SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೧೯೬೫, ೧೯೭೧ರ ತಪ್ಪು ಪುನರಾವರ್ತಿಸದಿರಿ, ಪಾಕ್‌ಗೆ ರಾಜನಾಥ್ ಸಿಂಗ್ ಎಚ್ಚರಿಕೆ


22 rajanath singh 370
ಪಾಕಿಸ್ತಾನ ಛಿದ್ರವಾಗುವುದನ್ನು ತಪ್ಪಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ

ನವದೆಹಲಿ: ೧೯೬೫ ಮತ್ತು ೧೯೭೧ರ ತಪ್ಪುಗಳನ್ನು ಪುನರಾವರ್ತಿಸುವುದರ ವಿರುದ್ಧ 2019 ಸೆಪ್ಟೆಂಬರ್ 22ರ ಭಾನುವಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ’ತನ್ನ ನೆಲದಲ್ಲೇ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದಕ್ಕಾಗಿ ಇನ್ನಷ್ಟು ಛಿದ್ರವಾಗುವ ಅಪಾಯವನ್ನು ಅದು ಎದುರುಹಾಕಿಕೊಳ್ಳುತ್ತಿದೆ’ ಎಂದು ಹೇಳಿದರು.

‘ಅವರು ೧೯೬೫ ಮತ್ತು ೧೯೭೧ರ ತಪ್ಪುಗಳನ್ನು ಪುನರಾವರ್ತನೆ ಮಾಡುವ ತಪ್ಪು ಮಾಡಬಾರದು. ಮಾಡಿದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಗತಿ ಏನಾದೀತು ಮತ್ತು ಬಲೂಚ್ ಮತ್ತು ಪಶ್ತೂನ್‌ಗಳ ವಿರುದ್ಧ ಅದು ಮಾಡುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಪರಿಣಾಮ ಏನಾದೀತು ಎಂದು ಅದು ಯೋಚಿಸಬೇಕು’ ಎಂದು ಅವರು ನುಡಿದರು.

‘ಇದು ಹೀಗೇ ಮುಂದುವರೆದರೆ, ಪಾಕಿಸ್ತಾನ ಛಿದ್ರ ಛಿದ್ರವಾಗದಂತೆ ರಕ್ಷಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ’ ಎಂದು ಬಿಹಾರದ ಪಾಟ್ನಾದಲ್ಲಿ  ಬಿಜೆಪಿ ಸಂಘಟಿಸಿದ್ದ  ’ಜನ ಜಾಗರಣ ಸಭೆ’ಯಲ್ಲಿ ರಾಜನಾಥ್ ಸಿಂಗ್ ಹೇಳಿದರು.

ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ ತಿಂಗಳಲ್ಲಿ ಆತ್ಮಹತ್ಯಾ ಬಾಂಬರ್ ೪೦ ಮಂದಿ ಸಿಆರ್‌ಪಿಎಫ್ ಯೋಧರನ್ನು ಹತ್ಯೆಗೈದಂದಿನಿಂದ ಉಭಯ ರಾಷ್ಟ್ರಗಳ ಬಾಂಧವ್ಯ ಬಿಗಡಾಯಿಸಿದೆ. ಈ ದಾಳಿಯ ಸೇಡು ತೀರಿಸಲು ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದವು.

ಪ್ರಸ್ತುತ ವರ್ಷ ಆಗಸ್ಟ್ ೫ರ ಬಳಿಕ ಭಾರತ ಮತ್ತು ಪಾಕಿಸ್ತಾನ ಈ ತಿಂಗಳ ಆದಿಯಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ  ಜಮ್ಮು ಮತ್ತು ಕಾಶ್ಮೀರದ ವಿಶೇಷ ಪ್ರಸ್ತಾವ ರದ್ದು ಪಡಿಸಿದ ವಿಚಾರದಲ್ಲಿ ಪರಸ್ಪರ ಘರ್ಷಿಸಿದ್ದವು.

ಗಡಿಯಾಚೆಯಿಂದ ಭಯೋತ್ಪಾದನೆಗೆ ಪ್ರಚೋದನೆ- ನೆರವು ನೀಡುವುದು ಸಂಪೂರ್ಣ ಸ್ಥಗಿತಗೊಳ್ಳುವವರೆಗೆ ಪಾಕಿಸ್ತಾನದ ಜೊತೆಗೆ ಮಾತುಕತೆ ಸಾಧ್ಯತೆಯನ್ನು ಕೂಡಾ ರಕ್ಷಣಾ ಸಚಿವರು ತಳ್ಳಿಹಾಕಿದರು.

‘ಭಯೋತ್ಪಾದನೆಗೆ ನೆರವು ನೀಡುವುದನ್ನು ಸ್ಥಗಿತಗೊಳಿಸಲು ಕ್ರಮಗಳನ್ನು ಕೈಗೊಂಡರೆ ಮಾತ್ರವೇ ಪಾಕಿಸ್ತಾನದ ಜೊತೆ ಮಾತುಕತೆ ಪುನಾರಂಭಗೊಳ್ಳುತ್ತದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಜನತೆ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಮತ್ತು ಮಾತುಕತೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರವೇ ನಡೆಯುತ್ತದೆ’ ಎಂದು ಅವರು ನುಡಿದರು.

ಸಂವಿಧಾನದ ೩೭೦ನೇ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಕೇಂದ್ರದ ನಿರ್ಧಾರದ ಮಹತ್ವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಳೆದ ತಿಂಗಳು ಬಿಜೆಪಿ ತಿಂಗಳ ಕಾಲದ ಜನಸಂಪರ್ಕ ಕಾರ್‍ಯಕ್ರಮವನ್ನು ಪ್ರಕಟಿಸಿತ್ತು.

೩೭೦ನೇ ವಿಧಿಯು ಕ್ಯಾನ್ಸರ್  ವ್ರಣದಂತೆ ಇತ್ತು. ಅದು ಜಮ್ಮು ಮತ್ತು ಕಾಶ್ಮೀರದಲ್ಲಿ ರಕ್ತಪಾತಕ್ಕೆ ಕಾರಣವಾಗಿತ್ತು ಎಂದು ರಾಜನಾಥ್ ಸಿಂಗ್ ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಜನಸಂಖ್ಯೆಯ ಮುಕ್ಕಾಲು ಭಾಗದದಷ್ಟು ಜನರು ೩೭೦ನೇ ವಿಧಿ ರದ್ದು ಪಡಿಸುವುದಕ್ಕೆ ಒಲವು ಹೊಂದಿದ್ದರು ಎಂದು ಸಚಿವರು ಪ್ರತಿಪಾದಿಸಿದರು.

‘ಅಧಿಕಾರದಲ್ಲಿ ಇರಲಿ ಅಥವಾ ಇಲ್ಲದೇ ಇರಲಿ, ೩೭೦ನೇ ವಿಧಿಗೆ ಸಂಬಂಧಿಸಿದಂತೆ ಬಿಜೆಪಿ ಎಂದೂ ತನ್ನ ನಿಲುವನ್ನು ಮೆದುಗೊಳಿಸಿರಲಿಲ್ಲ. ಅದನ್ನು ರದ್ದು ಪಡಿಸಿರುವುದು ಪಕ್ಷದ ಪ್ರಾಮಾಣಿಕತೆ ಮತ್ತು ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸಿದೆ’ ಎಂದು ಸಿಂಗ್ ಹೇಳಿದರು.

ಮುಂಬೈಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಹಾರಾಷ್ಟ್ರದಲ್ಲಿ ಅಕ್ಟೋಬರಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳು ೩೭೦ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಣಯದ ಮೇಲಿನ ಜನಮತಗಣನೆ ಎಂಬುದಾಗಿ ಹೇಳಿದ ಸ್ವಲ್ಪ ಹೊತ್ತಿನಲ್ಲೇ ರಾಜನಾಥ್ ಸಿಂಗ್ ಅವರ ಹೇಳಿಕೆ ಹೊರಬಿದ್ದಿತು.

September 22, 2019 - Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Politics, Spardha, Terror, World | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ