SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಯೋಧ್ಯೆ ಪ್ರಕರಣ: ಪುರಾತತ್ವ ಹಕ್ಕು ಪ್ರಶ್ನಿಸಿ ಕ್ಷಮೆ ಯಾಚಿಸಿದ ಮುಸ್ಲಿಂ ಅರ್ಜಿದಾರರು


26 ayodhya sc
ನವದೆಹಲಿ
: ಅಯೋಧ್ಯೆ ಪ್ರಕರಣದಲ್ಲಿ ಭಾರತೀಯ ಪುರಾತತ್ವ ಇಲಾಖೆಯ ಹಕ್ಕನ್ನು ಪ್ರಶ್ನಿಸಿದ ವಿಚಾರದಲ್ಲಿ ಮುಸ್ಲಿಂ ಅರ್ಜಿದಾರರು ಸುಪ್ರೀಂ ಕೋರ್ಟಿನಲ್ಲಿ 2019 ಸೆಪ್ಟೆಂಬರ್ 26ರ ಗುರುವಾರ ತಮ್ಮ ನಿಲುವನ್ನು ಬದಲಾಯಿಸಿಕೊಂಡರು.

2003ರ ಪುರಾತತ್ವ ಇಲಾಖೆಯ ಸಮೀಕ್ಷಾ ಹಕ್ಕಿನ ಕರ್ತೃತ್ವವನ್ನು ಪ್ರಶ್ನಿಸುವ ಮೂಲಕ ನ್ಯಾಯಾಲಯದ ಅಮೂಲ್ಯ ಸಮಯವನ್ನು ಹಾಳುಮಾಡಿದ್ದಾಕ್ಕಾಗಿ ಮುಸ್ಲಿಂ ಅರ್ಜಿದಾರ ಪರ ವಕೀಲರು ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಸಂವಿಧಾನ ಪೀಠದ ಕ್ಷಮಾಪಣೆಯನ್ನು ಕೇಳಿದರು.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ  ಪೀಠದ ಮುಂದೆ ಈ ವಿಚಾರವನ್ನು ಪ್ರಸ್ತಾವಿಸಿದ ಮುಸ್ಲಿಂ ಅರ್ಜಿದಾರರ ಪರ ವಕೀಲ ಹಿರಿಯ ನ್ಯಾಯವಾದಿ ರಾಜೀವ್ ಧವನ್ ಅವರು  ತಮ್ಮ ಕಕ್ಷಿದಾರರು ಭಾರತೀಯ ಪುರಾತತ್ವ ಇಲಾಖೆಯ ಸಮೀಕ್ಷೆಯ ಸಾರಾಂಶವನ್ನು ಪ್ರಶ್ನಿಸಲು ಬಯಸುವುದಿಲ್ಲ ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.

‘ಸಮೀಕ್ಷೆಯ ಪ್ರತೀ ಪುಟದಲ್ಲಿ ಸಹಿ ಇರಬೇಕಿತ್ತು ಎಂದು ನಿರೀಕ್ಷಿಸುವಂತಿಲ್ಲ. ಇದರ ಕರ್ತೃತ್ವ ಮತ್ತು ಸಾರಾಂಶವನ್ನು ಪ್ರಶ್ನಿಸುವ ಅಗತ್ಯವಿಲ್ಲ. ಒಂದು ವೇಳೆ ನಾವು ಈ ವಿಚಾರದಲ್ಲಿ ಘನ ನ್ಯಾಯಾಲಯದ ಸಮಯವನ್ನು ವ್ಯರ್ಥಗೊಳಿಸಿದ್ದಲ್ಲಿ, ನಾವು ಇದಕ್ಕಾಗಿ ಕ್ಷಮೆಯನ್ನು ಕೋರುತ್ತೇವೆ’ ಎಂದು ರಾಜೀವ್ ಧವನ್ ಅವರು ಪೀಠದ ಮುಂದೆ ಹೇಳಿದರು. ‘ಈ ವರದಿಯ ಕರ್ತೃತ್ವ ಒಂದು ಪ್ರಶ್ನೆಯಾಗಿತ್ತು ಮತ್ತು ನಾವು ಈ ಕರ್ತೃತ್ವವನ್ನು ಪ್ರಶ್ನಿಸುವುದಿಲ್ಲ’ ಎಂದೂ ಸಹ ಮುಸ್ಲಿಂ ಅರ್ಜಿದಾರ ಪಕ್ಷಗಳ ಪರ ವಕೀಲರು ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದರು.

2019 ಸೆಪ್ಟೆಂಬರ್ 25ರ ಬುಧವಾರದಂದು ಸಾಂವಿಧಾನಿಕ ಪೀಠದ ಮುಂದೆ ತಮ್ಮ ವಾದವನ್ನು ಮಂಡಿಸಿದ್ದ ಮುಸ್ಲಿಂ ಅರ್ಜಿದಾರರ ಪರ ವಾದ ಮಂಡಿಸುತ್ತಿರುವ ಇನ್ನೋರ್ವ ವಕೀಲರಾದ ನ್ಯಾಯವಾದಿ ಮೀನಾಕ್ಷಿ ಅರೋರಾ ಅವರು ತಮ್ಮ ವಾದವನ್ನು ಮಂಡಿಸುತ್ತಾ ಭಾರತೀಯ ಪುರಾತತ್ವ ಇಲಾಖೆಯ ವರದಿಯ ಪ್ರತೀ ಅಧ್ಯಾಯದಲ್ಲಿ ಒಬ್ಬೊಬ್ಬ ಲೇಖಕರ ಹೆಸರಿದೆ ಆದರೆ ಸಾರಾಂಶ ವರದಿಯಲ್ಲಿ ಯಾವುದೇ ಲೇಖಕರ ಹೆಸರಿಲ್ಲ ಎಂದು ವಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರೊಂದಿಗೆ ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಅಯೋಧ್ಯಾ ಪ್ರಕರಣದ ವಿಚಾರಣೆಯನ್ನು ಪ್ರತಿದಿನವೂ  ನಡೆಸುತ್ತಿದೆ.

ಇದೇ ಸಂದರ್ಭದಲ್ಲಿ ಹಿಂದೂ ಮತ್ತು ಮುಸ್ಲಿಂ ಅರ್ಜಿದಾರ ಪರ ವಕೀಲರಿಗೆ ತಮ್ಮ ವಾದ ಮಂಡನೆ ಮುಕ್ತಾಯಕ್ಕೆ ಅಂತಿಮ ದಿನವೊಂದನ್ನು ನಿಗದಿಪಡಿಸಿಕೊಳ್ಳುವಂತೆ ಪೀಠ ಸ್ಪಷ್ಟ ನಿರ್ದೇಶನವನ್ನು ನೀಡಿತು ಮತ್ತು ಅಕ್ಟೋಬರ್ 18ರ ಬಳಿಕ ಒಂದು ದಿನವನ್ನೂ ಹೆಚ್ಚುವರಿಯಾಗಿ ವಾದ ಮಂಡನೆಗೆ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿತು.

‘ಅಕ್ಟೋಬರ್ 18ರ ನಂತರ ಒಂದು ದಿನವನ್ನೂ ಸಹ ಹೆಚ್ಚುವರಿಯಾಗಿ ನೀಡುವುದಿಲ್ಲ. ಮತ್ತು ಈ ವಿಚಾರದಲ್ಲಿ ನಾವು ನಾಲ್ಕುವಾರಗಳ ಒಳಗಾಗಿ ತೀರ್ಪು ನೀಡಲು ಸಾಧ್ಯವಾದರೆ ಅದೊಂದು ಪವಾಡವೇ ಸರಿ’ ಎಂದು ಮುಖ್ಯನ್ಯಾಯುಮೂರ್ತಿ ರಂಜನ್ ಗೊಗೋಯಿ ಅವರು ಎರಡೂ ಪಕ್ಷಗಳ ಅರ್ಜಿದಾರರಿಗೆ ಸ್ಪಷ್ಟಪಡಿಸಿದರು.

ಅಕ್ಟೋಬರ್ ತಿಂಗಳಿನಲ್ಲಿ ನ್ಯಾಯಾಲಯಕ್ಕೆ ರಜೆ ಇರುವುದರಿಂದ ನಾಲ್ಕು ಹಿಂದೂ ಅರ್ಜಿದಾರ ಪರ ಓರ್ವ ವಕೀಲರಿಗೆ ಮಾತ್ರವೇ ಪ್ರತಿವಾದ ಮಂಡಿಸಲು ಅವಕಾಶವಿದೆ ಎಂದು ತಿಳಿದುಬಂದಿತು.

September 26, 2019 - Posted by | Adhyathma, Award, ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Pakistan, Politics, Spardha, supreme court, Temples, Temples, ದೇವಾಲಯಗಳು, Terror, World | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ