SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಮಿತಾಭ್ ಬಚ್ಚನ್ ಮುಡಿಗೆ ಪ್ರತಿಷ್ಠಿತ ‘ದಾದಾ ಸಾಹೇಬ್ ಫಾಲ್ಕೆ’ ಗರಿ


24 amitabh bachchan
ನವದೆಹಲಿ
: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಗಾಗಿ ಕೇಂದ್ರ ಸರ್ಕಾರವು ಕೊಡುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಈ ಬಾರಿ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಆಯ್ಕೆಯಾದರು.

ಬಚ್ಚನ್  ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಗ್ಗೆ  2019 ಸೆಪ್ಟೆಂಬರ್  24ರ ಮಂಗಳವಾರ ಟ್ವೀಟ್ ಮಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, “ಎರಡು ತಲೆಮಾರುಗಳನ್ನು ರಂಜಿಸಿದ ಮತ್ತು ಸ್ಫೂರ್ತಿಯ ಸೆಲೆ, ಬೆಳ್ಳಿಪರದೆಯ ದಂತಕಥೆ ಅಮಿತಾಭ್ ಬಚ್ಚನ್ ಅವರು ಅವಿರೋಧವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಡೀ ದೇಶ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಇದು ಖುಷಿ ಕೊಡುವ ಸಂಗತಿ. ಅಮಿತಾಭ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು” ಎಂದು ತಿಳಿಸಿದರು.

ಸಿನಿಮಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರವು 1969ರಿಂದ ಪ್ರಶಸ್ತಿ ನೀಡುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.

ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ 10 ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ನಟಿ ದೇವಿಕಾ ರಾಣಿ ಅವರಿಗೆ 1969ರಲ್ಲಿ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊತ್ತ ಮೊದಲ ದಾದಾ ಸಾಹೇಬ್​ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು. ವಿಶೇಷ ಎಂದರೆ ಇದೇ ವರ್ಷ ಅಮಿತಾಭ್ ಚೊಚ್ಚಲ ಸಿನಿಮಾ ಮೃಣಾಲ್ ಸೇನ್‍‍ರ ‘ಭುವನ್ ಶೋಮ್‌’ನಲ್ಲಿ ನಿರೂಪಕರಾಗಿ ಪರಿಚಿತರಾಗಿದ್ದರು. ಬಳಿಕ ತಮ್ಮ ವಿಶಿಷ್ಟ ಧ್ವನಿ ಹಾಗೂ ಅತ್ಯದ್ಭುತ ಡೈಲಾಗ್ ಡೆಲಿವರಿ ಮೂಲಕ ಅಪಾರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಸಂಪಾದಿಸಿದರು ಅಮಿತಾಭ್.

ಎಪ್ಪತ್ತರ ದಶಕದಲ್ಲಿ ಝಂಜೀರ್, ದೀವಾರ್ ಮತ್ತು ಶೋಲೆಯಂತಹ ಚಿತ್ರಗಳಲ್ಲಿನ ಅಮೋಘ ಅಭಿನಯದ ಮೂಲಕ ಆ್ಯಂಗ್ರಿ ಯಂಗ್ ಮ್ಯಾನ್ ಎಂದೇ ಗುರುತಿಸಿಕೊಂಡಿದ್ದವರು ಅಮಿತಾಭ್.

ಐದು ದಶಕಗಳ ತಮ್ಮ ವೃತ್ತಿ ಬದುಕಿನಲ್ಲಿ ಮರೆಯಲಾಗದ, ಅಚ್ಚಳಿಯ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿರುವ  ಅವರು ನಾಲ್ಕು ಸಲ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದರು.

ಭಾರತೀಯ ಚಿತ್ರರಂಗದ ದಿಗ್ಗಜರಾದ ವರನಟ ಡಾ.ರಾಜ್ ಕುಮಾರ್, ವಿನೋದ್ ಖನ್ನಾ, ಮನೋಜ್ ಕುಮಾರ್, ಶಶಿ ಕಪೂರ್, ಗುಲ್ಜಾರ್, ಸೌಮಿತ್ರ ಚಟರ್ಜಿ, ಕೆ ಬಾಲಚಂದರ್, ಡಿ ರಾಮಾನಾಯ್ಡು, ಮನ್ನಾ ಡೇ, ಶ್ಯಾಮ್ ಬೆನಗಲ್, ಆಡೂರ್ ಗೋಪಾಲಕೃಷ್ಣನ್, ಮೃಣಾಲ್ ಸೇನ್, ಯಶ್ ಚೋಪ್ರಾ, ಆಶಾ ಭೋಸ್ಲೆ, ಬಿ.ಆರ್ ಚೋಪ್ರಾ, ಸೇರಿದಂತೆ ಮುಂತಾದ ಹಲವಾರು ದಿಗ್ಗಜರು ಈ ಗೌರವಕ್ಕೆ ಪಾತ್ರರಾಗಿದ್ದರು.

ದಾದಾಸಾಹೇಬ್ ಫಾಲ್ಕೆ ಗೌರವಕ್ಕೆ ಪಾತ್ರರಾಗಿರುವ ಅಮಿತಾಭ್ ಬಚ್ಚನ್‌‍ರನ್ನು ಬಾಲಿವುಡ್ ಸೆಲೆಬ್ರಿಟಿಗಳಾದ ಕರಣ್ ಜೋಹಾರ್, ಅನಿಲ್ ಕಪೂರ್ ಟ್ವಿಟರ್‌‌ನಲ್ಲಿ ಅಭಿನಂದಿಸಿದರು.

ಕಳೆದ ವರ್ಷ 65ನೇ ರಾಷ್ಟ್ರೀಯ ಪ್ರಶಸ್ತಿ ಸಂದರ್ಭದಲ್ಲಿ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಅಮಿತಾಭ್ ಬಚ್ಚನ್ ಇದುವರೆಗೆ ತಮ್ಮ ವೃತ್ತಿ ಬದುಕಿನಲ್ಲಿ ನಾಲ್ಕು ಬಾರಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2015ರಲ್ಲಿ ತೆರೆಕಂಡ ‘ಪಿಕು’ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಕೊನೆಯದಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿ ದಕ್ಕಿತ್ತು.

ಸದ್ಯಕ್ಕೆ ಅಭಿತಾಭ್ ಅವರು ಕಿರುತೆರೆಯ ಜನಪ್ರಿಯ ಗೇಮ್ ಶೋ ಕೌನ್ ಬನೇಗಾ ಕರೋಡ್‌ಪತಿ ಸೀಸನ್ 11 ನಿರೂಪಕರಾಗಿದ್ದಾರೆ. ಜೊತೆಗೆ ಬದ್ಲಾ ಎಂಬ ಕ್ರೈಂ ಥ್ರಿಲ್ಲರ್ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ.

September 24, 2019 - Posted by | Award, ಭಾರತ, ರಾಷ್ಟ್ರೀಯ, ವಿಮಾನ, Cinema, Education, Flash News, General Knowledge, India, Nation, Spardha | , , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ