SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ: ಮತ್ತೆರಡು ಬಾರಿ ಟ್ರಂಪ್ ಪುನರುಚ್ಚಾರ


Donald Trump, Narendra Modi
ಟ್ರಂಪ್ ಬಾಯಿಯಲ್ಲಿ ತನ್ನ ಮಾತು ಉದುರಿಸಲು ಯತ್ನಿಸಿದ ಪಾಕ್‌ಗೆ ಮುಖಭಂಗ

ನ್ಯೂಯಾರ್ಕ್: ಕಾಶ್ಮೀರ ವಿವಾದ ಇತ್ಯರ್ಥಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಧಾನಕಾರನಾಗಲು ತಾನು ಸಿದ್ಧ ಎಂಬುದಾಗಿ 2019 ಸೆಪ್ಟೆಂಬರ್ 24ರಂದು ೨೪ ಗಂಟೆಗಳ ಒಳಗಾಗಿ ಎರಡು ಬಾರಿ ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’ಆದರೆ ಉಭಯ ರಾಷ್ಟ್ರಗಳು ಒಪ್ಪಿ ಬಯಸಿದರೆ ಮಾತ್ರ’ ಎಂಬ ಶರತ್ತು ವಿಧಿಸಿ ಬುದ್ದಿವಂತಿಕೆ ಮೆರೆದರು. ಇದೇ ವೇಳೆಗೆ ಪಾಕಿಸ್ತಾನಕ್ಕೆ ಬೇಕಾದ ಮಾತುಗಳನ್ನು ತನ್ನ ಬಾಯಿಯಿಂದ ಉದುರಿಸಲು ಯತ್ನಿಸಿದ ಪಾಕ್ ಪತ್ರಕರ್ತನಿಗೆ ಅವರು ತಿರುಗೇಟು ಕೊಟ್ಟರು.

ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯ ವೇಳೆಯಲ್ಲಿ ಜಮ್ಮು -ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆ ಮಹಾಸಭೆಯಲ್ಲಿನ ತಮ್ಮ ಭಾಷಣಕ್ಕೆ ಮುನ್ನ ಪುನಃ ಉಭಯ ದೇಶಗಳು ಬಯಸಿದರೆ ತಾನು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಹೇಳಿದರು. ವಿಶ್ವಸಂಸ್ಥೆ ಮಹಾ ಅಧಿವೇಶನದ ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತುಕತೆ ನಡೆಸಿದ ಟ್ರಂಪ್ ಭಯೋತ್ಪಾದನೆಗೆ ತಿರುಗೇಟು ಕೊಡಲು ಮೋದಿ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಶ್ಲಾಘಿಸಿದರು..

೨೪ ಗಂಟೆಗಳಲ್ಲಿ ಎರಡನೇ ಬಾರಿ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡುವುದರೊಂದಿಗೆ ಟ್ರಂಪ್ ಅವರು ಪ್ರಸ್ತುತ ವರ್ಷದಲ್ಲಿ ಒಟ್ಟು ನಾಲ್ಕು ಬಾರಿ ಈ ಪ್ರಸ್ತಾಪ ಮಾಡಿದಂತಾಯಿತು.

ಭಾರತವನ್ನು ಕಡೆಗಣಿಸುವಂತಿಲ್ಲ, ಪಾಕಿಸ್ತಾನವನ್ನು ತೆಗಳುವಂತಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದ ಟ್ರಂಪ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನಕ್ಕೆ ಬೇಕಾದ ಹೇಳಿಕೆಯನ್ನು ಟ್ರಂಪ್ ಬಾಯಿಯಿಂದ ಹೊರಡಿಸಲು ಯತ್ನಿಸಿದ ಪಾಕಿಸ್ತಾನದ ಪತ್ರಕರ್ತನಿಗೆ ’ನೀವು ಏನನ್ನು ಯೋಚಿಸುತ್ತಿದ್ದೀರೋ ಅದನ್ನು ಹೇಳುತ್ತಿದ್ದೀರಿ. ನನಗೆ ಪ್ರಶ್ನೆ ಕೇಳುತ್ತಿಲ್ಲ ಹೇಳಿಕೆ ನೀಡುತ್ತಿದ್ದೀರಿ’ ಎಂದು ಕಪಾಳಕ್ಕೆ ಭಾರಿಸುವಂತೆ ಉತ್ತರಿಸಿದರು.

‘ಭಾರತವೇ ಆಕ್ರಮಣಕಾರ, ಪಾಕಿಸ್ತಾನ ಶಾಂತಿದೂತ’ ಎಂಬುದಾಗಿ ಬಣ್ಣಿಸುತ್ತಾ ಟ್ರಂಪ್ ಅವರಿಗೆ ಪ್ರಶ್ನೆ ಕೇಳಲು ಆ ಪತ್ರ ಕರ್ತ ಯತ್ನಿಸಿದ್ದ.

ಇಷ್ಟು ಸಾಲದ್ದಕ್ಕೆ, ಇಮ್ರಾನ್ ಖಾನ್ ಅವರತ್ತ ತಿರುಗಿದ ಟ್ರಂಪ್ ’ಇಂತಹ ಪತ್ರಕರ್ತರನ್ನು ಎಲ್ಲಿಂದ ಹುಡುಕಿ ತರುತ್ತೀರಿ? ಎಂದು ಪ್ರಶ್ನಿಸಿದರು. ಬಳಿಕ ಪತ್ರಕರ್ತನತ್ತ ತಿರುಗಿ ’ನೀವು ಇಮ್ರಾನ್ ಖಾನ್ ತಂಡದವರಾ?’ ನೇರವಾಗಿ ಪ್ರಶ್ನಿಸಿದರು.

ಇದೇ ವೇಳೆಯಲ್ಲಿ ಇನ್ನೊಬ್ಬ ಪತ್ರಕರ್ತ ’ನೀವೇನಾದರೂ ಕಾಶ್ಮೀರ ವಿವಾದ ಬಗೆ ಹರಿಸಿದರೆ ನಿಮಗೆ ನೊಬೆಲ್ ಪ್ರಶಸ್ತಿ ಕೊಡಬೇಕು’ ಎಂದು ಲೇವಡಿ ಮಾಡಲು ಯತ್ನಿಸಿದರು.

ಇದಕ್ಕೆ ಉತ್ತರಿಸಿದ ಟ್ರಂಪ್ ’ಪ್ರಶಸ್ತಿ ನೀಡುವವರು ನ್ಯಾಯವಾಗಿ ಕೊಟ್ಟರೆ ಹಲವು ವಿಚಾರಗಳಿಗಾಗಿ ನನಗೆ ನೊಬೆಲ್ ಪ್ರಶಸ್ತಿ ಸಿಗಬೇಕು. ಆದರೆ ನ್ಯಾಯವಾಗಿ ಪ್ರಶಸ್ತಿ ಕೊಡುವುದಿಲ್ಲ. ಹೀಗಾಗಿ ಒಬಾಮಾಗೂ ಪ್ರಶಸ್ತಿ ಸಿಕ್ಕಿತು’ ಎಂದು ಹೇಳಿದರು.

ಉಭಯರು ಒಪ್ಪಿದರೆ ಮಧ್ಯಸ್ಥಿಕೆ: ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರ ಸಮಸ್ಯೆ ಇತ್ಯರ್ಥ ಮಾಡಲು ಮಧ್ಯಸ್ಥಿಕೆಗೆ ಸಿದ್ಧ ಎಂದು ಪುನರುಚ್ಚರಿಸಿದ ಟ್ರಂಪ್ ’ಆದರೆ ಭಾರತ ಮತ್ತು ಪಾಕಿಸ್ತಾನ ಉಭಯ ರಾಷ್ಟ್ರಗಳೂ ಒಪ್ಪಿದರೆ ಮಾತ್ರ’ ಎಂದು ಎಚ್ಚರಿಕೆಯ ಹೇಳಿಕೆ ನೀಡಿದರು.

ವಿಶ್ವ ಸಂಸ್ಥೆಯ ೭೪ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಅಮೆರಿಕ್ಕೆ ತೆರಳಿದ್ದ ಇಮ್ರಾನ್ ಖಾನ್ ಅವರ ಜೊತೆಗಿನ ಮಾತುಕತೆಗಳ ಕಾಲದಲ್ಲಿ ಟ್ರಂಪ್ ಅವರು ಈ ಹೇಳಿಕೆ ನೀಡಿದರು.

24 trump imran khan
ಜಮ್ಮು-ಕಾಶ್ಮೀರ ವಿಷಯದ ಬಗ್ಗೆ ಮಧ್ಯಸ್ಥಿಕೆ ವಹಿಸಲು ಅವಕಾಶ ಸಿಕ್ಕಿದರೆ ನಾನು ಸಮಸ್ಯೆ ಬಗೆಹರಿಸಲು ಸಿದ್ದನಿದ್ದೇನೆ. ಈ ವಿವಾದವೊಂದು ಸಂಕೀರ್ಣ ವಿಚಾರ. ಈ ಹಿಂದೆಯೇ ಪಾಕ್-ಭಾರತದ ನಡುವೇ ಕಾಶ್ಮೀರದ ಸಮಸ್ಯೆ ಶುರುವಾಗಿದೆ. ಹಾಗಾಗಿ ಇದಕ್ಕೊಂದು ಅಂತ್ಯ ಹಾಡಬೇಕಿದೆ. ಇಬ್ಬರೂ ಒಪ್ಪಿದರೆ ನಾನು ಮಧ್ಯಸ್ಥಿಕೆಗೆ ಸಿದ್ದನಿದ್ದೇನೆ ಎಂದು ಟ್ರಂಪ್ ಹೇಳಿದರು.

ಇದಕ್ಕೂ ಮುನ್ನ, ಹ್ಯೂಸ್ಟನ್‌ನಲ್ಲಿ ನಡೆದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾರತಕ್ಕೆ ಸಂಪೂರ್ಣ ನೆರವು ನೀಡುವ ಭರವಸೆಯನ್ನು ಟ್ರಂಪ್ ನೀಡಿದ್ದರು. ಭಾರತದ ಪ್ರಧಾನಿ ಮೋದಿಯವರ ಜೊತೆಗೆ ತಾವು ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಭಾರತೀಯ ಮೂಲದ ಅಮೆರಿಕನ್ನರ ಕಾರ್‍ಯಕ್ರಮದಲ್ಲಿ ಟ್ರಂಪ್ ಈ ಹೇಳಿಕೆ ನೀಡಿದ್ದರು.

ಆ ಬಳಿಕ  ಇಮ್ರಾನ್ ಖಾನ್ ಭೇಟಿ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಮಸ್ಯೆಗೆ ತಾರ್ಕಿಕ ಅಂತ್ಯ ಕಾಣಿಸಲು ಮುಂದಾದ ಟ್ರಂಪ್ ನಡೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ವರದಿಗಳು ಹೇಳಿದವು.

ಈ ಹಿಂದೆ ಜಮ್ಮು-ಕಾಶ್ಮೀರದ ವಿಚಾರವನ್ನು ಚರ್ಚಿಸಲು ಪಾಕ್ ಮತ್ತು ಭಾರತ ಸದ್ಯದಲ್ಲೇ ಮುಖಾಮುಖಿಯಾಗಲಿದೆ ಎಂದು ಹೇಳಲಾಗಿತ್ತು. ಅಮೆರಿಕದ ಅಧ್ಯಕ್ಷ ಟ್ರಂಪ್ ನೇತೃತ್ವದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಭೆ ಸೇರಲಿದ್ದಾರೆ ಎಂದು ಹೇಳಲಾಗಿತ್ತು.

ಅದರ ಮಧ್ಯದಲ್ಲೇ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಬಿಕ್ಕಟ್ಟಿಗೆ ಕಾರಣವಾಗಿರುವ ಜಮ್ಮು-ಕಾಶ್ಮೀರದ ಕಗ್ಗಂಟಿಗೆ ಪರಿಹಾರ ಹುಡುಕಲು ತಾನು ಮಧ್ಯಪ್ರವೇಶ ಮಾಡಬಯಸುವುದಾಗಿ ಡೊನಾಲ್ಟ್ ಟ್ರಂಪ್ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ಭಾರತ ಸರ್ಕಾರ ಅಲ್ಲಗಳೆದಿತ್ತು. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ದ್ವಿಪಕ್ಷೀಯ ಸಮಸ್ಯೆಯಾಗಿದೆ. ಇದರಲ್ಲಿ ಮೂರನೇ ಶಕ್ತಿಯ ಪ್ರವೇಶಕ್ಕೆ ಅವಕಾಶ ಇಲ್ಲ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟವಾಗಿ ಹೇಳಿತ್ತು.

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕಾಗಿ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಅಮೆರಿಕ ಸಂಧಾನಕಾರನಾಗಿ ಕಾರ್ಯನಿರ್ವಹಿಸಲು ಇಚ್ಛಿಸುತ್ತದೆ. ಭಾರತದ ಪ್ರಧಾನಿಯೇ ತಮಗೆ ಮನವಿ ಮಾಡಿದ್ದಾರೆ ಎಂದು ಟ್ರಂಪ್ ಹೇಳಿದ್ದರು. ಇಮ್ರಾನ್ ಖಾನ್ ಅವರ ಅಮೆರಿಕ ಭೇಟಿ ವೇಳೆ ಅವರು ಈ ಮಾತುಗಳನ್ನಾಡಿದ್ದರು.

ಭಾರತದ ಆಂತರಿಕ ವಿಚಾರದಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದ್ದರೂ ಭಾರತದ ಪ್ರಧಾನಿ ನರೇಂದ್ರ ಮೋದಿ ಮೌನವಾಗಿದ್ದಾರೆಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ, ಭಾರತದ  ವಿದೇಶಾಂಗ ಸಚಿವಾಲಯ ಸ್ಪಷ್ಟನೆ ನೀಡಿ, ಕಾಶ್ಮೀರ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡುವುದಾಗಿ ಟ್ರಂಪ್ ಅವರು ಯಾವ ಪ್ರಸ್ತಾವವನ್ನೂ ಮುಂದಿಟ್ಟಿಲ್ಲ’ ಎಂದು ಹೇಳಿತ್ತು.

‘ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಗೆ ಅನುಗುಣವಾಗಿಯೇ ಪಾಕಿಸ್ತಾನದೊಂದಿಗಿನ ಎಲ್ಲಾ ಸಮಸ್ಯೆಗಳನ್ನೂ ದ್ವಿಪಕ್ಷೀಯವಾಗಿಯೇ ಬಗೆಹರಿಸಿಕೊಳ್ಳುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇವೆ’ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ತಿಳಿಸಿದ್ದರು.

September 24, 2019 - Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Education, Flash News, General Knowledge, India, Nation, News, Pakistan, Politics, Prime Minister, Spardha, Terror, World | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ