SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಇ-ಸಿಗರೇಟ್, ಇ-ಹುಕ್ಕಾ ನಿಷೇಧ, ರೈಲ್ವೇ ನೌಕರರಿಗೆ ಬಂಪರ್ ಬೋನಸ್


18 nirmala e cigerrate

ಕೇಂದ್ರ ಸಂಪುಟದ ಮಹತ್ವದ ನಿರ್ಧಾರ

ನವದೆಹಲಿ: ದಸರಾ ಮತ್ತು ದೀಪಾವಳಿ ಹಬ್ಬಗಳಿಗಿಂತ ಸಾಕಷ್ಟು ಮುಂಚಿತವಾಗಿಯೇ ರೈಲ್ವೇ ನೌಕರರಿಗೆ ೭೮ ದಿನಗಳ ವೇತನವನ್ನು ’ಬೋನಸ್’ ಆಗಿ ನೀಡುವ ಹಾಗೂ ಇ-ಸಿಗರೇಟು ಮತ್ತು ಇ-ಹುಕ್ಕಾಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2019 ಸೆಪ್ಟೆಂಬರ್ 18ರ ಬುಧವಾರ ಕೈಗೊಂಡಿತು.

ಸಂಪುಟ ಸಭೆಯ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.

ಇ-ಸಿಗರೇಟುಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಸಂಪುಟ ಸಭೆಯು ಅನುಮೋದನೆ ನೀಡಿದೆ. ಅಂದರೆ ಇ-ಸಿಗರೇಟುಗಳ ಉತ್ಪಾದನೆ, ತಯಾರಿಕೆ, ಅಮದು, ರಫ್ತು, ಸಾಗಣೆ, ಮಾರಾಟ, ವಿತರಣೆ, ದಾಸ್ತಾನು ಮತ್ತು ಇ-ಸಿಗರೇಟಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು.

ಎಲೆಕ್ಟ್ರಾನಿಕ್ ನಿಕೋಟಿನ್ ವಿತರಣೆ ವ್ಯವಸ್ಥೆಯನ್ನು (ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ – ಎಂಡ್ಸ್) ನಿಷೇಧಿಸುವಂತೆ ಹಲವಾರು ಕಡೆಗಳಿಂದ ಆಗ್ರಹಗಳು ಬಂದ ಹಿನ್ನೆಲೆಯಲ್ಲಿ ಸಂಪುಟವು ಈ ನಿರ್ಧಾರ ಕೈಗೊಂಡಿತು. ಎಲೆಕ್ಟ್ರಾನಿಕ್ ನಿಕೋಟಿನ್ ವಿತರಣೆ ವ್ಯವಸ್ಥೆಯಲ್ಲಿ ಇ-ಸಿಗರೇಟ್, ಹೀಟ್-ನಾಟ್ ಬರ್ನ್ ಸಾಧನಗಳು, ವೇಪ್, ಇ-ಶೀಷ, ಇ-ನಿಕೋಟಿನ್ ಫ್ಲೇವರ್‍ಡ್ ಹುಕ್ಕಾ ಮತ್ತು ಇಂತಹ ಇತರ ಸಾಧನಗಳು ಸೇರಿವೆ.

ಇ-ಸಿಗರೇಟು ನಿಷೇಧ ಜಾರಿಗೊಳಿಸಲು ಸರ್ಕಾರವು ತತ್ ಕ್ಷಣವೇ ರಾಷ್ಟ್ರಪತಿಯವರ ಅನುಮೋದನೆ ಮೇರೆಗೆ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವುದು ಎಂದು ಸೀತಾರಾಮನ್ ತಿಳಿಸಿದರು.  ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದ ಮಸೂದೆಯನ್ನು ಸರ್ಕಾರ ಮಂಡಿಸುವುದು ಎಂದು ಅವರು ನುಡಿದರು. ಅಮೆರಿಕದ ಐಸಿಎಂಆರ್ ಇ-ಸಿಗರೇಟುಗಳ ಅಪಾಯಗಳ ಬಗ್ಗೆ ಪ್ರಕಟಿಸಿದ ಶ್ವೇತಪತ್ರವನ್ನು ಆಧರಿಸಿ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿತು.

ಪ್ರಸ್ತುತ ಯಾವುದೇ ಭಾರತೀಯ ಕಂಪೆನಿ ಇ-ಸಿಗರೇಟ್ ತಯಾರಿಸುತ್ತಿಲ್ಲವಾದರೂ, ಚಲಾವಣೆಯಲ್ಲಿರುವ ಸುಮಾರು ೪೦೦ ಬ್ರಾಂಡ್‌ಗಳು ೧೫೦ಕ್ಕೂ ಹೆಚ್ಚು ಫ್ಲೇವರ್‌ಗಳ ಉತ್ಪನ್ನಗಳ ಕೊಡುಗೆ ಮುಂದಿಟ್ಟಿವೆ ಎಂದು ಸೀತಾರಾಮನ್ ಹೇಳಿದರು.

ಅಮೆರಿಕದ ಅಧ್ಯಯನವನ್ನು ಉಲ್ಲೇಖಿಸಿದ ಸಚಿವರು ೨೦೧೧ ಮತ್ತು ೨೦೧೫-೧೬ರ ನಡುವಣ ಅವಧಿಯಲ್ಲಿ ಇ-ಸಿಗರೇಟುಗಳ ಬೆಳವಣಿಗೆ ಶೇಕಡಾ ೯೦೦ರಷ್ಟಾಗಿದೆ ಎಂದು ವಿವರಿಸಿದರು. ಅಮೆರಿಕದಲ್ಲಿ ಇ-ಸಿಗರೇಟು ಸೇವನೆ ಚಟಕ್ಕೆ ೭ ಮಂದಿ ಬಲಿಯಾಗಿದ್ದಾರೆ ಎಂದು ಅವರು ನುಡಿದರು.

ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಪ್ರಕಾಶ್ ಜಾವಡೇಕರ್ ಅವರು ಇದೊಂದು ಸಕಾಲಿಕ ಕ್ರಮವಾಗಿದ್ದು, ಸಾಕಷ್ಟು ಚರ್ಚಿಸಿದ ಬಳಿಕವೇ ಸಂಪುಟವು ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿತು ಎಂದು ಹೇಳಿದರು.

’ಇದೊಂದು ಸ್ವಾಗತಾರ್ಹ ಕ್ರಮ. ಮುಂಜಾಗರೂಕತಾ ತಡೆ ಯಾವಾಗಲೂ ಉತ್ತಮ. ಇ-ಸಿಗರೇಟಿನಿಂದ ಆರೋಗ್ಯಕ್ಕೆ ಯಾವುದೇ ಅನುಕೂಲವೂ ಇಲ್ಲ’ ಎಂದು ಅವರು ನುಡಿದರು.

ಕರಡು ಮಸೂದೆಯ ಪ್ರಕಾರ ಮೊದಲ ಬಾರಿಯ ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆವಾಸ ಮತ್ತು ಒಂದು ಲಕ್ಷ ರೂಪಾಯಿವರೆಗೆ ದಂಡ ಆಥವಾ ಎರಡೂ ಮತ್ತು ಅಪರಾಧ ಪುನರಾವರ್ತಿಸುವವರಿಗೆ ಮೂರು ವರ್ಷಗಳವರೆಗೆ ಸಜೆ ಮತ್ತು ೫ ಲಕ್ಷ ರೂಪಾಯಿವರೆಗೆ ದಂಡ ವಿಧಿಸಬಹುದು.

ಇ-ಸಿಗರೇಟು ದಾಸ್ತಾನು ಮಾಡುವವರಿಗೆ ೬ ತಿಂಗಳುಗಳ ಸೆರೆವಾಸ ಮತ್ತು ೫೦,೦೦೦ ರೂಪಾಯಿಗಳ ದಂಡ ಅಥವಾ ಎರಡನ್ನೂ ವಿಧಿಸಬಹುದು.

ಇ-ಹುಕ್ಕಾವನ್ನು ಕೂಡಾ ನಿಷೇಧಿಸಲಾಗಿದೆ ಎಂದು ಸೀತಾರಾಮನ್ ಮತ್ತು ಜಾವಡೇಕರ್ ಹೇಳಿದರು.

ಇ-ಸಿಗರೇಟುಗಳ ನಿಷೇಧ ಸುಗ್ರೀವಾಜ್ಞೆಯನ್ನು (೨೦೧೯) ಸಚಿವರ ತಂಡವೊಂದು ಪ್ರಧಾನ ಮಂತ್ರಿಗಳ ಕಚೇರಿಯ ನಿರ್ದೇಶನ ಮೇರೆಗೆ ಇತ್ತೀಚೆಗೆ ಪರಿಶೀಲಿಸಿತ್ತು.

ಇ ಸಿಗರೇಟು ಎಂದರೇನು?

ಇ-ಸಿಗರೇಟುಗಳು ಬ್ಯಾಟರಿ ಚಾಲಿತ ಸಾಧನೆಗಳಾಗಿದ್ದು ನಿಕೋಟಿನ್ ಹೊಂದಿದ ದ್ರಾವಣವನ್ನು ಬಿಸಿ ಮಾಡುವ ಮೂಲಕ ಏರೋಸೋಲ್‌ನ್ನು ಉತ್ಪಾದಿಸುತ್ತದೆ. ಇದು ದಹನಕಾರಿ ಸಿಗರೇಟು ಸೇವನೆಯ ಚಟ ಬೆಳೆಸುವ ದ್ರವ್ಯವಾಗಿದೆ.

ಕರ್ನಾಟಕ ವರ್ಜೀನಿಯಾ ತಂಬಾಕು ಬೆಳೆಗಾರರ ಸಂಘವು ಇ-ಸಿಗರೇಟು ಮತ್ತು ವೇಪಿಂಗ್ ಉತ್ಪನ್ನಗಳನ್ನು ದೇಶದಲ್ಲಿ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಿತ್ತು.

ಇ-ಸಿಗರೇಟುಗಳ ಬೆಂಬಲಿಗರು ತಂಬಾಕಿನ ಹೊಗೆ ಸೇವನೆಗಿಂತ ಇ-ಸಿಗರೇಟು ಕಡಿಮೆ ಹಾನಿಕಾರಕ. ಸೇವಿಸುವವರಿಗೆ ಅದು ಆಹ್ಲಾದಕರ ಎನಿಸುತ್ತದೆ ಎಂದು ವಾದಿಸುತ್ತಾರೆ. ಆದರೆ ಸಾಂಪ್ರದಾಯಿಕ ಸಿಗರೇಟುಗಳು ಉಂಟು ಮಾಡುವಂತಹುದೇ ಆರೋಗ್ಯದ ಅಪಾಯಗಳನ್ನು ಇ-ಸಿಗರೇಟುಗಳೂ ಉಂಟು ಮಾಡುತ್ತವೆ ಎಂಬುದು ಸರ್ಕಾರದ ಅಭಿಪ್ರಾಯವಾಗಿದೆ.

ಭಾರತವು ವಿಶ್ವದ ಎರಡನೇ ದೊಡ್ಡ ತಂಬಾಕು ಬಳಕೆದಾರರ  (೨೬೮ ಮಿಲಿಯನ್ ಅಥವಾ ೨೬.೮೦ ಕೋಟಿ) ದೇಶವಾಗಿದ್ದು, ಇವರ ಪೈಕಿ ಪ್ರತಿವರ್ಷವೂ ಕನಿಷ್ಟ ೧೨ ಲಕ್ಷ ಮಂದಿ ತಂಬಾಕು ಸಂಬಂಧಿತ ರೋಗಗಳಿಗೆ ಬಲಿಯಾಗುತ್ತಾರೆ.

ರೈಲ್ವೇ ನೌಕರರಿಗೆ ಬೋನಸ್

ರೈಲ್ವೇ ನೌಕರರು ಕಾರ್‍ಯಕ್ಷಮತೆ ಆಧಾರಿತ ೭೮ ದಿನಗಳ ವೇತನಕ್ಕೆ ಸಮನಾದ ಹಣವನ್ನು ಬೋನಸ್ ರೂಪದಲ್ಲಿ ಪಡೆಯಲಿದ್ದಾರೆ ಎಂದು ಪ್ರಕಾಶ್ ಜಾವಡೇಕರ್ ಅವರು ಈ ಸಂದರ್ಭದಲ್ಲೇ ಪ್ರಕಟಿಸಿದರು.

ಕೇಂದ್ರ ಸಚಿವ ಸಂಪುಟವು ಕೈಗೊಂಡಿರುವ ಈ ನಿರ್ಧಾರದ ಲಾಭ ೧೧.೫೨ ಲಕ್ಷ ರೈಲ್ವೇ ನೌಕರರಿಗೆ ಲಭಿಸಲಿದೆ ಎಂದು ಜಾವಡೇಕರ್ ಹೇಳಿದರು.

ರೈಲ್ವೇ ನೌಕರರಿಗೆ ನೀಡಲಾಗುವ ಈ ಬೋನಸ್ಸಿನಿಂದ ಸರ್ಕಾರದ ಬೊಕ್ಕಸಕ್ಕೆ ೨,೦೨೪ ಕೋಟಿ ರೂಪಾಯಿಗಳ ಹೊರೆಯಾಗಲಿದೆ ಎಂದು ಅವರು ನುಡಿದರು.

ಇದರೊಂದಿಗೆ ರೈಲ್ವೇ ನೌಕರರು ಸತತ ೬ನೇ ವರ್ಷ ಬೋನಸ್ ಪಡೆದಂತಾಗುತ್ತದೆ ಎಂದೂ ಸಚಿವರು ಹೇಳಿದರು.

September 18, 2019 - Posted by | ಪ್ರಧಾನಿ, ಭಾರತ, ರಾಷ್ಟ್ರೀಯ, Consumer Issues, Flash News, General Knowledge, Health, India, Nation, News, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ