು ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟದ ಕುಸಿತವಾಗಿದೆ. ನಾಮಮಾತ್ರದ ಒಟ್ಟು ಆಂತರಿಕ ಉತ್ಪಾದನೆಯು (ಜಿಡಿಪಿ) ಕೂಡಾ ೧೫ ವರ್ಷಗಳಲ್ಲೇ ಅತ್ಯಂತ ಕೆಳಕ್ಕೆ ಕುಸಿದಿದೆ. ಆರ್ಥಿಕತೆಯ ಹಲವಾರು ಪ್ರಮುಖ ರಂಗಗಳ ಮೇಲೆ ಇದರ ಪರಿಣಾಮವಾಗಿದೆ ಎಂದು ಮನಮೋಹನ್ ವಿವರಿಸಿದರು.

ಉತ್ಪಾದನೆ ಕುಸಿತದಿಂದ ಆಟೋಮೊಬೈಲ್ ರಂಗ ಸಂಕಷ್ಟದಲ್ಲಿದೆ. ೩.೫ ಲಕ್ಷಕ್ಕಿಂತಲೂ ಹೆಚ್ಚು ನೌಕರಿ ನಷ್ಟವಾಗಿದೆ. ಈ ನೋವು ಮಾನೆಸರ್, ಪಿಂಪ್ರಿ-ಚಿಂಚವಾಡ ಮತ್ತು ಚೆನ್ನೈಯಂತ ಆಟೋಮೊಬೈಲ್ ಕೇಂದ್ರಗಳಲ್ಲಿ ಎದ್ದು ಕಾಣುತ್ತಿದೆ. ಪೂರಕ ಕೈಗಾರಿಕೆಗಳೂ ಸಂಕಷ್ಟಕ್ಕೆ ಈಡಾಗಿವೆ. ಟ್ರಕ್ ಉತ್ಪಾದನಾ ರಂಗದ ಕುಸಿತ ಅತ್ಯಂತ ಚಿಂತೆ ಉಂಟುಮಾಡುವ ವಿಚಾರ. ಅಗತ್ಯ ವಸ್ತುಗಳ ಬೇಡಿಕೆ ಕುಸಿತಕ್ಕೆ ಇದು ಸ್ಪಷ್ಟವಾದ ಸೂಚನೆಯಾಗಿದೆ ಎಂದು ಮಾಜಿ ಪ್ರಧಾನಿ ನುಡಿದರು.

ರಿಯಲ್ ಎಸ್ಟೇಟ್ ರಂಗವು ಕಳೆದ ಕೆಲ ಸಮಯದಿಂದ ಕುಸಿದು ಬಿದ್ದಿದೆ. ಪರಿಣಾಮವಾಗಿ ಇಟ್ಟಿಗೆ, ಉಕ್ಕು, ಎಲೆಕ್ಟ್ರಿಕಲ್ಸ್ ನಂತಹ ಸಂಬಂಧಿತ ಉದ್ಯಮಗಳ ಮೇಲೆ ದುಷ್ಪರಿಣಾಮವಾಗಿದೆ. ಕಲ್ಲಿದ್ದಲು, ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ರಂಗಗಳು ಮಂದಗತಿಗೆ ಇಳಿದಿವೆ. ಬೆಳೆಗಳಿಗೆ ಸೂಕ್ತ ಬೆಲೆ ಲಭಿಸದ ಪರಿಣಾಮವಾಗಿ ಗ್ರಾಮೀಣ ಆರ್ಥಿಕತೆಗೆ ಗ್ರಹಣ ಬಡಿದಿದೆ. ೨೦೧೭-೧೮ರಲ್ಲಿನ ನಿರುದ್ಯೋಗ ೪೫ ವರ್ಷಗಳಲ್ಲೇ ಅತ್ಯಧಿಕವಾಗಿತ್ತು ಎಂದು ಸಿಂಗ್ ನುಡಿದರು.

ಗ್ರಾಹಕ ಬಳಕೆಯು ಆರ್ಥಿಕ ಪ್ರಗತಿಯ ವಿಶ್ವಾಸಾರ್ಹ ಯಂತ್ರವಾಗಿದ್ದು ಕಳೆದ ೧೮ ತಿಂಗಳಲ್ಲಿ ಕೆಳಮಟ್ಟಕ್ಕೆ ಇಳಿದಿದೆ. ಕೇವಲ ೫ ರೂಪಾಯಿ ಮೌಲ್ಯದ ಬಿಸ್ಕತ್ತಿನ ಮಾರಾಟದ ಕುಸಿತವು ಇಡೀ ಆರ್ಥಿಕತೆಯ ಕುಸಿತದ ಕಥೆಯನ್ನು ಹೇಳುತ್ತಿದೆ ಎಂದು ಸಿಂಗ್ ವಿವರಿಸಿದರು.

September 12, 2019 - Posted by | ಭಾರತ, ರಾಷ್ಟ್ರೀಯ, ಲೋಕಸಭೆ, ಸಂಸತ್ ಭವನ, Flash News, General Knowledge, India, News, Politics, Spardha | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ