SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕರ್ನಾಟಕದ 15 ಕ್ಷೇತ್ರಗಳ ಉಪಚುನಾವಣೆಗೆ ಮರು ದಿನಾಂಕ ನಿಗದಿ


27 elections commission
ನವದೆಹಲಿ
: ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಗಳಲ್ಲಿ 15 ಕ್ಷೇತ್ರಗಳ ಉಪಚುನಾವಣೆಗಳಿಗೆ ಮರು ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು 2019 ಸೆಪ್ಟೆಂಬರ್ 27ರ ಶುಕ್ರವಾರ  ಪ್ರಕಟಿಸಿತು.

ಈ 15 ಕ್ಷೇತ್ರಗಳಿಗೆ ಡಿಸೆಂಬರ್ 05ರಂದು ಉಪಚುನಾವಣೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನವಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಮತ್ತು ನವಂಬರ್ 18 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ. ನವಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವಂಬರ್ 21ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೇ ದಿನವಾಗಿರುತ್ತದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿದವು.

ಅಥಣಿ, ಕಾಗವಾಡ, ಗೋಕಾಕ್‌, ಯಲ್ಲಾಪುರ, ಹಿರೇಕೆರೂರ್‌, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌, ಶಿವಾಜಿನಗರ,  ಹೊಸಕೋಟೆ, ಕೆ.ಆರ್‌. ಪೇಟೆ ಮತ್ತು ಹುಣಸೂರು ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆಯಲಿದೆ.

ಈ ಮೊದಲು ಅಕ್ಟೋಬರ್ 21ರಂದು ಈ 15 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ತಮ್ಮ ಅಮಾನತನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿರುವ 17 ಜನ ಶಾಸಕರ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ತ್ರಿಸದಸ್ಯ ಪೀಠದ ಎದುರು ಚುನಾವಣಾ ಆಯೋಗವು 17 ಅನರ್ಹ ಶಾಸಕರ ಪೈಕಿ 15 ಶಾಸಕರ ಕ್ಷೇತ್ರದಲ್ಲಿ ಅಕ್ಟೋಬರ್ 21ರಂದು ನಡೆಸಲುದ್ದೇಶಿಸಿದ್ದ ಉಪಚುನಾವಣೆಯ ವೇಳಾಪಟ್ಟಿಯನ್ನು ಮುಂದೂಡಿಕೆ ಮಾಡುವ ಬಗ್ಗೆ ಗುರುವಾರದಂದು ಅರಿಕೆ ಮಾಡಿಕೊಂಡಿತ್ತು.

ಕೇಂದ್ರ ಚುನಾವಣಾ ಆಯೋಗದ ಮನವಿಗೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ, ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ ಮತ್ತು ಗುಂಡೂರಾವ್ ಪರ ವಕೀಲ ಕಪಿಲ್ ಸಿಬಲ್ ಅವರೂ ಒಪ್ಪಿಗೆ ನೀಡಿದ್ದರಿಂದ ಸುಪ್ರೀಂ ಕೋರ್ಟ್ ಈ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿತ್ತು.

ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿರುವ ಅಥಣಿ ಕ್ಷೇತ್ರ, ಶ್ರೀಮಂತ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಕಾಗವಾಡ ಕ್ಷೇತ್ರ, ಮಹೇಶ್ ಕುಮಠಹಳ್ಳಿ ರಾಜೀನಾಮೆಯಿಂದ ತೆರವಾಗಿರುವ ಗೋಕಾಕ್ ಕ್ಷೇತ್ರ, ಶಿವರಾಂ ಹೆಬ್ಬಾರ್ ರಾಜೀನಾಮೆಯಿಂದ ತೆರವಾಗಿರುವ ಯಲ್ಲಾಪುರ ಕ್ಷೇತ್ರ, ಬಿ.ಸಿ. ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಹಿರೇಕೆರೂರ್ ಕ್ಷೇತ್ರ, ಆರ್. ಶಂಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ರಾಣಿಬೆನ್ನೂರು ಕ್ಷೇತ್ರ, ಆನಂದ ಸಿಂಗ್ ಅವರ ರಾಜೀನಾಮೆಯಿಂದ ತೆರವಾಗಿರುವ ವಿಜಯನಗರ ಕ್ಷೇತ್ರ, ಡಾ. ಕೆ. ಸುಧಾಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರ, ಭೈರತಿ ಬಸವರಾಜು ಅವರ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್.ಪುರ ಕ್ಷೇತ್ರ, ಎಸ್.ಟಿ. ಸೋಮಶೇಖರ್ ರಾಜೀನಾಮೆಯಿಂದ ತೆರವಾಗಿರುವ ಯಶವಂತಪುರ ಕ್ಷೇತ್ರ, ಗೋಪಾಲಯ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಮಹಾಲಕ್ಷ್ಮೀ ಲೇ ಔಟ್ ಕ್ಷೇತ್ರ, ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿರುವ ಶಿವಾಜಿನಗರ ಕ್ಷೇತ್ರ, ಎಂಟಿಬಿ ನಾಗರಾಜ್ ರಾಜೀನಾಮೆಯಿಂದ ತೆರವಾಗಿರುವ ಹೊಸಕೋಟೆ ಕ್ಷೇತ್ರ, ನಾರಾಯಣ ಗೌಡ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್.ಪೇಟೆ. ಕ್ಷೇತ್ರ ಮತ್ತು ಎಚ್. ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿರುವ ಹುಣಸೂರು ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆಯುತ್ತಿದೆ.

ಮುನಿರತ್ನ ಅವರು ಪ್ರತಿನಿಧಿಸುತ್ತಿದ್ದ ರಾಜರಾಜೇಶ್ವರಿ ನಗರ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರ ಮಸ್ಕಿ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮಸ್ಕಿ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 2018ರ ವಿಧಾನಸಬಾ ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಪರಾಜಿತ ಅಭ್ಯರ್ಥಿಗಳು ಪ್ರತ್ಯೇಕವಾಗಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಈ ಸಂಬಂಧ ಕೋರ್ಟ್‌ ತೀರ್ಪು ಹೊರಬೀಳುವ ತನಕ ಚುನಾವಣೆ ಘೋಷಣೆ ಮಾಡುವಂತಿಲ್ಲ. ಹಾಗಾಗಿ 15 ಕ್ಷೇತ್ರಗಳ ಜತೆ ಮಸ್ಕಿ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿಲ್ಲ.

September 27, 2019 - Posted by | ಕರ್ನಾಟಕ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, Bengaluru, Bangalore,, Flash News, General Knowledge, Nation, News, Politics, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ