SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಂಕೆ ಮೀರಿದ ಮಾಲಿನ್ಯ: ದೆಹಲಿಯಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಣೆ


01 delhi air pollutionನವೆಂಬರ್ ೫ರವರೆಗೆ ಎಲ್ಲ ಶಾಲೆಗಳಿಗೂ ರಜೆ, ನಿರ್ಮಾಣ ಚಟುವಟಿಕೆ ನಿಷೇಧ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ಅಂಕೆ ಮೀರಿ ’ವಿಷಮ ಸ್ಥಿತಿ’ಗೆ (ಸಿವಿಯರ್ ಪ್ಲಸ್) ತಲುಪಿದ್ದನ್ನು ಅನುಸರಿಸಿ ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರವು (ಇಪಿಸಿಎ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಣೆ ಮಾಡಿದ್ದು 2019 ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ 2019 ನವೆಂಬರ್ 01ರ ಶುಕ್ರವಾರ ನಿಷೇದಿಸಿತು. ಇದೇ ವೇಳೆಗೆ ದೆಹಲಿ ಸರ್ಕಾರವು ನವೆಂಬರ್ ೫ರವರೆಗೆ ಶಾಲೆಗಳಿಗೆ ರಜೆ ಘೋಷಿಸಿತು.

ವಾಯುಗುಣಮಟ್ಟ ವಿಪರೀತ ಎನಿಸುವಷ್ಟು ಕೆಳಕ್ಕೆ ಕುಸಿದಿದ್ದು, ದೆಹಲಿಗರು ಉಸಿರು ಎಳೆದುಕೊಳ್ಳಲು ಚಡಪಡಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಪ್ರಾಧಿಕಾರ ಚಳಗಾಲದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನೂ ನಿಷೇಧಿಸಿತು.

ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮುಖ್ಯಕಾರ್‍ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್ ಅವರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಗುರುವಾರ ರಾತ್ರಿ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ವಿಷಮ ಸ್ಥಿತಿಯ ಹಂತದಲ್ಲಿದೆ ಎಂದು ತಿಳಿಸಿದರು.

‘ವಾಯುಮಾಲಿನ್ಯವು ಎಲ್ಲರ ಮೇಲೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಾವು ಇದನ್ನು ಆರೋಗ್ಯ ತುರ್ತುಸ್ಥಿತಿ ಎಂಬುದಾಗಿ ಪರಿಗಣಿಸಬೇಕು’ ಎಂದು ಭುರೇಲಾಲ್ ಪತ್ರದಲ್ಲಿ ಬರೆದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲ ಶಾಲೆಗಳಿಗೂ ನವೆಂಬರ್ 5ರ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದರು.

ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಕ್ಕಾಗಿ ರಾಜ್ಯಗಳನ್ನು ದೂಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈದಿನ ಶಾಲಾ ಮಕ್ಕಳಿಗೆ ೫೦ ಲಕ್ಷ ಮುಖವಾಡಗಳನ್ನು (ಮಾಸ್ಕ್) ವಿತರಿಸಿದರು ಮತ್ತು ಅವುಗಳನ್ನು ಬಳಸುವಂತೆ ಇತರ ನಿವಾಸಿಗಳಿಗೂ ಮನವಿ ಮಾಡಿದರು.

‘ನೆರೆಯ ರಾಜ್ಯಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಪರಿವರ್ತನೆಯಾಗಿದೆ. ಈ ಮಾಲಿನ್ಯಭರಿತ ಗಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದುದು ಈಗ ಅತ್ಯಂತ ಮಹತ್ವದ ಕೆಲಸವಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ೫೦ ಲಕ್ಷ ಮುಖವಾಡಗಳನ್ನು ನಾವು ಈದಿನ ವಿತರಿಸುತ್ತಿದ್ದೇವೆ. ಅಗತ್ಯ ಬಿದ್ದಲ್ಲಿ ಇವುಗಳನ್ನು ಬಳಸುವಂತೆ ನಾನು ಎಲ್ಲ ದೆಹಲಿ ನಿವಾಸಿಗಳಿಗೂ ಮನವಿ ಮಾಡುತ್ತೇನೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.

ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದ ಉಂಟಾಗುವ ಹೊಗೆ ದೆಹಲಿಯಲ್ಲಿ ಮಾಲಿನ್ಯ ಉಂಟು ಮಾಡುತ್ತಿದೆ. ದಯವಿಟ್ಟು ಕ್ಯಾಪ್ಟನ್ ಅಂಕಲ್ (ಪಂಜಾಬ್ ಮುಖ್ಯಮಂತ್ರಿ) ಮತ್ತು ಖಟ್ಟರ್ ಅಂಕಲ್ (ಹರಿಯಾಣ ಮುಖ್ಯಮಂತ್ರಿ) ಅವರಿಗೆ ಪತ್ರಗಳನ್ನು ಬರೆದು ’ನಮ್ಮ ಆರೋಗ್ಯದ ಬಗ್ಗೆ ಚಿಂತಿಸಿ’ ಎಂದು ಒತ್ತಾಯಿಸಿ ಎಂದು ಅರವಿಂದ ಕೇಜ್ರಿವಾಲ್ ಮಕ್ಕಳಿಗೆ ಸಲಹೆ ಮಾಡಿದರು.

ರಾಜಧಾನಿಯ ಮಾಲಿನ್ಯ ಮಟ್ಟ ಏರುತ್ತಿರುವುದರಿಂದಾಗಿ ದೆಹಲಿಯನ್ನು ಮುಸುಕಿರುವ ಮಬ್ಬು ರಾತ್ರಿ ವೇಳೆಯಲ್ಲಿ ೫೦ ಪಾಯಿಂಟ್‌ನಷ್ಟು ಹೆಚ್ಚುತ್ತಿದೆ. ಪರಿಣಾಮವಾಗಿ ಶುಕ್ರವಾರ ಬೆಳಗ್ಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ೪೫೯ಕ್ಕೆ ಏರಿತ್ತು.

ಗುರುವಾರ ರಾತ್ರಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ವಿಷಮ ಅಂದರೆ ’ಸಿವಿಯರ್ ಪ್ಲಸ್’ ಅಥವಾ ’ತುರ್ತು’ ಸ್ಥಿತಿಗೆ ಮುಟ್ಟಿತ್ತು. ಈ ವರ್ಷ ಜನವರಿಯಿಂದ ವಾಯು ಗುಣಮಟ್ಟ ಸೂಚ್ಯಂಕ ಈ ಮಟ್ಟಕ್ಕೆ ಮುಟ್ಟಿದ್ದು ಇದೇ ಮೊದಲು.

ವಾಯು ಗುಣಮಟ್ಟವು ವಿಷಮ ಸ್ಥಿತಿಯಲ್ಲಿಯೇ ೪೮ ಗಂಟೆಗಳಿಗಿಂತಲೂ ಹೆಚ್ಚು ಕಾಲ ಮುಂದುವರೆದರೆ, ಸಮ-ಬೆಸ ಯೋಜನೆಯ ಜಾರಿ, ಟ್ರಕ್ ಪ್ರವೇಶ ನಿಷೇಧ, ನಿರ್ಮಾಣ ಚಟುವಟಿಕೆಗಳ ನಿಷೇಧ ಹಾಗೂ ಶಾಲೆಗಳನ್ನು ಮುಚ್ಚುವುದೇ ಇತ್ಯಾದಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ನುಡಿದರು.

ದೆಹಲಿಯಲ್ಲಿ ಸೋಮವಾರದಿಂದ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದ್ದು, ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಎಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ವಾಯುಮಾಲಿನ್ಯವನ್ನು ಇಳಿಸಲು ನೆರವಾಗುವ ಸಮ-ಬೆಸ ವಾಹನ ಸಂಚಾರವು ನವೆಂಬರ್ ೧೫ರವರೆಗೂ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ.

ದೆಹಲಿಯ ಎಲ್ಲ ೩೭ ವಾಯುಗುಣಮಟ್ಟ ನಿಗಾ ಕೇಂದ್ರಗಳೂ ಶುಕ್ರವಾರ ಬೆಳಗ್ಗೆ ವಾಯುಗುಣಮಟ್ಟ ವಿಷಮ ಸ್ಥಿತಿಗೆ ತಲುಪಿದ್ದನ್ನು ದಾಖಲಿಸಿವೆ.

ಬವಾನ ಪ್ರದೇಶವು ಅತ್ಯಂತ ಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶವಾಗಿದ್ದು ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ೪೯೭ಕ್ಕೆ ಮುಟ್ಟಿದ್ದರೆ, ದೆಹಲಿ ತಾಂತ್ರಿಕ ವಿಶ್ವವಿದ್ಯಾಯ ಪ್ರದೇಶದಲ್ಲಿ ೪೮೭ಕ್ಕೆ, ಆನಂದ ವಿಹಾರದಲ್ಲಿ ೪೮೪ಕ್ಕೆ ಮತ್ತು ವಿವೇಕ ವಿಹಾರದಲಿ ೪೮೨ಕ್ಕೆ ತಲುಪಿತ್ತು.

ನೆರೆಯ ಗಾಜಿಯಾಬಾದ್ ದೇಶದಲ್ಲೇ ಅತ್ಯಂತ ಹೆಚ್ಚು ಮಾಲಿನ್ಯಕ್ಕೆ ಒಳಗಾಗಿರುವ ನಗರವಾಗಿದ್ದು, ಇಲ್ಲಿ ಸೂಕ್ಷ್ಮ ಕಣಗಳ ಗಾತ್ರ ಪಿಎಂ೨.೫ರಷ್ಟಿದ್ದು ಇದು ೨.೫ ಮೈಕ್ರೋನ್ ಗಿಂತಲೂ ಕಡಿಮೆ. ಇದು ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ನೋಯ್ಡಾ , ಗ್ರೇಟರ್ ನೋಯ್ಡಾ ಮತ್ತು ಫರೀದಾಬಾದ್ ಕೂಡಾ ಅತ್ಯಂತ ಮಾಲಿನ್ಯಭರಿತ ಪ್ರದೇಶಗಳಾಗಿವೆ.

ದೆಹಲಿ ವಾಯುಮಾಲಿನ್ಯ: ಗಾಳಿಯಲ್ಲಿ ಪತ್ತೆಯಾಗಿದೆಪಿಎಂ 2.5’ ಕಣ

 ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ದೆಹಲಿಯ ಗಾಳಿಯಲ್ಲಿ ‘ಪಿಎಂ 2.5’ ಕಣಗಳು ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.

ಏನಿದು ‘ಪಿಎಂ 2.5’?

‘ಪಿಎಂ’ ಎಂಬುದು ‘ಪರ್ಟಿಕ್ಯುಲೇಟ್ ಮ್ಯಾಟರ್‌’ ಎಂಬುದರ ಸಂಕ್ಷಿಪ್ತ ರೂಪ. ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ‘ಪಿಎಂ’ ಎಂಬ ಹೆಸರನ್ನು ಬಳಸಲಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ಇವನ್ನು ‘ಪಿಎಂ 2.5’ ಮತ್ತು ಪಿಎಂ 10’ ಎಂದು ವರ್ಗೀಕರಿಸಲಾಗಿದೆ. 2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಕರೆಯಲಾಗುತ್ತದೆ. ಇವು ಹೆಚ್ಚು ಅಪಾಯಕಾರಿಯಾದ ಕಣಗಳಾಗಿವೆ.

ಇಂಗಾಲದ ಡೈ ಆಕ್ಸೈಡ್‌, ಇಂಗಾಲದ ಮಾನಾಕ್ಸೈಡ್‌, ಸಾರಜನಕದ ಆಕ್ಸೈಡ್‌ನ ಕಣಗಳು ಈ ರೂಪದಲ್ಲಿ ಇರುತ್ತವೆ. ದೆಹಲಿಯ ಗಾಳಿಯಲ್ಲಿ ಕಂಡುಬಂದಿರುವುದು ಇದೇ ಕಣಗಳು.

ತೊಂದರೆಯೇನು?

ಇವು ತೀರಾ ಚಿಕ್ಕದಾಗಿರುವ ಕಾರಣ ಬರಿಗಣ್ಣಿಗೆ ಗೋಚರಿಸುವುದಿಲ್ಲ. 40 ‘ಪಿಎಂ 2.5’ ಕಣಗಳನ್ನು ಒಟ್ಟುಸೇರಿಸಿದರೆ ಮಾತ್ರ ಅವು ಬರಿಗಣ್ಣಿಗೆ ಗೋಚರಿಸುತ್ತವೆ. ಈ ಕಣಗಳ ಗಾತ್ರ ತೀರಾ ಸಣ್ಣದಾಗಿರುವ ಕಾರಣ ಮೂಗು ಮತ್ತು ಬಾಯಿಯ ಮೂಲಕ ಶ್ವಾಸಕೋಶವನ್ನು ಸುಲಭವಾಗಿ ಪ್ರವೇಶಿಸುತ್ತವೆ

ಪಿಎಂ 2.5’ ಮೂಲಗಳು

ಕೃಷಿತ್ಯಾಜ್ಯದ ದಹನ, ಕಾರ್ಖಾನೆಗಳು ಮತ್ತು ಉಷ್ಣವಿದ್ಯುತ್ ಸ್ಥಾವರ, ವಾಹನಗಳ ಹೊಗೆ, ಘನತ್ಯಾಜ್ಯ ದಹನ

ಪಿಎಂ 2.5’ ಕಣಗಳಿಂದ ಎದುರಾಗುವ ಸಮಸ್ಯೆಗಳು

ಕಣ್ಣಿನ ನವೆ, ಚರ್ಮದ ಅಲರ್ಜಿ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು.

ಯಾರಿಗೆಲ್ಲಾ ಅಪಾಯ?

ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು

November 1, 2019 - Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha | , , , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ