SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಯೋಧ್ಯೆ ವಿವಾದ: ತ್ವರಿತ ಇತ್ಯರ್ಥ ಸಾಧ್ಯತೆ ಉಜ್ವಲ, ಸುಪ್ರೀನಿಂದ ಅ. ೧೮ರ ಗಡುವು


18 ayodhya sc spardha web
ನವದೆಹಲಿ:  ಅಕ್ಟೋಬರ್ ೧೮ರ ಒಳಗಾಗಿ ಎಲ್ಲ ವಿಚಾರಣೆಗಳನ್ನೂ ಮುಕ್ತಾಯಗೊಳಿಸಲು ಗಡುವು ನಿಗದಿ ಪಡಿಸುವುದರ  ಜೊತೆಗೆ ಸಂಧಾನ ಪ್ರಕ್ರಿಯೆಗೂ ಸುಪ್ರೀಂಕೋರ್ಟ್  2019 ಸೆಪ್ಟೆಂಬರ್ 18ರ ಬುಧವಾರ ಅನುಮತಿ ನೀಡುವುದರೊಂದಿಗೆದ ದಶಕಗಳಷ್ಟು ಹಳೆಯದಾದ ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣ ತ್ವರಿತವಾಗಿ ಬಗೆಹರಿಯುವ ಸಾಧ್ಯತೆ ಉಜ್ಜಲಗೊಂಡಿತು.

ಅಕ್ಟೋಬರ್ ೧೮ರೊಳಗೆ ಎಲ್ಲಾ ವಿಚಾರಣೆಗಳನ್ನು ಮುಕ್ತಾಯಗೊಳಿಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ಈದಿನ ಗಡುವು ನಿಗದಿ ಪಡಿಸಿ, ಎಲ್ಲರೂ ಸಹರಿಸುವಂತೆ ಕೋರಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿದ್ದು, ಅವರ ಅಧಿಕಾರಾವಧಿ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. ಅಷ್ಟರೊಳಗೆ ಅವರು ಈ ಪ್ರಕರಣವನ್ನು ಇತ್ಯರ್ಥಪಡಿಸಲು ಬಯಸಿದಂತಿದೆ. ಅದಕ್ಕಾಗಿ ನ್ಯಾಯಪೀಠವು ನಿಗದಿಗಿಂತ ಹೆಚ್ಚು ಸಮಯ ಹಾಗೂ ರಜೆಯ ದಿನಗಳಲ್ಲೂ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು. ಅಗತ್ಯ ಬಿದ್ದಲ್ಲಿ ಪ್ರತಿದಿನ ಒಂದು ಗಂಟೆ ಹೆಚ್ಚು ಅಥವಾ ಶನಿವಾರ ಹೆಚ್ಚುವರಿ ಅವಧಿಯ ವಿಚಾರಣೆಗೆ ಪೀಠ ಸಿದ್ಧ ಎಂದು ಅವರು ಹೇಳಿದರು.

ಮುಸ್ಲಿಮ್ ಕಕ್ಷಿದಾರರು ಸೆಪ್ಟೆಂಬರ್ ೨೮ರೊಳಗೆ ತಮ್ಮ ವಾದ ಮಂಡನೆ ಮುಗಿಸುವುದಾಗಿ ತಿಳಿಸಿದ್ದಾರೆ. ಶ್ರೀರಾಮ ಲಲ್ಲಾ ಪರ ವಕೀಲರು ಎರಡು ದಿನದಲ್ಲಿ ಉತ್ತರರೂಪದಲ್ಲಿ ಪ್ರತಿವಾದ ಮಂಡನೆ ಮುಗಿಸಲು ಒಪ್ಪಿಕೊಂಡಿದ್ದಾರೆ. ಆ ಬಳಿಕ ಇನ್ನೂ ಮೂರು ದಿನಗಳ ಕಾಲ ಉಳಿದೆಲ್ಲಾ ವಾದ ಪ್ರತಿವಾದಗಳನ್ನು ನಡೆಸಲು ಯೋಜಿಸಲಾಗಿದೆ.

ಇದೇ ವೇಳೆಗೆ, ಪರ್‍ಯಾಯವಾಗಿ ಸಂಧಾನ ಮಾತುಕತೆ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ಸಂಧಾನ ಸಮಿತಿ ಮಾಡಿಕೊಂಡ ಮನವಿಗೂ ಸುಪ್ರೀಂಕೋರ್ಟ್ ಪೂರಕವಾಗಿ ಸ್ಪಂದಿಸಿದೆ. “ಈ ವ್ಯಾಜ್ಯವನ್ನು ನಿಮ್ಮಲ್ಲೇ ಪರಿಹರಿಸಿಕೊಳ್ಳಲು ಇಚ್ಛಿಸಿದರೆ ಹಾಗೇ ಮಾಡಿ. ನಿಮ್ಮ ಪರಿಹಾರವನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ” ಎಂದು ಸುಪ್ರೀಂ ನ್ಯಾಯಪೀಠ ಸೂಚಿಸಿತು.

ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಫ್. ಎಂ. ಇಬ್ರಾಹಿಂ ಕಲೀಫುಲ್ಲಾ ನೇತೃತ್ವದ ಸಂಧಾನ ಸಮಿತಿಯಲ್ಲಿ ಶ್ರೀ ರವಿಶಂಕರ ಗುರೂಜಿ ಮತ್ತು  ಖ್ಯಾತ ಸಂಧಾನಕಾರ ಶ್ರೀರಾಮ್ ಪಂಚು ಸದಸ್ಯರಾಗಿದ್ದು ಸಮಿತಿಯು ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಮಾರ್ಚ್ ತಿಂಗಳಲ್ಲೇ ಮಾತುಕತೆಯ ಪ್ರಯತ್ನಗಳನ್ನ ನಡೆಸಿತ್ತು. ಆದರೆ, ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿರಲಿಲ್ಲ. ಯಾವ ಕಡೆಯವರೂ ಕೂಡ ಒಮ್ಮತಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಪ್ರಕರಣವನ್ನು ಪುನಃ ಕೈಗೆತ್ತಿಕೊಂಡು ಪ್ರತೀ ದಿನ ವಿಚಾರಣೆ ನಡೆಸಿ ಆದಷ್ಟೂ ಬೇಗ ಮುಗಿಸಲು ನಿರ್ಧರಿಸಿತ್ತು.  ಅದರಂತೆ ಆ. ೬ರಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈಗ ಈ ವಿಚಾರಣೆಗೆ ಇನ್ನಷ್ಟು ವೇಗ ತುಂಬಲು ನಿರ್ಧರಿಸಿರುವ ಸಿಜೆಐ ರಂಜನ್ ಗೊಗೋಯಿ ಅವರು ಅಕ್ಟೋಬರ್ ೧೮ಕ್ಕೆ ಗಡುವು  ನಿಗದಿ ಪಡಿಸಿದ್ದಾರೆ.

ಈ ಮಧ್ಯೆ ಉಭಯ ಕಡೆಗಳ ಕಕ್ಷಿದಾರರ ಮನವಿ ಮೇರೆಗೆ ಸಮಿತಿ ಇತ್ತೀಚೆಗೆ ಮನವಿ ಸಲ್ಲಿಸಿ ಸುಪ್ರೀಂ ವಿಚಾರಣೆಯ ಜೊತೆಗೇ ಸಂಧಾನ ಮಾತುಕತೆ ನಡೆಸಲೂ ಅವಕಾಶ ನೀಡುವಂತೆ ಪೀಠವನ್ನು ಕೋರಿತ್ತು.

ಅಯೋಧ್ಯೆಯ ಬಾಬರಿ ಮಸೀದಿ ಇದ್ದ ಜಾಗದ ೨.೭೭ ಎಕರೆ ವಿವಾದಿತ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಈ ಪ್ರಕರಣದ ವಿವಾದದ ತಿರುಳು.  ಬಾಬರಿ ಮಸೀದಿ ನಿರ್ಮಾಣಕ್ಕೆ ಮುಂಚೆ ಈ ಜಾಗದಲ್ಲಿ ಶ್ರೀರಾಮನ ದೇವಾಲಯ ಇತ್ತು ಎಂಬುದು ಹಿಂದೂಗಳ ವಾದವಾಗಿದೆ. ಬಾಬರಿ ಮಸೀದಿ ಸುತ್ತುಮುತ್ತಣ ಇಡೀ ಜಾಗ ತಮಗೆ ಸೇರಿದ್ದು ಎಂಬುದು ಸುನ್ನಿ ವಕ್ಫ್ ಮಂಡಳಿಯ ವಾದ. ಹಾಗೆಯೇ ನಿರ್ಮೋಹಿ ಅಖಾರ ಕೂಡ ಇದು ತನಗೆ ಸೇರಿದ್ದೆಂದು ವಾದಿಸಿದೆ.

೨೦೧೦ರಲ್ಲಿ ಅಲಾಹಾಬಾದ್ ಹೈಕೋರ್ಟ್  ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮಲಲ್ಲಾ ಈ ಮೂರೂ ಕಕ್ಷಿದಾರರಿಗೆ ವಿವಾದಿತ ಭೂಮಿಯನ್ನು ಸಮಾನವಾಗಿ ಹಂಚುವ ತೀರ್ಪು ನೀಡಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ೧೪ ಮೇಲ್ಮನವಿಗಳು ದಾಖಲಾದವು. ಈ ಎಲ್ಲ ಮೇಲ್ಮನವಿಗಳ ವಿಚಾರಣೆಯನ್ನು ಪ್ರಸ್ತುತ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂಕೋರ್ಟ್ ಸಂವಿಧಾನಪೀಠವು ನಡೆಸುತ್ತಿದೆ.

ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವನ್ನು ೧೯೯೨ರಲ್ಲಿ ಹಿಂದೂ ಕರಸೇವಕರು ಧ್ವಂಸಗೊಳಿಸಿದ್ದರು. ಕಟ್ಟಡ ನಾಶದ ಬಳಿಕ ಸಂಭವಿಸಿದ ರಾಷ್ಟ್ರವ್ಯಾಪಿ ಹಿಂಸಾಚಾರದಲ್ಲಿ  ೨೦೦೦ ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

September 18, 2019 - Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, culture, Flash News, General Knowledge, India, Nation, News, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ