SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕಾಶ್ಮೀರ: ಬೆಂಬಲ ಗಳಿಕೆಯ ವೇದಿಕೆಗಾಗಿ ಇನ್ನೂ ಇಮ್ರಾನ್ ಖಾನ್ ಹುಡುಕಾಟ!


26 Imran_khan
ಭಯೋತ್ಪಾದನೆ ಶಿಬಿರಗಳಿಗೆ ಲಷ್ಕರ್, ಜಮಾತ್-ಉದ್-ದವಾ ಮರುಚಾಲನೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ ತನ್ನ ನಿಲುವಿಗೆ ಅಂತಾರಾಷ್ಟ್ರೀಯ ಸಮುದಾಯದ ಬೆಂಬಲ ಕ್ರೋಡೀಕರಿಸಲು ಹೆಣಗಿ, ಎಲ್ಲೂ ಬೆಂಬಲ ಸಿಗುತ್ತಿಲ್ಲ ಎಂಬುದಾಗಿ ಗೊಣಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ಮಹಾಅಧಿವೇಶನದಲ್ಲೂ ಭಾರತದ ವಿರುದ್ಧ ರಾಜತಾಂತ್ರಿಕ ದಾಳಿಯನ್ನು ಮುಂದುವರೆಸುತ್ತಾ ಬೆಂಬಲ ಗಳಿಕೆಗಾಗಿ ಹೊಸ ವೇದಿಕೆಗಳ ಹುಡುಕಾಟ ನಡೆಸಿದರು.

ಇತ್ತ ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ವಿವಿಧ ಮಾದರಿಯ ದಾಳಿಗಳಿಗೆ ಸಿದ್ದತೆಗಳನ್ನು ನಡೆಸುತ್ತಿದ್ದು ತಮ್ಮ ಭಯೋತ್ಪಾದಕ ತರಬೇತಿ ಶಿಬಿರಗಳನ್ನು ಮತ್ತೆ ಸಕ್ರಿಯಗೊಳಿಸಿರುವ ವರದಿಗಳು ಬಂದವು.

ಭಾರತೀಯ ಸೇನಾ ದಂಡನಾಯಕ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್-ಇ-ಮೊಹಮ್ಮದ್ ಏಳು ತಿಂಗಳ ಹಿಂದೆ ಭಾರತೀಯ ವಾಯುಪಡೆ ವಿಮಾನದಾಳಿಯಲ್ಲಿ ಧ್ವಂಸವಾಗಿದ್ದ ತನ್ನ ಬಾಲಾಕೋಟ್ ತರಬೇತಿ ಶಿಬಿರವನ್ನು ಪುನಾರಂಭಿಸಿರುವುದನ್ನು ಈ ವಾರದಲ್ಲಿ ದೃಢ ಪಡಿಸಿದ್ದರು.

ಆದರೆ ಜೈಶ್ ಗುಂಪು ನಡೆಸುತ್ತಿರುವ ಬಾಲಾಕೋಟ್ ತರಬೇತಿ ಶಿಬಿರವು ಭಯೋತ್ಪಾದಕರು ಇತ್ತೀಚಿನ ವಾರಗಳಲ್ಲಿ ಸದ್ದಿಲ್ಲದೆ ಪುನರಾಂಭ ಮಾಡಿರುವ ಹಲವಾರು ತರಬೇತಿ ಶಿಬಿರಗಳ ಪೈಕಿ ಒಂದು ಮಾತ್ರ ಎಂದು ಭಾರತೀಯ ಭಯೋತ್ಪಾದಕ ನಿಗ್ರಹ ಮೂಲಗಳು ಹೇಳಿದವು.

ಕಾಶ್ಮೀರದ ಪುಲ್ವಾಮದಲ್ಲಿ ೪೦ ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿಪಡೆದ ಭಯೋತ್ಪಾದಕ ದಾಳಿಯ ಬಳಿಕ ಅತೀವ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಮುಚ್ಚಿದ್ದ ತಮ್ಮ ಭಯೋತ್ಪಾದನಾ ಕಾರ್ಖಾನೆಗಳನ್ನು ಹಫೀಜ್ ಸಯೀದ್ ನೇತೃತ್ವದ  ಲಷ್ಕರ್ -ಇ-ತೊಯ್ಬಾ ಮತ್ತು ಜಮಾತ್-ಉದ್-ದವಾ ಮತ್ತೆ ಸಕ್ರಿಯಗೊಳಿಸಿವೆ ಎಂದು ಭಾರತೀಯ ಭಯೋತ್ಪಾದನಾ ನಿಗ್ರಹ ಮೂಲಗಳು ತಿಳಿಸಿದವು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ಸರ್ಕಾರವು ರದ್ದು ಪಡಿಸಿದ ಬಳಿಕ ಕಾಶ್ಮೀರ ವಿಚಾರವನ್ನು ಅಂತಾರಾಷ್ಟ್ರೀಯಗೊಳಿಸುವ ಯತ್ನಗಳನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮಾಡುತ್ತಿರುವ ವೇಳೆಯಲ್ಲೇ ಕಾಕತಾಳೀಯವಾಗಿ ಭಯೋತ್ಪಾದಕರು ಭಯೋತ್ಪಾದನಾ ತರಬೇತಿ ಶಿಬಿರಗಳಿಗೆ ಮರುಚಾಲನೆ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.

ಇಮ್ರಾನ್ ಖಾನ್ ಮತ್ತು ಅವರ ನಿಯೋಗದ ಸದಸ್ಯರು ಕಾಶ್ಮೀರದ ವಿಚಾರವನ್ನು ಪ್ರತಿಯೊಂದು ವೇದಿಕೆ ಮತ್ತು ಸಭೆಯಲ್ಲೂ ಎತ್ತಿದ್ದಾರೆ. ಸಾಧ್ಯವಿರುವಂತಹ ಎಲ್ಲ ಯತ್ನಗಳನ್ನೂ ಮಾಡಲಾಗಿದೆ ಎಂದು ಸ್ವತಃ ಇಮ್ರಾನ್ ಖಾನ್ ಒಪ್ಪಿಕೊಂಡಿದ್ದರು.  ತಾವು ಮಾತನಾಡಿದ ವಿಶ್ವ ನಾಯಕರ ಪಟ್ಟಿಯನ್ನೂ ಅವರು ಮಾಡಿದ್ದರು. ವಿಶ್ವಸಂಸ್ಥೆ ಮಹಾಸಭೆಯಷ್ಟೇ ಅಲ್ಲ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್, ಜರ್ಮನಿಯ ವೈಸ್ ಚಾನ್ಸಲರ್  ಅಂಗೇಲಾ ಮರ್ಕೆಲ್ ಮತ್ತು ಫ್ರಾನ್ಸಿನ ಎಮ್ಯಾನುಯೆಲ್ ಮಾಕ್ರೋನ್ ಮತ್ತಿತರ ಘಟಾನುಘಟಿಗಳೆಲ್ಲರೂ ಈ ಪಟ್ಟಿಯಲ್ಲಿ ಸೇರಿದ್ದರು. ಆದರೆ ಅಂತಾರಾಷ್ಟ್ರೀಯ ಸಮುದಾಯದಿಂದ ಲಭ್ಯವಾಗಿರುವ ಪ್ರತಿಕ್ರಿಯೆಯಿಂದ ತನಗೆ ಭ್ರಮನಿರಸನವಾಗಿದೆ ಎಂದು ಸ್ವತಃ ಇಮ್ರಾನ್ ಖಾನ್ ಅವರೇ ಈ ವಾರ ಗೊಣಗಿದ್ದರು.

ಕಾಶ್ಮೀರದಲ್ಲಿ ದಾಳಿ ಯತ್ನಕ್ಕೆ ಪೂರಕವಾಗಿ ತನ್ನ ಬತ್ತಳಿಕೆಯನ್ನು ಭರ್ತಿ ಮಾಡಿಕೊಳ್ಳುತ್ತಿರುವ ಲಷ್ಕರ್-ಇ-ತೊಯ್ಬಾ ಭಯೋತ್ಪಾದಕ ಸಂಘಟನೆಯು ಸ್ವಾತ್, ಪೇಶಾವರ, ಕ್ವೆಟ್ಟಾ ಮತ್ತು ಇಲ್ಲಖಾ-ಇ-ಘೈರ್‌ನಲ್ಲಿ ಹೊಸ ಭಯೋತ್ಪಾದಕರಿಗಾಗಿ ನೇಮಕಾತಿಗಳನ್ನೂ ಆರಂಭಿಸಿದೆ.

ಹಫೀಜ್ ಸಯೀದ್ ೧೯೯೦ರಷ್ಟು ಹಿಂದೆಯೇ ಸ್ಥಾಪಿಸಿದ್ದ ಲಷ್ಕರ್, ಮೀರ್‌ಪುರದ ಮಂಗ್ಲಾ ಮತ್ತು ಸಿಯಾಲ್ ಕೋಟ್ ನ ಮರಾಲ್‌ನಲ್ಲಿ ಎರಡು ಜಲವಾಸಿ ತರಬೇತಿ ಕೇಂದ್ರಗಳನ್ನೂ ಪುನರಂಭಿಸಿದೆ ಎಂದೂ ವರದಿಗಳು ತಿಳಿಸಿವೆ.

September 26, 2019 - Posted by | ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, India, Nation, News, Pakistan, Politics, Prime Minister, Social Media, Spardha, Terror | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ