SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕುರ್ಚಿ ಇಲ್ಲ, ದಿಂಬೂ ಇಲ್ಲ, ಶುರುವಾಗಿದೆ ಬೆನ್ನು ನೋವು: ಚಿದಂಬರಂ ಅಳಲು


19 p chidambaram
ಅಕ್ಟೋಬರ್ ೩ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿದ ನ್ಯಾಯಾಲಯ

ನವದೆಹಲಿ: ಸೆಪ್ಟೆಂಬರ್ ೫ರಿಂದ ತಿಹಾರ್ ಸೆರೆಮನೆಯಲ್ಲಿ ನ್ಯಾಯಾಂಗ ಬಂಧನ ಎದುರಿಸುತ್ತಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಸೆರೆಮನೆಯಲ್ಲಿ ತಮಗೆ ಕುರ್ಚಿ ಮತ್ತು ದಿಂಬನ್ನು ಕೂಡಾ ಒದಗಿಸಲಾಗಿಲ್ಲ ಎಂಬುದಾಗಿ 2019 ಸೆಪ್ಟೆಂಬರ್ 19ರ ಗುರುವಾರ ದೆಹಲಿ ನ್ಯಾಯಾಲಯದಲ್ಲಿ ತಮ್ಮ ಅಳಲು ತೋಡಿಕೊಂಡರು.

ಇದ್ದ ಕುರ್ಚಿ ಹಾಗೂ ದಿಂಬನ್ನು ಹಿಂತೆಗೆದುಕೊಂಡ ಪರಿಣಾಮವಾಗಿ ೭೪ರ ಹರೆಯದ ಚಿದಂಬರಂ ಅವರಿಗೆ ಬೆನ್ನು ನೋವು ಶುರುವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ ಚಿದಂಬರಂ ಪರ ವಕೀಲರು ಅವರ ವೈದ್ಯಕೀಯ ತಪಾಸಣೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿದರು. ನ್ಯಾಯಾಲಯವು ಚಿದಂಬರಂ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ ೩ರವರೆಗೆ ವಿಸ್ತರಿಸಿತು.

’ನನ್ನ ಕೊಠಡಿಯ ಹೊರಗೆ ಕುರ್ಚಿಗಳು ಇದ್ದವು. ಹಗಲಿನ ಹೊತ್ತು ನಾನು ಅವುಗಳಲ್ಲಿ ಕುಳಿತುಕೊಳ್ಳುತ್ತಿದ್ದೆ. ಈಗ ಅವುಗಳನ್ನೂ ಅಲ್ಲಿಂದ ತೆಗೆಯಲಾಗಿದೆ. ನಾನು ಅವುಗಳನ್ನು ಬಳಸುತ್ತಿದ್ದೆನೆಂಬ ಕಾರಣಕ್ಕೆ ಅವುಗಳನ್ನು ಅವರು ಅಲ್ಲಿಂದ ತೆಗೆದಿದ್ದಾರೆ. ಈಗ ಅಲ್ಲಿ ವಾರ್ಡನ್‌ಗೆ ಕೂಡಾ ಕುರ್ಚಿ ಇಲ್ಲ’ ಎಂದು ಚಿದಂಬರಂ ಹೇಳಿದರು.

ಚಿದಂಬರಂ ಪರ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಚಿದಂಬರಂ ಅವರಿಗೆ ಬೆನ್ನು ನೋವು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಕೋರಿದ ಬಳಿಕ ಬಳಿಕ ಚಿದಂಬರಂ ಅವರು ತಮ್ಮ ಅಳಲನ್ನು ತೋಡಿಕೊಂಡರು.

’ಕಳೆದ ಮೂರು ದಿನಗಳ ಹಿಂದಿನವರೆಗೆ ಕುರ್ಚಿ ಇತ್ತು. ಈಗ ಕುರ್ಚಿಯೂ ಇಲ್ಲ, ದಿಂಬೂ ಇಲ್ಲ’ ಎಂದು ಸಿಂಘ್ವಿ ಹೇಳಿದರು.

’ಇದೊಂದು ಸಣ್ಣ ವಿಷಯ. ಮೊತ್ತ ಮೊದಲನೆಯದಾಗಿ ಸೆರೆಮನೆಯಲ್ಲಿ ಯಾವುದೇ ಕುರ್ಚಿ ಒದಗಿಸಲಾಗುವುದಿಲ್ಲ’ ಎಂದು ಸರ್ಕಾರ ಪ್ರತಿಪಾದಿಸಿತು.

’ಇದೊಂದು ಸಣ್ಣ ವಿಷಯ. ಅದನ್ನು ಸೆನ್ಸೇಷನಲೈಸ್ ಮಾಡಬೇಕಾಗಿಲ್ಲ. ಇದೊಂದು ಕ್ಷುಲ್ಲಕ ಕುರ್ಚಿಯ ವಿಷಯ. ಅವರ ಕೋಣೆಯಲ್ಲಿ ಪ್ರಾರಂಭದಿಂದಲೂ ಕುರ್ಚಿ ಇರಲೇ ಇಲ್ಲ’ ಎಂದು ಸರ್ಕಾರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಹೇಳಿದರು.

ನ್ಯಾಯಾಧೀಶರು ಮುಂದಿನ ವಿಚಾರಣೆಗೆ ಅಕ್ಟೋಬರ್ ೩ರ ದಿನಾಂಕ ನಿಗದಿ ಪಡಿಸಿದಾಗ ಚಿದಂಬರಂ ಅವರ ವಕೀಲರ ತಂಡ ಪ್ರತಿಭಟಿಸಿತು. ’ನ್ಯಾಯಾಂಗ ಬಂಧನವನ್ನು ಯಾಂತ್ರಿಕವಾಗಿ ವಿಸ್ತರಿಸುವಂತಿಲ್ಲ. ವಿಸ್ತರಣೆಗೆ ನೆಲೆ ಏನು?’ ಎಂದು ಸಿಬಲ್ ಪ್ರಶ್ನಿಸಿದರು.

ನ್ಯಾಯೋಚಿತ ನೆಲೆ ಇಲ್ಲದೆ ಯಾಂತ್ರಿಕವಾಗಿ ಕಸ್ಟಡಿಯನ್ನು ವಿಸ್ತರಿಸುವಂತಿಲ್ಲ ಎಂಬುದಾಗಿ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪುಗಳನ್ನು ಸಿಂಘ್ವಿ ಉಲ್ಲೇಖಿಸಿದರು.

ಚಿದಂಬರಂ ಅವರು ಈಗಾಗಲೇ ೧೪ ದಿನಗಳನ್ನು ಪೊಲೀಸ್ ವಶದಲ್ಲಿ ಮತ್ತು ೧೪ ದಿನಗಳನ್ನು ನ್ಯಾಯಾಂಗ ವಶದಲ್ಲಿ ಕಳೆದಿದ್ದಾರೆ. ವಿಸ್ತರಣೆಗೆ ಕಾರಣ ಏನು? ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್ ನಾಯಕನ ಕಸ್ಟಡಿಯನ್ನು ವಿಸ್ತರಿಸುವುದೇ ಆಗಿದ್ದಲ್ಲಿ, ಅದು ಅಲ್ಪಕಾಲಿಕವಾಗಿರಬೇಕು ಎಂದು ಹೇಳಿದ ಸಿಬಲ್, ಏಮ್ಸ್, ಆರ್ ಎಂ ಎಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಬೇಕು ಎಂದು ಆಗ್ರಹಿಸಿದರು.

೨೦೦೭ರಲ್ಲಿ ಕೇಂದ್ರದ ವಿತ್ತ ಸಚಿವರಾಗಿದ್ದಾಗ ಐಎನ್‌ಎಕ್ಸ್ ಮೀಡಿಯಾ ಕಂಪೆನಿಗೆ ಭಾರೀ ಪ್ರಮಾಣದ ವಿದೇಶೀ ಹಣ ಹರಿದು ಬರಲು ಅನುಕೂಲ ಮಾಡಿಕೊಟ್ಟ ಆದೇಶಕ್ಕೆ ಸಹಿ ಹಾಕಿದ್ದರೆಂಬ ಆಪಾದನೆ ಚಿದಂಬರಂ ಮೇಲಿದೆ. ಈ ಪ್ರಕ್ರಿಯೆಗೆ ಅನುವು ಮಾಡಿಕೊಟ್ಟದ್ದಕ್ಕಾಗಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರು ಲಂಚ ಪಡೆದಿದ್ದಾರೆ ಎಂಬ ಆರೋಪವಿದೆ. ಚಿದಂಬರಂ ಅವರು ಲಂಚ ಪಡೆದು ಕಂಪೆನಿಗೆ ನೆರವು ನೀಡಿದ್ದರು ಎಂದು ಐಎನ್‌ಎಕ್ಸ್  ಮೀಡಿಯಾದ ಸಹಸಂಸ್ಥಾಪಕರಾದ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಹೇಳಿದ್ದರು. ಇಂದ್ರಾಣಿ ಮುಖರ್ಜಿಯ ಪುತ್ರಿ ಶೀನಾಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೀಟರ್ ಮತ್ತು ಇಂದ್ರಾಣಿ ಮುಖರ್ಜಿ ಮುಂಬೈ ಸೆರೆಮನೆಯಲ್ಲಿ ಇದ್ದಾರೆ.

ಚಿದಂಬರಂ ಅವರು ಸೋಮವಾರ ತಮ್ಮ ೭೪ನೇ ಜನ್ನದಿನವನ್ನು ಸೆರೆಮನೆಯಲ್ಲಿಯೇ ಅಚರಿಸಿದ್ದು, ಆರೋಗ್ಯವಾಗಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಮಾಜಿ ಕೇಂದ್ರ ಸಚಿವರು ಸೆರೆಮನೆಯಿಂದಲೇ ತಮ್ಮ ಟ್ವಿಟ್ಟರ್ ಖಾತೆಯನ್ನು ಸಕ್ರಿಯವಾಗಿ ಇರಿಸಿದ್ದು ವಿವಿಧ ವಿಷಯಗಳ ಮೇಲೆ ಸರ್ಕಾರವನ್ನು ಗುರಿಮಾಡಿ ಟ್ವೀಟ್‌ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಹಿರಿಯ ರಾಜಕಾರಣಿ ಫರೂಕ್ ಅಬ್ದುಲ್ಲ ಅವರನ್ನು ಬಂಧಿಸಿದ್ದಕ್ಕಾಗಿ ಅವರು ಕೇಂದ್ರವನ್ನು ಟೀಕಿಸಿ ಟ್ವೀಟ್ ಮಾಡಿದ್ದರು.

September 19, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ