SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ರಾಜ್ಯದ ೧೫ ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ಮಧ್ಯಂತರ ತಡೆ


26 supreme court karnataka bye elections
ಅನರ್ಹ ಶಾಸಕರಿಗೆ ತಾತ್ಕಾಲಿಕ ನಿರಾಳತೆ, ವಿಸ್ತೃತ ವಿಚಾರಣೆ ಅಕ್ಟೋಬರ್ ೨೨ಕ್ಕೆ

ನವದೆಹಲಿ: ವಿಧಾನಸಭಾಧ್ಯಕ್ಷರು ಶಾಸಕ ಸ್ಥಾನದಿಂದ ತಮ್ಮನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಮತ್ತು ಜನತಾದಳದ (ಜಾತ್ಯತೀತ)  ೧೭ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಎನ್ .ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠವು ೧೫ ಕ್ಷೇತ್ರಗಳ ಉಪಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ, ಪ್ರಕರಣದ ವಿಸ್ತೃತ ವಿಚಾರಣೆಯನ್ನು ಅಕ್ಟೋಬರ್ ೨೨ರಂದು ನಡೆಸುವುದಾಗಿ  2019 ಸೆಪ್ಟೆಂಬರ್  26ರ ಗುರುವಾರ ಪ್ರಕಟಿಸಿತು.

ಇದರೊಂದಿಗೆ ಉಪಚುನಾವಣೆಯನ್ನು ತಡೆ ಹಿಡಿಯುವಂತೆ ಕೋರಿದ್ದ ಅನರ್ಹ ಶಾಸಕರಿಗೆ ತಾತ್ಕಾಲಿಕ ನಿರಾಳತೆ ಲಭಿಸಿತು.

ಇದಕ್ಕೆ ಮುನ್ನ ಚುನಾವಣಾ ಆಯೋಗವು ಅಕ್ಟೋಬರ್ ೨೧ಕ್ಕೆ ನಿಗದಿಯಾಗಿರುವ ಕರ್ನಾಟಕದ ೧೫ ವಿಧಾನಸಭಾ ಸ್ಥಾನಗಳ ಉಪಚುನಾವಣೆಯನ್ನು ಅನರ್ಹ ಶಾಸಕರ ಅರ್ಜಿಗಳ ಬಗ್ಗೆ ನ್ಯಾಯಮೂರ್ತಿಗಳು ನಿರ್ಧರಿಸುವವರೆಗೆ ಮುಂದೂಡಲು ತಾನು ಸಿದ್ಧ ಎಂದು ಪೀಠಕ್ಕೆ ತಿಳಿಸಿತು.

ತಮ್ಮನ್ನು ಹಾಲಿ ವಿಧಾನಸಭೆಯ ಅವಧಿ ಮುಗಿಯುವವರೆಗೂ ಅನರ್ಹಗೊಳಿಸಿ ವಿಧಾನಸಭಾಧ್ಯಕ್ಷರು ನೀಡಿದ್ದ ಆದೇಶವನ್ನು ಪ್ರಶ್ನಿಸಿ ೧೭ ಮಂದಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಕಾಲದಲ್ಲಿ ಚುನಾವಣಾ ಆಯೋಗವು ತನ್ನ ನಿಲುವನ್ನು ಸುಪ್ರೀಂಕೋರ್ಟ್ ಪೀಠಕ್ಕೆ ತಿಳಿಸಿತು.

ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತ ಕೃಷ್ಣ ಮುರಾರಿ ಅವರೂ ಇದ್ದ ತ್ರಿಸದಸ್ಯ ಪೀಠವು ತಾನು ವಿಷಯವನ್ನು ಪೂರ್ಣವಾಗಿ ಆಲಿಸಿ ನಿರ್ಧರಿಸುವುದಾಗಿ ಹೇಳಿದ ಬಳಿಕ ಚುನಾವಣಾ ಆಯೋಗದ ಪರ ಹಾಜರಾಗಿದ್ದ ಹಿರಿಯ ವಕೀಲ ರಾಕೇಶ್ ದ್ವಿವೇದಿ ಅವರು  ’ಹಾಗಿದ್ದರೆ (ಕರ್ನಾಟಕದ ೧೫ ವಿಧಾನಸಭಾ ಸ್ಥಾನಗಳ) ಉಪಚುನಾವಣೆಯನ್ನು ಸ್ವಲ್ಪ ಕಾಲ ಮುಂದೂಡುವಂತೆ ನಾನು ಚುನಾವಣಾ ಆಯೋಗಕ್ಕೆ ಸೂಚಿಸುವೆ’ ಎಂದು ಹೇಳಿದರು.

‘ನಿಮ್ಮ ಹೇಳಿಕೆಯನ್ನು ಆದೇಶದಲ್ಲಿ ದಾಖಲಿಸಬಹುದೇ’ ಎಂಬುದಾಗಿ ಪೀಠ ಪ್ರಶ್ನಿಸಿದಾಗ ಹಿರಿಯ ವಕೀಲರು ’ನಾವು ಹಾಗೆಯೇ ಮಾಡುತ್ತೇವೆ’ ಎಂದು ಉತ್ತರಿಸಿದರು.

ಅನರ್ಹ ಶಾಸಕರು, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಮತ್ತು ಇತರ ಕಕ್ಷಿದಾರರ ಪರ ಹಾಜರಾಗಿದ್ದ ವಕೀಲರು ಉಪಚುನಾವಣೆಗನ್ನು ಮುಂದೂಡಲು ತಮ್ಮ ಆಕ್ಷೇಪವಿಲ್ಲ ಎಂಬುದಾಗಿ ಪೀಠಕ್ಕೆ ತಿಳಿಸಿದರು.

ಆಗ ತನ್ನ ಮಧ್ಯಂತರ ತಡೆಯಾಜ್ಞೆ ಆದೇಶವನ್ನು ಪ್ರಕಟಿಸಿದ ಪೀಠವು, ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆಗಳಿಗೆ ನಡೆಯಲಿರುವ ಚುನಾವಣೆ ಮತ್ತು ಹಾಗೂ ಇತರ ರಾಜ್ಯಗಳಲ್ಲಿ ನಡೆಯಲಿರುವ ಉಪಚುನಾವಣೆಗಳು ಪೂರ್ಣಗೊಂಡ ಬಳಿಕ ಅಕ್ಟೋಬರ್ ೨೨ರಂದು ತಾನು ಪ್ರಕರಣವನ್ನು ವಿಸ್ತೃತ ವಿಚಾರಣೆಗಾಗಿ ಎತ್ತಿಕೊಳ್ಳುವುದಾಗಿ ಹೇಳಿತು.

ಕಾಂಗ್ರೆಸ್ ಮತ್ತು ಜನತಾದಳದ (ಎಸ್) ೧೭ ಶಾಸಕರ ರಾಜೀನಾಮೆಯಿಂದಾಗಿ ಎಚ್.ಡಿ. ಕುಮಾರಸ್ವಾಮಿ ನೇತೃತ್ವದ ಉಭಯ ಪಕ್ಷಗಳ ಮೈತ್ರಿ ಸರ್ಕಾರ ಕಳೆದ ಜುಲೈ ತಿಂಗಳಲ್ಲಿ ಪತನಗೊಂಡು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ರಾಜೀನಾಮೆ ನೀಡಿದ್ದರು. ಇದರೊಂದಿಗೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಏರಲು ಮಾರ್ಗ ಸುಗಮಗೊಂಡಿತ್ತು.

ಸರ್ಕಾರ ಪತನದ ಬಳಿಕ ಆಗಿನ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ ಕುಮಾರ್ ಅವರು ಪಕ್ಷಾಂತರದ ನೆಲೆಯಲ್ಲಿ ಈ ೧೭ ಮಂದಿ (ಕಾಂಗ್ರೆಸ್ ಪಕ್ಷದ ೧೩ ಮತ್ತು ಜನತಾದಳದ (ಎಸ್) ಮೂವರು ಮತ್ತು ಒಬ್ಬ ಪಕ್ಷೇತರ)  ಶಾಸಕರನ್ನು ಸದಸ್ಯತ್ವದಿಂದ ಅನರ್ಹಗೊಳಿಸಿದ್ದರು.

ವಿಧಾನಸಭಾಧ್ಯಕ್ಷರು ತಮ್ಮನ್ನು ಅರ್ನಹಗೊಳಿಸಿ ಹೊರಡಿಸಿರುವ ಆದೇಶವು ಸಂಪೂರ್ಣವಾಗಿ ಅಕ್ರಮ, ನಿರಂಕುಶ ಮತ್ತು ದುರುದ್ದೇಶಪೂರಿತ ಕ್ರಮ ಎಂದು ಅನರ್ಹ ಶಾಸಕರು ಸುಪ್ರೀಂಕೋರ್ಟಿಗೆ ಸಲ್ಲಿಸಿದ್ದ ತಮ್ಮ ಅರ್ಜಿಯಲ್ಲಿ ದೂರಿದ್ದರು. ತಮ್ಮ ರಾಜೀನಾಮೆಗಳು ಸ್ವಯಂ ನಿರ್ಧಾರದ್ದಲ್ಲ ಮತ್ತು ನೈಜವಲ್ಲ ಎಂಬ ನೆಲೆಯಲ್ಲಿ ಅವುಗಳನ್ನು ತಿರಸ್ಕರಿಸಿದ ರಮೇಶ ಕುಮಾರ್ ಅವರ ನಿರ್ಧಾರವನ್ನು ರದ್ದುಪಡಿಸಬೇಕು ಎಂದೂ ಅನರ್ಹಗೊಂಡ ಶಾಸಕರು ಮನವಿಮಾಡಿದ್ದರು.

ಅನರ್ಹಗೊಂಡ ಶಾಸಕರು ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯದಿನ ಎಂಬುದಾಗಿ ನಿಗದಿ ಪಡಿಸಲಾಗಿದ್ದ  ಉಪಚುನಾವಣೆಯಲ್ಲಿ ಸ್ಪರ್ಧಿಸಲು ತಮಗೆ ಅವಕಾಶ ನೀಡಬೇಕು ಅಥವಾ ಉಪಚುನಾವಣೆಯನ್ನು ಮುಂದೂಡಬೇಕು ಎಂದು ಕೋರಿ ಸುಪ್ರೀಂಕೋರ್ಟಿಗೆ ಮಧ್ಯಂತರ ಅರ್ಜಿ ಸಲ್ಲಿಸಿದ್ದರು.

ಶಾಸಕರ ಅನರ್ಹತೆಯನ್ನು ಪ್ರಶ್ನಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಲ್ಲಿಸಲಾದ ಮಧ್ಯಂತರ ಅರ್ಜಿಯನ್ನು ಪರಿಶೀಲಿಸಿದ ಪೀಠವು, ಚುನಾವಣಾ ಆಯೋಗದ ನಿಲುವಿನ ಬಗ್ಗೆ ಪ್ರಶ್ನಿಸಿತು. ಚುನಾವಣಾ ಆಯೋಗದ ಪರ ವಕೀಲ ರಾಕೇಶ್ ದ್ವಿವೇದಿ ಅವರು ಕರ್ನಾಟಕದ ೧೫ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಕ್ರಿಯೆಯನ್ನು ಪೀಠವು ನಿರ್ಧರಿಸುವವರೆಗೆ ತಡೆ ಹಿಡಿಯಲು ಸಿದ್ಧ ಎಂದು ತಿಳಿಸಿದರು.

ಹಾಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವು ವಿಶ್ವಾಸಮತ ಗೆದ್ದ ಬಳಿಕ, ವಿಧಾನಸಭಾಧ್ಯಕ್ಷ ಸ್ಥಾನಕ್ಕೆ ಏರಿದ್ದ ಹಾಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮ್ಮ ಪೂರ್ವಾಧಿಕಾರಿ ಕೆ.ಆರ್. ರಮೇಶ ಕುಮಾರ್ ಅವರ ವಾದಕ್ಕೆ ವಿರುದ್ಧವಾಗಿ ಪ್ರತಿಯೊಬ್ಬ ಶಾಸಕನಿಗೂ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಜಾತಾಂತ್ರಿಕ ಹಕ್ಕು ಇದೆ ಎಂದು ಪೀಠಕ್ಕೆ ಹಿಂದಿನ ದಿನ ತಿಳಿಸಿದ್ದರು.  ಶಾಸಕರಿಗೆ ತಮ್ಮ ರಾಜಕೀಯ ಪಕ್ಷಕ್ಕಿಂತಲೂ ಹೆಚ್ಚಾಗಿ ತನ್ನನ್ನು ಚುನಾಯಿಸಿದ ಮತದಾರರಿಗೆ ನಿಷ್ಠೆ ತೋರಿಸಬೇಕಾದ ಕರ್ತವ್ಯ ಇದೆ ಎಂದೂ ಅವರು ಹೇಳಿದ್ದರು.

ವಿಧಾನಸಭಾಧ್ಯಕ್ಷರ ಕಚೇರಿಯನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಅವರು ’ಶಾಸಕನನ್ನು ರಾಜಕೀಯ ಪಕ್ಷದ ಸದಸ್ಯತ್ವ ತ್ಯಜಿಸಿದ್ದಕ್ಕಾಗಿ ಅನರ್ಹಗೊಳಿಸಬಹುದು. ಆದರೆ ಸದನದ ಸದಸ್ಯತ್ವ ಬಿಟ್ಟದ್ದಕ್ಕಾಗಿ ಅನರ್ಹಗೊಳಿಸಲಾಗದು’ ಎಂದು ಹೇಳಿದ್ದರು.

ಅನರ್ಹ ಶಾಸಕರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹ್ಟಗಿ, ಅನರ್ಹ ಶಾಸಕ ಡಾ.ಸುಧಾಕರ್ ಪರ ವಕೀಲ ಸುಂದರಂ ವಾದ ಮಂಡಿಸಿದ್ದರು.

ಈದಿನ ವಾರ ಮತ್ತೆ ಮುಂದುವರೆದ ವಿಚಾರಣೆಯಲ್ಲಿ ಕಾಂಗ್ರೆಸ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.

ಶಾಸಕರನ್ನು ಅನರ್ಹಗೊಳಿಸಿರುವುದು ವಿಧಾನಸಭೆ ಅವಧಿಯವರೆಗೆ, ಉಪಚುನಾವಣೆಗೆ ಸ್ಪರ್ಧಿಸಿದರೆ ಅನರ್ಹತೆಯ ಅಗತ್ಯವೇನಿದೆ? ಅನರ್ಹಗೊಳಿಸುವಾಗ ಅವಧಿ ನಿಗದಿಪಡಿಸುವ ಅಧಿಕಾರ ವಿಧಾನಸಭಾಧ್ಯಕ್ಷರಿಗೆ ಇದೆ. ಅನರ್ಹಗೊಳಿಸಿದವರ ಕ್ಷೇತ್ರಕ್ಕೆ ಆರು ತಿಂಗಳೊಳಗೆ ಚುನಾವಣೆ ನಡೆಯಲೇಬೇಕಲ್ಲಾ? ಆಗ ಸ್ಪರ್ಧಿಸಿದರೆ ತೊಂದರೆ ಏನಿದೆ? ವಿಧಾನಸಭಾಧ್ಯಕ್ಷರ ಕಚೇರಿ ಸಂವಿಧಾನದತ್ತವಾದ ಸ್ವಾಯತ್ತ ಸಂಸ್ಥೆ. ಅನರ್ಹತೆಗೂ ಒಂದು ಅರ್ಥ ಬೇಕಲ್ಲಾ ಎಂದು ಕೆಪಿಸಿಸಿ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿದರು.

ಸಭಾಧ್ಯಕ್ಷರ ಆದೇಶವನ್ನು ಚುನಾವಣಾ ಆಯೋಗದ ಅಧಿಸೂಚನೆ ನಿರ್ಜೀವಗೊಳಿಸಿದರೆ. ಆಗ ೧೦ನೇ ಶೆಡ್ಯೂಲ್ ದುರ್ಬಲವಾಗಲಿದೆ. ಈ ಪ್ರಕರಣದ ತೀರ್ಪಿನಿಂದ ಬಹಳಷ್ಟು ಪ್ರಕರಣಗಳಿಗೆ ಪೂರ್ವ ನಿದರ್ಶನವಾಗಲಿದೆ. ಉಮೇಶ್ ಜಾಧವ್ ರಾಜೀನಾಮೆ ಸ್ವೀಕರಿಸಿ, ಉಳಿದವರನ್ನು ಅನರ್ಹಗೊಳಿಸಿದ್ದಾರೆ ಎಂದು ವಾದಿಸಿದ್ದಾರೆ. ಆದರೆ ಜಾಧವ್ ಖುದ್ದು ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ನೀಡಿ ವಿವರಣೆ ಕೊಟ್ಟಿದ್ದಾರೆ ಎಂದು ಸಿಬಲ್ ವಾದಿಸಿದರು.

ಚುನಾವಣಾ ಆಯೋಗವು ಸೆಪ್ಟೆಂಬರ್ ೨೩ರಂದು ಮಾಜಿ ವಿಧಾನಸಭಾದ್ಯಕ್ಷರು ಈ ೧೭ ಶಾಸಕರನ್ನು ಅನರ್ಹಗೊಳಿಸಿ ನೀಡಿರುವ ಆದೇಶವು ಚುನಾವಣೆಯಲ್ಲಿ ಸ್ಪರ್ಧಿಸುವ ಅವರ ಹಕ್ಕನ್ನು ವಂಚಿಸುವುದಿಲ್ಲ ಎಂದು ಹೇಳಿತ್ತು.

September 26, 2019 - Posted by | ಆರ್ಥಿಕ, ಕರ್ನಾಟಕ, ಪ್ರಧಾನಿ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Pakistan, Politics, Spardha, supreme court | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ