SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಸ್ಮಾರ್ಟ್ ಫೋನ್ ಬಿಸಾಕಿ ಬೇಸಿಕ್ ಫೋನ್ ಬಳಸಬೇಕಿನ್ನಿಸುತ್ತಿದೆ: ನ್ಯಾಯಮೂರ್ತಿ ದೀಪಕ್ ಮಿಶ್ರ


24 sc Aadhar-with-social-media
ಸಾಮಾಜಿಕ ಮಾಧ್ಯಮದ  ದುರುಪಯೋಗ ತಡೆಗೆ ಕೇಂದ್ರ ಕ್ರಮ ಅಗತ್ಯ: ಸುಪ್ರೀಂಕೋರ್ಟ್

ನವದೆಹಲಿ: ತಂತ್ರಜ್ಞಾನವು ಅಪಾಯಕಾರಿ ತಿರುವನ್ನು ಪಡೆದುಕೊಂಡಿದೆ ಎಂಬುದಾಗಿ 2019 ಸೆಪ್ಟೆಂಬರ್ 24ರ ಮಂಗಳವಾರ ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್, ರಾಷ್ಟ್ರದಲ್ಲಿ ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ನಿಗ್ರಹಿಸಲು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಬೇಕಾದ ಕಾಲಾವಕಾಶದ ಬಗ್ಗೆ ಮೂರು ವಾರಗಳ ಒಳಗಾಗಿ ತನಗೆ ತಿಳಿಸುವಂತೆ ನಿರ್ದೇಶಿಸಿತು.

ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠವು ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳು ಸಂದೇಶ ಅಥವಾ ಅಂತರ್ಜಾಲ ಮಾಹಿತಿಯ ಸೃಷ್ಟಿಕರ್ತರನ್ನು ಪತ್ತೆಹಚ್ಚಲು ವಿಫಲವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿ, ಈಗ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕು ಎಂದು ಹೇಳಿತು.

ಈ ವೈಜ್ಞಾನಿಕ ವಿಷಯದ ಬಗ್ಗೆ ನಿರ್ಧರಿಸಿಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಸಮರ್ಥವಲ್ಲ. ಇಂತಹ ವಿಷಯಗಳ ಬಗ್ಗೆ ವ್ಯವಹರಿಸಲು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದು ಸರ್ಕಾರದ ಕೆಲಸ ಎಂದು ಹೇಳಿತು.

ತಾಂತ್ರಿಕ ಪ್ರಗತಿಯಲ್ಲಿನ ಕುಂದುಕೊರತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತ ಪಡಿಸಿದ ಕೋರ್ಟ್, ‘ತಂತ್ರಜ್ಞಾನ ಬೆಳೆಯುತ್ತಿರುವ ರೀತಿ ಅಪಾಯಕಾರಿ. ಸಾಮಾಜಿಕ ಮಾಧ್ಯಮಗಳಿಗಾಗಿ ಮಾರ್ಗದರ್ಶಿ ಸೂತ್ರ ರಚಿಸುವ ಸಂಬಂಧ ಸರ್ಕಾರ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಹೇಳಿತು.

ವಿವಿಧ ಹೈಕೋರ್ಟ್‌ಗಳಲ್ಲಿ ಇರುವ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್ ಜೊತೆಗೆ ಜೋಡಿಸುವುದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಸುಪ್ರೀಂಕೋರ್ಟಿಗೆ ವರ್ಗಾವಣೆ ಕೋರಿದ ಮನವಿಗಳ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ದೀಪಕ್ ಗುಪ್ತ ಅವರು, ‘ವಿಷಯದ ಆಳಕ್ಕೆ ಹೋಗುತ್ತಿದ್ದಂತೆಯೇ ತಂತ್ರಜ್ಞಾನ ಬೆಳವಣಿಗೆ ಹೊಂದುತ್ತಿರುವ ಅಪಾಯಕಾರಿ ಮಾರ್ಗದ ಅರಿವು ನಿಮಗೆ ಆಗುತ್ತದೆ.  ನಾನು ಸ್ಮಾರ್ಟ್ ಫೋನನ್ನೇ ಬಿಟ್ಟು ಬಿಟ್ಟು ಹಿಂದಿನ ಬೇಸಿಕ್ ಫೋನ್‌ಗೆ ವಾಪಸಾಗುವ ಬಗ್ಗೆ ಯೋಚಿಸುತ್ತಿದ್ದೇನೆ’ ಎಂದು ಹೇಳಿದರು.

ಅಂತರ್ಜಾಲದಲ್ಲಿ ಅಪಾಯಕಾರಿ ವಸ್ತುಗಳು ಸುಲಭವಾಗಿ ಲಭಿಸುತ್ತಿರುವ ಬಗ್ಗೆ ವಿವರಿಸಿದ ನ್ಯಾಯಮೂರ್ತಿ, ‘ನನಗೆ ಡಾರ್ಕ್ ವೆಬ್ ತಲುಪುವುದು ಹೇಗೆ ಎಂಬುದಾಗಿ ಯಾರೋ ಒಬ್ಬರು ಹೇಳಿಕೊಟ್ಟರು. ಅದೆಷ್ಟು ಹಾನಿಕಾರಕವಾಗಬಲ್ಲುದು ಎಂಬ ಅರಿವು ಆಗ ನನಗಾಯಿತು. ವಿಷಯ ನನ್ನ ಮುಂದೆ ಬಂದ ಬಳಿಕ ನಾನು ಈ ಬಗ್ಗೆ ಇನ್ನಷ್ಟು ಅಳವಾಗಿ ಅಗೆಯಲು ಆರಂಭಿಸಿದೆ. ಅರ್ಧ ಗಂಟೆಯ ಒಳಗಾಗಿ ಎಕೆ-೪೭ನ್ನು ನಾನು ಖರೀದಿಸಬಹುದು ಎಂಬುದು ನನಗೆ ಗೊತ್ತಾಯಿತು’ ಎಂದು ಹೇಳಿದರು.

ಸಾಮಾಜಿಕ ಮಾಧ್ಯಮವನ್ನು ನಿಯಂತ್ರಿಸಲು ಮಾರ್ಗದರ್ಶಿ ಸೂತ್ರಗಳನ್ನು ತುರ್ತಾಗಿ ರಚಿಸಬೇಕಾದ ಅಗತ್ಯವನ್ನು ಒತ್ತಿ ಹೇಳಲು ’ದೇಶದ ಭದ್ರತೆ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಕೆಲವು ಪ್ರಕರಣಗಳೂ ಇರಬಹುದು. ಮಾರ್ಗದರ್ಶಿ ಸೂತ್ರಗಳನ್ನು ಹೊಂದಿರಬೇಕಾದ ಅಗತ್ಯ ನಮಗಿದೆ. ನನ್ನ ಖಾಸಗಿತನವೂ ಮುಖ್ಯ ಮತ್ತು ಅದನ್ನು  ರಕ್ಷಿಸಬೇಕು. ಈ ಎಲ್ಲ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ನ್ಯಾಯಮೂರ್ತಿ ನುಡಿದರು.

ಮಾರ್ಗದರ್ಶಿ ಸೂತ್ರವನ್ನು ರಚಿಸುವಾಗ ವ್ಯಕ್ತಿಗಳ ಖಾಸಗಿತನ ಮತ್ತು ರಾಷ್ಟ್ರದ ಸಾರ್ವಭೌಮತೆಯ ಸಮತೋಲನವನ್ನು ಹಾಗೂ ವ್ಯಕ್ತಿಗಳ ಗೌರವವನ್ನೂ ಉಳಿಸಿಕೊಳ್ಳಬೇಕು. ಸರ್ಕಾರದ ನೀತಿಯು ಈ ಅಂಶಗಳನ್ನೂ ನಿಯಮಾವಳಿಗಳ ರಚನೆ ಸಂದರ್ಭದಲ್ಲಿ ಗಮನಿಸಬೇಕು’ ಎಂದೂ ಕೋರ್ಟ್ ಹೇಳಿತು.

ನಕಲಿ ಸುದ್ದಿಗಳು ಮಾಡಬಹುದಾದ ಹಾನಿಯ ಬಗ್ಗೆ ಕಳವಳ ವ್ಯಕ್ತ ಪಡಿಸಿದ ಸುಪ್ರೀಂಕೋರ್ಟ್ ’ಇಂತಹ ಸುದ್ದಿಗಳ ಸೃಷ್ಟಿಕರ್ತರನ್ನು ಪತ್ತೆ ಹಚ್ಚಲೇಬೇಕು. ಸಂಕೇತೀಕರಿಸುವ (ಎನ್‌ಕ್ರಿಪ್ಟ್ ಮಾಡುವ) ತಂತ್ರಜ್ಞಾನ ಇದೆ ಎಂದಾದರೆ ಅದನ್ನು ಅಸಂಕೇತೀಕರಿಸುವ ಅಥವಾ ಸಂಕೇತವನ್ನು ಬಿಡಿಸುವ (ಡಿಕ್ರಿಪ್ಟ್ ಮಾಡುವ) ತಂತ್ರಜ್ಞಾನವೂ ಇರಲೇಬೇಕು’ ಎಂದು ಸುಪ್ರೀಂಕೋರ್ಟ್ ಹೇಳಿತು.

ಆಗಸ್ಟ್ ೨೦ರಂದು ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್ ಜೊತೆಗೆ ಜೋಡಿಸುವುದಕ್ಕೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಇರುವ ಪ್ರಕರಣಗಳನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಫೇಸ್ ಬುಕ್ ಇನ್ ಕಾರ್ಪೋರೇಷನ್ ಮಾಡಿದ ಮನವಿ ಬಗ್ಗೆ ಗೂಗಲ್, ವಾಟ್ಸಪ್, ಟ್ವಿಟ್ಟರ್, ಯೂಟ್ಯೂಬ್ ಮತ್ತು ಇತರರಿಂದ ಸುಪ್ರೀಂಕೋರ್ಟ್ ಪ್ರತಿಕ್ರಿಯೆ ಕೋರಿತ್ತು.

ತಮ್ಮ ಮಾಹಿತಿಯನ್ನು ಹಂಚಿಕೊಳ್ಳುವಂತೆ ತನಿಖಾ ಸಂಸ್ಥೆಗಳು ಸೇವಾದಾರ ಸಂಸ್ಥೆಗಳಿಗೆ ಸೂಚಿಸಬಹುದೇ ಎಂಬ ವಿಚಾರವನ್ನು  ಈ ವಿಷಯಗಳು ಜಾಗತಿಕ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸುಪ್ರೀಂಕೋರ್ಟ್ ತೀರ್ಮಾನಿಸಬೇಕು ಎಂದು ಫೇಸ್ ಬುಕ್ ಇಂಕ್ ಪ್ರತಿಪಾದಿಸಿತ್ತು.

ವಿವಿಧ ಹೈಕೋರ್ಟ್‌ಗಳು ಈ ವಿಷಯದಲ್ಲಿ ವಿರುದ್ಧಾಭಿಪ್ರಾಯದ ನಿಲುವುಗಳನ್ನು ವ್ಯಕ್ತ ಪಡಿಸಿವೆ. ಆದ್ದರಿಂದ ಏಕಾಭಿಪ್ರಾಯದ ಸಲುವಾಗಿ  ಪ್ರಕರಣಗಳನ್ನು ಸುಪ್ರೀಂಕೋರ್ಟ್ ಅಲಿಸುವುದು ಒಳಿತು ಎಂದು ಸಾಮಾಜಿಕ ಮಾಧ್ಯಮ ದೈತ್ಯ ಹೇಳಿತ್ತು.

ಮದ್ರಾಸ್ ಹೈಕೋರ್ಟಿನಲ್ಲಿ ಎರಡು, ಬಾಂಬೆ ಹೈಕೋರ್ಟಿನಲ್ಲಿ ಒಂದು ಮತ್ತು ಮಧ್ಯಪ್ರದೇಶ ಹೈಕೋರ್ಟಿನಲ್ಲಿ ಒಂದು ಪ್ರಕರಣು ಸೇರಿದಂತೆ ಒಟ್ಟು ನಾಲ್ಕು ಪ್ರಕ್ರರಣಗಳು ಇವೆ ಮತ್ತು ಇವೆಲ್ಲವುಗಳ ಪ್ರಾರ್ಥನೆ ಒಂದೇ ರೀತಿಯದಾಗಿವೆ ಎಂದು ಫೇಸ್‌ಬುಕ್ ಪ್ರತಿಪಾದಿಸಿತ್ತು.

September 24, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸಾಮಾಜಿಕ  ಮಾಧ್ಯಮ, ಸುಪ್ರೀಂಕೋರ್ಟ್, Consumer Issues, Education, Finance, Flash News, General Knowledge, India, Nation, News, Spardha, supreme court | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ