SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಚೀನಾದಲ್ಲಿ ಮುಸ್ಲಿಮರ ದುಃಸ್ಥಿತಿ: ಪಾಕಿಸ್ತಾನದ ಮೌನ ಏಕೆ?


27 alice wells

ಇಮ್ರಾನ್ ಖಾನ್‌ಗೆ ಅಮೆರಿಕ ತಪರಾಕಿ

ವಾಷಿಂಗ್ಟನ್: ಚೀನಾದಲ್ಲಿ ಬಂಧಿಸಲ್ಪಟ್ಟಿರುವ ೧೦ ಲಕ್ಷ ಉಯಿಘುರ್‌ಗಳು ಮತ್ತು ಟರ್ಕಿ ಮಾತನಾಡುವ ಮುಸ್ಲಿಮರ ಬಗ್ಗೆ ಪಾಕಿಸ್ತಾನ ಏಕೆ ತುಟಿ ಬಿಚ್ಚುತ್ತಿಲ್ಲ ಎಂಬುದಾಗಿ ಪ್ರಶ್ನಿಸುವ ಮೂಲಕ ಅಮೆರಿಕದ ಉನ್ನತ ರಾಜತಂತ್ರಜ್ಞೆ ಅಲೀಸ್ ವೆಲ್ಸ್ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 2019 ಸೆಪ್ಟೆಂಬರ್ 27ರ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಭಾರತೀಯ ಸಂವಿಧಾನದ ೩೭೦ನೇ ವಿಧಿಯನ್ನು ನವದೆಹಲಿಯು ರದ್ದು ಪಡಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರಕ್ಷುಬ್ದತೆ ತೀವ್ರಗೊಂಡಿರುವುದರ ನಡುವೆಯೇ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಅಮೆರಿಕದ ಹಂಗಾಮೀ ಸಹಾಯಕ ಕಾರ್‍ಯದರ್ಶಿ ಅಲೀಸ್ ವೆಲ್ಸ್ ಅವರು ’ಇಮ್ರಾನ್ ಖಾನ್ ಅವರ ಕಾಶ್ಮೀರ ಕುರಿತಾದ ಟೀಕೆಗಳಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಜರೆದರು.

‘ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಣ ವಾಗ್ಯುದ್ಧ ಇಳಿಸುವ ವಿಚಾರ ಸ್ವಾಗತಾರ್ಹ, ಆದರೆ ಕಾಶ್ಮೀರ ಕುರಿತ ಇಮ್ರಾನ್ ಖಾನ್ ಅವರ ಟೀಕೆಗಳಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಅಲೀಸ್ ಹೇಳಿದರು.

‘ಒಂದು ಮಿಲಿಯನ್ (೧೦ ಲಕ್ಷ) ಉಯಿಘರ್‌ಗಳನ್ನು ಸೆರೆಯಲ್ಲಿ ಇಟ್ಟಿರುವ ಚೀನಾ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ?’ ಎಂದು ಇಮ್ರಾನ್ ಖಾನ್  ಅವರನ್ನು ಪ್ರಶ್ನಿಸಿದ ಅಲೀಸ್ ವೆಲ್ಸ್ ’ಕಾಶ್ಮೀರದ ಬಗ್ಗೆ ವ್ಯಕ್ತ ಪಡಿಸುತ್ತಿರುವುದಕ್ಕಿಂತ ಮಿಗಿಲಾದ ಕಾಳಜಿಯನ್ನು ಅವರು ಪಶ್ಚಿಮ ಚೀನಾದಲ್ಲಿ ಬಂಧನಕ್ಕೆ ಒಳಗಾಗಿರುವ ಮುಸ್ಲಿಮರ ಬಗೆಗೂ ಅವರು ವ್ಯಕ್ತ ಪಡಿಸುದನ್ನು ಕಾಣಲು ನಾನು ಬಯಸುತ್ತೇನೆ. ಕಾಶ್ಮೀರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚೀನಾದ ಮುಸ್ಲಿಮರ ಮಾನವ ಹಕ್ಕುಗಳನ್ನು ಕಳೆದುಕೊಂಡಿರುವ ಬಗ್ಗೆ ಇಮ್ರಾನ್ ಖಾನ್ ಅವರಿಂದ ಹೆಚ್ಚಿನ ಕಾಳಜಿ ವ್ಯಕ್ತಗೊಳ್ಳುವುದನ್ನು ನಾನು ನೋಡಬಯಸುತ್ತೇನೆ. ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಅಮೆರಿಕದ ಆಡಳಿತವು ಚೀನಾದ್ಯಂತ ಮುಸ್ಲಿಮರು ಅನುಭವಿಸುತ್ತಿರುವ ದುಃಸ್ಥಿತಿ ಮತ್ತು ಅವರ ಭೀಕರ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದೆ’ ಎಂದು  ನುಡಿದರು.

ಚೀನಾವು ಪಾಕಿಸ್ತಾನದ ಅತ್ಯಂತ ಪ್ರಮುಖ ಆರ್ಥಿಕ ಪಾಲುದಾರ ಮತ್ತು ರಾಜತಾಂತ್ರಿಕ ಮಿತ್ರರಾಷ್ಟವಾಗಿದೆ.

ಸೆಪ್ಟೆಂಬರ್ 23ರ ಸೋಮವಾರ ಚಿಂತನ ಮಂಥನದ ವೇಳೆಯಲ್ಲಿ ಖಾನ್ ಅವರನ್ನು ಉಯಿಘರ್‌ಗಳ ಸ್ಥಿತಿ ಬಗ್ಗೆ ಪ್ರಶ್ನಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಇಮ್ರಾನ್ ಖಾನ್ ಅವರು ’ಪಾಕಿಸ್ತಾನವು ಚೀನಾದ ಜೊತೆಗೆ ವಿಶೇಷ ಬಾಂಧವ್ಯವನ್ನು ಹೊಂದಿದೆ ಮತ್ತು ವಿಷಯಗಳನ್ನು ಖಾಸಗಿಯಾಗಿ ಮಾತ್ರವೇ ಪ್ರಸ್ತಾಪಿಸುತ್ತದೆ’ ಎಂದು ಹೇಳಿದ್ದರು.

ಚೀನಾವು ಇಸ್ಲಾಮಿಕ್ ಸಂಪ್ರದಾಯಗಳನ್ನು ಬಲಾತ್ಕಾರವಾಗಿ ನಿಲ್ಲಿಸಲು ಯತ್ನಿಸುತ್ತಿದೆ ಮತ್ತು ಉಯಿಘರ್‌ಗಳನ್ನು ಬಹುಸಂಖ್ಯಾತ ಹಾನ್ ಸಮುದಾಯದಲ್ಲಿ ವಿಲೀನಗೊಳಿಸಲು ಯತ್ನಿಸುತ್ತಿದೆ ಎಂದು ಮಾನವ ಹಕ್ಕುಗಳ ಗುಂಪುಗಳು ಮತ್ತು ಸಾಕ್ಷಿಗಳು ಹೇಳುತ್ತಿದ್ದಾರೆ. ತಾನು ಅವರಿಗೆ ವೃತ್ತಿ ತರಬೇತಿಯನ್ನು ನೀಡುತ್ತಿದ್ದು ಉಗ್ರವಾದವನ್ನು ನಿರುತ್ಸಾಹಗೊಳಿಸುತ್ತಿರುವುದಾಗಿ ಚೀನಾವು ಹೇಳಿಕೊಂಡಿದೆ.

ಉಯಿಘರ್‌ಗಳನ್ನು ಚೀನಾವು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಚೀನಾದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ಹೆಚ್ಚಿಸಲು ವಿಶ್ವಸಂಸ್ಥೆಯ ವಾರ್ಷಿಕ ಮಹಾಅಧಿವೇಶನವನ್ನು ಬಳಸಿಕೊಳ್ಳಲು ಅಮೆರಿಕ ಬಯಸಿದೆ.

ಅಮೆರಿಕದ ವಿದೇಶಾಂಗ ಇಲಾಖೆಯು  ಮಂಗಳವಾರ ಚೀನಾದ ಉಯಿಘರ್‌ಗಳ ದುರವಸ್ಥೆಯ ಬಗ್ಗೆ ಬೆಳಕು ಚೆಲ್ಲುವ ಕಾರ್ಯಕ್ರಮವನ್ನು ಸಂಘಟಿಸಿತ್ತು. ವಿಶ್ವಸಂಸ್ಥೆ ಮಹಾಅಧಿವೇಶನದ ಸಂದರ್ಭದಲ್ಲ್ಲೇ ಸಂಘಟಿಸಲಾಗಿದ್ದ ಈ ಸಮ್ಮೇಳನದಲ್ಲಿ ಚೀನಾದ ಭಯಾನಕ ದಬ್ಬಾಳಿಕೆಗೆ  ತತ್ ಕ್ಷಣ ಕೊನೆಹಾಡಲು ಒತ್ತಡ ಹೆಚ್ಚಿಸುವಂತಹ ಪ್ರಚಾರಾಂದೋಲನಕ್ಕೆ ಬೆಂಬಲ ಕ್ರೋಡೀಕರಿಸಲು ಅಮೆರಿಕ ಯತ್ನಿಸಿತು ಎಂದು ಅಮೆರಿಕದ ಎರಡನೇ ಉತನ್ನ ರಾಜತಂತ್ರಜ್ಞ ಜಾನ್ ಸುಲ್ಲಿವಾನ್ ಹೇಳಿದರು.

‘ನಾವು ಕೇವಲ ಸತ್ಯದ ಸಂರಕ್ಷಕರೂ ಚೀನಾಕ್ಕೆ ಕರೆಕೊಡುವ ಅಂತಾರಾಷ್ಟ್ರೀಯ ಸಮುದಾಯದ ಸದಸ್ಯರು ಮಾತ್ರವೇ ಆಗಿರಲು ಸಾಧ್ಯವಿಲ್ಲ, ಅವರು ಉಯಿಘರ್‌ಗಳ ಈ ದುರವಸ್ಥೆಯನ್ನು ತತ್ ಕ್ಷಣ ಕೊನೆಗೊಳಿಸಬೇಕು ಎಂದು ಆಗ್ರಹಿಸುತ್ತೇವೆ’ ಎಂದು ಸುಲ್ಲಿವಾನ್ ಹೇಳಿದರು.

ಸೆಪ್ಟೆಂಬರ್ 24ರ ಮಂಗಳವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೂ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತನ್ನ ಸಹ ಸದಸ್ಯ ರಾಷ್ಟ್ರವಾದ ಚೀನಾದ ವಿರುದ್ಧ ಟೀಕಾಪ್ರಹಾರ ಮಾಡಿದ್ದರು ಮತ್ತು ಚೀನಾದ ಅಂತಾರಾಷ್ಟ್ರೀಯ ವ್ಯಾಪಾರದ ವಿರುದ್ಧ ತಮ್ಮ ವಿಶಿಷ್ಟ ಶೈಲಿಯ ದಾಳಿಯನ್ನು ನಡೆಸಿದ್ದರು.

‘ಹಾಂಕಾಂಗ್‌ನ ಸ್ವಾತಂತ್ರ್ಯ, ಕಾನೂನು ವ್ಯವಸ್ಥೆ ಮತ್ತು ಪ್ರಜಾತಾಂತ್ರಿಕ ಬದುಕಿನ ಮಾರ್ಗಗಳನ್ನು ರಕ್ಷಿಸುವ ನಿಟ್ಟಿನಲ್ಲಿ ತಾನು ಬದ್ಧವಾಗಿರಬೇಕಾದ ಒಪ್ಪಂದವನ್ನು ಚೀನಾ ಸರ್ಕಾರವು ಗೌರವಿಸುತ್ತದೆ ಎಂದು ಜಗತ್ತು ಸಂಪೂರ್ಣವಾಗಿ ನಿರೀಕ್ಷಿಸುತ್ತದೆ’ ಎಂದು ಟ್ರಂಪ್ ಅವರು ವಿಶ್ವಸಂಸ್ಥೆ ಮಹಾ ಅಧಿವೇಶನದಲಿ ಗುಡುಗಿದ್ದರು.

’ಪರಿಸ್ಥಿತಿಯನ್ನು ಚೀನಾವು ಹೇಗೆ ನಿಭಾಯಿಸುತ್ತದೆ ಎಂಬುದು ಭವಿಷ್ಯದಲ್ಲಿ ಚೀನಾವು ವಹಿಸುವ ಪಾತ್ರದ ಬಗ್ಗೆ ಹೇಳಲಿದೆ’ ಎಂದು ನ್ಯೂಯಾರ್ಕಿನಲ್ಲಿ ನಡೆದ ರಾಜತಾಂತ್ರಿಕ ವೇದಿಕೆಯಲ್ಲಿನ ತಮ್ಮ ಮೂರನೇ ಹಾಜರಾತಿಯಲ್ಲಿ ಅಮೆರಿಕದ ನಾಯಕ ಹೇಳಿದ್ದರು.

ಮೂರು ತಿಂಗಳ ಹಿಂದೆ ಭಾರೀ ಪ್ರಮಾಣದ ಸರ್ಕಾರೀ ವಿರೋಧಿ ಪ್ರತಿಭಟನೆಗಳು ನಡೆದಂದಿನಿಂದ ಹಾಂಕಾಂಗಿನ ಪರಿಸ್ಥಿತಿ ಕುರಿತು ಅವರು ಮಾಡಿದ ಅತ್ಯಂತ ತೀಕ್ಷ್ಣ ಭಾಷಣಗಳಲ್ಲಿ ಇದೂ ಒಂದಾಗಿತ್ತು.

೧೯೯೭ರಲ್ಲಿ ಚೀನಾಕ್ಕೆ  ಬ್ರಿಟನ್ ಹಸ್ತಾಂತರಿಸಿದ ಬಳಿಕ ಏಷ್ಯಾದ ಹಣಕಾಸು ಆಡುಂಬೊಲದ ಅತ್ಯಂತ ದೊಡ್ಡ ರಾಜಕೀಯ ಬಿಕಟ್ಟಿಗೆ ಈ ಬೃಹತ್ ಪ್ರದರ್ಶನಗಳು ಚಾಲನೆ ನೀಡಿದ್ದವು.

September 27, 2019 - Posted by | ಪಾಕಿಸ್ತಾನ, ಪ್ರಧಾನಿ, ಬೆಂಗಳೂರು, ಭಯೋತ್ಪಾದಕ, ಭಾರತ, ರಾಜ್ಯ, ವಿಶ್ವ/ ಜಗತ್ತು, ಸಾಮಾಜಿಕ  ಮಾಧ್ಯಮ, Flash News, General Knowledge, Nation, News, Pakistan, Politics, Prime Minister, Spardha, Terror, World | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ