SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮಾರುಕಟ್ಟೆಯಲ್ಲಿ ಹಣ ಹೂಡಬೇಕೆ? ಭಾರತಕ್ಕೆ ಬನ್ನಿ


25 modi bloomberg
ಅಮೆರಿಕದ ಕಾರ್ಪೋರೇಟ್‌ಗಳಿಗೆ ಪ್ರಧಾನಿ ಮೋದಿ ಆಹ್ವಾನ

ನ್ಯೂಯಾರ್ಕ್: ಜಾಗತಿಕ ವ್ಯಾಪಾರೋದ್ಯಮಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ 2019 ಸೆಪ್ಟೆಂಬರ್ 25ರ ಬುಧವಾರ ಇಲ್ಲಿ ಆಹ್ವಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವು ಕಾರ್ಪೋರೇಟ್ ತೆರಿಗೆ ಇಳಿಸುವ ಚಾರಿತ್ರಿಕ ಕ್ರಮದ ಮೂಲಕ ಭಾರತದಲ್ಲಿ ಹಣ ಹೂಡಿಕೆಗೆ ಸುವರ್ಣಾವಕಾಶವನ್ನು ನೀಡಿದೆ ಎಂದು ಹೇಳಿದರು.

ಬ್ಲೂಮ್ ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂ ಕಾರ್ಯಕ್ರಮದಲ್ಲಿ ಜಾಗತಿಕ ವ್ಯಾಪಾರೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ವ್ಯಾಪಾರೋದ್ಯಮ ಪರಿಸರವನ್ನು ಸುಧಾರಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

‘ರಾಷ್ಟ್ರದಲ್ಲಿ ಹೂಡಿಕೆಗೆ ಸುವರ್ಣಾವಕಾಶವನ್ನು ಭಾರತವು ನೀಡಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನೀವು ಬಯಸುವುದಾದರೆ ಭಾರತಕ್ಕೆ ಬನ್ನಿ. ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಮೂಲಸವಲತ್ತುಗಳಿರುವ ಯಾವುದಾದರೂ ಒಂದು ಕಡೆ ನೀವು ಹೂಡಿಕೆ ಮಾಡಬಯಸುವಿರಾದರೆ ಭಾರತಕ್ಕೆ ಬನ್ನಿ’ ಎಂದು ಪ್ರಧಾನಿ ಜಾಗತಿಕ ಕಾರ್ಪೋರೇಟ್‌ಗಳಿಗೆ ಆಹ್ವಾನ ನೀಡಿದರು.

ಈ ತಿಂಗಳ ಆದಿಯಲ್ಲಿ ಸರ್ಕಾರವು ವಾಸ್ತವಿಕ ಕಾರ್ಪೋರೇಟ್ ತೆರಿಗೆ ದರವನ್ನು ಶೇಕಡಾ ೩೫ರಿಂದ ಶೇಕಡ ೨೫.೧೭ಕ್ಕೆ ಇಳಿಸಿತ್ತು. ತನ್ಮೂಲಕ ತೆರಿಗೆ ರಂಗದಲ್ಲಿ ಪ್ರಮುಖ ಜಾಗತಿಕ ಆರ್ಥಿಕತೆಗಳಿಗೆ ಭಾರತದ ಆರ್ಥಿಕತೆಯನ್ನು ಸಮಾನವಾಗುವಂತೆ ಮಾಡಿತ್ತು.

ಸುಮಾರು ೫೦ ದೇಶಗಳ ಮುಖ್ಯಸ್ಥರು ಮತ್ತು ೨೦೦ ಸಿಇಒಗಳು ಪಾಲ್ಗೊಂಡಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತವು ತನ್ನ ನಗರಗಳನ್ನು ಅತ್ಯಂತ ವೇಗವಾಗಿ ಆಧುನೀಕರಿಸುತ್ತಿದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಾಗರಿಕ ಮಿತ್ರ ಮೂಲಸವಲತ್ತುಗಳೊಂದಿಗೆ ಅವುಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಹೇಳಿದರು.

‘ಹೀಗೆ ನೀವು ನಗರೀಕರಣದಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ ಭಾರತಕ್ಕೆ ಬನ್ನಿ’ ಎಂದು ಅವರು ನುಡಿದರು.

ಭಾರತವು ತನ್ನ ರಕ್ಷಣಾ ಕೈಗಾರಿಕೆಯನ್ನೂ ’ಹಿಂದೆಂದೂ ಇಲ್ಲದಂತೆ’ ಮುಕ್ತಗೊಳಿಸಿದೆ ಮತ್ತು ಈ ರಂಗದಲ್ಲಿ ಹೂಡಿಕೆಗಳನ್ನು ಕೋರಿದೆ ಎಂದು ಮೋದಿ ನುಡಿದರು.

ವ್ಯವಹಾರ ಚಿತ್ತವೃತ್ತಿಯನ್ನು ಸುಧಾರಿಸಲು ಭಾರತ ಸರ್ಕಾರವು ತನ್ನ ಎರಡನೇ ಅವಧಿಯಲ್ಲಿ ೫೦ ಕಾನೂನುಗಳನ್ನು ಕೂಡಾ ತಿದ್ದುಪಡಿ ಮಾಡಿ ವ್ಯವಹಾರ ನಡೆಸುವುದನ್ನು ಸರಳಗೊಳಿಸಿದೆ.

ಭಾರತದಲ್ಲಿ ವ್ಯವಹಾರವನ್ನು ಮತ್ತು ಸಂಪತ್ತು ಸೃಷ್ಟಿಯ ಮೌಲ್ಯಗಳನ್ನು ಗೌರವಿಸುವ ಸರ್ಕಾರವಿದೆ. ವ್ಯವಹಾರ ಪರಿಸರವನ್ನು ಸುಧಾರಿಸುವ ದೊಡ್ಡ ಹಾಗೂ ಕಠಿಣ ನಿರ್ಧಾರಗಳನ್ನು ಸರ್ಕಾರ ಕೈಗೊಂಡಿದೆ ಎಂದು ಮೋದಿ ನುಡಿದರು.

’ನೂತನ ಸರ್ಕಾರವು ಕೇವಲ ಮೂರು-ನಾಲ್ಕು ತಿಂಗಳುಗಳ ವಯೋಮಾನದ್ದು. ಇದು ಆರಂಭ ಮಾತ್ರ ಎಂದು ನಿಮಗೆ ಭರವಸೆ ನೀಡಲು ನಾನು ಬಯಸುತ್ತೇನೆ. ನಾವು ಸಾಗಬೇಕಾದ ಮಾರ್ಗ ಇನ್ನೂ ಸುದೀರ್ಘವಾಗಿದೆ. ಈ ಪಯಣದಲ್ಲಿ ನಾನು ಜಾಗತಿಕ ವ್ಯವಹಾರ ಸಮುದಾಯವು ನಮ್ಮ ಪಾಲುದಾರನಾಗಬೇಕು ಎಂದು ಬಯಸುವೆ. ಇದು ನಿಮಗೆ ಸುವರ್ಣಾವಕಾಶ’ ಎಂದು ಪ್ರಧಾನಿ ಹೇಳಿದರು.

ಭಾರತವು ೨೦೨೪-೨೫ರ ವೇಳೆಗೆ ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವ ಗುರಿ ಇಟ್ಟುಕೊಂಡಿದೆ. ಐದು ವರ್ಷಗಳಲ್ಲಿ ೧ ಟ್ರಿಲಿಯನ್ ಡಾಲರ್‌ಗಳನ್ನು ಆರ್ಥಿಕತೆಗೆ ಸೇರ್ಪಡೆ ಮಾಡಲಾಗಿದೆ. ಮತ್ತು ೨೦೨೪-೨೫ರ ವೇಳೆಗೆ ಭಾರತವನ್ನು ೫ ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ರೂಪಿಸುವುದು ನಮ್ಮ ಗುರಿ ಎಂದು ಮೋದಿ ನುಡಿದರು.

೧೭೫ ಗಿಗಾ ವ್ಯಾಟ್‌ನಷ್ಟು (ಜಿಬಿ) ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿ ಇಟ್ಟುಕೊಂಡಿದ್ದ ಭಾರತ ಈಗಾಗಲೇ ೧೨೦ ಗಿಗಾವ್ಯಾಟ್‌ನಷ್ಟು (ಜಿಡಬ್ಲ್ಯೂ) ನವೀಕರಿಸಬಹುದಾದ ಇಂಧನವನ್ನು ಉತ್ಪಾಧಿಸುತ್ತಿದೆ. ಸದ್ಯೋಭವಿಷ್ಯದಲಿ ಇದನ್ನು ೪೫೦ ಗಿಗಾ ವ್ಯಾಟ್‌ಗಳಿಗೆ ಏರಿಸುವ ಗುರಿಯನ್ನು ರಾಷ್ಟ್ರ ಇಟ್ಟುಕೊಂಡಿದೆ ಎಂದು ಪ್ರಧಾನಿ ಹೇಳಿದರು.

ಕಳೆದ ಐದು ವರ್ಷಗಳಲ್ಲಿ ಭಾರತವು ೨೮೬ ಬಿಲಿಯನ್ (೨೮೬೦೦ ಕೋಟಿ) ಡಾಲರ್ ಮೊತ್ತದ ನೇರ ವಿದೇಶೀ ಹೂಡಿಕೆಯನ್ನು ಸ್ವೀಕರಿಸಿದೆ.  ಇದು ಹಿಂದಿನ ೨೦ ವರ್ಷಗಳಲ್ಲಿ ಅದು ಗಳಿಸಿದ್ದ ವಿದೇಶೀ ನೇರ ಹೂಡಿಕೆಯ ಅರ್ಧದಷ್ಟಾಗುತ್ತದೆ ಎಂದು ಮೋದಿ ವಿವರಿಸಿದರು.

ಪ್ರಜಾಪ್ರಭುತ್ವ, ರಾಜಕೀಯ ಸ್ಥಿರತೆ, ಖಚಿತವಾದ ನೀತಿ, ಸ್ವತಂತ್ರ ನ್ಯಾಯಾಂಗ ಭಾರತದಲ್ಲಿ ಹೂಡಿಕೆಗೆ ಖಾತರಿಗಳಾಗಿವೆ  ಎಂದು ಮೋದಿ ನುಡಿದರು.

ತಮ್ಮ ಸರ್ಕಾರದ ಪುನರಾಯ್ಕೆಯು ೧೩೦ ಕೋಟಿ ಭಾರತೀಯರು ಅಭಿವೃದ್ದಿಗಾಗಿ ಕೊಟ್ಟಿರುವ ಜನಾದೇಶ. ಅಭಿವೃದ್ಧಿಯ ಅವರ ಆದ್ಯತೆ ಎಂದು ಪ್ರಧಾನಿ ಹೇಳಿದರು.

September 25, 2019 - Posted by | ಆರ್ಥಿಕ, ನರೇಂದ್ರ ಮೋದಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Commerce, Consumer Issues, Finance, Flash News, General Knowledge, India, journalists association, Nation, News, Prime Minister, Spardha, World | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ