SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಆರ್ಥಿಕತೆಗೆ ಭೀಮ ಬಲ: ಕಾರ್ಪೊರೇಟ್ ತೆರಿಗೆ ಕಡಿತ, ಜಿಗಿದ ಸೆನ್ಸೆಕ್ಸ್


20 Nirmala_Sitharaman
ನವದೆಹಲಿ: ಸಂಕಷ್ಟಕ್ಕೆ ಸಿಲುಕಿದ ದೇಶದ ಆರ್ಥಿಕತೆಯ ಬೆಳವಣಿಗೆಗೆ ಪ್ರಚಂಡ ಬಲ ನೀಡಲು ನೀಡಲು ದೇಶೀಯ ಸಂಸ್ಥೆಗಳ  ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ ೩೦ರಿಂದ ಶೇಕಡಾ ೨೨ಕ್ಕೆ ಮತ್ತು ನೂತನ ಉತ್ಪಾದನಾ ಕಂಪನಿಗಳಿಗೆ (ನವೋದ್ಯಮಗಳು) ಶೇಕಡಾ ೨೫ರಿಂದ ಶೇಕಡಾ ೧೫ಕ್ಕೆ ಇಳಿಸುವ ಮೂಲಕ ಉದ್ಯಮಿಗಳಿಗೆ ಭರಪೂರ ಕೊಡುಗೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019ರ ಸೆಪ್ಟೆಂಬರ್ 20ರ ಶುಕ್ರವಾರ ಪ್ರಕಟಿಸಿದರು.

ಖಾಸಗಿ ಹೂಡಿಕೆಗೆ ಮತ್ತು ಆಟೋಮೊಬೈಲ್ ಕ್ಷೇತ್ರಕ್ಕೆ ಪುನಃಶ್ಚೇತನ ಹಾಗೂ ಆರು ವರ್ಷಗಳಲ್ಲೇ ಅತ್ಯಂತ ಕೆಳಮಟ್ಟಕ್ಕೆ ಕುಸಿದಿರುವ ದೇಶದ ಸಮಗ್ರ ಆಂತರಿಕ ಉತ್ಪನ್ನವನ್ನು (ಜಿಡಿಪಿ) ಮೇಲೆತ್ತುವ ಮತ್ತು ನಿರುದ್ಯೋಗದ ಪರಿಣಾಮವಾಗಿ ದೇಶಾದ್ಯಂತ ಎದ್ದಿರುವ ಅಸಮಾಧಾನವನ್ನು ನಿವಾರಿಸುವ ಉದ್ದೇಶದೊಂದಿಗೆ ಸೀತರಾಮನ್ ಅವರು ೧.೪೫ ಲಕ್ಷ ಕೋಟಿ ರೂಪಾಯಿಗಳ ಪ್ರೋತ್ಸಾಹದ ಮೂಲಕ ಭೀಮಬಲ ನೀಡುವ ಮಹತ್ವದ ಉಪಕ್ರಮವನ್ನು ಗೋವಾದಲ್ಲಿ ನಡೆದ ಜಿಎಸ್‌ಟಿ ಸಭೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಸಚಿವರ ಆರ್ಥಿಕ ಪ್ರೋತ್ಸಾಹದ ಪ್ರಕಟಣೆ ಹೊರಬಿದ್ದ ಗಂಟೆಯೊಳಗಾಗಿ ಷೇರು ಮಾರುಕಟ್ಟೆ ಗರಿಗೆದರಿ, ದಿನದ ಮುಕ್ತಾಯದ ವೇಳೆಗೆ ಸೂಚ್ಯಂಕವು ೨೦೦೦ ಅಂಕಗಳಿಗೆ ಜಿಗಿಯಿತು. ಷೇರು ಮಾರುಕಟ್ಟೆ ಸುಮಾರು ೫ ಲಕ್ಷ ಕೋಟಿ ರೂಪಾಯಿಗಳಷ್ಟು ಲಾಭ ಮಾಡಿಕೊಂಡಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಕೂಡಾ ೬೬ ಪೈಸೆಯಷ್ಟ್ಟು ವರ್ಧಿಸಿ ರೂಪಾಯಿ ಮೌಲ್ಯವನ್ನು ೭೦.೬೮ ರೂಪಾಯಿಗೆ ಏರಿಸಿತು.

’ತೆರಿಗೆ ಕಡಿತದ ಈ ಕ್ರಮವು ಭಾರತದ ಸಾಂಸ್ಥಿಕ ತೆರಿಗೆದರವನ್ನು ಪೂರ್ವ ಏಷ್ಯಾದ ದೇಶಗಳಿಗೆ ಸಮನಾಗಿಸುತ್ತದೆ ಮತ್ತು ಸೆನ್ಸೆಕ್ಸ್‌ಅನ್ನು ಶೇಕಡಾ ೫.೨೩ ರಷ್ಟು ಅಥವಾ ಸುಮಾರು ೨೦೦೦ ಅಂಕಗಳಷ್ಟು ಹೆಚ್ಚಿಸುತ್ತದೆ’ ಎಂದು  ಸರ್ಕಾರದ ಉಪಕ್ರಮದ ಬಗ್ಗೆ ವಿವರಿಸುತ್ತಾ ಸೀತಾರಾಮನ್ ಹೇಳಿದರು.

ತೆರಿಗೆ ರಿಯಾಯಿತಿಗಳನ್ನು ೨೦೧೯ರ ಏಪ್ರಿಲ್ ೧ ರಿಂದ ಅನ್ವಯಿಸಲಾಗುವುದು ಮತ್ತು ಕಂಪನಿಗಳು ಪಾವತಿಸುವ ಯಾವುದೇ ಮುಂಗಡ ತೆರಿಗೆಯನ್ನು ಅದಕ್ಕೆ ತಕ್ಕಂತೆ ಸರಿಹೊಂದಿಸಲಾಗುವುದು. ಈ ಕ್ರಮದಿಂದಾಗಿ ಸರ್ಕಾರದ ಬೊಕ್ಕಸಕ್ಕೆ  ವಾರ್ಷಿಕವಾಗಿ ೧.೪೫ ಲಕ್ಷ ಕೋಟಿ ರೂಪಾಯಿ ಆದಾಯವನ್ನು ನಷ್ಟವಾಗುತ್ತದೆ ಎಂದು ಸೀತಾರಾಮನ್ ಹೇಳಿದರು. ೨೦-೨೫ ಉತ್ಪನ್ನಗಳ ಮಾರಾಟ ತೆರಿಗೆಯನ್ನು ಇಳಿಸುವ ಬಗೆಗೂ ಪರಿಶೀಲಿಸಲಾಗುತ್ತಿದೆ ಎಂದೂ ಸಚಿವರು ನುಡಿದರು.

ಬೆಳವಣಿಗೆ ಮತ್ತು ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ, ೨೦೧೯-೨೦ನೇ ಸಾಲಿನಿಂದ ಜಾರಿಗೆ ಬರುವಂತೆ ಆದಾಯ-ತೆರಿಗೆ ಕಾಯ್ದೆಯಲ್ಲಿ ಹೊಸ ನಿಬಂಧನೆಯನ್ನು ಸೇರಿಸಲಾಗಿದೆ, ಈ ನಿಬಂಧನೆಯು ಯಾವುದೇ ದೇಶೀಯ ಕಂಪನಿಗೆ ಷರತ್ತುಗಳಿಗೆ ಒಳಪಟ್ಟು ಶೇಕಡಾ ೨೨ರ ದರದಲ್ಲಿ ಆದಾಯ-ತೆರಿಗೆ ಪಾವತಿಸುವ ಆಯ್ಕೆಗೆ ಅನುಮತಿ ನೀಡುತ್ತದೆ. ಇದನ್ನು ಆಯ್ಕೆ ಮಾಡಿಕೊಳ್ಳುವವರು ಯಾವುದೇ ವಿನಾಯಿತಿ / ಪ್ರೋತ್ಸಾಹವನ್ನು ಪಡೆಯುವುದಿಲ್ಲ. ಈ ಕಂಪನಿಗಳಿಗೆ ವಾಸ್ತವ ತೆರಿಗೆ ದರವು  ಹೆಚ್ಚುವರಿ ಶುಲ್ಕ ಮತ್ತು ಸೆಸ್ ಸೇರಿ ಶೇಕಡಾ  ೨೫.೧೭ ರಷ್ಟಾಗುತ್ತದೆ. ಅಲ್ಲದೆ, ಅಂತಹ ಕಂಪನಿಗಳು ಕನಿಷ್ಠ ಪರ್ಯಾಯ ತೆರಿಗೆಯನ್ನೂ (ಎಂಎಟಿ-ಮ್ಯಾಟ್) ಪಾವತಿಸುವ ಅಗತ್ಯವಿಲ್ಲ ಎಂದು ವಿತ್ತ ಸಚಿವೆ ವಿವರಿಸಿದರು.

ಆದಾಯ ತೆರಿಗೆ ಕಾಯ್ದೆ ಮತ್ತು ಹಣಕಾಸು ಕಾಯ್ದೆಗೆ ಮಾಡಲಾಗಿರುವ ಬದಲಾವಣೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಗುವುದು ಎಂದು ಸೀತಾರಾಮನ್ ಹೇಳಿದರು.

ಸರ್ಕಾರದ  ‘ಮೇಕ್-ಇನ್-ಇಂಡಿಯಾ’ ಉಪಕ್ರಮಕ್ಕೆ ಉತ್ತೇಜನ ನೀಡುವ ಹಾಗೂ ಉತ್ಪಾದನೆಯಲ್ಲಿ ಹೊಸ ಹೂಡಿಕೆಯನ್ನು ಆಕರ್ಷಿಸುವ ಸಲುವಾಗಿ, ಮತ್ತೊಂದು ಹೊಸ ನಿಬಂಧನೆಯನ್ನೂ ಸೇರಿಸಲಾಗಿದ್ದು ಈ ನಿಬಂಧನೆಯು ಅಕ್ಟೋಬರ್ ೧ ರ ನಂತರ ಸಂಯೋಜಿಸಲ್ಪಟ್ಟ (ಇನ್‌ಕಾರ್ಪೋರೇಟೆಡ್) ಯಾವುದೇ ನವೋದ್ಯಮ ಕಂಪನಿಗೆ ಶೇಕಡಾ ೧೫ರಷ್ಟು ಆದಾಯತೆರಿಗೆ ಪಾವತಿಗೆ ಅವಕಾಶ ಕಲ್ಪಿಸುತ್ತದೆ ಎಂದು ಸಚಿವರು ಹೇಳಿದರು.

’ಯಾವುದೇ ವಿನಾಯಿತಿ / ಪ್ರೋತ್ಸಾಹವನ್ನು ಪಡೆಯದ ಮತ್ತು  ೨೦೧೩ರ ಮಾರ್ಚ್ ೩೧ಕ್ಕೆ ಮುನ್ನ ಉತ್ಪಾದನೆಯನ್ನು ಪ್ರಾರಂಭಿಸುವ ಕಂಪೆನಿಗಳಿಗೆ ಈ ಲಾಭವು ಲಭಿಸಲಿದೆ. ಈ ಕಂಪನಿಗಳಿಗೆ ವಾಸ್ತವ ತೆರಿಗೆದರವು ಹೆಚ್ಚುವರಿ ಶುಲ್ಕ ಮತ್ತು ಸೆಸ್ ಸೇರಿ ಶೇಕಡಾ ೧೭.೦೧ ಆಗಿರುತ್ತದೆ ಮತ್ತು ಅಂತಹ ಕಂಪನಿಗಳು ಕನಿಷ್ಠ ಪರ್ಯಾಯ ತೆರಿಗೆ  (ಮ್ಯಾಟ್) ಪಾವತಿಸುವ ಅಗತ್ಯವಿಲ್ಲ’ ’ಎಂದು ಸೀತಾರಾಮನ್ ಹೇಳಿದರು.

ಹೊಸ ತೆರಿಗೆ ವ್ಯವಸ್ಥೆಯನ್ನು ಆರಿಸಿಕೊಳ್ಳಲು ಅಥವಾ ಅಸ್ತಿತ್ವದಲ್ಲಿರುವ ತೆರಿಗೆ ನಿಯಮದ ಅಡಿಯಲ್ಲಿ ಲಭ್ಯವಿರುವ ಲಾಭಗಳನ್ನು ಪಡೆಯಲು ಕಂಪನಿಗಳಿಗೆ ಅವಕಾಶವಿದೆ ಎಂದೂ ಸೀತಾರಾಮನ್ ಹೇಳಿದರು. ’ತೆರಿಗೆ ವಿನಾಯಿತಿ / ಪ್ರೋತ್ಸಾಹವನ್ನು ಪಡೆಯುವ ಮತ್ತು  ರಿಯಾಯಿತಿ ತೆರಿಗೆ ನಿಯಮವನ್ನು ಆಯ್ಕೆ ಮಾಡದ ಕಂಪನಿಗಳಿಗೆ ಹಾಲಿ ತಿದ್ದುಪಡಿಗೆ ಮುಂಚಿನ ತೆರಿಗೆ ದರಗಳೇ ಮುಂದುವರೆಯುತ್ತವೆ’ ಎಂದು ಸಚಿವರು ಹೇಳಿದರು.

ಜಿಗಿದ ಸೆನ್ಸೆಕ್ಸ್:

ಮುಂಬೈ ವರದಿ:  ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್ ತೆರಿಗೆ ಕಡಿತ ಸೇರಿ ಇನ್ನಷ್ಟು ಕ್ರಮಗಳನ್ನು ಪ್ರಕಟಿಸಿದ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಚೈತನ್ಯ ಮೂಡಿತು. ನಿರ್ಮಲಾ ಸೀತಾರಾಮನ್ ಅವರ ಸುದ್ದಿಗೋಷ್ಠಿ ನಡೆದ ಸ್ವಲ್ಪ ಹೊತ್ತಿನಲ್ಲೇ ಷೇರು ಮಾರುಕಟ್ಟೆ ಬರೋಬ್ಬರಿ ೫ ಲಕ್ಷ ಕೋಟಿ ರೂಪಾಯಿ ಲಾಭ ಮಾಡಿಕೊಂಡಿತು.

ಆರ್ಥಿಕ ಹಿಂಜರಿತದಲ್ಲಿ ನಲುಗಿ ಹೋಗುತ್ತಿದ್ದ ಷೇರು ವಹಿವಾಟು ಬಲ ಪಡೆದುಕೊಂಡಿತು. ಬಿಎಸ್‌ಇ ಸೆನ್ಸೆಕ್ಸ್ ೧,೩೦೦ ಅಂಕಗಳಷ್ಟು  ಹೆಚ್ಚಿತು. ೩೦ ಷೇರುಗಳ ಸೂಚ್ಯಂಕವು ಬೆಳಗ್ಗೆ ೧೧.೨೦ರ ವೇಳೆಗೆ ಶೇಕಡಾ ೩.೬೮ರಷ್ಟು ಏರಿ ೩೭,೪೨೦.೧೨ಕ್ಕೆ ತಲುಪಿತು. ನಿಫ್ಟಿಯು ೩೬೨.೯೫ ಅಂಕಗಳಷ್ಟು ಅಥವಾ ಶೇಕಡಾ ೩.೩೯ರಷ್ಟು ಏರಿ ೧೧,೦೬೭.೭೫ಕ್ಕೆ ತಲುಪಿತು. ಪ್ರಮುಖವಾಗಿ ಮಾರುತಿ, ಎಂ &ಎಂ, ಎಚ್ ಡಿಎಫ್ ಸಿ ಬ್ಯಾಂಕ್, ಟಾಟಾ ಮೋಟಾರ್‍ಸ್, ಯೆಸ್ ಬ್ಯಾಂಕ್, ಟಾಟಾ ಸ್ಟೀಲ್, ಎಲ್ & ಟಿ, ಐಸಿಐಸಿಐ ಬ್ಯಾಂಕ್, ಬಜಾಜ್ ಆಟೊ ಮತ್ತು ಆರ್‌ಐಎಲ್ ಶೇಕಡಾ ೯ರಷ್ಟು ಲಾಭ ಪಡೆದವು. ಇದೇ ವೇಳೆಗೆ ಟಿಸಿಎಸ್ ಮತ್ತು ಎನ್ ಟಿಪಿಸಿ ಷೇರು ಮೌಲ್ಯ ಕುಸಿಯಿತು.

ಐತಿಹಾಸಿಕ: ಪ್ರಧಾನಿ ಮೋದಿ ಪ್ರಶಂಸೆ

ಆರ್ಥಿಕತೆಗೆ ಚೈತನ್ಯ ತುಂಬಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಕಟಿಸಿರುವ ಕಾರ್ಪೋರೇಟ್ ತೆರಿಗೆ ಕಡಿತದ ಕ್ರಮನ್ನು ಐತಿಹಾಸಿಕ ಎಂಬುದಾಗಿ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಇದು ೧೩೦ ಕೋಟಿ ಜನರಿಗೂ ವಿಜಯದ ಮೇಲಿನ ವಿಜಯ’ ಎಂದು ಹೇಳಿದರು.

’ಕಾರ್ಪೋರೇಟ್ ತೆರಿಗೆ ಕಡಿತದ ಕ್ರಮ ಚಾರಿತ್ರಿಕ. ಇದು ’ಮೇಕ್ ಇಂಡಿಯಾ’ ಉಪಕ್ರಮಕ್ಕೆ ಭಾರೀ ಪ್ರೋತ್ಸಾಹ ನೀಡಲಿದ್ದು, ವಿಶ್ವಾದ್ಯಂತದಿಂದ ಖಾಸಗಿ ಹೂಡಿಕೆಯನ್ನು ಆಕರ್ಷಿಸಲಿದೆ., ನಮ್ಮ ಖಾಸಗಿ ರಂಗದ ಸ್ಪರ್ಧಾತ್ಮಕತೆಯನ್ನು ಸುಧಾರಿಸಲಿದೆ, ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲಿದೆ. ಪರಿಣಾಮವಾಗಿ ೧೩೦ ಕೋಟಿ ಭಾರತೀಯರಿಗೂ ಗೆಲುವಿನ ಮೇಲೆ ಗೆಲುವು ಆಗಲಿದೆ  ಭಾರೀ ಪ್ರೋತ್ಸಾಹ ನೀಡಲಿದೆ’ ಎಂದು ಪ್ರಧಾನಿ ಟ್ವೀಟ್ ಮಾಡಿದರು.

’ಕಳೆದ ಕೆಲವು ವಾರಗಳಲ್ಲಿ ಮಾಡುತ್ತಿರುವ ಪ್ರಕಟಣೆಗಳು ನಮ್ಮ ಸರ್ಕಾರವು ವ್ಯವಹಾರಕ್ಕೆ ಭಾರತವನ್ನು ಉತ್ಪಮ ಸ್ಥಳವನ್ನಾಗಿ ಮಾಡುತ್ತಿದೆ. ಸಮಾಜದ ಎಲ್ಲ ವರ್ಗಗಳಿಗೂ ಅವಕಾಶಗಳನ್ನು ಒದಗಿಸಲಿದೆ ಮತ್ತು ಭಾರತವನ್ನು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸಲು ಸಮೃದ್ಧಿಯನ್ನು ಹೆಚ್ಚಿಸಲಿದೆ’ ಎಂದು ಪ್ರಧಾನಿ ಎರಡು ಟ್ವೀಟ್‌ಗಳಲ್ಲಿ ತಿಳಿಸಿದರು.

ಕುಸಿದಿದ್ದ ಆರ್ಥಿಕತೆ:

ಜೂನ್ ತಿಂಗಳಲ್ಲಿ ಕೊನೆಗೊಂಡ ತ್ರೈಮಾಸಿಕದಲ್ಲಿ ಬೆಳವಣಿಗೆಯು ಆರು ವರ್ಷಗಳಲ್ಲೇ ಅತ್ಯಂತ ಕೆಳಕ್ಕೆ, ಶೇಕಡಾ ೫ಕ್ಕೆ ಇಳಿದ ಹಿನ್ನೆಲೆಯಲ್ಲಿ ಆರ್ಥಿಕತೆಗೆ ಬಲ ತುಂಬಲು ಸರ್ಕಾರ ಪ್ರಕಟಿಸುತ್ತಿರುವ ಕ್ರಮಗಳಲ್ಲಿ ಶುಕ್ರವಾರದ ಪ್ರಕಟಣೆಗೆ ಇತ್ತೀಚಿನದಾಗಿದೆ.

ವಿಶ್ವದ ನಂ,೪ ಆಟೋಮೊಬೈಲ್ ಮಾರುಕಟ್ಟೆಯಾಗಿರುವ ಭಾರತದಲ್ಲಿ, ದುರ್ಬಲ ಗ್ರಾಹಕ ಬೇಡಿಕೆಯ ಪರಿಣಾಮವಾಗಿ ಭಾರತೀಯ ಆರ್ಥಿಕತೆಯು ಕಂಗೆಟ್ಟಿದೆ. ಆಗಸ್ಟ್ ತಿಂಗಳಲ್ಲಿ ಬೇಡಿಕೆ ಶೇಕಡಾ ೪೧ಕ್ಕೆ ಕುಸಿದಿದ್ದು, ಇದು ದಾಖಲೆ ಕುಸಿತವಾಗಿದೆ.

ಆಟೋಮೊಬೈಲ್, ಬಿಸ್ಕತ್ತು ಮತ್ತಿತರ ಕ್ಷೇತ್ರಗಳಲ್ಲಿ ಮಾರಾಟ ಕುಸಿತ, ಹಾಗೂ ಜಿಡಿಪಿ ಕುಸಿತದ ಹಿನ್ನೆಲೆಯಲ್ಲಿ ತೆರಿಗೆ ಇಳಿಸುವಂತೆ ವಿವಿಧ ಕ್ಷೇತ್ರಗಳಿಂದ ಸರ್ಕಾರಕ್ಕೆ ಒತ್ತಡ ಬಂದಿತ್ತು. ಜಿಡಿಪಿ ಕುಸಿತದ ಬೆನ್ನಲ್ಲೇ ಹಲವಾರು ಕಂಪೆನಿಗಳು ಉತ್ಪಾದನೆ ಸ್ಥಗಿತಗೊಳಿಸಿ ನೌಕರರನ್ನು ಮನೆಗೆ ಕಳುಹಿಸುವ ಕ್ರಮಕ್ಕೆ ಕೈಹಾಕಿದ್ದವು. ಪರಿಸ್ಥಿತಿಯನ್ನು ತಹಬಂದಿಗೆ ತರುವ ಸಲುವಾಗಿ ಸರ್ಕಾರವು  ಆರ್ಥಿಕ ಪ್ರೋತ್ಸಾಹದ ಅನೇಕ ಕ್ರಮಗಳನ್ನು ಪ್ರಕಟಿಸಿತ್ತು. ಸರ್ಕಾರದ ಕ್ರಮಗಳಿಂದ ವಸತಿ ಹಾಗೂ ರಫ್ತು ಕ್ಷೇತ್ರಕ್ಕೆ ಸಾಕಷ್ಟು ಪ್ರೋತ್ಸಾಹ ಲಭಿಸಿತ್ತು.

ಇತ್ತೀಚೆಗಷ್ಟೇ ಎಲ್ಲ ಕಂಪೆನಿಗಳ ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ ೩೦ರಿಂದ ಶೇಕಡಾ ೨೫ಕ್ಕೆ ಇಳಿಸುವಂತೆ ಸರ್ಕಾರದ ಸಮಿತಿಯೊಂದು ಶಿಫಾರಸು ಮಾಡಿತ್ತು. ತೆರಿಗೆ ಪಾವತಿ ಮೇಲಿನ ಮೇಲ್ತೆರಿಗೆಗಳನ್ನು (ಸೆಸ್) ರದ್ದು ಪಡಿಸುವಂತೆಯೂ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಅತಿಶ್ರೀಮಂತರ ಮೇಲಿನ ಮೇಲ್ತೆರಿಗೆಗಳನ್ನು ಸರ್ಕಾರ ಇಳಿಸಿತ್ತು. ಇದೀಗ ಕೇಂದ್ರವು ಕಾರ್ಪೋರೇಟ್ ತೆರಿಗೆ ದರವನ್ನೂ ಶೇಕಡಾ ೨೨ಕ್ಕೆ ಇಳಿಕೆ ಮಾಡಿರುವುದು ಈ ಕ್ಷೇತ್ರದಲ್ಲಿನ ಉತ್ಪಾದನೆ ಹೆಚ್ಚಳಕ್ಕೆ ಭಾರೀ ಒತ್ತು ನೀಡುವ ನಿರೀಕ್ಷೆ ಇದೆ.

ಭಾರತವು ವಿಶ್ವದಲ್ಲಿಯೇ ಅತಿ ಹೆಚ್ಚಿನ ಕಾರ್ಪೋರೇಟ್ ತೆರಿಗೆ ವಿಧಿಸುವ ದೇಶವಾಗಿದೆ. ಕಳೆದ ಮುಂಗಡಪತ್ರದಲಿ ಕೆಲವು ವಿನಾಯ್ತಿ ನೀಡಲಾಗಿದ್ದರೂ ಭಾರತವು ದುಬಾರಿ ಕಾರ್ಪೋರೇಟ್ ದೇಶವಾಗಿಯೇ ಉಳಿದಿತ್ತು. ಎಲ್ಲ ಕಂಪೆನಿಗಳಿಗೂ ಕಾರ್ಪೋರೇಟ್ ತೆರಿಗೆಯನ್ನು ಶೇಕಡಾ ೨೫ಕ್ಕೆ ಇಳಿಸಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಸದಸ್ಯ ಅಖಿಲೇಶ್ ರಂಜನ್ ನೇತೃತ್ವದ ಸಮಿತಿ ಕೂಡಾ ತೆರಿಗೆ ಕಡಿತಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಸಿತ್ತು.

ಪ್ರಸ್ತುತ ಸರ್ಕಾರವು ದೇಶೀಯ ಕಂಪೆನಿಗಳಿಗೆ ಶೇಕಡಾ ೩೦ರಷ್ಟು ಮತ್ತು ವಿದೇಶೀ ಕಂಪೆನಿಗಳಿಗೆ ಶೇಕಡಾ ೪೦ರಷ್ಟು ಕಾರ್ಪೋರೇಟ್ ತೆರಿಗೆಯನ್ನು ವಿಧಿಸುತ್ತಿದೆ. ಜೊತೆಗೆ ಶೇಕಡಾ ೪ರಷ್ಟು ಆರೋಗ್ಯ ಮತ್ತು ಶಿಕ್ಷಣದ ಮೇಲ್ತೆರಿಗೆ (ಸೆಸ್) ಕೂಡಾ ವಿಧಿಸಲಾಗುತ್ತಿದೆ.

September 20, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, Consumer Issues, Finance, Flash News, General Knowledge, Nation, News, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ