SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಇಮ್ರಾನ್ ಖಾನ್ ದ್ವೇಷ ಭಾಷಣಕ್ಕೆ ಭಾರತದ ಖಡಕ್ ಎದಿರೇಟು


29 vidisha maitra at UN 1
ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಜಾತಕ ಬಿಚ್ಚಿದ ವಿದಿಶಾ ಮೈತ್ರ

ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಷಯವನ್ನು ಕೇಂದ್ರೀಕರಿಸಿ ಮಾಡಿದ  ದ್ವೇಷ ಭಾಷಣಕ್ಕೆ ಭಾರತವು 2019 ಸೆಪ್ಟೆಂಬರ್ 28ರ ಶನಿವಾರ ಖಡಕ್ ಉತ್ತರ ನೀಡಿತು.

ವಿಶ್ವಸಂಸ್ಥೆ ಮಹಾ ಅಧಿವೇಶನದಲ್ಲಿ ಉತ್ತರಿಸುವ ಹಕ್ಕನ್ನು ಚಲಾಯಿಸಿ, ಖಡಕ್ ಎದಿರೇಟು ನೀಡಿರುವ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಥಮ ಕಾರ್‍ಯದರ್ಶಿ ವಿದಿಶಾ ಮೈತ್ರ  ಅವರು, ಪಾಕಿಸ್ತಾನದ ಜಾತಕವನ್ನೇ ಜಾಲಾಡಿ, ’ತನ್ನ ನೆಲದಲ್ಲಿ ವಿಶ್ವಸಂಸ್ಥೆಯು ಪ್ರಕಟಿಸಿದ ಜಾಗತಿಕ ಉಗ್ರರ ಪಟ್ಟಿಯ ೩೦ ಮಂದಿ ಭಯೋತ್ಪಾದಕರು ತನ್ನ ನೆಲದಲ್ಲಿ ಇಲ್ಲ ಎಂಬುದಾಗಿ ನಿರಾಕರಿಸುವಂತೆ’ ಪಾಕಿಸ್ತಾನದ ಪ್ರಧಾನಿಗೆ ಸವಾಲು ಹಾಕಿದರು.

ವಿಶ್ವಸಂಸ್ಥೆಯು ಹೆಸರಿಸಿರುವ ಅಲ್-ಖೈದಾ ಮತ್ತು ದಾಯೆಶ್ ದಿಗ್ಬಂಧನ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಪಿಂಚಣಿ ನೀಡುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಪಾಕಿಸ್ತಾನ ಎಂಬುದಾಗಿ ಮೈತ್ರ ಅವರು ಜರೆದರು.

‘೧೩೦ ಮಂದಿ ವಿಶ್ವಸಂಸ್ಥೆ ನಿಯೋಜಿತ ಭಯೋತ್ಪಾದಕರು ಮತ್ತು ವಿಶ್ವಸಂಸ್ಥೆಯು ಪಟ್ಟಿ ಮಾಡಿರುವ ೨೫ ಭಯೋತ್ಪಾದಕರಿಗೆ ತನ್ನ ರಾಷ್ಟ್ರವು ಆಶ್ರಯ ಕೊಟ್ಟಿಲ್ಲ ಎಂಬುದಾಗಿ ಪಾಕಿಸ್ತಾನದ ಪ್ರಧಾನಿಯವರು ದೃಢ ಪಡಿಸುವರೇ?’ ಎಂದು ವಿದಿಶಾ ಮೈತ್ರ ಪ್ರಶ್ನಿಸಿದರು.

‘ಪಾಕಿಸ್ತಾನದಲ್ಲಿ ಯಾವುದೇ ಉಗ್ರಗಾಮಿ ಸಂಘಟನೆಗಳು ಇಲ್ಲ ಎಂಬುದನ್ನು ಪರಿಶೀಲಿಸಲು ಪಾಕಿಸ್ತಾನಕ್ಕೆ ಆಗಮಿಸುವಂತೆ ಈಗ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆ ವೀಕ್ಷಕರನ್ನು ಆಹ್ವಾನಿಸಿದ್ದಾರೆ. ಈ ವಚನವನ್ನು ಈಡೇರಿಸುವಂತೆ ವಿಶ್ವವು ಆಗ್ರಹಿಸಬೇಕು’ ಎಂದು ಮೈತ್ರ  ಹೇಳಿದರು.

‘ಪ್ರಧಾನಿ ಖಾನ್ ಅವರು ಅಣ್ವಸ್ತ್ರ ಸಮರದ ಬೆದರಿಕೆಯ ಮಾತುಗಳನ್ನು ಆಡುತ್ತಿರುವುದು ಮುತ್ಸದ್ಧಿತನವಲ್ಲ, ಅದು  ಉತ್ತರನ ಪೌರುಷ’ ಎಂದು ಮೈತ್ರ ಬಣ್ಣಿಸಿದರು.

ಪಾಕಿಸ್ತಾನದ ಪ್ರಧಾನಿಯವರು ಮಾತನಾಡಿದ ಈ ಘನವಾದ ಸಮಾವೇಶದ ವೇದಿಕೆಯಲ್ಲಿ ಆಡುವ ಪ್ರತಿ ಮಾತು ಕೂಡಾ ಚರಿತ್ರಾರ್ಹ ತೂಕ ಹೊಂದಿರುತ್ತದೆ ಎಂಬ ನಂಬಿಕೆ ಇದೆ. ಆದರೆ ದುರದೃಷ್ಟಕರವಾಗಿ ಪ್ರಧಾನಿ ಇಮ್ರಾನ್ ಖಾನ್ ಅವರಿಂದ ನಾವು ಕೇಳಿದ ಮಾತುಗಳು, ’ನಾವು ವರ್ಸಸ್ ಅವರು; ಉತ್ತರ ವರ್ಸಸ್ ದಕ್ಷಿಣ; ಅಭಿವೃದ್ಧಿ ಹೊಂದಿದ ವರ್ಸಸ್ ಅಭಿವೃದ್ಧಿ ಹೊಂದುತ್ತಿರುವ; ಮುಸ್ಲಿಮರು ವರ್ಸಸ್ ಇತರರು ಇತ್ಯಾದಿ ಪದಗಳು ವಿಶ್ವಸಂಸ್ಥೆಯಲ್ಲಿ ವಿಭಜನೆಯನ್ನು ಬಿಂಬಿಸಿವೆ. ಇದು ಭಿನ್ನಾಭಿಪ್ರಾಯಗಳನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಮತ್ತು ದ್ವೇಷವನ್ನು ಹುಟ್ಟು ಹಾಕುವ ಯತ್ನ, ಸರಳವಾಗಿ ಹೇಳಬೇಕೆಂದರೆ ’ದ್ವೇಷಭಾಷಣ’ ಎಂದು ಮೈತ್ರಿ ಬಣ್ಣಿಸಿದರು.

ವಿಶ್ವಸಂಸ್ಥೆ ಮಹಾ ಅಧಿವೇಶನವು ಅಪರೂಪಕ್ಕೊಮ್ಮೆ ಇಂತಹ ದುರುಪಯೋಗಕ್ಕೆ ಸಾಕ್ಷಿಯಾಗುತ್ತದೆ. ಪದಗಳು ರಾಜತಾಂತ್ರಿಕ ಕೌಶಲದ ದ್ಯೋತಕ. ’ರಕ್ತಪಾತ’, ’ವರ್ಣೀಯ ಶ್ರೇಷ್ಠತೆ’ ’ಕೋವಿ ಎತ್ತಿಕೊಳ್ಳುವುದು’ ಮತ್ತು ’ಕೊನೆವರೆಗೆ ಹೋರಾಟ’ ಇತ್ಯಾದಿ ಪದಗಳೆಲ್ಲ ಮಧ್ಯಯುಗದ ಮನಸ್ಥಿತಿಯನ್ನು ಪ್ರತಿಫಲಿಸುತ್ತವೆ ಹೊರತು ೨೧ನೇ ಶತಮಾನದ ದೃಷ್ಟಿಯನ್ನಲ್ಲ ಎಂದು ಮೈತ್ರ ಹೇಳಿದರು.

ಇಮ್ರಾನ್ ಖಾನ್ ಅವರ ಅಣ್ವಸ್ತ್ರ ಸಮರದ ಬೆದರಿಕೆಯು ಅವರ ಮುತ್ಸದ್ಧಿತನವನ್ನಲ್ಲ, ಉತ್ತರಕುಮಾರನ ಪೌರುಷವನ್ನು ತೋರಿಸುತ್ತದೆ. ಭಯೋತ್ಪಾದನೆಯನ್ನೇ ಉದ್ಯಮವನ್ನಾಗಿ ಮಾಡಿಕೊಂಡಿರುವ ರಾಷ್ಟ್ರದ ನಾಯಕನಾದ ಪ್ರಧಾನಿ ಖಾನ್ ಅವರು ಭಯೋತ್ಪಾದನೆಯನ್ನು ಸಮರ್ಥಿಸುವ ಮೂಲಕ ಬೆಂಕಿ ಇಡುವ ಕೆಲಸ ಮಾಡಿದ್ದಾರೆ ಎಂದು ಅವರು ಟೀಕಿಸಿದರು.

ಸಹೃದಯಿಗಳ ಆಟ ಎಂಬುದಾಗಿ ನಂಬಲಾಗಿರುವ ಕ್ರಿಕೆಟ್ ಆಟದ ಆಟಗಾರರಾಗಿದ್ದ ವ್ಯಕ್ತಿಯ ಈದಿನದ ಭಾಷಣವು ಡರ್ರಾ ಆಡಮ್ ಖೇಲ್‌ನ ಕೋವಿಗಳಿಂದ ಬರುವ ಸದ್ದನ್ನು ನೆನಪಿಸಿತು ಎಂದು ಅವರು ಹೇಳಿದರು.

ಪಾಕಿಸ್ತಾನದ ಮುಂಚೂಣಿ ಬ್ಯಾಂಕ್ ಆಗಿದ್ದ ಹಬೀಬ್ ಬ್ಯಾಂಕ್ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ್ದಕ್ಕಾಗಿ ಮಿಲಿಯಗಟ್ಟಲೆ ದಂಡ ವಿಧಿಸಿದ ಬಳಿಕ ಬಾಗಿಲು ಎಳೆದುಕೊಂಡದ್ದು ಏಕೆ ಎಂಬ ಪ್ರಶ್ನೆಗೆ ಇಲ್ಲಿ ನ್ಯೂಯಾರ್ಕಿನಲ್ಲಿ ಪಾಕಿಸ್ತಾನವು ವಿವರಣೆ ನೀಡಬಲ್ಲುದೇ? ಎಂದು ಮೈತ್ರ ಪ್ರಶ್ನಿಸಿದರು.

೨೭ ಮಾನದಂಡಗಳ ಪೈಕಿ ೨೦ಕ್ಕೂ ಹೆಚ್ಚು ಮಾನದಂಡಗಳ ಉಲ್ಲಂಘನೆಗಾಗಿ ಹಣಕಾಸು ಕಾರ್‍ಯಪಡೆಯು ಆ ರಾಷ್ಟ್ರಕ್ಕೆ ನೋಟಿಸ್ ನೀಡಿತ್ತು ಎಂಬುದನ್ನು ಪಾಕಿಸ್ತಾನವು ನಿರಾಕರಿಸಬಲ್ಲುದೇ ? ತಾನು ಒಸಮಾ ಬಿನ್ ಲಾಡೆನ್‌ನ ಮುಕ್ತ ಪ್ರತಿಪಾದಕನಾಗಿದ್ದುದನ್ನು ಪ್ರಧಾನಿ ಖಾನ್ ಅವರು ನ್ಯೂಯಾರ್ಕ್ ನಗರದಲ್ಲಿ ನಿರಾಕರಿಸುವರೇ? ಎಂದೂ ಮೈತ್ರ ಕೇಳಿದರು.

ಭಯೋತ್ಪಾದನೆ ಮತ್ತು ದ್ವೇಷಭಾಷಣವನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಪಾಕಿಸ್ತಾನ ಮಾನವ ಹಕ್ಕುಗಳ ಸಂರಕ್ಷಕನಂತೆ ಬಿಂಬಿಸಿಕೊಳ್ಳುವ ಅಪಾಯಕಾರಿ ಆಟವನ್ನು ಆಡುತ್ತಿದೆ. ಈ ರಾಷ್ಟ್ರವು ೧೯೪೭ರಿಂದೀಚೆಗೆ ಅಲ್ಪಸಂಖ್ಯಾತರ ಗಾತ್ರವನ್ನು ಶೇಕಡಾ ೨೩ರಿಂದ ಶೇಕಡಾ ೩ಕ್ಕೆ ಇಳಿಸಿದೆ ಮತ್ತು ಕ್ರೈಸ್ತರು, ಸಿಕ್ಖರು, ಅಹ್ಮದೀಯರು, ಹಿಂದುಗಳು, ಶಿಯಾಗಳು, ಪಶ್ತೂನರು, ಸಿಂಧಿಗಳು ಮತ್ತು ಬಲೂಚಿಗಳನ್ನು ಕರಾಳ ಮತಾಂತರ ಕಾನೂನಿಗೆ ಗುರಿಯಾಗಿಸಿಕೊಂಡು ವ್ಯವಸ್ಥಿತವಾಗಿ ಬಲಾತ್ಕಾರದಿಂದ ಮತಾಂತರ ಮಾಡಿಸುತ್ತಿದೆ ಎಂದು ಮೈತ್ರ ಹೇಳಿದರು.

ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಹೊಸ ಸಂರಕ್ಷಕನಂತೆ ತೋರಿಸಿಕೊಳ್ಳುತ್ತಿರುವ ಇದೇ ಪಾಕಿಸ್ತಾನ ೧೯೭೧ರಲ್ಲಿ ತನ್ನದೇ ದೇಶದ ಜನರನ್ನು ಜನಾಂಗ ಹತ್ಯೆಗೆ ಗುರಿಪಡಿಸಿತ್ತು. ಆಗ ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಜಿ ವಹಿಸಿದ್ದ ಪಾತ್ರವನ್ನು ಮರೆಯಲು ಸಾಧ್ಯವೇ? ಬಾಂಗ್ಲಾದೇಶದ ಗೌರವಾನ್ವಿತ ಪ್ರಧಾನಿಯವರು ಈ ವಿಚಾರವನ್ನು ಇದಕ್ಕೆ ಮುನ್ನ ಇದೇ ಸಮಾವೇಶದಲ್ಲಿ ನೆನಪಿಸಿಕೊಂಡಿದ್ದಾರೆ ಎಂದು ಮೈತ್ರ ನುಡಿದರು.

ಇಮ್ರಾನ್ ಖಾನ್ ಅವರು ತಮ್ಮ  ನಿಗದಿತ ಅವಧಿಯನ್ನು ಮೀರಿದ ಭಾಷಣದಲ್ಲಿ ಎರಡು ಅಣ್ವಸ್ತ್ರ ರಾಷ್ಟ್ರಗಳು (ಭಾರತ ಮತ್ತು ಪಾಕಿಸ್ತಾನ) ಯುದ್ಧಕ್ಕೆ ಇಳಿದರೆ ಆಗುವ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದ್ದರು.  ಉಭಯ ರಾಷ್ಟಗಳ ಮಧ್ಯೆ ಸಾಂಪ್ರದಾಯಿಕ ಯುದ್ಧ ಆರಂಭವಾದರೆ, ಏನು ಬೇಕಾದರೂ ಆಗಬಹುದು. ನೆರೆಯ ರಾಷ್ಟ್ರಕ್ಕಿಂತ ೭ ಪಟ್ಟು ಸಣ್ಣದಾಗಿರುವ ರಾಷ್ಟ್ರವು ಶರಣಾಗುವ ಇಲ್ಲವೇ ಸ್ವಾತಂತ್ರ್ಯಕ್ಕಾಗಿ ಸಾವಿನವರೆಗೂ ಸೆಣಸುವ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಇಮ್ರಾನ್ ಖಾನ್ ಈ ಮುನ್ನ ಹೇಳಿದ್ದರು.

ತಮ್ಮ ಭಾಷಣದ ಬಹುತೇಕ ಸಮಯವನ್ನು ಕಾಶ್ಮೀರ ವಿಷಯಕ್ಕಾಗಿಯೇ ಮೀಸಲಿಟ್ಟಿದ್ದ ಪಾಕಿಸ್ತಾನಿ ಪ್ರಧಾನಿ ’ಪ್ರದೇಶದ ನಿಷೇಧಾಜ್ಞೆ ತೆರವಿನ ಬಳಿಕ ಪ್ರತಿಕ್ರಿಯೆ ಕಂಡುಬರಲಿದೆ’ ಎಂದು ಹೇಳಿದ್ದರು.

ಇಮ್ರಾನ್ ಖಾನ್ ಅವರ ಭಾಷಣವು ಯುದ್ಧೋನ್ಮಾದ ಭಾಷಣವಾಗಿದ್ದರೆ, ಅದೇ ವೇದಿಕೆಯಿಂದ ಅದಕ್ಕೆ ಕೆಲವೇ ಕ್ಷಣಗಳ ಮುನ್ನ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಶಾಂತಿ ಮತ್ತು ಅಭಿವೃದ್ಧಿಯ ಸಂದೇಶವನ್ನು ಜಗತ್ತಿಗೆ ನೀಡಿದ್ದರು. ’ಭಾರತವು ಜಗತ್ತಿಗೆ ಯುದ್ಧವನ್ನು ನೀಡಿದ ದೇಶವಲ್ಲ, ಬುದ್ಧನ ಶಾಂತಿಯ ಸಂದೇಶವನ್ನು ಕೊಟ್ಟ ರಾಷ್ಟ್ರ’ ಎಂದು ಪ್ರಧಾನಿ ಮೋದಿ ಹೇಳಿದ್ದರು.

‘ಭಯೋತ್ಪಾದನೆಯು ವಿಶ್ವವು ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳಲ್ಲಿ ಒಂದು’ ಎಂದು ಹೇಳಿದ್ದ ಪ್ರಧಾನಿ ಮೋದಿ ಅದರ ವಿರುದ್ಧ ಒಂದಾಗುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದ್ದರು.

‘ಇದು ಯಾವುದೇ ಒಂದು ರಾಷ್ಟ್ರಕ್ಕಲ್ಲ, ಇಡೀ ವಿಶ್ವ ಮತ್ತು ಮಾನವತೆಗೆ ಎದುರಾಗಿರುವ ದೊಡ್ಡ ಸವಾಲುಗಳಲ್ಲಿ ಒಂದು ಎಂಬುದಾಗಿ ನಾವು ನಂಬುತ್ತೇವೆ. ಈ ಕಾರಣದಿಂದಲೇ ಭಯೋತ್ಪಾದನೆಯ ವಿರುದ್ಧ ವಿಶ್ವವು ಒಂದಾಗುವುದು ಅನಿವಾರ್‍ಯ ಮತ್ತು ಅದು ಭಯೋತ್ಪಾದನೆಯ ವಿರುದ್ಧ ಒಂದಾಗಿ ಎದ್ದು ನಿಲ್ಲುವುದು ಎಂದು ನಾನು ದೃಢವಾಗಿ ನಂಬಿದ್ದೇನೆ’ ಎಂದು ಪ್ರಧಾನಿ ಮೋದಿ ತಮ್ಮ ೧೮ ನಿಮಿಷಗಳ ಭಾಷಣದಲ್ಲಿ ಒಂದೇ ಒಂದು ಕಡೆ ಕೂಡಾ ಪಾಕಿಸ್ತಾನದ ಹೆಸರನ್ನು ಉಲ್ಲೇಖಿಸದೆ ಮಾತನಾಡುತ್ತಾ ಹೇಳಿದ್ದರು.

September 28, 2019 - Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಾಮಾಜಿಕ  ಮಾಧ್ಯಮ, Flash News, General Knowledge, India, Nation, Pakistan, Politics, Prime Minister, Spardha, Terror, World | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ