SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

‘ತೇಜಸ್’ ಯುದ್ಧ ವಿಮಾನದಲ್ಲಿ ಹಾರಾಡಿದ ಮೊದಲ ರಕ್ಷಣಾ ಸಚಿವ ರಾಜನಾಥ್ ಸಿಂಗ್


19 rajanath singh
ಬೆಂಗಳೂರಿನ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ನ ಹೆಮ್ಮೆಯ ಉಕ್ಕಿನ ಹಕ್ಕಿ

ಬೆಂಗಳೂರು: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2019 ಸೆಪ್ಟೆಂಬರ್ 19ರ ಗುರುವಾರ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ’ತೇಜಸ್’ ಯುದ್ಧ ವಿಮಾನದ ಮೂಲಕ ಹಾರಾಟ ನಡೆಸುವುದರೊಂದಿಗೆ ದೇಶೀ ನಿರ್ಮಿತ ಹಗುರ ಯುದ್ಧ ವಿಮಾನದಲ್ಲಿ (ಎಲ್ ಸಿಎ) ಹಾರಾಟ ನಡೆಸಿದ ದೇಶದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಹಸಿರು ಬಣ್ಣದ ಜಿ  ಸ್ಯೂಟ್ ಧರಿಸಿದ ಸಚಿವರು ಕೈ ಬೀಸುತ್ತಾ ವಿಮಾನ ಏರಿ ಪೈಲಟ್ ಹಿಂಭಾಗದ ಆಸನದಲ್ಲಿ ಸ್ವತಃ ಬಕಲ್ ಬಿಗಿದುಕೊಂಡು ಆಸೀನರಾದರು. ಎರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ (ಎಡಿಎ) ರಾಷ್ಟ್ರೀಯ ಹಾರಾಟ ಪರೀಕ್ಷಾ ಕೇಂದ್ರದ ಯೋಜನಾ ನಿರ್ದೇಶಕ ಏರ್ ವೈಸ್ ಮಾರ್ಶಲ್ ಎನ್. ತಿವಾರಿ ಸಚಿವರ ಜೊತೆಗಿದ್ದರು.

ದೇಶೀಯವಾಗಿ ಅಭಿವೃದ್ಧಿ ಪಡಿಸಿದ ತೇಜಸ್ ಯುದ್ಧ ವಿಮಾನ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳ ನೈತಿಕ ಸ್ಥೈರ್ಯಕ್ಕೆ ಒತ್ತು ನೀಡುವ ಸಲುವಾಗಿ ಸಚಿವರು ತೇಜಸ್ ಯುದ್ಧ ವಿಮಾನ ಏರಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ಹಿಂದಿನ ದಿನ ತಿಳಿಸಿದ್ದರು.

ಭಾರತೀಯ ವಾಯುಪಡೆಯು ಈಗಾಗಲೇ ತೇಜಸ್ ಯುದ್ಧ ವಿಮಾನಗಳ ಒಂದು ಕಂತನ್ನು ಸೇರ್ಪಡೆ ಮಾಡಿಕೊಂಡಿದೆ. ಹಗುರ ಯುದ್ಧ ವಿಮಾನದ ನೌಕಾ ಆವೃತ್ತಿ ಅಭಿವೃದ್ಧಿಯ ಹಂತದಲ್ಲಿದೆ.

ಕಳೆದ 2019 ಸೆಪ್ಟೆಂಬರ್ 13ರ ಶುಕ್ರವಾರ ಗೋವಾದಲ್ಲಿ ತೇಜಸ್ ಯುದ್ಧ ವಿಮಾನವು ’ಅರೆಸ್ಟೆಡ್ ಲ್ಯಾಂಡಿಂಗ್’ನ್ನು (ಸುಮಾರು ೨೦೦ ಮೀಟರ್ ಉದ್ದದ ವಿಮಾನ ವಾಹಕ ನೌಕಾ ಕಟ್ಟೆಯಲ್ಲಿ ಇಳಿಯುವಿಕೆ) ಯಶಸ್ವಿಯಾಗಿ ನಡೆಸಿತ್ತು. ತನ್ಮೂಲಕ ವಿಮಾನವಾಹಕ ನೌಕೆಯ ಮೇಲೆ ವಿಮಾನ ಇಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿ ಯುದ್ಧ ವಿಮಾನದ ನೌಕಾ ಆವೃತ್ತಿ ಅಭಿವೃದ್ಧಿ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿತ್ತು.

ಗುರುವಾರ ರಾಜನಾಥ್ ಸಿಂಗ್ ಅವರು ಬೆಂಗಳೂರಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೇಯ (ಡಿಆರ್‌ಡಿಒ) ಉತ್ಪನ್ನಗಳ ಪ್ರದರ್ಶನಕ್ಕೂ ಭೇಟಿ ನೀಡಿದರು.

ಪ್ರಾರಂಭದಲ್ಲಿ ಭಾರತೀಯ ವಾಯುಪಡೆಯು ೪೦ ತೇಜಸ್ ಯುದ್ಧ ವಿಮಾನಗಳಿಗಾಗಿ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) ಆದೇಶ ನೀಡಿತ್ತು. ಕಳೆದ ವರ್ಷ ೫೦,೦೦೦ ರೂಪಾಯಿ ವೆಚ್ಚದಲ್ಲಿ ಇನ್ನೂ ೮೩ ತೇಜಸ್ ಯುದ್ಧ ವಿಮಾನಗಳ ನಿರ್ಮಾಣಕ್ಕಾಗಿ ಎಚ್‌ಎಎಲ್‌ಗೆ ಪ್ರಸ್ತಾವ ಕಳಿಸಿತ್ತು.

ತೇಜಸ್ ಹಗುರ ತೂಕದ ಬಹುವಿಧವಾದ ಪಾತ್ರ ವಹಿಸಬಲ್ಲ ಸೂಪರ್ ಸಾನಿಕ್ ವಿಮಾನವಾಗಿದ್ದು ದೇಶೀಯವಾಗಿ ನಿರ್ಮಾಣಗೊಂಡಿದೆ. ಯುದ್ಧ ವಿಮಾನ ಮತ್ತು ತರಬೇತಿ ವಿಮಾನ ಈ ಎರಡೂ ಅವೃತ್ತಿಗಳನ್ನು ವಿನ್ಯಾಸಗೊಳಿಸಿ ನಿರ್ಮಿಸಲಾಗಿದೆ.

ಈ ವಿಮಾನ ತಯಾರಿಕೆಯಲ್ಲಿ ಕಂಪೋಟಿಸಿರ್‌ನಂತಹ ಅತ್ಯಾಧುನಿಕ ಭಾಗಗಳನ್ನು ಬಳಸುವ ಮೂಲಕ ವೆಚ್ಚ ಇಳಿಸುವುದರ ಜೊತೆಗೆ ವಿಮಾನದ ಭಾಗಗಳ ಆಯುಸ್ಸನ್ನು ಹೆಚ್ಚಿಸಲಾಗಿದೆ.

ಆಗಸದಿಂದ ಆಗಸಕ್ಕೆ, ಆಗಸದಿಂದ ಭೂ ಮೇಲ್ಮೈಗೆ ಹಾರಬಲ್ಲಂತಹ ವಿವಿಧ ಮಾದರಿಯ ಪ್ರಿಸಿಸನ್ ಗೈಡೆಸ್ ಮತ್ತು ಸ್ಟಾಂಡ್ ಆಫ್ ಶಸ್ತ್ರಾಸ್ತ್ರಗಳೊಂದಿಗೆ ದಾಳಿ ನಡೆಸಲು ಸಾಧ್ಯವಾಗುವಂತೆ ತೇಜಸ್ ಯುದ್ಧ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ.

ಎಲ್ಲರ ಕಣ್ಣು ಫ್ರೆಂಚ್ ನಿರ್ಮಿತ ರಫೇಲ್ ವಿಮಾನಗಳ ಕಡೆಗೆ ಕೇಂದ್ರೀಕೃತವಾಗಿದ್ದಾಗ, ಎಚ್‌ಎಎಲ್ ಅತ್ಯಂತ ಕುಶಲತೆಯೊಂದಿಗೆ ತೇಜಸ್ ಹಗುರ ಯುದ್ಧ ವಿಮಾನದ ವಿವಿಧ ಅವೃತ್ತಿಗಳ ವಿನ್ಯಾಸದಲ್ಲಿ ತಲ್ಲೀನವಾಗಿತ್ತು.

ತೇಜಸ್ ಯುದ್ಧ ವಿಮಾನ ನಿರ್ಮಾಣ ಯೋಜನೆಗೆ ಒಟ್ಟು ೧೪,೦೪೭ ಕೋಟಿ ರೂಪಾಯಿಗಳನ್ನು ನಿಗದಿ ಪಡಿಸಲಾಗಿದ್ದು ಅದರಲ್ಲಿ ೩,೬೫೦ ಕೋಟಿ ರೂಪಾಯಿಗಳನ್ನು ತೇಜಸ್ ನೌಕಾ ಅವೃತ್ತಿ ಸಲುವಾಗಿ ತೆಗೆದಿರಿಸಲಾಗಿದೆ.. ಬಹುಪಾತ್ರ ನಿರ್ವಹಿಸಬಲ್ಲ ಒಂದೇ ಎಂಜಿನ್ ಹೊಂದಿರುವ ಸಮರ ವಿಮಾನ ತೇಜಸ್ ಸೂಪರ್ ಸಾನಿಕ್ (ಧ್ವನಿಯ) ವೇಗದಲ್ಲಿ ನುಗ್ಗಿ ವೈರಿಗಳ ಮೇಲೂ ದಾಳಿ ನಡೆಸಬಲ್ಲುದು.

ಅತ್ಯಂತ ಸಣ್ಣ, ಅತಿ ಹಗುರ ಮತ್ತು ಬಹುಪಾತ್ರ ವಹಿಸಬಲ್ಲ ಸಾಮರ್ಥ್ಯದ ವಿಮಾನವಾಗಿ ತೇಜಸ್‌ನ್ನು ಅಭಿವೃದ್ಧಿ ಪಡಿಸಲು ಎಚ್‌ಎಎಲ್ ಅತ್ಯಂತ ಹೆಚ್ಚಿನ ಒತ್ತು ನೀಡಿದೆ. ತೇಜಸ್ ಯುದ್ಧ ವಿಮಾನವು ೮.೨ ಮೀಟರ್ ಎತ್ತರದ ರೆಕ್ಕೆ ಹೊಂದಿದ್ದರೆ ೧೩.೨ ಮೀಟರ್ ಉದ್ದ ಮತ್ತು ೪.೪ ಮೀಟರ್ ಎತ್ತರವಿದೆ. ಖಾಲಿಯಾಗಿದ್ದಾಗ ೬೫೬೦ ಕಿ.ಗ್ರಾಂ ತೂಕ ಹೊಂದಿರುತ್ತದೆ. ೨೦೦೫ರ ವೇಳೆಗೆ ಈ ವಿಮಾನದ ಎರಡನೇ ಹಂತದ ಪರೀಕ್ಷೆಯನ್ನು ನಡೆಸಲಾಗಿತ್ತು.

ತೇಜಸ್ ಯುದ್ಧ ವಿಮಾನದ ಯಶಸ್ಸು ಭಾರತೀಯ ನೌಕಾಪಡೆಗೆ ಎಡಿಎಗೆ ತೇಜಸ್‌ನ ನೌಕಾ ಆವೃತ್ತಿಯನ್ನು ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಪ್ರೇರಣೆ ನೀಡಿದೆ.. ತೇಜಸ್‌ನ ನೌಕಾ ಆವೃತ್ತಿ ಸಿದ್ಧವಾಗುತ್ತಿದ್ದಂತೆಯೇ ಅದನ್ನು ಭಾರತೀಯ ನೌಕಾಪಢೆಯ ಫ್ಲ್ಯಾಗ್ ಶಿಪ್ ಮತ್ತು ಏಕೈಕ ವಿಮಾನವಾಹಕ ನೌಕೆಯಾಗಿರುವ ಐಎನ್‌ಎಸ್ ವಿಕ್ರಮಾದಿತ್ಯಕ್ಕೆ ಸೇರ್ಪಡೆ ಮಾಡಲಾಗುವುದು.

September 19, 2019 - Posted by | ಭಾರತ, ರಾಷ್ಟ್ರೀಯ, ವಿಮಾನ, Flash News, General Knowledge, India, Nation, News, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ