SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ ಭಾರತ- ಪಾಕ್ ಸಹಿ

24 kartarpur corridar agreement signed
ನವದೆಹಲಿ:
ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್ ದೇವ್ ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾದ ಗುರುದ್ವಾರವನ್ನು ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ಅವಕಾಶ ನೀಡುವ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯ ರೇಖೆ’ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯ “ಆಡಳಿತಾತ್ಮಕ ಸಮಸ್ಯೆಗಳ’ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು.

“ಕರ್ತಾರಪುರ ಸಾಹಿಬ್  ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ೯ ರಂದು ಪಾಕಿಸ್ತಾನದ ನರೋವಾಲದಲ್ಲಿ  ಕರ್ತಾರಪುರ ಸಾಹಿಬ್ ಕಾರಿಡಾರನ್ನು ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಲಿದ್ದಾರೆ ”ಎಂದು ಶೂನ್ಯ ರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು.

ಗುರುನಾನಕ್ ದೇವ್‌ಅವರ ೫೫೦ ನೇ ಜನ್ಮದಿನಾಚರಣೆಗೆ ಮುನ್ನ ಮುನ್ನ ಕಾರಿಡಾರ್ ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಕಾರಿಡಾರ್ ಅನುಕೂಲಕರವಾಗಲಿದೆ. ೧೫೨೨ ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್‌ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ. ವೀಸಾದ ಅಗತ್ಯ ಬೀಳುವುದಿಲ್ಲ.

ಏನಿದು ಕಾರಿಡಾರ್?

ಪಂಜಾಬಿನ ಕರ್ತಾರಪುರದಲ್ಲಿರುವ ಗುರುದ್ವಾರ ದರ್ಬಾರ್ ಸಾಹಿಬ್ ತಲುಪಲು ಸಿದ್ಧ ಪಡಿಸಲಾಗಿರುವ ನೂತನ ಪ್ರವೇಶ ಮಾರ್ಗವಾಗಿದೆ ಈ ಕರ್ತಾರಪುರ ಕಾರಿಡಾರ್.

ಉಭಯ ರಾಷ್ಟ್ರಗಳ ನಡುವಣ ಪ್ರಕ್ಷುಬ್ಧತೆಯ ಪರಿಣಾಮವಾಗಿ ಭಾರತೀಯ ಯಾತ್ರಾರ್ಥಿಗಳಿಗೆ ಈ ದರ್ಬಾರ್ ಸಾಹಿಬ್‌ಗೆ ಪ್ರವೇಶ ಪಡೆಯುವುದು ಈವರೆಗೆ ದುಸ್ತರವಾಗಿತ್ತು.

೧೯೪೭ರಲ್ಲಿ ಭಾರತವನ್ನು ಬಿಟಿಷರಿಂದ ವಿಭಜಿಸಲ್ಪಟ್ಟ ಪಂಜಾಬಿನಲ್ಲಿ ಸಿಖ್ ಪಂಥವು ಶತಕಗಳಷ್ಟು ಹಿಂದೆಯೇ ಜನ್ಮತಾಳಿತ್ತು. ೧೬ನೇ ಶತಮಾನದಲ್ಲಿ ಸಿಖ್ ಪಂಥದ ಸಂಸ್ಥಾಪಕ ಗುರು ನಾನಕ್ ದೇವ್ ಅವರು ನಿರ್ಮಿಸಿದ್ದು ಎಂಬುದಾಗಿ ನಂಬಲಾದ ಕರ್ತಾರಪುರದ ಈ ಗುರುದ್ವಾರವು ಭಾರತದ ಗಡಿಯಿಂದ ಸುಮಾರು ೪ ಕಿಮೀ ದೂರದಲ್ಲಿ (೨.೫ ಮೈಲು) ಪಾಕಿಸ್ತಾನದ ಭೂಪ್ರದೇಶದಲ್ಲಿದೆ.

ಈ ವಾರಾರಂಭದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಕರ್ತಾರಪುರ ಗುರುದ್ವಾರವು ವಿಶ್ವದಲ್ಲೇ ಅತ್ಯಂತ ವಿಶಾಲವಾದ ಗುರುದ್ವಾರವಾಗಿದ್ದು, ತಮ್ಮ ರಾಷ್ಟ್ರವು ವಿಶ್ವಾದ್ಯಂತದ ಸಿಕ್ಖರಿಗೆ ಈ ಗುರುದ್ವಾರ ದರ್ಶನಕ್ಕೆ ತನ್ನ ದ್ವಾರಗಳನ್ನು ತೆರೆಯುತ್ತಿದೆ ಎಂದು ಹೇಳಿದ್ದರು.

ನವೆಂಬರ್ ೧೦ರಂದು ಸಾರ್ವಜನಿಕರಿಗೆ ಮುಕ್ತವಾಗಲಿರುವ ಕಾರಿಡಾರ್ ಭಾರತ-ಪಾಕ್ ಗಡಿಯಿಂದ ನೇರವಾಗಿ ಗುರುದ್ವಾರವನ್ನು ಸಂಪರ್ಕಿಸುತ್ತದೆ.

ಕಾರಿಡಾರ್‌ಗೆ ಸಂಬಂಧಿಸಿದ ವಿವರಗಳನ್ನು ಅಂತಿಮಗೊಳಿಸುವುದೇನೂ ಸುಲಭವಾದ ವಿಷಯವಾಗಿರಲಿಲ್ಲ. ಒಂದು ವರ್ಷದ ಹಿಂದೆ ಪ್ರಕಟಿಸಿದ ಬಳಿಕ ಈ ಪ್ರಕ್ರಿಯೆ ಹಲವಾರು ಕಾರಣಗಳಿಂದಾಗಿ ಉದ್ದಕ್ಕೆ ಎಳೆಯಲ್ಪಟ್ಟಿತ್ತು.

ಕಾರಿಡಾರ್ ಬಗ್ಗೆ ನಮಗೇನು ಗೊತ್ತಿದೆ?

ಕಾರಿಡಾರ್ ಪ್ರಸ್ತುತ ನಿರ್ಮಾಣದ ಕೊನೆಯ ಹಂತದಲ್ಲಿದ್ದು ನವೆಂಬರ್ ಆರಂಭದಲ್ಲಿ ಬಳಕೆಗೆ ಮುಕ್ತವಾಗಲಿದೆ ಎಂದು ಅಧಿಕಾರಿಗಳು ಹೇಳಿದರು.

ನೂರಾರು ಮಂದಿ ಕಾರ್ಮಿಕರು ಈಗಲೂ  ೪೨ ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಗುರುದ್ವಾರ ಮತ್ತು ಅದರ ವಿಸ್ತರಣಾ ಕಾರ್‍ಯಕ್ಕೆ ಅಂತಿಮ ಸ್ಪರ್ಶ ನೀಡುವ ಕಾರ್‍ಯದಲ್ಲಿ ಮಗ್ನರಾಗಿದ್ದಾರೆ.

ಸಂದರ್ಶಕರ ಅನುಕೂಲಕ್ಕಾಗಿ ಅಂತಾರಾಷ್ಟ್ರೀಯ ಗಡಿ ಮತ್ತು ಗುರುದ್ವಾರದ ಮಧ್ಯೆ ಹರಿಯುವ ರಾವಿ ನದಿಗೆ ಅಡ್ಡಲಾಗಿ ಒಂದು ಸೇತುವೆ ನಿರ್ಮಾಣ ಕೂಡಾ ಈ ಕಾರಿಡಾರ್ ಯೋಜನೆಯಲ್ಲಿ ಸೇರಿದೆ.

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಅಧಿಕೃತವಾಗಿ ಯೋಜನೆಯನ್ನು ಘೋಷಿಸಿದ ಬಳಿಕ ಗುರುದ್ವಾರದ ಸುತ್ತ ಮುತ್ತ ಸವಲತ್ತುಗಳನ್ನು ಒದಗಿಸುವ ಸಲುವಾಗಿ ಕಾಮಗಾರಿಗಳೂ ಆರಂಭಗೊಂಡಿದ್ದವು.

ಗುರುದ್ವಾರದ ವಿಸ್ತರಣೆ, ನೂತನ ಸವಲತ್ತುಗಳ ಪಟ್ಟಿಯಲ್ಲಿ ನೂತನ ಪ್ರಾಂಗಣ, ವಸ್ತುಸಂಗ್ರಹಾಲಯ, ಗ್ರಂಥಾಲಯ, ವಸತಿ ನಿಲಯಗಳು (ಡಾರ್ಮೆಟ್ರಿಗಳು), ಲಾಕರ್ ಕೊಠಡಿಗಳು, ವಲಸೆ ಕೇಂದ್ರ ಮತ್ತು ಪ್ರವಾಹದ ಸಂದರ್ಭದಲ್ಲಿ ಗುರುದ್ವಾರ ರಕ್ಷಣೆಗಾಗಿ ಒಂದು ಒಡ್ಡು ನಿರ್ಮಾಣ ಕೂಡಾ ಸೇರಿವೆ.

ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಕಾರಿಡಾರ್ ಮೂಲಕ ತೆರಳಲು ಭಾರತೀಯ ಯಾತ್ರಾರ್ಥಿಗಳಿಗೆ ಪಾಸ್‌ಪೋರ್ಟ್ ಅಥವಾ ವೀಸಾದ ಅಗತ್ಯವಿಲ್ಲ, ಆದರೆ ಅಲ್ಲಿಗೆ ಹೋಗುವುದಕ್ಕೆ ಮುನ್ನ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ.

ಪ್ರಕ್ರಿಯೆಯ ಪೂರ್ಣ ಮಾಹಿತಿಗಳನ್ನು ಅಧಿಕಾರಿಗಳು ಇನ್ನೂ ಬಿಡುಗಡೆ ಮಾಡಿಲ್ಲ, ಆದರೆ ಪ್ರವಾಸಿಗರು ಅನುಮತಿಗಾಗಿ ಅಂತರ್ಜಾಲದ (ಆನ್ ಲೈನ್) ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ, ಮತ್ತು ಅದಕ್ಕೆ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳ ಸರ್ಕಾರಗಳು ಮಂಜೂರಾತಿ ನೀಡಬೇಕಾಗುತ್ತದೆ ಎಂದು ಹೇಳಲಾಗಿದೆ.

೧೯೯೮ರಿಂದಲೇ ಮಾತುಕತೆ

ಭಾರತದಲ್ಲಿನ ಸಿಖ್ ಸಮುದಾಯವು ಕಾರಿಡಾರ್ ಮೂಲಕ ಗುರುದ್ವಾರ ಸಂದರ್ಶನಕ್ಕೆ ವ್ಯವಸ್ಥೆ ಬೇಕು ಎಂದು ದೀರ್ಘ ಕಾಲದ ಹಿಂದೆಯೇ ಬೇಡಿಕೆ ಇಟ್ಟಿತ್ತು. ಗುರುದ್ವಾರಕ್ಕೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಭಾರತದ ಹಿಂದಿನ ಸರ್ಕಾರಗಳು ಪ್ರಾಥಮಿಕ ಮಾತುಕತೆಗಳನ್ನೂ ಆರಂಭಿಸಿದ್ದವು.

೧೯೯೮ರಲ್ಲಿ ಈ ನಿಟ್ಟಿನ ಮೊದಲ ಮಾತುಕತೆ ನಡೆದಿತ್ತು. ಬಳಿಕ ೨೦೦೪ರಲ್ಲಿ ಮತ್ತು ೨೦೦೮ರಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಈ ಮಾತುಕತೆಗಳಿಂದ ಸ್ಪಷ್ಟವಾದ ತೀರ್ಮಾನ ಸಾಧ್ಯವಾಗಿರಲಿಲ್ಲ.

ವಿಭಜನೆಯ ಬಳಿಕ ಭಾರತೀಯರಿಗೆ ಗುರುದ್ವಾರಕ್ಕೆ ಸೀಮಿತ ಪ್ರವೇಶದ ಅವಕಾಶವಿತ್ತು. ಭೇಟಿಗೆ ವೀಸಾ ಪಡೆಯುವುದೇ ದೊಡ್ಡ ಹೋರಾಟವಾಗುತ್ತಿತ್ತು.

ಕರ್ತಾರಪುರದಲ್ಲಿ ಪ್ರಸ್ತುತ ಇರುವ ಗುರುದ್ವಾರವನ್ನು ಮೂಲ ಗುರುದ್ವಾರವು ಪ್ರವಾಹದಲ್ಲಿ ನಾಶವಾದ ಬಳಿಕ ೧೯೨೫ರಲ್ಲಿ ನಿರ್ಮಿಸಲಾಗಿತ್ತು. ಬಳಿಕ ಪಾಕಿಸ್ತಾನಿ ಸರ್ಕಾರವು ೨೦೦೪ರಲ್ಲಿ ಅದನ್ನು ಪುನರ್ ನಿರ್ಮಿಸಿತ್ತು.

ಗುರುನಾನಕ್ ಅವರು ತಮ್ಮ ಜೀವನದ ಕೊನೆಯ ೧೮ ವರ್ಷಗಳನ್ನು ಕಳೆದುದರ ನೆನಪಿಗಾಗಿ ಇಲ್ಲಿ ಗುರುದ್ವಾರವನ್ನು ನಿರ್ಮಿಸಲಾಗಿತ್ತು.

ಗುರು ನಾನಕ್ ದೇವ್ ಅವರ ಜನ್ಮಸ್ಥಾನದ ಬಳಿಕ ಪಾಕಿಸ್ತಾನದಲ್ಲಿನ ಈ ಗುರುದ್ವಾರವು ಸಿಕ್ಖರ ಪಾಲಿನ ಎರಡನೇ ಪವಿತ್ರ ಸ್ಥಳ ಎಂಬುದಾಗಿ ಪರಿಗಣಿಸಲ್ಪಟ್ಟಿದೆ.

October 24, 2019 Posted by | ಪಾಕಿಸ್ತಾನ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Festival, Flash News, General Knowledge, India, Nation, News, Spardha, Temples, Temples, ದೇವಾಲಯಗಳು, World | , , , , , , , , | Leave a comment

ಈ ವರ್ಷದ ದೀಪಾವಳಿಗೆ ರಾಕೆಟ್ ಅಥವಾ ಬಾಂಬ್ ಇಲ್ಲ, ೨ ಪಟಾಕಿ ಮಾತ್ರ….!

22 Diwali
ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಕಟ್ಟು ನಿಟ್ಟಿನ ನಿಷೇಧ

ನವದೆಹಲಿ: ಎರಡು ಮಾದರಿಯ ಪಟಾಕಿಗಳು ಮಾತ್ರವೇ ಕಾನೂನುಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸುವುದರೊಂದಿಗೆ ಪ್ರಸ್ತುತ ವರ್ಷದ ದೀಪಾವಳಿ ಸದ್ದು ಗದ್ದಲವಿಲ್ಲದೆ ದೀಪಾವಳಿಯಾಗಲಿದೆ. ’ಅನರ್’ ಮತ್ತು ಫುಲ್ಜಾರಿ’ಗಳ ಹಸಿರು ಆವೃತ್ತಿ ಮಾತ್ರವೇ ಕಾನೂನು ಬದ್ಧ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸಿರುವುದರಿಂದ ಇವೆರಡೂ ಪಟಾಕಿಗಳೂ ಈ ಬಾರಿ ಸದ್ದು ಮಾಡದೆ ’ಮೌನ’ ಆಗಲಿವೆ. ಉಳಿದ ರಾಕೆಟ್‌ಗಳು, ಬಾಂಬುಗಳು ಮತ್ತು ಸದ್ದು ಮಾಡುವ ಇತರ ಎಲ್ಲ  ಪಟಾಕಿಗಳೂ ಈ ಬಾರಿ ನಿಷೇಧಕ್ಕೆ ಒಳಗಾದವು..

ಈ ವಿಚಾರವನ್ನು ದೆಹಲಿಯಲ್ಲಿ 2019 ಅಕ್ಟೋಬರ್ 22ರ ಮಂಗಳವಾರ ಸ್ಪಷ್ಟ ಪಡಿಸಿರುವ ಪೊಲೀಸರು ’ಪಟಾಕಿ ಖರೀದಿಗೆ ಮುನ್ನ ಪ್ರತಿಯೊಬ್ಬರೂ ಅಧಿಕೃತ ಮುದ್ರೆಯನ್ನು ಗಮನಿಸಿಕೊಳ್ಳಬೇಕು’ ಎಂದು ಎಚ್ಚರಿಕೆ ನೀಡಿದರು.

ಅಧಿಕೃತ ಮುದ್ರೆಯು ಕ್ಯೂಆರ್ ಕೋಡ್‌ನ್ನು (ಸ್ಪೆಷಲ್ ಕ್ವಿಕ್ ರೆಸ್ಪಾನ್ಸ್  ಕೋಡ್) ಅಥವಾ ಹಸಿರು ಲಾಂಛನವನ್ನು ಹೊಂದಿರುತ್ತದೆ. ೫೦ ’ಫುಲ್ಜಾರಿಗಳು’ ಅಥವಾ ಐದು ’ಅನರ್’ಗಳು ಇರುವ ಒಂದು ಪೊಟ್ಟಣಕ್ಕೆ ೨೫೦ ರೂಪಾಯಿ ಬೆಲೆ ಇರುತ್ತದೆ. ಇವು ಎರಡು ಬಣ್ಣಗಳಲ್ಲಿ ಬರುತ್ತವೆ.

‘ಹಸಿರು ಪಟಾಕಿಗಳಿಗೆ (ಪರಿಸರ ಮಿತ್ರ ಪಟಾಕಿಗಳು) ಮಾತ್ರವೇ ಅನುಮತಿ ನೀಡಲಾಗಿದೆ. ಇವುಗಳನ್ನು ಮಾರುವ ಮಾರಾಟಗಾರರ ತಪಾಸಣೆಗೆ ನಾವು ತಂಡಗಳನ್ನು ರಚಿಸಿದ್ದೇವೆ. ಯಾರಾದರೂ ಬೇರೆ ಮಾದರಿಯ ಪಟಾಕಿಗಳನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ದೆಹಲಿ ಪೊಲೀಸರ ವಕ್ತಾರ ಎಂಎಸ್ ರಾಂಧವ ಹೇಳಿದರು.

ಹಸಿರು ಪಟಾಕಿಗಳು ಎಂಬುದಾಗಿ ಕರೆಯಲಾಗಿರುವ ಈ ಪಟಾಕಿಗಳು ಶೇಕಡಾ ೩೦ರಷ್ಟು ಕಡಿಮೆ ವಾಯುಮಾಲಿನ್ಯ ಉಂಟು ಮಾಡುತ್ತವೆ ಎಂದು ಸರ್ಕಾರವು ಪ್ರತಿಪಾದಿಸಿದೆ. ಚಳಿಗಾಲ ಬರುತ್ತಿರುವಂತೆಯೇ ದೆಹಲಿ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವಾಯುಮಾಲಿನ್ಯ ಹೆಚ್ಚುತ್ತಿರುವುದು ಆತಂಕದ ವಿಷಯವಾಗಿದೆ.

ಕಳೆದ ಒಂದು ವಾರದಲ್ಲಿ ದೆಹಲಿಯಲ್ಲಿ ವಾಯು ಗುಣಮಟ್ಟ ಗಮನಾರ್ಹವಾಗಿ ಕ್ಷೀಣಿಸಿತ್ತು. ಗಾಳಿಯ ದಿಕ್ಕು ವಾಯವ್ಯದ ಕಡೆಗೆ ತಿರುಗುವುದರೊಂದಿಗೆ ನೆರೆಯ ರಾಜ್ಯಗಳ ಸುಡುವ ಕಳೆಯ ಹೊಗೆ ರಾಜಧಾನಿಯತ್ತ ಬರಲು ಆರಂಭವಾಗಿತ್ತು..

‘ಹಸಿರು ಪಟಾಕಿಗಳನ್ನು ಕಳೆದ ವರ್ಷವೇ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ ದೀಪಾವಳಿಗೆ ಮುನ್ನ ಸಾಕಾಗುವಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗಿರಲಿಲ್ಲ’ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

ಈ ಪಟಾಕಿಗಳು ಶೇಕಡಾ ೨೫ರಿಂದ ೩೦ರಷ್ಟು ಕಡಿಮೆ ಮಾಲಿನ್ಯ ಉಂಟು ಮಾಡುತ್ತವೆ. ಹಾಗೆಯೇ ಶೇಕಡಾ ೫೦ರಷ್ಟು ಕಡಿಮೆ ಸಲ್ಫರ್ ಡೈಯಾಕ್ಸೈಡ್ ಬಿಡುಗಡೆ ಮಾಡುತ್ತವೆ ಎಂದು ಆಗ ಪರಿಸರ ಖಾತೆಯನ್ನು ಹೊಂದಿದ್ದ ಕೇಂದ್ರ ಸಚಿವ ಹರ್ಷವರ್ಧನ್ ಹೇಳಿದ್ದರು.

ಮಾಲಿನ್ಯ ಮಟ್ಟವನ್ನು ಅತ್ಯಂತ ಕಡಿಮೆಗೊಳಿಸುವ ಪಟಾಕಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಪಟಾಕಿಗಳಿಗೂ ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಕಳೆದ ವರ್ಷ ಕಟ್ಟುನಿಟ್ಟಿನ ಆದೇಶ ನೀಡಿದ ಬಳಿಕ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಈ ಹಸಿರು ಪಟಾಕಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಕೈಗೆತ್ತಿಕೊಂಡಿತ್ತು.

ಪಟಾಕಿಗಳನ್ನು ದೇಶಾದ್ಯಂತ ನಿಷೇಧಿಸುವಂತೆ ಸಲ್ಲಿಕೆಯಾದ ಹಲವಾರು ಅರ್ಜಿಗಳ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ಪಟಾಕಿ ನಿಷೇಧದ ಈ ಆದೇಶವನ್ನು ಹೊರಡಿಸಿತ್ತು.

೨೦೧೬ರಲ್ಲಿ ಮೂವರು ಮಕ್ಕಳು ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ್ದ ಸುಪ್ರೀಂಕೋರ್ಟ್ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪಟಾಕಿಗಳ ಮಾರಾಟವನ್ನು ನಿಷೇಧಿಸಿತ್ತು.

೨೦೧೭ರ ಸೆಪ್ಟೆಂಬರಿನಲ್ಲಿ ನ್ಯಾಯಾಲಯವು ತಾತ್ಕಾಲಿಕವಾಗಿ ನಿಷೇಧವನ್ನು ಅಮಾನತು ಗೊಳಿಸಿದರೂ, ಒಂದು ತಿಂಗಳ ಬಳಿಕ ಪಟಾಕಿಗಳನ್ನು ನಿಷೇಧಿಸಿ ಕಟ್ಟು ನಿಟ್ಟಿನ ಆದೇಶ ನೀಡಿತ್ತು.

ರಾಜಧಾನಿ ದೆಹಲಿಯಲ್ಲಂತೂ ಸುಪ್ರೀಂಕೋರ್ಟ್ ಆದೇಶ ಈ ಬಾರಿ ಕಟ್ಟು ನಿಟ್ಟಾಗಿ ಜಾರಿಯಾಗಲಿದೆ ಎಂದು ಪೊಲೀಸರು ಸ್ಪಷ್ಟ ಪಡಿಸಿದರು.

October 22, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Entertrainment, Festival, Flash News, General Knowledge, Health, India, Nation, News, Spardha, supreme court | , , , , , , , , , , , | Leave a comment

ರಫೇಲ್ ಗೆ ಆಯುಧ ಪೂಜೆ ನಡೆಸಿ ಮೊದಲ ಹಾರಾಟ ನಡೆಸಿದ ರಾಜನಾಥ್ ಸಿಂಗ್

This slideshow requires JavaScript.

ಪ್ಯಾರಿಸ್:  ದೇಶದ ವಾಯುಪಡೆಗೆ ವಿಶೇಷ ಬಲ ತುಂಬಲಿರುವ ಅತ್ಯಾಧುನಿಕ ಮಾದರಿಯ ರಫೇಲ್ ಯುದ್ಧವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುವ ಔಪಚಾರಿಕ ಪ್ರಕ್ರಿಯೆ ಫ್ರಾನ್ಸಿನ  ಮೆರಿಗ್ನ್ಯಾಕ್ ನಲ್ಲಿ  2019 ಅಕ್ಟೋಬರ್ 08ರ ಮಂಗಳವಾರ ಯಶಸ್ವಿಯಾಗಿ ನೆರವೇರಿತು.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ರಫೇಲ್ ಡಸಾಲ್ಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎರಿಕ್ ಟ್ರ್ಯಾಪಿಯರ್ ಅವರು ಮೊದಲ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.

ಪ್ರಥಮ ರಫೇಲ್ ವಿಮಾನವನ್ನು ಸ್ವೀಕರಿಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯುದ್ಧ ವಿಮಾನಕ್ಕೆ ಆಯುಧ ಪೂಜೆಯನ್ನು ನೆರವೇರಿಸಿದರು. ವಿಮಾನದ ಎದುರು ಭಾಗದಲ್ಲಿ ‘ಓಂ’ ಎಂದು ಕುಂಕುಮದಲ್ಲಿ ಬರೆದ ಸಿಂಗ್ ಬಳಿಕ ವಿಮಾನದ ಚಕ್ರಗಳಿಗೆ ಲಿಂಬೆ ಹಣ್ಣನ್ನು ಮತ್ತು ವಿಮಾನದ  ಮುಂಭಾಗದಲ್ಲಿ ತೆಂಗಿನ ಕಾಯಿಯನ್ನು ಇರಿಸಿ ಸಾಂಪ್ರದಾಯಿಕ ರೀತಿಯಲ್ಲೇ ಆಯುಧ ಪೂಜೆಯನ್ನು ನೆರವೇರಿಸಿದರು.

ಬಳಿಕ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನವನ್ನು ಏರಿ ಅದರಲ್ಲಿ ಹಾರಾಟ ನಡೆಸಿದರು. ಪೈಲಟ್ ಫಿಲಿಪ್ ಡ್ಯುಶಾಟ್ ಅವರು ರಕ್ಷಣಾ ಸಚಿವರಿದ್ದ ಈ ರಫೇಲ್  ವಿಮಾನವನ್ನು  ಚಲಾಯಿಸಿದರು. ಇದರೊಂದಿಗೆ  ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಕ್ಷಣಾ ಸಚಿವರೆಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಅವರು ಪಾತ್ರರಾದರು.

36 ಯುದ್ಧ ವಿಮಾನಗಳಲ್ಲಿ ಫ್ರಾನ್ಸ್ ಮೊದಲ ಹಂತದ ನಾಲ್ಕು ರಫೇಲ್ ವಿಮಾನಗಳನ್ನು ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ. ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.

ಇದಕ್ಕೆ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು  ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಪ್ಯಾರಿಸ್ ನಲ್ಲಿ ಭೇಟಿಯಾಗಿ ರಕ್ಷಣೆ ಮತ್ತು ಭದ್ರತಾ ಸಂಬಂಧಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.

October 8, 2019 Posted by | ಪೈಲಟ್, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Spardha, World | , , , , , | Leave a comment

ಜಂಬೂ ಸವಾರಿಯೊಂದಿಗೆ ಐತಿಹಾಸಿಕ ಮೈಸೂರು ದಸರಾಗೆ ತೆರೆ

08 mysore dasara
ಮೈಸೂರು: 
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯೊಂದಿಗೆ  2019 ಅಕ್ಟೋಬರ್ 08ರ ಮಂಗಳವಾರ ದಸರಾ  ಉತ್ಸವಕ್ಕೆ ತೆರೆ ಬಿದ್ದಿತು. ದಸರಾ ಮೆರವಣಿಗೆಯ  ವೈಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಅರಮನೆಯ ಮುಂದಿನ ರಸ್ತೆಗಳಲ್ಲಿ ನೆರೆದಿದ್ದರು. ಕ್ಯಾಪ್ಟನ್ ಅರ್ಜುನ 8 ಬಾರಿ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ.

ಕ್ಯಾಪ್ಟನ್ ಅರ್ಜುನನಿಗೆ 59 ವರ್ಷವಾಗಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನನ್ನು ಮಾವುತ ವಿನು ,ಕಾವಾಡಿ ಮಧು ಮುನ್ನಡೆಸಿದರು.  ಅರ್ಜುನ ಕಳೆದ 19-20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, 2012 ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನ ನಿರ್ವಹಿಸಿದ್ದಾನೆ.

ಬಣ್ಣಗಳ ಚಿತ್ತಾರದಿಂದ ಅಲಂಕೃತನಾದ ಅರ್ಜುನ ಆನೆಯ ಮೇಲೆ ಹೊರಟ ಚಿನ್ನದ ಅಂಬಾರಿ ಮೈಸೂರಿನ ಮುಖ್ಯರಸ್ತೆಗಳಲ್ಲಿ ಸಾಗಿ ಬನ್ನಿ ಮಂಟಪವನ್ನು ತಲುಪಿತು.

ಅರ್ಜುನನ ಮೇಲಿನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿ ಐತಿಹಾಸಿಕ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನ ಗಾಂಭೀರ್ಯದಿಂದ ಹೆಜ್ಜೆಹಾಕಿದ. ತಾಯಿ ಚಾಮುಂಡೇಶ್ವರಿಗೆ ಜೈಕಾರ ಹಾಕುತ್ತಾ ಮೈಸೂರಿನ ಜನರು ಸಂಭ್ರಮದಿಂದ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.

ಈದಿನ ಬೆಳಗ್ಗೆಯಿಂದ ಅನೇಕ ಸ್ಪರ್ಧೆಗಳು ನಡೆದಿದ್ದು, ವಜ್ರಮುಷ್ಠಿ ಕಾಳಗದಲ್ಲಿ ರಾಮನಗರ ನರಸಿಂಹ ಜಟ್ಟಿ, ಬೆಂಗಳೂರಿನ ನಾರಾಯಣ ಜಟ್ಟಿ, ಚಾಮರಾಜನಗರ ಗಿರೀಶ್ ಜಟ್ಟಿ, ಮೈಸೂರಿನ ಬಲರಾಮ ಜಟ್ಟಿ ನಡುವೆ ಕಾಳಗ ನಡೆಯಿತು. ಬೆಳಗ್ಗೆ ಆಯುಧಗಳಿಗೆ ಪೂಜೆ ನೆರವೇರಿಸಿದ ಯದುವೀರ್ ಒಡೆಯರ್ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.  ರಾಜಪೋಷಾಕಿನಲ್ಲಿ ಕಂಗೊಳಿಸಿದ ಯದುವೀರ ಒಡೆಯರ್ ಕುಟುಂಬಸ್ಥರೊಂದಿಗೆ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು.

October 8, 2019 Posted by | ಕರ್ನಾಟಕ, ಭಾರತ, ರಾಜ್ಯ, ರಾಷ್ಟ್ರೀಯ, culture, Festival, Flash News, General Knowledge, India, Nation, News, Spardha | , , | Leave a comment

ಕರ್ತಾರಪುರ ಕಾರಿಡಾರ್ ಉದ್ಘಾಟನೆ: ಪಾಕಿಸ್ತಾನಕ್ಕೆ ಮನಮೋಹನ್ ಸಿಂಗ್ ಭೇಟಿ

03 modi-manmohan-kartarpur-corridor
ಭಾರತದಲ್ಲಿನ ಸಮಾರಂಭಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ಕೋವಿಂದ್

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಕರ್ತಾರಪುರ ಸಾಹಿಬ್ ಕಾರಿಡಾರ್ ಉದ್ಘಾಟನಾ ಸಮಾರಂಭಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದು, ಭಾರತದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪಾಲ್ಗೊಳ್ಳಲಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಈ ಸಂಬಂಧ ನೀಡಿರುವ ಆಹ್ವಾನವನ್ನು ಮನಮೋಹನ್ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸ್ವೀಕರಿಸಿದ್ದಾರೆ. ಪಂಜಾಬ್ ರಾಜ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಅಮರೀಂದರ್ ಸಿಂಗ್ ಅವರು ರಾಷ್ಟ್ರಪತಿ ಮತ್ತು ಪ್ರಧಾನಿಗೆ ಮನವಿ ಮಾಡಿದ್ದರು.

ಅಮರೀಂದರ್ ಸಿಂಗ್ ಅವರು ದೆಹಲಿಯಲ್ಲಿನ ಮನಮೋಹನ್ ಸಿಂಗ್ ಅವರ ಮನೆಗೆ ಭೇಟಿ ನೀಡಿ ನವೆಂಬರ್ ೯ರಂದು ಗಡಿಯಾಚೆ ನಡೆಯಲಿರುವ ಕರ್ತಾರಪುರ ಸಾಹಿಬ್ ಉದ್ಘಾಟನಾ ಸಮಾರಂಭದ ಸಲುವಾಗಿ ಶಸ್ತ್ರಧಾರಿ ಸಿಕ್ಖರಿಂದ ಕರ್ತಾರಪುರಕ್ಕೆ ಸಾಗಲಿರುವ ಮೊದಲ ಸರ್ವ ಪಕ್ಷ ’ಜಾಥಾ’ದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಮಾಜಿ ಪ್ರಧಾನಿಯವರು ಆಹ್ವಾನವನ್ನು ಸ್ವೀಕರಿಸಿದರು ಎಂದು ಪಂಜಾಬ್ ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ರವೀನ್ ಥುಕ್ರಾಲ್ ಅವರು ಟ್ವೀಟ್ ಮಾಡಿದರು. ಇದಕ್ಕೆ ಮೊದಲು ಕೇಂದ್ರ ಸರ್ಕಾರವು ಒಪ್ಪಿಗೆ ನೀಡಬೇಕಾಗುತ್ತದೆ. ಶ್ರೀ ಗುರು ನಾನಕ್ ದೇವ್ ಅವರ ೫೫೦ನೇ ಪ್ರಕಾಶ ಪರ್ಬ್ ಅಂಗವಾಗಿ ಸುಲ್ತಾನಪುರ ಲೋಧಿಯಲ್ಲಿ ನಡೆಯಲಿರುವ ಮುಖ್ಯ ಸಮಾರಂಭದಲ್ಲೂ ಮನಮೋಹನ್ ಸಿಂಗ್ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರರು ಹೇಳಿದರು.

ಮನಮೋಹನ್ ಸಿಂಗ್ ಭೇಟಿ ಕಾಲದಲ್ಲಿ ಅಮರೀಂದರ್ ಸಿಂಗ್ ಅವರು ವಿಶೇಷ ಸರ್ವಪಕ್ಷ ಜಾಥಾಕ್ಕೆ ಪಾಕಿಸ್ತಾನದಲ್ಲಿರಯವ ಮೊದಲ ಸಿಖ್ ಗುರುವಿನ ಜನ್ಮಸ್ಥಾನವಾದ ನಂಕಾನ ಸಾಹಿಬ್‌ಗೆ ಈ ಚಾರಿತ್ರಿಕ ಸಂದರ್ಭದಲ್ಲಿ ಭೇಟಿ ನೀಡಲು ರಾಜಕೀಯ ಒಪ್ಪಿಗೆ ಪಡೆಯಲು ವೈಯಕ್ತಿಕವಾಗಿ ಪ್ರಭಾವ ಬೀರುವಂತೆ ಮಾಡುವಂತೆ ಮನವಿ ಮಾಡಿದರು.

೫೫೦ನೇ ಪ್ರಕಾಶ ಪರ್ಬ್ ’ಪಥ್’ ಸಂದರ್ಭದಲ್ಲಿ ಅಕ್ಟೋಬರ್ ೩೦ರಿಂದ ನವೆಂಬರ್ ೩ರವರೆಗೆ ’ಪಥ್’ (ಧಾರ್ಮಿಕ ಗ್ರಂಥದ ಪಠಣ) ಸಂಘಟಿಸುವ ಸಲುವಾಗಿ ೨೧ ಮಂದಿಯ ತಂಡವೊಂದಕ್ಕೆ ನಂಕಾನ ಸಾಹಿಬ್‌ಗೆ ತೆರಳಲು ಅವಕಾಶ ನೀಡಬಹುದು. ನಂತರ ಅದೇ ದಿನ ಅಮೃತಸರ (ವಾದ್ಗಾ) ಮೂಲಕ ಸುಲ್ತಾನಪುರ ಲೋಧಿಗೆ ’ನಗರ ಕೀರ್ತನೆ’ ಒಯ್ಯಬಹುದು ಎಂದು ಮುಖ್ಯಮಂತ್ರಿ ಹೇಳಿದರು.

ಪಂಜಾಬಿನ ಕಪೂರ್ತಲಾ ಜಿಲ್ಲೆಯಿಂದ ಸುಲ್ತಾನಪುರ ಲೋಧಿಗೆ ನವೆಂಬರ್ ೪ರಂದು ’ನಗರ ಕೀರ್ತನೆ’ ಆಗಮಿಸಲಿದೆ.

ನಂಕಾನ ಸಾಹಿಬ್ ನಿಯೋಗದ ಭೇಟಿ ಮತ್ತು ಪಾಕಿಸ್ತಾನದಿಂದ ಪಂಜಾಬಿಗೆ ’ನಗರ ಕೀರ್ತನ’ ತರಲು ಔಪಚಾರಿಕ ಒಪ್ಪಿಗೆಗಾಗಿ ಮುಖ್ಯಮಂತ್ರಿಯವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರವನ್ನು ಕೂಡ ಬರೆದಿದ್ದಾರೆ ಎಂದು ಅಧಿಕೃತ ವಕ್ತಾರರು ಹೇಳಿದರು.

ನವೆಂಬರ್ ೫ರಿಂದ ನವೆಂಬರ್ ೧೫ರವರೆಗೆ ಗುರು ನಾನಕ್ ದೇವ್ ಅವರ ೫೫೦ನೇ ಜನ್ಮದಿನಾಚರಣೆ ಅಂಗವಾಗಿ ರಾಜ್ಯದಲ್ಲಿ ನಡೆಸಲು ರಾಜ್ಯ ಸರ್ಕಾರವು ಯೋಜಿಸಿರುವ ಕಾರ್‍ಯಕ್ರಮಗಳ ವಿವರ ನೀಡಿದ ಮುಖ್ಯಮಂತ್ರಿ, ಉದ್ಘಾಟನಾ ಸಮಾರಂಭಕ್ಕೆ ಮುನ್ನ ಸಂಪ್ರದಾಯದಂತೆ ಡೇರಾ ಬಾಬಾ ನಾನಕ್‌ನಲ್ಲಿ ಭಕ್ತರ ಸಂಕ್ಷಿಪ್ತ ಸಭೆ ನಡೆಯಲಿದೆ,  ನವೆಂಬರ್ ೧ರಂದು ಸುಲ್ತಾನಪುರ ಲೋಧಿಯಲ್ಲಿ ಬೆಳಗ್ಗೆ ೧೧ರಿಂದ ಮಧ್ಯಾಹ್ನ ೨ ಗಂಟೆಯವರೆಗೆ ಸರ್ವ ಪಕ್ಷ ಸಭೆಯನ್ನು ಸಂಘಟಿಸಲು ಪಂಜಾಬ್ ಸರ್ಕಾರ ಉದ್ದೇಶಿಸಿದೆ ಎಂದು ವಿವರಿಸಿದರು.

ಭಕ್ತರ ಈ ಸಭೆಗೆ ಸಂಪೂರ್ಣ ಸಂಚಾರ ಮತ್ತು ಭದ್ರತಾ ವ್ಯವಸ್ಥೆಗಳನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಸಮಾರಂಭವನ್ನು ಸರ್ವರಿಗೂ ಸ್ಮರಣೀಯ ಅನುಭವವನ್ನಾಗಿಸುವ ಸಲುವಾಗಿ ಪ್ರಧಾನಿ ಮತ್ತು ರಾಷ್ಟ್ರಪತಿಯವರಿಗೆ ತಮ್ಮ ಸರ್ಕಾರವು ಆತ್ಮೀಯ ಆಹ್ವಾನವನ್ನು ನೀಡಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಮನಮೋಹನ್ ಸಿಂಗ್ ಅವರ ಪಾಕಿಸ್ತಾನ ಭೇಟಿಯು ಪಾಕಿಸ್ತಾನದ ಆಹ್ವಾನಕ್ಕೆ ಅನುಗುಣವಾಗಿ ನಡೆಯುತ್ತಿರುವುದಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ಸೋಮವಾರ ಪಾಕಿಸ್ತಾನವು ಮನಮೋಹನ್ ಸಿಂಗ್ ಅವರಿಗೆ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡುವುದಾಗಿ ಹೇಳಿದ್ದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ಪಾಕಿಸ್ತಾನದ ಪಾಲಿಗೆ ಅತ್ಯಂತ ಮಹತ್ವ ಹಾಗೂ ಮೌಲ್ಯಯುತ ಕಾರ್‍ಯಕ್ರಮವಾಗಿದೆ. ವಿಸ್ತೃತ ಮಾತುಕತೆ ಮತ್ತು ಸಮಾಲೋಚನೆಗಳ ಬಳಿಕ ನಾವು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಆಹ್ವಾನಿಸಲು ನಿರ್ಧರಿಸಲಾಯಿತು ಎಂದು ಖುರೇಶಿ ಹೇಳಿದ್ದರು.

ಏನಿದ್ದರೂ, ಔಪಚಾರಿಕ ಆಮಂತ್ರಣವನ್ನು ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿರಲಿಲ್ಲ. ಅಂತಹ ಯಾವುದೇ ಆಹ್ವಾನದ ಬಗ್ಗೆ ಮಾಹಿತಿ ಇಲ್ಲ, ಬಂದರೆ ಸ್ವೀಕರಿಸುವುದೂ ಇಲ್ಲ ಎಂದು ಹೇಳಿದ ಮನಮೋಹನ್ ಸಿಂಗ್ ಅವರ ಕಚೇರಿ, ಪ್ರಧಾನಿಯಾಗಿದ್ದ ೧೦ ವರ್ಷಗಳ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿರಲಿಲ್ಲ ಎಂದು ಹೇಳಿತ್ತು.

October 4, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, culture, Festival, Flash News, General Knowledge, India, Nation, News, Pakistan, Prime Minister, Spardha, Temples, Temples, ದೇವಾಲಯಗಳು, World | , , | Leave a comment

ಕರ್ನಾಟಕದ 15 ಕ್ಷೇತ್ರಗಳ ಉಪಚುನಾವಣೆಗೆ ಮರು ದಿನಾಂಕ ನಿಗದಿ

27 elections commission
ನವದೆಹಲಿ
: ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಗಳಲ್ಲಿ 15 ಕ್ಷೇತ್ರಗಳ ಉಪಚುನಾವಣೆಗಳಿಗೆ ಮರು ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು 2019 ಸೆಪ್ಟೆಂಬರ್ 27ರ ಶುಕ್ರವಾರ  ಪ್ರಕಟಿಸಿತು.

ಈ 15 ಕ್ಷೇತ್ರಗಳಿಗೆ ಡಿಸೆಂಬರ್ 05ರಂದು ಉಪಚುನಾವಣೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನವಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಮತ್ತು ನವಂಬರ್ 18 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ. ನವಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವಂಬರ್ 21ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೇ ದಿನವಾಗಿರುತ್ತದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿದವು.

ಅಥಣಿ, ಕಾಗವಾಡ, ಗೋಕಾಕ್‌, ಯಲ್ಲಾಪುರ, ಹಿರೇಕೆರೂರ್‌, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್‌.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್‌, ಶಿವಾಜಿನಗರ,  ಹೊಸಕೋಟೆ, ಕೆ.ಆರ್‌. ಪೇಟೆ ಮತ್ತು ಹುಣಸೂರು ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆಯಲಿದೆ.

ಈ ಮೊದಲು ಅಕ್ಟೋಬರ್ 21ರಂದು ಈ 15 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ತಮ್ಮ ಅಮಾನತನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿರುವ 17 ಜನ ಶಾಸಕರ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ತ್ರಿಸದಸ್ಯ ಪೀಠದ ಎದುರು ಚುನಾವಣಾ ಆಯೋಗವು 17 ಅನರ್ಹ ಶಾಸಕರ ಪೈಕಿ 15 ಶಾಸಕರ ಕ್ಷೇತ್ರದಲ್ಲಿ ಅಕ್ಟೋಬರ್ 21ರಂದು ನಡೆಸಲುದ್ದೇಶಿಸಿದ್ದ ಉಪಚುನಾವಣೆಯ ವೇಳಾಪಟ್ಟಿಯನ್ನು ಮುಂದೂಡಿಕೆ ಮಾಡುವ ಬಗ್ಗೆ ಗುರುವಾರದಂದು ಅರಿಕೆ ಮಾಡಿಕೊಂಡಿತ್ತು.

ಕೇಂದ್ರ ಚುನಾವಣಾ ಆಯೋಗದ ಮನವಿಗೆ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ, ಕಾಂಗ್ರೆಸ್ ನಾಯಕರಾದ ಸಿದ್ಧರಾಮಯ್ಯ ಮತ್ತು ಗುಂಡೂರಾವ್ ಪರ ವಕೀಲ ಕಪಿಲ್ ಸಿಬಲ್ ಅವರೂ ಒಪ್ಪಿಗೆ ನೀಡಿದ್ದರಿಂದ ಸುಪ್ರೀಂ ಕೋರ್ಟ್ ಈ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 22ಕ್ಕೆ ಮುಂದೂಡಿತ್ತು.

ರಮೇಶ್ ಜಾರಕಿಹೊಳಿ ರಾಜೀನಾಮೆಯಿಂದ ತೆರವಾಗಿರುವ ಅಥಣಿ ಕ್ಷೇತ್ರ, ಶ್ರೀಮಂತ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಕಾಗವಾಡ ಕ್ಷೇತ್ರ, ಮಹೇಶ್ ಕುಮಠಹಳ್ಳಿ ರಾಜೀನಾಮೆಯಿಂದ ತೆರವಾಗಿರುವ ಗೋಕಾಕ್ ಕ್ಷೇತ್ರ, ಶಿವರಾಂ ಹೆಬ್ಬಾರ್ ರಾಜೀನಾಮೆಯಿಂದ ತೆರವಾಗಿರುವ ಯಲ್ಲಾಪುರ ಕ್ಷೇತ್ರ, ಬಿ.ಸಿ. ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರುವ ಹಿರೇಕೆರೂರ್ ಕ್ಷೇತ್ರ, ಆರ್. ಶಂಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ರಾಣಿಬೆನ್ನೂರು ಕ್ಷೇತ್ರ, ಆನಂದ ಸಿಂಗ್ ಅವರ ರಾಜೀನಾಮೆಯಿಂದ ತೆರವಾಗಿರುವ ವಿಜಯನಗರ ಕ್ಷೇತ್ರ, ಡಾ. ಕೆ. ಸುಧಾಕರ್ ಅವರ ರಾಜೀನಾಮೆಯಿಂದ ತೆರವಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರ, ಭೈರತಿ ಬಸವರಾಜು ಅವರ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್.ಪುರ ಕ್ಷೇತ್ರ, ಎಸ್.ಟಿ. ಸೋಮಶೇಖರ್ ರಾಜೀನಾಮೆಯಿಂದ ತೆರವಾಗಿರುವ ಯಶವಂತಪುರ ಕ್ಷೇತ್ರ, ಗೋಪಾಲಯ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಮಹಾಲಕ್ಷ್ಮೀ ಲೇ ಔಟ್ ಕ್ಷೇತ್ರ, ರೋಷನ್ ಬೇಗ್ ರಾಜೀನಾಮೆಯಿಂದ ತೆರವಾಗಿರುವ ಶಿವಾಜಿನಗರ ಕ್ಷೇತ್ರ, ಎಂಟಿಬಿ ನಾಗರಾಜ್ ರಾಜೀನಾಮೆಯಿಂದ ತೆರವಾಗಿರುವ ಹೊಸಕೋಟೆ ಕ್ಷೇತ್ರ, ನಾರಾಯಣ ಗೌಡ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್.ಪೇಟೆ. ಕ್ಷೇತ್ರ ಮತ್ತು ಎಚ್. ವಿಶ್ವನಾಥ್ ಅವರ ರಾಜೀನಾಮೆಯಿಂದ ತೆರವಾಗಿರುವ ಹುಣಸೂರು ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆಯುತ್ತಿದೆ.

ಮುನಿರತ್ನ ಅವರು ಪ್ರತಿನಿಧಿಸುತ್ತಿದ್ದ ರಾಜರಾಜೇಶ್ವರಿ ನಗರ ಮತ್ತು ಪ್ರತಾಪ್ ಗೌಡ ಪಾಟೀಲ್ ಅವರ ಮಸ್ಕಿ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಮಸ್ಕಿ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ 2018ರ ವಿಧಾನಸಬಾ ಚುನಾವಣೆ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಪರಾಜಿತ ಅಭ್ಯರ್ಥಿಗಳು ಪ್ರತ್ಯೇಕವಾಗಿ ಕೋರ್ಟ್‌ನಲ್ಲಿ ದಾವೆ ಹೂಡಿದ್ದು, ಈ ಸಂಬಂಧ ಕೋರ್ಟ್‌ ತೀರ್ಪು ಹೊರಬೀಳುವ ತನಕ ಚುನಾವಣೆ ಘೋಷಣೆ ಮಾಡುವಂತಿಲ್ಲ. ಹಾಗಾಗಿ 15 ಕ್ಷೇತ್ರಗಳ ಜತೆ ಮಸ್ಕಿ ಮತ್ತು ರಾಜರಾಜೇಶ್ವರಿನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ಉಪ ಚುನಾವಣೆ ದಿನಾಂಕ ಘೋಷಣೆ ಮಾಡಿಲ್ಲ.

September 27, 2019 Posted by | ಕರ್ನಾಟಕ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, Bengaluru, Bangalore,, Flash News, General Knowledge, Nation, News, Politics, Spardha | , , , | Leave a comment

ದಕ್ಷಿಣ ಕನ್ನಡ ಶಾಲೆಗಳಿಗೆ ಅಕ್ಟೋಬರ್ 1ರಿಂದ 15ರ ತನಕ ದಸರಾ ರಜೆ

20 vedavyas
ಮಂಗಳೂರು
: ದಕ್ಷಿಣ ಕನ್ನಡ ಜಿಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ದಸರಾ ರಜೆಯನ್ನು ಅಕ್ಟೋಬರ್ 1 ರಿಂದ 15 ರ ತನಕ ನೀಡಲು ರಾಜ್ಯ ಸರಕಾರದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವರಾಗಿರುವ ಸುರೇಶ್ ಕುಮಾರ್ ಅವರು ಸೂಚನೆ ನೀಡಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ 2019 ಸೆಪ್ಟೆಂಬರ್ 20ರ ಶುಕ್ರವಾಋ ತಿಳಿಸಿದರು.

ಈ ಕುರಿತು ಸಚಿವರನ್ನು ಅಭಿನಂದಿಸಿದ ಶಾಸಕ ಕಾಮತ್ ಅವರು ಅಕ್ಟೋಬರ್ 1 ರಿಂದ ದಸರಾ ರಜೆ ಆರಂಭವಾಗುವುದರಿಂದ ದೇವಿ ದೇವಸ್ಥಾನಗಳಲ್ಲಿ ನಡೆಯುವ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಮಕ್ಕಳಿಗೆ, ಪೋಷಕರಿಗೆ, ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಶಾಸಕ ಕಾಮತ್ ಅವರು ಸಚಿವ ಸುರೇಶ್ ಕುಮಾರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದರು.

September 20, 2019 Posted by | ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು, ರಾಜ್ಯ, culture, Dakshina Kannada District, Festival, General Knowledge, Mangalore, News, Spardha | , , | Leave a comment

ಕಾಶ್ಮೀರ: ಮಧ್ಯಪ್ರವೇಶಕ್ಕೆ ವಿಶ್ವಸಂಸ್ಥೆ ನಕಾರ

This slideshow requires JavaScript.

ದ್ವಿಪಕ್ಷೀಯ ಮಾತುಕತೆ ಮೂಲಕ ಇತ್ಯರ್ಥಕ್ಕೆ ಸೂಚನೆ

ಜಿನೇವಾ: ಕಾಶ್ಚೀರ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಪಾಕಿಸ್ತಾನ ಮಾಡಿರುವ ಮನವಿಯನ್ನು ವಿಶ್ವಸಂಸ್ಥೆ ಸಾರಾಸಗಟು ತಿರಸ್ಕರಿಸಿ, ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ವಿವಾದ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು 2019 ಸೆಪ್ಟೆಂಬರ್ 11ರ ಬುಧವಾರ ಸೂಚಿಸಿತು.

ಜಮ್ಮು-ಕಾಶ್ಮೀರದ ವಿಚಾರದಲ್ಲಿ ಉಭಯ ದೇಶಗಳು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ (ಯುಎನ್‌ಎಚ್ ಆರ್‌ಸಿ) ಪರಸ್ಪರ ಘರ್ಷಿಸಿದ ಒಂದು  ದಿನದ ಬಳಿಕ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗ್ಯುಟೆರಸ್ ಅವರು ’ಕಾಶ್ಮೀರ ವಿಚಾರದಲ್ಲಿ ಯಾವುದೇ ರಾಜಕೀಯ ಬಿಕ್ಕಟ್ಟಿಗೆ ಅವಕಾಶ ನೀಡಬಾರದು’ ಎಂದು ಕಳಕಳಿ ವ್ಯಕ್ತಪಡಿಸಿ, ಕಾಶ್ಮೀರದ ವಿಚಾರವನ್ನು ಭಾರತ ಮತ್ತು ಪಾಕಿಸ್ತಾನ ಮಾತುಕತೆಯ ಮೂಲಕವೇ ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸ್ವಿಜರ್ಲೆಂಡಿನ ರಾಜಧಾನಿ ಜಿನೇವಾದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ೪೨ನೇ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗ್ಯುಟೆರಸ್  ಅವರು ಈ ಹೇಳಿಕೆ ನೀಡಿದ್ದಾರೆ ಎಂದು ವರದಿಯೊಂದು ತಿಳಿಸಿತು.

ಇತ್ತೀಚೆಗೆ ಫ್ರಾನ್ಸಿನಲ್ಲಿ ನಡೆದ ಜಿ-೭ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಗ್ಯುಟೆರಸ್ ಭೇಟಿಯಾಗಿದ್ದರು. ಅಲ್ಲದೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಜೊತೆಗೂ ಮಾತುಕತೆ ನಡೆಸಿದ್ದರು ಎಂದು ವಿಶ್ವಸಂಸ್ಥೆಯ ಮುಖ್ಯ ವಕ್ತಾರ ಸ್ಟೇಫನ್ ಡ್ಯುಜಾರ್ರಿಕ್ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು.

‘ಅವರ (ಆಂಟೋನಿಯೋ ಗ್ಯುಟೆರಸ್) ಸಂದೇಶ ಎಲ್ಲರಿಗೂ ಒಂದೇ. ಬಹಿರಂಗವಾಗಿ ಅಥವಾ ಖಾಸಗಿಯಾಗಿ ಅವರು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರಕ್ಷುಬ್ಧ ಸ್ಥಿತಿ ಉಲ್ಬಣಿಸುವ ಸಂಭಾವ್ಯತೆ ಬಗ್ಗೆ ತೀವ್ರ ಕಳಕಳಿ ವ್ಯಕ್ತ ಪಡಿಸಿದ್ದಾರೆ. ವಿಷಯವನ್ನು ಮಾತುಕತೆಯ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕು ಎಂದು ಅವರು ಉಭಯ ಕಡೆಗಳಿಗೂ ಮನವಿ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಮುಖ್ಯಸ್ಥರ ವಕ್ತಾರರ ಸ್ಟೆಫನ್ ಡ್ಯುಜಾರ್ರಿಕ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯು ವರದಿ ಮಾಡಿತು.

ಗ್ಯುಟೆರಸ್ ಅವರು ಈ ತಿಂಗಳ ಕೊನೆಯಲ್ಲಿ  ನಡೆಯಲಿರುವ ವಿಶ್ವಸಂಸ್ಥೆ ಮಹಾಸಭೆಯ ಸಮಾವೇಶ ಕಾಲದಲ್ಲಿ  ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಧಾನ ಮಾತುಕತೆಯ ಯೋಜನೆ ಹೊಂದಿದ್ದಾರೆಯೇ ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಡ್ಯುಜಾರಿಕ್ ಈ ಸ್ಪಷ್ಟನೆ ನೀಡಿದರು. ವಿಶ್ವಸಂಸ್ಥೆ ಮಹಾಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಾಲ್ಗೊಳ್ಳಲಿದ್ದಾರೆ.

‘ನಿಮಗೆ ಪರಿಸ್ಥಿತಿ ಗೊತ್ತಿದೆ. ಸಂಧಾನದ ಬಗ್ಗೆ ನಮ್ಮ ನಿಲುವು ತತ್ವಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಯಾವಾಗಲೂ ಅದಕ್ಕೆ ಅನುಗುಣವಾಗಿಯೇ ಇರುತ್ತದೆ’ ಎಂದು ಡ್ಯುಜಾರಿಕ್ ಹೇಳಿದರು.

’ಕಾಶ್ಮೀರ ವಿಷಯದಲ್ಲಿ ವಿಶ್ವಸಂಸ್ಥೆಯು ೧೯೭೨ರ ಶಿಮ್ಲಾ ಒಪ್ಪಂದವನ್ನು ಉಲ್ಲೇಖಿಸಿದೆ. ಭಾರತ ಮತ್ತು ಪಾಕಿಸ್ತಾನ ನಡುವಣ ಈ ದ್ವಿಪಕ್ಷೀಯ ಒಪ್ಪಂದವು ಕಾಶ್ಮೀರ ವಿಷಯದಲ್ಲಿ ತೃತೀಯ ಪಕ್ಷದ ಮಧ್ಯಸ್ಥಿಕೆಯನ್ನು ತಿರಸ್ಕರಿಸುತ್ತದೆ.

ದ್ವಿಪಕ್ಷೀಯ ಬಾಂಧವ್ಯಗಳಿಗೆ ಸಂಬಂಧಿಸಿದ ಶಿಮ್ಲಾ ಒಪ್ಪಂದ ಎಂದೇ ಖ್ಯಾತಿ ಪಡೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಣ ೧೯೭೨ರ ದ್ವಿಪಕ್ಷೀಯ ಒಪ್ಪಂದವು ಜಮ್ಮು ಮತ್ತು ಕಾಶ್ಮೀರದ ಅಂತಿಮ ಸ್ಥಾನಮಾನವನ್ನು ಶಾಂತಿಯುತ ಮಾರ್ಗಗಳ ಮೂಲಕ ವಿಶ್ವಸಂಸ್ಥೆಯ ಸನ್ನದಿನ (ಚಾರ್ಟರ್ ಆಫ್ ಯುನೈಟೆಡ್ ನೇಷನ್ಸ್) ಪ್ರಕಾರ ಇತ್ಯರ್ಥ ಪಡಿಸಬೇಕು ಎಂದು ಹೇಳಿದೆ’ ಎಂದು ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವಂತೆ ಕೋರಿ ಪಾಕಿಸ್ತಾನವು ಸಂಪರ್ಕಿಸಿದ ಬಳಿಕ ಕಳೆದ ತಿಂಗಳು ಬಿಡುಗಡೆ ಮಾಡಲಾಗಿದ್ದ ಹೇಳಿಕೆಯಲ್ಲಿ ವಿಶ್ವಸಂಸ್ಥೆ ತಿಳಿಸಿತ್ತು.

ಕಾಶ್ಮೀರದ ಪರಿಸ್ಥಿತಿಯನ್ನು ಮಾನವ ಹಕ್ಕುಗಳಿಗೆ ಸಂಪೂರ್ಣ ಗೌರವ ಸಹಿತವಾಗಿ ಮಾತ್ರವೇ ಪರಿಹರಿಸಲು ಸಾಧ್ಯ ಎಂಬುದಾಗಿ ಮಾನವ ಹಕ್ಕುಗಳ ಹೈ ಕಮೀಷನರ್ ನೀಡಿದ್ದ ಹೇಳಿಕೆಯನ್ನೂ ಡ್ಯುಜಾರಿಕ್ ಉಲ್ಲೇಖಿಸಿದರು.

ಕಳೆದ ತಿಂಗಳು ಫ್ರಾನ್ಸಿನ ಬಿಯಾರಿಟ್ಜ್‌ನಲ್ಲಿ ನಡೆದ ಜಿ-೭ ಶೃಂಗಸಭೆಯ ಕಾಲದಲ್ಲಿ ಗ್ಯುಟೆರಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದರು. ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರ ಜೊತೆಗೂ ಗ್ಯುಟೆರಸ್ ಮಾತುಕತೆ ನಡೆಸಿದ್ದರು.

ವಿಶ್ವಸಂಸ್ಥೆ ಮುಖ್ಯಸ್ಥರು ಸೋಮವಾರ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ಕಾಯಂ ಪ್ರತಿನಿಧಿ ಮಲೀಹಾ ಲೋಧಿ ಅವರನ್ನೂ ಮಲೀಹಾ ಕೋರಿಕೆ ಮೇರೆಗೆ ಭೇಟಿ ಮಾಡಿದ್ದರು.

ಪಾಕಿಸ್ತಾನವು ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಈವರೆಗೆ ವಿಶ್ವಸಂಸ್ಥೆಯನ್ನು ಎರಡು ಬಾರಿ ಸಂಪರ್ಕಿಸಿದೆ. ಏನಿದ್ದರೂ, ಜಾಗತಿಕ ಸಂಸ್ಥೆಯು ಈವರೆಗೂ ಪಾಕಿಸ್ತಾನದ ಮನವಿಯನ್ನು ಪುರಸ್ಕರಿಸಿಲ್ಲ. ಆಗಸ್ಟ್ ತಿಂಗಳಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯು (ಯುಎನ್‌ಎಸ್‌ಸಿ) ಕಾಶ್ಮೀರ ಪರಿಸ್ಥಿತಿ ಕುರಿತು ಅನೌಪಚಾರಿಕ ಚರ್ಚೆ ಸಲವಾಗಿಯೇ ರಹಸ್ಯ ಸಭೆಯನ್ನೂ ನಡೆಸಿತ್ತು. ಆದರೆ ಈ ಸಭೆಯ ಫಲಶ್ರುತಿ ಬಗ್ಗೆ ಅದು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರಲಿಲ್ಲ.

ಅನೌಪಚಾರಿಕ ವರದಿಗಳ ಪ್ರಕಾರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಪಾಕಿಸ್ತಾನದ ಸಾರ್ವಕಾಲಿಕ ಮಿತ್ರರಾಷ್ಟ್ರವಾದ ಚೀನಾ ಮಾತ್ರ ಪಾಕಿಸ್ತಾನವನ್ನು ಬೆಂಬಲಿಸಿತ್ತು. ಅಮೆರಿಕ, ರಶ್ಯಾ, ಇಂಗ್ಲೆಂಡ್ ಸೇರಿದಂತೆ ಇತರ ಎಲ್ಲ ರಾಷ್ಟ್ರಗಳು ಕಾಶ್ಮೀರವು ಭಾರತದ ಆಂತರಿಕ ವಿಷಯವಾಗಿದ್ದು, ಪರಸ್ಪರ ದ್ವಿಪಕ್ಷೀಯ ಮಾತುಕತೆ ಮೂಲಕವೇ ಇತ್ಯರ್ಥಗೊಳ್ಳಬೇಕು ಎಂದು ಹೇಳಿದ್ದವು.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಭಾರತೀಯ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಕ್ರಮವು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಖಂಡತುಂಡ ಮಾತುಗಳಲ್ಲಿ ಸ್ಪಷ್ಟ ಪಡಿಸಿರುವ ಭಾರತ, ವಾಸ್ತವವನ್ನು ಅಂಗೀಕರಿಸುವಂತೆ ಪಾಕಿಸ್ತಾನಕ್ಕೆ ಸಲಹೆ ಮಾಡಿತ್ತು.

September 11, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Spardha | , , , , , | Leave a comment

‘ವಿಷು’ ಪ್ರಕೃತಿ ಪೂಜೆಯ ಪರ್ವ !

‘ವಿಷು’ ಪ್ರಕೃತಿ ಪೂಜೆಯ ಪರ್ವ !

ಇಂದು ‘ವಿಷು’. ಇದು ಪ್ರಕೃತಿ ಪೂಜೆಯ ದಿನ. ಕರ್ನಾಟಕದ ತುಳುನಾಡು (ದಕ್ಷಿಣ ಕನ್ನಡ- ಉಡುಪಿ ಕೇರಳದ ಕಾಸರಗೋಡು ಜಿಲ್ಲೆಗಳು), ಕೇರಳ ರಾಜ್ಯ, ಬಂಗಾಳ, ತಮಿಳುನಾಡು, ಪಂಜಾಬ್, ಉತ್ತರಾಖಂಡ, ಹರಿಯಾಣ ಮತ್ತಿತರ ಕಡೆಗಳಲ್ಲೆಲ್ಲ ಈದಿನ ಹೊಸ ವರ್ಷಾಗಮನದ ಸಂಭ್ರಮ.

‘ಸೌರಮಾನ ಯುಗಾದಿ’ ಎಂದೇ ಜನಪ್ರಿಯವಾಗಿರುವ ‘ವಿಷು’ ಹೊಸ ವರ್ಷಕ್ಕೆ ನವ ಚೈತನ್ಯವನ್ನು ತುಂಬುವ,  ಹೊಸ ಸಂವತ್ಸರವನ್ನು ಸ್ವಾಗತಿಸುವ ತುಳುವರ ‘ಬಿಸು ಪರ್ಬ’, ಕೇರಳಿಗರ ‘ವಿಷು’ ಹಬ್ಬವೂ ಹೌದು, ತಮಿಳರಿಗೂ ಇದೇ ಯುಗಾದಿ.

ಹಲವು ಸಂಸ್ಕೃತಿಗಳ ಬೀಡು ಬೆಂಗಳೂರಿನ ತಮಿಳರು, ದಕ್ಷಿಣ ಕನ್ನಡದ ಮೂಲದವರು ಮತ್ತು ಮಲಯಾಳಿಗಳಿಗೂ ಈದಿನ ಹೊಸ ವರ್ಷದ ಸಂಭ್ರಮ-. ಏಕೆಂದರೆ ಅವರದು ಸೌರಮಾನ ಪಂಚಾಗ.

ಬೆಂಗಳೂರಿಗರಿಗೆಲ್ಲ ಚಾಂದ್ರಮಾನ ಯುಗಾದಿ ಬಹುತೇಕ ಒಂದೇ ರೂಪದ ಆಚರಣೆಯಾದರೆ, ವೈಶಿಷ್ಟ್ಯಪೂರ್ಣ ಸೌರಮಾನ ಯುಗಾದಿಯನ್ನು ಹೊಸ ವರ್ಷವಾಗಿ ಸ್ವಾಗತಿಸುವ ದಕ್ಷಿಣ ಕನ್ನಡ,  ಉಡುಪಿ, ಕಾಸರಗೋಡು ಮೂಲದವರು- ತುಳುವರು, ತಮಿಳರು, ಮಲೆಯಾಳಿಗರ ಹಬ್ಬ ಆಚರಣೆಯ ಪರಿಯೇ ಬೇರೆ.

ಚಾಂದ್ರಮಾನ ಯುಗಾದಿ ಬರುವುದು ಚೈತ್ರಮಾಸದ ಮೊದಲ ದಿನ. ಆದರೆ ಸೌರಮಾನ ಯುಗಾದಿಯ ಆಚರಣೆ  ಮೇಷಮಾಸದ ಮೊದಲ ದಿನ.

ಕರ್ನಾಟಕದ ಬಯಲು ಸೀಮೆ, ಬೆಂಗಳೂರು, ಮೈಸೂರು, ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲಿ ಜನರಿಗೆ  ಚಾಂದ್ರಮಾನ ಯುಗಾದಿ ಹೊಸ ವರ್ಷದ ಸಂಭ್ರಮ ತಂದರೆ,  ಕರ್ನಾಟಕದ ಪಶ್ಚಿಮ ಕರಾವಳಿ (ತುಳುನಾಡು), ಕೇರಳ, ತಮಿಳುನಾಡು, ಪಂಜಾಬ್, ಬಂಗಾಳ ಮತ್ತಿತರ ಮೂಲದವರಿಗೆ ಸೌರಮಾನ ಯುಗಾದಿಯಂದೇ ಹೊಸ ವರುಷ ಆರಂಭ.

ತುಳುವರಿಗೆ ಇದು ‘ಬಿಸು ಪರ್ಬ’ವಾದರೆ, , ಕೇರಳೀಯರಿಗೆ ‘ವಿಷು’,  ತಮಿಳುನಾಡಿನಲ್ಲಿ ‘ಪುತ್ತಾಂಡ್’, ಪಂಜಾಬಿಗಳಿಗೆ  ‘ಬೈಸಾಕಿ’, ಅಸ್ಸಾಂನಲ್ಲಿ ಇದು ‘ಬಿಹು’ ಉತ್ತರಾಖಂಡ, ಹರಿಯಾಣ ರಾಜ್ಯಗಳ ಜನರಿಗೂ ಇದು ಇದೇ ಹೊಸ ವರ್ಷ ಆಗಮನದ ದಿನ.

ಯುಗಾದಿಯಲ್ಲಿ ಬೇವು ಬೆಲ್ಲ ತಿಂದು, ಜೀವನದಲ್ಲಿ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ದೃಢ ಮನಸ್ಸಿನೊಂದಿಗೆ ಹೊಸ ಯುಗಕ್ಕೆ ಸ್ವಾಗತ. ಆದರೆ  ‘ವಿಷು’ ಹಬ್ಬ ಇದಕ್ಕಿಂತ ಭಿನ್ನ. ಇದು ಪ್ರಕೃತಿಯ ಪೂಜೆಗೆ ಮೀಸಲು. ಭೂ ತಾಯಿಯ ಒಡಲಲ್ಲಿ ಬೆಳೆದ ಫಸಲುಗಳನ್ನು ಪೂಜಿಸುವ ಮೂಲಕ ಹೊಸ ವರ್ಷದಲ್ಲಿ ಸಂಪದ್ಭರಿತ ಕೃಷಿ, ಸುಖ ಜೀವನ ಸಮೃದ್ಧಿಗಾಗಿ ದೇವರಲ್ಲಿ ಪ್ರಾರ್ಥಿಸುವುದು ಈ ದಿನದ ವಿಶೇಷ.

‘ವಿಷುಕಣಿ’ಗೆ ವಿಷು ಹಬ್ಬದಲ್ಲಿ  ಅಗ್ರಸ್ಥಾನ. ಹಬ್ಬದ ಹಿಂದಿನ ದಿನ ಮನೆಯಲ್ಲಿ ಬೆಳೆದ ತರಕಾರಿ, ಹಣ್ಣು ಹಂಪಲು, ಧವಸ ಧಾನ್ಯಗಳೂ ಸೇರಿದಂತೆ, ಆಭರಣ, ರವಿಕೆ ಕಣ, ತೆಂಗಿನ ಕಾಯಿ, ಕನ್ನಡಿ, ಕುಂಕುಮವನ್ನು ದೇವರ ಮುಂದೆ ಇಟ್ಟು ಪೂಜೆಗೆ ತಯಾರಿ.

ವಿಷುವಿನ ದಿನ ಬೆಳಗ್ಗೆ ಎದ್ದ ಕೂಡಲೇ ಮೊದಲಿಗೆ ದೇವರ ಮುಂದೆ ದೀಪ ಹಚ್ಚಿ, ಕಣಿಯಲ್ಲಿ ಇಟ್ಟ ಹಲ-ಫಲಗಳ ವಸ್ತುಗಳ ದರ್ಶನ ಪಡೆದು, ಅಲ್ಲಿ ಇಟ್ಟಿರುವ ಕನ್ನಡಿಯಲ್ಲಿ ಮುಖ ನೋಡಿ ಕುಂಕುಮ ತಿಲಕವನ್ನು ಧರಿಸಿ, ತಾಯಿ, ತಂದೆ, ಗುರುಹಿರಿಯರಿಂದ ಆಶೀರ್ವಾದ ಪಡೆಯುವುದು ವಾಡಿಕೆ. ಕೇರಳದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಂದು ‘ವಿಷು ಕಣಿ’ಯ ಮುಂದೆಯೇ ಕಣ್ಣಿನ ಪಟ್ಟಿ ಬಿಚ್ಚಿ ಅದರ ದರ್ಶನ ಮಾಡುವ ಕ್ರಮವೂ ಉಂಟು.

ಆ ಬಳಿಕವೇ ಅಭ್ಯಂಗ ಸ್ನಾನ, ಹೊಸ ಬಟ್ಟೆ ಧರಿಸಿ ಪಂಚಾಗ ಶ್ರವಣ ಅಥವಾ ಪಠಣ, ದೇವರಿಗೆ ವಿಶೇಷ ಪೂಜೆ. ಬಂಧುಗಳೊಂದಿಗೆ ಸವಿಯಾದ ಸಿಹಿ ಭೋಜನ. ಕೇರಳದಲ್ಲಿ ‘ಕೊನ್ನಪೂ’ ಎಂಬ ಹಳದಿ ಹೂವಿಗೆ ವಿಶೇಷ ಪ್ರಾಶಸ್ತ್ಯ.

ಭಾರತೀಯರ ಪ್ರತಿಯೊಂದು ಆಚರಣೆಯಲ್ಲೂ ಎದ್ದು ಕಾಣುವುದು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧ. ಮರ, ಗಿಡ, ಗಾಳಿ, ಬೆಳಕು, ಬೆಂಕಿ, ಭೂಮಿ ಎಲ್ಲದರಲ್ಲೂ ದೇವರನ್ನು ಕಾಣುವ ಭಾರತೀಯರು ಬದುಕಿಗೆ ಅನಿವಾರ್ಯವಾದ ಇವೆಲ್ಲವನ್ನೂ ಕರುಣಿಸಿದ್ದಕ್ಕಾಗಿ ಅರ್ಪಿಸುವ ಕೃತಜ್ಞತೆಯ ಸ್ಮರಣೆಯೇ ಇಲ್ಲಿನ ವಿವಿಧ ಹಬ್ಬಗಳ ಹೂರಣ. ವಿಷು ಹಬ್ಬದಲ್ಲಿ ಎದ್ದು ಕಾಣುವುದು 'ಕಣಿ'ಗೆ ಪೂಜೆ-ದರ್ಶನ ಪಡೆಯುವ ಮೂಲಕ ಪ್ರಕೃತಿಯ ನೇರ ಪೂಜೆ. ಬೆಂಗಳೂರಿಗೆ ಕೆಲಸಕ್ಕಾಗಿ ಬಂದ ಕರಾವಳಿ ಮಂದಿ, ಕೇರಳಿಗರು, ತಮಿಳರು ತಮ್ಮ ಸಂಪ್ರದಾಯ ಬಿಟ್ಟಿಲ್ಲ. ತಮಗೆ ಸಾಧ್ಯವಾದ ಮಟ್ಟಿನಲ್ಲಿ ಆಚರಿಸುತ್ತಾರೆ. ಮನೆ ಮನೆಗಳಲ್ಲಿ ಕಣಿ ಇಡುವ ಬದಲು ಕೆಲವು ಸಂಘಗಳ ಆಶ್ರಯದಲ್ಲಿ 'ವಿಷು ಕಣಿ' ಇಡುವ ಮೂಲಕ ಕಿರಿಯರಿಗೆ ತಮ್ಮ ಸಂಸ್ಕೃತಿಯ ಸಂಪ್ರದಾಯ, ಆಚಾರ ವಿಚಾರ ಪರಿಚಯಿಸುವ ಯತ್ನ ನಡೆಯುತ್ತಿದೆ.

ಈ ಸಂದರ್ಭದಲ್ಲಿ ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮೇಲಿನ ಚಿತ್ರ ಕ್ಲಿಕ್ಕಿಸಿ ಪ್ರಜಾವಾಣಿಯಲ್ಲಿ ಪ್ರಕಟವಾದ ‘ವಿಷು’ ಕುರಿತ ಲೇಖನ ಓದಿಕೊಳ್ಳಿ.

ನೆತ್ರಕೆರೆ ಉದಯಶಂಕರ

April 14, 2010 Posted by | culture, Education, environment /endangered species, Festival, Spardha, Uncategorized | , , | Leave a comment

This is Dasara ‘Dolls Farm..!’

This is Dasara ‘Dolls Farm..!’

farm-doll1
Let innovative ideas come from all sides. This is the prayer of all especially during festival seasons. During the festival Dasara this year, innovative idea of presenting agricultural scene through dolls came to the mind of one youth K.G. Sudhendra of Yelachenahlli, Kanakapura Road, Bangalore.

He, with the help his family members realised his dream. He has done a small dasara dolls on Dry land farming on a cement bag of 2 x 3 ft size with showcasing Farm pond, Bunds, Forestry plants, Horticulture plants, Family in a land, Medicinal plants, Livestock rearing, Live Hedge fencing and Vermicompost.

It attracted many people from the surronding areas.

Mr. Ganadalu Shreekanta wrote an article on this ‘Dolls Farm’ in Prajavani also. You can read this article by clicking the link here and can view the pictures of Dolls Farm by clicking the image link above.

Sudheendra has blog also: http://sudheendra-bookworm.blogspot.com/.

He could be contacted through:Email: sudheendra.bangalore@gmail.com

Nethrakere Udaya Shankara

October 12, 2009 Posted by | Agriculture, culture, Festival, News, Spardha | , , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ