SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಭಾರತದ ನ್ಯಾಯಾಂಗವನ್ನು ನಂಬಿ, ಅಸಂಬದ್ಧ ಮಾತುಗಳನ್ನು ಬಿಡಿ


19 modi supreme court
ರಾಮಮಂದಿರ ವಿಚಾರದಲ್ಲಿ ಪ್ರಧಾನಿ ಮೋದಿ ಹಿತನುಡಿ

ನಾಸಿಕ್: ಜನರು ಭಾರತದ ನ್ಯಾಯಾಂಗದ ಮೇಲೆ ನಂಬಿಕೆ ಇಡಬೇಕು ಮತ್ತು ರಾಮ ಮಂದಿರಕ್ಕೆ ಸಂಬಂಧಿಸಿದಂತೆ ’ಅಸಂಬದ್ಧ’ ಮಾತುಗಳಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಬೃಹತ್ ಸಭೆಯಲ್ಲಿ 2019 ಸೆಪ್ಟೆಂಬರ್  19ರ ಗುರುವಾರ ಕಿವಿಮಾತು ಹೇಳಿದರು.

ಪ್ರಧಾನಿಯವರು ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದರು ಎಂಬುದು ತತ್‌ಕ್ಷಣಕ್ಕೆ ಸ್ಪಷ್ಟವಾಗಲಿಲ್ಲ.

೭೦ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿ – ಬಾಬರಿ ಮಸೀದಿ ಭೂ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಪ್ರತಿನಿದಿನವೂ ವಿಚಾರಣೆ ನಡೆಸುತ್ತಿರುವಾಗ ಈ ವ್ಯಕ್ತಿಗಳು ’ಅಡಚಣೆಗಳನ್ನು ಏಕೆ ಸೃಷ್ಟಿಸಬೇಕು’ ಎಂದು ಪ್ರಧಾನಿ ಅಚ್ಚರಿ ವ್ಯಕ್ತ ಪಡಿಸಿದರು.

’ಈ ’ಬಯಾನ್ ಬಹಾದುರ್’ ಎಲ್ಲಿಂದ ಬಂದರು ಎಂದು ನನಗೆ ಅಚ್ಚರಿಯಾಗುತ್ತಿದೆ? ಇವರು ಏಕೆ ಅಡಚಣೆಗಳನ್ನು ಸೃಷ್ಟಿಸುತ್ತಿದ್ದಾರೆ? ನಾವು ಸುಪ್ರೀಂಕೋರ್ಟ್, ಭಾರತದ ಸಂವಿದಾನ ಮತ್ತು ನ್ಯಾಯಾಂಗದ ಮೇಲೆ ವಿಶ್ವಾಸ ಇಡಬೇಕು. ದೇವರ ಮೇಲೆ ಆಣೆಇಟ್ಟು ಈ ಜನರಿಗೆ ನಾನು ಮನವಿ ಮಾಡುತ್ತಿದ್ದೇನೆ- ಭಾರತದ ನ್ಯಾಯಾಂಗದ ಮೇಲೆ ವಿಶ್ವಾಸ ಇಡಿ’ ಎಂದು ಪ್ರಧಾನಿ ಹೇಳಿದರು.

’ಸುಪ್ರೀಂಕೋರ್ಟ್ ಮತ್ತು ಅಲ್ಲಿ ತಮ್ಮ ವಾದಗಳನ್ನು ಮಂಡಿಸುತ್ತಿರುವ ಎಲ್ಲ ಜನರ ಮೇಲೂ ಗೌರವ ತೋರಿಸಿ’ ಎಂದು ಪ್ರಧಾನಿ ಜನತೆಯನ್ನು ಒತ್ತಾಯಿಸಿದರು.

ಸೋಮವಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕಾನೂನು ತರುವ ’ದಿಟ್ಟ ನಿರ್ಧಾರವನ್ನು’ ಕೇಂದ್ರ ಸರ್ಕಾರವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

೩೭೦ನೇ ವಿಧಿಯನ್ನು ರದ್ದು ಪಡಿಸಿದ ಕಾಶ್ಮೀರ ಕ್ರಮಕ್ಕಾಗಿ ಕೇಂದ್ರವನ್ನು  ಶ್ಲಾಘಿಸಿದ ಉದ್ಧವ್ ಠಾಕ್ರೆ ಇಂತಹುದೇ ದಿಟ್ಟತನವನ್ನು ರಾಮಮಂದಿರ ವಿಷಯದಲ್ಲೂ ತೋರಬೇಕು ಎಂದು ಹೇಳಿದ್ದರು.

’ಕೇಂದ್ರ ಸರ್ಕಾರವು ಕೋರ್ಟ್ ತೀರ್ಪಿನವರೆಗೆ ಕಾಯಬಾರದು ಮತ್ತು ತನ್ನ ಅಧಿಕಾರವನ್ನು ಚಲಾಯಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಕೇಂದ್ರವು ೩೭೦ನೇ ವಿಧಿಯನ್ನು ರದ್ದು ಪಡಿಸುವ ದಿಟ್ಟ ಹೆಜ್ಜೆಯನ್ನು ಇರಿಸಿದೆ. ರಾಮಮಂದಿರ ವಿಚಾರದಲ್ಲೂ ಕೇಂದ್ರವು ಇಂತಹವುದೇ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ’ ಎಂದು ಠಾಕ್ರೆ ಹೇಳಿದ್ದರು.

ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಗಾಗಿ ನಡೆಯಬೇಕಾದ ವಿವಾದಾತ್ಮಕ ಸ್ಥಾನ ಹಂಚಿಕೆ ಮಾತುಕತೆಗಳಿಗೆ ಮುನ್ನ ಮಿತ್ರ ಪಕ್ಷ ಬಿಜೆಪಿಯ ಮೇಲೆ ಒತ್ತಡ ಹಾಕುವ ಸಲುವಾಗಿ ಶಿವಸೇನೆ ಈ ಬೇಡಿಕೆ ಮುಂದಿಟ್ಟಿದೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಯಿತು.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ರಾಮಜನ್ಮಭೂಮಿ -ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಪ್ರಕರಣದ ವಾದ ಮಂಡನೆ ಪೂರ್ಣಗೊಳಿಸಲು ಬುಧವಾರ ಅಕ್ಟೋಬರ್ ೧೮ರ ಗಡುವು ನೀಡಿತ್ತು.

’ವಿಚಾರಣೆಗಳನ್ನು ಅಕ್ಟೋಬರ್ ೧೮ರ ಗಡುವಿನೊಳಗಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಂಟಿ ಯತ್ನಕ್ಕೆ ಸಹಕರಿಸಿ’ ಎಂದು ಸಿಜೆಐ ಗೊಗೋಯಿ ಅವರು ಕೋರಿದ್ದರು.

ಮಾತುಕತೆ ಮೂಲಕ ದಶಕಗಳಷ್ಟು ಹಳೆಯದಾದ ಪ್ರಕರಣದ ಇತ್ಯರ್ಥಕ್ಕಾಗಿ ನಡೆದ ಸಂಧಾನಯತ್ನ ವಿಫಲಗೊಂಡ ಬಳಿಕ, ದೈನಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ ತಿಂಗಳಲ್ಲಿ ಆರಂಭಿಸಿತ್ತು.

ನಾಲ್ಕು ಸಿವಿಲ್ ಖಟ್ಲೆಗಳಿಗೆ ಸಂಬಂಧಿಸಿದಂತೆ ೨೦೧೦ರಲ್ಲಿ ಅಯೋಧ್ಯೆಯ ೨.೭೭ ಎಕರೆ ಭೂಮಿಯನ್ನು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮಲಲ್ಲಾ ಅವರಿಗೆ ಸಮಾನವಾಗಿ ಮೂರುಭಾಗಗಳಾಗಿ ಹಂಚಿಕೆ ಮಾಡಬೇಕು ಎಂಬುದಾಗಿ ಅಲಹಾಬದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ೧೪ ಮೇಲ್ಮನವಿಗಳು ಸುಪ್ರೀಂಕೋರ್ಟಿಗೆ ಸಲ್ಲಿಕೆಯಾಗಿದ್ದವು.

September 19, 2019 - Posted by | ಅಯೋಧ್ಯೆ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, General Knowledge, India, Nation, News, Politics, Prime Minister, Spardha, supreme court | , , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ