SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

 ಯುದ್ಧೋನ್ಮಾದ ಬಿಡದಿದ್ದರೆ ಪಾಕಿಸ್ತಾನ ಛಿದ್ರ ಛಿದ್ರ: ರಾಜನಾಥ್ ಸಿಂಗ್ ಎಚ್ಚರಿಕೆ


15 imran-rajnathಮತ್ತೆ ಅಣ್ವಸ್ತ್ರ ಸಮರದ ಕ್ಯಾತೆ ತೆಗೆದ ಇಮ್ರಾನ್ ಖಾನ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಯ ವಿಷಯನ್ನಾಗಿಸುವ ತಮ್ಮ ಮುಂದುವರೆದ ಯತ್ನವಾಗಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಮತ್ತೆ ಅಣ್ವಸ್ತ್ರ ಸಮರದ ಕ್ಯಾತೆ ತೆಗೆದರು. ಪಾಕ್ ಪ್ರಧಾನಿಯ ಮಾತಿಗೆ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಖಡಕ್ ಎದಿರೇಟು ನೀಡಿ ಭಯೋತ್ಪಾದನೆ ನೀತಿ, ಯುದ್ಧೋನ್ಮಾದ ಬಿಡದಿದ್ದರೆ ಪಾಕಿಸ್ತಾನ ಛಿದ್ರ ಛಿದ್ರವಾದೀತು ಎಂದು 2019 ಸೆಪ್ಟೆಂಬರ 15ರ ಭಾನುವಾರ ಎಚ್ಚರಿಕೆ ನೀಡಿದರು.

ದೋಹಾ ಮೂಲದ ಅಲ್ ಜಜೀರಾ ಸುದ್ದಿವಾಹಿನಿಗೆ  ನೀಡಿದ ಸಂದರ್ಶನದಲ್ಲಿ ಇಮ್ರಾನ್ ಖಾನ್ ಅವರು ತಮ್ಮ ಯುದ್ಧೋನ್ಮಾದವನ್ನು ಮುಂದುವರೆಸಿ, ಉಭಯ ರಾಷ್ಟ್ರಗಳ ನಡುವಣ ಸಾಂಪ್ರದಾಯಿಕ ಸಮರದಲ್ಲಿ ಪಾಕಿಸ್ತಾನವು ಜಯಗಳಿಸಲು ಸಾಧ್ಯವಿಲ್ಲ, ಆದ್ದರಿಂದ ಅತ್ಯಂತ ಸುಲಭವಾಗಿ ಅದು  ಅಣ್ವಸ್ತ್ರ ಸಮರವಾಗಿ ಪರಿವರ್ತನೆಗೊಂಡೀತು ಎಂದು ಹೇಳಿದ್ದರು.

’ಅಣ್ವಸ್ತ್ರಗಳನ್ನು ಹೊಂದಿದ ಎರಡು ರಾಷ್ಟ್ರಗಳು ಯುದ್ಧಕ್ಕೆ ಇಳಿದಾಗ, ಅವರು ಪರಂಪರಾಗತ ಸಮರ ಆರಂಭಿಸಿದರೂ ಅದು ಅಣ್ವಸ್ತ್ರ ಸಮರವಾಗಿ ಪರ್‍ಯವಸಾನಗೊಳ್ಳುವ ಎಲ್ಲ ಸಾಧ್ಯತೆಗಳೂ ಇವೆ. ಇದನ್ನೂ ಯೋಚಿಸಲೂ ಸಾಧ್ಯವಿಲ್ಲ’ ಎಂದು ಇಮ್ರಾನ್ ಖಾನ್ ಸಂದರ್ಶನದಲ್ಲಿ ಹೇಳಿದ್ದರು.

’ಪಾಕಿಸ್ತಾನವು ಸಾಂಪ್ರದಾಯಿಕ ಸಮರದಲ್ಲಿ ಇಳಿದರೆ ಸೋಲುವುದು ಖಂಡಿತ. ಶರಣಾಗತಿ ಮತ್ತು ಸ್ವಾತಂತ್ರ್ಯಕ್ಕಾಗಿ ಸಾವಿನವರೆಗೂ ಹೋರಾಡುವ ಆಯ್ಕೆ ಎದುರಾದರೆ ಪಾಕಿಸ್ತಾನಿಗಳು ಸ್ವಾತಂತ್ರ್ಯಕ್ಕಾಗಿ ಸಾಯುವವರೆಗೂ ಹೋರಾಟಕ್ಕೆ ಸಿದ್ಧರಾಗುತ್ತಾರೆ ಎಂಬುದು ನನಗೆ ಗೊತ್ತಿದೆ’ ಎಂದ ಇಮ್ರಾನ್ ಖಾನ್ ಹೇಳಿದ್ದರು.

’ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ೩೭೦ನೇ ವಿಧಿ ರದ್ದು ಪಡಿಸುವ ಮೂಲಕ ಹಿಂತೆಗೆದುಕೊಂಡ ಭಾರತದ ಆಂತರಿಕ ವಿಷಯವನ್ನು ಕೈಗೆತ್ತಿಕೊಂಡು ಪ್ರದೇಶದಲ್ಲಿ ಪ್ರಕ್ಷುಬ್ಧತೆ ಹೆಚ್ಚಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತಿದೆ ಎಂದು ಆಪಾದಿಸಿದ ಭಾರತ ಸರ್ಕಾರವು, ಗಡಿಯಾಚೆಯಿಂದ ನುಸುಳುವಿಕೆಗೆ ಪ್ರಚೋದಿಸುವ ಮೂಲಕ ಜಮ್ಮು -ಕಾಶ್ಮೀರವನ್ನು ಅಸ್ಥಿರಗೊಳಿಸುವ ಯತ್ನಗಳನ್ನು  ತತ್ ಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿತು.

ಗಡಿನಿಯಂತ್ರಣ ರೇಖೆಯಲ್ಲಿ ಪ್ರಸ್ತುತ ವರ್ಷ ಪಾಕಿಸ್ತಾನವು ನಡೆಸಿದ ೨೦೧೫ಕ್ಕೂ ಹೆಚ್ಚಿನ ಅಪ್ರಚೋದಿತ ಕದನವಿರಾಮ ಉಲ್ಲಂಘನೆಗಳಲ್ಲಿ ೨೧ ಭಾರತೀಯರು ಸಾವನ್ನಪ್ಪಿದ್ದು ಭಾರತೀಯ ಪಡೆಗಳು ಗರಿಷ್ಠ ಸಂಯಮ ಮೆರೆದಿವೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ್ ಹೇಳಿದರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ’ಪಾಕಿಸ್ತಾನವು ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ನಿಲ್ಲಿಸದೇ ಇದ್ದಲ್ಲಿ, ಅದು ಛಿದ್ರ ಛದ್ರವಾಗುವುದರಿಂದ ಜಗತ್ತಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ಇಮ್ರಾನ್ ಖಾನ್ ಅವರಿಗೆ ಎದಿರೇಟು ನೀಡಿದರು.

ಸೂರತ್‌ನಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಹುತಾತ್ಮರಾದ ೧೨೨ ಯೋಧರ ಕುಟುಂಬಗಳ ಸನ್ಮಾನ ಕಾರ್‍ಯಕ್ರಮದಲ್ಲಿ ಶನಿವಾರ ಮೊದಲು ವಿಷಯ ಪ್ರಸ್ತಾಪಿಸಿದ್ದ ರಾಜನಾಥ್ ಸಿಂಗ್ ಅವರು ’ಧರ್ಮ ರಾಜಕಾರಣ ಮಾಡುವ ಮೂಲಕ ಅವರು (ಬ್ರಿಟಿಷ್ ಆಡಳಿತಗಾರರು) ಭಾರತವನ್ನು ಎರಡು ತುಂಡುಗಳಾಗಿ ಒಡೆದರು. ಪಾಕಿಸ್ತಾನವು ೧೯೭೧ರಲ್ಲಿ ಧರ್ಮದ ಆಧಾರದಲ್ಲೇ ಎರಡು ಹೋಳಾದುದನ್ನು ನೀವು ಕಂಡಿದ್ದೀರಿ.  ಇಂತಹುದೇ ರಾಜಕೀಯ ಮುಂದುವರೆದರೆ, ಜಗತ್ತಿನ ಯಾರು ಕೂಡಾ ಪಾಕಿಸ್ತಾನವು ಹೋಳುಗಳಾಗಿ ಒಡೆಯುವುದನ್ನು ತಡೆಯಲು ಸಾಧ್ಯವಿಲ್ಲ’ ಎಂದು ಹೇಳಿದರು.

’ಪಾಕಿಸ್ತಾನದಿಂದ ಯಾರಾದರೂ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಬಂದರೆ ಭಾರತೀಯ ಸೇನೆಯು ಅವರಿಗೆ ವಾಪಸ್ ಹೋಗಲು ಅವಕಾಶ ನೀಡುವುದಿಲ್ಲ’ ಎಂದು ರಾಜನಾಥ್ ಸಿಂಗ್ ಹೇಳಿದರು.

ಗಡಿ ನಿಯಂತ್ರಣ ರೇಖೆ ದಾಟಿ ಭಾರತದತ್ತ ಹೋಗದಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಜನರಿಗೆ ಒಳ್ಳೆಯ ಸಲಹೆ ಮಾಡಿದ್ದಾರೆ ಎಂದು ರಾಜನಾಥ್ ಸಿಂಗ್ ಹೇಳಿದರು.

ಮುಜಾಫ್ಫರಾಬಾದಿನಲ್ಲಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದ ಖಾನ್, ಗಡಿಯಾಚೆಗೆ ಹೋಗುವ ಪ್ರಯತ್ನಮಾಡಬೇಡಿ. ಹೋದರೆ ಭಾರತದ ಸೇನೆ ವಾಪಸಾಗಲು ಬಿಡುವುದಿಲ್ಲ ಎಂದು ತಮ್ಮ ದೇಶದ ಪ್ರಜೆಗಳಿಗೆ ಖಾನ್ ಹೇಳಿದ್ದರು.

ಭಾರತವು ಅಂತಾರಾಷ್ಟ್ರೀಯ ಸಮುದಾಯದ ವಿಶ್ವಾಸವನ್ನು ಗಳಿಸಿದೆ, ಹೀಗಾಗಿ ವಿಶ್ವಸಂಸ್ಥೆಯನ್ನು ದಾರಿತಪ್ಪಿಸುವ ಯತ್ನದಲ್ಲಿ ಪಾಕಿಸ್ತಾನಕ್ಕೆ ದಯನೀಯ  ಸೋಲಾಯಿತು ಎಂದು ಸಿಂಗ್ ನುಡಿದರು.

ಭಾನುವಾರ ಸರಣಿ ಟ್ವೀಟ್‌ಗಳನ್ನು ಮಾಡಿದ ಗೃಹ ಸಚಿವರು ಇದೇ ವಿಷಯವನ್ನು ಪುನಃ ಪ್ರಸ್ತಾಪಿಸಿ ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ಬಿಟ್ಟು ಬಿಡುವಂತೆಯೂ, ಇಲ್ಲದೇ ಇದ್ದಲ್ಲಿ ಅದು ಪಾಕಿಸ್ತಾನದ ಹಿತಾಸಕ್ತಿಗೆ ಪ್ರತಿಕೂಲವಾದೀತು ಎಂದೂ ಎಚ್ಚರಿಕೆ ನೀಡಿದರು.

’ನಮ್ಮ ನೆರೆರಾಷ್ಟ್ರವು ತನ್ನ ಭಯೋತ್ಪಾದನೆಯ ನೀತಿಯನ್ನು ಬಿಟ್ಟು ಬಿಡಬೇಕು. ಇಲ್ಲದೇ ಇದ್ದಲ್ಲಿ ಅದು ಹಲವಾರು ಹೋಳುಗಳಾಗಿ ಒಡೆಯುವುದರಿಂದ ತಡೆಯಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಾಗದೇ ಹೋಗಬಹುದಾದ ಪರಿಸ್ಥಿತಿ ಬರುತ್ತದೆ’ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದರು.

ಅಲ್ಪಸಂಖ್ಯಾತರು ಸುರಕ್ಷಿತ ಭಾವನೆ ಹೊಂದಿರುವ ಭಾರತದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬುದಾಗಿ ಹುಯಿಲೆಬ್ಬಿಸುವ ಹಕ್ಕು ಪಾಕಿಸ್ತಾನಕ್ಕೆ ಇಲ್ಲ. ವಿಭಜನೆಯ ಬಳಿಕ ಪಾಕಿಸ್ತಾನದತ್ತ ಹೋದ ಮುಸ್ಲಿಮರೂ ಸೇರಿದಂತೆ ಸಿಕ್ಖರು, ಬೌದ್ಧರು ಮತ್ತಿತರ ಅಲ್ಪಸಂಖ್ಯಾತರಿಗೆ ಚಿತ್ರ ಹಿಂಸೆ ನೀಡಲಾಗುತ್ತಿರುವ ಆರೋಪ ಆ ದೇಶದ ಮೇಲಿದೆ ಎಂದೂ ರಾಜನಾಥ್ ಸಿಂಗ್ ತಮ್ಮ ಟ್ವೀಟಿನಲ್ಲಿ ಬರೆದರು.

’ಪಾಕಿಸ್ತಾನದಲ್ಲಿ ದೀರ್ಘ ಕಾಲದಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ಹೋದವರನ್ನು ಅಲ್ಲಿ ಈಗಲೂ ’ಮುಹಜೀರ್’ ಎಂಬುದಾಗಿ ಕರೆದು ಅವಮಾನಿಸಲಾಗುತ್ತಿದೆ.  ಇದೇ ವೇಳೆಗೆ ಭಾರತದಲ್ಲಿ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರೂ ಸುರಕ್ಷಿತ ಭಾವನೆಯನ್ನು ಮತ್ತು ಗೌರವವನ್ನೂ ಪಡೆದಿದ್ದಾರೆ’ ಎಂದು ಸಿಂಗ್ ಹೇಳಿದರು.

’ಸಿಂಧಿ ಸಮುದಾಯ, ಸಿಖ್ ಸಮುದಾಯ, ಬಲೂಚ್ ಮತ್ತು ಇತರ ಸಮುದಾಯದವರಿಗೆ ಪಾಕಿಸ್ತಾನದಲ್ಲಿ ಏನಾಗುತ್ತಿದೆ ಎಂಬುದು ಜಗಜ್ಜಾಹೀರಾಗಿದೆ. ವಿಶ್ವಸಂಸ್ಥೆ ಸಮ್ಮೇಳನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಎತ್ತುತ್ತಿರುವ ಪಾಕಿಸ್ತಾನ ಮೊದಲು ತನ್ನ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕು’ ಎಂದು ಸಿಂಗ್ ಅವರು ಇನ್ನೊಂದು ಟ್ವೀಟಿನಲ್ಲಿ ತಿಳಿಸಿದರು.

೩೭೦ನೇ ವಿಧಿ ರದ್ದು ಮತ್ತು ಅಲ್ಲಿನ ವಿವಿಧ ಸಮುದಾಯಗಳು ಶಾಂತಿಯುತವಾಗಿ ಒಟ್ಟಾಗಿ ಬದುಕುತ್ತಿರುವ ವಿದ್ಯಮಾನವನ್ನು ಅರಗಿಸಿಕೊಳ್ಳಲು  ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ ಎಂದೂ ರಾಜನಾಥ್ ಸಿಂಗ್ ಅವರು ಪಾಕಿಸ್ತಾನವನ್ನು ಜರೆದರು.

ಭಾರತದಲ್ಲಿ ಎಲ್ಲ ಸಮುದಾಯದವರು ಒಟ್ಟಿಗೆ ಶಾಂತಿ ಸೌಹಾರ್ದದೊಂದಿಗೆ ಹೇಗೆ ಬದುಕುತ್ತಿದ್ದಾರೆ ಎಂಬುದು ಪಾಕಿಸ್ತಾನಕ್ಕೆ ಕಾಣುತ್ತಿಲ್ಲ. ಭಾರತದಲ್ಲಿ ಅಲ್ಪಸಂಖ್ಯಾತರು ಸುರಕ್ಷಿತ ಭಾವವನ್ನು ಹೊಂದಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಭಾರತದಲ್ಲಿ ಯಾವಾಗಲೂ ಸುರಕ್ಷಿತವಾಗಿತ್ತು, ಮುಂದಕ್ಕೂ ಇಲ್ಲಿ ಸುರಕ್ಷಿತರಾಗಿಯೇ ಇರುತ್ತಾರೆ ಎಂದು ಅವರು ನುಡಿದರು.

ಆಗಸ್ಟ್ ೬ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿನ ಬಳಿಕ ನೇರ ಹಾಗೂ ಪರೋಕ್ಷ ದಾಳಿಯ ಸಂಜ್ಞೆಗಳನ್ನು ಪಾಕಿಸ್ತಾನವು ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತವು ಗಡಿ ನಿಯಂತ್ರಣ ರೇಖೆಯಲ್ಲಿ ಸೇನಾ ಬಲವನ್ನು ಹೆಚ್ಚಿಸಿದೆ.

ಪಾಕಿಸ್ತಾನದಿಂದ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಭದ್ರತಾ ಸಿದ್ಧತೆಯನ್ನು ಸೇನೆಯ ಉತ್ತರ ಕಮಾಂಡ್ ಮುಖ್ಯಸ್ಥ ಲೆಫ್ಟೆನೆಂಟ್ ಜನರಲ್ ರಣಬೀರ್ ಸಿಂಗ್ ಅವರು ಪರಿಶೀಲಿಸಿದ್ದರು. ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಆವ್ ಅವರೂ ಕಣಿವೆಗೆ ಭೇಟಿ ನೀಡಿ ಭಾರತದ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಿದ್ದಾರೆ.

ಸೆಪ್ಟೆಂಬರ್ ಮೊದಲ ವಾರ ಪಾಕಿಸ್ತಾನವು ಬ್ರಿಗೇಡ್ ಗಾತ್ರದ ಸೇನಾ ತುಕಡಿಯನ್ನು ಗಡಿ ನಿಯಂತ್ರಣ ರೇಖೆಗೆ ೩೦ ಕಿಮೀ ಸಮೀಪಕ್ಕೆ  ಕಳುಹಿಸಿತ್ತು ಎಂದು ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಸೇನೆ ವರದಿ ಮಾಡಿತ್ತು.

September 15, 2019 - Posted by | ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Prime Minister, Spardha, Terror, World | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ