SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಪಿಕ್ಚರ್ ಅಭೀ ಬಾಕಿ ಹೈ:  ಪ್ರಧಾನಿ ನರೇಂದ್ರ ಮೋದಿ !


12 Modi-in-ranchi100 ದಿನಗಳ ಕಾರ್ಯ ನಿರ್ವಹಣೆ ಟ್ರೇಲರ್ ಮಾತ್ರ…

ರಾಂಚಿ (ಜಾರ್ಖಂಡ್): ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ವಿರುದ್ಧ 2019 ಸೆಪ್ಟೆಂಬರ್ 12ರ ಗುರುವಾರ ಇಲ್ಲಿ ಪರೋಕ್ಷ ಆಕ್ರಮಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರವು ಭ್ರಷ್ಟರನ್ನುಜೈಲಿಗೆ ಅಟ್ಟುವುದಾಗಿ ಪ್ರತಿಜ್ಞೆ ಮಾಡಿದೆ, ಕೆಲವರು ಈಗಾಗಲೇ ಸೆರೆಮನೆಗೆ ಹೋಗಿದ್ದಾರೆ. ಆದರೆ ಪೂರ್ತಿ ಚಿತ್ರ ಇನ್ನೂ ಬರಲು ಬಾಕಿ ಇದೆ. ಈಗಿನದ್ದು ತಮ್ಮ ಸರ್ಕಾರದಿಂದ ೧೦೦ ದಿನಗಳ ಕಾರ್ಯ ನಿರ್ವಹಣೆಯ ಟ್ರೇಲರ್ ಮಾತ್ರ ಎಂದು ಗುಡುಗಿದರು.

‘ನಮ್ಮ ಹೋರಾಟ ಭ್ರಷ್ಟಾಚಾರ ಮತ್ತು ಅಂತಹ ಚಟುವಟಿಕೆಗಳಲ್ಲಿ ಶಾಮೀಲಾಗಿರುವವರ ವಿರುದ್ಧ. ೧೦೦ ದಿನಗಳಲ್ಲಿ ನಾವು ಅಂತಹ ವ್ಯಕ್ತಿಗಳ ವಿರುದ್ಧ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಅವರಲ್ಲಿ ಕೆಲವರನ್ನು ಜೈಲಿಗೆ ಕಳುಹಿಸಲಾಗಿದೆ’ ಎಂದು ಪ್ರಧಾನಿ ಮೋದಿ ಜಾರ್ಖಂಡ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು. ಭ್ರಷ್ಟಾಚಾರವನ್ನು ಪೂರ್ತಿಯಾಗಿ ಕೊನೆಗೊಳಿಸುವುದರತ್ತ ತಮ್ಮ ಸರ್ಕಾರ ಗಮನ ಹರಿಸಿದೆ ಎಂದು ಅವರು ನುಡಿದರು.

ಜಾರ್ಖಂಡ್ ವಿಧಾನಸಭೆಗೆ ಕೆಲ ತಿಂಗಳುಗಳಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಹಲವಾರು ಕಾರ್‍ಯಕ್ರಮಗಳಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.

‘ಹಿಂದೆ ಕೆಲವರು ತಾವು ಕಾನೂನು ಮತ್ತು ನ್ಯಾಯಾಲಯಗಳಿಗೆ ಅತೀತರು ಎಂಬುದಾಗಿ ಭಾವಿಸಿದ್ದರು. ಆದರೆ ನಮ್ಮ ಸರ್ಕಾರವು ಭ್ರಷ್ಟಾಚಾರಕ್ಕೆ ಕೊನೆ ಹಾಡಲು ನಿರ್ಧರಿಸಿದೆ. ಹೀಗಾಗಿ ಕಾನೂನು, ನ್ಯಾಯಾಲಯಗಳಿಗೆ ಅತೀತರು ತಾವು ಎಂಬುದಾಗಿ ಭಾವಿಸಿದ್ದವರು ಈಗ ಜಾಮೀನಿಗಾಗಿ ನ್ಯಾಯಾಲಯಗಳಿಗೆ ಅಂಡಲೆಯುತ್ತಿದ್ದಾರೆ’ ಎಂದು ಮೋದಿ ಹೇಳಿದರು.

‘ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ಕಾರ್ಯಾಚರಣೆ ಆರಂಭವಾಗಿದೆ. ಸಾರ್ವಜನಿಕರನ್ನು ಲೂಟಿ ಮಾಡಲು ಯತ್ನಿಸುವವರಿಗೆ ಸೂಕ್ತ ಜಾಗವನ್ನು ತೋರಿಸಲಾಗುವುದು’ ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ೨೧ರಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ನವದೆಹಲಿಯ ಅವರ ನಿವಾಸದಲ್ಲಿ ಬಂಧಿಸಿತ್ತು. ೨೦೦೭ರಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಿದೇಶೀ ಹೂಡಿಕೆಗೆ ಸರ್ಕಾರ ಅನುಮತಿ ನೀಡಿದ ಸಂಬಂಧವಾಗಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದು. ಆಗ ಚಿದಂಬರಂ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು.

ಕೇಂದ್ರೀಯ ತನಿಖಾ ದಳವು ತನಿಖೆ ನಡೆಸುತ್ತಿರುವ ಐಎನ್‌ಎಕ್ಸ್  ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ವಾರ ಚಿದಂಬರಂ ಅವರನ್ನು ೧೪ ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ತಿಹಾರ್ ಸೆರೆಮನೆಗೆ ಕಳುಹಿಸಲಾಗಿತ್ತು. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ತಮ್ಮ ಮೇಲಿನ ಎಲ್ಲ ಆಪಾದನೆಗಗಳನ್ನೂ ಬಲವಾಗಿ ಅಲ್ಲಗಳೆದು, ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್‌ಡಿಎ) ’ರಾಜಕೀಯ ಸೇಡಿನ’ ದುರುದ್ದೇಶಪೂರಿತ ಕ್ರಮ ಇದು ಎಂದು ಆಪಾದಿಸಿದ್ದರು.

ಮೋದಿ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಎರಡನೇ ಅವಧಿಗೆ ಪುನರಾಯ್ಕೆಯಾಗಿ ಅಧಿಕಾರಕ್ಕೆ ಮರಳಿದ ಬಳಿಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಭ್ರಷ್ಟಚಾರ ನಿಗ್ರಹ ಹಾಗು ಹಣ ವರ್ಗಾವಣೆ ವಿರೋಧಿ ಪ್ರಕರಣಗಳನ್ನು ಆಧರಿಸಿ ಹಲವಾರು ಉನ್ನತ ರಾಜಕೀಯ ನಾಯಕರ ವಿರುದ್ಧ ದಾಳಿಗಳನ್ನು ನಡೆಸಿತ್ತು.

ನೈಜ ವಿಷಯಗಳಿಂದ ಜನರ ಗಮನವನ್ನು ಬೇರಡೆಗೆ ಸೆಳೆಯುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ತಮ್ಮ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿದ್ದವು.

ಇದಕ್ಕೆ ಪ್ರತಿಯಾಗಿ  ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ಚಿದಂಬರಂ ಅವರನ್ನು ರಕ್ಷಿಸುತ್ತಿರುವುದಕ್ಕಾಗಿ ಟೀಕಿಸಿತು.

ಕಾನೂನು ಜಾರಿ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ ಮತ್ತು ನ್ಯಾಯಾಲಯಗಳು ಅವುಗಳ ಕೆಲಸ ಮಾಡುತ್ತಿವೆ. ಆದರೆ, ಕಾಂಗ್ರೆಸ್ ನಾಯಕತ್ವವು  ಭ್ರಷ್ಟಾಚಾರವನ್ನು ಕ್ರಾಂತಿಯನ್ನಾಗಿ ಮಾಡಲು ಯತ್ನಿಸುತ್ತಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದರು.

ಪುನರಾಯ್ಕೆಯಾದ ತಮ್ಮ ಸರ್ಕಾರವು ಸಂಸತ್ತಿನ ಚೊಚ್ಚಲ ಅಧಿವೇಶನದಲ್ಲಿಯೇ ತ್ರಿವಳಿ ತಲಾಖ್ ಮಸೂದೆಗೆ ಒಪ್ಪಿಗೆ ಪಡೆದುಕೊಂಡದ್ದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮುಸ್ಲಿಮ್ ಮಹಿಳೆಯರ ಘನತೆ ರಕ್ಷಿಸುವ ವಚನಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶದ ಅಭಿವೃದ್ಧಿ ಗುರಿಯನ್ನು ಇಟ್ಟುಕೊಂಡು ಎರಡು ನೂತನ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿದೆ. ಈ ಪ್ರದೇಶಗಳ ಅಭಿವೃದ್ಧಿಯ ಕಾರ್‍ಯವನ್ನು ಎನ್‌ಡಿಎ ೨ ಸರ್ಕಾರವು ತನ್ನ ಕಾರ್ಯ ಆರಂಭಿಸಿದ ಮೊದಲ ೧೦೦ ದಿನಗಳಲ್ಲಿಯೇ ಆರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಜಾರ್ಖಂಡ್‌ನಲ್ಲಿ ಹಿಂದೆ ಪಾರದರ್ಶಕ ಆಡಳಿತ ಇರಲಿಲ್ಲ. ಆಗ ಹಲವಾರು ಹಗರಣಗಳನ್ನು ರಾಜ್ಯ ಕಂಡಿತು, ಆದರೆ ಮುಖ್ಯಮಂತ್ರಿ ರಘುಬರ ದಾಸ್ ಅವರು ಕಳೆದ ಐದು ವರ್ಷಗಳಲ್ಲಿ ಆಡಳಿತದಲಿ ಪಾರದರ್ಶಕತೆ ತರಲು ಯತ್ನಿಸಿದ್ದಾರೆ ಎಂದು ಮೋದಿ ನುಡಿದರು.

ಸರ್ಕಾರವು ಆರಂಭಿಸಿದ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ದೇಶಾದ್ಯಂತ ಕಳೆದ ಒಂದು ವರ್ಷದ ಅವಧಿಯಲ್ಲಿ  ೪೪ ಲಕ್ಷ ಮಂದಿ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯ ಅಡಿಯಲ್ಲಿ ಸವಲತ್ತುಗಳನ್ನು ಪಡೆದಿದ್ದಾರೆ ಎಂದು ಹೇಳಿದರು. ವಿಶ್ವದಲ್ಲೇ ದೊಡ್ಡ ಆರೋಗ್ಯ ವಿಮಾ ಯೋಜನೆ ಎಂಬುದಾಗಿ ಖ್ಯಾತಿ ಪಡೆದಿರುವ ಆಯುಷ್ಮಾನ್ ಭಾರತ ಯೋಜನೆಗೆ ಕಳೆದ ವರ್ಷ ಪ್ರಧಾನಿಯವರು  ಜಾರ್ಖಂಡಿನಲ್ಲಿ  ಚಾಲನೆ ನೀಡಿದ್ದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೨ ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಎರಡು ಕೋಟಿ ಮೀರಿದ ಮನೆಗಳು ದೇಶದಲ್ಲಿ ನಿರ್ಮಾಣಗೊಳ್ಳುತ್ತಿವೆ. ೧೦ ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ಉಜ್ವಲ ಯೋಜನಾ ಅಡಿಯಲ್ಲಿ ೮ ಕೊಟಿ ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಮೋದಿ ಹೇಳಿದರು.

ಬಾಂಗ್ಲಾದೇಶ, ನೇಪಾಳ ಮತ್ತು ಈಶಾನ್ಯ ಪ್ರದೇಶಗಳನ್ನು ಸಂಪರ್ಕಿಸಲಿರುವ ಸಾಹಿಬ್‌ಗಂಜ್‌ನ ಬಹುಮಾದರಿ ಟರ್ಮಿನಲ್ ಜಾರ್ಖಂಡ್‌ಗೆ ಹೊಸ ಅಸ್ಮಿತೆಯನ್ನು ನೀಡಲಿದೆ ಎಂದು, ಹಲವಾರು ಯೋಜನೆಗಳನ್ನು ಉದ್ಘಾಟಿಸುತ್ತಾ ಪ್ರಧಾನಿ ವಿವರಿಸಿದರು.

ವ್ಯವಸಾಯ, ಸಣ್ಣ ವ್ಯಾಪಾರಿ ಘಟಕದಂತಹ ಅಸಂಘಟಿತ ರಂಗದಲ್ಲಿ ಕೆಲಸ ಮಾಡುತ್ತಿರುವ ಜನರಿಗಾಗಿ ಪಿಂಚಣಿ ಯೋಜನೆಗಳನ್ನು ಆರಂಭಿಸಲಾಗಿದೆ. ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ಕಾರವು ಪ್ರತಿವರ್ಷ ಒಂದು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು.

ವಿಧಾನಸಭೆಯ ನೂತನ ಕಟ್ಟಡ, ಬಹುಮಾದರಿ ಕಾರ್ಗೋ ಟರ್ಮಿನಲ್‌ಗಳನ್ನೂ ಅವರು ಉದ್ಘಾಟಿಸಿದರು.

September 12, 2019 - Posted by | ಪ್ರಧಾನಿ, ಭಾರತ, ರಾಷ್ಟ್ರೀಯ, ಲೋಕಸಭೆ, ಸಂಸತ್ ಭವನ, Flash News, General Knowledge, India, Nation, News, Politics, Prime Minister, Spardha | , , , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ