SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಜಮ್ಮು-ಕಾಶ್ಮೀರಕ್ಕೆ ಖುದ್ದು ಭೇಟಿ: ಸಿಜೆಐ ಗೊಗೋಯಿ ಅಪರೂಪದ ಪ್ರಕಟಣೆ


This slideshow requires JavaScript.

ನಿರ್ಬಂಧಗಳ ಬಗ್ಗೆ ವರದಿಗೆ ಸಿಜೆಗೆ ನಿರ್ದೇಶನ,
ವರದಿ ವ್ಯತಿರಿಕ್ತವಾದರೆ ಕಠಿಣ ಕ್ರಮದ ಎಚ್ಚರಿಕೆ

ನವದೆಹಲಿ: ಜನರು ಹೇಳುವಂತೆ ಕಾಶ್ಮೀರದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿ ಇರುವುದೇ ಹೌದಾದರೆ, ನಾನೇ ಶ್ರೀನಗರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ, ಆದರೆ ಹಾಗೆ ಪರಿಶೀಲಿಸಿದಾಗ ಪರಿಸ್ಥಿತಿ ವಕೀಲರ ಹೇಳಿಕೆಗೆ ವ್ಯತಿರಿಕ್ತವಾಗಿದ್ದರೆ ಅವರು ಕಠಿಣ ಕ್ರಮ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು 2019 ಸೆಪ್ಟೆಂಬರ್ 16ರ ಸೋಮವಾರ ಸುಪ್ರೀಂಕೋರ್ಟಿನಲ್ಲಿ ಎಚ್ಚರಿಕೆ ನೀಡಿದರು.

ಅರ್ಜಿಯೊಂದರ ವಿಚಾರಣೆ ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಕೋರ್ಟ್ ಮೊರೆ ಹೋಗಲು ಕೂಡಾ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಕಾಶ್ಮೀರ ಟೈಮ್ಸ್ ಪತ್ರಿಕೆ ಸಂಪಾದಕಿ ಅನುರಾಧ ಭಾಸಿನ್ ಮತ್ತು  ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಏನಾಕ್ಷಿ ಗಂಗೂಲಿ ಹಾಗೂ ಪ್ರೊಫೆಸರ್ ಶಾಂತ ಸಿನ್ಹ ಅವರು ನ್ಯಾಯಾಲಯದ ಮುಂದಿಟ್ಟ ಪ್ರತಿಪಾದನೆಗೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿಯವರು ಈ ಮಾತುಗಳನ್ನು ಆಡಿದ ಅಪರೂಪದ ವಿದ್ಯಮಾನ ಘಟಿಸಿತು.

ಅಗತ್ಯ ಬಿದ್ದರೆ ಜಮ್ಮು – ಕಾಶ್ಮೀರಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅವಲೋಕನ ಮಾಡುವೆ ಎಂದು ನುಡಿದ ಅವರು ನ್ಯಾಯಾಲಯದಲ್ಲಿ ದಾವೆ ಹೂಡಲೂ ಸಾಧ್ಯವಾಗದ ಪರಿಸ್ಥಿತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೆಯೇ ಎಂಬುದಾಗಿ ಪ್ರಶ್ನಿಸಿದರು. ಪರಿಸ್ಥಿತಿ ಹೀಗೆ ಇರುವುದೇ ಆಗಿದ್ದಲ್ಲಿ ಅದು ಅತ್ಯಂತ ಗಂಭೀರ ವಿಚಾರ ಎಂದು ನುಡಿದ ಸಿಜೆಐ ಗೊಗೋಯಿ,  ಈ ಬಗ್ಗೆ ವರದಿಯೊಂದನ್ನು ಕಳುಹಿಸಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನವನ್ನೂ ನೀಡಿದರು.

ಅನುರಾಧಾ ಭಾಸಿನ್ ಅವರ ವಕೀಲರಾದ ವೃಂದಾ ಗ್ರೋವರ್ ಅವರು ತಮ್ಮ ವಾದವನ್ನು ಆರಂಭಿಸಿದಾಗ ನ್ಯಾಯಮೂರ್ತಿ ಬೊಬ್ಡೆ ಅವರು ಕಾಶ್ಮೀರ ಕಣಿವೆಯಲ್ಲಿ ಅಂತಹ ನಿರ್ಬಂಧ, ಜನಜೀವನ ಸ್ಥಗಿತತೆ ಇದ್ದರೆ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಈ ಬಗ್ಗೆ ವ್ಯವಹರಿಸಬಹುದು ಎಂದು ಹೇಳಿದರು.

ಅದಕ್ಕೆ ವೃಂದಾ ಗ್ರೋವರ್ ಅವರು ಇಂಟರ್ ನೆಟ್, ಸಾರ್ವಜನಿಕ ಸಾರಿಗೆ ಜಮ್ಮು ಕಾಶ್ಮೀರದಲ್ಲಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ಜನರಿಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟನ್ನು ಸಂಪರ್ಕಿಸಲು ಕಷ್ಟವಾಗಿದೆ ಎಂದು ಉತ್ತರಿಸಿದರು.

ಬಳಿಕ, ಮಕ್ಕಳು ಹಕ್ಕುಗಳ ಕಾರ್‍ಯಕರ್ತೆ ಏನಾಕ್ಷಿ ಗಂಗೂಲಿ ಮತ್ತು ಪ್ರೊಫೆಸರ್ ಶಾಂತಾ ಸಿನ್ಹ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕ ಮಕ್ಕಳನ್ನು ಅಕ್ರಮವಾಗಿ ಬಂಧನದಲ್ಲಿ ಇಡಲಾಗಿದೆ ಎಂದು ದೂರಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಆರಂಭಿಸಿತು.

ಬಂಧಿಸಲಾಗಿರುವ ೧೮ ವರ್ಷಕ್ಕಿಂತ ಕಳೆಗಿನ ವಯೋಮಾನದವರನ್ನು ಬಿಡುಗಡೆ ಮಾಡಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಸಿಜೆಐ ಗೊಗೋಯಿ ಅವರು ಅರ್ಜಿದಾರರು ಈ ವಿಚಾರವಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.

ಹೈಕೋರ್ಟನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ, ಆದ್ದರಿಂದ ನೇರವಾಗಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಮಕ್ಕಳ ಹಕ್ಕುಗಳ ಕಾರ್‍ಯಕರ್ತರ  ಪರ ವಾದಿಸಿದ ಹಿರಿಯ ವಕೀಲ ಹುಜೈಫಾ ಅಹ್ಮದಿ  ಹೇಳಿದರು.

ಹೈಕೋರ್ಟನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂಬ ಹೇಳಿಕೆಯನ್ನು ನೀಡುವುದಾದರೆ, ಇದು ಅತ್ಯಂತ ಗಂಭೀರವಾದ ಹೇಳಿಕೆಯಾಗುತ್ತದೆ. ಹೈಕೋರ್ಟಿಗೆ ಹೋಗುವ ನಿಮ್ಮ ಮಾರ್ಗಕ್ಕೆ ಯಾರಾದರೂ ಅಡ್ಡ ಬಂದಿದ್ದಾರೆಯೇ? ಏಕೆ ಎಂಬುದಾಗಿ ದಯವಿಟ್ಟು ಹೇಳಿ’ ಎಂದು ಗೊಗೋಯಿ ಪ್ರಶ್ನಿಸಿದರು.

ಕಾಶ್ಮೀರದ ಸ್ಥಗಿತ ಸ್ಥಿತಿಯು ಜನರನ್ನು ನ್ಯಾಯಾಲಯವನ್ನು ಸಂಪರ್ಕಿಸದಂತೆ ತಡೆಯುತ್ತಿದೆ ಎಂದು ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು.

ಈ ಹಂತದಲ್ಲಿ ಸುಪ್ರೀಂಕೋರ್ಟ್ ’ಹೈಕೋರ್ಟನ್ನು ಸಂಪರ್ಕಿಸಲು ಕಷ್ಟವಾಗುತ್ತಿದೆ ಎಂಬುದಾಗಿ ಜನರು ಮಾಡುತ್ತಿರುವ ಆಪಾದನೆಗಳ ಬಗ್ಗೆ ವರದಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನ ನೀಡಿತು.

’ಜನರಿಗೆ ಹೈಕೋರ್ಟನ್ನು ಸಂಪರ್ಕಿಸಲು ಆಗುತ್ತಿಲ್ಲ ಎಂದಾದರೆ, ಇದು ಅತ್ಯಂತ ಗಂಭೀರವಾದ ವಿಷಯ, ನಾನು ಸ್ವತಃ ಶ್ರೀನಗರಕ್ಕೆ ಭೇಟಿ ನೀಡುವೆ’ ಎಂದು ಸಿಜೆಐ ರಂಜನ್ ಗೊಗೋಯಿ ಹೇಳಿದರು.

’ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯವರ ವರದಿ ವ್ಯತಿರಿಕ್ತವಾಗಿದ್ದಲ್ಲಿ, ಆಗ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿ’ ಎಂದೂ ಸಿಜೆಐ ಗೊಗೋಯಿ ಅವರು ಅರ್ಜಿದಾರರಲ್ಲಿ ಒಬ್ಬರನ್ನು ಪ್ರತಿನಿಧಿಸಿದ ವಕೀಲರಿಗೆ ಎಚ್ಚರಿಕೆ ನೀಡಿದರು.

ಕಾಶ್ಮೀರದಲ್ಲಿ ಪರಿಸ್ಥಿತಿ ಸಹಜಸ್ಥಿತಿ ಪುನಃಸ್ಥಾಪನೆಗೆ ಎಲ್ಲ ಪ್ರಯತ್ನಗಳನ್ನೂ ಮಾಡುವಂತೆ ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.

ಮಕ್ಕಳ ಹಕ್ಕುಗಳ ಕಾರ್ಯಕರ್ತರು ಸಲ್ಲಿಸಿದ್ದ ಅರ್ಜಿಯಲ್ಲಿ ಸಂವಿಧಾನದ ಪರಿಚ್ಛೇದ ೩೭೦ನ್ನು ರದ್ದು ಮಾಡಿದ ನಂತರ ಹಲವಾರು ಅಪ್ರಾಪ್ತರನ್ನು ಕಾನೂನು ಬಾಹಿರವಾಗಿ ವಶದಲ್ಲಿಡಲಾಗಿದೆ ಎಂದು ಆರೋಪಿಸಲಾಗಿತ್ತು.

ಒಂದು ಹಂತದಲ್ಲಿ ಸುಪ್ರೀಂಕೋರ್ಟ್ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿ ನಿರ್ಬಂಧಗಳನ್ನು ವಿಧಿಸಿದ ಆಗಸ್ಟ್ ೫ರ ಕ್ರಮಕ್ಕೆ, ೧೯೯೦ರಿಂದೀಚೆಗೆಗಿನ ಸಾವುಗಳು, ಭಃಯೋತ್ಪಾದನೆ ಮತ್ತು ಹಿಂಸಾಚಾರವೇ ಮುಖ್ಯಕಾರಣವಾಗಿರುವಂತೆ ಕಾಣುತ್ತದೆ ಎಂದು ಸರ್ಕಾರವು ಮಂಡಿಸಿದ ಸಹಸ್ರಾರು ಸಾವು, ಭಯೋತ್ಪಾದನೆ, ಹಿಂಸಾಚಾರದ ಘಟನೆಗಳ ಅಂಕಿಅಂಶಗಳನ್ನು ಉಲ್ಲೇಖಿಸುತ್ತ ಹೇಳಿತು.

ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಕಣಿವೆಯಲ್ಲಿನ ರಕ್ತಪಾತವನ್ನು ನಿರ್ಬಂಧಗಳು ತಡೆಗಟ್ಟಿವೆ ಎಂಬುದನ್ನು ಸಾಬೀತು ಪಡಿಸಲು ಸಾವುನೋವು, ಭಯೋತ್ಪಾದನೆ, ಹಿಂಸಾಚಾರಗಳ ಅಂಕಿಸಂಖ್ಯೆಗಳನ್ನು ನ್ಯಾಯಾಲಯದ ಮುಂದಿಟ್ಟರು. ಇದೇ ವೇಳೆಗೆ ನಿರ್ಬಂಧಗಳಿದ್ದರೂ ಸಾಮಾನ್ಯ ಕಾಶ್ಮೀರಿಗಳಿಗೆ ಸಿಗಬೇಕಾದ ಸವಲತ್ತುಗಳಿಗೆ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಅವರು ಪ್ರತಿಪಾದಿಸಿದರು.

೧೯೯೦ರಿಂದೀಚೆಗೆ ೭೧,೦೩೮ ಭಯೋತ್ಪಾದಕ ಘಟನೆಗಳಲ್ಲಿ ೪೧,೮೬೬ ಮಂದಿ ಅಸು ನೀಗಿದ್ದಾರೆ. ಇವುಗಳಲ್ಲಿ ೧೪,೦೩೮ ನಾಗರಿಕರು, ೫,೨೯೨ ಮಂದಿ ಭದ್ರತಾ ಸಿಬ್ಬಂದಿ ಮತ್ತು ೨೨,೫೩೬ ಭಯೋತ್ಪಾದಕರು ಸೇರಿದ್ದಾರೆ ಎಂದು ಅಟಾರ್ನಿ ಜನರಲ್ ಹೇಳಿದರು.

’ಅತ್ಯಂತ ಭೀಕರ ಪರಿಸ್ಥಿತಿ… ಇವೇ ಅಸಾಧಾರಣ ಕಾರಣಗಳು (ನಿರ್ಬಂಧಕ್ಕೆ). ಇವು ಭದ್ರತಾ ವಿಚಾರಗಳು’ ಎಂದು ಪೀಠದ ಸದಸ್ಯರಲ್ಲಿ ಒಬ್ಬರಾದ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರು ’ಆಗಸ್ಟ್ ೫ರಿಂದೀಚೆಗೆ ಒಂದೇ ಒಂದು ಬುಲೆಟ್ ಕೂಡಾ ಗುಂಡು ಹಾರಿಸಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ವಿವರಗಳ ಸಹಿತವಾದ ಪ್ರಮಾಣ ಪತ್ರ ಸಲ್ಲಿಸಿ ಎಂದು ನ್ಯಾಯಮೂರ್ತಿ ಬೊಬ್ಡೆ ಸರ್ಕಾರಕ್ಕೆ ನಿರ್ದೇಶಿಸಿದರು.

ರಾಷ್ಟ್ರದ ಭದ್ರತೆಯನ್ನು ಗಮನದಲ್ಲಿ ಇರಿಸಿಕೊಂಡು ಸಹಜ ಸ್ಥಿತಿ ಪುನಃಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆಯೂ ಅವರು ಸರ್ಕಾರಕ್ಕೆ ಸೂಚಿಸಿದರು.

’ಇಂಟರ್ ನೆಟ್ ಅಭಾವ ಮತ್ತು ಮೊಬೈಲ್ ಸಂಪರ್ಕ ಸ್ಥಗಿತದಂತಹ ಸ್ಥಳೀಯ ಸಮಸ್ಯೆಗಳ ಬಗ್ಗೆ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟನ್ನು ಸಂಪರ್ಕಿಸಿ ಎಂದು ನ್ಯಾಯಾಲಯ ಕಾಶ್ಮೀರ ಟೈಮ್ಸ್ ಸಂಪಾದಕರಾದ ಅನುರಾಧ ಭಾಸಿನ್ ಅವರಿಗೆ ಸೂಚಿಸಿತು.

’ಈ ಸ್ಥಗಿತತೆಯನ್ನು ಕೇಂದ್ರ ಸರ್ಕಾರ ಮಾಡಿದೆ. ಸಾರ್ವಜನಿಕ ಸಾರಿಗೆ ಕಾರ್‍ಯ ನಿರ್ವಹಿಸುತ್ತಿಲ್ಲ. ಸಂಪರ್ಕಿಸಲು ಯಾವುದೇ ಮಾರ್ಗವೂ ಇಲ್ಲ. ಕೆಲವೇ ಕೆಲವು ಸ್ಥಿರ ದೂರವಾಣಿಗಳು ಕೆಲಸ ಮಾಡುತ್ತಿವೆ. ಮಾಧ್ಯಮ ಸ್ವಾತಂತ್ರ್ಯ ಮೊಟಕುಗೊಂಡಿದೆ. ಇದು ೪೩ನೇ ದಿನ’ ಎಂದು ಹಿರಿಯ ವಕೀಲರಾದ ವೃಂದಾ ಗ್ರೋವರ್ ಅವರು ಭಾಸಿನ್ ಪರ ವಾದಿಸುತ್ತಾ ಹೇಳಿದರು.

’ಕನಿಷ್ಠ ಮಕ್ಕಳಿಗೆ ಶಾಲೆಗೆ ಹೋಗಲು ಸಾಧ್ಯವಾಗಬೇಕು ಮತ್ತು ತಾಯಿಗೆ ತನ್ನ ಮಗು ಸುರಕ್ಷಿತವಾಗಿ ಮನೆಗೆ ವಾಪಸಾಗುವ ಭರವಸೆ ಸಿಗಬೇಕು ಎಂಬ ಕನಿಷ್ಠ ಆಶಯ ಕಾಶ್ಮೀರಿಗಳದು’ ಎಂದು ಹಿರಿಯ ವಕೀಲ ಸಂಜಯ್ ಹೆಗ್ಡೆ ಹೇಳಿದರು.

ಆರೋಪವನ್ನು ನಿರಾಕರಿಸಿದ ವೇಣುಗೋಪಾಲ್ ಅವರು ’೧೦.೫ ಲಕ್ಷ ಜನರಿಗೆ ಹೊರ ರೋಗಿಗಳಾಗಿ ಚಿಕಿತ್ಸೆ ನೀಡಲಾಗಿದೆ, ೬೭,೧೯೬ ಮಂದಿಯನ್ನು ಒಳರೋಗಿಗಳಾಗಿ ದಾಖಲು ಮಾಡಲಾಗಿದೆ ಮತ್ತು ೧೦,೬೯೯ ಪ್ರಮುಖ ಹಾಗೂ೫೩,೨೯೭ ಸಣ್ಣ ಸರ್ಜರಿಗಳನ್ನು ನಡೆಸಲಾಗಿದೆ. ಶೇಕಡಾ ೯೦ರಷ್ಟು ಔಷಧ ಅಂಗಡಿಗಳು ತೆರೆದಿವೆ ಮತ್ತು ೮.೯ಲಕ್ಷ ಎಲ್‌ಪಿಜಿ ಸಿಲಿಂಡರುಗಳನ್ನು ಮನೆಗಳಿಗೆ ಸರಬರಾಜು ಮಾಡಲಾಗಿದೆ’ ಎಂದು ಅಂಕಿ ಅಂಶ ಸಹಿತವಾಗಿ ವಿವರಿಸಿದರು.

ಸರ್ಕಾರವು ಆರಂಭಿಸಿರುವ ಯೋಜನೆಯ ಪರಿಣಾಮವಾಗಿ ರೈತರ ಶೋಷಣೆ ನಿಂತಿದೆ ಎಂದು ತುಷಾರ ಮೆಹ್ತ ಹೇಳಿದರು.

ಈ ಹಂತದಲ್ಲಿ ಹೆಚ್ಚಿನ ವಿವರಗಳಿಗೆ ಹೋಗದಂತೆ ಸಿಜೆಐ ಅವರು ಕಾನೂನು ಅಧಿಕಾರಿಗಳನ್ನು ತಡೆದರು.

ಮಕ್ಕಳ ಹಕ್ಕುಗಳ ಕಾರ್‍ಯಕರ್ತರಾದ ಏನಾಕ್ಷಿ ಗಂಗೂಲಿ ಮತ್ತು ಡಾ. ಶಾಂತಾ ಸಿನ್ಹ  ಅವರ ಪರ ವಾದಿಸಿದ ಹಿರಿಯ ವಕೀಲ ಹುಜೈಫಾ ಅಹ್ಮದಿ ಅವರ ಮೌಖಿಕ ಅಹವಾಲನ್ನು ಗಂಭೀರವಾಗಿ ತೆಗೆದುಕೊಂಡ ಸಿಜೆಐ ಅವರು ’೧೦ರಿಂದ ೧೮ ವರ್ಷಗಳ ಒಳಗಿನ ಮಕ್ಕಳನ್ನು ಬಂಧಿಸಲಾಗಿದೆ ಎಂಬ ಮಾಧ್ಯಮ ವರದಿಗಳತ್ತ ಗಮನ ಸೆಳೆದ ಅಹ್ಮದಿ ಮಾತನ್ನಾಧರಿಸಿ ವರದಿ ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನ ನೀಡಿದರು.

ಮುಖ್ಯ ನ್ಯಾಯಮೂರ್ತಿ ಜೊತೆ ಮಾತನಾಡುವೆ, ಅಗತ್ಯ ಬಿದ್ದರೆ ವಸ್ತುಸ್ಥಿತಿ ಪರಿಶೀಲನೆಗಾಗಿ ಅಲ್ಲಿಗೆ ಹೋಗುವೆ ಎಂದು ಹೇಳಿದ ಸಿಜೆಐ, ಪ್ರತಿಪಾದನೆಗಳು ಸುಳ್ಳೆಂಬುದಾಗಿ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಶ್ರೀನಗರ, ಬಾರಾಮುಲ್ಲ, ಅನಂತನಾಗ್ ಮತ್ತು ಜಮ್ಮು ಜಿಲ್ಲೆಗಳಲ್ಲಿ ಪ್ರವಾಸ ನಡೆಸಲು ನ್ಯಾಯಾಲಯ ಒಪ್ಪಿಗೆ ನೀಡಿತು. ರಾಜಕೀಯ ರ್‍ಯಾಲಿಗಳಲ್ಲಿ ಪಾಲ್ಗೊಳ್ಳಬಾರದು ಎಂಬ ಶರತ್ತನ್ನು ಅಜಾದ್ ಅವರಿಗೆ ನ್ಯಾಯಾಲಯ ವಿಧಿಸಿತು.

September 16, 2019 - Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Flash News, General Knowledge, India, Nation, News, Spardha, supreme court, Terror | , , , , ,

No comments yet.

Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ