SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ರಫೇಲ್ ಗೆ ಆಯುಧ ಪೂಜೆ ನಡೆಸಿ ಮೊದಲ ಹಾರಾಟ ನಡೆಸಿದ ರಾಜನಾಥ್ ಸಿಂಗ್

This slideshow requires JavaScript.

ಪ್ಯಾರಿಸ್:  ದೇಶದ ವಾಯುಪಡೆಗೆ ವಿಶೇಷ ಬಲ ತುಂಬಲಿರುವ ಅತ್ಯಾಧುನಿಕ ಮಾದರಿಯ ರಫೇಲ್ ಯುದ್ಧವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುವ ಔಪಚಾರಿಕ ಪ್ರಕ್ರಿಯೆ ಫ್ರಾನ್ಸಿನ  ಮೆರಿಗ್ನ್ಯಾಕ್ ನಲ್ಲಿ  2019 ಅಕ್ಟೋಬರ್ 08ರ ಮಂಗಳವಾರ ಯಶಸ್ವಿಯಾಗಿ ನೆರವೇರಿತು.

ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ರಫೇಲ್ ಡಸಾಲ್ಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎರಿಕ್ ಟ್ರ್ಯಾಪಿಯರ್ ಅವರು ಮೊದಲ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರಿಸಿದರು.

ಪ್ರಥಮ ರಫೇಲ್ ವಿಮಾನವನ್ನು ಸ್ವೀಕರಿಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಈ ಯುದ್ಧ ವಿಮಾನಕ್ಕೆ ಆಯುಧ ಪೂಜೆಯನ್ನು ನೆರವೇರಿಸಿದರು. ವಿಮಾನದ ಎದುರು ಭಾಗದಲ್ಲಿ ‘ಓಂ’ ಎಂದು ಕುಂಕುಮದಲ್ಲಿ ಬರೆದ ಸಿಂಗ್ ಬಳಿಕ ವಿಮಾನದ ಚಕ್ರಗಳಿಗೆ ಲಿಂಬೆ ಹಣ್ಣನ್ನು ಮತ್ತು ವಿಮಾನದ  ಮುಂಭಾಗದಲ್ಲಿ ತೆಂಗಿನ ಕಾಯಿಯನ್ನು ಇರಿಸಿ ಸಾಂಪ್ರದಾಯಿಕ ರೀತಿಯಲ್ಲೇ ಆಯುಧ ಪೂಜೆಯನ್ನು ನೆರವೇರಿಸಿದರು.

ಬಳಿಕ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನವನ್ನು ಏರಿ ಅದರಲ್ಲಿ ಹಾರಾಟ ನಡೆಸಿದರು. ಪೈಲಟ್ ಫಿಲಿಪ್ ಡ್ಯುಶಾಟ್ ಅವರು ರಕ್ಷಣಾ ಸಚಿವರಿದ್ದ ಈ ರಫೇಲ್  ವಿಮಾನವನ್ನು  ಚಲಾಯಿಸಿದರು. ಇದರೊಂದಿಗೆ  ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಕ್ಷಣಾ ಸಚಿವರೆಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಅವರು ಪಾತ್ರರಾದರು.

36 ಯುದ್ಧ ವಿಮಾನಗಳಲ್ಲಿ ಫ್ರಾನ್ಸ್ ಮೊದಲ ಹಂತದ ನಾಲ್ಕು ರಫೇಲ್ ವಿಮಾನಗಳನ್ನು ಮುಂದಿನ ವರ್ಷದ ಮೇ ತಿಂಗಳಿನಲ್ಲಿ ಭಾರತಕ್ಕೆ ಹಸ್ತಾಂತರಿಸಲಿದೆ. ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನ ಖರೀದಿಗಾಗಿ 59 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.

ಇದಕ್ಕೆ ಮುನ್ನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು  ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಪ್ಯಾರಿಸ್ ನಲ್ಲಿ ಭೇಟಿಯಾಗಿ ರಕ್ಷಣೆ ಮತ್ತು ಭದ್ರತಾ ಸಂಬಂಧಿ ವಿಷಯಗಳ ಕುರಿತು ಚರ್ಚೆ ನಡೆಸಿದ್ದರು.

October 8, 2019 Posted by | ಪೈಲಟ್, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಮಾನ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Spardha, World | , , , , , | Leave a comment

ಡಿಕೆ ಶಿವಕುಮಾರ್‌ಗೆ  ಅಕ್ಟೋಬರ್  ೧ರವರೆಗೆ ನ್ಯಾಯಾಂಗ ಬಂಧನ

17 DK-Shivakumar-Judicial-Custodyಹಣ ವರ್ಗಾವಣೆ ಪ್ರಕರಣ: ದೆಹಲಿ ಕೋರ್ಟ್ ಆದೇಶ

ನವದೆಹಲಿ:  ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ನಾಟಕದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಅಕ್ಟೋಬರ್ ೧ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ದೆಹಲಿ ನ್ಯಾಯಾಲಯವು 2019 ಸೆಪ್ಟೆಂಬರ್ 17ರ ಮಂಗಳವಾರ ಆದೇಶ ನೀಡಿತು. ಇದರೊಂದಿಗೆ ಶಿವಕುಮಾರ್ ಅವರಿಗೆ ಮತ್ತೆ ಹಿನ್ನಡೆಯಾಯಿತು.

ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಗೆ ಸೆಪ್ಟೆಂಬರ್ 18ರ ಬುಧವಾರ ಮಧ್ಯಾಹ್ನ 3.30ರ ವೇಳೆಯನ್ನು ನ್ಯಾಯಾಲಯ ನಿಗದಿ ಪಡಿಸಿತು.

ಶಿವಕುಮಾರ್ ಅವರಿಗೆ ಅಕ್ಟೋಬರ್ ೧ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಶಿವಕುಮಾರ್ ಅವರನ್ನು ಮೊದಲು ಆಸ್ಪತ್ರೆಗೆ ಒಯ್ದು ಅವರನ್ನು ಅಲ್ಲಿ ದಾಖಲು ಮಾಡಬೇಕಾಗುತ್ತದೆಯೇ ಎಂಬ ಬಗ್ಗೆ ವೈದ್ಯರ ಸಲಹೆ ಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದರು.

ಶಿವಕುಮಾರ್ ಅವರ ತನಿಖೆ ಇನ್ನೂ ಪೂರ್ಣಗೊಂಡಿಲ್ಲ, ಆದ್ದರಿಂದ ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಅವರನ್ನು ಪ್ರಶ್ನಿಸಲು ತನಗೆ ಅನುಮತಿ ನೀಡಬೇಕು ಎಂದು ತನಿಖಾ ಸಂಸ್ಥೆಯು ನ್ಯಾಯಾಧೀಶರನ್ನು ಕೋರಿತು.

ಜಾರಿ ನಿರ್ದೇಶನಾಲಯ  (ಇಡಿ) ಪರವಾಗಿ ಹಾಜರಾಗಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ (ಎಎಸ್‌ಜಿ) ಕೆಎಂ ನಟರಾಜ್ ಅವರು ’ಶಿವಕುಮಾರ್ ಅವರ ಆರೋಗ್ಯ ಪರಿಸ್ಥಿತಿಯು ಪರಿಣಾಮಕಾರಿಯಾಗಿ ಅವರನ್ನು ಪ್ರಶ್ನಿಸಲು ಅವಕಾಶ ನೀಡಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಕಾಂಗ್ರೆಸ್ ನಾಯಕನ ಪರ ವಕೀಲರು ನ್ಯಾಯಾಂಗ ವಶಕ್ಕೆ ಒಪ್ಪಿಸುವಂತೆ ಜಾರಿ ನಿರ್ದೇಶನಾಲಯ ಮಾಡಿದ ಮನವಿಯನ್ನು ತೀವ್ರವಾಗಿ ವಿರೋಧಿಸಿ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿದರು.

ಶಿವಕುಮಾರ್ ಪರ ಹಾಜರಾಗಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ’ಶಾಸಕರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಮತ್ತು ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಇದೆ, ಆದ್ದರಿಂದ ಅವರಿಗೆ ಜಾಮೀನು ನೀಡಬೇಕು’ ಎಂದು ಅಹವಾಲು ಮಂಡಿಸಿದರು.

ಶಿವಕುಮಾರ್ ಅವರನ್ನು ನ್ಯಾಯಾಲಯದ ನಿರ್ದೇಶನದಂತೆ  ಆಸ್ಪತ್ರೆಗೆ ಒಯ್ಯಲಾಗಿದೆ ಮತ್ತು ಅನಾರೋಗ್ಯದ ಕಾರಣ ಅವರ ತನಿಖೆಯನ್ನು ಮುಂದುವರೆಸಲಾಗಿಲ್ಲ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ (ಎಎಸ್ ಜಿ) ನ್ಯಾಯಾಲಯಕ್ಕೆ  ತಿಳಿಸಿದರು.

’ಶಿವಕುಮಾರ್ ಅವರಿಂದ ಕೇವಲ ೪೧ ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಜಾರಿ ನಿರ್ದೇಶನಾಲಯವು ಆಪಾದಿಸಿರುವಂತೆ  ೮.೫ ಕೋಟಿ ರೂಪಾಯಿಗಳನ್ನಲ್ಲ. ಈಗ ಅಚ್ಚರಿದಾಯಕವಾಗಿ ಈ ಸಂಖ್ಯೆಯು ೧೪೩ ಕೋಟಿ ರೂಪಾಯಿ ಆಗಿದೆ’ ಎಂದು ಸಿಂಘ್ವಿ ಹೇಳಿದರು.

ಜಾರಿ ನಿರ್ದೇಶನಾಲಯವು ಪಕ್ಷಪಾತ ಮತ್ತು ದುರುದ್ದೇಶವನ್ನು ಹೊಂದಿದೆ ಮತ್ತು ತನಿಖೆಯ ಬಗ್ಗೆ ನ್ಯಾಯಾಲಯಕ್ಕೆ ಸುಳ್ಳು ಹೇಳುತ್ತಿದೆ ಎಂದು ಅವರು ಆಪಾದಿಸಿದರು.

೩೧೭ ಬ್ಯಾಂಕ್ ಖಾತೆಗಳ ಕುರಿತ ತನಿಖಾ ಸಂಸ್ಥೆಯ ಪ್ರತಿಪಾದನೆಯು ಕೇವಲ ಶಿವಕುಮಾರ್ ಅವರ ವರ್ಚಸ್ಸನ್ನು ಮಾಧ್ಯಮ ಮತ್ತು ಸಾರ್ವಜನಿಕರ ಮುಂದೆ ಹಾಳುಗೆಡಹಿವುದಾಗಿದೆ ಎಂದು ಅವರು ವಾದಿಸಿದರು.

ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರೂ ಶಿವಕುಮಾರ್ ಅವರನ್ನು ಪ್ರತಿನಿಧಿಸಿ ಜಾಮೀನಿಗೆ ಮನವಿ ಮಾಡಿದರು. ಶಿವಕುಮಾರ್ ಅವರು ೭ ಬಾರಿ ಶಾಸಕರಾಗಿರುವ ವ್ಯಕ್ತಿಯಾಗಿದ್ದು, ವಿದೇಶಕ್ಕೆ ಹಾರುವ ಅಪಾಯವಿಲ್ಲ ಎಂದು ರೋಹ್ಟಗಿ ನುಡಿದರು.

ಇದು ದಾಖಲೆ ಸಾಕ್ಷ್ಯವನ್ನು ಆಧರಿಸಿದ ಪ್ರಕರಣವಾಗಿದೆ. ಕ್ರಿಮಿನಲ್ ಹಿನ್ನೆಲೆ ಇಲ್ಲದೇ ಇರುವುದರಿಂದ ಶಿವಕುಮಾರ್ ಅವರನ್ನು  ವಶದಲ್ಲಿ ಇಡಲು ಯಾವುದೇ ನೆಲೆ ಇಲ್ಲ ಎಂದು ರೋಹ್ಟಗಿ ಹೇಳಿದರು.

ಇದು ಜಾಮೀನು ನೀಡಬಹುದಾದ ಪ್ರಕರಣವಾಗಿದ್ದು, ನ್ಯಾಯಾಲಯವು ಶರತ್ತುಗಳನ್ನು ವಿಧಿಸಬಹುದು; ಇಲ್ಲವಾದಲ್ಲಿ ಶಿವಕುಮಾರ್ ಅವರಿಗೆ ವೈದ್ಯಕೀಯ ಜಾಮೀನು ನೀಡುವ ಬಗೆಗೂ ಪರಿಶೀಲಿಸಬಹುದು ಎಂದು ರೋಹ್ಟಗಿ ಕೋರಿದರು.

ಹಣ ವರ್ಗಾವಣೆಯು ಶಾಸಕ ಮತ್ತು ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳ ಮೂಲಕ ನಡೆದಿದೆ ಎಂದು ಆಪಾದಿಸಲಾಗಿದೆ.

ಹಣ ವರ್ಗಾವಣೆ ಪ್ರಕರಣದಲ್ಲಿ ಶಿವ ಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ಸೆಪ್ಟೆಂಬರ್ ೩ರಂದು ಬಂಧಿಸಿತ್ತು. ಜಾರಿ ನಿರ್ದೇಶನಾಲಯದ ವಶದಲ್ಲಿ ತನಿಖೆ ನಡೆಸಲು ನೀಡಲಾಗಿದ್ದ ಗಡುವು ಮಂಗಳವಾರಕ್ಕೆ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಮಂಗಳವಾರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು.

September 17, 2019 Posted by | ಕರ್ನಾಟಕ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, Bengaluru, Bangalore,, Flash News, News, Politics, Spardha | , , , , , | Leave a comment

ಜಮ್ಮು-ಕಾಶ್ಮೀರಕ್ಕೆ ಖುದ್ದು ಭೇಟಿ: ಸಿಜೆಐ ಗೊಗೋಯಿ ಅಪರೂಪದ ಪ್ರಕಟಣೆ

This slideshow requires JavaScript.

ನಿರ್ಬಂಧಗಳ ಬಗ್ಗೆ ವರದಿಗೆ ಸಿಜೆಗೆ ನಿರ್ದೇಶನ,
ವರದಿ ವ್ಯತಿರಿಕ್ತವಾದರೆ ಕಠಿಣ ಕ್ರಮದ ಎಚ್ಚರಿಕೆ

ನವದೆಹಲಿ: ಜನರು ಹೇಳುವಂತೆ ಕಾಶ್ಮೀರದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿ ಇರುವುದೇ ಹೌದಾದರೆ, ನಾನೇ ಶ್ರೀನಗರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ, ಆದರೆ ಹಾಗೆ ಪರಿಶೀಲಿಸಿದಾಗ ಪರಿಸ್ಥಿತಿ ವಕೀಲರ ಹೇಳಿಕೆಗೆ ವ್ಯತಿರಿಕ್ತವಾಗಿದ್ದರೆ ಅವರು ಕಠಿಣ ಕ್ರಮ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು 2019 ಸೆಪ್ಟೆಂಬರ್ 16ರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಎಚ್ಚರಿಕೆ ನೀಡಿದರು.

ಅರ್ಜಿಯೊಂದರ ವಿಚಾರಣೆ ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಕೋರ್ಟ್ ಮೊರೆ ಹೋಗಲು ಕೂಡಾ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಕಾಶ್ಮೀರ ಟೈಮ್ಸ್ ಪತ್ರಿಕೆ ಸಂಪಾದಕಿ ಅನುರಾಧ ಭಾಸಿನ್ ಮತ್ತು  ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಏನಾಕ್ಷಿ ಗಂಗೂಲಿ ಹಾಗೂ ಪ್ರೊಫೆಸರ್ ಶಾಂತ ಸಿನ್ಹ ಅವರು ನ್ಯಾಯಾಲಯದ ಮುಂದಿಟ್ಟ ಪ್ರತಿಪಾದನೆಗೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿಯವರು ಈ ಮಾತುಗಳನ್ನು ಆಡಿದ ಅಪರೂಪದ ವಿದ್ಯಮಾನ ಘಟಿಸಿತು.

ಅಗತ್ಯ ಬಿದ್ದರೆ ಜಮ್ಮು – ಕಾಶ್ಮೀರಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅವಲೋಕನ ಮಾಡುವೆ ಎಂದು ನುಡಿದ ಅವರು ನ್ಯಾಯಾಲಯದಲ್ಲಿ ದಾವೆ ಹೂಡಲೂ ಸಾಧ್ಯವಾಗದ ಪರಿಸ್ಥಿತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೆಯೇ ಎಂಬುದಾಗಿ ಪ್ರಶ್ನಿಸಿದರು. ಪರಿಸ್ಥಿತಿ ಹೀಗೆ ಇರುವುದೇ ಆಗಿದ್ದಲ್ಲಿ ಅದು ಅತ್ಯಂತ ಗಂಭೀರ ವಿಚಾರ ಎಂದು ನುಡಿದ ಸಿಜೆಐ ಗೊಗೋಯಿ,  ಈ ಬಗ್ಗೆ ವರದಿಯೊಂದನ್ನು ಕಳುಹಿಸಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನವನ್ನೂ ನೀಡಿದರು.

ಅನುರಾಧಾ ಭಾಸಿನ್ ಅವರ ವಕೀಲರಾದ ವೃಂದಾ ಗ್ರೋವರ್ ಅವರು ತಮ್ಮ ವಾದವನ್ನು ಆರಂಭಿಸಿದಾಗ ನ್ಯಾಯಮೂರ್ತಿ ಬೊಬ್ಡೆ ಅವರು ಕಾಶ್ಮೀರ ಕಣಿವೆಯಲ್ಲಿ ಅಂತಹ ನಿರ್ಬಂಧ, ಜನಜೀವನ ಸ್ಥಗಿತತೆ ಇದ್ದರೆ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಈ ಬಗ್ಗೆ ವ್ಯವಹರಿಸಬಹುದು ಎಂದು ಹೇಳಿದರು.

ಅದಕ್ಕೆ ವೃಂದಾ ಗ್ರೋವರ್ ಅವರು ಇಂಟರ್ ನೆಟ್, ಸಾರ್ವಜನಿಕ ಸಾರಿಗೆ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಜನರಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟನ್ನು ಸಂಪರ್ಕಿಸಲು ಕಷ್ಟವಾಗಿದೆ ಎಂದು ಉತ್ತರಿಸಿದರು.

ಬಳಿಕ, ಮಕ್ಕಳು ಹಕ್ಕುಗಳ ಕಾರ್‍ಯಕರ್ತೆ ಏನಾಕ್ಷಿ ಗಂಗೂಲಿ ಮತ್ತು ಪ್ರೊಫೆಸರ್ ಶಾಂತಾ ಸಿನ್ಹ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ ಎಂದು ದೂರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿತು.

ಬಂಧಿಸಲಾಗಿರುವ ೧೮ ವರ್ಷಕ್ಕಿಂತ ಕಳೆಗಿನ ವಯೋಮಾನದವರನ್ನು ಬಿಡುಗಡೆ ಮಾಡಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಸಿಜೆಐ ಗೊಗೋಯಿ ಅವರು ಅರ್ಜಿದಾರರು ಈ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.

ಹೈಕೋರ್ಟನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನೇರವಾಗಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ಕಾರ್‍ಯಕರ್ತರ  ಪರ ವಾದಿಸಿದ ಹಿರಿಯ ವಕೀಲ ಹುಜೈಫಾ ಅಹ್ಮದಿ  ಹೇಳಿದರು.

ಹೈಕೋರ್ಟನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂಬ ಹೇಳಿಕೆಯನ್ನು ನೀಡುವುದಾದರೆ, ಇದು ಅತ್ಯಂತ ಗಂಭೀರವಾದ ಹೇಳಿಕೆಯಾಗುತ್ತದೆ. ಹೈಕೋರ್ಟಿಗೆ ಹೋಗುವ ನಿಮ್ಮ ಮಾರ್ಗಕ್ಕೆ ಯಾರಾದರೂ ಅಡ್ಡ ಬಂದಿದ್ದಾರೆಯೇ? ಏಕೆ ಎಂಬುದಾಗಿ ದಯವಿಟ್ಟು ಹೇಳಿ’ ಎಂದು ಗೊಗೋಯಿ ಪ್ರಶ್ನಿಸಿದರು.

ಕಾಶ್ಮೀರದ ಸ್ಥಗಿತ ಸ್ಥಿತಿಯು ಜನರನ್ನು ನ್ಯಾಯಾಲಯವನ್ನು ಸಂಪರ್ಕಿಸದಂತೆ ತಡೆಯುತ್ತಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಂತದಲ್ಲಿ ಸುಪ್ರೀಂಕೋರ್ಟ್ ’ಹೈಕೋರ್ಟನ್ನು ಸಂಪರ್ಕಿಸಲು ಕಷ್ಟವಾಗುತ್ತಿದೆ ಎಂಬುದಾಗಿ ಜನರು ಮಾಡುತ್ತಿರುವ ಆಪಾದನೆಗಳ ಬಗ್ಗೆ ವರದಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನ ನೀಡಿತು.

’ಜನರಿಗೆ ಹೈಕೋರ್ಟನ್ನು ಸಂಪರ್ಕಿಸಲು ಆಗುತ್ತಿಲ್ಲ ಎಂದಾದರೆ, ಇದು ಅತ್ಯಂತ ಗಂಭೀರವಾದ ವಿಷಯ, ನಾನು ಸ್ವತಃ ಶ್ರೀನಗರಕ್ಕೆ ಭೇಟಿ ನೀಡುವೆ’ ಎಂದು ಸಿಜೆಐ ರಂಜನ್ ಗೊಗೋಯಿ ಹೇಳಿದರು.

’ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯವರ ವರದಿ ವ್ಯತಿರಿಕ್ತವಾಗಿದ್ದಲ್ಲಿ, ಆಗ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ’ ಎಂದೂ ಸಿಜೆಐ ಗೊಗೋಯಿ ಅವರು ಅರ್ಜಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸಿದ ವಕೀಲರಿಗೆ ಎಚ್ಚರಿಕೆ ನೀಡಿದರು.

ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜಸ್ಥಿತಿ ಪುನಃಸ್ಥಾಪನೆಗೆ ಎಲ್ಲ ಪ್ರಯತ್ನಗಳನ್ನೂ ಮಾಡುವಂತೆ ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಮಕ್ಕಳ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯಲ್ಲಿ ಸಂವಿಧಾನದ ಪರಿಚ್ಛೇದ ೩೭೦ನ್ನು ರದ್ದು ಮಾಡಿದ ನಂತರ ಹಲವಾರು ಅಪ್ರಾಪ್ತರನ್ನು ಕಾನೂನು ಬಾಹಿರವಾಗಿ ವಶದಲ್ಲಿಡಲಾಗಿದೆ ಎಂದು ಆರೋಪಿಸಲಾಗಿತ್ತು.

ಒಂದು ಹಂತದಲ್ಲಿ ಸುಪ್ರೀಂಕೋರ್ಟ್ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ ನಿರ್ಬಂಧಗಳನ್ನು ವಿಧಿಸಿದ ಆಗಸ್ಟ್ ೫ರ ಕ್ರಮಕ್ಕೆ, ೧೯೯೦ರಿಂದೀಚೆಗೆಗಿನ ಸಾವುಗಳು, ಭಃಯೋತ್ಪಾದನೆ ಮತ್ತು ಹಿಂಸಾಚಾರವೇ ಮುಖ್ಯಕಾರಣವಾಗಿರುವಂತೆ ಕಾಣುತ್ತದೆ ಎಂದು ಸರ್ಕಾರವು ಮಂಡಿಸಿದ ಸಹಸ್ರಾರು ಸಾವು, ಭಯೋತ್ಪಾದನೆ, ಹಿಂಸಾಚಾರದ ಘಟನೆಗಳ ಅಂಕಿಅಂಶಗಳನ್ನು ಉಲ್ಲೇಖಿಸುತ್ತ ಹೇಳಿತು.

ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಕಣಿವೆಯಲ್ಲಿನ ರಕ್ತಪಾತವನ್ನು ನಿರ್ಬಂಧಗಳು ತಡೆಗಟ್ಟಿವೆ ಎಂಬುದನ್ನು ಸಾಬೀತು ಪಡಿಸಲು ಸಾವುನೋವು, ಭಯೋತ್ಪಾದನೆ, ಹಿಂಸಾಚಾರಗಳ ಅಂಕಿಸಂಖ್ಯೆಗಳನ್ನು ನ್ಯಾಯಾಲಯದ ಮುಂದಿಟ್ಟರು. ಇದೇ ವೇಳೆಗೆ ನಿರ್ಬಂಧಗಳಿದ್ದರೂ ಸಾಮಾನ್ಯ ಕಾಶ್ಮೀರಿಗಳಿಗೆ ಸಿಗಬೇಕಾದ ಸವಲತ್ತುಗಳಿಗೆ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಅವರು ಪ್ರತಿಪಾದಿಸಿದರು.

೧೯೯೦ರಿಂದೀಚೆಗೆ ೭೧,೦೩೮ ಭಯೋತ್ಪಾದಕ ಘಟನೆಗಳಲ್ಲಿ ೪೧,೮೬೬ ಮಂದಿ ಅಸು ನೀಗಿದ್ದಾರೆ. ಇವುಗಳಲ್ಲಿ ೧೪,೦೩೮ ನಾಗರಿಕರು, ೫,೨೯೨ ಮಂದಿ ಭದ್ರತಾ ಸಿಬ್ಬಂದಿ ಮತ್ತು ೨೨,೫೩೬ ಭಯೋತ್ಪಾದಕರು ಸೇರಿದ್ದಾರೆ ಎಂದು ಅಟಾರ್ನಿ ಜನರಲ್ ಹೇಳಿದರು.

’ಅತ್ಯಂತ ಭೀಕರ ಪರಿಸ್ಥಿತಿ… ಇವೇ ಅಸಾಧಾರಣ ಕಾರಣಗಳು (ನಿರ್ಬಂಧಕ್ಕೆ). ಇವು ಭದ್ರತಾ ವಿಚಾರಗಳು’ ಎಂದು ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ’ಆಗಸ್ಟ್ ೫ರಿಂದೀಚೆಗೆ ಒಂದೇ ಒಂದು ಬುಲೆಟ್ ಕೂಡಾ ಗುಂಡು ಹಾರಿಸಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ವಿವರಗಳ ಸಹಿತವಾದ ಪ್ರಮಾಣ ಪತ್ರ ಸಲ್ಲಿಸಿ ಎಂದು ನ್ಯಾಯಮೂರ್ತಿ ಬೊಬ್ಡೆ ಸರ್ಕಾರಕ್ಕೆ ನಿರ್ದೇಶಿಸಿದರು.

ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು ಸಹಜ ಸ್ಥಿತಿ ಪುನಃಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆಯೂ ಅವರು ಸರ್ಕಾರಕ್ಕೆ ಸೂಚಿಸಿದರು.

’ಇಂಟರ್ ನೆಟ್ ಅಭಾವ ಮತ್ತು ಮೊಬೈಲ್ ಸಂಪರ್ಕ ಸ್ಥಗಿತದಂತಹ ಸ್ಥಳೀಯ ಸಮಸ್ಯೆಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟನ್ನು ಸಂಪರ್ಕಿಸಿ ಎಂದು ನ್ಯಾಯಾಲಯ ಕಾಶ್ಮೀರ ಟೈಮ್ಸ್ ಸಂಪಾದಕರಾದ ಅನುರಾಧ ಭಾಸಿನ್ ಅವರಿಗೆ ಸೂಚಿಸಿತು.

’ಈ ಸ್ಥಗಿತತೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಸಾರ್ವಜನಿಕ ಸಾರಿಗೆ ಕಾರ್‍ಯ ನಿರ್ವಹಿಸುತ್ತಿಲ್ಲ. ಸಂಪರ್ಕಿಸಲು ಯಾವುದೇ ಮಾರ್ಗವೂ ಇಲ್ಲ. ಕೆಲವೇ ಕೆಲವು ಸ್ಥಿರ ದೂರವಾಣಿಗಳು ಕೆಲಸ ಮಾಡುತ್ತಿವೆ. ಮಾಧ್ಯಮ ಸ್ವಾತಂತ್ರ್ಯ ಮೊಟಕುಗೊಂಡಿದೆ. ಇದು ೪೩ನೇ ದಿನ’ ಎಂದು ಹಿರಿಯ ವಕೀಲರಾದ ವೃಂದಾ ಗ್ರೋವರ್ ಅವರು ಭಾಸಿನ್ ಪರ ವಾದಿಸುತ್ತಾ ಹೇಳಿದರು.

’ಕನಿಷ್ಠ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗಬೇಕು ಮತ್ತು ತಾಯಿಗೆ ತನ್ನ ಮಗು ಸುರಕ್ಷಿತವಾಗಿ ಮನೆಗೆ ವಾಪಸಾಗುವ ಭರವಸೆ ಸಿಗಬೇಕು ಎಂಬ ಕನಿಷ್ಠ ಆಶಯ ಕಾಶ್ಮೀರಿಗಳದು’ ಎಂದು ಹಿರಿಯ ವಕೀಲ ಸಂಜಯ್ ಹೆಗ್ಡೆ ಹೇಳಿದರು.

ಆರೋಪವನ್ನು ನಿರಾಕರಿಸಿದ ವೇಣುಗೋಪಾಲ್ ಅವರು ’೧೦.೫ ಲಕ್ಷ ಜನರಿಗೆ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ, ೬೭,೧೯೬ ಮಂದಿಯನ್ನು ಒಳರೋಗಿಗಳಾಗಿ ದಾಖಲು ಮಾಡಲಾಗಿದೆ ಮತ್ತು ೧೦,೬೯೯ ಪ್ರಮುಖ ಹಾಗೂ೫೩,೨೯೭ ಸಣ್ಣ ಸರ್ಜರಿಗಳನ್ನು ನಡೆಸಲಾಗಿದೆ. ಶೇಕಡಾ ೯೦ರಷ್ಟು ಔಷಧ ಅಂಗಡಿಗಳು ತೆರೆದಿವೆ ಮತ್ತು ೮.೯ಲಕ್ಷ ಎಲ್‌ಪಿಜಿ ಸಿಲಿಂಡರುಗಳನ್ನು ಮನೆಗಳಿಗೆ ಸರಬರಾಜು ಮಾಡಲಾಗಿದೆ’ ಎಂದು ಅಂಕಿ ಅಂಶ ಸಹಿತವಾಗಿ ವಿವರಿಸಿದರು.

ಸರ್ಕಾರವು ಆರಂಭಿಸಿರುವ ಯೋಜನೆಯ ಪರಿಣಾಮವಾಗಿ ರೈತರ ಶೋಷಣೆ ನಿಂತಿದೆ ಎಂದು ತುಷಾರ ಮೆಹ್ತ ಹೇಳಿದರು.

ಈ ಹಂತದಲ್ಲಿ ಹೆಚ್ಚಿನ ವಿವರಗಳಿಗೆ ಹೋಗದಂತೆ ಸಿಜೆಐ ಅವರು ಕಾನೂನು ಅಧಿಕಾರಿಗಳನ್ನು ತಡೆದರು.

ಮಕ್ಕಳ ಹಕ್ಕುಗಳ ಕಾರ್‍ಯಕರ್ತರಾದ ಏನಾಕ್ಷಿ ಗಂಗೂಲಿ ಮತ್ತು ಡಾ. ಶಾಂತಾ ಸಿನ್ಹ  ಅವರ ಪರ ವಾದಿಸಿದ ಹಿರಿಯ ವಕೀಲ ಹುಜೈಫಾ ಅಹ್ಮದಿ ಅವರ ಮೌಖಿಕ ಅಹವಾಲನ್ನು ಗಂಭೀರವಾಗಿ ತೆಗೆದುಕೊಂಡ ಸಿಜೆಐ ಅವರು ’೧೦ರಿಂದ ೧೮ ವರ್ಷಗಳ ಒಳಗಿನ ಮಕ್ಕಳನ್ನು ಬಂಧಿಸಲಾಗಿದೆ ಎಂಬ ಮಾಧ್ಯಮ ವರದಿಗಳತ್ತ ಗಮನ ಸೆಳೆದ ಅಹ್ಮದಿ ಮಾತನ್ನಾಧರಿಸಿ ವರದಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನ ನೀಡಿದರು.

ಮುಖ್ಯ ನ್ಯಾಯಮೂರ್ತಿ ಜೊತೆ ಮಾತನಾಡುವೆ, ಅಗತ್ಯ ಬಿದ್ದರೆ ವಸ್ತುಸ್ಥಿತಿ ಪರಿಶೀಲನೆಗಾಗಿ ಅಲ್ಲಿಗೆ ಹೋಗುವೆ ಎಂದು ಹೇಳಿದ ಸಿಜೆಐ, ಪ್ರತಿಪಾದನೆಗಳು ಸುಳ್ಳೆಂಬುದಾಗಿ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಶ್ರೀನಗರ, ಬಾರಾಮುಲ್ಲ, ಅನಂತನಾಗ್ ಮತ್ತು ಜಮ್ಮು ಜಿಲ್ಲೆಗಳಲ್ಲಿ ಪ್ರವಾಸ ನಡೆಸಲು ನ್ಯಾಯಾಲಯ ಒಪ್ಪಿಗೆ ನೀಡಿತು. ರಾಜಕೀಯ ರ್‍ಯಾಲಿಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಶರತ್ತನ್ನು ಅಜಾದ್ ಅವರಿಗೆ ನ್ಯಾಯಾಲಯ ವಿಧಿಸಿತು.

September 16, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Spardha, supreme court, Terror | , , , , , | Leave a comment

ಇಡಿ ಮುಂದೆ ಶರಣಾಗತಿ, ಚಿದಂಬರಂ ಮನವಿಗೆ ದೆಹಲಿ ಕೋರ್ಟ್ ನಕಾರ

13 Chidambaramಸೆಪ್ಟೆಂಬರ್ ೧೯ರವರೆಗೆ ತಿಹಾರ್ ಜೈಲೇ ಗತಿ

ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ಶರಣಾಗಲು ಅನುಮತಿ ಕೋರಿ ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಸಲ್ಲಿಸಿದ ಮನವಿಯನ್ನು ದೆಹಲಿಯ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರ ನ್ಯಾಯಾಲಯವು 2019 ಸೆಪ್ಟೆಂಬರ್ 13ರ ಶುಕ್ರವಾರ ವಜಾಗೊಳಿಸಿತು. ಪರಿಣಾಮವಾಗಿ ಚಿದಂಬರಂ ಅವರು 2019 ಸೆಪ್ಟೆಂಬರ್ ೧೯ರವರೆಗೂ ತಿಹಾರ್ ಸೆರೆಮನೆಯಲ್ಲಿಯೇ ಕಾಲ ಕಳೆಯಬೇಕಾಗಿ ಬಂದಿತು.

ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಯಿಂದ ಬಂಧನಕ್ಕೆ ಒಳಗಾದ ಚಿದಂಬರಂ ಅವರು ಸೆಪ್ಟೆಂಬರ್ ೫ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಅವರನ್ನು ಆಗಸ್ಟ್ ೨೧ರಂದು ಬಂಧಿಸಿತ್ತು. ಬಂಧನದ ಬಳಿಕ ೧೪ ದಿನಗಳನ್ನು ಅವರು ಸಿಬಿಐ ವಶದಲ್ಲೇ ಕಳೆದಿದ್ದರು.

ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿಯನ್ನು ೭ ದಿನಗಳ ಒಳಗಾಗಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಗುರುವಾರ ಆಜ್ಞಾಪಿಸಿತ್ತು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮಗೆ ನಿಯಮಿತ ಜಾಮೀನು ನೀಡುವಂತೆ ಚಿದಂಬರಂ ಅವರು ಮನವಿ ಮಾಡಿದ್ದರು.

ಚಿದಂಬರಂ ಅವರ ವಕೀಲರು ಮಾಜಿ ವಿತ್ತ ಸಚಿವರಿಗೆ ವಿಧಿಸಲಾಗಿದ್ದ ನ್ಯಾಯಾಂಗ ಕಸ್ಟಡಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ತಮ್ಮ ಎರಡನೇ ಮನವಿಯನ್ನು ಶುಕ್ರವಾರ ಹಿಂತೆಗೆದುಕೊಂಡರು. ತಡವಾಗಿ ಅರ್ಜಿಯನ್ನು ಸಲ್ಲಿಸಿದ್ದು ಏಕೆ ಎಂಬುದಾಗಿ ನ್ಯಾಯಾಲಯ ಪ್ರಶ್ನಿಸಿತು. ’ನ್ಯಾಯಾಂಗ ವಶಕ್ಕೆ ಕಳೆದ ಗುರುವಾರ ಒಪ್ಪಿಸಿರುವಾಗ ಈದಿನ ಏಕೆ ನ್ಯಾಯಾಲಯಕ್ಕೆ ಬರುತ್ತಿದ್ದೀರಿ?’ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಸುದೀರ್ಘ ವಾರಾಂತ್ಯ ಹಾಗೂ ರಜಾದಿನಗಳ ಕಾರಣ ತಾವು ಮುಂಚಿತವಾಗಿಯೇ ಅರ್ಜಿಯನ್ನು ಸಲ್ಲಿಸಿದ್ದುದಾಗಿ ಸಿಬಲ್ ಉತ್ತರಿಸಿದರು.

ಐಎನ್‌ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿದಂಬರಂ ಅವರನ್ನು ಬಂಧಿಸುವ ಅಗತ್ಯವಿದೆ ಮತ್ತು ಸೂಕ್ತ ಸಮಯದಲ್ಲಿ ತಾನು ಅವರನ್ನು ಬಂಧಿಸುವುದಾಗಿ ಜಾರಿ ನಿರ್ದೇಶನಾಲಯವು ಗುರುವಾರ ನ್ಯಾಯಾಲಯಕ್ಕೆ ತಿಳಿಸಿತ್ತು.

ಚಿದಂಬರಂ ಅವರನ್ನು ನರಳುವಂತೆ ಮಾಡುವ ದುರುದ್ದೇಶದಿಂದ ಜಾರಿ ನಿರ್ದೇಶನಾಲಯವು ಈ ಮನವಿಯನ್ನು ಮಾಡಿದೆ ಎಂದು ಚಿದಂಬರಂ ಅವರ ವಕೀಲರು ಪ್ರತಿಪಾದಿಸಿದರು. ೭೩ರ ಹರೆಯದ ಚಿದಂಬರಂ ಅವರು ಈಗಾಗಲೇ ಸಿಬಿಐ ತನಿಖೆ ನಡೆಸುತ್ತಿರುವ ಐಎನ್‌ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾಯಾಂಗ ವಶದಲ್ಲಿ ಇದ್ದಾರೆ.

ಚಿದಂಬರಂ ಅವರು ಈಗಾಗಲೇ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ವಶದಲ್ಲಿ ಇರುವುದರಿಂದ ಅವರು ಸಾಕ್ಷ್ಯದಲ್ಲಿ ಕೈಯಾಡಿಸಲು ಸಾಧ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯವು  (ಇಡಿ) ನ್ಯಾಯಾಲಯಕ್ಕೆ ತಿಳಿಸಿತು. ಚಿದಂಬರಂ ಪರವಾಗಿ ಹಾಜರಾದ ಕಪಿಲ್ ಸಿಬಲ್ ಅವರು ಜಾರಿ ನಿರ್ದೇಶನಾಲಯವು ಆಗಸ್ಟ್ ೨೦ ಮತ್ತು ೨೧ರಂದು ಕಾಂಗ್ರೆಸ್ ನಾಯಕನನ್ನು ಬಂಧಿಸಲು ಅವರ ನಿವಾಸಕ್ಕೆ ಬಂದಿತ್ತು, ಆದರೆ ಈಗ ಅವರು ಹಾಗೆ ಮಾಡಲು ಸಿದ್ಧರಾಗಿಲ್ಲ, ಬದಲಿಗೆ ನ್ಯಾಯಾಂಗ ಬಂಧನದಲ್ಲಿ ಇರುವುದನ್ನು ಖಚಿತ ಪಡಿಸಿಕೊಳ್ಳಲಷ್ಟೇ ಬಯಸುವುದಾಗಿ ಹೇಳುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

ವಶಕ್ಕೆ ಪಡೆದುಕೊಂಡು ತನಿಖೆ ನಡೆಸುವುದಕ್ಕೆ ಮುನ್ನ ಕೆಲವೊಂದು ಅಂಶಗಳನ್ನು ಪರಿಶೀಲಿಸಬೇಕಾದ ಅಗತ್ಯವಿದೆ. ಚಿದಂಬರಂ ಅವರನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುವುದಕ್ಕೆ ಮುನ್ನ ಆರು ಮಂದಿಯನ್ನು ತನಿಖೆಗೆ ಗುರಿಪಡಿಸಬೇಕಾದ ಅಗತ್ಯ ಇದೆ. ಅದು ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿದ್ದು, ಈ ಹಣ ದೇಶದಿಂದ ಆಚೆಗೆ ತಲುಪಿದೆ ಎಂದು ಸಾಲಿಸಿಟರ್ ಜನರಲ್ ತುಷಾರ ಮೆಹ್ತ ನುಡಿದರು.

ಆರೋಪಿಯು ತನಿಖೆಗೆ ಮಾರ್ಗದರ್ಶನ ಮಾಡಿ ತತ್ ಕ್ಷಣವೇ ತನ್ನನ್ನು ವಶಕ್ಕೆ ಪಡೆಯುವಂತೆ ಆದೇಶ ನೀಡುವಂತಿಲ್ಲ, ಹಾಗೆ ಮಾಡುವುದರಿಂದ ತನಿಖಾ ಸಂಸ್ಥೆಯ ವಿವೇಚನಾಧಿಕಾರ ಮೊಟಕುಗೊಳ್ಳುತ್ತದೆ. ಆಗಸ್ಟ್ ೨೧ಕ್ಕೆ ಮೊದಲು ಅವರನ್ನು ಬಂಧಿಸಬೇಕಾದ ಅಗತ್ಯವಿದೆ ಎಂದು ನಂಬಲು ಕಾರಣಗಳಿದ್ದವು. ಅದು ಈಗಲೂ ಇದೆ. ಬಂಧನದ ಬಳಿಕ ಸಂಗ್ರಹಿಸಲಾದ ಸಾಕ್ಷ್ಯಗಳನ್ನು ಎದುರು ಇಟ್ಟು ಅವರ ತನಿಖೆ ನಡೆಸಬೇಕಾಗುತ್ತದೆ ಎಂದು ಮೆಹ್ತ ವಾದಿಸಿದರು.

ಸೆಪ್ಟೆಂಬರ್ ೫ರಂದು ಚಿದಂಬರಂ ಅವರನ್ನು ಸಿಬಿಐ ವಶದಿಂದ ಸೆಪ್ಟೆಂಬರ್ ೧೯ರವರೆಗೆ ೧೪ ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು.

ಅದೇ ದಿನ, ಚಿದಂಬರಂ ಅವರು ಜಾರಿ ನಿರ್ದೇಶನಾಲಯದ ಮುಂದೆ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಣಾಗಲು ಕೋರಿ ಸಲ್ಲಿಸಿದ ಮನವಿ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿತ್ತು. ಇದೇ ವಿಚಾರವಾಗಿ ಬಂಧನಪೂರ್ವ ಜಾಮೀನು ನಿರಾಕರಿಸಿ ದೆಹಲಿ ಹೈಕೋರ್ಟ್ ಆಗಸ್ಟ್ ೨೦ರಂದು ನೀಡಿದ್ದ ನೀಡಿದ್ದ ತೀರ್ಪಿನ ವಿರುದ್ಧ ಚಿದಂಬರಂ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

೨೦೦೭ರಲ್ಲಿ ಚಿದಂಬರಂ ಅವರು ವಿತ್ತ ಸಚಿವರಾಗಿದ್ದ ಅವಧಿಯಲ್ಲಿ ಐಎನ್‌ಎಕ್ಸ್ ಮೀಡಿಯಾ ಸಮೂಹಕ್ಕೆ ೩೦೫ ಕೋಟಿ ರೂಪಾಯಿ ವಿದೇಶೀ ಹಣ ಸ್ವೀಕರಿಸಿಲು ವಿದೇಶೀ ಹೂಡಿಕೆ ಅಭಿವದ್ಧಿ ಮಂಡಳಿಯು (ಎಫ್‌ಐಪಿಬಿ) ನೀಡಿದ್ದ ಅನುಮತಿಯ ಹಿಂದೆ ನಡೆದಿವೆ ಎಂದು ಆಪಾದಿಸಲಾದ ಅಕ್ರಮಗಳ ಬಗ್ಗೆ ಸಿಬಿಐ ೨೦೧೭ರ ಮೇ ೧೫ರಂದು ಎಫ್‌ಐಆರ್ ದಾಖಲಿಸಿತ್ತು.

ಆ ಬಳಿಕ ೨೦೧೭ರಲ್ಲಿ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು.

September 13, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, News, Politics, Spardha | , , , , , | Leave a comment

ಪಿಕ್ಚರ್ ಅಭೀ ಬಾಕಿ ಹೈ:  ಪ್ರಧಾನಿ ನರೇಂದ್ರ ಮೋದಿ !

12 Modi-in-ranchi100 ದಿನಗಳ ಕಾರ್ಯ ನಿರ್ವಹಣೆ ಟ್ರೇಲರ್ ಮಾತ್ರ…

ರಾಂಚಿ (ಜಾರ್ಖಂಡ್): ಕಾಂಗ್ರೆಸ್ ನಾಯಕ ಹಾಗೂ ಕೇಂದ್ರದ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರ ವಿರುದ್ಧ 2019 ಸೆಪ್ಟೆಂಬರ್ 12ರ ಗುರುವಾರ ಇಲ್ಲಿ ಪರೋಕ್ಷ ಆಕ್ರಮಣ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಸರ್ಕಾರವು ಭ್ರಷ್ಟರನ್ನುಜೈಲಿಗೆ ಅಟ್ಟುವುದಾಗಿ ಪ್ರತಿಜ್ಞೆ ಮಾಡಿದೆ, ಕೆಲವರು ಈಗಾಗಲೇ ಸೆರೆಮನೆಗೆ ಹೋಗಿದ್ದಾರೆ. ಆದರೆ ಪೂರ್ತಿ ಚಿತ್ರ ಇನ್ನೂ ಬರಲು ಬಾಕಿ ಇದೆ. ಈಗಿನದ್ದು ತಮ್ಮ ಸರ್ಕಾರದಿಂದ ೧೦೦ ದಿನಗಳ ಕಾರ್ಯ ನಿರ್ವಹಣೆಯ ಟ್ರೇಲರ್ ಮಾತ್ರ ಎಂದು ಗುಡುಗಿದರು.

‘ನಮ್ಮ ಹೋರಾಟ ಭ್ರಷ್ಟಾಚಾರ ಮತ್ತು ಅಂತಹ ಚಟುವಟಿಕೆಗಳಲ್ಲಿ ಶಾಮೀಲಾಗಿರುವವರ ವಿರುದ್ಧ. ೧೦೦ ದಿನಗಳಲ್ಲಿ ನಾವು ಅಂತಹ ವ್ಯಕ್ತಿಗಳ ವಿರುದ್ಧ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ಅವರಲ್ಲಿ ಕೆಲವರನ್ನು ಜೈಲಿಗೆ ಕಳುಹಿಸಲಾಗಿದೆ’ ಎಂದು ಪ್ರಧಾನಿ ಮೋದಿ ಜಾರ್ಖಂಡ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು. ಭ್ರಷ್ಟಾಚಾರವನ್ನು ಪೂರ್ತಿಯಾಗಿ ಕೊನೆಗೊಳಿಸುವುದರತ್ತ ತಮ್ಮ ಸರ್ಕಾರ ಗಮನ ಹರಿಸಿದೆ ಎಂದು ಅವರು ನುಡಿದರು.

ಜಾರ್ಖಂಡ್ ವಿಧಾನಸಭೆಗೆ ಕೆಲ ತಿಂಗಳುಗಳಲ್ಲಿ ನಡೆಯಲಿರುವ ಚುನಾವಣೆಯ ಹಿನ್ನೆಲೆಯಲ್ಲಿ ಹಲವಾರು ಕಾರ್‍ಯಕ್ರಮಗಳಿಗೆ ಚಾಲನೆ ನೀಡಿದ ಸಮಾರಂಭದಲ್ಲಿ ಪ್ರಧಾನಿ ಮಾತನಾಡಿದರು.

‘ಹಿಂದೆ ಕೆಲವರು ತಾವು ಕಾನೂನು ಮತ್ತು ನ್ಯಾಯಾಲಯಗಳಿಗೆ ಅತೀತರು ಎಂಬುದಾಗಿ ಭಾವಿಸಿದ್ದರು. ಆದರೆ ನಮ್ಮ ಸರ್ಕಾರವು ಭ್ರಷ್ಟಾಚಾರಕ್ಕೆ ಕೊನೆ ಹಾಡಲು ನಿರ್ಧರಿಸಿದೆ. ಹೀಗಾಗಿ ಕಾನೂನು, ನ್ಯಾಯಾಲಯಗಳಿಗೆ ಅತೀತರು ತಾವು ಎಂಬುದಾಗಿ ಭಾವಿಸಿದ್ದವರು ಈಗ ಜಾಮೀನಿಗಾಗಿ ನ್ಯಾಯಾಲಯಗಳಿಗೆ ಅಂಡಲೆಯುತ್ತಿದ್ದಾರೆ’ ಎಂದು ಮೋದಿ ಹೇಳಿದರು.

‘ಭ್ರಷ್ಟಾಚಾರದ ವಿರುದ್ಧ ಸಾಮೂಹಿಕ ಕಾರ್ಯಾಚರಣೆ ಆರಂಭವಾಗಿದೆ. ಸಾರ್ವಜನಿಕರನ್ನು ಲೂಟಿ ಮಾಡಲು ಯತ್ನಿಸುವವರಿಗೆ ಸೂಕ್ತ ಜಾಗವನ್ನು ತೋರಿಸಲಾಗುವುದು’ ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರನ್ನು ಐಎನ್ ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ ೨೧ರಂದು ಕೇಂದ್ರೀಯ ತನಿಖಾ ದಳವು (ಸಿಬಿಐ) ನವದೆಹಲಿಯ ಅವರ ನಿವಾಸದಲ್ಲಿ ಬಂಧಿಸಿತ್ತು. ೨೦೦೭ರಲ್ಲಿ ಐಎನ್‌ಎಕ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ವಿದೇಶೀ ಹೂಡಿಕೆಗೆ ಸರ್ಕಾರ ಅನುಮತಿ ನೀಡಿದ ಸಂಬಂಧವಾಗಿ ನಡೆದಿದ್ದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಇದು. ಆಗ ಚಿದಂಬರಂ ಅವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದರು.

ಕೇಂದ್ರೀಯ ತನಿಖಾ ದಳವು ತನಿಖೆ ನಡೆಸುತ್ತಿರುವ ಐಎನ್‌ಎಕ್ಸ್  ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ವಾರ ಚಿದಂಬರಂ ಅವರನ್ನು ೧೪ ದಿನಗಳ ಅವಧಿಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಿ ತಿಹಾರ್ ಸೆರೆಮನೆಗೆ ಕಳುಹಿಸಲಾಗಿತ್ತು. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರು ತಮ್ಮ ಮೇಲಿನ ಎಲ್ಲ ಆಪಾದನೆಗಗಳನ್ನೂ ಬಲವಾಗಿ ಅಲ್ಲಗಳೆದು, ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್‌ಡಿಎ) ’ರಾಜಕೀಯ ಸೇಡಿನ’ ದುರುದ್ದೇಶಪೂರಿತ ಕ್ರಮ ಇದು ಎಂದು ಆಪಾದಿಸಿದ್ದರು.

ಮೋದಿ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಎರಡನೇ ಅವಧಿಗೆ ಪುನರಾಯ್ಕೆಯಾಗಿ ಅಧಿಕಾರಕ್ಕೆ ಮರಳಿದ ಬಳಿಕ ಕಳೆದ ಮೂರು ತಿಂಗಳ ಅವಧಿಯಲ್ಲಿ ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ಭ್ರಷ್ಟಚಾರ ನಿಗ್ರಹ ಹಾಗು ಹಣ ವರ್ಗಾವಣೆ ವಿರೋಧಿ ಪ್ರಕರಣಗಳನ್ನು ಆಧರಿಸಿ ಹಲವಾರು ಉನ್ನತ ರಾಜಕೀಯ ನಾಯಕರ ವಿರುದ್ಧ ದಾಳಿಗಳನ್ನು ನಡೆಸಿತ್ತು.

ನೈಜ ವಿಷಯಗಳಿಂದ ಜನರ ಗಮನವನ್ನು ಬೇರಡೆಗೆ ಸೆಳೆಯುವ ಸಲುವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ತಮ್ಮ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿದ್ದವು.

ಇದಕ್ಕೆ ಪ್ರತಿಯಾಗಿ  ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಾಂಗ್ರೆಸ್ ಮತ್ತು ಇತರ ಪಕ್ಷಗಳನ್ನು ಚಿದಂಬರಂ ಅವರನ್ನು ರಕ್ಷಿಸುತ್ತಿರುವುದಕ್ಕಾಗಿ ಟೀಕಿಸಿತು.

ಕಾನೂನು ಜಾರಿ ಸಂಸ್ಥೆಗಳು ತಮ್ಮ ಕೆಲಸ ಮಾಡುತ್ತಿವೆ ಮತ್ತು ನ್ಯಾಯಾಲಯಗಳು ಅವುಗಳ ಕೆಲಸ ಮಾಡುತ್ತಿವೆ. ಆದರೆ, ಕಾಂಗ್ರೆಸ್ ನಾಯಕತ್ವವು  ಭ್ರಷ್ಟಾಚಾರವನ್ನು ಕ್ರಾಂತಿಯನ್ನಾಗಿ ಮಾಡಲು ಯತ್ನಿಸುತ್ತಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದರು.

ಪುನರಾಯ್ಕೆಯಾದ ತಮ್ಮ ಸರ್ಕಾರವು ಸಂಸತ್ತಿನ ಚೊಚ್ಚಲ ಅಧಿವೇಶನದಲ್ಲಿಯೇ ತ್ರಿವಳಿ ತಲಾಖ್ ಮಸೂದೆಗೆ ಒಪ್ಪಿಗೆ ಪಡೆದುಕೊಂಡದ್ದನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ಮುಸ್ಲಿಮ್ ಮಹಿಳೆಯರ ಘನತೆ ರಕ್ಷಿಸುವ ವಚನಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರದೇಶದ ಅಭಿವೃದ್ಧಿ ಗುರಿಯನ್ನು ಇಟ್ಟುಕೊಂಡು ಎರಡು ನೂತನ ಕೇಂದ್ರಾಡಳಿತ ಪ್ರದೇಶಗಳನ್ನು ರಚಿಸಲಾಗಿದೆ. ಈ ಪ್ರದೇಶಗಳ ಅಭಿವೃದ್ಧಿಯ ಕಾರ್‍ಯವನ್ನು ಎನ್‌ಡಿಎ ೨ ಸರ್ಕಾರವು ತನ್ನ ಕಾರ್ಯ ಆರಂಭಿಸಿದ ಮೊದಲ ೧೦೦ ದಿನಗಳಲ್ಲಿಯೇ ಆರಂಭಿಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಜಾರ್ಖಂಡ್‌ನಲ್ಲಿ ಹಿಂದೆ ಪಾರದರ್ಶಕ ಆಡಳಿತ ಇರಲಿಲ್ಲ. ಆಗ ಹಲವಾರು ಹಗರಣಗಳನ್ನು ರಾಜ್ಯ ಕಂಡಿತು, ಆದರೆ ಮುಖ್ಯಮಂತ್ರಿ ರಘುಬರ ದಾಸ್ ಅವರು ಕಳೆದ ಐದು ವರ್ಷಗಳಲ್ಲಿ ಆಡಳಿತದಲಿ ಪಾರದರ್ಶಕತೆ ತರಲು ಯತ್ನಿಸಿದ್ದಾರೆ ಎಂದು ಮೋದಿ ನುಡಿದರು.

ಸರ್ಕಾರವು ಆರಂಭಿಸಿದ ವಿವಿಧ ಕಲ್ಯಾಣ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಪಟ್ಟಿ ಮಾಡಿದ ಪ್ರಧಾನಿ ಮೋದಿ, ದೇಶಾದ್ಯಂತ ಕಳೆದ ಒಂದು ವರ್ಷದ ಅವಧಿಯಲ್ಲಿ  ೪೪ ಲಕ್ಷ ಮಂದಿ ಆಯುಷ್ಮಾನ್ ಭಾರತ ಆರೋಗ್ಯ ವಿಮಾ ಯೋಜನೆಯ ಅಡಿಯಲ್ಲಿ ಸವಲತ್ತುಗಳನ್ನು ಪಡೆದಿದ್ದಾರೆ ಎಂದು ಹೇಳಿದರು. ವಿಶ್ವದಲ್ಲೇ ದೊಡ್ಡ ಆರೋಗ್ಯ ವಿಮಾ ಯೋಜನೆ ಎಂಬುದಾಗಿ ಖ್ಯಾತಿ ಪಡೆದಿರುವ ಆಯುಷ್ಮಾನ್ ಭಾರತ ಯೋಜನೆಗೆ ಕಳೆದ ವರ್ಷ ಪ್ರಧಾನಿಯವರು  ಜಾರ್ಖಂಡಿನಲ್ಲಿ  ಚಾಲನೆ ನೀಡಿದ್ದರು.

ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ೨ ಕೋಟಿಗೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದ್ದು, ಇನ್ನೂ ಎರಡು ಕೋಟಿ ಮೀರಿದ ಮನೆಗಳು ದೇಶದಲ್ಲಿ ನಿರ್ಮಾಣಗೊಳ್ಳುತ್ತಿವೆ. ೧೦ ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ಉಜ್ವಲ ಯೋಜನಾ ಅಡಿಯಲ್ಲಿ ೮ ಕೊಟಿ ಫಲಾನುಭವಿಗಳಿಗೆ ಎಲ್‌ಪಿಜಿ ಸಂಪರ್ಕವನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದು ಮೋದಿ ಹೇಳಿದರು.

ಬಾಂಗ್ಲಾದೇಶ, ನೇಪಾಳ ಮತ್ತು ಈಶಾನ್ಯ ಪ್ರದೇಶಗಳನ್ನು ಸಂಪರ್ಕಿಸಲಿರುವ ಸಾಹಿಬ್‌ಗಂಜ್‌ನ ಬಹುಮಾದರಿ ಟರ್ಮಿನಲ್ ಜಾರ್ಖಂಡ್‌ಗೆ ಹೊಸ ಅಸ್ಮಿತೆಯನ್ನು ನೀಡಲಿದೆ ಎಂದು, ಹಲವಾರು ಯೋಜನೆಗಳನ್ನು ಉದ್ಘಾಟಿಸುತ್ತಾ ಪ್ರಧಾನಿ ವಿವರಿಸಿದರು.

ವ್ಯವಸಾಯ, ಸಣ್ಣ ವ್ಯಾಪಾರಿ ಘಟಕದಂತಹ ಅಸಂಘಟಿತ ರಂಗದಲ್ಲಿ ಕೆಲಸ ಮಾಡುತ್ತಿರುವ ಜನರಿಗಾಗಿ ಪಿಂಚಣಿ ಯೋಜನೆಗಳನ್ನು ಆರಂಭಿಸಲಾಗಿದೆ. ಬುಡಕಟ್ಟು ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸರ್ಕಾರವು ಪ್ರತಿವರ್ಷ ಒಂದು ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು.

ವಿಧಾನಸಭೆಯ ನೂತನ ಕಟ್ಟಡ, ಬಹುಮಾದರಿ ಕಾರ್ಗೋ ಟರ್ಮಿನಲ್‌ಗಳನ್ನೂ ಅವರು ಉದ್ಘಾಟಿಸಿದರು.

September 12, 2019 Posted by | ಪ್ರಧಾನಿ, ಭಾರತ, ರಾಷ್ಟ್ರೀಯ, ಲೋಕಸಭೆ, ಸಂಸತ್ ಭವನ, Flash News, General Knowledge, India, Nation, News, Politics, Prime Minister, Spardha | , , , , , , , , , | Leave a comment

೨೦೨೨ರ ವೇಳೆಗೆ ಹೊಸ ಸಂಸತ್ ಭವನ

12 samsath bhavan೭೫ನೇ ಸ್ವಾತಂತ್ರ್ಯೋತ್ಸವಕ್ಕೆ ಹೊಸ ಕಟ್ಟಡ

ನವದೆಹಲಿ: ಭಾರತವು ೭೫ನೇ ಸ್ವಾತಂತ್ರ್ಯೋತ್ಸವ ಆಚರಿಸಲಿರುವ ೨೦೨೨ರ ಆಗಸ್ಟ್ ೧೫ರ ವೇಳೆಗೆ ಹೊಸ ಸಂಸತ್ ಭವನ ಕಟ್ಟಡವನ್ನು – ಸಂಪೂರ್ಣ ಹೊಸತು ಅಥವಾ ಹಾಲಿ ಚಾರಿತ್ರಿಕ ಕಟ್ಟಡದ ನವೀಕೃತ ರೂಪವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ನೂತನ ಸಂಸತ್ ಭವನ ಕಟ್ಟಡದ ಪ್ರಸ್ತಾಪಕ್ಕಾಗಿ ಮನವಿಯನ್ನು ಸೆಪ್ಟೆಂಬರ್ ೨ರಂದು ಮಾಡಲಾಗಿದ್ದು, ಸಂಸತ್ತಿನ ನವೀಕೃತ ಆವೃತ್ತಿಗಾಗಿ ವಿನ್ಯಾಸ ಮತ್ತು  ಕಲ್ಪನೆಗಳನ್ನು ನೀಡುವಂತೆ ವಿನ್ಯಾಸ ಮತ್ತು ವಾಸ್ತುಶಿಲ್ಪ ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮೂಲಗಳು  2019 ಸೆಪ್ಟೆಂಬರ್  12ರ ಗುರುವಾರ ತಿಳಿಸಿದವು.

ಸಂಸತ್ ಕಟ್ಟಡದ ಮರು ಅಭಿವೃದ್ಧಿಗೆ ಮತ್ತು ೩ ಕಿಮೀ ದೂರದಲ್ಲಿ ಕೇಂದ್ರ ಸರ್ಕಾರದ ಎಲ್ಲ ಸರ್ಕಾರಿ ಕಚೇರಿಗಳನ್ನು ಹೊಂದಿದ ಹೊಸ ಸಾಮಾನ್ಯ ಸಚಿವಾಲಯ ಕಟ್ಟಡಕ್ಕಾಗಿ ಮುನ್ನೋಟವನ್ನು ರೂಪಿಸುವಂತೆ ವಿನ್ಯಾಸ ವಾಸ್ತುಶಿಲ್ಪ ಕಂಪೆನಿಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ಹೇಳಿವೆ. ಶಾಸ್ತ್ರಿಭವನದಂತಹ ಹಾಲಿ ಕಟ್ಟಡಗಳನ್ನು ಕೆಡವಿಹಾಕಿ ಅಲ್ಲಿ ನೂತನ ಕೇಂದ್ರ ಸರ್ಕಾರಿ ಸಚಿವಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ಹೇಳಿದವು.

ಲೋಕಸಭೆಯ ವಿಸ್ತರಿತ ಮುಂಗಡಪತ್ರ ಅಧಿವೇಶನದ ಕಾಲದಲ್ಲಿ ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರು ಆಧುನಿಕ ಸವಲತ್ತುಗಳನ್ನು ಅಳವಡಿಸುವ ಸಲುವಾಗಿ ಸದನದ ಕಟ್ಟಡವನ್ನು ನವೀಕರಿಸುವ ಬಗ್ಗೆ ಪರಿಶೀಲನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ರಾಜ್ಯಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರೂ ಇಂತಹುವುದೇ ಮನವಿ ಮಾಡಿದ್ದರು.

September 12, 2019 Posted by | ಭಾರತ, ರಾಷ್ಟ್ರೀಯ, ಲೋಕಸಭೆ, ಸಂಸತ್ ಭವನ, Flash News, General Knowledge, India, Nation, News, Spardha | , , , | Leave a comment

ಡಿಕೆ ಶಿವಕುಮಾರ್ ಪುತ್ರಿಗೆ ೭ ಗಂಟೆ ಇಡಿ ಡ್ರಿಲ್

12 aishwarya--dk-shivakumar-s-daughterಶುಕ್ರವಾರ ಮತ್ತೆ ಐಶ್ವರ್ಯಾ ಹಾಜರಿಗೆ ಸಮನ್ಸ್

ನವದೆಹಲಿ: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್  ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2019 ಸೆಪ್ಟೆಂಬರ್  12ರ ಗುರುವಾರ ಏಳು ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದರು.

ಅಕ್ರಮ ಆಸ್ತಿ ಹಾಗೂ ಕೆಫೆ ಕಾಫಿ ಡೇ ಸಂಸ್ಥೆ  ಜೊತೆಗೆ ನಡೆಸಿದ ಹಣದ ವಹಿವಾಟಿನ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಐಶ್ವರ್ಯಾ ಅವರನ್ನು ಪ್ರಶ್ನಿಸಿದರು ಎನ್ನಲಾಗಿದ್ದು, ಶುಕ್ರವಾರ ಬೆಳಗ್ಗೆ ಮತ್ತೆ ೧೧ ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ ಜತೆ ವ್ಯವಹಾರ ನಡೆಸಿದ್ದ ಐಶ್ವರ್ಯಾ ೨೦ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಲೇವಾದೇವಿ ನಡೆಸಿದ್ದರು ಎನ್ನಲಾಗಿದೆ.

ಇದಲ್ಲದೇ ಮತ್ತೊಂದು ಕಂಪನಿಗೂ ಐಶ್ವರ್ಯಾ ಖಾತೆಯಿಂದ ಕೋಟ್ಯಂತರ ರೂ. ವಹಿವಾಟು ನಡೆಸಲಾಗಿತ್ತು ಎಂದು ಹೇಳಲಾಗಿದೆ.

ಈ ವ್ಯವಹಾರದ ನಂತರ ಕೆಲವೇ ದಿನದಲ್ಲಿ ಮತ್ತೆ ಐಶ್ವರ್ಯಾ ಖಾತೆಗೆ ಕೋಟಿ ಕೋಟಿ ರೂ. ಜಮೆಯಾಗಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇತ್ತೀಚೆಗೆ ಸಮನ್ಸ್ ಜಾರಿ ಮಾಡಿ ಐಶ್ವರ್ಯಾ ವಿಚಾರಣೆಗೆ ಸೂಚನೆ ನೀಡಿದ್ದರು.

ಅದರಂತೆ ಗುರುವಾರ ಬೆಳಗ್ಗೆ ಲೋಕನಾಯಕ ಭವನದಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಆಗಮಿಸಿದ್ದರು. ಅಲ್ಲಿ ಐಶ್ವರ್ಯಾರನ್ನು ಪ್ರಶ್ನಿಸಲಾಯಿತು.

ಸುಮಾರು ೭ ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಯಿತು. ಮಧ್ಯಾಹ್ನದ ಊಟವನ್ನು ಕೂಡಾ ಅಲ್ಲಿಗೇ ತರಿಸಲಾಗಿತ್ತು. ಸಂಜೆ ೭.೩೦ಕ್ಕೆ ವಿಚಾರಣೆ ಕೊನೆಗೊಂಡಿತು.

ಲೋಕನಾಯಕ ಭವನದಲ್ಲಿರುವ ಇಡಿ ಕಚೇರಿಯಿಂದ ಹೊರಬಂದ ಐಶ್ವರ್ಯಾ ನಂತರ ಸಂಸದ ಡಿಕೆ ಸುರೇಶ್ ನಿವಾಸಕ್ಕೆ ತೆರಳಿದರು.

ಡಿಕೆ ಶಿವಕುಮಾರ್ ಅವರ ನಿವಾಸ, ಕಚೇರಿಗಳ ಮೇಲೆ ೨೦೧೭ರ ಆಗಸ್ಟ್ ೧ರಂದು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಶಿವಕುಮಾರ್ ಅವರಿಗೆ ಸೇರಿದ್ದ ಒಟ್ಟು ೫೦ಕ್ಕೂ ಹೆಚ್ಚು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ನವದೆಹಲಿಯ ಶಿವಕುಮಾರ್ ನಿವಾಸದ ಮೇಲೂ ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ೮.೯ ಕೋಟಿ ರೂ. ನಗದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿಕೆಶಿ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದ್ದಾರೆ.

September 12, 2019 Posted by | ಕರ್ನಾಟಕ, ಬೆಂಗಳೂರು, ಭಾರತ, ರಾಜ್ಯ, ರಾಷ್ಟ್ರೀಯ, Bengaluru, Bangalore,, Flash News, General Knowledge, India, Nation, News, Politics, Spardha | , , , , | Leave a comment

ನಾವೂ ನಿಮ್ಮ ಜೊತೆಗಿದ್ದೇವೆ…

ನಾವೂ ನಿಮ್ಮ ಜೊತೆಗಿದ್ದೇವೆ…


ಗುರುವಾರ 11 ಮಾರ್ಚ್ 2010ರಂದು ‘ಪ್ರಜಾವಾಣಿ‘, ‘ವಿಜಯ ಕರ್ನಾಟಕ‘ ಸೇರಿದಂತೆ ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ಗಮನಾರ್ಹ ಪತ್ರವೊಂದು ಪ್ರಕಟವಾಯಿತು. ಬಹುಶಃ ಪತ್ರಿಕೆಗಳು ಇಂತಹ ಮಹತ್ವದ ವಿಚಾರಕ್ಕೆ ಈ ರೀತಿಯಾಗಿ ಸ್ಪಂದಿಸಿ ಮಹತ್ವ ನೀಡಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎನ್ನಬಹುದು. ಅದಕ್ಕೂ ಹೆಚ್ಚಾಗಿ ಪತ್ರಿಕೆಗಳು ಮಾಡಲೇಬೇಕಾಗಿದ್ದ ಕೆಲಸ ಇದು.

ರಾಜ್ಯದ ಮುಖ್ಯಮಂತ್ರಿಗಳಿಗೆ ರಾಜ್ಯದ ವಿದ್ಯುತ್ ಸಮಸ್ಯೆಯ ಬಗ್ಗೆ ಗಮನ ಸೆಳೆದು ಬರೆದ ಈ ಪತ್ರಕ್ಕೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ಗಣ್ಯರು ಸಹಿ ಹಾಕಿದ್ದಾರೆ.

* ಡಾ. ಜಿ. ಎಸ್. ಶಿವರುದ್ರಪ್ಪ, ಕವಿ * ನ್ಯಾ. ಎಂ. ರಾಮಾ ಜೋಯಿಸ್, ರಾಜ್ಯಸಭಾ ಸದಸ್ಯರು * ಡಾ. ಚಂದ್ರಶೇಖರ ಕಂಬಾರ, ಸಾಹಿತಿ * ಡಾ. ರಾಜೀವ ತಾರಾನಾಥ, ಸಂಗೀತಗಾರರು * ಪ್ರೊ. ಬಿ.ಎಂ. ಕುಮಾರಸ್ವಾಮಿ, ರಾಷ್ಟ್ರೀಯ ಸಹ ಸಂಚಾಲಕರು, ಸ್ವದೇಶಿ ಜಾಗರಣ ಮಂಚ್ * ನಾಗೇಶ ಹೆಗಡೆ, ಪತ್ರಕರ್ತ * ಎ.ಎನ್. ಯೆಲ್ಲಪ್ಪ ರೆಡ್ಡಿ, ಅರಣ್ಯ ಅಧಿಕಾರಿ (ನಿವೃತ್ತ) *ಬರಗೂರು ರಾಮಚಂದ್ರಪ್ಪ, ಸಾಹಿತಿ *ಮೇಜರ್ ಜನರಲ್ (ನಿವೃತ್ತ) ಎಸ್.ಜಿ. ವೊಂಬತ್‌ಕೆರೆ, ಅಧ್ಯಕ್ಷರು, ಮೈಸೂರು ಗ್ರಾಹಕರ ಪರಿಷತ್ * ವೈ.ಬಿ.ರಾಮಕೃಷ್ಣ, ಅಧ್ಯಕ್ಷರು, ಸಮಗ್ರ ವಿಕಾಸ * ಶಂಕರ ಶರ್ಮ, ವಿದ್ಯುತ್ ರಂಗದ ವಿಶ್ಲೇಷಕರು *ಜಿ. ಕೃಷ್ಣ ಪ್ರಸಾದ, ಸಹಜ ಸಮೃದ್ಧ ಸಾವಯವ ಕೃಷಿ ಸಮೂಹ *ಬೇಳೂರು ಸುದರ್ಶನ, ಫ್ರೀಲ್ಯಾನ್ಸ್ ಪತ್ರಕರ್ತ-ಪತ್ರಕ್ಕೆ ಸಹಿ ಹಾಕಿದ ಎಲ್ಲ ಗಣ್ಯರ ಜೊತೆಗೆ ಕೇವಲ ಅವರಷ್ಟೇ ಅಲ್ಲ ಕರ್ನಾಟಕದ
ರೈತರು ಸೇರಿದಂತೆ ಎಲ್ಲ ವರ್ಗಗಳ ಜನರೂ ಇದ್ದಾರೆ ಎಂಬುದನ್ನು ಮುಖ್ಯಮಂತ್ರಿಗಳು ಗಮನಿಸಬೇಕು.

ಮುಖ್ಯಮಂತ್ರಿಗಳೇ ಜನರ ದೂರುಗಳಿಗೆ ಸ್ಪಂದಿಸುವ ಗುಣ ತಮ್ಮದು ಎಂದು ಹಲವಾರು ಬಾರಿ ನೀವು ನಡವಳಿಕೆಗಳ ಮೂಲಕ ತೋರಿಸಿಕೊಟ್ಟಿದ್ದೀರಿ. ಇಂದು ವಿದ್ಯುತ್ತಿನ ಅಭಾವದಿಂದ ರೈತರಿಂದ ಹಿಡಿದು ಉದ್ಯಮಿಗಳವರೆಗೆ, ವಿದ್ಯಾರ್ಥಿಗಳಿಂದ ಹಿಡಿದು ವರ್ತಕರವರೆಗೆ ಎಲ್ಲ ವರ್ಗದ ಜನರೂ ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ತಮಗೆ ಬರೆದ ಈ ಬಹಿರಂಗ ಪತ್ರ ಸಮಸ್ಯೆಯ ಚಿತ್ರ ತೆರೆದು ಇಡುವುದರ ಜೊತೆಗೆ ಮಾಡಬೇಕಾದ ಕಾರ್ಯದ ಬಗೆಗೂ ಬೆಳಕು ಚೆಲ್ಲಿದೆ. ಜೈವಿಕ ಇಂಧನ, ಸೌರಶಕ್ತಿ, ಪವನಶಕ್ತಿ, ಕಿರು ಇಂಧನ ಘಟಕಗಳ ಸ್ಥಾಪನೆಯಂತಹ ವಿಚಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯದ ಬಗ್ಗೆ ಪತ್ರ ಬೊಟ್ಟು ಮಾಡಿದೆ.

ಇಲ್ಲಿ ಈ ಪತ್ರಗಳಿಗೆ ಮತ್ತೊಮ್ಮ ಕೊಂಡಿ (LINK) ಸಂಪರ್ಕ ನೀಡಿ, ತಮ್ಮ ಗಮನವನ್ನು ಪುನಃ ಸೆಳೆಯಲು ಸ್ಪರ್ಧಾ ಯತ್ನಿಸುತ್ತಿದೆ. ಈ ಬಗ್ಗೆ ತಾವು ತತ್ ಕ್ಷಣವೇ ಕ್ರಿಯಾಶೀಲರಾಗಬೇಕಾಗಿ ಮನವಿ ಮಾಡುತ್ತದೆ.

ನೆತ್ರಕೆರೆ ಉದಯಶಂಕರ

March 12, 2010 Posted by | Agriculture, Education, Journalism, News, Science, Spardha, Uncategorized | , , | 1 Comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ