SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಅಂಕೆ ಮೀರಿದ ಮಾಲಿನ್ಯ: ದೆಹಲಿಯಲ್ಲಿ ಆರೋಗ್ಯ ತುರ್ತುಸ್ಥಿತಿ ಘೋಷಣೆ

01 delhi air pollutionನವೆಂಬರ್ ೫ರವರೆಗೆ ಎಲ್ಲ ಶಾಲೆಗಳಿಗೂ ರಜೆ, ನಿರ್ಮಾಣ ಚಟುವಟಿಕೆ ನಿಷೇಧ

ನವದೆಹಲಿ: ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯವು ಅಂಕೆ ಮೀರಿ ’ವಿಷಮ ಸ್ಥಿತಿ’ಗೆ (ಸಿವಿಯರ್ ಪ್ಲಸ್) ತಲುಪಿದ್ದನ್ನು ಅನುಸರಿಸಿ ಸುಪ್ರೀಂಕೋರ್ಟ್ ನೇಮಿಸಿದ ಪರಿಸರ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಪ್ರಾಧಿಕಾರವು (ಇಪಿಸಿಎ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಣೆ ಮಾಡಿದ್ದು 2019 ನವೆಂಬರ್ ೫ರವರೆಗೆ ಎಲ್ಲ ನಿರ್ಮಾಣ ಚಟುವಟಿಕೆಗಳನ್ನೂ 2019 ನವೆಂಬರ್ 01ರ ಶುಕ್ರವಾರ ನಿಷೇದಿಸಿತು. ಇದೇ ವೇಳೆಗೆ ದೆಹಲಿ ಸರ್ಕಾರವು ನವೆಂಬರ್ ೫ರವರೆಗೆ ಶಾಲೆಗಳಿಗೆ ರಜೆ ಘೋಷಿಸಿತು.

ವಾಯುಗುಣಮಟ್ಟ ವಿಪರೀತ ಎನಿಸುವಷ್ಟು ಕೆಳಕ್ಕೆ ಕುಸಿದಿದ್ದು, ದೆಹಲಿಗರು ಉಸಿರು ಎಳೆದುಕೊಳ್ಳಲು ಚಡಪಡಿಸಬೇಕಾದ ಸ್ಥಿತಿ ಉಂಟಾಗಿದೆ ಎಂದು ಹೇಳಿರುವ ಪ್ರಾಧಿಕಾರ ಚಳಗಾಲದ ಅವಧಿಯಲ್ಲಿ ಪಟಾಕಿ ಸಿಡಿಸುವುದನ್ನೂ ನಿಷೇಧಿಸಿತು.

ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ಮುಖ್ಯಕಾರ್‍ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಪ್ರಾಧಿಕಾರದ ಅಧ್ಯಕ್ಷ ಭುರೇಲಾಲ್ ಅವರು ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ಗುರುವಾರ ರಾತ್ರಿ ಇನ್ನಷ್ಟು ಕುಸಿದಿದ್ದು, ಪ್ರಸ್ತುತ ವಿಷಮ ಸ್ಥಿತಿಯ ಹಂತದಲ್ಲಿದೆ ಎಂದು ತಿಳಿಸಿದರು.

‘ವಾಯುಮಾಲಿನ್ಯವು ಎಲ್ಲರ ಮೇಲೆ, ನಿರ್ದಿಷ್ಟವಾಗಿ ನಮ್ಮ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ನಾವು ಇದನ್ನು ಆರೋಗ್ಯ ತುರ್ತುಸ್ಥಿತಿ ಎಂಬುದಾಗಿ ಪರಿಗಣಿಸಬೇಕು’ ಎಂದು ಭುರೇಲಾಲ್ ಪತ್ರದಲ್ಲಿ ಬರೆದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ರಾಜಧಾನಿಯ ಎಲ್ಲ ಶಾಲೆಗಳಿಗೂ ನವೆಂಬರ್ 5ರ ಮಂಗಳವಾರದವರೆಗೆ ರಜೆ ಘೋಷಣೆ ಮಾಡಿದರು.

ದೆಹಲಿಯನ್ನು ಗ್ಯಾಸ್ ಚೇಂಬರ್ ಆಗಿ ಪರಿವರ್ತಿಸಿದ್ದಕ್ಕಾಗಿ ರಾಜ್ಯಗಳನ್ನು ದೂಷಿಸಿದ ಮುಖ್ಯಮಂತ್ರಿ ಕೇಜ್ರಿವಾಲ್, ಈದಿನ ಶಾಲಾ ಮಕ್ಕಳಿಗೆ ೫೦ ಲಕ್ಷ ಮುಖವಾಡಗಳನ್ನು (ಮಾಸ್ಕ್) ವಿತರಿಸಿದರು ಮತ್ತು ಅವುಗಳನ್ನು ಬಳಸುವಂತೆ ಇತರ ನಿವಾಸಿಗಳಿಗೂ ಮನವಿ ಮಾಡಿದರು.

‘ನೆರೆಯ ರಾಜ್ಯಗಳಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದಾಗಿ ದೆಹಲಿ ಗ್ಯಾಸ್ ಚೇಂಬರ್ ಆಗಿ ಪರಿವರ್ತನೆಯಾಗಿದೆ. ಈ ಮಾಲಿನ್ಯಭರಿತ ಗಾಳಿಯಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾದುದು ಈಗ ಅತ್ಯಂತ ಮಹತ್ವದ ಕೆಲಸವಾಗಿದೆ. ಖಾಸಗಿ ಮತ್ತು ಸರ್ಕಾರಿ ಶಾಲೆಗಳಲ್ಲಿ ೫೦ ಲಕ್ಷ ಮುಖವಾಡಗಳನ್ನು ನಾವು ಈದಿನ ವಿತರಿಸುತ್ತಿದ್ದೇವೆ. ಅಗತ್ಯ ಬಿದ್ದಲ್ಲಿ ಇವುಗಳನ್ನು ಬಳಸುವಂತೆ ನಾನು ಎಲ್ಲ ದೆಹಲಿ ನಿವಾಸಿಗಳಿಗೂ ಮನವಿ ಮಾಡುತ್ತೇನೆ’ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು.

ಪಂಜಾಬ್ ಮತ್ತು ಹರಿಯಾಣದಲ್ಲಿ ಕೊಯ್ದ ಪೈರಿನ ಕೂಳೆ ಸುಡುವುದರಿಂದ ಉಂಟಾಗುವ ಹೊಗೆ ದೆಹಲಿಯಲ್ಲಿ ಮಾಲಿನ್ಯ ಉಂಟು ಮಾಡುತ್ತಿದೆ. ದಯವಿಟ್ಟು ಕ್ಯಾಪ್ಟನ್ ಅಂಕಲ್ (ಪಂಜಾಬ್ ಮುಖ್ಯಮಂತ್ರಿ) ಮತ್ತು ಖಟ್ಟರ್ ಅಂಕಲ್ (ಹರಿಯಾಣ ಮುಖ್ಯಮಂತ್ರಿ) ಅವರಿಗೆ ಪತ್ರಗಳನ್ನು ಬರೆದು ’ನಮ್ಮ ಆರೋಗ್ಯದ ಬಗ್ಗೆ ಚಿಂತಿಸಿ’ ಎಂದು ಒತ್ತಾಯಿಸಿ ಎಂದು ಅರವಿಂದ ಕೇಜ್ರಿವಾಲ್ ಮಕ್ಕಳಿಗೆ ಸಲಹೆ ಮಾಡಿದರು.

ರಾಜಧಾನಿಯ ಮಾಲಿನ್ಯ ಮಟ್ಟ ಏರುತ್ತಿರುವುದರಿಂದಾಗಿ ದೆಹಲಿಯನ್ನು ಮುಸುಕಿರುವ ಮಬ್ಬು ರಾತ್ರಿ ವೇಳೆಯಲ್ಲಿ ೫೦ ಪಾಯಿಂಟ್‌ನಷ್ಟು ಹೆಚ್ಚುತ್ತಿದೆ. ಪರಿಣಾಮವಾಗಿ ಶುಕ್ರವಾರ ಬೆಳಗ್ಗೆ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ೪೫೯ಕ್ಕೆ ಏರಿತ್ತು.

ಗುರುವಾರ ರಾತ್ರಿ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ವಿಷಮ ಅಂದರೆ ’ಸಿವಿಯರ್ ಪ್ಲಸ್’ ಅಥವಾ ’ತುರ್ತು’ ಸ್ಥಿತಿಗೆ ಮುಟ್ಟಿತ್ತು. ಈ ವರ್ಷ ಜನವರಿಯಿಂದ ವಾಯು ಗುಣಮಟ್ಟ ಸೂಚ್ಯಂಕ ಈ ಮಟ್ಟಕ್ಕೆ ಮುಟ್ಟಿದ್ದು ಇದೇ ಮೊದಲು.

ವಾಯು ಗುಣಮಟ್ಟವು ವಿಷಮ ಸ್ಥಿತಿಯಲ್ಲಿಯೇ ೪೮ ಗಂಟೆಗಳಿಗಿಂತಲೂ ಹೆಚ್ಚು ಕಾಲ ಮುಂದುವರೆದರೆ, ಸಮ-ಬೆಸ ಯೋಜನೆಯ ಜಾರಿ, ಟ್ರಕ್ ಪ್ರವೇಶ ನಿಷೇಧ, ನಿರ್ಮಾಣ ಚಟುವಟಿಕೆಗಳ ನಿಷೇಧ ಹಾಗೂ ಶಾಲೆಗಳನ್ನು ಮುಚ್ಚುವುದೇ ಇತ್ಯಾದಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿ ನುಡಿದರು.

ದೆಹಲಿಯಲ್ಲಿ ಸೋಮವಾರದಿಂದ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಜಾರಿಗೆ ಉದ್ದೇಶಿಸಲಾಗಿದ್ದು, ಅದಕ್ಕೂ ಮುನ್ನವೇ ಮುಖ್ಯಮಂತ್ರಿ ಎಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ವಾಯುಮಾಲಿನ್ಯವನ್ನು ಇಳಿಸಲು ನೆರವಾಗುವ ಸಮ-ಬೆಸ ವಾಹನ ಸಂಚಾರವು ನವೆಂಬರ್ ೧೫ರವರೆಗೂ ಮುಂದುವರೆಯಲಿದೆ ಎಂದು ಸರ್ಕಾರ ಹೇಳಿದೆ.

ದೆಹಲಿಯ ಎಲ್ಲ ೩೭ ವಾಯುಗುಣಮಟ್ಟ ನಿಗಾ ಕೇಂದ್ರಗಳೂ ಶುಕ್ರವಾರ ಬೆಳಗ್ಗೆ ವಾಯುಗುಣಮಟ್ಟ ವಿಷಮ ಸ್ಥಿತಿಗೆ ತಲುಪಿದ್ದನ್ನು ದಾಖಲಿಸಿವೆ.

ಬವಾನ ಪ್ರದೇಶವು ಅತ್ಯಂತ ಹೆಚ್ಚು ಮಾಲಿನ್ಯಕ್ಕೊಳಗಾದ ಪ್ರದೇಶವಾಗಿದ್ದು ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕವು ೪೯೭ಕ್ಕೆ ಮುಟ್ಟಿದ್ದರೆ, ದೆಹಲಿ ತಾಂತ್ರಿಕ ವಿಶ್ವವಿದ್ಯಾಯ ಪ್ರದೇಶದಲ್ಲಿ ೪೮೭ಕ್ಕೆ, ಆನಂದ ವಿಹಾರದಲ್ಲಿ ೪೮೪ಕ್ಕೆ ಮತ್ತು ವಿವೇಕ ವಿಹಾರದಲಿ ೪೮೨ಕ್ಕೆ ತಲುಪಿತ್ತು.

ನೆರೆಯ ಗಾಜಿಯಾಬಾದ್ ದೇಶದಲ್ಲೇ ಅತ್ಯಂತ ಹೆಚ್ಚು ಮಾಲಿನ್ಯಕ್ಕೆ ಒಳಗಾಗಿರುವ ನಗರವಾಗಿದ್ದು, ಇಲ್ಲಿ ಸೂಕ್ಷ್ಮ ಕಣಗಳ ಗಾತ್ರ ಪಿಎಂ೨.೫ರಷ್ಟಿದ್ದು ಇದು ೨.೫ ಮೈಕ್ರೋನ್ ಗಿಂತಲೂ ಕಡಿಮೆ. ಇದು ನೇರವಾಗಿ ಶ್ವಾಸಕೋಶವನ್ನು ಪ್ರವೇಶಿಸುತ್ತದೆ. ನೋಯ್ಡಾ , ಗ್ರೇಟರ್ ನೋಯ್ಡಾ ಮತ್ತು ಫರೀದಾಬಾದ್ ಕೂಡಾ ಅತ್ಯಂತ ಮಾಲಿನ್ಯಭರಿತ ಪ್ರದೇಶಗಳಾಗಿವೆ.

ದೆಹಲಿ ವಾಯುಮಾಲಿನ್ಯ: ಗಾಳಿಯಲ್ಲಿ ಪತ್ತೆಯಾಗಿದೆಪಿಎಂ 2.5’ ಕಣ

 ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಬಗ್ಗೆ ದೇಶದಾದ್ಯಂತ ಚರ್ಚೆಯಾಗುತ್ತಿದೆ. ದೆಹಲಿಯ ಗಾಳಿಯಲ್ಲಿ ‘ಪಿಎಂ 2.5’ ಕಣಗಳು ಪತ್ತೆಯಾಗಿವೆ ಎಂದು ವರದಿಗಳು ಹೇಳಿವೆ.

ಏನಿದು ‘ಪಿಎಂ 2.5’?

‘ಪಿಎಂ’ ಎಂಬುದು ‘ಪರ್ಟಿಕ್ಯುಲೇಟ್ ಮ್ಯಾಟರ್‌’ ಎಂಬುದರ ಸಂಕ್ಷಿಪ್ತ ರೂಪ. ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳನ್ನು ಗುರುತಿಸಲು ‘ಪಿಎಂ’ ಎಂಬ ಹೆಸರನ್ನು ಬಳಸಲಾಗುತ್ತದೆ. ಗಾತ್ರಕ್ಕೆ ಅನುಗುಣವಾಗಿ ಇವನ್ನು ‘ಪಿಎಂ 2.5’ ಮತ್ತು ಪಿಎಂ 10’ ಎಂದು ವರ್ಗೀಕರಿಸಲಾಗಿದೆ. 2.5 ಮೈಕ್ರಾನ್‌ಗಿಂತ ಕಡಿಮೆ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಕರೆಯಲಾಗುತ್ತದೆ. ಇವು ಹೆಚ್ಚು ಅಪಾಯಕಾರಿಯಾದ ಕಣಗಳಾಗಿವೆ.

ಇಂಗಾಲದ ಡೈ ಆಕ್ಸೈಡ್‌, ಇಂಗಾಲದ ಮಾನಾಕ್ಸೈಡ್‌, ಸಾರಜನಕದ ಆಕ್ಸೈಡ್‌ನ ಕಣಗಳು ಈ ರೂಪದಲ್ಲಿ ಇರುತ್ತವೆ. ದೆಹಲಿಯ ಗಾಳಿಯಲ್ಲಿ ಕಂಡುಬಂದಿರುವುದು ಇದೇ ಕಣಗಳು.

ತೊಂದರೆಯೇನು?

ಇವು ತೀರಾ ಚಿಕ್ಕದಾಗಿರುವ ಕಾರಣ ಬರಿಗಣ್ಣಿಗೆ ಗೋಚರಿಸುವುದಿಲ್ಲ. 40 ‘ಪಿಎಂ 2.5’ ಕಣಗಳನ್ನು ಒಟ್ಟುಸೇರಿಸಿದರೆ ಮಾತ್ರ ಅವು ಬರಿಗಣ್ಣಿಗೆ ಗೋಚರಿಸುತ್ತವೆ. ಈ ಕಣಗಳ ಗಾತ್ರ ತೀರಾ ಸಣ್ಣದಾಗಿರುವ ಕಾರಣ ಮೂಗು ಮತ್ತು ಬಾಯಿಯ ಮೂಲಕ ಶ್ವಾಸಕೋಶವನ್ನು ಸುಲಭವಾಗಿ ಪ್ರವೇಶಿಸುತ್ತವೆ

ಪಿಎಂ 2.5’ ಮೂಲಗಳು

ಕೃಷಿತ್ಯಾಜ್ಯದ ದಹನ, ಕಾರ್ಖಾನೆಗಳು ಮತ್ತು ಉಷ್ಣವಿದ್ಯುತ್ ಸ್ಥಾವರ, ವಾಹನಗಳ ಹೊಗೆ, ಘನತ್ಯಾಜ್ಯ ದಹನ

ಪಿಎಂ 2.5’ ಕಣಗಳಿಂದ ಎದುರಾಗುವ ಸಮಸ್ಯೆಗಳು

ಕಣ್ಣಿನ ನವೆ, ಚರ್ಮದ ಅಲರ್ಜಿ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಶ್ವಾಸಕೋಶದ ಕ್ಯಾನ್ಸರ್‌, ಹೃದಯ ಸಂಬಂಧಿ ಕಾಯಿಲೆ, ಹೃದಯಾಘಾತ, ಪಾರ್ಶ್ವವಾಯು.

ಯಾರಿಗೆಲ್ಲಾ ಅಪಾಯ?

ಶಿಶುಗಳು, ಮಕ್ಕಳು, ಗರ್ಭಿಣಿಯರು, ವೃದ್ಧರು

November 1, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, environment /endangered species, Flash News, General Knowledge, Health, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha | , , , , , , , | Leave a comment

೨೫,೦೦೦ ರೂ ಉಳಿಸಲು ಮೇಲ್ಮನವಿ, ಲಕ್ಷಾಂತರ ರೂ ವೆಚ್ಚ!

01 supreme courtಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್  ತಪರಾಕಿ

ನವದೆಹಲಿ: ೨೫,೦೦೦ ರೂಪಾಯಿಗಳ ಜುಜುಬಿ ದಂಡದ ಹಣವನ್ನು ಉಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಖಟ್ಲೆಗಾಗಿ ವೆಚ್ಚ ಮಾಡಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತು.

ಕೇರಳ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ’ಇಂತಹ ಕ್ಷುಲ್ಲಕ ಮತ್ತು ಅನಗತ್ಯ ಪ್ರಕರಣ’ ದಾಖಲಿಸಿದ್ದಕ್ಕಾಗಿ ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು. ಇಂತಹ ದುಸ್ಸಾಹಸಗಳನ್ನು ಮಾಡುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡಿತು.

‘ಭವಿಷ್ಯದಲ್ಲಿ ಕೇರಳ ಸರ್ಕಾರದಿಂದ ಇಂತಹ ಅರ್ಜಿ ಸಲ್ಲಿಕೆಯಾದರೆ ನಾವು ಭಾರೀ ದಂಡ ವಿಧಿಸಬೇಕಾಗುತ್ತದೆ ಎಂಬದಾಗಿ ನಾವು ಸ್ಪಷ್ಟ ಪಡಿಸಬಯಸುತ್ತೇವೆ’ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತನ್ನ ಆದೇಶದಲ್ಲಿ ಎಚ್ಚರಿಸಿತು.

ಹೈಕೋರ್ಟ್ ತೀರ್ಪೊಂದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆಯಲ್ಲಿ ಸುಪ್ರೀಂಕೋರ್ಟ್ ಕೇರಳ ಸರ್ಕಾರವನ್ನು ಈ ರೀತಿ ಕಟುವಾಗಿ ತರಾಟೆಗೆ ತೆಗೆದುಕೊಂಡಿತು.

ಎರಡು ದಿನಾಂಕಗಳಲ್ಲಿ ಆರೋಪಿಯನ್ನು ಹಾಜರು ಪಡಿಸಲು ರಾಜ್ಯ ಸರ್ಕಾರ ವಿಫಲವಾದ ಬಳಿಕ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ದುಬೈಯಿಂದ ಸಾಕ್ಷ ನೀಡುವ ಸಲುವಾಗಿ ಬಂದಿದ್ದ ಸಾಕ್ಷಿದಾರನಿಗೆ ೨೫,೦೦೦ ರೂಪಾಯಿಗಳನ್ನು ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಜ್ಞಾಪಿಸಿದ್ದರು. ಆರೋಪಿ ಹಾಜರಿಲ್ಲದ ಕಾರಣ ಸಾಕ್ಷ್ಯ ನೀಡಿಕೆಯನ್ನು ಮುಂದೂಡಬೇಕಾಗಿ ಬಂದಿತ್ತು.

ವಿಚಾರಣಾ ನ್ಯಾಯಾಧೀಶರ ಈ ಆದೇಶದ ವಿರುದ್ಧ ಕೇರಳ ಸರ್ಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ವಿಚಾರಣಾ ನ್ಯಾಯಾಧೀಶರ ಆದೇಶವು ಸರಿಯಾಗಿಯೇ ಇದೆ ಎಂದು ಹೇಳಿ ಹೈಕೋರ್ಟ್ ಅದನ್ನು ಎತ್ತಿ ಹಿಡಿಯಿತು.

ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ಮತ್ತು ತನ್ಮೂಲಕ, ೨೫,೦೦೦ ರೂಪಾಯಿಗಳನ್ನು ಉಳಿಸಲು ಖಟ್ಲೆಗಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮಾರ್ಗವನ್ನು ಆರಿಸಿಕೊಂಡಿತು.

ಈ ಅರ್ಜಿಯು ಸುಪ್ರೀಂಕೋರ್ಟಿನ ಮುಂದೆ ವಿಚಾರಣೆಗೆ ಬಂದಾಗ, ಇಂತಹ ಖಟ್ಲೆಗಳಿಗಾಗಿ ಸರ್ಕಾರಿ ಬೊಕ್ಕಸದಿಂದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವಂತೆ ಕೆಲವು ಅಧಿಕಾರಿಗಳು ಮತ್ತು ವಕೀಲರು ಮಾಡುವ ಸಲಹೆಯನ್ನು ನ್ಯಾಯಮೂರ್ತಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ರಾಜ್ಯ ಸರ್ಕಾರವು ಮೊದಲಿಗೆ ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟಿನ ಮುಂದೆ ಪ್ರಶ್ನಿಸಿತು. ಈಗ ನಮ್ಮ ಮುಂದೆ ಈ ಅರ್ಜಿ ಬಂದಿದೆ. ಇಂತಹ ಕ್ಷುಲ್ಲಕ ಅರ್ಜಿಗಾಗಿ ಲಕ್ಷಾಂತರ ರೂಪಾಯಿಗಳು ವೆಚ್ಚವಾಗಿರಬಹುದು. ಈ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಸುಪ್ರೀಂಕೋರ್ಟ್ ಪೀಠವು ಹೇಳಿತು.

ಭವಿಷ್ಯದಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್ ಇಂತಹ ಮೇಲ್ಮನವಿಗಳಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಹೇಳಿತು.

November 1, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Spardha, supreme court | , , , , | Leave a comment

ಚಿದುಗೆ ಮಾಲಿನ್ಯ ಮುಖವಾಡ, ಮಿನರಲ್ ವಾಟರ್: ಹೈಕೋರ್ಟ್ ಆದೇಶ

01 chidambaramಕ್ರೋನ್ಸ್ ಕಾಯಿಲೆಯಿಂದ ಕಿಬ್ಬೊಟ್ಟೆ ನೋವು: ಆಸ್ಪತ್ರೆಗೆ ದಾಖಲಿಸಬೇಕಿಲ್ಲ ಎಂದ ಏಮ್ಸ್

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಸೆರೆಮನೆ ಸೇರಿರುವ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅನಾರೋಗ್ಯ ನೆಲೆಯಲ್ಲಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು 2019 ನವೆಂಬರ್ 01ರ ಶುಕ್ರವಾರ ಇತ್ಯರ್ಥ ಪಡಿಸಿದ ದೆಹಲಿ ಹೈಕೋರ್ಟ್ ಮಾಜಿ ಸಚಿವರಿಗೆ ಸ್ವಚ್ಛ ಪರಿಸರ, ಮಾಲಿನ್ಯ ಮುಖವಾಡ  ಮತ್ತು ಪರಿಶುದ್ಧ ನೀರು (ಮಿನರಲ್ ವಾಟರ್) ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಕ್ರೋನ್ಸ್ ಕಾಯಿಲೆಯಿಂದ ಬಳಲುತ್ತಿರುವ ಚಿದಂಬರಂ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಏಮ್ಸ್ ವೈದ್ಯಕೀಯ ಮಂಡಳಿಯು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ಪೀಠವು ಈ ನಿರ್ದೇಶನ ನೀಡಿತು.

ಚಿದಂಬರಂ ಅವರ ಆರೋಗ್ಯದ ಬಗ್ಗೆ ಅಭಿಪ್ರಾಯ ನೀಡಲು ವೈದ್ಯಕೀಯ ಮಂಡಳಿಯೊಂದನ್ನು ರಚಿಸುವಂತೆ ಏಮ್ಸ್ ನಿರ್ದೇಶಕರಿಗೆ ಪೀಠವು 2019 ಅಕ್ಟೋಬರ್ 31ರ ಗುರುವಾರ ಆಜ್ಞಾಪಿಸಿತ್ತು.  ಕ್ರೋನ್ಸ್ ಕಾಯಿಲೆಯು ಜೀರ್ಣಾಂಗದಲ್ಲಿ ಉರಿಯೂತ ಉಂಟುಮಾಡುವ ಕಾಯಿಲೆಯಾಗಿದ್ದು ಕಿಬ್ಬೊಟ್ಟೆಯಲ್ಲಿ ನೋವು, ಅತಿಸಾರ ಅಥವಾ ಭೇದಿ ಮತ್ತು ತೂಕನಷ್ಟಕ್ಕೆ ಕಾರಣವಾಗುತ್ತದೆ.

ಹೈದರಾಬಾದ್ ಮೂಲದ ಜಠರತಜ್ಞ ನಾಗೇಶ್ವರ ರೆಡ್ಡಿ ಅವರನ್ನೂ ತಪಾಸಣೆ ನಡೆಸುವ ಏಮ್ಸ್  ವೈದ್ಯಕೀಯ ಮಂಡಳಿಗೆ ಸೇರ್ಪಡೆ ಮಾಡಿಕೊಳ್ಳುವಂತೆ ಹೈಕೋರ್ಟ್ ಹೇಳಿತ್ತು.

ಚಿದಂಬರಂ ಅವರು ವೈದ್ಯಕೀಯ ನೆಲೆಯಲ್ಲಿ ತಮಗೆ ಮಧ್ಯಂತರ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದರು. ತಮ್ಮ ದೇಹಸ್ಥಿತಿ ಹದಗೆಡುತ್ತಿರುವುದರಿಂದ ಸ್ವಚ್ಛ ಪರಿಸರದ ಅಗತ್ಯ ತಮಗಿದೆ. ಆದ್ದರಿಂದ ತಮ್ಮ ಕುಟುಂಬ ವೈದ್ಯರಾದ ನಾಗೇಶ್ವರ ರೆಡ್ಡಿ ಅವರಿಂದ ತಪಾಸಣೆ ಮಾಡಿಸಿಕೊಳ್ಳುವ ಸಲುವಾಗಿ ಮತ್ತು ಅವರ ಜೊತೆ ಸಮಾಲೋಚನೆಗಾಗಿ ತಮಗೆ ಆರು ದಿನಗಳ ಮಧ್ಯಂತರ ಜಾಮೀನು ನೀಡಬೇಕು ಎಂದು ಚಿದಂಬರಂ ಅರ್ಜಿ ಸಲ್ಲಿಸಿದ್ದರು. ರೆಡ್ಡಿಯವರು ಹೈದರಾಬಾದಿನ ಏಷ್ಯನ್ ಇನ್ ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೊಎಂಟೆರಾಲಜಿಯ ಖ್ಯಾತ ಜಠರತಜ್ಞರಾಗಿದ್ದಾರೆ.

೨೦೧೭ರಲ್ಲಿ ತಮಗೆ ಕಂಡು ಬಂದಿದ್ದ ಕ್ರೋನ್ಸ್ ಕಾಯಿಲೆಯ ಪರಿಣಾಮವಾಗಿ ಅಕ್ಟೋಬರ್ ೫ರಿಂದ ತಮಗೆ ತೀವ್ರ ಸ್ವರೂಪದ ಸತತ ನೋವು ಕಿಬ್ಬೊಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದಕ್ಕೆ ತುರ್ತಾಗಿ ಚಿಕಿತ್ಸೆ ಪಡೆಯುವ ಅಗತ್ಯವಿದೆ ಎಂದು ಚಿದಂಬರಂ ಪ್ರತಿಪಾದಿಸಿದ್ದರು.

ಚಿದಂಬರಂ ಅವರ ಆರೋಗ್ಯ ಸ್ಥಿತಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶದ ಮೇರೆಗೆ ರಚಿಸಲಾಗಿದ್ದ ಏಮ್ಸ್ ವೈದ್ಯಕೀಯ ಮಂಡಳಿಯು ನೀಡಿದ ವರದಿಯನ್ನು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಓದಿ ಹೇಳಿದರು ಮತ್ತು ಕಾಂಗ್ರೆಸ್ ನಾಯಕನಿಗೆ ಪರಿಶುದ್ಧ ಪರಿಸರದ ಅಗತ್ಯವಿಲ್ಲ ಎಂದು ಹೇಳಿದರು.

ಏಮ್ಸ್ ವೈದ್ಯಕೀಯ ಮಂಡಳಿ ಸಲ್ಲಿಸಿದ ವರದಿಯ ಬಳಿಕ, ನ್ಯಾಯಮೂರ್ತಿ ಸುರೇಶ್ ಕೈಟ್ ಅವರು ೭೪ರ ಹರೆಯದ ಕಾಂಗ್ರೆಸ್ ನಾಯಕನಿಗೆ  ಪರಿಶುದ್ಧ ಪರಿಸರ, ಮನೆಯಲ್ಲೇ ಮಾಡುದ ಅಡುಗೆ, ಮಿನರಲ್ ವಾಟರ್ ಮತ್ತು ಸೊಳ್ಳೆಪರದೆ ಹಾಗೂ ಸೊಳ್ಳೆ ನಿವಾರಣಾ ಔಷಧ ಒದಗಿಸುವಂತೆ ತಿಹಾರ್ ಜೈಲು ಅಧಿಕಾರಿಗಳಿಗೆ ಆಜ್ಞಾಪಿಸಿದರು. ನಿಯಮಿತವಾಗಿ ಚಿದಂಬರಂ ಅವರ ಆರೋಗ್ಯ ತಪಾಸಣೆ ಮಾಡುವಂತೆಯೂ ಪೀಠ ನಿರ್ದೇಶಿಸಿತು.

ಚಿದಂಬರಂ ಅವರ ಕೊಠಡಿಯನ್ನು ಸ್ವಚ್ಛವಾಗಿ ಇರಿಸಬೇಕು, ಅವರಿಗೆ ಮಿನರಲ್ ವಾಟರ್ ಮತ್ತು ಸೊಳ್ಳೆಗಳ ವಿರುದ್ಧ ರಕ್ಷಣೆ ಹಾಗೂ ಮಾಲಿನ್ಯ ಮುಖವಾಡ ಒದಗಿಸಬೇಕು ಎಂದೂ ಪೀಠ ತಿಹಾರ್ ಜೈಲು ಸೂಪರಿಂಟೆಂಡೆಂಟ್ ಅವರಿಗೆ ನಿರ್ದೇಶನ ನೀಡಿತು. ಬೇರೆ ಯಾವುದೇ ನಿರ್ದೇಶನದ ಅಗತ್ಯವಿಲ್ಲ ಎಂಬುದಾಗಿ ಚಿದಂಬರಂ ಅವರನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಹೇಳಿದ ಬಳಿಕ ಪೀಠವು ಚಿದಂಬರಂ ಅವರ ಅರ್ಜಿಯನ್ನು ಇತ್ಯರ್ಥ ಪಡಿಸಿರುವುದಾಗಿ ಪ್ರಕಟಿಸಿತು.

ಬಂಧನದ ಬಳಿಕ ಚಿದಂಬರಂ ಅವರ ತೂಕ ೭೩ ಕಿಲೋಗ್ರಾಮಿನಿಂದ ೬೬ ಕಿಲೋ ಗ್ರಾಂಗಳಿಗೆ ಇಳಿದಿದೆ. ಇದು ಅವರ ದೇಹಸ್ಥಿತಿ ಹದಗೆಡುತ್ತಿರುವುದನ್ನು ಸೂಚಿಸಿದೆ ಎಂದು ಅರ್ಜಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.

November 1, 2019 Posted by | ಭಾರತ, ರಾಷ್ಟ್ರೀಯ, Flash News, Nation, News, Spardha | , , , | Leave a comment

ಜಾರ್ಖಂಡ್​ ವಿಧಾನಸಭೆಗೆ ನ.30ರಿಂದ 5 ಹಂತದ ಚುನಾವಣೆ, ಡಿ. 23ಕ್ಕೆ ಫಲಿತಾಂಶ

01 Sunil-Arora CEC
ನವದೆಹಲಿ
ಜಾರ್ಖಂಡ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು 2019 ನವೆಂಬರ್ 1ರ ಶುಕ್ರವಾರ ಚುನಾವಣಾ ಆಯೋಗ ಘೋಷಣೆ ಮಾಡಿತು.  ನವೆಂಬರ್​ 30ರಿಂದ5 ಹಂತಗಳಲ್ಲಿ ಮತದಾನ ನಡೆಯಲಿದ್ದು, ಡಿಸೆಂಬರ್ 23ಕ್ಕೆ ಫಲಿತಾಂಶ ಹೊರ ಬೀಳಲಿದೆ.

ಮುಖ್ಯ ಚುನಾವಣಾಧಿಕಾರಿ ಸುನಿಲ್ ಅರೋರಾ ಜಾರ್ಖಂಡ್​ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಿಸಿದರು. ಸುದ್ದಿಗೋಷ್ಠಿಯಲ್ಲಿ ಜಾರ್ಖಂಡ್​ ವಿಧಾನಸಭೆ ಚುನಾವಣೆ ನವೆಂಬರ್​ 30ರಿಂದ 5 ಹಂತಗಳಲ್ಲಿ ನಡೆಯಲಿದೆ. ಡಿಸೆಂಬರ್ 23ಕ್ಕೆ ಫಲಿತಾಂಶ ಬರಲಿದೆ ಎಂದು ಅವರು ಪ್ರಕಟಿಸಿದರು.

ನ.30ಕ್ಕೆ ಮೊದಲ ಹಂತದ ಮತದಾನ, ಡಿ.7ರಂದು 2ನೇ ಹಂತದ ಮತದಾನ, ಡಿ.12ರಂದು 3ನೇ ಹಂತದ ಮತದಾನ, ಡಿ.16ರಂದು 4ನೇ ಹಂತದ ಮತದಾನ, ಡಿ.20ರಂದು 5ನೇ ಹಂತದ ಮತದಾನ ನಡೆಯಲಿದೆ.

ರಾಜ್ಯದಲ್ಲಿ ಈದಿನದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ರಾಜ್ಯ ವಿಧಾನಸಭೆಯ ಐದು ವರ್ಷಗಳ ಅವಧಿ ಜನವರಿ 5, 2020 ಕ್ಕೆ ಮುಕ್ತಾಯಗೊಳ್ಳಲಿದೆ. ಚುನಾವಣಾ ಖರ್ಚಿನ ಮೇಲೆ ಹಿಡಿತ ಸಾಧಿಸಲು ಪ್ರತಿ ಜಿಲ್ಲೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಅರೋರಾ ಹೇಳಿದರು.

ಜಾರ್ಖಂಡ್​ನ 81 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. 81 ಸ್ಥಾನಗಳ ಶಾಸಕರ ಅಧಿಕಾರಾವಧಿ ಜನವರಿ 5ರಂದು ಅಂತ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ 3ನೇ ರಾಜ್ಯದ ಚುನಾವಣೆ ಇದಾಗಿದೆ. ಈ ರಾಜ್ಯದಲ್ಲಿ ಕೂಡ ಬಿಜೆಪಿ ಅಧಿಕಾರದಲ್ಲಿದೆ. ಹೀಗಾಗಿ, ಜಾರ್ಖಂಡ್ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ.

November 1, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , | Leave a comment

ಬಿಜೆಪಿ-ಶಿವಸೇನೆ ಜಗಳಕ್ಕೆ ‘ಮಹಾ’ ರೈತನ ವಿಶಿಷ್ಟ ಪರಿಹಾರ

01 farmer srikant gadale‘ಅವರ ಜಗಳ ಮುಗಿವವರೆಗೆ ನಾನೇ ಮುಖ್ಯಮಂತ್ರಿ ಆಗುತ್ತೇನೆ..!’

ಔರಂಗಾಬಾದ್: ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಅಧಿಕಾರ ಹಂಚಿಕೆ ಮತ್ತು ಮುಂದಿನ ಸರ್ಕಾರ ರಚನೆಯ ಬಗೆಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವವರೆಗೆ  ‘ನಾನೇ ಮುಖ್ಯಮಂತ್ರಿಯಾಗುತ್ತೇನೆ, ಅವಕಾಶ ಕೊಡಿ’ ಎಂದು ಹೇಳುವ ಮೂಲಕ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ರೈತರೊಬ್ಬರು ಆಡಳಿತಾರೂಢ ಮೈತ್ರಿಕೂಟದ ‘ಜಗಳ’ಕ್ಕೆ ವಿಶಿಷ್ಟ ಪರಿಹಾರ ಸೂಚಿಸಿದರು.

ಕೇಜ್‌ತಾಲ್ಲೂಕಿನ ವಡ್ಮೌಲಿ ನಿವಾಸಿ ಶ್ರೀಕಾಂತ್ ವಿಷ್ಣು ಗಡಲೆ ಎಂಬ ರೈತ 2019ರ ಅಕ್ಟೋಬರ್ 31ರ ಗುರುವಾರ ಬೀಡ್ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಿದ ಪತ್ರದಲ್ಲಿ ಈ ಪರಿಹಾರವನ್ನು ಸಲಹೆ ಮಾಡಿದರು.

ವಿಧಾನಸಭಾ ಚುನಾವಣಾ ಫಲಿತಾಂಶದ ನಂತರ ಭುಗಿಲೆದ್ದಿರುವ ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದ ತಮ್ಮ ಸಮಸ್ಯೆಯನ್ನು ಶಿವಸೇನೆ ಮತ್ತು ಬಿಜೆಪಿ ಇನ್ನೂ ಬಗೆಹರಿಸಿಕೊಂಡಿಲ್ಲ ಎಂದು ಅವರು ಪತ್ರದಲ್ಲಿ ಅಸಮಾಧಾನ ವ್ಯಕ್ತ ಪಡಿಸಿದರು.

“ನೈಸರ್ಗಿಕ ವಿಪತ್ತುಗಳು (ಅಕಾಲಿಕ ಮಳೆ) ರಾಜ್ಯದಲ್ಲಿ ಕೊಯ್ಲು ಮಾಡಲು ಸಿದ್ಧವಾದ ಬೆಳೆಗಳಿಗೆ ಅಡ್ಡಿಯಾಗಿದೆ. ಈ ವಿಪತ್ತುಗಳ ಬಗ್ಗೆ ರೈತರು ಉದ್ವಿಗ್ನರಾಗಿದ್ದಾರೆ. ರೈತರು ಬಳಲುತ್ತಿರುವ ಈ ಸಮಯದಲ್ಲಿ, ಶಿವಸೇನೆ ಮತ್ತು ಬಿಜೆಪಿ ಮುಖ್ಯಸ್ಥರಿಗೆ ತಮ್ಮ ‘ಅಧಿಕಾರದ ಸಮಸ್ಯೆಯನ್ನು’  ಪರಿಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಟೀಕಿಸಿದರು.

“ಆದ್ದರಿಂದ, ಇವರ ಸಮಸ್ಯೆ ಬಗೆಹರಿಯುವವರೆಗೆ, ರಾಜ್ಯಪಾಲರು ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿಯನ್ನು ನನಗೆ ಹಸ್ತಾಂತರಿಸಬೇಕು” ಎಂದು ಗಡಾಲೆ ಹೇಳಿದ್ದಾರೆ. ‘ನಾನು ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೆ ನ್ಯಾಯ ನೀಡುತ್ತೇನೆ’ ಎಂದು ಗಡಾಲೆ ತಿಳಿಸಿದರು.

‘ಆಡಳಿತವು ನನ್ನ ಪತ್ರವನ್ನು ಗಮನಿಸದಿದ್ದರೆ, ಪ್ರಜಾತಾಂತ್ರಿಕ ವಿಧಾನಗಳ ಮೂಲಕ ಪ್ರತಿಭಟನೆ ಮಾಡುವೆ’ ಎಂದೂ ರೈv ತಮ್ಮ ಪತ್ರದಲ್ಲಿ ದರು.

ಮುಖ್ಯಮಂತ್ರಿ ಹುದ್ದೆಯನ್ನು  ತಲಾಎರಡೂವರೆ  ವರ್ಷ ಹಂಚಿಕೊಳ್ಳಬೇಕು ಮತ್ತು ಅಧಿಕಾರವನ್ನು ೫೦:೫೦ ಸೂತ್ರದಂತೆ ಹಂಚಿಕೆ ಮಾಡಬೇಕು ಎಂದು ಶಿವಸೇನೆ ಆಗ್ರಹಿಸುತ್ತಿದೆ.  ಈ ಎರಡೂ ಬೇಡಿಕೆಗಳನ್ನು ಬಿಜೆಪಿ ತಿರಸ್ಕರಿಸಿದೆ. ಮುಂದಿನ ಐದು ವರ್ಷಗಳವರೆಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಅವರು ಈ ಹುದ್ದೆಯಲ್ಲಿ ಮುಂದುವರಿಯುವುದಾಗಿಯೂ ಬಿಜೆಪಿ ಹೇಳಿದೆ.

ಶಿವಸೇನೆಯು ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಜೊತೆಗೂ ಮಾತುಕತೆ ನಡೆಸುತ್ತಿದ್ದು, ಗುರುವಾರ ರಾತ್ರಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್‌ಅವರನ್ನೂ ಶಿವಸೇನಾ ನಾಯಕ ಸಂಜಯ್ ರಾವತ್ ಭೇಟಿ ಮಾಡಿ  ಮಾತುಕತೆ ನಡೆಸಿದ್ದು, ಬಿಜೆಪಿ ಒಪ್ಪಂದ ಪಾಲಿಸದೇ ಇದ್ದಲ್ಲಿ ‘ಇತರ ರಾಜಕೀಯ ಮಾರ್ಗಗಳು ನಮ್ಮ ಮುಂದಿವೆ’ ಎಂದು ಹೇಳಿದ್ದಾರೆ.

ಶುಕ್ರವಾರ ಸುದ್ದಿ ಸಂಸ್ಥೆ ಒಂದರ ಜೊತೆಗೆ ಮಾತನಾಡಿದ ಶರದ್ ಪವಾರ್‌ಅವರು ರಾವತ್ ಅವರು ತಮ್ಮನ್ನು ಭೇಟಿ ಮಾಡಿದ್ದನ್ನು ದೃಢ ಪಡಿಸಿದರು.  ಆದರೆ ರಾಜಕೀಯದ ವಿಷಯ ಚರ್ಚಿಸಿಲ್ಲ, ರಾವತ್ ಆಗಾಗ ತಮ್ಮನ್ನು ಭೇಟಿ ಮಾಡುತ್ತಿರುತ್ತಾರೆ’ ಎಂದು ಹೇಳಿದರು.  ಬಿಜೆಪಿ ಮಾತಿಗೆ ಬದ್ಧವಾಗಿರಬೇಕು ಎಂಬ ಮಾತನ್ನೂ ಪವಾರ್ ಹೇಳಿದರು.

ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ತಮ್ಮೊಂದಿಗೆ ಮಾತನಾಡಿದ್ದಾರೆ ಎಂಬ ವರದಿಗಳನ್ನು ಕೂಡಾ 2019 ನವೆಂಬರ್ 1ರ ಶುಕ್ರವಾರ ರಾತ್ರಿ ತಳ್ಳಿಹಾಕಿದ ಶರದ್ ಪವಾರ್ ಶಿವಸೇನೆಯಿಂದ ಯಾವ ಪ್ರಸ್ತಾವೂ ಬಂದಿಲ್ಲ ಎಂದು ಹೇಳಿದರು.

November 1, 2019 Posted by | Agriculture, ಆರ್ಥಿಕ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Spardha | , , , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ