SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಂಕೆ ಮೀರಿದ ಮಾಲಿನ್ಯ: ದೆಹಲಿಯಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಣೆ

01 delhi air pollutionನವೆಂಬರ್ ೫ರವರೆಗೆ ಎಲ್ಲ ಶಾಲೆಗಳಿಗೂ ರಜೆ, ನಿರ್ಮಾಣ ಚಟುವಟಿಕೆ ನಿಷೇಧ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ಅಂಕೆ ಮೀರಿ ’ವಿಷಮ ಸ್ಥಿತಿ’ಗೆ (ಸಿವಿಯರ್ ಪ್ಲಸ್) ತಲುಪಿದ್ದನ್ನು ಅನುಸರಿಸಿ ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರವು (ಇಪಿಸಿಎ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಣೆ ಮಾಡಿದ್ದು 2019 ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ 2019 ನವೆಂಬರ್ 01ರ ಶುಕ್ರವಾರ ನಿಷೇದಿಸಿತು. ಇದೇ ವೇಳೆಗೆ ದೆಹಲಿ ಸರ್ಕಾರವು ನವೆಂಬರ್ ೫ರವರೆಗೆ ಶಾಲೆಗಳಿಗೆ ರಜೆ ಘೋಷಿಸಿತು.

ವಾಯುಗುಣಮಟ್ಟ ವಿಪರೀತ ಎನಿಸುವಷ್ಟು ಕೆಳಕ್ಕೆ ಕುಸಿದಿದ್ದು, ದೆಹಲಿಗರು ಉಸಿರು ಎಳೆದುಕೊಳ್ಳಲು ಚಡಪಡಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಪ್ರಾಧಿಕಾರ ಚಳಗಾಲದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನೂ ನಿಷೇಧಿಸಿತು.

ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮುಖ್ಯಕಾರ್‍ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್ ಅವರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಗುರುವಾರ ರಾತ್ರಿ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ವಿಷಮ ಸ್ಥಿತಿಯ ಹಂತದಲ್ಲಿದೆ ಎಂದು ತಿಳಿಸಿದರು.

‘ವಾಯುಮಾಲಿನ್ಯವು ಎಲ್ಲರ ಮೇಲೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಾವು ಇದನ್ನು ಆರೋಗ್ಯ ತುರ್ತುಸ್ಥಿತಿ ಎಂಬುದಾಗಿ ಪರಿಗಣಿಸಬೇಕು’ ಎಂದು ಭುರೇಲಾಲ್ ಪತ್ರದಲ್ಲಿ ಬರೆದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲ ಶಾಲೆಗಳಿಗೂ ನವೆಂಬರ್ 5ರ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದರು.

ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಕ್ಕಾಗಿ ರಾಜ್ಯಗಳನ್ನು ದೂಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈದಿನ ಶಾಲಾ ಮಕ್ಕಳಿಗೆ ೫೦ ಲಕ್ಷ ಮುಖವಾಡಗಳನ್ನು (ಮಾಸ್ಕ್) ವಿತರಿಸಿದರು ಮತ್ತು ಅವುಗಳನ್ನು ಬಳಸುವಂತೆ ಇತರ ನಿವಾಸಿಗಳಿಗೂ ಮನವಿ ಮಾಡಿದರು.

‘ನೆರೆಯ ರಾಜ್ಯಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಪರಿವರ್ತನೆಯಾಗಿದೆ. ಈ ಮಾಲಿನ್ಯಭರಿತ ಗಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದುದು ಈಗ ಅತ್ಯಂತ ಮಹತ್ವದ ಕೆಲಸವಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ೫೦ ಲಕ್ಷ ಮುಖವಾಡಗಳನ್ನು ನಾವು ಈದಿನ ವಿತರಿಸುತ್ತಿದ್ದೇವೆ. ಅಗತ್ಯ ಬಿದ್ದಲ್ಲಿ ಇವುಗಳನ್ನು ಬಳಸುವಂತೆ ನಾನು ಎಲ್ಲ ದೆಹಲಿ ನಿವಾಸಿಗಳಿಗೂ ಮನವಿ ಮಾಡುತ್ತೇನೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.

ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದ ಉಂಟಾಗುವ ಹೊಗೆ ದೆಹಲಿಯಲ್ಲಿ ಮಾಲಿನ್ಯ ಉಂಟು ಮಾಡುತ್ತಿದೆ. ದಯವಿಟ್ಟು ಕ್ಯಾಪ್ಟನ್ ಅಂಕಲ್ (ಪಂಜಾಬ್ ಮುಖ್ಯಮಂತ್ರಿ) ಮತ್ತು ಖಟ್ಟರ್ ಅಂಕಲ್ (ಹರಿಯಾಣ ಮುಖ್ಯಮಂತ್ರಿ) ಅವರಿಗೆ ಪತ್ರಗಳನ್ನು ಬರೆದು ’ನಮ್ಮ ಆರೋಗ್ಯದ ಬಗ್ಗೆ ಚಿಂತಿಸಿ’ ಎಂದು ಒತ್ತಾಯಿಸಿ ಎಂದು ಅರವಿಂದ ಕೇಜ್ರಿವಾಲ್ ಮಕ್ಕಳಿಗೆ ಸಲಹೆ ಮಾಡಿದರು.

ರಾಜಧಾನಿಯ ಮಾಲಿನ್ಯ ಮಟ್ಟ ಏರುತ್ತಿರುವುದರಿಂದಾಗಿ ದೆಹಲಿಯನ್ನು ಮುಸುಕಿರುವ ಮಬ್ಬು ರಾತ್ರಿ ವೇಳೆಯಲ್ಲಿ ೫೦ ಪಾಯಿಂಟ್‌ನಷ್ಟು ಹೆಚ್ಚುತ್ತಿದೆ. ಪರಿಣಾಮವಾಗಿ ಶುಕ್ರವಾರ ಬೆಳಗ್ಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ೪೫೯ಕ್ಕೆ ಏರಿತ್ತು.

ಗುರುವಾರ ರಾತ್ರಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ವಿಷಮ ಅಂದರೆ ’ಸಿವಿಯರ್ ಪ್ಲಸ್’ ಅಥವಾ ’ತುರ್ತು’ ಸ್ಥಿತಿಗೆ ಮುಟ್ಟಿತ್ತು. ಈ ವರ್ಷ ಜನವರಿಯಿಂದ ವಾಯು ಗುಣಮಟ್ಟ ಸೂಚ್ಯಂಕ ಈ ಮಟ್ಟಕ್ಕೆ ಮುಟ್ಟಿದ್ದು ಇದೇ ಮೊದಲು.

ವಾಯು ಗುಣಮಟ್ಟವು ವಿಷಮ ಸ್ಥಿತಿಯಲ್ಲಿಯೇ ೪೮ ಗಂಟೆಗಳಿಗಿಂತಲೂ ಹೆಚ್ಚು ಕಾಲ ಮುಂದುವರೆದರೆ, ಸಮ-ಬೆಸ ಯೋಜನೆಯ ಜಾರಿ, ಟ್ರಕ್ ಪ್ರವೇಶ ನಿಷೇಧ, ನಿರ್ಮಾಣ ಚಟುವಟಿಕೆಗಳ ನಿಷೇಧ ಹಾಗೂ ಶಾಲೆಗಳನ್ನು ಮುಚ್ಚುವುದೇ ಇತ್ಯಾದಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ನುಡಿದರು.

ದೆಹಲಿಯಲ್ಲಿ ಸೋಮವಾರದಿಂದ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದ್ದು, ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಎಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ವಾಯುಮಾಲಿನ್ಯವನ್ನು ಇಳಿಸಲು ನೆರವಾಗುವ ಸಮ-ಬೆಸ ವಾಹನ ಸಂಚಾರವು ನವೆಂಬರ್ ೧೫ರವರೆಗೂ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ.

ದೆಹಲಿಯ ಎಲ್ಲ ೩೭ ವಾಯುಗುಣಮಟ್ಟ ನಿಗಾ ಕೇಂದ್ರಗಳೂ ಶುಕ್ರವಾರ ಬೆಳಗ್ಗೆ ವಾಯುಗುಣಮಟ್ಟ ವಿಷಮ ಸ್ಥಿತಿಗೆ ತಲುಪಿದ್ದನ್ನು ದಾಖಲಿಸಿವೆ.

ಬವಾನ ಪ್ರದೇಶವು ಅತ್ಯಂತ ಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶವಾಗಿದ್ದು ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ೪೯೭ಕ್ಕೆ ಮುಟ್ಟಿದ್ದರೆ, ದೆಹಲಿ ತಾಂತ್ರಿಕ ವಿಶ್ವವಿದ್ಯಾಯ ಪ್ರದೇಶದಲ್ಲಿ ೪೮೭ಕ್ಕೆ, ಆನಂದ ವಿಹಾರದಲ್ಲಿ ೪೮೪ಕ್ಕೆ ಮತ್ತು ವಿವೇಕ ವಿಹಾರದಲಿ ೪೮೨ಕ್ಕೆ ತಲುಪಿತ್ತು.

ನೆರೆಯ ಗಾಜಿಯಾಬಾದ್ ದೇಶದಲ್ಲೇ ಅತ್ಯಂತ ಹೆಚ್ಚು ಮಾಲಿನ್ಯಕ್ಕೆ ಒಳಗಾಗಿರುವ ನಗರವಾಗಿದ್ದು, ಇಲ್ಲಿ ಸೂಕ್ಷ್ಮ ಕಣಗಳ ಗಾತ್ರ ಪಿಎಂ೨.೫ರಷ್ಟಿದ್ದು ಇದು ೨.೫ ಮೈಕ್ರೋನ್ ಗಿಂತಲೂ ಕಡಿಮೆ. ಇದು ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ನೋಯ್ಡಾ , ಗ್ರೇಟರ್ ನೋಯ್ಡಾ ಮತ್ತು ಫರೀದಾಬಾದ್ ಕೂಡಾ ಅತ್ಯಂತ ಮಾಲಿನ್ಯಭರಿತ ಪ್ರದೇಶಗಳಾಗಿವೆ.

ದೆಹಲಿ ವಾಯುಮಾಲಿನ್ಯ: ಗಾಳಿಯಲ್ಲಿ ಪತ್ತೆಯಾಗಿದೆಪಿಎಂ 2.5’ ಕಣ

 ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ದೆಹಲಿಯ ಗಾಳಿಯಲ್ಲಿ ‘ಪಿಎಂ 2.5’ ಕಣಗಳು ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.

ಏನಿದು ‘ಪಿಎಂ 2.5’?

‘ಪಿಎಂ’ ಎಂಬುದು ‘ಪರ್ಟಿಕ್ಯುಲೇಟ್ ಮ್ಯಾಟರ್‌’ ಎಂಬುದರ ಸಂಕ್ಷಿಪ್ತ ರೂಪ. ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ‘ಪಿಎಂ’ ಎಂಬ ಹೆಸರನ್ನು ಬಳಸಲಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ಇವನ್ನು ‘ಪಿಎಂ 2.5’ ಮತ್ತು ಪಿಎಂ 10’ ಎಂದು ವರ್ಗೀಕರಿಸಲಾಗಿದೆ. 2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಕರೆಯಲಾಗುತ್ತದೆ. ಇವು ಹೆಚ್ಚು ಅಪಾಯಕಾರಿಯಾದ ಕಣಗಳಾಗಿವೆ.

ಇಂಗಾಲದ ಡೈ ಆಕ್ಸೈಡ್‌, ಇಂಗಾಲದ ಮಾನಾಕ್ಸೈಡ್‌, ಸಾರಜನಕದ ಆಕ್ಸೈಡ್‌ನ ಕಣಗಳು ಈ ರೂಪದಲ್ಲಿ ಇರುತ್ತವೆ. ದೆಹಲಿಯ ಗಾಳಿಯಲ್ಲಿ ಕಂಡುಬಂದಿರುವುದು ಇದೇ ಕಣಗಳು.

ತೊಂದರೆಯೇನು?

ಇವು ತೀರಾ ಚಿಕ್ಕದಾಗಿರುವ ಕಾರಣ ಬರಿಗಣ್ಣಿಗೆ ಗೋಚರಿಸುವುದಿಲ್ಲ. 40 ‘ಪಿಎಂ 2.5’ ಕಣಗಳನ್ನು ಒಟ್ಟುಸೇರಿಸಿದರೆ ಮಾತ್ರ ಅವು ಬರಿಗಣ್ಣಿಗೆ ಗೋಚರಿಸುತ್ತವೆ. ಈ ಕಣಗಳ ಗಾತ್ರ ತೀರಾ ಸಣ್ಣದಾಗಿರುವ ಕಾರಣ ಮೂಗು ಮತ್ತು ಬಾಯಿಯ ಮೂಲಕ ಶ್ವಾಸಕೋಶವನ್ನು ಸುಲಭವಾಗಿ ಪ್ರವೇಶಿಸುತ್ತವೆ

ಪಿಎಂ 2.5’ ಮೂಲಗಳು

ಕೃಷಿತ್ಯಾಜ್ಯದ ದಹನ, ಕಾರ್ಖಾನೆಗಳು ಮತ್ತು ಉಷ್ಣವಿದ್ಯುತ್ ಸ್ಥಾವರ, ವಾಹನಗಳ ಹೊಗೆ, ಘನತ್ಯಾಜ್ಯ ದಹನ

ಪಿಎಂ 2.5’ ಕಣಗಳಿಂದ ಎದುರಾಗುವ ಸಮಸ್ಯೆಗಳು

ಕಣ್ಣಿನ ನವೆ, ಚರ್ಮದ ಅಲರ್ಜಿ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು.

ಯಾರಿಗೆಲ್ಲಾ ಅಪಾಯ?

ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು

November 1, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha | , , , , , , , | Leave a comment

ಮುಂಬೈಯ ಆರೇ ಕಾಲೋನಿ: ಮೆಟ್ರೋಕಾರ್ ಶೆಡ್‌ಗಾಗಿ ಮರಗಳಿಗೆ ಕೊಡಲಿ

This slideshow requires JavaScript.

ತೀವ್ರ ಪ್ರತಿಭಟನೆ, ೩೮ ಜನರ ಸೆರೆ, ಬಂಧಿತರ ಜಾಮೀನಿಗೆ ನಕಾರ,
ತಡೆ ಕೋರಿದ ಹೊಸ ಅರ್ಜಿಗೂ ತಿರಸ್ಕಾರ

ಮುಂಬೈ:  ಮಹಾನಗರದ ಆರೇ ಕಾಲೋನಿಯಲ್ಲಿ ಮುಂಬೈ ಮೆಟ್ರೋ ರೈಲು ಕಾರ್ಪೋರೇಷನ್ನಿನ (ಎಂಎಂಆರ್‌ಸಿ) ಮೆಟ್ರೋ ಕಾರು ಶೆಡ್ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳ ನಾಶವನ್ನು ವಿರೋಧಿಸಿ ಪ್ರತಿಭಟಿಸಿದ ೩೮ ಮಂದಿಯನ್ನು ಪೊಲೀಸರು  2019 ಅಕ್ಟೋಬರ್ 05ರ ಶನಿವಾರ ಬಂಧಿಸಿದ್ದು, ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. ಇದರ ಜೊತೆಗೆ ಮರಗಳ ನಾಶಕ್ಕೆ ತಡೆ ಕೋರಿ ಪರಿಸರ ಕಾರ್ಯಕರ್ತರು ಸಲ್ಲಿಸಿದ ಹೊಸ ಅರ್ಜಿಯನ್ನೂ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತು.

ಮರ ಕಡಿಯುವುದನ್ನು ಪ್ರತಿಭಟಿಸಿದ ೩೮ ಮಂದಿ ಪರಿಸರ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಅವರಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು. ಇವರ ಹೊರತಾಗಿ ೫೫ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈಮಧ್ಯೆ ಆರೇ ಕಾಲೋನಿಯಲ್ಲಿ ಮರಗಳನ್ನು ಕಡೆಯುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವುದರ ನಡುವೆ ಮರಕಡಿಯಲು ಶುಕ್ರವಾರ ಒಪ್ಪಿಗೆ ನೀಡಿದ್ದ ಬಾಂಬೆ ಹೈಕೋರ್ಟ್, ಮರ ಕಡಿಯುವುದಕ್ಕೆ ತಡೆಯಾಜ್ಞೆ ಕೋರಿ ಪರಿಸರವಾದಿಗಳು ಹೊಸದಾಗಿ ಸಲ್ಲಿಸಿದ ಅರ್ಜಿಯನ್ನೂ  ಈದಿನ  ತಿರಸ್ಕರಿಸಿತು.

“ಮರಗಳನ್ನು ಕಡಿಯಲು ಮುನಿಸಿಪಲ್ ಕಾರ್ಪೋರೇಷನ್ನಿನ  ಮರ ಪ್ರಾಧಿಕಾರವು ಸೆಪ್ಟೆಂಬರ್ ೧೩ರಂದು ಅನುಮತಿ ನೀಡಿತ್ತು. ಹೈಕೋರ್ಟ್ ಮರ ಕಡಿಯುವುದರ ವಿರುದ್ಧ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿದ್ದಲ್ಲದೆ, ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ೫೦,೦೦೦ ರೂಪಾಯಿ ದಂಡವನ್ನೂ ವಿಧಿಸಿದೆ’ ಎಂದು ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಹೇಳಿದರು.

‘ಅವರ ಚಟುವಟಿಕೆಗಳು ಅಕ್ರಮವಷ್ಟೇ ಅಲ್ಲ, ಭಂಡತನದ್ದೂ ಆಗಿವೆ. ನೀವು ನ್ಯಾಯಾಲಯದಲ್ಲಿ ಸೋತರೆ, ಗೌರವಪೂರ್ವಕವಾಗಿ ಅದನ್ನು ಅಂಗೀಕರಿಸುವುದು ಒಳ್ಳೆಯದು, ಬೀದಿಗೆ ಒಯ್ಯುವುದಲ್ಲ’ ಎಂದು ಆಕೆ ಟ್ವೀಟ್ ಮಾಡಿದರು.

ಆರೇಯಲ್ಲಿ ಮರಗಳನ್ನು ಕಡಿಯಲು ಹೊಸದಾಗಿ ಅನುಮತಿ ಪಡೆಯಬೇಕು ಎಂಬ ಪರಿಸರವಾದಿಗಳ ಪ್ರತಿಪಾದನೆಯನ್ನು ಮುಂಬೈ ಮೆಟ್ರೋ ರೈಲು ನಿಗಮವು (ಎಂಎಂಆರ್‌ಸಿ) ತಳ್ಳಿಹಾಕಿತು.

ಹಿಂದಿನ ದಿನ ತಡರಾತ್ರಿ ಎಂಎಂಆರ್‌ಸಿಯು ಮುಂಬೈ ಮೆಟ್ರೋದ ಮೂರನೇ ಹಂತಕ್ಕಾಗಿ ಕಾರು ಶೆಡ್ ನಿರ್ಮಿಸಲು ಕಡಿಯಲು ಆರಂಭಿಸಿದಾಗ ಆರೇ ಕಾಲೋನಿಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಅವರು ಸರಣಿ ಟ್ವೀಟ್‌ಗಳ ಮೂಲಕ ಪರಿಸರವಾದಿಗಳು ನ್ಯಾಯಾಲಯದಲ್ಲಿ ತಮಗೆ ಆಗಿರುವ ಪರಾಭವವನ್ನು ಗೌರವಪೂರ್ವಕವಾಗಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಮೆಟ್ರೋ ಯೋಜನೆಗಾಗಿ ೨,೫೦೦ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನ್ಯಾಯಾಲಯ ಒಪ್ಪಿಗೆ ನೀಡಿದ ಒಂದು ದಿನದ ಬಳಿಕ ಪ್ರತಿಭಟನಕಾರರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಆರೇಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಯಿತು.

ಆರೇ ಪ್ರದೇಶವು ಕಾಡು ಎಂಬುದಾಗಿ ಮಾನ್ಯ ಮಾಡಲು ಹೈಕೋರ್ಟ್  ಅಕ್ಟೋಬರ್ 4ರ ಶುಕ್ರವಾರ ನಿರಾಕರಿಸಿ, ಅಧಿಕಾರಿಗಳಿಗೆ ಮುಂಬೈ ಮೆಟ್ರೋಕ್ಕಾಗಿ ಶೆಡ್ ನಿರ್ಮಿಸಲು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶವನ್ನು ತತ್ ಕ್ಷಣವೇ ಪಾಲಿಸಿದ ಅಧಿಕಾರಿಗಳು ಶನಿವಾರ ನಸುಕಿನ ೩.೧೫ರ ವೇಳೆಯಲ್ಲಿ ಪೊಲೀಸರ ನೆರವಿನೊಂದಿಗೆ ಸುಮಾರು ೨೦೦ ಮರಗಳನ್ನು ಕಡೆದಿದ್ದಾರೆ ಎಂದು ಪರಿಸರ ಕಾರ್‍ಯಕರ್ತರು ಆಪಾದಿಸಿದ್ದಾರೆ.

ಇದರ ಬೆನ್ನಲ್ಲೇ ಆರೇ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿತು. ವಿರೋಧ ಪಕ್ಷಗಳು ಮಾತ್ರವೇ ಅಲ್ಲ, ಬಿಜಿಪಿಯ ಮಹಾರಾಷ್ಟ್ರದ ಮಿತ್ರ ಪಕ್ಷ ಶಿವಸೇನೆ ಕೂಡಾ ಸರ್ಕಾರದ ನಿರ್ಧಾರವನ್ನು ಟೀಕಿಸಿತು. ಪೊಲೀಸರು ಬಂಧಿಸಿರುವ ಪ್ರತಿಭಟನಕಾರರಲ್ಲಿ ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಕೂಡಾ ಸೇರಿದ್ದಾರೆ. ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ’ನಮ್ಮ ಸರ್ಕಾರವು ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿದೆ ಮತ್ತು ಮರಗಳ ಈ ಕೊಲೆಗಡುಕರನ್ನು ಏನು ಮಾಡಬೇಕು ಎಂದು ನಾವು ನೋಡುತ್ತೇವೆ’ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉದ್ಧವ್ ಠಾಕ್ರೆ ಪುತ್ರ ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಕೂಡಾ ಮರಗಳನ್ನು ಕಡಿಯುವ ಕ್ರಮವನ್ನು ಖಂಡಿಸಿದರು.

ಮುಂಬೈ ಮೆಟ್ರೋ ನಿಗಮವು ಅತ್ಯಂತ ತ್ವರಿತವಾಗಿ ಮರಗಳನ್ನು ಕಡಿದು ಆರೇ ಪರಿಸರಕ್ಕೆ ಹಾನಿ ಉಂಟುತ್ತಿರುವುದು ನಾಚಿಕೆಗೇಡು ಮತ್ತು ಭ್ರಮನಿರಸನದಾಯಕ. ಈ ಅಧಿಕಾರಿಗಳನ್ನು ಪಾಕ್ ಆಕ್ರಮಿಕ ಕಾಶ್ಮಿರದಲ್ಲಿ ನಿಯೋಜಿಸಿ, ಮರಗಳನ್ನು ಕಡಿಯುವ ಬದಲಿಗೆ ಭಯೋತ್ಪಾದನಾ ಶಿಬಿರಗಳನ್ನು ನಾಶ ಪಡಿಸುವ ಹೊಣೆಗಾರಿಕೆ ವಹಿಸಿದರೆ ಹೇಗೆ?’ ಎಂದು ಟ್ವೀಟ್ ಮಾಡಿದರು.

ಈ ಕೋಲಾಹಲದ ಮಧ್ಯೆ ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು ದೆಹಲಿ ಹಾಗೂ ಮುಂಬೈ ಮಧ್ಯೆ ಕೆಲವು ಸಾಮ್ಯತೆಗಳಿವೆ ಎಂದು ಪ್ರತಿಪಾದಿಸಿದರು. ’ಬಾಂಬೆ ಹೈಕೋರ್ಟ್ ಆರೇಯು ಕಾಡು ಅಲ್ಲ ಎಂಬುದಾಗಿ ತೀರ್ಪು ನೀಡಿದೆ. ದೆಹಲಿಯಲ್ಲಿ ಮೊದಲ ಮೆಟ್ರೋ ನಿಲ್ದಾಣ ನಿರ್ಮಿಸುವಾಗ ೨೦-೨೫ ಮರಗಳನ್ನು ಕಡಿಯಲಾಗಿತ್ತು. ಜನರು ಆಗಲೂ ಪ್ರತಿಭಟಿಸಿದ್ದರು. ಆದರೆ ಕಡಿದ ಪ್ರತಿಯೊಂದು ಮರಕ್ಕೆ ಬದಲಿಯಾಗಿ ೫ ಮರಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ಸಚಿವರು ಹೇಳಿದರು.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆ ಜೊತೆಯಾಗಿ ಸಾಗಬಲ್ಲುದು ಎಂಬುದಕ್ಕೆ ದೆಹಲಿ ಉತ್ತಮ ಉದಾಹರಣೆಯಾಗಿದೆ. ಮುಂಬೈಯಲ್ಲೂ ಇದು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

೧,೨೮೭ ಹೆಕ್ಟೇರ್ ವ್ಯಾಪ್ತಿಯ ಆರೇ ಕಾಲೋನಿ ಮೆಟ್ರೋಪಾಲಿಟನ್ ನಗರದ ಪ್ರಮುಖ ಹಸಿರು ತಾಣವಾಗಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕಿಗೆ ಸೇರಿಕೊಂಡಂತಿರುವ ಪ್ರದೇಶವಾಗಿದೆ. ಹಲವಾರು ಬಾಲಿವುಡ್ ಗಣ್ಯರು ಮತ್ತು ರಾಜಕಾರಣಿಗಳು ಕೂಡಾ ಆರೇ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಪರಿಸರವಾದಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಹಸಿರುಮಯವಾಗಿದೆ ಎಂಬ ಕಾರಣಕ್ಕಾಗಿ ಆರೇಯನ್ನು ಕಾಡು ಎಂಬುದಾಗಿ ಘೋಷಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಸೆಪ್ಟಂಬರ್ ೨೦ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಯೋಜನೆಯು ಮುಂಬೈ ಮಹಾನಗರಕ್ಕೆ ಅತ್ಯಂತ ಅಗತ್ಯವಾದ ಯೋಜನೆಯಾಗಿದ್ದು ದೂರಗಾಮೀ ಮಹತ್ವವನ್ನು ಹೊಂದಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ನಿಯಮಿತವು ಪ್ರತಿಪಾದಿಸಿದೆ. ’ಸ್ಥಳೀಯ ಉಪನಗರ ರೈಲುಗಳಲ್ಲಿ ಜನಸಂದಣಿಯಿಂದಾಗಿ ಪ್ರತಿದಿನ ೧೦ ಪ್ರಯಾಣಿಕರು ಸಾವನ್ನಪ್ಪುತ್ತಾರೆ. ಮೆಟ್ರೋ ಯೋಜನೆಯು ಈ ಜನಸಂದಣಿಯ ಒತ್ತಡವನ್ನು ನಿವಾರಿಸಲಿದೆ’ ಎಂದು ಎಂಎಂಆರ್‌ಸಿಎಲ್ ವಕೀಲ ಅಶುತೋಶ್ ಕುಂಭಕೋಣಿ ಹೇಳಿದರು.

ಪತ್ರಿಕಾಹೇಳಿಕೆಯೊಂದನ್ನು ನೀಡಿರುವ ಪೊಲೀಸರು ಪ್ರತಿಭಟಿಸುತ್ತಿದ್ದ ೧೦೦ರಿಂದ ೨೦೦ರಷ್ಟು ಜನರ ಪೈಕಿ ಕೆಲವರು ಪೊಲೀಸ್ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದರು ಮತ್ತು ಹಲ್ಲೆ ನಡೆಸಿದರು. ಇದನ್ನು ಅನುಸರಿಸಿ ೬ ಮಹಿಳೆಯರು ಸೇರಿದಂತೆ ೨೯ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಅಸಂಖ್ಯಾತ ಪ್ರತಿಭಟನಕಾರರನ್ನು ಬಲವಂತವಾಗಿ ಆರೇ ಚೆಕ್ ಪೋಸ್ಟಿನಿಂದ ತೆರವುಗೊಳಿಸಿ ಗೋರೆಗಾಂವ್ ಸ್ಥಳೀಯ ಪೊಲೀಸ್ ಠಾಣೆಗೆ ಒಯ್ಯಲಾಯಿತು ಎಂದು ಪೊಲೀಸರು ಹೇಳಿದರು.

ಇದಕ್ಕೆ ಮುನ್ನ ಬೆಳಗ್ಗೆ ಪೊಲೀಸರು ಪ್ರತಿಭಟನಕಾರರು ಆರೇ ಕಾಲೋನಿ ಕಡೆಗೆ ಬಾರದಂತೆ ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿದ್ದರು.

ಮರ ಕಡಿಯುವ ಕಾರ್‍ಯಾಚರಣೆಗೆ ಕಾಂಗ್ರೆಸ್ ಪಕ್ಷವು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ. ’ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಸಂರಕ್ಷಣೆ ಬಗ್ಗೆ ’ಡಬಲ್ ಸ್ಟ್ಯಾಂಡರ್ಡ್’ ಹೊಂದಿದ್ದಾರೆ ಎಂದು ಅದು ಟೀಕಿಸಿತು.

’ಪರಿಸರ ಸಂರಕ್ಷಣೆಯ ಯೋಧ ಎಂಬಂತೆ ಜಾಗತಿಕ ವೇದಿಕೆಗಳಲ್ಲಿ ತಮ್ಮನ್ನು ಬಿಂಬಿಸಿಕೊಂಡಿರುವ ಪ್ರಧಾನಿ ಮೋದಿಯವರ ಪರಿಸರ ಸಂರಕ್ಷಣೆಯ ಪೊಳ್ಳುತನ ಅನಾವರಣಗೊಂಡಿದೆ. ದೇಶದಲ್ಲಿ ಅವರ ಸರ್ಕಾರದ ಕ್ರಮಗಳು ಸಂಪೂರ್ಣ ವಿರುದ್ಧ’ ಎಂದು ಕಾಂಗ್ರೆಸ್ ಟೀಕಿಸಿತು.

October 5, 2019 Posted by | ಭಾರತ, ರಾಷ್ಟ್ರೀಯ, environment /endangered species, Finance, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha | , , , , , , , , , , , , , | 2 Comments

‘ಸಿದ್ಧಾಂತ ಬಿಂದು’ ಬಿಡುಗಡೆ Release of ‘Siddhanta Bindu

‘ಸಿದ್ಧಾಂತ ಬಿಂದು’ ಬಿಡುಗಡೆ

ಗೆಳೆಯ ಇಸ್ಮಾಯಿಲ್ ಅವರಿಂದ ಒಂದು ಪತ್ರ

ಬಂದಿದೆ. ಈ ಪತ್ರ ‘ಸಿದ್ಧಾಂತ ಬಿಂದು’ ಪುಸ್ತಕ ಬಿಡುಗಡೆಗೆ ಸಂಬಂಧಿಸಿದ್ದು. ಪತ್ರವೇ ಸಹಜವಾಗಿ ನಿಮ್ಮ ಗಮನ ಸೆಳೆಯಬಲ್ಲುದು. ಬಿಡುಗಡೆ ಸಮಾರಂಭದ ಆಹ್ವಾನ ಪತ್ರಕ್ಕಾಗಿ ಪಕ್ಕದಲ್ಲಿರುವ ಚಿತ್ರದ ಕೊಂಡಿಯನ್ನು ತೆರೆ

ಯಿರಿ. ಹಿರಿಯರ ಉಪಸ್ಥಿತಿಯ ಈ ಸಮಾರಂಭ ಕೂಡಾ ಪತ್ರದಂತೆಯೇ ವಿಶಿಷ್ಟ ಅನುಭವ ನೀಡಬಲ್ಲುದು. ಆ ಅನುಭವ ಪಡೆಯುವ ಸಲುವಾಗಿ ಸಮಾರಂಭದತ್ತ ಹೆಜ್ಜೆ ಹಾಕಿ.

ನೆತ್ರಕೆರೆ ಉದಯಶಂಕರ

ಪತ್ರದ ಪೂರ್ಣ ಪಾಠ ಇಲ್ಲಿದೆ:

ಡಾ.ಎಂ. ಎ. ಹೆಗಡೆ ಅನುವಾದಿಸಿರುವ ಮಧುಸೂದರ ಸರಸ್ವತಿ ಅವರ ‘ಸಿದ್ಧಾಂತಬಿಂದು’ ಪುಸ್ತಕ ಬಿಡುಗಡೆ

ಪುಸ್ತಕ ಬಿಡುಗಡೆ: ಡಾ.ಯು.ಆರ್.ಅನಂತಮೂರ್ತಿ

ಶುಭಾಶಂಸನೆ: ವಿದ್ವಾನ್ ರಂಗನಾಥ ಶರ್ಮಾ

ಅಧ್ಯಕ್ಷತೆ: ಎಸ್. ಆರ್. ವಿಜಯಶಂಕರ

ಪುಸ್ತಕ ಪರಿಚಯ: ಡಾ. ಶ್ರೀರಾಮಭಟ್

ಉಪಸ್ಥಿತಿ: ಡಾ.ಎಂ.ಎ. ಹೆಗಡೆ (ಅನುವಾದಕರು)

ಮ.ಸು.ಶ್ರೀನಿವಾಸರಾಯ (ಪ್ರಕಾಶಕರು)

When

Sun, June 13, 10:30am – 12:30pm GMT+05:30

Where

ಬಿ.ಎಂ.ಶ್ರೀ ಪ್ರತಿಷ್ಠಾನ, 3ನೇ ಮುಖ್ಯ ರಸ್ತೆ, ಎನ್. ಆರ್. ಕಾಲೋನಿ, ಬೆಂಗಳೂರು

Who

(Guest list has been hidden at organizer’s request)

ಪ್ರಿಯರೇ,

ಇದು ಇಮಾಂ ಸಾಬಿ ಮತ್ತು ಗೋಕುಲಾಷ್ಟಮಿ ನಡುವಣ ಸಂಬಂಧವಲ್ಲ. ಇದು ಇಸ್ಮಾಯಿಲ್ ಎಂಬ ಸಾಬಿ ಮತ್ತು ಅದ್ವೈತದ ನಡುವಣ ಸಂಬಂಧ. ಸುಮ್ಮನೆ ಪ್ರಾಸಕ್ಕೆ ಬರೆದ ಸಾಲು ಇದು. ಇದನ್ನೇನು ಗಂಭೀರವಾಗಿ ಪರಿಗಣಿಸಬೇಡಿ. ಈಗ ನೇರಾನೇರ ವಿಷಯಕ್ಕೆ ಬಂದೇ ಬಿಡೋಣ ಅನ್ನೋ ಮನಸ್ಸಿದೆ. ಆದರೆ ಪತ್ರ ಅಷ್ಟೊಂದು ಔಪಚಾರಿಕವಾದರೆ ಚೆನ್ನಾಗಿರುವುದಿಲ್ಲ ಅನ್ನೋ ಕಾರಣಕ್ಕೆ ಮೊದಲು ಪೀಠಿಕಾ ಪ್ರಸಂಗ.

ನಾನು ಬೇರೆ ದೇವರು ಬೇರೆ ಅಂದುಕೊಂಡು ದೇವರಿಗೆ ಹತ್ತಿರವಾಗಲು ಪ್ರಯತ್ನಿಸುವುದು ದ್ವೈತ. ನಾನೂ ದೇವರೂ ಬೇರೆ ಅಲ್ಲ ಅಂದುಕೊಂಡು ನನ್ನೊಳಗೇ ಇರುವ ದೇವರನ್ನು ಕಂಡುಕೊಳ್ಳುವುದು ಅದ್ವೈತ ಎಂದು ಸುಲಭ ವ್ಯಾಖ್ಯಾನ ಮಾಡಿಕೊಂಡೇ ವಿಷಯ ಹೇಳಿಬಿಡುತ್ತೇನೆ.

ದೇವರನ್ನು ತನಗಿಂತ ಭಿನ್ನ ಎಂದು ಕೊಂಡು ದೇವರಿಗೆ ಹತ್ತಿರವಾಗುವ ಕ್ರಿಯೆಯೂ ಒಂದು ರೀತಿಯಲ್ಲಿ ಅದ್ವೈತದಲ್ಲೇ ಕೊನೆಗೊಳ್ಳುತ್ತದೆ. ಇದಕ್ಕೆ ಸಾಕ್ಷಿಯಾಗುವಂಥ ಬದುಕು ಮಧುಸೂದನ ಸರಸ್ವತಿಯವರದ್ದು. ನವ್ಯನ್ಯಾಯದ ಕೇಂದ್ರವಾಗಿದ್ದ ನವದ್ವೀಪದಲ್ಲಿ ಚೈತನ್ಯ ಮಹಾಪ್ರಭುಗಳ ಭಕ್ತಿಭಾವದಿಂದ ಪ್ರಭಾವಿತರಾಗಿದ್ದ ಮಧುಸೂದನ ಸರಸ್ವತಿಯವರು ಅದ್ವೈತಿಗಳ ವಾದವನ್ನೆಲ್ಲಾ ಚಿಂದಿ ಮಾಡುವ ಹುರುಡಿ ಹುಟ್ಟಿ ಅದ್ವೈತ ಸಿದ್ಧಾಂತವನ್ನು ಅಧ್ಯಯನ ಮಾಡಿ ಅದ್ವೈತ ವೇದಾಂತವನ್ನು ಖಂಡಿಸ ಬೇಕೆಂದು ಕಾಶಿಗೆ ಹೊರಟರು. ಅಲ್ಲಿ ಅದ್ವೈ ರಾಮತೀರ್ಥರ ಬಳಿ ಶಿಷ್ಯರಾಗಿ ಸೇರಿದರು. ಅದೇ ಸಮಯದಲ್ಲಿ ಮಾಧವ ಸರಸ್ವತಿಗಳಿಂದ ಮೀಮಾಂಸಾ ಶಾಸ್ತ್ರವನ್ನು ಕರತಲಾಮಲಕಗೊಳಿಸಿ ಕೊಂಡರು.  ಅದ್ವೈತದ ಅಧ್ಯಯನ ಮುಂದುವರಿದಂತೆಲ್ಲಾ ಅದರ ಮೇಲಿನ ದ್ವೇಷ ತಗ್ಗಿ ಅದ್ವೈತಿಯಾದರು. ಅದ್ವೈತದಲ್ಲೂ ಭಕ್ತಿ ಮಾರ್ಗವೊಂದನ್ನು ಶೋಧಿಸಿ ಸ್ಥಾಪಿಸಿದರು.

ಇಸ್ಲಾಮಿನಲ್ಲೂ ದೇವರು ಮನುಷ್ಯನಿಗಿಂತ ಭಿನ್ನ. ಅಂದರೆ ಇಲ್ಲಿ ‘ಅಲ್ಲಾಹು ಹಕ್’ ಅಥವಾ ದೇವರು ಸತ್ಯ. ಆದರೆ ಸೂಫಿಗಳು ‘ಅನಲ್ ಹಕ್’ ನಾನೇ ಸತ್ಯ ಅಂದರು. ಇದೊಂದು ರೀತಿಯಲ್ಲಿ ಅಹಂ ಬ್ರಹ್ಮಾಸ್ಮಿ ಎನ್ನುವುದಕ್ಕೆ ಸಮಾನವಾದ ಹೇಳಿಕೆ. ಇದು ಹೇಗೆ ಸಾಧ್ಯ ಎಂಬುದಕ್ಕೆ ಇಸ್ಲಾಮೀ ಧರ್ಮಶಾಸ್ತ್ರದಲ್ಲಿಯೂ ಅವರು ಉತ್ತರ ಕಂಡುಕೊಂಡರು. ದೇವರಿಗೆ ಹತ್ತಿರವಾಗು ಸಾಧನೆಯೊಂದರಲ್ಲಿ ತೊಡಗಿಕೊಂಡ ಸಾಧಕ ಒಂದು ಹಂತದ ನಂತರ ದೇವರು ಮತ್ತು ತನ್ನ ನಡುವಣ ಅಂತರವನ್ನು ಕಳೆದುಕೊಳ್ಳುತ್ತಾನೆ. ಎರಡು ಒಂದಾಗುವ ಪ್ರಕ್ರಿಯೆ ಇದು.

ಮಧುಸೂದನ ಸರಸ್ವತಿಯವರ ಮೆಟಮಾರ್ಫಸಿಸ್ ಕೂಡಾ ಇದೇ ರೀತಿ ನಡೆಯಿತೆಂಬುದು ನನ್ನ ಭಾವನೆ.

ಸುಮಾರು ಹದಿನಾರು ಹದಿನೇಳು ಶತಮಾನದ ನಡುವಣ ಅವಧಿಯಲ್ಲಿ ಬದುಕಿದ್ದ ಶ್ರೀ ಮಧುಸೂದನ ಸರಸ್ವತಿ ಅದ್ವೈತ ವೇದಾಂತದ ಮಹಾ ವಿದ್ವಾಂಸರು. ಅದ್ವೈತದಲ್ಲೂ ಭಕ್ತಿಯ ನೆಲೆಯನ್ನು ಶೋಧಿಸಿ ಸ್ಥಾಪಿಸಿದ ಈ ಮಹಾ ವಿದ್ವಾಂಸರ ಕೃತಿ ‘ಸಿದ್ಧಾಂತಬಿಂದು’ವಿನ ವಿಸ್ತೃತ ಟಿಪ್ಪಣಿ ಸಹಿತ ಕನ್ನಡ ಅನುವಾದ ಇದೇ ಭಾನುವಾರ ಅಂದರೆ ಜೂನ್ 13ರ ಭಾನುವಾರದಂದು ಬಿಡುಗಡೆಯಾಗಲಿದೆ. ಎನ್. ಆರ್ ಕಾಲೋನಿಯ ಮೂರನೇ ಮುಖ್ಯ ರಸ್ತೆಯಲ್ಲಿರುವ ಬಿಎಂಶ್ರೀ ಪ್ರತಿಷ್ಠಾನದಲ್ಲಿ ಬೆಳಿಗ್ಗೆ 10-30ಕ್ಕೆ ಕೃತಿ ಬಿಡುಗಡೆ ಸಮಾರಂಭ ನಡೆಯುತ್ತದೆ.

ಜ್ಞಾನ ಪೀಠ ಪುರಸ್ಕೃತ ಸಾಹಿತಿ, ಚಿಂತಕ ಡಾ.ಯು.ಆರ್. ಅನಂತಮೂರ್ತಿ ಪುಸ್ತಕ ಬಿಡುಗಡೆ ಮಾಡುತ್ತಾರೆ. ಹಿರಿಯ ವಿದ್ವಾಂಸರಾದ ರಂಗನಾಥ ಶರ್ಮಾ ತಮ್ಮ ಇಳಿ ವಯಸ್ಸಿನಲ್ಲೂ ಉತ್ಸಾಹದಿಂದ ಶುಭಾಶಯದ ಮಾತುಗಳನ್ನಾಡುತ್ತೇನೆ ಎಂದು ಒಪ್ಪಿದ್ದಾರೆ. ವಿಮರ್ಶಕ ಎಸ್. ಆರ್. ವಿಜಯಶಂಕರ ಸಮಾರಂಭದ ಅಧ್ಯಕ್ಷತೆ ವಹಿಸುತ್ತಾರೆ. ವಿದ್ವಾಂಸ ಡಾ. ಶ್ರೀರಾಮಭಟ್ ಪುಸ್ತಕ ಪರಿಚಯ ಮಾಡುತ್ತಾರೆ. ತೊಂಬತ್ತರ ಇಳಿವಯಸ್ಸಿನಲ್ಲೂ ಪ್ರಕಾಶನ ರಂಗದಲ್ಲಿ ಸಕ್ರಿಯರಾಗಿರುವ ಉದಯ ಪ್ರಕಾಶನದ ಮ.ಸು.ಶ್ರೀನಿವಾಸರಾಯರು ಪುಸ್ತಕ ಪ್ರಕಟಿಸಿ ತಲುಪಿಸುತ್ತಿರುವ ಉತ್ಸಾಹದಲ್ಲೇ ಕಾರ್ಯಕ್ರಮದಲ್ಲೂ ಭಾಗವಹಿಸುತ್ತಿದ್ದಾರೆ.

ಇವರಿಗೆಲ್ಲಾ ನಾವು ಜೊತೆಯಾಗೋಣ ಎಂದು ನಿಮಗೀ ಆಹ್ವಾನ. ದಯವಿಟ್ಟು ಬನ್ನಿ. ಈ ಕಾರ್ಯಕ್ರಮವನ್ನು ಸಹ್ಯಾದ್ರಿ ಗೆಳೆಯರು ಸಂಘಟಿಸುತ್ತಿದ್ದಾರೆ. ನೀವು ಬಂದು ಸಹ್ಯಾದ್ರಿ ಗೆಳೆಯರಲ್ಲಿ ಒಬ್ಬರಾಗಿ.

ಇಸ್ಮಾಯಿಲ್

ದೂರವಾಣಿ ಸಂಖ್ಯೆ 95901 50008

June 11, 2010 Posted by | Book World, culture, News, Spardha, Uncategorized | , , , | Leave a comment

ನೀರೆಚ್ಚರ ಬಿಡುಗಡೆಯ ಹೊತ್ತು…!

‘ನೀರೆಚ್ಚರ’ ಬಿಡುಗಡೆಯ ಹೊತ್ತು…!

ತ್ರಕರ್ತ ಗೆಳೆಯ ರಾಧಾಕೃಷ್ಣ ಭಡ್ತಿ ಅವರ ನೀರೆಚ್ಚರದ ಬರಹಗಳ  5 ಪುಸ್ತಕಗಳ ಬಿಡುಗಡೆ ಸಮಾರಂಭ ಬೆಂಗಳೂರು ಚಾಮರಾದ ಪೇಟೆಯ  ಕುವೆಂಪು ಕಲಾಕ್ಷೇತ್ರದಲ್ಲಿ (ಗಾಯನ ಸಮಾಜದ ಎದುರು- ಕಿಮ್ಸ್ ಹಿಂಭಾಗ) ಏಪ್ರಿಲ್ 11ರ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.


ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ವಿಜಯ ಕರ್ನಾಟಕ ಸಂಪಾದಕ ವಿಶ್ವೇಶ್ವರ ಭಟ್, ಕಿರುತೆರೆ ನಿರ್ದೇಶಕ ಟಿ.ಎನ್. ಶಾಂತಾರಾಮ್, ಜಲ ಪತ್ರಕರ್ತ ಶ್ರೀಪಡ್ರೆ, ವಿಜ್ಞಾನಿ – ವಿಜ್ಞಾನ ಬರಹಗಾರ ಹಾಲ್ದೊಡ್ಡೇರಿ ಸುಧೀಂದ್ರ ಪಾಲ್ಗೊಳ್ಳಲಿದ್ದಾರೆ.


Pls Click the image for details


April 4, 2010 Posted by | Book World, Education, environment /endangered species, Health, Journalism, News, Science, Spardha, Uncategorized, Water Conservation | , , | Leave a comment

ಕೃಷಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ…

ಕೃಷಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ…

‘ಕೃಷಿ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲವಾಗುತ್ತಿದ್ದು, ಕೃಷಿ ಜೀವನ ಪದ್ಧತಿಯೇ ನಶಿಸಿ ಹೋಗುವ ಲಕ್ಷಣಗಳು ಕಾಣುತ್ತಿವೆ’ – ಇದು ಖ್ಯಾತ ರಂಗಕರ್ಮಿ ಕೆ.ವಿ. ಅಕ್ಷರ ಅವರ ಆತಂಕ.

ಅಕ್ಷರ ಅವರು ಈ ಆತಂಕ ವ್ಯಕ್ತ ಪಡಿಸಿದ್ದು 2010 ಜನವರಿ 31ರ ಭಾನುವಾರ ಬೆಂಗಳೂರಿನಲ್ಲಿ ನಡೆದ ‘ಭೂಮಿ ಬುಕ್ಸ್’ ಪ್ರಕಾಶನ ಸಂಸ್ಥೆಯ ಉದ್ಘಾಟನೆ ಹಾಗೂ ಹಿರಿಯ ಪತ್ರಕರ್ತ ನಾಗೇಶ ಹೆಗಡೆ ಅವರ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ.

‘ಕೃಷಿ ಜೀವನ ವಿಧಾನ ಕ್ರಮೇಣವಾಗಿ ನಶಿಸುತ್ತಿದೆ. ಮುಂದಿನ ಹತ್ತು ವರ್ಷಗಳಲ್ಲಿ ಕೃಷಿ ಇದೇ ಸ್ಥಿತಿಯಲ್ಲಿರುತ್ತದೆ ಎಂದು ನಿರೀಕ್ಷಿಸುವಂತಿಲ್ಲ. ಸರ್ಕಾರದ ಹಲವು ಯೋಜನೆಗಳು ಕೂಡ ಕೃಷಿ ಜೀವನ ಕ್ರಮದ ನಾಶಕ್ಕೆ ಪೂರಕವಾಗುವಂತಿವೆ’ ಎಂಬುದು ಅವರ ಕಳಕಳಿ.

‘ಜೀವನೋಪಾಯಕ್ಕೆ ಕೃಷಿಯನ್ನೇ ಅವಲಂಬಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಕೃಷಿ ಕ್ಷೇತ್ರದಲ್ಲಿನ ಬದಲಾವಣೆ ಹಾಗೂ ಸಮಸ್ಯೆಗಳು ವರದಿಯಾಗುತ್ತಿಲ್ಲ. ಕೇವಲ ಬೆಳೆ ನಾಶ, ಇಳುವರಿ ಕಡಿಮೆ, ಬೆಲೆ ಕುಸಿತ ವಿಷಯಗಳು ಮಾತ್ರ ಸುದ್ದಿಯಾಗುತ್ತವೆ. ಉಳಿದ ಗಂಭೀರ ವಿಷಯಗಳು ಚರ್ಚೆಗೆ ಬಾರದಿರುವುದು ದುರದೃಷ್ಟಕರ’ ಅಕ್ಷರ ಅವರ ಈ ಮಾತು ಮಾಧ್ಯಮ ಮಂದಿಯ ಕಾರ್ಯಶೈಲಿಗೆ ಹಿಡಿದ ಕೈಗನ್ನಡಿ.

ಇದು ಅಭಿವೃದ್ದಿಯಾ?: ‘ಅಭಿವೃದ್ಧಿ ಎಂಬುದು ಇಂದು ಬೀದಿಗೆ ಬಂದಿದೆ. ಹಿಂದೆಲ್ಲ ವಿದ್ಯುತ್ ಸ್ಥಾವರ, ಜಲಾಶಯ ನಿರ್ಮಾಣ ಕಾರ್ಯಗಳನ್ನು ಅಭಿವೃದ್ಧಿ ಎಂದು ಹೇಳಲಾಗುತ್ತಿತ್ತು. ಆದರೆ ಇಂದು 10 ಕಿ.ಮೀ. ದೂರ ಕ್ರಮಿಸುವಷ್ಟರಲ್ಲಿ ರಸ್ತೆ ದುರಸ್ತಿ ಇಲ್ಲವೇ ಅಭಿವೃದ್ಧಿ ಕಾರ್ಯ ನಡೆದದ್ದು ಕಾಣುತ್ತದೆ. ‘ಅಭಿವೃದ್ದಿ ಕಾರ್ಯ ನಡೆಯುತ್ತಿದೆ’ ಎಂಬ ಫಲಕಗಳು ಕಣ್ಣಿಗೆ ರಾಚುತ್ತವೆ. ಅಂದರೆ ಇವೇ ದೊಡ್ಡ ಅಭಿವೃದ್ಧಿ ಕಾರ್ಯ ಎಂಬಂತೆ ಸರ್ಕಾರ ಬಿಂಬಿಸುತ್ತಿದೆ. ಜನರೂ ಕ್ರಮೇಣ ಅದನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಈ ‘ಅಭಿವೃದ್ದಿ ಕಾಮಗಾರಿಗಳು ಎಂದಿಗೂ ಪೂರ್ಣಗೊಳ್ಳುವುದಿಲ್ಲ’ ಎಂದರು ಅಕ್ಷರ.

‘ಪ್ರಕೃತಿಗೆ ಸಂಬಂಧಿಸಿದ ಸಂಸ್ಕೃತಿ ಇತಿಹಾಸದ ತಲ್ಲಣಗಳನ್ನು ನಾಗೇಶ ಹೆಗಡೆ ಪರಿಣಾಮಕಾರಿಯಾಗಿ ನಿರೂಪಿಸಿದ್ದಾರೆ. ಇವು ಕೇವಲ ಸಾಹಿತ್ಯ ಕೃತಿಗಳಾಗದೇ ಮುಂದಿನ ಹೋರಾಟಗಳಿಗೆ ಮುನ್ನುಡಿಯಾಗಬೇಕು’ ಎಂಬ ಆಶಯವನ್ನು ಅವರು ವ್ಯಕ್ತ ಪಡಿಸಿದರು.

‘ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಬರೆಯುವ ವಿರಳ ಪತ್ರಕರ್ತರಲ್ಲಿ ನಾಗೇಶ ಹೆಗಡೆ ಒಬ್ಬರು. ಪರಿಸರ ನಾಶಕ್ಕೆ ಕಾರಣ ಹಾಗೂ ಪರಿಹಾರವನ್ನಷ್ಟೇ ಹೇಳದೇ, ಅದರ ನೇರ ಪರಿಣಾಮ ಉಂಟು ಮಾಡುವ ಅವಾಂತರಗಳನ್ನು ಪರಿಣಾಮಕಾರಿಯಾಗಿ ನಿರೂಪಿಸುತ್ತಾರೆ. ಹಾಗೆಯೇ ಮನಸ್ಸು, ಮೌಲ್ಯ ಹಾಗೂ ವಿಚಾರ ಮಾಲಿನ್ಯ ಕುರಿತು ಬೆಳಕು ಚೆಲ್ಲುತ್ತಾರೆ’ ಎಂದು ನಾಗೇಶ ಹೆಗಡೆ ಬಗ್ಗೆ ಹೇಳಿದರು ಸಾಹಿತಿ ನೇಮಿಚಂದ್ರ.

‘ಪರಿಸರದ ಮೇಲೆ ಮಾನವನ ಒತ್ತಡ ತೀವ್ರವಾಗಿದೆ. ಪರಿಸರ ಸಂರಕ್ಷಣೆಗೆ ರೂಪಿಸಿದ ಕಾನೂನುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಹಾಗಾಗಿ ಪರಿಸರ ನಾಶ ಹಾಗೂ ಮಾಲಿನ್ಯ ಹೆಚ್ಚಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು ವಿಧಾನಪರಿಷತ್ ಮಾಜಿ ಸಭಾಪತಿ ಪ್ರೊ.ಬಿ.ಕೆ. ಚಂದ್ರಶೇಖರ್.

‘ಯಾವುದೇ ಅಭಿವೃದ್ಧಿ ಕಾರ್ಯ ಆರಂಭಿಸುವ ಮುನ್ನ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಬೇಕು. ಆ ಪ್ರದೇಶದ ಪರಿಸರದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಗಮನಿಸಬೇಕು ಎಂಬ ನಿಯಮವಿದೆ. ಆದರೆ ಬಹುಪಾಲು ಕಾಮಗಾರಿಗಳನ್ನು ಈ ಅಂಶಗಳನ್ನು ಪರಿಗಣಿಸುವುದೇ ಇಲ್ಲ’ ಎಂದು ಚಂದ್ರಶೇಖರ್ ಹಾಲಿ ಆಡಳಿತ ವೈಖರಿಗೆ ಕನ್ನಡಿ ಹಿಡಿದರು.

‘ಮನುಷ್ಯ ತಾವು ಅವಲಂಬಿಸಿರುವ ಪರಿಸರವನ್ನೇ ನಾಶ ಮಾಡುವ ಮೂಲಕ ವಿನಾಶದೆಡೆಗೆ ಸಾಗುತ್ತಿದ್ದಾನೆ. ಪರಿಸರ ಮಾಲಿನ್ಯದಿಂದ ಹವಾಮಾನ ಬದಲಾವಣೆ ಹಾಗೂ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಹಾಗಾಗಿ ಪರಿಸರ ರಕ್ಷಣೆಗೆ ನಡೆಯುವ ಹೋರಾಟಗಳಿಗೆ ನನ್ನ ಬೆಂಬಲವಿದೆ’ ಎಂದು ಚಂದ್ರಶೇಖರ್ ಘೋಷಿಸಿದರು.

‘ಮಾಗಡಿ ಸಮೀಪದ ತಿಪ್ಪಗೊಂಡನಹಳ್ಳಿಯಲ್ಲಿ ಸರ್ಕಾರವು ಸ್ಫೂರ್ತಿವನ ಟ್ರಸ್ಟಿಗೆ 400 ಎಕರೆ ಭೂಮಿ ನೀಡಿದೆ. ಇನ್ನು ಮುಂದೆ ಭೂಮಿ ಬುಕ್ಸ್ ಪ್ರಕಾಶನದಿಂದ ಪ್ರಕಟವಾಗುವ ಪ್ರತಿ ಕೃತಿಗಳ ಸ್ಮರಣಾರ್ಥ ಸ್ಫೂರ್ತಿ ವನದಲ್ಲಿ ಒಂದು ಸಸಿ ನೆಡಲಾಗುವುದು. ಸಾರ್ವಜನಿಕರು ಸಹ ತಮ್ಮ ಜೀವನದ ಸ್ಮರಣೀಯ ಘಟನೆಗಳ ನೆನಪಿಗಾಗಿ ಸಸಿ ನೆಡುವ ಮೂಲಕ ವನ ಸೃಷ್ಟಿ ಕಾರ್ಯವನ್ನು ಪ್ರೋತ್ಸಾಹಿಸಬಹುದು’ ಎಂದು ಮನವಿ ಮಾಡಿದರು ನಾಗೇಶ ಹೆಗಡೆ.

February 1, 2010 Posted by | Agriculture, culture, Education, environment /endangered species, Journalism, News, Science, Spardha | , , , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ