SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಆರ್ಥಿಕತೆ  ಚೈತನ್ಯಕ್ಕೆ ನಿರ್ಮಲಾ ಸೀತಾರಾಮನ್ ‘ಕೊಡುಗೆ’


17 NIRMALA SITHARAMAN

ಗೃಹ ವಲಯಕ್ಕೆ ರೂ.೨೦,೦೦೦ ಕೋಟಿ, ರಫ್ತಿಗೆ ರೂ.೫೦,೦೦೦ ಕೋಟಿ ,
ಅರ್ಧಕ್ಕೆ ನಿಂತ ಮನೆ ಪೂರ್ಣಗೊಳಿಸಲು ನೆರವು

ನವದೆಹಲಿ: ದೇಶದ ಆರ್ಥಿಕತೆ ಮಂದಗತಿಯಲ್ಲಿರುವ ವರದಿಗಳ ಮಧ್ಯೆ ಆರ್ಥಿಕತೆಗೆ ಬಲತುಂಬುವ  ಸಲುವಾಗಿ ಮೂರನೇ ಹಂತದ ಮಹತ್ವದ ಉತ್ತೇಜನ ಕೊಡುಗೆಗಳನ್ನು 2019 ಸೆಪ್ಟೆಂಬರ್ 14ರ ಶನಿವಾರ ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗೃಹ ಯೋಜನೆಗಳಿಗೆ ೨೦,೦೦೦ ಕೋಟಿ ರೂಪಾಯಿ ಮತ್ತು ರಫ್ತು ಕ್ಷೇತ್ರಕ್ಕೆ ೫೦,೦೦೦ ಕೋಟಿ ರೂಪಾಯಿಗಳ ಕೊಡುಗೆ ಘೋಷಿಸಿದರು.

ಮಧ್ಯಮ ವರ್ಗದ ಮಂದಿಗೆ, ಅರ್ಧಕ್ಕೆ ನಿಂತ ತಮ್ಮ ಕನಸಿನ ಮನೆಗಳನ್ನು ಪೂರ್ಣಗೊಳಿಸಲು ವಿಶೇಷ ಸಾಲ ಒದಗಿಸುವ ವಿಶೇಷ ಯೋಜನೆಯನ್ನು ಆರಂಭಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಸಚಿವರು, ಪೂರ್ಣಗೊಳ್ಳದ ಯೋಜನೆಗಳನ್ನು ಪೂರ್ಣಗೊಳಿಸುವುದೇ ಮುಖ್ಯ ಗುರಿ ಎಂದು ಹೇಳಿದರು. ಮನೆ ನಿರ್ಮಾಣ ಮೇಲಿನ ಸಾಲದ ಬಡ್ಡಿದರವನ್ನು ಇಳಿಸುವ ಭರವಸೆ ನೀಡಿದರು. ಮನೆಗಳನ್ನು ಖರೀದಿಸುವಂತೆ ಸರ್ಕಾರಿ ನೌಕರರನ್ನು ಅವರು ಪ್ರೋತ್ಸಾಹಿಸಿದರು.

ಸದರಿ ನೆರವಿನಿಂದ ದೇಶಾದ್ಯಂತ ೩.೫ ಲಕ್ಷ ಯೋಜನೆಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಅರ್ಧಕ್ಕೆ ನಿಂತ ಮನೆಗಳನ್ನು ಪೂರ್ಣಗೊಳಿಸುವ ಯೋಜನೆಗೆ ಕೇಂದ್ರ ಸರ್ಕಾರ ೧೦,೦೦೦ ಕೋಟಿ ರೂಪಾಯಿಗಳನ್ನು ಒದಗಿಸುವುದು. ಅಷ್ಟೇ ಮೊತ್ತದ ಹಣವನ್ನು ಹೊರಗಿನ ಹೂಡಿಕೆದಾರರು ಒದಗಿಸಲಿದ್ದಾರೆ. ಈ ನಿಧಿಯನ್ನು ವಸತಿ ಬ್ಯಾಂಕುಗಳ ರಂಗದ ವೃತ್ತಿ ತಜ್ಞರೇ ನಿಭಾಯಿಸಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಹಣಕಾಸು ಸಚಿವರು ಇತ್ತೀಚಿನ ವಾರಗಳಲ್ಲಿ ಪ್ರಕಟಿಸಿದ ಆರ್ಥಿಕ ಚೇತರಿಕೆಯ ಕ್ರಮಗಳ ಸರಣಿಯಲ್ಲಿ ವಿತ್ತ ಸಚಿವರು ಪ್ರಕಟಿಸಿದ ಮೂರನೇ ಸುತ್ತಿನ ಸರಣಿ ಕ್ರಮ ಇದಾಗಿದೆ. ಈ ಹಿಂದೆ ಸಾರ್ವಜನಿಕ ವೆಚ್ಚ ಇಳಿಕೆ, ವ್ಯವಹಾರಗಳಿಗೆ ಸುಲಭ ಸಾಲ ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಿಗೆ ಸಾಲ ಒದಗಿಸಲು ಉತ್ತೇಜನ ನೀಡುವ ಸಲುವಾಗಿ ಬೃಹತ್ ಬಂಡವಾಳದ ನೆರವು ಸೇರಿದಂತೆ ಹಲವಾರು ಕ್ರಮಗಳನ್ನು ವಿತ್ತ ಸಚಿವರು ಘೋಷಿಸಿದ್ದರು.

ಇತ್ತೀಚೆಗಿನ ತ್ರೈಮಾಸಿಕದಲ್ಲಿ ದೇಶದ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಪ್ರಮಾಣ ಕಳೆದ ಆರು ವರ್ಷಗಳಲ್ಲೇ ಅತ್ಯಂತ ಕಡಿಮೆ ಅಂದರೆ ಶೇಕಡಾ ೫ಕ್ಕೆ ಇಳಿದಿದ್ದು ಆಟೋಮೊಬೈಲ್ ಮತ್ತು ರಿಯಲ್ ಎಸ್ಟೇಟ್ ಕೇತ್ರ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ ಎಂದು ವರದಿಗಳು ಹೇಳಿದ್ದವು.

ಈ ಹಿನ್ನೆಲೆಯಲ್ಲಿ ರಫ್ತು ವಹಿವಾಟು, ರಿಯಲ್ ಎಸ್ಟೇಟ್ ವಲಯದ ಚೇತರಿಕೆಗೆ ಪೂರಕವಾದ ಕ್ರಮಗಳನ್ನು ಘೋಷಿಸಿದ ಸೀತಾರಾಮನ್ ಅವರು ರಫ್ತು ವಹಿವಾಟಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಫ್ತು ಉತ್ಪನ್ನಗಳ ಮೇಲಿನ ಸುಂಕ ಅಥವಾ ತೆರಿಗೆ ಕಡಿಮೆ (ಆರ್‌ಒಡಿಟಿಇಪಿ) ಮಾಡುವ ಯೋಜನೆ ತರಲಾಗಿದೆ. ಇದಕ್ಕೆ ೫೦ ಸಾವಿರ ಕೋಟಿ  ರೂಪಾಯಿ ವೆಚ್ಚವಾಗುವ ಅಂದಾಜು ಮಾಡಲಾಗಿದೆ ಎಂದು ಹೇಳಿದರು.

ಹಾಲಿ ಉತ್ತೇಜಕ ಯೋಜನೆಗೆ ಬದಲಾಗಿ ಆರ್ ಒಡಿಟಿಇಪಿ ಜಾರಿಗೊಳಿಸಲಾಗುವುದು. ಆಗಸ್ಟ್ ತಿಂಗಳಲ್ಲಿ ರಫ್ತು ವಹಿವಾಟು ವಹಿವಾಟು ಶೇ ೬.೦೫ರಷ್ಟು ಇಳಿಕೆ ಕಂಡಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ನುಡಿದರು.

ರಫ್ತುದಾರರಿಗೆ ಆದ್ಯತಾ ವಲಯದ ಸಾಲ (ಪಿಎಸ್‌ಎಲ್) ನಿಯಮದಲ್ಲಿ ಬದಲಾವಣೆ ತರಲಾಗಿದೆ. ಇದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪರಿಶೀಲನೆಗೆ ಕಳುಹಿಸಲಾಗಿದೆ. ಇದರಿಂದ ಹೆಚ್ಚುವರಿಯಾಗಿ ರೂ.೩೬ ಸಾವಿರದಿಂದ ರೂ.೬೮ ಸಾವಿರ ಕೋಟಿ ರೂಪಾಯಿ ನಿಧಿ ಲಭ್ಯವಾಗಲಿದೆ ಎಂದು ಅವರು ಹೇಳಿದರು.

ವಾಣಿಜ್ಯ ಸಚಿವಾಲಯದ ಆಂತರಿಕ ತಂಡವು ರಫ್ತು ವಲಯದ ಹಣಕಾಸಿನ ಸ್ಥಿತಿಗತಿಗಳ ಮೇಲ್ವಿಚಾರಣೆ ನಡೆಸಲಿದೆ ಎಂದು ಸೀತಾರಾಮನ್ ಹೇಳಿದರು.

ಖರೀದಿ ಮೇಳ: ಕರಕುಶಲ, ಯೋಗ, ಪ್ರವಾಸ, ಜವಳಿ ಮತ್ತು ಚರ್ಮೋದ್ಯಮ ಕ್ಷೇತ್ರವನ್ನು ಗಮನದಲ್ಲಿ ಇಟ್ಟುಕೊಂಡು ದೇಶದ ನಾಲ್ಕು ಸ್ಥಳಗಳಲ್ಲಿ ದುಬೈ ಶಾಪಿಂಗ್ ಮೇಳದ ಮಾದರಿಯಲ್ಲಿ ವಾರ್ಷಿಕ ಮಹಾ ಖರೀದಿ ಮೇಳ (ಮೆಗಾ ಶಾಪಿಂಗ್ ಫೆಸ್ಟಿವಲ್) ಆಯೋಜಿಸುವ ಮೂಲಕ ಸಣ್ಣ ಮತ್ತು ಮಧ್ಯಮ ದರ್ಜೆಯ ಉದ್ಯಮಗಳಿಗೆ ಬಲ ತುಂಬಲು  ನಿರ್ಧರಿಸಲಾಗಿದೆ ಎಂದೂ ವಿತ್ತ ಸಚಿವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆರ್ಥಿಕ ಸ್ಥಿತಿಗತಿಗಳನ್ನು ತೆರೆದಿಟ್ಟ ಅವರು, ಹಣದುಬ್ಬರವು ನಿಯಂತ್ರಣದಲ್ಲಿದೆ ಮತ್ತು ಕೈಗಾರಿಕಾ ಉತ್ಪಾದನೆ ಮತ್ತೆ ಆರಂಭಗೊಂಡಿರುವುದರ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ ಎಂದು ಹೇಳಿದರು.

ಬ್ಯಾಂಕ್ ಕ್ಷೇತ್ರ ಎದುರಿಸುತ್ತಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ’ಸೆಪ್ಟೆಂಬರ್ ೧೯ ರಂದು ನಾನು ಸಾರ್ವಜನಿಕ ವಲಯದ ಬ್ಯಾಂಕುಗಳ ಮುಖ್ಯಸ್ಥರನ್ನು ಭೇಟಿ ಮಾಡುತ್ತೇನೆ’ ಎಂದು ಅವರು ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.

ರಫ್ತು ಉತ್ಪನ್ನಗಳ ಮೇಲಿನ ಸುಂಕ ಅಥವಾ ತೆರಿಗೆಗಳನ್ನು ತೆಗೆದುಹಾಕುವ ಯೋಜನೆ (ಆರ್‌ಒಡಿಟಿಇಪಿ) ಯನ್ನು ೨೦೨೦ರ ಜನವರಿ ೧ರಂದು ಆರಂಭಿಸಲಾಗುತ್ತದೆ. ರಫ್ತು ಹೆಚ್ಚಳಕ್ಕೆ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಅವರು ವಿವರಿಸಿದರು.

ರಫ್ತಿಗೆ ಬೇಕಾದ ಬಂಡವಾಳವನ್ನು ಸಾಲ ನೀಡುವ ಬ್ಯಾಂಕುಗಳಿಗೆ ಹೆಚ್ಚಿನ ವಿಮಾ ರಕ್ಷಣೆಯನ್ನು ಕೇಂದ್ರ ಸರ್ಕಾರ ನೀಡಲಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ ೧೭೦೦ ಕೋಟಿ ರೂ. ಹೊರೆಯಾಗಲಿದೆ. ವಾಣಿಜ್ಯ ಇಲಾಖೆಯ ಅಂತರ ಸಚಿವಾಲಯ ಸಮಿತಿಯೊಂದು ರಫ್ತು ಹಣಕಾಸಿನ ಮೇಲೆ ನಿರಂತರ ನಿಗಾ ಇಡಲಿದೆ ಎಂದು ನಿರ್ಮಲಾ ನುಡಿದರು.

ತಂತ್ರಜ್ಞಾನವನ್ನು ಮತ್ತಷ್ಟು ಸದುಪಯೋಗಪಡಿಸಿಕೊಳ್ಳುವ ಮೂಲಕ ’ರಫ್ತು ಮಾಡುವ ಸಮಯವನ್ನು’ ಕಡಿಮೆ ಮಾಡಲು ಸರ್ಕಾರ ಶ್ರಮಿಸುತ್ತಿದೆ ಎಂದು ವಿವರಿಸಿದ ಹಣಕಾಸು ಸಚಿವರು, ವಿಮಾನ ನಿಲ್ದಾಣಗಳು ಮತ್ತು ಬಂದರುಗಳಲ್ಲಿ ಅಂತರರಾಷ್ಟ್ರೀಯ ಮಾನದಂಡಗಳನ್ನು ಜಾರಿಗೆ ತರಲು ಯೋಚಿಸಲಾಗಿದ್ದು ಈ ಸಂಬಂಧ ಕ್ರಿಯಾ ಯೋಜನೆಯನ್ನು ೨೦೧೯ರ ಡಿಸೆಂಬರ್ ಒಳಗೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಇದೇ ವೇಳೆ ವಿದೇಶಿ ನೇರ ಹೂಡಿಕೆ (ಎಫ್ಡಿಐ) ಒಳಹರಿವು ಹೆಚ್ಚಾಗಿದ್ದು, ಇದು ಪುನರುಜ್ಜೀವನದ ಸಂಕೇತ ಎಂದು ನುಡಿದ ವಿತ್ತ ಸಚಿವರು, ವಿದೇಶೀ ವಿನಿಮಯ ಮೀಸಲು ವಿಶೇಷವಾಗಿ ಆಗಸ್ಟ್ ಅಂತ್ಯದಲ್ಲಿ ಹೆಚ್ಚಾಗಿದೆ ಎಂಬ ಮಾಹಿತಿ ನೀಡಿದರು.

ನಿರ್ಮಲಾ ಸೀತಾರಾಮನ್ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು:

* ಭಾರತದ ಹಣದುಬ್ಬರ ನಿಯಂತ್ರಣದಲ್ಲಿದೆ. ಪ್ರಸ್ತುತ ದೇಶದ ಹಣದುಬ್ಬರ ಶೇ.೪ಕ್ಕಿಂತ ಕಡಿಮೆ ಪ್ರಮಾಣದಲ್ಲಿದೆ.

* ಬ್ಯಾಂಕುಗಳು ನೀಡುತ್ತಿರುವ ಸಾಲ ಪ್ರಮಾಣದ ಹೆಚ್ಚಳ ಮತ್ತು ನಿಯಮಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಾರ್ವಜನಿಕ ರಂಗದ ಬ್ಯಾಂಕುಗಳ ಅಧ್ಯಕ್ಷರ ಜತೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು.

* ಈಗಾಗಲೇ ಠೇವಣಿ ಮತ್ತು ಗೃಹಸಾಲದ ಮೇಲಿನ ಬಡ್ಡಿದರ ಕಡಿತಗೊಳಿಸಲಾಗಿದೆ. ರಫ್ತು ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು.

* ಭಾರತದಿಂದ ರಫ್ತು ಮಾಡುವ ಉತ್ಪಾದನೆಗಳ ಮೇಲಿನ ತೆರಿಗೆ ಅಥವಾ ಸುಂಕ ಇಳಿಕೆ.

* ತೆರಿಗೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್ ಮರುಪಾವತಿ (ಇ-ರಿಫಂಡ್) ಸೆಪ್ಟೆಂಬರ್ ಅಂತ್ಯದೊಳಗೆ ಆರಂಭ.

* ಜವಳಿ ಉದ್ಯಮದ ಭಾರತದ ಹೆಚ್ಚುವರಿ ಮಾರಾಟದ ರಫ್ತು ಯೋಜನೆ’ (ಎಂಇಐಎಸ್) ಡಿಸೆಂಬರ್ ೩೧ರವರೆಗೆ ಮುಂದುವರಿಕೆ.

* ರಫ್ತು ಉತ್ಪಾದನೆ ಮೇಲಿನ ತೆರಿಗೆ ಅಥವಾ ಸುಂಕ ಕಡಿತ. ಇದರಿಂದಾಗಿ ಸರ್ಕಾರಕ್ಕೆ ೫೦ ಸಾವಿರ ಕೋಟಿ ರೂಪಾಯಿ ಆದಾಯ ಖೋತಾ.

* ದೇಶದ ಆರ್ಥಿಕ ಚೇತರಿಕಾಗಿ ಸರಣಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಆರ್ಥಿಕಾಭಿವೃದ್ಧಿಗೆ ಬಲ ನೀಡಲಾಗುವುದು.

* ಪಿಸಿಜಿಎಸ್(ಭಾಗಶಃ ಸಾಲ ನೀಡುವಿಕೆ ಸ್ಕೀಮ್) ಈಗಾಗಲೇ ಜಾರಿಗೊಂಡಿದೆ.

* ಸಣ್ಣ ಪ್ರಮಾಣದ ತೆರಿಗೆ ಪಾವತಿದಾರರಿಗೆ ದೊಡ್ಡ ನಿರಾಳತೆ, ಸಣ್ಣ ಅಪರಾಧಗಳಿಗೆ ದೊಡ್ಡ ಪ್ರಮಾಣದ ಶಿಕ್ಷೆ ಇಲ್ಲ.

* ಒಂದು ವೇಳೆ ಆದಾಯ ತೆರಿಗೆಯಲ್ಲಿನ ತಪ್ಪುಗಳನ್ನು ಪರಿಶೀಲಿಸಿ ಅದರ ಆಧಾರದ ಮೇಲೆ ಅಪರಾಧಗಳನ್ನು ನಿರ್ಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.

* ಜಿಎಸ್‌ಟಿಗೆ ಸಂಬಂಧಿಸಿದ ತೆರಿಗೆ ಪಾವತಿಯ ಮರುಪಾವತಿ ಮಾಹಿತಿ ಇನ್ನು ಮುಂದೇ ಶೀಘ್ರವೇ ಲಭ್ಯ.

September 14, 2019 - Posted by | ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Consumer Issues, Finance, Flash News, General Knowledge, Spardha | ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ