SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕಾಶ್ಮೀರ ಕಣಿವೆಯಲ್ಲಿ ’ನೂತನ ಸ್ವರ್ಗ’ ಸೃಷ್ಟಿಸಬೇಕು: ಪ್ರಧಾನಿ ಮೋದಿ


19 modi at nasik
ಮಹಾರಾಷ್ಟ್ರದ ನಾಸಿಕ್‌ನಲ್ಲಿ ರಾಜ್ಯ ಅಸೆಂಬ್ಲಿ ಚುನಾವಣಾ ಪ್ರಚಾರ ಅಭಿಯಾನಕ್ಕೆ ಚಾಲನೆ

ನಾಸಿಕ್ (ಮಹಾರಾಷ್ಟ್ರ): ಕಾಶ್ಮೀರಿಗಳ ದಶಕಗಳ ದುರವಸ್ಥೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂಬುದಾಗಿ 2019 ಸೆಪ್ಟೆಂಬರ್ 19ರ ಗುರುವಾರ ಇಲ್ಲಿ ದೂಷಿಸಿದ ಪ್ರಧಾನಿ ನರೇಂದ್ರ ಮೋದಿ ’ಕಣಿವೆಯಲ್ಲಿ ನೂತನ ಸ್ವರ್ಗವನ್ನು ಸೃಷ್ಟಿಸಲು ಯತ್ನಗಳನ್ನು ಮಾಡುವಂತೆ’ ಕರೆ ನೀಡಿದರು.

ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯ ಪ್ರಚಾರ ಅಭಿಯಾನವನ್ನು ಆರಂಭಿಸಿದ ಮೋದಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಯಿಂದ ಪ್ರಚೋದಿಸಲಾಗುತ್ತಿರುವ ಹಿಂಸಾಚಾರವನ್ನು ತಡೆಯಲು ಸಾಕಷ್ಟು ಯತ್ನಗಳನ್ನು ಮಾಡಲಾಗುತ್ತಿದೆ.  ನಾವು ನೂತನ ಸ್ವರ್ಗವನ್ನು (ಕಾಶ್ಮೀರದಲ್ಲಿ) ಸೃಷ್ಟಿಸಬೇಕಾಗಿದೆ, ಪ್ರತಿಯೊಬ್ಬ ಕಾಶ್ಮೀರಿಯನ್ನೂ ಪ್ರೀತಿಯಿಂದ ತಬ್ಬಿಕೊಂಡು ಸಂತೈಸಬೇಕಾಗಿದೆ’ ಎಂದು ಹೇಳಿದರು.

೩೭೦ನೇ ವಿಧಿಯನ್ನು ರದ್ದು ಪಡಿಸುವ ನಿರ್ಧಾರವು ಭಾರತದ ಏಕತೆಗಾಗಿ ಕೈಗೊಂಡ ನಿರ್ಧಾರ. ಈ ನಿರ್ಧಾರವು ಜಮ್ಮು ಮತ್ತು ಕಾಶ್ಮೀರದ ಜನರ ಆಶಯಗಳುಮತ್ತು ಕನಸುಗಳನ್ನು ಈಡೇರಿಸುವ ಮಾಧ್ಯಮವಾಗಲಿದೆ ಎಂದು ಪ್ರಧಾನಿ ನುಡಿದರು.

’ಅಶಾಂತಿ, ಅಪನಂಬಿಕೆ ಮೂಡಿಸಲು ಮತ್ತು ಹಿಂಸಾಚಾರವನ್ನು ಪ್ರಚೋದಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿಯಾಚೆಯಿಂದ ತೀವ್ರ ಯತ್ನಗಳು ನಡೆಯುತ್ತಿವೆ’ ಎಂದು ಅವರು ಹೇಳಿದರು.

ಜಮ್ಮು ಮತ್ತು ಕಾಶ್ಮೀರದ ಯುವಕರು, ತಾಯಂದಿರು ಮತ್ತು ಸಹೋದರಿಯರು ಸುದೀರ್ಘ ಕಾಲದ ಹಿಂಸಾಚಾರದ ಕೂಪದಿಂದ ಹೊರಬರುವ ನಿರ್ಧಾರ ಮಾಡಿದ್ದಾರೆ. ಅವರು ಅಭಿವೃದ್ಧಿ ಮತ್ತು ಹೊಸ ಉದ್ಯೋಗಾವಕಾಶಗಳನ್ನು ಬಯಸುತ್ತಿದ್ದಾರೆ’ ಎಂದು ಪ್ರಧಾನಿ ನುಡಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಹೊಸ ಪ್ರಯತ್ನಗಳನ್ನು ಮಾಡುವುದಾಗಿ ನಾವು ಭರವಸೆ ನೀಡಿದ್ದೇವೆ. ರಾಷ್ಟ್ರವು ಈಗ ಈ ಕನಸುಗಳನ್ನು ನನಸು ಮಾಡುವತ್ತ ಕ್ರಮಿಸತೊಡಗಿದೆ ಎಂಬುದಾಗಿ ತೃಪ್ತಿಪೂರ್ವಕವಾಗಿ ನಾನು ಹೇಳಬಲ್ಲೆ’ ಎಂದು ಮೋದಿ ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನವನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವುದು ಮಾತ್ರ ಸರ್ಕಾರದ ನಿರ್ಧಾರವಾಗಿರಲಿಲ್ಲ. ೧೩೦ ಕೋಟಿ ಭಾರತೀಯರ ಭಾವನೆಗಳನ್ನೂ ಗಮನದಲ್ಲಿ ಇಟ್ಟುಕೊಂಡು ಕ್ರಮ ಕೈಗೊಳ್ಳಬೇಕೆಂಬುದು ಸರ್ಕಾರದ ನಿರ್ಧಾರವಾಗಿತ್ತು ಎಂದು ಪ್ರಧಾನಿ ನುಡಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶದ ಜನರನ್ನು ಹಿಂಸಾಚಾರ, ಭಯೋತ್ಪಾದನೆ, ಪ್ರತ್ಯೇಕತೆ ಮತ್ತು ಭ್ರಷ್ಟಾಚಾರದಿಂದ ಹೊರಕ್ಕೆ ತರಲು ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಮೋದಿ ಹೇಳಿದರು.

೫೦ ಕೋಟಿ ಜಾನುವಾರುಗಳಿಗೆ ಚುಚ್ಚುಮದ್ದು ನೀಡುವ ತಮ್ಮ ಸರ್ಕಾರದ ಕಾರ್‍ಯಕ್ರಮವನ್ನು ರಾಜಕೀಯ ಕ್ರಮ ಎಂಬುದಾಗಿ ಮಾಡಲಾಗುತ್ತಿರುವ ಟೀಕೆಗೆ ಉತ್ತರಿಸಿದ ಪ್ರಧಾನಿ ’ಜಾನುವಾರುಗಳು ವೋಟು ಹಾಕುವುದಿಲ್ಲ’ ಎಂದು ಮಾರ್ಮಿಕವಾಗಿ ನುಡಿದರು.

ರಾಷ್ಟ್ರೀಯ ಪ್ರಾಣಿರೋಗ ನಿಯಂತ್ರಣ ಕಾರ್‍ಯಕ್ರಮವು ಜಾನುವಾರುಗಳ ಕಾಲು ಮತ್ತು ಬಾಯಿ ರೋಗ ಹಾಗೂ ಬ್ರುಸೆಲ್ಲೋಸಿಸ್ ರೋಗವನ್ನು ನಿರ್ಮೂಲನಗೊಳಿಸುವ ಕಾರ್‍ಯಕ್ರಮವಾಗಿದೆ. ದನಕರುಗಳು, ಎಮ್ಮೆಗಳು, ಕುರಿಗಳು, ಆಡುಗಳು ಮತ್ತು ಹಂದಿUಳು ಸೇರಿದಂತೆ ೫೦ ಕೋಟಿ ಜಾನುವಾರುಗಳಿಗೆ ಕಾಲು ಮತ್ತು ಬಾಯಿರೋಗ ಬರದಂತೆ ತಡೆಯಲು ಯೋಜನೆಯಡಿ ಚುಚ್ಚುಮದ್ದು ನೀಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

ದೇವೇಂದ್ರ ಫಢ್ನವಿಸ್ ಅವರನ್ನು ಮಹಾರಾಷ್ಟ್ರವು ಮುಖ್ಯಮಂತ್ರಿಯಾಗಿ ಪಡೆದಿರುವುದಕ್ಕೆ ಜನರನ್ನು ಅಭಿನಂದಿಸಿದ ಪ್ರಧಾನಿ ತಮ್ಮ ಈ ಯಾತ್ರೆಯ ಅವಧಿಯಲ್ಲಿ ಫಡ್ನವಿಸ್ ಅವರನ್ನು ಮುಖ್ಯಮಂತ್ರಿಯಾಗಿ ಮರುಸ್ಥಾಪನೆ ಮಾಡಲು ಜನರು ಮನಸ್ಸು ಮಾಡಿದ್ದಾರೆ’ ಎಂದು ನುಡಿದರು.

’ಲೋಕಸಭಾ ಚುನಾವಣೆಯ ಕಾಲದಲ್ಲಿ ನಾನು ಬಂದಾಗ, ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಾಗುವುದು ಎಂದು ನಾನು ನಿಮಗೆ ಹೇಳಿದ್ದೆ ಮತ್ತು ಅದನ್ನು ಕಾಲಮಿತಿಯೊಳಗೆ ನಡೆಸಲಾಗುವುದು ಎಂದು ಹೇಳಿದ್ದೆ. ಕಾಲಕಾಲಕ್ಕೆ ಉತ್ತರಗಳೊಂದಿಗೆ ನಾನು ಬರುತ್ತೇನೆ ಎಂದೂ ಹೇಳಿದ್ದೆ. ನಾವು ಈಗಷ್ಟೇ ಮೊದಲ ೧೦೦ ದಿನಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಮೊದಲ ಶತಕವು ನಿಮ್ಮ ಮುಂದಿದೆ. ಮೊದಲ ೧೦೦ ದಿನಗಳಲ್ಲಿ ನವಭಾರತದ ಚಿತ್ರದ ಮುನ್ನೋಟ ಇದೆ ವತ್ತು  ಜಗತ್ತಿಗೆ ಭಾರತದ ಶಕ್ತಿಯ ಸಂದೇಶವಿದೆ., ಕಲ್ಯಾಣದ ಬಗ್ಗೆ ನಂಬಿಕೆ ಇದೆ ಮತ್ತು ರಾಷ್ಟ್ರದ ಆರ್ಥಿಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ಯತ್ನ ಹಾಗೂ ಹೊಸ ಉದ್ಯೋಗಾವಕಾಶಗಳ ಸೃಷ್ಟಿಯ ಯತ್ನವಿದೆ’ ಎಂದು ಪ್ರಧಾನಿ ವಿವರಿಸಿದರು.

ಬುಧವಾರ, ಫಡ್ನವಿಸ್ ಅವರು ಮೂರು ವಿಧಾನಸಭಾ ಕ್ಷೇತ್ರಗಳು ಬರುವ ನಾಸಿಕ್‌ನಲ್ಲಿ ರೋಡ್ ಶೋ ನಡೆಸಿದ್ದರು. ನಾಸಿಕ್ ಪೂರ್ವ, ನಾಸಿಕ್ ಪಶ್ಚಿಮ ಮತ್ತು ನಾಸಿಕ್ ಕೇಂದ್ರ – ಈ ಎಲ್ಲ ಕ್ಷೇತ್ರಗಳಲ್ಲೂ ಪ್ರಸ್ತುತ ಬಿಜೆಪಿ ಶಾಸಕರು ಇದ್ದಾರೆ. ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಜನರನ್ನು ತಲುಪುವ ಯತ್ನವಾಗಿ ಹಂತ ಹಂತವಾಗಿ ’ಮಹಾಜನಾದೇಶ ಯಾತ್ರಾ’ ಹಮ್ಮಿಕೊಳ್ಳಲಾಗಿದೆ.

September 19, 2019 - Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Prime Minister, Spardha | , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ