SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕಸದಿಂದ ಹೃದಯಾಘಾತ.. ಸುಳ್ಳಲ್ಲ, ಇದು ಸಮೀಕ್ಷಾ ವರದಿ..!


28 garbage heart attack
ಬೆಂಗಳೂರು:
  ಹೃದಯ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಿರುವ ಹೊತ್ತಿನಲ್ಲಿ ಸುದ್ದಿ ಕೇಳಿದರೆ ಸಾಕು ಹೃದಯಾಘಾತವಾಗುವಂತಹ ಸುದ್ದಿಯೊಂದು ಬಂದಿದೆ.  ಹೌದು, ಈ ಸುದ್ದಿ ಕೇಳಿದರೆ,  ಎದೆಗುಂಡಿಗೆ ಗಟ್ಟಿ ಇದ್ದವರ ಹೃದಯಬಡಿತವೂ ತೀವ್ರವಾಗುವ ಸಾಧ್ಯತೆ ಇದೆ.

ಜೀವನಶೈಲಿ ಬದಲಾದಂತೆ ಆರೋಗ್ಯದಲ್ಲೂ ಏರುಪೇರಾಗುತ್ತವೆ. ಹೃದಯಾಘಾತಕ್ಕೆ ಇಂಥದ್ದೇ ಕಾರಣ ಎಂದು ಹೇಳುವಂತಿಲ್ಲ. ರಕ್ತದ ಒತ್ತಡ (ಬಿಪಿ) ಜಾಸ್ತಿ ಆದರೆ,  ಸಿಹಿ-ಜಿಡ್ಡು ಜಾಸ್ತಿ ತಿಂದು ದೇಹದಲ್ಲಿ ಕೊಬ್ಬಿನ ಅಂಶ ಜಾಸ್ತಿ ಆದರೂ ಹೃದಯಾಘಾತವಾಗುತ್ತದೆ. ಧೂಮಪಾನ, ಮದ್ಯಪಾನದಿಂದಲೂ ಹೃದಯಾಘಾತ ಆಗುತ್ತದೆ ಎಂಬುದು ಬಹುತೇಕ ಮಂದಿಗೆ ಗೊತ್ತಿರುವ ವಿಚಾರ.  ಅದರೆ ಬೆಂಗಳೂರಿನ ಬೃಹತ್ ಸಮಸ್ಯೆಯಾಗಿರುವ ಕಸದಿಂದಲೂ ಹೃದಯಾಘಾತ ಆಗುತ್ತದೆ ಎಂಬ ವಿಚಾರ ನಿಮಗೆ ಗೊತ್ತಿದೆಯೇ?

ಹೌದು, ಅಚ್ಚರಿ ಪಡಬಹುದಾದ  ಈ ವಿಚಾರವನ್ನು. ಬೆಂಗಳೂರಿನ ಖ್ಯಾತ  ಜಯದೇವ ಹೃದ್ರೋಗ ಸಂಸ್ಥೆ ನಡೆಸಿರುವ ನೂತನ ಸಂಶೋಧನೆ ಈ ವಿಷಯವನ್ನು ಬೆಳಕಿಗೆ ತಂದಿದೆ.. ತಂಬಾಕನ್ನು ಸೇದುವುದರಿಂದ, ಜಗಿಯುವುದರಿಂದ ಸಾಯುವುದಕ್ಕಿಂತ ಹೆಚ್ಚಿನ ಜನ ವಾಯುಮಾಲಿನ್ಯದಿಂದ ಸಾಯುತ್ತಿದ್ದಾರೆ. ಹೃದಯಕ್ಕೆ ವಾಯುಮಾಲಿನ್ಯ ಅದೆಷ್ಟು ದೊಡ್ಡ ಪೆಟ್ಟು ಕೊಡುತ್ತದೆ ಅಂದರೆ 5 ನಿಮಿಷ ಟ್ರಾಫಿಕ್​ನಲ್ಲಿ ಇರುವುದೂ ಒಂದೇ, 5 ಸಿಗರೇಟ್ ಸೇದುವುದೂ ಒಂದೇ  ಎಂದು ವೈದ್ಯರು ಹೇಳುತ್ತಾರೆ.

ಈ ಕಾರಣದಿಂದಲೇ ಹಾಗಾಗಿ 35 ವರ್ಷದೊಳಗಿನ ಅನೇಕ ಯುವಕ-ಯುವತಿಯರು ಇತ್ತೀಚೆಗೆ ಹೃದಯಾಘಾತದಿಂದ ಬಳಲುತ್ತಾ ಇದ್ದಾರೆ. ಅದರಲ್ಲೂ ಕಾರು, ಲಾರಿಗಳ ಚಾಲಕರೇ ಹೆಚ್ಚಾಗಿ ಹೃದಯಾಘಾತದಿಂದ ಬಳಲುತ್ತಾ ಇರುವುದು ಕೂಡಾ ಈ ಅಧ್ಯಯನದಿಂದ  ತಿಳಿದುಬಂದಿದೆ.

ಕಸದಿಂದಲೂ ಹೃದಯಾಘಾತ!: 2 ವರ್ಷಗಳಿಂದ ಈ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆ ಅಧ್ಯಯನ ನಡೆಸಿತ್ತು. ಈ ಅಧ್ಯಯನ ಪ್ರಕಾರ 35 ವರ್ಷದೊಳಗಿನ ಯುವಜನರಲ್ಲೇ ಹೃದಯಾಘಾತ ಸಮಸ್ಯೆ ಹೆಚ್ಚಾಗಿದೆ. ಈ ಬಗ್ಗೆ ತಿಳಿಯಲು 2,400 ಹೃದ್ರೋಗಿಗಳನ್ನು ವೈದ್ಯರು ಸಮೀಕ್ಷೆ ಮಾಡಿದ್ದಾರೆ. 1 ಲಕ್ಷದಲ್ಲಿ 200 ಜನರಿಗೆ ವಾಯುಮಾಲಿನ್ಯದಿಂದ ಹೃದಯಾಘಾತ
ಸಂಭವಿಸುತ್ತಿದೆ ಎಂಬ ವಿಷಯ ಬೆಳಕಿಗೆ ಬಂದಿದೆ. ವಾಯುಮಾಲಿನ್ಯ ಅಂದರೆ ಕೇವಲ ವಾಹನಗಳಿಂದ ಹೊರಹೋಗುವ ಹೊಗೆ ಮಾತ್ರ ಆಗಬೇಕಾಗಿಲ್ಲ. ಬೆಂಗಳೂರಿನ ಅತೀ ದೊಡ್ಡ ಸಮಸ್ಯೆಯಾದ ಕಸದಿಂದಲೂ ಆರೋಗ್ಯಕ್ಕೆ ದೊಡ್ಡ ಹಾನಿಯೇ ಆಗುತ್ತಿದೆ ಎಂದು ಸಮೀಕ್ಷಾ ವರದಿ ಹೇಳಿದೆ.

ಈ ವಿಚಾರವನ್ನು ವೈದ್ಯರು ಕೂಡ ಒಪ್ಪುತ್ತಾರೆ. ಎಲ್ಲೆಲ್ಲೂ ಬಿದ್ದಿರುವ ಕಸದ ರಾಶಿಯಿಂದ ಮಿಥೇನ್ ಅನಿಲ ಹೊರಬರುತ್ತದೆ. ಈ ಮಿಥೇನ್ ಶ್ವಾಸಕೋಶದಲ್ಲಿ ರಕ್ತದ ಹರಿವಿಗೆ ಅಡ್ಡಿ ಉಂಟುಮಾಡಿ ಆ ಮೂಲಕ ಹೃದಯಾಘಾತ ಹೆಚ್ಚಾಗುತ್ತಿದೆ ಎಂದು ವರದಿ ಹೇಳಿತು.

ಹೀಗಾಗಿ, ವಾಯುಮಾಲಿನ್ಯದ ಜೊತೆಜೊತೆಗೆ ಕಸದಿಂದಲೂ ಹೃದಯಾಘಾತ ಆಗುವ ವಿಚಾರ ಆತಂಕಕಾರಿ ಎಂದು ವರದಿ  ಹೇಳಿತು. ಕಳೆದ 2 ವರ್ಷಗಳಲ್ಲಿ 2,400 ಹೃದ್ರೋಗಿಗಳ ಮೇಲೆ ಅಧ್ಯಯನ ನಡೆಸಿರುವ ಜಯದೇವ ಹೃದ್ರೋಗ ಸಂಸ್ಥೆ ಈ ರೋಗಿಗಳಿಗಾಗಿಯೇ ಪ್ರಿಮೆಚ್ಯೂರ್ ಕರೊನರಿ ಆರ್ಟರಿ ಡಿಸೀಸ್ ಕ್ಲಿನಿಕ್ ಎನ್ನುವ ವಿಶೇಷ ಘಟಕವನ್ನೇ ತೆರೆದಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ ಸಿ.ಎನ್. ಮಂಜುನಾಥ್ ತಿಳಿಸಿದರು.

ಕೇವಲ ಒಳ್ಳೆ ಊಟ ಮಾಡಿ, ವ್ಯಾಯಾಮ ಮಾಡಿದರೆ ನಮ್ಮ ಹೃದಯ ಆರೋಗ್ಯವಾಗಿರುತ್ತದೆ ಎಂದುಕೊಂಡವರಿಗೆ ಜಯದೇವ ಆಸ್ಪತ್ರೆಯ ವೈದ್ಯರು ನೀಡಿರುವ ಈ ವರದಿ ಎಚ್ಚರಿಕೆಯ ಗಂಟೆಯಾಗಿದೆ. ಹಿಂದೆ ಮಕ್ಕಳು ವಯಸ್ಸಾದ ತಂದೆ ತಾಯಂದಿರನ್ನು ಹೃದ್ರೋಗದ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದರು. ಆದ್ರೆ ಈಗ ತಂದೆ ತಾಯಿಯೇ ಚಿಕ್ಕ ವಯಸ್ಸಿನ ತಮ್ಮ ಮಕ್ಕಳನ್ನು ಹೃದ್ರೋಗದ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದುಕೊಂಡು ಬರಬೇಕಾದ ದುಸ್ಥಿತಿ ಎದುರಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಇನ್ನಾದರೂ ಕಸದ ಸಮಸ್ಯೆಯನ್ನು ನಿಯಂತ್ರಿಸಲು ಜನರು ಕ್ರಮ ಕೈಗೊಳ್ಳಬೇಕಾಗಿದೆ ಎಂದು ವರದಿ ಹೇಳಿದೆ.

September 29, 2019 - Posted by | ಕರ್ನಾಟಕ, ಬಿಬಿಎಂಪಿ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, ವಿಶ್ವ/ ಜಗತ್ತು, BBMP, Bengaluru, Bangalore,, Flash News, General Knowledge, Health, India, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, World | , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ