SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಸಂತ ರವಿದಾಸ ದೇಗುಲ ಅದೇ ಸ್ಥಳದಲ್ಲಿ ಮರುನಿರ್ಮಾಣ: ಸುಪ್ರೀಂಕೋರ್ಟ್ ಆದೇಶ

21 Ravidas mandir reconstruction Supreme-Court-Order
ನವದೆಹಲಿ
: ಸಂತ ರವಿದಾಸ ದೇಗುಲವನ್ನು ಮರುನಿರ್ಮಾಣ ಮಾಡುವಂತೆ ಸುಪ್ರೀಂಕೋರ್ಟ್2019 ಅಕ್ಟೋಬರ್ 21ರ ಸೋಮವಾರ ಆದೇಶ ನೀಡಿತು. ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ಆಗಸ್ಟ್​ನಲ್ಲಿ ಒಡೆದು ಹಾಕಲಾಗಿದ್ದ ಸಂತ ರವಿದಾಸ ದೇಗುಲವನ್ನು ಅದೇ ಜಾಗದಲ್ಲಿ ಮರುನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡ ಬಳಿಕ ಸುಪ್ರೀಂಕೋರ್ಟ್ ಈ ಆದೇಶ ನೀಡಿತು.

ದಕ್ಷಿಣ ದೆಹಲಿಯ ತುಘ್ಲಕ್ ಬಾದಿನಲ್ಲಿದ್ದ ಸಂತ ರವಿದಾಸ ದೇಗುಲವನ್ನು ಒಡೆದುಹಾಕಿದ್ದರಿಂದ ಭಕ್ತಾದಿಗಳ ಪ್ರತಿಭಟನೆ ಕಾಡ್ಗಿಚ್ಚಿನಂತೆ ಎಲ್ಲೆಡೆ ವ್ಯಾಪಿಸಿತ್ತು. ಶಾಂತಿ ಮತ್ತು ಸೌಹಾರ್ದತೆ ದೃಷ್ಟಿಯಿಂದ ಅದೇ ಸ್ಥಳದಲ್ಲಿ ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಇದಕ್ಕೂ ಮುನ್ನ ನ್ಯಾಯಾಲಯಕ್ಕೆ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದರು..

ದೇವಾಲಯ ಮರುನಿರ್ಮಾಣಕ್ಕೆ ಸರ್ಕಾರ 400 ಚದರ ಅಡಿ ದುಪ್ಪಟ್ಟು ಜಾಗವನ್ನು ಹಂಚಿಕೆ ಮಾಡಿದೆ. ಮರುನಿರ್ಮಾಣವಾದ ದೇಗುಲ ನಿರ್ವಹಣೆಗಾಗಿ ಭಕ್ತಾದಿಗಳ ಸಮಿತಿ ರಚನೆಯ ಪ್ರಸ್ತಾವನೆಯನ್ನು ಕೂಡ ಸರ್ಕಾರ ಮಾಡಿದೆ ಎಂದು ನ್ಯಾಯಾಲಯಕ್ಕೆಕೆ.ಕೆ.ವೇಣುಗೋಪಾಲ್ ತಿಳಿಸಿದರು.

ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಆಗಸ್ಟ್​ 10ರಂದು 500 ವರ್ಷ ಇತಿಹಾಸವಿರುವ ರವಿದಾಸ ದೇವಾಲಯವನ್ನು ನೆಲಸಮ ಮಾಡಿತ್ತು. ಇದರಿಂದ ಕೆರಳಿದ ಪಂಜಾಬ್​ ಮತ್ತು ದೆಹಲಿಯ ಹಲವು ರಾಜಕೀಯ ಪಕ್ಷಗಳು ಮತ್ತು ದಲಿತ ಸಮುದಾಯದ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದರು. ದಲಿತ ಹಕ್ಕುಗಳ ಹೋರಾಟಗಾರರು ಮತ್ತು ಬೆಂಬಲಿಗರು ಭಾರತ್​ ಬಂದ್​ಗೂ ಕರೆ ನೀಡಿದ್ದರು.

ದೇಗುಲವನ್ನು ತುಘ್ಲಕ್ ​ಬಾದ್​ ರಸ್ತೆಯಲ್ಲಿ ಅಥವಾ ಬೇರೆ ಸ್ಥಳದಲ್ಲಿ ಮರುನಿರ್ಮಾಣ ಮಾಡಬೇಕು ಎಂದು ಹಲವು ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು. ದೆಹಲಿ ಸಾಮಾಜಿಕ ನ್ಯಾಯ ಸಚಿವ ರಾಜೇಂದ್ರ ಪಾಲ್ ಗೌತಮ್, ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ ಸಮುದಾಯದ ಆಧ್ಯಾತ್ಮಿಕ ಗುರುಗಳು ದೆಹಲಿಯಲ್ಲಿ ಸೇರಿ, ಪ್ರತಿಭಟನೆಗೆ ದೊಡ್ಡ ಆಯಾಮ ನೀಡಿದ್ದರು.

October 22, 2019 Posted by | ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, ದೇವಾಲಯಗಳು | , , , , , , , | Leave a comment

ಅಯೋಧ್ಯಾ ಪ್ರಕರಣ:  ಅಂತಿಮ ವಾದ ಮಂಡನೆ ಮುಕ್ತಾಯಕ್ಕೆ ಸುಪ್ರೀಂ ಪೀಠ ನಿರ್ದೇಶನ

15 ayodhya supreme
ಬುಧವಾರವೇ  ವಿಚಾರಣೆ ಮುಕ್ತಾಯ ಸಂಭವ

ನವದೆಹಲಿ:  ರಾಜಕೀಯವಾಗಿ ಅತಿಸೂಕ್ಷ್ಮವಾಗಿರುವ ಅಯೋಧ್ಯಾ ರಾಮಜನ್ಮಭೂಮಿಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ಬುಧವಾರವೇ ಮುಕ್ತಾಯಗೊಳಿಸಲು ತಾನು ಬಯಸಿರುವುದಾಗಿ  2019 ಅಕ್ಟೋಬರ್ 15ರ ಮಂಗಳವಾರ ಹೇಳಿದ ಸುಪ್ರೀಂಕೊರ್ಟ್, ತಮ್ಮ ಅಂತಿಮ ವಾದಗಳನ್ನು 2019 ಅಕ್ಟೋಬರ್ 16ರ  ಬುಧವಾರ ಪರಿಸಮಾಪ್ತಿಗೊಳಿಸುವಂತೆ ಎಲ್ಲ ಕಕ್ಷಿದಾರರಿಗೂ ನಿರ್ದೇಶಿಸಿತು.

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂವಿವಾದ ಪ್ರಕರಣದ ವಿಚಾರಣೆಯನ್ನು ೩೯ ದಿನಗಳಿಂದ ನಡೆಸುತ್ತಿದ್ದು,  ಈ ಮೊದಲು ಅಕ್ಟೋಬರ್ ೧೮ರಂದು ವಾದಮಂಡನೆ ಪೂರ್ಣಗೊಳಿಸುವಂತೆ ಸೂಚಿಸಿತ್ತು.  ಬಳಿಕ ಈ ದಿನಾಂಕವನ್ನು ಹಿಂದೂಡಿದ ನ್ಯಾಯಾಲಯ ಅಕ್ಟೋಬರ್ ೧೭ರಂದು ವಾದ ಮಂಡನೆ ಪೂರ್ಣಗೊಳಿಸಲು ಗಡುವು ನೀಡಿತ್ತು. ಆದರೆ, ಮಂಗಳವಾರ ಸಿಜೆಐ ಗೊಗೋಯಿ ಅವರು ಪೀಠವು ಗುರುವಾರದ ಬದಲಿಗೆ ಬುಧವಾರವೇ ಎಲ್ಲ ವಾದಗಳನ್ನೂ ಪರಿಸಮಾಪ್ತಿಗೊಳೀಸಲು ಬಯಸಿದೆ ಎಂಬ ಇಂಗಿತ ವ್ಯಕ್ತ ಪಡಿಸಿದರು.

ಕಕ್ಷಿದಾರರಿಗೆ ಅಂತಿಮ ವಾದ ಮಂಡನೆಗೆ ಕಾಲ ಮಿತಿ ನಿಗದಿ ಪಡಿಸಿದ ಸುಪ್ರೀಂಕೋರ್ಟ್ ಪೀಠವು, ಅಂತಿಮ ವಾದ ಮಂಡನೆ ಹಾಗೂ ಉತ್ತರಗಳನ್ನು ನೀಡಲು  ಹಿಂದು ಮತ್ತು ಮುಸ್ಲಿಮ್ ಕಕ್ಷಿದಾರರಿಗೆ ಬುಧವಾರ ೫ ಗಂಟೆಯವರೆಗೂ ಕಾಲಾವಕಾಶ ನೀಡುವುದು ಎಂದು ಹೇಳಿತು. ನ್ಯಾಯಾಲಯವು ಮಂಗಳವಾರ ಕೂಡಾ ಸಂಜೆ ೫ ಗಂಟೆಯವರೆಗೂ ಕಲಾಪ ನಡೆಸಿತು.

ವಾದಮಂಡನೆಗಳು ಪೂರ್ಣಗೊಂಡರೆ ಪೀಠವು ತೀರ್ಪನ್ನು ಕಾಯ್ದಿರಿಸಲಿದೆ. ನ್ಯಾಯಮೂರ್ತಿಗಳಾದ ಎಸ್‌ಎ ಬೊಬ್ಡೆ, ಡಿವೈ ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್ ಎ ನಜೀರ್ ಅವರನ್ನೂ ಒಳಗೊಂಡಿರುವ ಪೀಠವು, ಸಿಜೆಐ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಆ ದಿನದ ಒಳಗಾಗಿಯೇ ತೀರ್ಪು ನೀಡಬೇಕಾಗಿದೆ. ಸಿಜೆಐ ಅವರ ನಿವೃತ್ತಿಯ ಒಳಗಾಗಿ ತೀರ್ಪು ನೀಡದಿದ್ದರೆ, ಸಂಪೂರ್ಣ ವಿಷಯವನ್ನು ಪುನಃ ಹೊಸದಾಗಿ ಮೊದಲಿನಿಂದಲೇ ಆಲಿಸಬೇಕಾಗುತ್ತದೆ.

‘ಪೀಠಕ್ಕೆ ತೀರ್ಪು ಬರೆಯಲು ಕೇವಲ ನಾಲ್ಕು ವಾರಗಳು ಲಭಿಸುತ್ತವೆ. ಈ ಕಾಲಮಿತಿಯ ಒಳಗೆ ನ್ಯಾಯಾಲಯ ತೀರ್ಪು ನೀಡಿದರೆ ಅದು ’ಪವಾಡ’ವಾಗಲಿದೆ’ ಎಂದು ಸಿಜೆಐ ಅವರು ಈ ಹಿಂದೆ ಹೇಳಿದ್ದರು.

ದಶಕಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆಯನ್ನು ಪ್ರತಿದಿನ ವಾದ ಆಲಿಸುವ ಮೂಲಕ ನ್ಯಾಯಾಲಯವು ತ್ವರಿತಗೊಳಿಸಿತ್ತು. ನಿಗದಿತ ಗಡುವಿನ ಒಳಗಾಗಿ ತೀರ್ಪು ನೀಡಲು ಸಾಧ್ಯವಾಗುವಂತೆ ಇತರ ವಿಷಯಗಳಿಗಾಗಿ ಮೀಸಲಿಡಲಾಗಿದ್ದ ದಿನಗಳಲ್ಲೂ ಪೀಠವು ವಿಚಾರಣೆ ನಡೆಸಿತ್ತು.

ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಸಲ್ಲಿಸಲಾದ ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ೨೦೧೦ರ ಸೆಪ್ಟೆಂಬರಿನಿಂದ ನಡೆಸುತ್ತಾ ಬಂದಿತ್ತು.

೧೯೯೨ರ ಡಿಸೆಂಬರ್ ೬ರವರೆಗೆ ವಿವಾದಾತ್ಮಕ ಬಾಬರಿ ಮಸೀದಿ ಕಟ್ಟಡವಿದ್ದ ಸ್ಥಳವೂ ಸೇರಿದಂತೆ ೨.೭೭ ಎಕರೆ ವಿವಾದಿತ ಭೂಮಿಯನ್ನು ಸಮಾನವಾಗಿ ವಿಭಜಿಸಿ ಕಕ್ಷಿದಾರರಾದ ನಿರ್ಮೋಹಿ ಅಖಾರ, ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ರಾಮಲಲ್ಲಾ ವಿರಾಜಮಾನ್ ಅವರಿಗೆ ಹಂಚಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.

ವಿವಾದವನ್ನು ಸುಪ್ರೀಂಕೋರ್ಟಿನಿಂದಲೇ ನೇಮಕಗೊಂಡ ಸಂಧಾನಕಾರರ ಸಮಿತಿಯ ಮೂಲಕ ಇತ್ಯರ್ಥ ಪಡಿಸಲು ನಡೆದ ಪ್ರಕ್ರಿಯೆ ರಾಮಲಲ್ಲಾ ವಿರಾಜಮಾನ್ ಇನ್ನಷ್ಟು ಸಂಧಾನ ಇಲ್ಲ ಎಂದು ಪ್ರಕಟಿಸುವುದರೊಂದಿಗೆ ವಿಫಲಗೊಂಡಿತ್ತು. ಕೆಲವು ದಿನಗಳ ಬಳಿಕ ಸುಪ್ರೀಂಕೋರ್ಟಿನಿಂದ ನೇಮಕಗೊಂಡಿದ್ದ ಸಂಧನಕಾರರ ಸಮಿತಿಯು ಪುನಃ ಮುಂದಿಟ್ಟ ಆಹ್ವಾನವನ್ನೂ ಮಸೀದಿ ಪರ ವಾದಿಸುತ್ತಿದ್ದವರೂ ತಳ್ಳಿಹಾಕಿದ್ದರು.

ದಶಕಗಳ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ತೀರ್ಪು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಅಯೋಧ್ಯಾ ಆಡಳಿತವು ಡಿಸೆಂಬರ್ ೧೦ರವರೆಗೆ ಸೆಕ್ಷನ್ ೧೪೪ರ ಅಡಿಯಲ್ಲಿ ಕಟ್ಟು ನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಿದೆ.

October 15, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, Flash News, General Knowledge, India, Nation, News, Spardha, supreme court, Temples, Temples, ದೇವಾಲಯಗಳು | , , , , , , , | Leave a comment

ಕರ್ತಾರಪುರ ಕಾರಿಡಾರ್ ಉದ್ಘಾಟನೆ:  ಪಾಕ್  ಆಹ್ವಾನಕ್ಕೆ ಮನಮೋಹನ್ ಸಿಂಗ್‌ ತಿರಸ್ಕಾರ

01 manmohan-kartarpur
ನವದೆಹಲಿ
: ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಕರ್ತಾರಪುರ ಕಾರಿಡಾರ್ ಉದ್ಘಾಟನಾ ಸಮಾರಂಬಕ್ಕೆ ಪಾಕಿಸ್ತಾನ ನೀಡಿದ ಆಹ್ವಾನವನ್ನು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್  ಅವರು ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಮೂಲಗಳು 2019 ಅಕ್ಟೋಬರ್ 01ರ ಮಂಗಳವಾರ ದೃಢಪಡಿಸಿದವು.

ನವೆಂಬರ್ 9ಕ್ಕೆ ನಿಗದಿಯಾದ ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲು ತಮ್ಮ ರಾಷ್ಟ್ರವು ತೀರ್ಮಾನಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಶಿ ಅವರು ವಿಡಿಯೋ ಸಂದೇಶ ಒಂದರಲ್ಲಿ  2019 ಸೆಪ್ಟೆಂಬರ್ 30ರ  ಸೋಮವಾರ ತಿಳಿಸಿದ್ದರು.

‘ಕರ್ತಾರಪುರ ಕಾರಿಡಾರ್ ಉದ್ಘಾಟನೆಯು ದೊಡ್ಡ ಕಾರ್ಯಕ್ರಮವಾಗಿದ್ದು, ಪಾಕಿಸ್ತಾನವು ಇದಕ್ಕಾಗಿ ದೊಡ್ಡ ಪ್ರಮಾಣದ ಸಿದ್ಧತೆ ನಡೆಸುತ್ತಿದೆ. ಸಮಾರಂಭಕ್ಕೆ ಸಾಕ್ಷಿಯಾಗಲು ಭಾರತದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಮಂತ್ರಿಸಲು ನಾವು ನಿರ್ಧರಿಸಿದ್ದೇವೆ. ನಾವು ಶೀಘ್ರದಲ್ಲೇ ಔಪಚಾರಿಕ ಪತ್ರವನ್ನು ಅವರಿಗೆ ಕಳುಹಿಸಲಿದ್ದೇವೆ. ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಗಾಗಿ ಕರ್ತಾರಪುರಕ್ಕೆ ಆಗಮಿಸುವ ಸಿಖ್ ಯಾತ್ರಾರ್ಥಿಗಳನ್ನು ಸ್ವಾಗತಿಸಲು ನಮಗೆ ಅತ್ಯಂತ ಸಂತಸವಿದೆ’ ಎಂದು ಖುರೇಶಿ ವಿಡಿಯೋದಲ್ಲಿ ತಿಳಿಸಿದ್ದರು.

ಕರ್ತಾರಪುರ ಕಾರಿಡಾರ್ ಉದ್ಘಾಟನೆಗೆ ಪಾಕಿಸ್ತಾನವು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಿದೆ. ಈ ಕಾರಿಡಾರ್ ಭಾರತದ ಸಿಖ್ ಯಾತ್ರಾರ್ಥಿಗಳಿಗೆ ಪ್ರಸ್ತುತ ಪಾಕಿಸ್ತಾನದಲ್ಲಿ ಇರುವ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ತಾಣಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ಖುರೇಶಿ ವಿಡಿಯೋದಲ್ಲಿ ಹೇಳಿದ್ದರು.

ಪಾಕಿಸ್ತಾನದ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರ ಮತ್ತು ಭಾರತದ ಗುರುದಾಸಪುರ ಜಿಲ್ಲೆಯಲ್ಲಿ ಇರುವ ಡೇರಾ ಬಾಬಾ ನಾನಕ್ ಮಂದಿರವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಾಣಕಾರ್ಯ ಪೂರೈಸುವುದರೊಂದಿಗೆ ಭಾರತದ ಸಿಖ್ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಅವಕಾಶ ಲಭಿಸಲಿದೆ.

ಇದರೊಂದಿಗೆ ೧೫೨೨ರಲ್ಲಿ ಸಿಖ್ ಪಂಥದ ಸ್ಥಾಪಕ ಗುರು ನಾನಕ್ ದೇವ್ ಅವರು ಸ್ಥಾಪಿಸಿದ ಪ್ರಮುಖ ತಾಣವಾದ ಕರ್ತಾರಪುರ ಸಾಹಿಬ್ ಗೆ ಭೇಟಿ ನೀಡಲು ಅನುಮತಿ ಕೋರಿದರೆ ಸಾಕಾಗುತ್ತದೆ.

ಆದರೆ, ಪಾಕಿಸ್ತಾನವು ಕರ್ತಾರಪುರ ಕಾರಿಡಾರ್ ಮೂಲಕ ದರ್ಬಾರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಭಾರತೀಯ ಯಾತ್ರಿಗಳಿಗೆ ೨೦ ಅಮೆರಿಕನ್ ಡಾಲರುಗಳನ್ನು ಸೇವಾ ಶುಲ್ಕವಾಗಿ ವಿಧಿಸಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತವು ಪಾಕಿಸ್ತಾನಕ್ಕೆ ಸೂಚಿಸಿದೆ.

ಮೊದಲಿಗೆ ಭಾರತದಿಂದ ಬರುವ ೫,೦೦೦ ಮಂದಿ ಯಾತ್ರಾರ್ಥಿಗಳಿಗೆ ಕಾರಿಡಾರ್ ಮೂಲಕ ಗುರುದ್ವಾರ ದರ್ಬಾರ್ ಸಾಹಿಬ್ ಭೇಟಿಗೆ ಅವಕಾಶ ನೀಡಲಾಗುವುದು. ಮುಂದಕ್ಕೆ ಪ್ರತಿದಿನ ೧೦,೦೦೦ ಯಾತ್ರಿಕರಿಗೆ ಭೇಟಿ ಅವಕಾಶ ಲಭಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಭಾರತದ ಕಡೆಯಿಂದ ಗುರುದ್ವಾರ ದರ್ಬಾರ್ ಸಾಹಿಬ್‌ವರೆಗೆ ತನ್ನ ನೆಲದಲ್ಲಿ ಯಾತ್ರಿಕರಿಗೆ ಸಾಗಲು ಅನುಕೂಲವಾಗುವಂತೆ ಪಾಕಿಸ್ತಾನವು ಕಾರಿಡಾರ್ ನಿರ್ಮಾಣ ಮಾಡುತ್ತಿದ್ದು ಗುರುದಾಸಪುರದ ಡೇರಾ ಬಾಬಾ ನಾನಕ್‌ನಿಂದ ಗಡಿಯವರೆಗೆ ಭಾರತವು ಕಾರಿಡಾರ್ ನಿರ್ಮಾಣ ಮಾಡುತ್ತಿದೆ.

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ರಾಷ್ಟ್ರೀಯ ಹೆದ್ದಾರಿ -೩೫೪ರಿಂದ ಕಾರಿಡಾರ್‌ವರೆಗೆ ನಾಲ್ಕು ಪಥಗಳ  ಹೆದ್ದಾರಿಯನ್ನು ನಿರ್ಮಿಸುತ್ತಿದೆ. ಇದಲ್ಲದೆ ಪ್ರಯಾಣಿಕ ಟರ್ಮಿನಲ್‌ನ್ನು ಕೂಡಾ ನಿರ್ಮಿಸಲಾಗುತ್ತಿದೆ.

October 1, 2019 Posted by | ಪಾಕಿಸ್ತಾನ, ಪ್ರಧಾನಿ, ರಾಷ್ಟ್ರೀಯ, ವಿಶ್ವ/ ಜಗತ್ತು, culture, Flash News, General Knowledge, India, Nation, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Pakistan, Politics, Prime Minister, Spardha, Temples, World | , , , , , , , , , , | Leave a comment

ಸಂಧಾನಯತ್ನದಲ್ಲಿ ರಾಮಲಲ್ಲಾ ಇಲ್ಲ: ಸುಪ್ರೀಂಗೆ ವಕೀಲರ ಸ್ಪಷ್ಟನೆ

ಅಯೋಧ್ಯೆ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣ

30 ayodhya ramalalla sc
ನವದೆಹಲಿ
: ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದದ ಪ್ರಕರಣದ ವಿಚಾರಣೆಯ ಜೊತೆಗೇ ಪುನರಾಂಭಗೊಂಡಿರುವ ಸಂಧಾನ ಮಾತುಕತೆ ಯತ್ನದಲ್ಲಿ ಪ್ರಕರಣದ ಪ್ರಮುಖ ಕಕ್ಷಿದಾರರಲ್ಲಿ ಒಬ್ಬರಾಗಿರುವ ರಾಮಲಲ್ಲಾ ವಿರಾಜಮಾನ್ ಪಾಲ್ಗೊಳ್ಳುವುದಿಲ್ಲ ಎಂದು ರಾಮಲಲ್ಲಾ ಪರ ಹಾಜರಾದ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ಅವರು 2019 ಸೆಪ್ಟೆಂಬರ್ 30ರ ಸೋಮವಾರ ಸುಪ್ರಿಂಕೋರ್ಟಿನ ಪಂಚ ಸದಸ್ಯ ಸಂವಿಧಾನಪೀಠಕ್ಕೆ ತಿಳಿಸಿದರು.

ಮುಸ್ಲಿಂ ಕಕ್ಷಿದಾರರ ಮನವಿ ಮೇರೆಗೆ ಭೂ ವಿವಾದಕ್ಕೆ ಸಂಧಾನದ ಇತ್ಯರ್ಥ ಸಲುವಾಗಿ ನ್ಯಾಯಾಲಯ ಕಲಾಪಕ್ಕೆ ಪರ್‍ಯಾಯವಾಗಿ ಸಂಧಾನ ಮಾತುಕತೆ ಯತ್ನವನ್ನೂ ನಡೆಸಲು ಸುಪ್ರೀಂಕೋಟ್ ಅನುಮತಿ ನೀಡಿದ ಕೆಲವು ದಿನಗಳ ಬಳಿಕ ರಾಮಲಲ್ಲಾ ಪರ ವಕೀಲರು ಈ ಸ್ಪಷ್ಟನೆಯನ್ನು ನ್ಯಾಯಾಲಯಕ್ಕೆ ನೀಡಿದರು.

ಪರ್‍ಯಾಯವಾಗಿ ಸಂಧಾನಯತ್ನ ನಡೆದರೂ, ಕೋರ್ಟ್ ವಿಚಾರಣೆಯ ಪ್ರಕ್ರಿಯೆಯಲ್ಲಿ ವಾದ ಮಂಡನೆಗಳು ಅಕ್ಟೋಬರ್ ೧೮ರ ವೇಳೆಗೆ ಮುಗಿಯಬೇಕು ಎಂದು ನ್ಯಾಯಾಲಯ ಸ್ಪಷ್ಟ ಪಡಿಸಿತ್ತು. ವಿಚಾರಣೆ ಮತ್ತು ಸಂಧಾನಯತ್ನ ಎರಡೂ ಏಕಕಾಲಕ್ಕೆ ನಡೆಯುತ್ತವೆ ಎಂದು ಪೀಠ ತಿಳಿಸಿತ್ತು.

ಅಯೋಧ್ಯೆಯ ವಿವಾದಿತ ಭೂಮಿಯನ್ನು ಪ್ರಕರಣದ ಮೂವರು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮ ಲಲ್ಲಾ ವಿರಾಜಮಾನ ಅವರಿಗೆ ಸಮಾನವಾಗಿ ಹಂಚಬೇಕು ಎಂಬುದಾಗಿ ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಒಟ್ಟು ೧೪ ಮೇಲ್ಮನವಿಗಳು ಸುಪ್ರೀಂಕೋಟಿಗೆ ಸಲ್ಲಿಕೆಯಾಗಿದ್ದವು.

ಕಳೆದ ತಿಂಗಳು ವಿಚಾರಣೆ ಕಾಲದಲ್ಲಿ ಹಿರಿಯ ವಕೀಲ ಸಿ.ಎಸ್. ವೈದ್ಯನಾಥನ್ ಅವರು ’ಭಗವಾನ್ ಶೀರಾಮನ ಜನ್ಮಸ್ಥಾನವು ಸ್ವತಃ ದೇವತೆಯಾಗಿರುವುದರಿಂದ ಅದರ ಮೇಲೆ ಜಂಟಿ ಸ್ವಾಮ್ಯ ಸಾಧ್ಯವಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಜಂಟಿ ಸ್ವಾಮ್ಯದಿಂದ ಹಾನಿಯಾಗುತ್ತದೆ ಮತ್ತು ದೇವತೆಯ ವಿಭಜನೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದರು.

ಸೋಮವಾರ ವಿಚಾರಣೆ ಕಾಲದಲ್ಲಿ ಯಾವುದೇ ಸಂಧಾನಯತ್ನದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯನ್ನು ವೈದ್ಯನಾಥನ್ ಅವರು ತಳ್ಳಿ ಹಾಕಿದರು. ಹಲವಾರ ಸುತ್ತಿನ ಸಂಧಾನಗಳು ನಡೆಯುತ್ತಿವೆ ಎಂಬ ಬಗೆಗಿನ ಹಲವಾರು ವರದಿಗಳ ಹಿನ್ನೆಲೆಯಲ್ಲಿ ನಾನು ನಮ್ಮ ನಿಲುವನ್ನು ಸ್ಪಷ್ಟ ಪಡಿಸುತ್ತಿದ್ದೇನೆ. ’ರಾಮಲಲ್ಲಾ ಕಡೆಯಿಂದ ಯಾರು ಕೂಡಾ ಯಾವುದೇ ಸಂಧಾನದಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಅವರು ನುಡಿದರು.

ಸಂಧಾನ ಯೋಜನೆಗೆ ಹಿಂದು ಕಕ್ಷಿದಾರರಿಂದ ಕಡಿಮೆ ಪ್ರಮಾಣದ ಬೆಂಬಲ ವ್ಯಕ್ತವಾಗಿದ್ದು, ಅವರು ಸ್ವತಃ ಸುಪ್ರೀಂಕೋರ್ಟ್ ತನ್ನ ತೀರ್ಪು ನೀಡಲಿ ಎಂದು ಬಯಸಿದ್ದಾರೆ.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸಂವಿಧಾನಪೀಠವು ಈ ವರ್ಷ ಆಗಸ್ಟ್ ತಿಂಗಳಿಂದ ತ್ವರಿತಗತಿಯಲ್ಲಿ ದಶಕಗಳಷ್ಟು ಹಳೆಯದಾದ ಪ್ರಕರಣದ ವಿಚಾರಣೆ ನಡೆಸುತ್ತಿದೆ. ಇದಕ್ಕೆ ಮುನ್ನ ಸುಪ್ರೀಂಕೋರ್ಟ್ ನೇಮಿಸಿದ್ದ ಸಂಧಾನ ಸಮಿತಿಯ ಕಕ್ಷಿದಾರರ ಮಧ್ಯೆ ಸಹಮತದ ಮೂಲಕ ಸೌಹಾರ್ದಯುತ ಇತ್ಯರ್ಥ ಕಂಡುಕೊಳ್ಳಲು ನಡೆಸಿದ್ದ ಯತ್ನ ವಿಫಲಗೊಂಡಿತ್ತು.

ಅಯೋಧ್ಯೆಯ ಸಂತರ ಸಮಿತಿಯೊಂದು ಈಗಾಗಲೇ ಮುಸ್ಲಿಮರ ಗುಂಪೊಂದು ಪುನಾರಂಭಿಸಿರುವ ಹೊಸ ಸಂಧಾನ ಯತ್ನದಿಂದ ದೂರ ಸರಿದಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿರುವುದರಿಂದ ಅದಕ್ಕೂ ಮುನ್ನ ತನ್ನ ತೀರ್ಪು ನೀಡುವ ಬಗೆಗೆ ಪೀಠವು ಸುಳಿವು ನೀಡಿದೆ.

October 1, 2019 Posted by | ಅಯೋಧ್ಯೆ, ಭಾರತ, ರಾಷ್ಟ್ರೀಯ, culture, Flash News, General Knowledge, India, Nation, News, Spardha, supreme court, Temples, Temples, ದೇವಾಲಯಗಳು | , , , , , , , , , , | Leave a comment

ಭಾರತದ ನ್ಯಾಯಾಂಗವನ್ನು ನಂಬಿ, ಅಸಂಬದ್ಧ ಮಾತುಗಳನ್ನು ಬಿಡಿ

19 modi supreme court
ರಾಮಮಂದಿರ ವಿಚಾರದಲ್ಲಿ ಪ್ರಧಾನಿ ಮೋದಿ ಹಿತನುಡಿ

ನಾಸಿಕ್: ಜನರು ಭಾರತದ ನ್ಯಾಯಾಂಗದ ಮೇಲೆ ನಂಬಿಕೆ ಇಡಬೇಕು ಮತ್ತು ರಾಮ ಮಂದಿರಕ್ಕೆ ಸಂಬಂಧಿಸಿದಂತೆ ’ಅಸಂಬದ್ಧ’ ಮಾತುಗಳಾಡುವುದನ್ನು ಸ್ಥಗಿತಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ನಾಸಿಕ್‌ನಲ್ಲಿ ನಡೆದ ಬೃಹತ್ ಸಭೆಯಲ್ಲಿ 2019 ಸೆಪ್ಟೆಂಬರ್  19ರ ಗುರುವಾರ ಕಿವಿಮಾತು ಹೇಳಿದರು.

ಪ್ರಧಾನಿಯವರು ಯಾರನ್ನು ಉದ್ದೇಶಿಸಿ ಈ ಮಾತು ಹೇಳಿದರು ಎಂಬುದು ತತ್‌ಕ್ಷಣಕ್ಕೆ ಸ್ಪಷ್ಟವಾಗಲಿಲ್ಲ.

೭೦ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿ – ಬಾಬರಿ ಮಸೀದಿ ಭೂ ವಿವಾದದ ಬಗ್ಗೆ ಸುಪ್ರೀಂಕೋರ್ಟ್ ಪ್ರತಿನಿದಿನವೂ ವಿಚಾರಣೆ ನಡೆಸುತ್ತಿರುವಾಗ ಈ ವ್ಯಕ್ತಿಗಳು ’ಅಡಚಣೆಗಳನ್ನು ಏಕೆ ಸೃಷ್ಟಿಸಬೇಕು’ ಎಂದು ಪ್ರಧಾನಿ ಅಚ್ಚರಿ ವ್ಯಕ್ತ ಪಡಿಸಿದರು.

’ಈ ’ಬಯಾನ್ ಬಹಾದುರ್’ ಎಲ್ಲಿಂದ ಬಂದರು ಎಂದು ನನಗೆ ಅಚ್ಚರಿಯಾಗುತ್ತಿದೆ? ಇವರು ಏಕೆ ಅಡಚಣೆಗಳನ್ನು ಸೃಷ್ಟಿಸುತ್ತಿದ್ದಾರೆ? ನಾವು ಸುಪ್ರೀಂಕೋರ್ಟ್, ಭಾರತದ ಸಂವಿದಾನ ಮತ್ತು ನ್ಯಾಯಾಂಗದ ಮೇಲೆ ವಿಶ್ವಾಸ ಇಡಬೇಕು. ದೇವರ ಮೇಲೆ ಆಣೆಇಟ್ಟು ಈ ಜನರಿಗೆ ನಾನು ಮನವಿ ಮಾಡುತ್ತಿದ್ದೇನೆ- ಭಾರತದ ನ್ಯಾಯಾಂಗದ ಮೇಲೆ ವಿಶ್ವಾಸ ಇಡಿ’ ಎಂದು ಪ್ರಧಾನಿ ಹೇಳಿದರು.

’ಸುಪ್ರೀಂಕೋರ್ಟ್ ಮತ್ತು ಅಲ್ಲಿ ತಮ್ಮ ವಾದಗಳನ್ನು ಮಂಡಿಸುತ್ತಿರುವ ಎಲ್ಲ ಜನರ ಮೇಲೂ ಗೌರವ ತೋರಿಸಿ’ ಎಂದು ಪ್ರಧಾನಿ ಜನತೆಯನ್ನು ಒತ್ತಾಯಿಸಿದರು.

ಸೋಮವಾರ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಕಾನೂನು ತರುವ ’ದಿಟ್ಟ ನಿರ್ಧಾರವನ್ನು’ ಕೇಂದ್ರ ಸರ್ಕಾರವು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.

೩೭೦ನೇ ವಿಧಿಯನ್ನು ರದ್ದು ಪಡಿಸಿದ ಕಾಶ್ಮೀರ ಕ್ರಮಕ್ಕಾಗಿ ಕೇಂದ್ರವನ್ನು  ಶ್ಲಾಘಿಸಿದ ಉದ್ಧವ್ ಠಾಕ್ರೆ ಇಂತಹುದೇ ದಿಟ್ಟತನವನ್ನು ರಾಮಮಂದಿರ ವಿಷಯದಲ್ಲೂ ತೋರಬೇಕು ಎಂದು ಹೇಳಿದ್ದರು.

’ಕೇಂದ್ರ ಸರ್ಕಾರವು ಕೋರ್ಟ್ ತೀರ್ಪಿನವರೆಗೆ ಕಾಯಬಾರದು ಮತ್ತು ತನ್ನ ಅಧಿಕಾರವನ್ನು ಚಲಾಯಿಸಬೇಕು ಎಂದು ನಾವು ನಿರೀಕ್ಷಿಸುತ್ತೇವೆ. ಕೇಂದ್ರವು ೩೭೦ನೇ ವಿಧಿಯನ್ನು ರದ್ದು ಪಡಿಸುವ ದಿಟ್ಟ ಹೆಜ್ಜೆಯನ್ನು ಇರಿಸಿದೆ. ರಾಮಮಂದಿರ ವಿಚಾರದಲ್ಲೂ ಕೇಂದ್ರವು ಇಂತಹವುದೇ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಮನವಿ’ ಎಂದು ಠಾಕ್ರೆ ಹೇಳಿದ್ದರು.

ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಗಾಗಿ ನಡೆಯಬೇಕಾದ ವಿವಾದಾತ್ಮಕ ಸ್ಥಾನ ಹಂಚಿಕೆ ಮಾತುಕತೆಗಳಿಗೆ ಮುನ್ನ ಮಿತ್ರ ಪಕ್ಷ ಬಿಜೆಪಿಯ ಮೇಲೆ ಒತ್ತಡ ಹಾಕುವ ಸಲುವಾಗಿ ಶಿವಸೇನೆ ಈ ಬೇಡಿಕೆ ಮುಂದಿಟ್ಟಿದೆ ಎಂದು ರಾಜಕೀಯ ವಲಯಗಳಲ್ಲಿ ವಿಶ್ಲೇಷಿಸಲಾಯಿತು.

ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಪಂಚ ಸದಸ್ಯ ಸುಪ್ರೀಂಕೋರ್ಟ್ ಪೀಠವು ರಾಮಜನ್ಮಭೂಮಿ -ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದ್ದು, ಪ್ರಕರಣದ ವಾದ ಮಂಡನೆ ಪೂರ್ಣಗೊಳಿಸಲು ಬುಧವಾರ ಅಕ್ಟೋಬರ್ ೧೮ರ ಗಡುವು ನೀಡಿತ್ತು.

’ವಿಚಾರಣೆಗಳನ್ನು ಅಕ್ಟೋಬರ್ ೧೮ರ ಗಡುವಿನೊಳಗಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಜಂಟಿ ಯತ್ನಕ್ಕೆ ಸಹಕರಿಸಿ’ ಎಂದು ಸಿಜೆಐ ಗೊಗೋಯಿ ಅವರು ಕೋರಿದ್ದರು.

ಮಾತುಕತೆ ಮೂಲಕ ದಶಕಗಳಷ್ಟು ಹಳೆಯದಾದ ಪ್ರಕರಣದ ಇತ್ಯರ್ಥಕ್ಕಾಗಿ ನಡೆದ ಸಂಧಾನಯತ್ನ ವಿಫಲಗೊಂಡ ಬಳಿಕ, ದೈನಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ ತಿಂಗಳಲ್ಲಿ ಆರಂಭಿಸಿತ್ತು.

ನಾಲ್ಕು ಸಿವಿಲ್ ಖಟ್ಲೆಗಳಿಗೆ ಸಂಬಂಧಿಸಿದಂತೆ ೨೦೧೦ರಲ್ಲಿ ಅಯೋಧ್ಯೆಯ ೨.೭೭ ಎಕರೆ ಭೂಮಿಯನ್ನು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮಲಲ್ಲಾ ಅವರಿಗೆ ಸಮಾನವಾಗಿ ಮೂರುಭಾಗಗಳಾಗಿ ಹಂಚಿಕೆ ಮಾಡಬೇಕು ಎಂಬುದಾಗಿ ಅಲಹಾಬದ್ ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ೧೪ ಮೇಲ್ಮನವಿಗಳು ಸುಪ್ರೀಂಕೋರ್ಟಿಗೆ ಸಲ್ಲಿಕೆಯಾಗಿದ್ದವು.

September 19, 2019 Posted by | ಅಯೋಧ್ಯೆ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, culture, General Knowledge, India, Nation, News, Politics, Prime Minister, Spardha, supreme court | , , , , , , , , | Leave a comment

ಆಲಯ ಒಲ್ಲದ ಸೌತೆಡ್ಕ ಗಣಪ..! Southedka Ganapa, Sky is limit to him..!

Southedka Ganapa,

Sky is limit to him..!


This Ganapa sitting in the forest near Kokkada of Dakshina Kannada is known as Suthedka Ganapa. The specialty of this Ganapa is that he has no temple. He wants all animals and birds like Cows, Dogs and crows apart from human beings should walk around him. Local people say that He ordered not to build temple for him. He is the real ganapa who is giving the message to human beings to live with nature. Visit him at least once in your life, suggests Nethrakere Udaya Shankara.

ಆಲಯ ಒಲ್ಲದ ಸೌತೆಡ್ಕ ಗಣಪ..!

ಸೌತೆಡ್ಕ ಗಣಪ ಉಳಿದ ಗಣಪರಿಗಿಂತ ಭಿನ್ನ. ಈತ ಆಲಯ ಬೇಡುವುದಿಲ್ಲ. ತನ್ನ ಸುತ್ತ ಮುತ್ತ ಮನುಷ್ಯರು ಮಾತ್ರವಲ್ಲ, ದನ ಕರುಗಳು, ಹಕ್ಕಿಗಳು, ನಾಯಿಗಳು ಸೇರಿದಂತೆ ಸಕಲ ಜೀವಿಗಳೂ ಸುತ್ತಾಡುತ್ತಿರಬೇಕು ಎನ್ನುತ್ತಾನೆ. ಈತನಿಗೆ ನಿತ್ಯ ಬೇಕು ಬಿಸಿಲಿನ, ಮಳೆ ನೀರಿನ, ಬೆಳದಿಂಗಳ ಅಭಿಷೇಕ. ಹಸಿರು ಕಾನನದ ವನರಾಜಿಯ ನಡುವಣ ಸ್ಚಚ್ಛ ಗಾಳಿಯ ಚಾಮರ ಸೇವೆ. ನಿಸರ್ಗ ರಕ್ಷಣೆಯ ಸಂದೇಶ ನೀಡುತ್ತಿರುವ ಈತ ನಿಜಕ್ಕೂ ಮನುಷ್ಯರ ಕಣ್ತೆರೆಸಬೇಕಾದ ‘ಮಹಾನ್ ಗಣಪ’..!

ನೆತ್ರಕೆರೆ ಉದಯಶಂಕರ

ಚೌತಿ ಅಂದ ತತ್ ಕ್ಷಣ ನೆನಪಾಗುವುದು ಗಣಪನ ಮೂರ್ತಿ. ಮನೆ ಮನೆಗಳಲ್ಲೂ ಹಬ್ಬ, ಮನ ಮನಗಳಲ್ಲೂ ಸಡಗರ. ದೇವಾಲಯಗಳಲ್ಲಿ ಗಣಪನಿಗೆ ಪೂಜೆ, ಹೋಮ ಹವನ. ಸಕಲ ಸಂಕಟಗಳನ್ನೂ ನಿವಾರಿಸುವಂತೆ ಕೋರಿಕೆ.

ಆದರೆ ಇಲ್ಲೊಬ್ಬ ಗಣಪ ನೋಡಿ. ಈತ ಇರುವುದು ಕಾಡಿನ ಮಧ್ಯೆ. ಶೀರಾಡಿ ಘಟ್ಟದ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವಾಗ ಉಪ್ಪಿನಂಗಡಿಗೆ ಮೊದಲೇ, ನೆಲ್ಯಾಡಿಗೆ ಹತ್ತಿರ ಧರ್ಮಸ್ಥಳಕ್ಕೆ ತೆರಳಲು ಒಂದು ಮಾರ್ಗವಿದೆ. ಈ ಮಾರ್ಗದಲ್ಲಿ ಸ್ವಲ್ಪ ದೂರ ಸಾಗಿದರೆ ಸಿಗುವುದು ಕೊಕ್ಕಡ. ಇಲ್ಲಿಗೆ ಸಮೀಪದಲ್ಲೇ ಈ ಗಣಪ ವಾಸವಾಗಿದ್ದಾನೆ.

ಎಲ್ಲ ಕಡೆ ದೇವಾಲಯಗಳ ಒಳಗೆ ಗಣಪ ವಿರಾಜಮಾನನಾಗಿದ್ದರೆ ಈ ಗಣಪ ವನದ ಮಧ್ಯೆ ವಿರಾಜಮಾನನಾಗಿದ್ದಾನೆ. ಈತನ ತಲೆಯ ಮೇಲೆ ಸೂರಿಲ್ಲ, ಗುಡಿ, ಗೋಪುರವೂ ಇಲ್ಲ. ಈತ ಸೌತೆಡ್ಕದಲ್ಲಿರುವ ವನ ಗಣಪತಿ- ಸೌತೆಡ್ಕ ಗಣಪನೆಂದೇ ಪ್ರಸಿದ್ಧ.

ಈ ಪ್ರದೇಶದಲ್ಲಿ ಸಮೀಪದಲ್ಲಿ ಎಂದೋ ಹಿಂದೆ ಒಂದು ರಾಜ್ಯವಿತ್ತಂತೆ. ಆ ರಾಜ್ಯದ ರಾಜನಿಂದಲೇ ಒಬ್ಬ ಗಣಪನಿಗೆ ಪೂಜೆ ಸಲ್ಲುತ್ತಿತ್ತು. ಒಮ್ಮೆ ವೈರಿಗಳೊಂದಿಗೆ ನಡೆದ ಯುದ್ಧದಲ್ಲಿ ಈ ರಾಜ ಸೋತು ಹೋದ. ಆತನ ಸೋಲಿನ ಬಳಿಕ ಗಣಪನಿಗೆ ಪೂಜೆ ನಿಂತು ಹೋಯಿತು. ರಾಜ್ಯ ಪಾಳು ಬಿದ್ದಿತು. ಈ ಗಣಪನನ್ನು ಆರಾಧಿಸುವವರು ಯಾರೂ ಇಲ್ಲವಾದರು.

ಇಲ್ಲಿ ಕ್ರಮೇಣ ಕಾಡು ಬೆಳೆಯಿತು. ಈ ಕಾಡಿನ ಒಳಕ್ಕೆ ಗೊಲ್ಲರ ಮಕ್ಕಳು ಜಾನುವಾರು ಮೇಯಿಸಲು ಬರುತ್ತಿದ್ದರು. ಹೀಗೆ ಬಂದ ಗೊಲ್ಲ ಮಕ್ಕಳಿಗೆ ಈ ಗಣಪ ಕಣ್ಣಿಗೆ ಬಿದ್ದ. ಅವರು ಮಕ್ಕಳಾಟಿಕೆಯಲ್ಲೇ ಈ ಗಣಪನ ಪೂಜೆ ಮಾಡುತ್ತಿದ್ದರು.

ಒಂದು ದಿನ ಈ ಗಣಪನ ಮೂರ್ತಿಯನ್ನು ಕೊಕ್ಕಡದ ಸಮೀಪ ಈಗ ಇರುವ ಸ್ಥಳಕ್ಕೆ ತಂದು ಇಟ್ಟು ಅಲ್ಲಿ ಪೂಜೆಯ ಆಟ ಶುರು ಮಾಡಿದರು. ಈ ಮಕ್ಕಳು ಆಡುತ್ತಾಡುತ್ತಾ ಗಣಪನಿಗೆ ನೈವೇದ್ಯವಾಗಿ ಅರ್ಪಿಸುತ್ತಿದ್ದುದು ‘ಸೌತೆಕಾಯಿ’ಯನ್ನು. ಈ ಹಿನ್ನೆಲೆಯಲ್ಲೇ ಈ ಸ್ಥಳಕ್ಕೆ ಸೌತೆಡ್ಕ ಎಂಬ ಹೆಸರು ಬಂತು ಎನ್ನುತ್ತದೆ ಸ್ಥಳಪುರಾಣ.

ಕಾಡಿನ ಮಧ್ಯೆ ಇರುವ ಈ ಸ್ಥಳ ತುಂಬ ಪ್ರಶಾಂತ. ಚಿಂತೆಗಳಿಂದ ಹತಾಶರಾಗಿ, ನೊಂದು ಬಂದವರಿಗೆ ಒಂದು ರೀತಿಯ ಸಮಾಧಾನ ನೀಡುವ ಸ್ಥಳ. ಅಧ್ಯಾತ್ಮ ಅರಸುವವರಿಗೆ ನೆಮ್ಮದಿ ಕೊಡುವ ತಾಣ. ತಮ್ಮ ಸಮಸ್ಯೆಗಳಿಂದ ನೊಂದ ಹಲವಾರು ಮಂದಿ ಬಂದು ಈ ಗಣಪನಿಗೆ ಸೌತೆಕಾಯಿ ಅರ್ಪಿಸಿ ಮಕ್ಕಳಂತೆಯೇ ಮುಗ್ಧಭಾವದಿಂದ ಪೂಜೆ ಮಾಡಿ ಮನೆಗೆ ಹೋಗುವ ಪರಿಪಾಠ ಬೆಳೆಯಿತು. ಅಂತಹ ಹಲವರ ಸಮಸ್ಯೆಗಳು ಈ ಗಣಪನಿಗೆ ಪೂಜೆ ಸಲ್ಲಿಸಿದ ಬಳಿಕ ದೂರಾದವಂತೆ.

ಕಾಡಿನೊಳಗಿನ ಸೌತೆಡ್ಕ ಗಣಪ ನಾಡೊಳಗಿನ ಮಂದಿಯ ಕಣ್ಣಿಗೆ ಗೋಚರವಾಗತೊಡಗಿದ್ದು ಹೀಗೆ. ಕ್ರಮೇಣ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿತು. ಈಗಂತೂ ಇಲ್ಲಿಗೆ ಬರುತ್ತಿದೆ ದೊಡ್ಡ ಸಂಖ್ಯೆಯ ಭಕ್ತಗಡಣ.

ಸಹ್ಯಾದ್ರಿ ಬೆಟ್ಟಗಳ ಸಾಲಿನ ನಡುವೆ ದಟ್ಟ ಹಸಿರು ಕಾನನದ ಮಧ್ಯೆ ಕುಳಿತ ಈ ಗಣಪನಿಗೆ ಏಕೆ ಆಲಯ ಕಟ್ಟಬಾರದು ಎಂದು ಒಬ್ಬ ಶ್ರೀಮಂತ ಭಕ್ತನಿಗೆ ಅನಿಸಿತಂತೆ. ಆತ ಗಣಪನಿಗೆ ಆಲಯ ಕಟ್ಟಿಸಬೇಕು ಎಂದು ಹೊರಟನಂತೆ.

ಆದರೆ ಅದೇ ದಿನ ರಾತ್ರಿ ಗಣಪ ಆತನ ಕನಸಿನಲ್ಲಿ ಕಾಣಿಸಿಕೊಂಡನಂತೆ. ‘ಆಲಯ ಕಟ್ಟಿಸುವ ಸಾಮರ್ಥ್ಯ ಇದ್ದರೆ ನನ್ನ ಅಪ್ಪ ಕಾಶಿ ವಿಶ್ವನಾಥನಿಗೂ ಕಾಣಿಸುವಷ್ಟು ಎತ್ತರಕ್ಕೆ ಆಲಯ ಕಟ್ಟಿಸು’ ಎಂದು ಕೋಪೋದ್ರಿಕ್ತನಾಗಿ ಹೇಳಿದನಂತೆ.

ಬೆಚ್ಚಿ ಬಿದ್ದ ಶ್ರೀಮಂತ ಭಕ್ತ, ಸೌತೆಡ್ಕ ಗಣಪನಿಗೆ ಆಲಯ ಕಟ್ಟುವ ಯೋಚನೆಗೆ ಎಳ್ಳು ನೀರು ಬಿಟ್ಟನಂತೆ. ಆಲಯ ಕಟ್ಟಬಾರದೆಂಬ ಆಣತಿ ಇಲ್ಲಿನ ಗಣಪನಿಂದ ಮೊದಲಿನಿಂದಲೂ ಇತ್ತು. ತನ್ನ ಸುತ್ತ ಮುತ್ತ ಮರಗಿಡಗಳು ಇರಬೇಕು, ಪಶು ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸಬೇಕು. ಯಾರಿಗೆ ಬೇಕಿದ್ದರೂ ಸಮೀಪ ಬಂದು ಪೂಜಿಸುವ ಅವಕಾಶ ಇರಬೇಕು ಎಂಬುದು ಗಣಪನ ಇಚ್ಛೆಯೇ ಆಗಿತ್ತು. ಅದನ್ನು ಮೀರ ಹೊರಟ ಶ್ರೀಮಂತ ಭಕ್ತನಿಗೆ ಇಂತಹ ಅನುಭವ ಆದ ಮೇಲಂತೂ ಯಾರೂ ಈ ಗಣಪನಿಗೆ ಆಲಯ ಕಟ್ಟುವ ಯೋಚನೆಯನ್ನೇ ಮಾಡುವುದಿಲ್ಲ ಎನ್ನುತ್ತಾರೆ ಸ್ಥಳೀಯರು.

ಇದಕ್ಕೆ ಪೂರಕ ಎನ್ನುವಂತೆ ಈ ಗಣಪನ ಸುತ್ತ ಯಾವಾಗಲೂ ದನಕರುಗಳು, ಜಾನುವಾರುಗಳು, ನಾಯಿಗಳು, ಪಶು ಪಕ್ಷಿಗಳು ಭಕ್ತರ ಜೊತೆಗೇ ಸುತ್ತಾಡುತ್ತಿರುತ್ತವೆ. ಭಕ್ತರು ತರುವ ಪ್ರಸಾದವನ್ನು ತಾವೂ ಭುಜಿಸುತ್ತವೆ. ಕೆಲವು ದನಕರುಗಳಂತೂ ಆಗ್ರಹಪೂರ್ವಕವಾಗಿ ಭಕ್ತರ ಕೈಗಳಲ್ಲಿನ ಪ್ರಸಾದವನ್ನು ಪಡೆದುಕೊಂಡ ಬಳಿಕವೇ ಮುಂದುವರಿಯುತ್ತವೆ.

ಕೆಲ ದಿನಗಳ ಹಿಂದಿನವರೆಗೂ ಒಂದು ಬಿಳಿಯ ದನ ಈ ಪರಿಸರದಲ್ಲಿ ನಿತ್ಯವೂ ಸುತ್ತಾಡುತ್ತಿತ್ತು. ಗಣಪನಿಗೆ ಪೂಜೆ ನಡೆಯುವಾಗ ಅದು ಅಲ್ಲೇ ನಿಂತು ಪೂಜೆಯನ್ನು ವೀಕ್ಷಿಸುತ್ತಿತ್ತು. ಪೂಜೆಯ ಬಳಿಕ ಅದು ಗಣಪನ ಮೂತರ್ಿಯ ಬಳಿಗೆ ಹೋಗಿ ಅಲ್ಲಿ ಬಿದ್ದ ಎಲ್ಲ ಹೂವುಗಳನ್ನೂ ಹೆಕ್ಕಿ ಹೆಕ್ಕಿ ತಿನ್ನುತ್ತಿತ್ತು. ಪೂಜೆ ನಡೆದ ಸ್ವಲ್ಪ ಹೊತ್ತಿನ ಬಳಿಕ ಅಲ್ಲಿಗೆ ಯಾರಾದರೂ ಬಂದರೆ ಅಲ್ಲಿ ಪೂಜೆಯ ಗೌಜಿ ಏನೂ ಇರಲೇ ಇಲ್ಲ ಎಂಬಷ್ಟು ಶಾಂತ, ಸ್ವಚ್ಛ ಪರಿಸರ. ಅಲ್ಲಿ ಉಳಿಯುತ್ತಿದ್ದುದು ಗಣಪನ ವಿಗ್ರಹ ಮತ್ತು ಭಕ್ತರು ಉರಿಸಿ ಇಡುತ್ತಿದ್ದ ಧೂಪ, ದೀಪಗಳು ಮಾತ್ರ.

ಗಣಪನ ಮುಂದೆ ಭಕ್ತರು ನಿರ್ಮಾಣ ಮಾಡಿದ ಪುಟ್ಟ ಛಾವಣಿ ರಹಿತ ‘ಸರಳ ಮಂಟಪ’ ಉಂಟು. ಕೇವಲ ಸರಳುಗಳನ್ನು ಹೊಂದಿದ ‘ಸರಳ ಮಂಟಪ’ದ ಸರಳುಗಳಲ್ಲಿ ನೂರಾರು ಗಂಟೆಗಳು ಕಾಣಿಸುತ್ತವೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ್ದಕ್ಕೆ ಭಕ್ತರೇ ಕೃತಜ್ಞತಾ ಪೂರ್ವಕವಾಗಿ ಕಟ್ಟಿದ ಗಂಟೆಗಳಿವು. ಈ ತರಹೇವಾರಿ ಗಂಟೆಗಳು ಗಾಳಿ ಬೀಸಿದಾಗ ಸದ್ದು ಮಾಡುತ್ತಾ ನಾದ ಹೊಮ್ಮಿಸಿ ಪರಿಸರಕ್ಕೆ ಒಂದು ವಿಶೇಷ ಕಳೆಯನ್ನು ತಂದು ಕೊಡುತ್ತವೆ.

ಹಾಗಾದರೆ ಇಲ್ಲಿಗೆ ಮಧ್ಯಾಹ್ನದ ವೇಳೆಗೋ, ರಾತ್ರಿಯ ವೇಳೆಗೋ ಬಂದರೆ ಊಟಕ್ಕೆ ಗತಿ? ಹಾಗೇನೂ ಅಂಜ ಬೇಕಿಲ್ಲ. ಭಕ್ತರೇ ಸೇರಿಕೊಂಡು ಇಲ್ಲಿ ಸಮಿತಿಯೊಂದನ್ನು ರಚಿಸಿಕೊಂಡಿದ್ದಾರೆ. ಈ ಸಮಿತಿಯ ಮೂಲಕ ಇಲ್ಲಿ ಭಕ್ತರಿಗೆ ಮಧ್ಯಾಹ್ನ, ರಾತ್ರಿ ಪ್ರಸಾದ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಉಂಡು ವಿಶ್ರಮಿಸಿ ಪ್ರಯಾಣ ಮುಂದುವರೆಸಬಹುದು.

ಇಲ್ಲಿ ಗಣಪನಿಗೆ ವಿಧಿವತ್ತಾಗಿ ಪೂಜೆ ಸಲ್ಲಿಸಲು ಅರ್ಚಕರು ಇದ್ದಾರೆ. ಹಾಗಂತ ನೀವು ಹೋದಾಗ ಅರ್ಚಕರು ಇಲ್ಲದೇ ಇದ್ದರೆ? ನೀವೇ ನೇರವಾಗಿ ನಿಮ್ಮ ಕೈಯಿಂದಲೇ ಪೂಜೆ ಸಲ್ಲಿಸಲು ಅಡ್ಡಿ ಇಲ್ಲ.

ವಿಶೇಷವೆಂದರೆ ಈ ಗಣಪನಿಗೆ ಧಾರ್ಮಿಕ ವಿಧಿ ವಿಧಾನಗಳ ಪೂಜೆಗಿಂತ ಮಳೆಗಾಲದಲ್ಲಿ ಸುರಿಯುವ ಮಳೆನೀರಿನ ನಿತ್ಯಾಭಿಷೇಕ, ಸೆಕೆಗಾಲದಲ್ಲಿ ಸೂರ್ಯನ ಬಿಸಿಲಿನ ಅಭಿಷೇಕ, ರಾತ್ರಿ ಚಂದ್ರನ ಹಿತಕರವಾದ ಬೆಳದಿಂಗಳ ಅಭಿಷೇಕ, ಗಿಡ ಮರಗಳ ಎಲೆಗಳನ್ನು ಅಲ್ಲಾಡಿಸುತ್ತಾ, ಬಳ್ಳಿಗಳನ್ನು ಬಳುಕಿಸುತ್ತಾ ಮೈಮನಗಳಿಗೆ ಮುದ ನೀಡುವ ವಾಯುವಿನ ಚಾಮರ ಸೇವೆ ಬಲು ಪ್ರಿಯ. ಇದು ನೋಡಲು ಕಣ್ಣಿಗೆ ಸೊಬಗಿನ ದೃಶ್ಯ ಕೂಡಾ.

ಸೌತೆಡ್ಕ ಗಣಪನ ಪರಿಸರದಲ್ಲ್ಲಿ ನಿತ್ಯವೂ ನಡೆಯುವುದು ಪ್ರಕೃತಿಯ ಪೂಜೆ. ಈ ಪೂಜಾ ಉತ್ಸವಕ್ಕೆ ಗಣಪನ ಪ್ರತಿಮೆ ಸಂಕೇತ ಅಷ್ಟೆ. ಮಳೆ, ಬಿಸಿಲು, ಗಾಳಿ, ಗಂಟೆ, ಹಕ್ಕಿಗಳ ಚಿಲಿಪಿಲಿ, ಗೋವುಗಳ ‘ಅಂಬಾ’ ನಾದ, ಶ್ವಾನಗಳ ನಿತ್ಯ ಕಾವಲು – ನೀವು ಬದುಕುವ ಮುನ್ನ ಸುತ್ತು ಮುತ್ತಣ ಪರಿಸರವನ್ನು ರಕ್ಷಿಸಿ, ಪರಿಸರದ ಸೊಬಗು ಕಾಪಾಡಿ ಎಂಬ ಸಂದೇಶ ನೀಡುತ್ತಿದ್ದಾನೆ ಸೌತೆಡ್ಕದ ಈ ‘ವನ ಗಣಪತಿ’.

ಈ ಚೌತಿಗೆ ಹೋಗಲಾಗದಿದ್ದರೆ ಚಿಂತೆಯಿಲ್ಲ. ಮುಂದಿನ ಚೌತಿಯ ಒಳಗಾದರೂ ದಕ್ಷಿಣ ಕನ್ನಡ ಜಿಲ್ಲೆಗೆ ಹೋದರೆ ಖಂಡಿತ ವೀಕ್ಷಿಸಲು ಮರೆಯಬೇಡಿ ಆಲಯ ಬೇಡದ, ಮಳೆ, ಗಾಳಿ, ಚಳಿ, ಬಿಸಿಲಿಗೆ ಮೈಯೊಡ್ಡಿ ನಿಂತಿರುವ ಈ ಸೌತೆಡ್ಕ ಗಣಪತಿಯನ್ನು.

ಸ್ಥಳದ ಬಗ್ಗೆ ಹೆಚ್ಚಿನ ವಿವರಗಳಿಗೆ ಸಮಿತಿಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ವಾಸುದೇವ ಶಬರಾಯ (08251 202161/ 9448843799) ಇವರನ್ನು ಸಂಪರ್ಕಿಸಬಹುದು.

(ಚಿತ್ರಕೃಪೆ: ರಾಜಗೋಪಾಲ ಭಟ್, ಕೈಲಾರ ಸ್ಟೋರ್ಸ್, ಉಪ್ಪಿನಂಗಡಿ).

August 1, 2009 Posted by | Adhyathma, Temples | , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ