SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

೨೫,೦೦೦ ರೂ ಉಳಿಸಲು ಮೇಲ್ಮನವಿ, ಲಕ್ಷಾಂತರ ರೂ ವೆಚ್ಚ!

01 supreme courtಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್  ತಪರಾಕಿ

ನವದೆಹಲಿ: ೨೫,೦೦೦ ರೂಪಾಯಿಗಳ ಜುಜುಬಿ ದಂಡದ ಹಣವನ್ನು ಉಳಿಸುವ ಸಲುವಾಗಿ ಲಕ್ಷಾಂತರ ರೂಪಾಯಿಗಳನ್ನು ಖಟ್ಲೆಗಾಗಿ ವೆಚ್ಚ ಮಾಡಿದ ಕೇರಳ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿತು.

ಕೇರಳ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ’ಇಂತಹ ಕ್ಷುಲ್ಲಕ ಮತ್ತು ಅನಗತ್ಯ ಪ್ರಕರಣ’ ದಾಖಲಿಸಿದ್ದಕ್ಕಾಗಿ ಅದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು. ಇಂತಹ ದುಸ್ಸಾಹಸಗಳನ್ನು ಮಾಡುವುದರ ವಿರುದ್ಧ ಕಠಿಣ ಎಚ್ಚರಿಕೆ ನೀಡಿತು.

‘ಭವಿಷ್ಯದಲ್ಲಿ ಕೇರಳ ಸರ್ಕಾರದಿಂದ ಇಂತಹ ಅರ್ಜಿ ಸಲ್ಲಿಕೆಯಾದರೆ ನಾವು ಭಾರೀ ದಂಡ ವಿಧಿಸಬೇಕಾಗುತ್ತದೆ ಎಂಬದಾಗಿ ನಾವು ಸ್ಪಷ್ಟ ಪಡಿಸಬಯಸುತ್ತೇವೆ’ ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ತನ್ನ ಆದೇಶದಲ್ಲಿ ಎಚ್ಚರಿಸಿತು.

ಹೈಕೋರ್ಟ್ ತೀರ್ಪೊಂದನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆಯಲ್ಲಿ ಸುಪ್ರೀಂಕೋರ್ಟ್ ಕೇರಳ ಸರ್ಕಾರವನ್ನು ಈ ರೀತಿ ಕಟುವಾಗಿ ತರಾಟೆಗೆ ತೆಗೆದುಕೊಂಡಿತು.

ಎರಡು ದಿನಾಂಕಗಳಲ್ಲಿ ಆರೋಪಿಯನ್ನು ಹಾಜರು ಪಡಿಸಲು ರಾಜ್ಯ ಸರ್ಕಾರ ವಿಫಲವಾದ ಬಳಿಕ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು ದುಬೈಯಿಂದ ಸಾಕ್ಷ ನೀಡುವ ಸಲುವಾಗಿ ಬಂದಿದ್ದ ಸಾಕ್ಷಿದಾರನಿಗೆ ೨೫,೦೦೦ ರೂಪಾಯಿಗಳನ್ನು ಪಾವತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಆಜ್ಞಾಪಿಸಿದ್ದರು. ಆರೋಪಿ ಹಾಜರಿಲ್ಲದ ಕಾರಣ ಸಾಕ್ಷ್ಯ ನೀಡಿಕೆಯನ್ನು ಮುಂದೂಡಬೇಕಾಗಿ ಬಂದಿತ್ತು.

ವಿಚಾರಣಾ ನ್ಯಾಯಾಧೀಶರ ಈ ಆದೇಶದ ವಿರುದ್ಧ ಕೇರಳ ಸರ್ಕಾರವು ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ವಿಚಾರಣಾ ನ್ಯಾಯಾಧೀಶರ ಆದೇಶವು ಸರಿಯಾಗಿಯೇ ಇದೆ ಎಂದು ಹೇಳಿ ಹೈಕೋರ್ಟ್ ಅದನ್ನು ಎತ್ತಿ ಹಿಡಿಯಿತು.

ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಎತ್ತಿ ಹಿಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿತು. ಮತ್ತು ತನ್ಮೂಲಕ, ೨೫,೦೦೦ ರೂಪಾಯಿಗಳನ್ನು ಉಳಿಸಲು ಖಟ್ಲೆಗಳಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುವ ಮಾರ್ಗವನ್ನು ಆರಿಸಿಕೊಂಡಿತು.

ಈ ಅರ್ಜಿಯು ಸುಪ್ರೀಂಕೋರ್ಟಿನ ಮುಂದೆ ವಿಚಾರಣೆಗೆ ಬಂದಾಗ, ಇಂತಹ ಖಟ್ಲೆಗಳಿಗಾಗಿ ಸರ್ಕಾರಿ ಬೊಕ್ಕಸದಿಂದ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುವಂತೆ ಕೆಲವು ಅಧಿಕಾರಿಗಳು ಮತ್ತು ವಕೀಲರು ಮಾಡುವ ಸಲಹೆಯನ್ನು ನ್ಯಾಯಮೂರ್ತಿಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

‘ರಾಜ್ಯ ಸರ್ಕಾರವು ಮೊದಲಿಗೆ ವಿಚಾರಣಾ ನ್ಯಾಯಾಧೀಶರ ಆದೇಶವನ್ನು ಹೈಕೋರ್ಟಿನ ಮುಂದೆ ಪ್ರಶ್ನಿಸಿತು. ಈಗ ನಮ್ಮ ಮುಂದೆ ಈ ಅರ್ಜಿ ಬಂದಿದೆ. ಇಂತಹ ಕ್ಷುಲ್ಲಕ ಅರ್ಜಿಗಾಗಿ ಲಕ್ಷಾಂತರ ರೂಪಾಯಿಗಳು ವೆಚ್ಚವಾಗಿರಬಹುದು. ಈ ಅರ್ಜಿಯನ್ನು ವಜಾಗೊಳಿಸಲಾಗಿದೆ’ ಎಂದು ಸುಪ್ರೀಂಕೋರ್ಟ್ ಪೀಠವು ಹೇಳಿತು.

ಭವಿಷ್ಯದಲ್ಲಿ ಇಂತಹ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸದಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಸುಪ್ರೀಂಕೋರ್ಟ್ ಇಂತಹ ಮೇಲ್ಮನವಿಗಳಿಗೆ ಭಾರೀ ದಂಡ ವಿಧಿಸಲಾಗುವುದು ಎಂದು ಹೇಳಿತು.

November 1, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ಸುಪ್ರೀಂಕೋರ್ಟ್, Finance, Flash News, General Knowledge, India, Nation, News, Spardha, supreme court | , , , , | Leave a comment

ರವಾನೆಯಲ್ಲಿ ಚೆಕ್ ಕಳೆದುಕೊಂಡ ಬ್ಯಾಂಕ್..!

grahak cheque lost in transit spardha web
ಅರ್ಜಿದಾರರು ಚೆಕ್ ನೀಡಿದವರ ವಿರುದ್ಧ ಬರಬೇಕಾದ ಹಣ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬುದು ಪ್ರತಿವಾದಿ ಬ್ಯಾಂಕಿನ ವಾದ. ಆದರೆ ಎಂತಹ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರನ ಇಚ್ಛೆಗೆ ಬಿಟ್ಟ ವಿಷಯ. ಈ ಬಗ್ಗೆ ಪ್ರತಿವಾದಿ ಬ್ಯಾಂಕು ಆತನಿಗೆ ಸಲಹೆ ನೀಡಬೇಕಾದ ಅಗತ್ಯ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ನೆತ್ರಕೆರೆ ಉದಯಶಂಕರ

ಹಣ ವರ್ಗಾವಣೆಗೆ ಬ್ಯಾಂಕುಗಳಲ್ಲಿ  ಬಳಸುವ ಸುಲಭ ವಿಧಾನ ಚೆಕ್ ಇಲವೇ ಡಿಡಿ. ಬ್ಯಾಂಕಿಗೆ ಸ್ಲಲಿಸಲಾದ ಇಂತಹ ಚೆಕ್ ರವಾನೆ ಕಾಲದಲ್ಲಿ  ಕಳೆದುಹೋದರೆ ಹೊಣೆಗಾರರು ಯಾರು? ಗ್ರಾಹಕರು ಇಂತಹ ಸಂದರ್ಭದಲ್ಲಿ ಬ್ಯಾಂಕಿನ ವಿರುದ್ಧ ಕ್ರಮ ಕೈಗೊಳ್ಳಬಹುದೇ? ಗ್ರಾಹಕ ಸಂರಕ್ಷಣಾ ಕಾಯ್ದೆಯ ಅಡಿಯ್ಲಲಿ ಅವರಿಗೆ ಪರಿಹಾರ ದೊರೆಯುವುದೇ?

ಹೌದು. ಆದರೆ ಗ್ರಾಹಕ ಅಪೇಕ್ಷಿಸಿದಷ್ಟು ಪರಿಹಾರ ದೊರೆಯಬಹುದು ಎಂದೇನೂ ಇಲ್ಲ. ತಮ್ಮ ಮುಂದೆ ಬಂದ ಇಂತಹ ಪ್ರಕರಣದ್ಲಲಿ ಬೆಂಗಳೂರು ನಗರ ಜ್ಲಿಲಾ ಗ್ರಾಹಕ ನ್ಯಾಯಾಲಯವು ಗ್ರಾಹಕರೊಬ್ಬರಿಗೆ ಭಾಗಶಃ ಪರಿಹಾರ ನೀಡಿದ ಪ್ರಕರಣ ಇದು.

ಈ ಪ್ರಕರಣದ ಅರ್ಜಿದಾರರು: ಬೆಂಗಳೂರು ಹುಳಿಮಾವು ನಿವಾಸಿ ಎಸ್.ಸಿ.ಬಿ. ಪಾಟೀಲ್. ಪ್ರತಿವಾದಿ: ಶಾಖಾ ಮ್ಯಾನೇಜರ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹುಳಿಮಾವು ಶಾಖೆ, ಬೆಂಗಳೂರು.

ಅರ್ಜಿದಾರರು ಪ್ರತಿವಾದಿ ಬ್ಯಾಂಕಿನಲ್ಲಿ  ಚಾಲ್ತಿ ಖಾತೆಯೊಂದನ್ನು ೨೦೦೬ರ ಆಗಸ್ಟ್ ೨೮ರಂದು ತೆರೆದಿದ್ದರು. ೨೦೦೭ರ ಮಾರ್ಚ್ ೮ರಂದು ಅವರು ಈ ಖಾತೆಗೆ ೨೬,೦೦೦ ರೂಪಾಯಿಗಳ ಚೆಕ್ ಒಂದನ್ನು ನಗದೀಕರಣದ ಸಲುವಾಗಿ ಹಾಕಿದರು. ಅದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಇಂದಿರಾನಗರ ಶಾಖೆ, ಬೆಂಗಳೂರು ಇಲ್ಲಿನ ಚೆಕ್.

ಕೆಲವು ದಿನಗಳ ಬಳಿಕ ವಿಚಾರಿಸಿದಾಗ ಚೆಕ್ ನೀಡಿದಾತನ ಖಾತೆಯಲ್ಲಿ ಸಾಕಷ್ಟು ಹಣ ಇಲದ ಕಾರಣ ಈ ಚೆಕ್ ’ಪಾಸ್’ ಆಗದೆ ವಾಪಸಾದುದು ಅರ್ಜಿದಾರರಿಗೆ ಗೊತ್ತಾಯಿತು. ಈ ಮಾಹಿತಿ ಲಭಿಸುವಷ್ಟರಲ್ಲಿ ಎರಡು ತಿಂಗಳುಗಳು ಕಳೆದುಹೋಗಿದ್ದವು. ಅವರು ತತ್‌ಕ್ಷಣವೇ ಚೆಕ್ ನೀಡಿದ್ದ ಅಶೋಕನ್ ಅವರನ್ನು ಸಂಪರ್ಕಿಸಿ ವಿಚಾರಿಸಿದರು. ಅಶೋಕನ್ ಅವರು ೧೩-೬-೨೦೦೭ರಂದು ಅದೇ ಚೆಕ್ಕನ್ನು ಮತ್ತೆ ಬ್ಯಾಂಕಿನಲ್ಲಿ  ಹಾಜರು ಪಡಿಸುವಂತೆ ಕೋರಿದರು. ಒಪ್ಪಿದ ಅರ್ಜಿದಾರರು ೧೩-೬-೨೦೦೭ರಂದು ಮತ್ತೆ ಅದೇ ಚೆಕ್ಕನ್ನು ಬ್ಯಾಂಕಿಗೆ ಹಾಕಿದರು.

ಆ ಬಳಿಕ ಖಾತೆಗೆ ಹಣ ಜಮಾ ಆಗಬಹುದು ಎಂದು ಅರ್ಜಿದಾರರು ಒಂದೆರಡು ತಿಂಗಳ ಕಾಲ ಸಹನೆಯಿಂದ ಕಾದರು. ಎರಡು ತಿಂಗಳ ಬಳಿಕ ೧೬-೮-೨೦೦೭ರಂದು ಅರ್ಜಿದಾರರಿಗೆ ಬ್ಯಾಂಕಿನಿಂದ ಒಂದು ಪತ್ರ ಬಂತು. ಅದರಲ್ಲಿ ಅವರು ನೀಡಿದ್ದ ಚೆಕ್ ರವಾನೆ ಕಾಲದಲ್ಲಿ  ಕಳೆದುಹೋಗಿದೆ ಎಂದು ತಿಳಿಸಲಾಗಿತ್ತು.

ಇದು ಪ್ರತಿವಾದಿ ಪಾಲಿನ ನಿರ್ಲಕ್ಷ್ಯ ಹಾಗೂ ಸೇವಾ ಲೋಪ ಎಂಬುದಾಗಿ ಭಾವಿಸಿದ ಅರ್ಜಿದಾರರು ತಮಗಾದ ಆರ್ಥಿಕ ನಷ್ಟ ಮತ್ತು ಮಾನಸಿಕ ಯಾತನೆಗಾಗಿ ಪರಿಹಾರ ನೀಡುವಂತೆ ಪ್ರತಿವಾದಿ ಬ್ಯಾಂಕಿಗೆ ಲೀಗಲ್ ನೋಟಿಸ್ ಕಳುಹಿಸಿದರು. ಅದಕ್ಕೆ ಸೂಕ್ತ ಉತ್ತರ ಬರದೇ ಹೋದಾಗ ಅರ್ಜಿದಾರರು ಬೆಂಗಳೂರು ನಗರ ಜ್ಲಿಲಾ ಗ್ರಾಹಕ ನ್ಯಾಯಾಲಯದ ಮೆಟ್ಟಲೇರಿದರು.

ಅಧ್ಯಕ್ಷ ಎ.ಎಂ. ಬೆನ್ನೂರು, ಸದಸ್ಯರಾದ ಸೈಯದ್ ಉಸ್ಮಾನ್ ರಜ್ವಿ ಮತ್ತು ಶ್ರೀಮತಿ ಎಂ. ಯಶೋದಮ್ಮ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರ ವಕೀಲ ಕೆ.ಪಿ. ಜಯಸಿಂಹ ಮತ್ತು ಪ್ರತಿವಾದಿ ಬ್ಯಾಂಕಿನ ಪರ ವಕೀಲ ದೀಪಕ್ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ಪ್ರತಿವಾದಿ ಬ್ಯಾಂಕು ಅರ್ಜಿದಾರರ ಎಲ ಆಪಾದನೆಗಳನ್ನೂ ನಿರಾಕರಿಸಿ, ಚೆಕ್ ರವಾನೆ ಕಾಲದಲ್ಲಿ  ಕಳೆದುಹೋದೊಡನೆಯೇ ಪೊಲೀಸರಲ್ಲಿ  ದೂರು ದಾಖಲಿಸುವುದರ ಜೊತೆಗೆ ಅರ್ಜಿದಾರರಿಗೂ ಮಾಹಿತಿ ನೀಡಲಾಗಿದೆ. ಅರ್ಜಿದಾರರು ಚೆಕ್ ನೀಡಿದವರಿಂದ ಹಣ ಪಡೆಯಲು ಅಥವಾ ಬೇರೆ ಚೆಕ್ ಪಡೆಯಲು ಕ್ರಮ ಕೈಗೊಳ್ಳುವ ಬದಲು ತನ್ನ ವಿರುದ್ದ ಈ ಸುಳ್ಳು ಖಟ್ಲೆ ದಾಖಲಿಸಿದ್ದಾರೆ ಎಂದು ಪ್ರತಿಪಾದಿಸಿತು.

ಕಳೆದು ಹೋಗಿರುವ ಚೆಕ್ ಪತ್ತೆಗಾಗಿ ತಾವು ಯತ್ನಿಸುತ್ತಿದ್ದು, ಅದು ಪತ್ತೆಯಾದೊಡನೆ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅರ್ಜಿದಾರರು ಬ್ಯಾಂಕಿನ ವಿರುದ್ಧ ದೂರು ನೀಡುವ ಬದಲು ಚೆಕ್ ನೀಡಿದವರ ವಿರುದ್ಧವೇ ಹಣಕ್ಕಾಗಿ ದಾವೆ ಹೂಡಬಹುದು. ಅವರು ಬ್ಯಾಂಕಿನ ವಿರುದ್ಧ ಸೇವಾಲೋಪದ ಆರೋಪ ಮಾಡಿದ್ದು ಸರಿಯಲ್ಲ ಎಂದು ವಾದಿಸಿದ ಬ್ಯಾಂಕು ಅರ್ಜಿಯನ್ನು ತಳ್ಳಿಹಾಕುವಂತೆ ಮನವಿ ಮಾಡಿತು.

ಅರ್ಜಿದಾರರು ಪ್ರತಿವಾದಿ ಬ್ಯಾಂಕಿನ ಖಾತೆದಾರರಾಗಿದ್ದು, ನಗದೀಕರಣಕ್ಕಾಗಿ ಎರಡೆರಡು ಸಲ ಬ್ಯಾಂಕಿಗೆ ಚೆಕ್ ಸಲ್ಲಿಸಿದ್ದನ್ನು ಬ್ಯಾಂಕು ನಿರಾಕರಿಸಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿತು. ತನ್ನ ಗ್ರಾಹಕನಿಗೆ ಸಮರ್ಪಕ ಸೇವೆ ಒದಗಿಸಬೇಕಾದದ್ದು ಬ್ಯಾಂಕಿನ ಕರ್ತವ್ಯ. ರವಾನೆ ಕಾಲದಲ್ಲಿ ಚೆಕ್ ಕಳೆದುಹೋದರೆ ಗ್ರಾಹಕನನ್ನು ಸಂತೃಪ್ತಿ ಪಡಿಸಲು ಪೊಲೀಸರಿಗೆ ದೂರು ಕೊಟ್ಟು ಬಿಟ್ಟರೆ ಅದು ತನ್ನ ಕರ್ತವ್ಯ ನಿರ್ವಹಿಸಿದಂತಾಗುವುದಿಲ್ಲ. ಚೆಕ್ ಕಳೆದುಹೋಗಿದೆ ಎಂದು ಒಪ್ಪಿಕೊಂಡಾಗ ಅದು ಸೇವಾಲೋಪ ಎಂದೇ ಅರ್ಥವಾಗುತ್ತದೆ ಎಂದು ನ್ಯಾಯಾಲಯ ಭಾವಿಸಿತು.

ಅರ್ಜಿದಾರರು ಚೆಕ್ ನೀಡಿದವರ ವಿರುದ್ಧ ಬರಬೇಕಾದ ಹಣ ಪಡೆಯಲು ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬುದು ಪ್ರತಿವಾದಿ ಬ್ಯಾಂಕಿನ ವಾದ. ಆದರೆ ಎಂತಹ ಕ್ರಮ ಕೈಗೊಳ್ಳಬೇಕು ಎಂಬುದು ಅರ್ಜಿದಾರನ ಇಚ್ಛೆಗೆ ಬಿಟ್ಟ ವಿಷಯ. ಈ ಬಗ್ಗೆ ಪ್ರತಿವಾದಿ ಬ್ಯಾಂಕು ಆತನಿಗೆ ಸಲಹೆ ನೀಡಬೇಕಾದ ಅಗತ್ಯ ಇಲ. ಇಲ್ಲಿ ಅರ್ಜಿದಾರರು ತನಗೆ ಚೆಕ್ ನೀಡಿದಾತನ ಜೊತೆ ಸೇರಿ ಬ್ಯಾಂಕು ಚೆಕ್ ಕಳೆದುಕೊಂಡದ್ದರ ದುರುಪಯೋಗ ಪಡೆಯುವ ಬಗ್ಗೆ ಚಿಂತಿಸಿದ ಸಾಧ್ಯತೆಯನ್ನೂ ಅಲಗಳೆಯಲಾಗುವುದಿಲ್ಲ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಇದೇನೇ ಇದ್ದರೂ ಈ ಪ್ರಕರಣದ್ಲದಲ್ಲಿ ಚೆಕ್ ಕಳೆದುಕೊಳ್ಳುವ ಮೂಲಕ ಪ್ರತಿವಾದಿ ಬ್ಯಾಂಕು ಸೇವಾಲೋಪ ಎಸಗಿದ್ದು ಖಚಿತವಾದ ಕಾರಣ, ಅರ್ಜಿದಾರರು ಪರಿಹಾರಕ್ಕೆ ಅರ್ಹರಾಗುತ್ತಾರೆ. ಆದರೆ ಅವರು ಕೇಳಿದಷ್ಟು ಪರಿಹಾರವನ್ನು ಪ್ರತಿವಾದಿ ಕೊಡಬೇಕಾಗಿಲ್ಲ ಎಂಬ ತೀರ್ಮಾನಕ್ಕೆ ನ್ಯಾಯಾಲಯವು ಬಂದಿತು.

ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಭಾಗಶಃ ಅಂಗೀಕರಿಸಿದ ನ್ಯಾಯಾಲಯವು, ೫೦೦೦ ರೂಪಾಯಿಗಳ ಪರಿಹಾರವನ್ನು ೧೦೦೦ ರೂಪಾಯಿ ಖಟ್ಲೆ ವೆಚ್ಚ ಸೇರಿಸಿ ಅರ್ಜಿದಾರನಿಗೆ ಪಾವತಿ ಮಾಡುವಂತೆ ಪ್ರತಿವಾದಿ ಬ್ಯಾಂಕಿಗೆ ಆದೇಶ ನೀಡಿತು.

(ಗ್ರಾಹಕರ ಸುಖ ದುಃಖ- ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ)

October 21, 2019 Posted by | ಗ್ರಾಹಕರ ಸುಖ ದುಃಖ, consumer cases, Consumer Issues, Spardha | , | Leave a comment

ಲಭಿಸಿತು ಸ್ವಿಸ್ ಬ್ಯಾಂಕ್ ಖಾತೆದಾರರ ಪಟ್ಟಿ

07 swiss bank list reached indian govt paryaya web
ನವದೆಹಲಿ:
 ಭಾರತ ಹಾಗೂ ಸ್ವಿಜರ್ಲೆಂಡ್ ನಡುವಿನ ಸ್ವಯಂಚಾಲಿತ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿ ಭಾರತದ ನಿವಾಸಿಗಳು ಸ್ವಿಜರ್ಲೆಂಡ್​ನ ಖಾಸಗಿ ಬ್ಯಾಂಕುಗಳಲ್ಲಿ ಹೊಂದಿರುವ ಹಣಕಾಸು ಖಾತೆಗಳ ವಿವರವನ್ನು ಪಡೆದುಕೊಳ್ಳುವಲ್ಲಿ ಕೇಂದ್ರ ಸರ್ಕಾರ  ಕೊನೆಗೂ ಸಫಲವಾಗಿದ್ದು, ಸ್ವಿಸ್ ಬ್ಯಾಂಕ್ ಖಾತೆದಾರರ ಮಾಹಿತಿಯ ಮೊದಲ ಕಂತು ಕೇಂದ್ರದ ಕೈಸೇರಿದೆ ಎಂದು ಸುದ್ದಿ ಮೂಲಗಳು 2019 ಅಕ್ಟೋಬರ್ 07ರ ಸೋಮವಾರ  ತಿಳಿಸಿದವು.

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಎನ್ ಡಿಎ ಸರ್ಕಾರ ದೀರ್ಘ ಕಾಲದಿಂದ ನಡೆಸಿದ್ದ ಯತ್ನಗಳಿಗೆ ಯಶಸ್ಸು ಸಿಕ್ಕಿದಂತಾಯಿತು.ವಿದೇಶಿ ಬ್ಯಾಂಕ್​ಗಳಲ್ಲಿ ಸಂಗ್ರಹಿಸಲಾಗಿರುವ ಭಾರತದ ಕಪ್ಪು ಹಣವನ್ನು ಮರಳಿ ದೇಶಕ್ಕೆ ಹಿಂದಿರುಗಿಸುವ ಕೇಂದ್ರ ಸರ್ಕಾರದ ನಿರಂತರ ಹೋರಾಟದಲ್ಲಿ ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಹೇಳಲಾಯಿತು. ಪ್ರಸ್ತುತ ನೀಡಲಾಗಿರುವ ಪಟ್ಟಿಯಲ್ಲಿ ರಾಜಕಾರಣಿಗಳು, ವ್ಯವಹಾರಸ್ಥರು ಸೇರಿದಂತೆ ಹಲವಾರು ಗಣ್ಯರ ಹೆಸರು ಇದೆ ಎನ್ನಲಾಯಿತು.

ಎಇಒಐ ಜಾಗತಿಕ ಮಾನದಂಡಗಳ ಚೌಕಟ್ಟಿನೊಳಗೆ ಸ್ವಿಜರ್ಲೆಂಡ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ತಮ್ಮ ದೇಶದಲ್ಲಿನ ಭಾರತೀಯರ ಹಣಕಾಸು ಖಾತೆಗಳ ಮಾಹಿತಿಯನ್ನು ಭಾರತದೊಂದಿಗೆ ವಿನಿಮಯ ಮಾಡಿಕೊಂಡಿತು. ಈ ರೀತಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾದ  75 ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಮೂಲಗಳು ಹೇಳಿದವು.

ಅಂತಾರಾಷ್ಟ್ರೀಯ ಎಇಒಐ ಮಾನದಂಡಗಳ ಅಡಿಯಲ್ಲಿ ಭಾರತ ಸರ್ಕಾರ ಸ್ವಿಜರ್ಲೆಂಡ್​ನಿಂದ ಭಾರತೀಯರ ಹಣಕಾಸು ಮಾಹಿತಿಯನ್ನು ಪಡೆಯುತ್ತಿರುವುದು ಇದೇ ಮೊದಲ ಬಾರಿ. ಸ್ವಿಜರ್ಲೆಂಡ್​ನಲ್ಲಿ ಈವರೆಗೆ ಚಾಲ್ತಿಯಲ್ಲಿರುವ ಹಾಗೂ 2018ಕ್ಕಿಂತ ಮುಂಚಿತವಾಗಿ ಮುಚ್ಚಲಾಗಿರುವ ಎಲ್ಲಾ ಹಣಕಾಸು ಖಾತೆಗಳ ವಿವರವನ್ನೂ ಆ ದೇಶ ಭಾರತ ಸರ್ಕಾರಕ್ಕೆ ನೀಡಿತು. ಮುಂದಿನ ಮಾಹಿತಿ ವಿನಿಮಯ 2020 ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ ಎಂದು ಹೇಳಲಾಯಿತು.

October 7, 2019 Posted by | ಆರ್ಥಿಕ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Prime Minister, Spardha, World | , , , , , , | Leave a comment

ಮುಂಬೈಯ ಆರೇ ಕಾಲೋನಿ: ಮೆಟ್ರೋಕಾರ್ ಶೆಡ್‌ಗಾಗಿ ಮರಗಳಿಗೆ ಕೊಡಲಿ

This slideshow requires JavaScript.

ತೀವ್ರ ಪ್ರತಿಭಟನೆ, ೩೮ ಜನರ ಸೆರೆ, ಬಂಧಿತರ ಜಾಮೀನಿಗೆ ನಕಾರ,
ತಡೆ ಕೋರಿದ ಹೊಸ ಅರ್ಜಿಗೂ ತಿರಸ್ಕಾರ

ಮುಂಬೈ:  ಮಹಾನಗರದ ಆರೇ ಕಾಲೋನಿಯಲ್ಲಿ ಮುಂಬೈ ಮೆಟ್ರೋ ರೈಲು ಕಾರ್ಪೋರೇಷನ್ನಿನ (ಎಂಎಂಆರ್‌ಸಿ) ಮೆಟ್ರೋ ಕಾರು ಶೆಡ್ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳ ನಾಶವನ್ನು ವಿರೋಧಿಸಿ ಪ್ರತಿಭಟಿಸಿದ ೩೮ ಮಂದಿಯನ್ನು ಪೊಲೀಸರು  2019 ಅಕ್ಟೋಬರ್ 05ರ ಶನಿವಾರ ಬಂಧಿಸಿದ್ದು, ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. ಇದರ ಜೊತೆಗೆ ಮರಗಳ ನಾಶಕ್ಕೆ ತಡೆ ಕೋರಿ ಪರಿಸರ ಕಾರ್ಯಕರ್ತರು ಸಲ್ಲಿಸಿದ ಹೊಸ ಅರ್ಜಿಯನ್ನೂ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತು.

ಮರ ಕಡಿಯುವುದನ್ನು ಪ್ರತಿಭಟಿಸಿದ ೩೮ ಮಂದಿ ಪರಿಸರ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಅವರಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು. ಇವರ ಹೊರತಾಗಿ ೫೫ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈಮಧ್ಯೆ ಆರೇ ಕಾಲೋನಿಯಲ್ಲಿ ಮರಗಳನ್ನು ಕಡೆಯುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವುದರ ನಡುವೆ ಮರಕಡಿಯಲು ಶುಕ್ರವಾರ ಒಪ್ಪಿಗೆ ನೀಡಿದ್ದ ಬಾಂಬೆ ಹೈಕೋರ್ಟ್, ಮರ ಕಡಿಯುವುದಕ್ಕೆ ತಡೆಯಾಜ್ಞೆ ಕೋರಿ ಪರಿಸರವಾದಿಗಳು ಹೊಸದಾಗಿ ಸಲ್ಲಿಸಿದ ಅರ್ಜಿಯನ್ನೂ  ಈದಿನ  ತಿರಸ್ಕರಿಸಿತು.

“ಮರಗಳನ್ನು ಕಡಿಯಲು ಮುನಿಸಿಪಲ್ ಕಾರ್ಪೋರೇಷನ್ನಿನ  ಮರ ಪ್ರಾಧಿಕಾರವು ಸೆಪ್ಟೆಂಬರ್ ೧೩ರಂದು ಅನುಮತಿ ನೀಡಿತ್ತು. ಹೈಕೋರ್ಟ್ ಮರ ಕಡಿಯುವುದರ ವಿರುದ್ಧ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿದ್ದಲ್ಲದೆ, ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ೫೦,೦೦೦ ರೂಪಾಯಿ ದಂಡವನ್ನೂ ವಿಧಿಸಿದೆ’ ಎಂದು ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಹೇಳಿದರು.

‘ಅವರ ಚಟುವಟಿಕೆಗಳು ಅಕ್ರಮವಷ್ಟೇ ಅಲ್ಲ, ಭಂಡತನದ್ದೂ ಆಗಿವೆ. ನೀವು ನ್ಯಾಯಾಲಯದಲ್ಲಿ ಸೋತರೆ, ಗೌರವಪೂರ್ವಕವಾಗಿ ಅದನ್ನು ಅಂಗೀಕರಿಸುವುದು ಒಳ್ಳೆಯದು, ಬೀದಿಗೆ ಒಯ್ಯುವುದಲ್ಲ’ ಎಂದು ಆಕೆ ಟ್ವೀಟ್ ಮಾಡಿದರು.

ಆರೇಯಲ್ಲಿ ಮರಗಳನ್ನು ಕಡಿಯಲು ಹೊಸದಾಗಿ ಅನುಮತಿ ಪಡೆಯಬೇಕು ಎಂಬ ಪರಿಸರವಾದಿಗಳ ಪ್ರತಿಪಾದನೆಯನ್ನು ಮುಂಬೈ ಮೆಟ್ರೋ ರೈಲು ನಿಗಮವು (ಎಂಎಂಆರ್‌ಸಿ) ತಳ್ಳಿಹಾಕಿತು.

ಹಿಂದಿನ ದಿನ ತಡರಾತ್ರಿ ಎಂಎಂಆರ್‌ಸಿಯು ಮುಂಬೈ ಮೆಟ್ರೋದ ಮೂರನೇ ಹಂತಕ್ಕಾಗಿ ಕಾರು ಶೆಡ್ ನಿರ್ಮಿಸಲು ಕಡಿಯಲು ಆರಂಭಿಸಿದಾಗ ಆರೇ ಕಾಲೋನಿಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಅವರು ಸರಣಿ ಟ್ವೀಟ್‌ಗಳ ಮೂಲಕ ಪರಿಸರವಾದಿಗಳು ನ್ಯಾಯಾಲಯದಲ್ಲಿ ತಮಗೆ ಆಗಿರುವ ಪರಾಭವವನ್ನು ಗೌರವಪೂರ್ವಕವಾಗಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಮೆಟ್ರೋ ಯೋಜನೆಗಾಗಿ ೨,೫೦೦ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನ್ಯಾಯಾಲಯ ಒಪ್ಪಿಗೆ ನೀಡಿದ ಒಂದು ದಿನದ ಬಳಿಕ ಪ್ರತಿಭಟನಕಾರರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಆರೇಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಯಿತು.

ಆರೇ ಪ್ರದೇಶವು ಕಾಡು ಎಂಬುದಾಗಿ ಮಾನ್ಯ ಮಾಡಲು ಹೈಕೋರ್ಟ್  ಅಕ್ಟೋಬರ್ 4ರ ಶುಕ್ರವಾರ ನಿರಾಕರಿಸಿ, ಅಧಿಕಾರಿಗಳಿಗೆ ಮುಂಬೈ ಮೆಟ್ರೋಕ್ಕಾಗಿ ಶೆಡ್ ನಿರ್ಮಿಸಲು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶವನ್ನು ತತ್ ಕ್ಷಣವೇ ಪಾಲಿಸಿದ ಅಧಿಕಾರಿಗಳು ಶನಿವಾರ ನಸುಕಿನ ೩.೧೫ರ ವೇಳೆಯಲ್ಲಿ ಪೊಲೀಸರ ನೆರವಿನೊಂದಿಗೆ ಸುಮಾರು ೨೦೦ ಮರಗಳನ್ನು ಕಡೆದಿದ್ದಾರೆ ಎಂದು ಪರಿಸರ ಕಾರ್‍ಯಕರ್ತರು ಆಪಾದಿಸಿದ್ದಾರೆ.

ಇದರ ಬೆನ್ನಲ್ಲೇ ಆರೇ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿತು. ವಿರೋಧ ಪಕ್ಷಗಳು ಮಾತ್ರವೇ ಅಲ್ಲ, ಬಿಜಿಪಿಯ ಮಹಾರಾಷ್ಟ್ರದ ಮಿತ್ರ ಪಕ್ಷ ಶಿವಸೇನೆ ಕೂಡಾ ಸರ್ಕಾರದ ನಿರ್ಧಾರವನ್ನು ಟೀಕಿಸಿತು. ಪೊಲೀಸರು ಬಂಧಿಸಿರುವ ಪ್ರತಿಭಟನಕಾರರಲ್ಲಿ ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಕೂಡಾ ಸೇರಿದ್ದಾರೆ. ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ’ನಮ್ಮ ಸರ್ಕಾರವು ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿದೆ ಮತ್ತು ಮರಗಳ ಈ ಕೊಲೆಗಡುಕರನ್ನು ಏನು ಮಾಡಬೇಕು ಎಂದು ನಾವು ನೋಡುತ್ತೇವೆ’ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉದ್ಧವ್ ಠಾಕ್ರೆ ಪುತ್ರ ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಕೂಡಾ ಮರಗಳನ್ನು ಕಡಿಯುವ ಕ್ರಮವನ್ನು ಖಂಡಿಸಿದರು.

ಮುಂಬೈ ಮೆಟ್ರೋ ನಿಗಮವು ಅತ್ಯಂತ ತ್ವರಿತವಾಗಿ ಮರಗಳನ್ನು ಕಡಿದು ಆರೇ ಪರಿಸರಕ್ಕೆ ಹಾನಿ ಉಂಟುತ್ತಿರುವುದು ನಾಚಿಕೆಗೇಡು ಮತ್ತು ಭ್ರಮನಿರಸನದಾಯಕ. ಈ ಅಧಿಕಾರಿಗಳನ್ನು ಪಾಕ್ ಆಕ್ರಮಿಕ ಕಾಶ್ಮಿರದಲ್ಲಿ ನಿಯೋಜಿಸಿ, ಮರಗಳನ್ನು ಕಡಿಯುವ ಬದಲಿಗೆ ಭಯೋತ್ಪಾದನಾ ಶಿಬಿರಗಳನ್ನು ನಾಶ ಪಡಿಸುವ ಹೊಣೆಗಾರಿಕೆ ವಹಿಸಿದರೆ ಹೇಗೆ?’ ಎಂದು ಟ್ವೀಟ್ ಮಾಡಿದರು.

ಈ ಕೋಲಾಹಲದ ಮಧ್ಯೆ ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು ದೆಹಲಿ ಹಾಗೂ ಮುಂಬೈ ಮಧ್ಯೆ ಕೆಲವು ಸಾಮ್ಯತೆಗಳಿವೆ ಎಂದು ಪ್ರತಿಪಾದಿಸಿದರು. ’ಬಾಂಬೆ ಹೈಕೋರ್ಟ್ ಆರೇಯು ಕಾಡು ಅಲ್ಲ ಎಂಬುದಾಗಿ ತೀರ್ಪು ನೀಡಿದೆ. ದೆಹಲಿಯಲ್ಲಿ ಮೊದಲ ಮೆಟ್ರೋ ನಿಲ್ದಾಣ ನಿರ್ಮಿಸುವಾಗ ೨೦-೨೫ ಮರಗಳನ್ನು ಕಡಿಯಲಾಗಿತ್ತು. ಜನರು ಆಗಲೂ ಪ್ರತಿಭಟಿಸಿದ್ದರು. ಆದರೆ ಕಡಿದ ಪ್ರತಿಯೊಂದು ಮರಕ್ಕೆ ಬದಲಿಯಾಗಿ ೫ ಮರಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ಸಚಿವರು ಹೇಳಿದರು.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆ ಜೊತೆಯಾಗಿ ಸಾಗಬಲ್ಲುದು ಎಂಬುದಕ್ಕೆ ದೆಹಲಿ ಉತ್ತಮ ಉದಾಹರಣೆಯಾಗಿದೆ. ಮುಂಬೈಯಲ್ಲೂ ಇದು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

೧,೨೮೭ ಹೆಕ್ಟೇರ್ ವ್ಯಾಪ್ತಿಯ ಆರೇ ಕಾಲೋನಿ ಮೆಟ್ರೋಪಾಲಿಟನ್ ನಗರದ ಪ್ರಮುಖ ಹಸಿರು ತಾಣವಾಗಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕಿಗೆ ಸೇರಿಕೊಂಡಂತಿರುವ ಪ್ರದೇಶವಾಗಿದೆ. ಹಲವಾರು ಬಾಲಿವುಡ್ ಗಣ್ಯರು ಮತ್ತು ರಾಜಕಾರಣಿಗಳು ಕೂಡಾ ಆರೇ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಪರಿಸರವಾದಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಹಸಿರುಮಯವಾಗಿದೆ ಎಂಬ ಕಾರಣಕ್ಕಾಗಿ ಆರೇಯನ್ನು ಕಾಡು ಎಂಬುದಾಗಿ ಘೋಷಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಸೆಪ್ಟಂಬರ್ ೨೦ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಯೋಜನೆಯು ಮುಂಬೈ ಮಹಾನಗರಕ್ಕೆ ಅತ್ಯಂತ ಅಗತ್ಯವಾದ ಯೋಜನೆಯಾಗಿದ್ದು ದೂರಗಾಮೀ ಮಹತ್ವವನ್ನು ಹೊಂದಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ನಿಯಮಿತವು ಪ್ರತಿಪಾದಿಸಿದೆ. ’ಸ್ಥಳೀಯ ಉಪನಗರ ರೈಲುಗಳಲ್ಲಿ ಜನಸಂದಣಿಯಿಂದಾಗಿ ಪ್ರತಿದಿನ ೧೦ ಪ್ರಯಾಣಿಕರು ಸಾವನ್ನಪ್ಪುತ್ತಾರೆ. ಮೆಟ್ರೋ ಯೋಜನೆಯು ಈ ಜನಸಂದಣಿಯ ಒತ್ತಡವನ್ನು ನಿವಾರಿಸಲಿದೆ’ ಎಂದು ಎಂಎಂಆರ್‌ಸಿಎಲ್ ವಕೀಲ ಅಶುತೋಶ್ ಕುಂಭಕೋಣಿ ಹೇಳಿದರು.

ಪತ್ರಿಕಾಹೇಳಿಕೆಯೊಂದನ್ನು ನೀಡಿರುವ ಪೊಲೀಸರು ಪ್ರತಿಭಟಿಸುತ್ತಿದ್ದ ೧೦೦ರಿಂದ ೨೦೦ರಷ್ಟು ಜನರ ಪೈಕಿ ಕೆಲವರು ಪೊಲೀಸ್ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದರು ಮತ್ತು ಹಲ್ಲೆ ನಡೆಸಿದರು. ಇದನ್ನು ಅನುಸರಿಸಿ ೬ ಮಹಿಳೆಯರು ಸೇರಿದಂತೆ ೨೯ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಅಸಂಖ್ಯಾತ ಪ್ರತಿಭಟನಕಾರರನ್ನು ಬಲವಂತವಾಗಿ ಆರೇ ಚೆಕ್ ಪೋಸ್ಟಿನಿಂದ ತೆರವುಗೊಳಿಸಿ ಗೋರೆಗಾಂವ್ ಸ್ಥಳೀಯ ಪೊಲೀಸ್ ಠಾಣೆಗೆ ಒಯ್ಯಲಾಯಿತು ಎಂದು ಪೊಲೀಸರು ಹೇಳಿದರು.

ಇದಕ್ಕೆ ಮುನ್ನ ಬೆಳಗ್ಗೆ ಪೊಲೀಸರು ಪ್ರತಿಭಟನಕಾರರು ಆರೇ ಕಾಲೋನಿ ಕಡೆಗೆ ಬಾರದಂತೆ ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿದ್ದರು.

ಮರ ಕಡಿಯುವ ಕಾರ್‍ಯಾಚರಣೆಗೆ ಕಾಂಗ್ರೆಸ್ ಪಕ್ಷವು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ. ’ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಸಂರಕ್ಷಣೆ ಬಗ್ಗೆ ’ಡಬಲ್ ಸ್ಟ್ಯಾಂಡರ್ಡ್’ ಹೊಂದಿದ್ದಾರೆ ಎಂದು ಅದು ಟೀಕಿಸಿತು.

’ಪರಿಸರ ಸಂರಕ್ಷಣೆಯ ಯೋಧ ಎಂಬಂತೆ ಜಾಗತಿಕ ವೇದಿಕೆಗಳಲ್ಲಿ ತಮ್ಮನ್ನು ಬಿಂಬಿಸಿಕೊಂಡಿರುವ ಪ್ರಧಾನಿ ಮೋದಿಯವರ ಪರಿಸರ ಸಂರಕ್ಷಣೆಯ ಪೊಳ್ಳುತನ ಅನಾವರಣಗೊಂಡಿದೆ. ದೇಶದಲ್ಲಿ ಅವರ ಸರ್ಕಾರದ ಕ್ರಮಗಳು ಸಂಪೂರ್ಣ ವಿರುದ್ಧ’ ಎಂದು ಕಾಂಗ್ರೆಸ್ ಟೀಕಿಸಿತು.

October 5, 2019 Posted by | ಭಾರತ, ರಾಷ್ಟ್ರೀಯ, environment /endangered species, Finance, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha | , , , , , , , , , , , , , | 2 Comments

ರೂ. ೬,೫೦೦ ಕೋಟಿ ವಂಚನೆ: ಪಿಎಂಸಿ ಬ್ಯಾಂಕಿನ ಅಮಾನತಾದ ಎಂಡಿ ಬಂಧನ

04 PMC-Bank-Joy-Thomas-Mumbai-Police
ಮುಂಬೈ:
ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕಿನಿಂದ (ಪಿಎಂಸಿ) ಅಮಾನತುಗೊಂಡಿರುವ ವ್ಯವಸ್ಥಾಪಕ ನಿರ್ದೇಶಕ  (ಎಂಡಿ) ಜೋಯ್ ಥಾಮಸ್ ಅವರನ್ನು ೬,೫೦೦ ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ  2019 ಅಕ್ಟೋಬರ್  04ರ ಶುಕ್ರವಾರ ಬಂಧಿಸಲಾಗಿದೆ ಎಂದು ಮುಂಬೈಯ ಆರ್ಥಿಕ ಅಪರಾಧ ದಳ ತಿಳಿಸಿತು.

ಪಿಎಂಸಿ ಮಂಡಳಿಯ ಮಾಜಿ  ಸದಸ್ಯ ಮತ್ತು ಎಚ್‌ಡಿಐಎಲ್‌ನ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.

ಮುಂಬೈ ಮತ್ತು ಸುತ್ತಮುತ್ತಣ ಪ್ರದೇಶಗಳಲ್ಲಿ ಎಚ್‌ಡಿಐಎಲ್‌ನ ಪ್ರವರ್ತಕರು ಮತ್ತು ಬ್ಯಾಂಕಿನ ಮಾಜಿ ಅಧ್ಯಕ್ಷರಿಗೆ ಸಂಪರ್ಕವಿರುವ ೬ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ  ಶೋಧ ನಡೆಸಿತು.

ಎಚ್‌ಡಿಐಎಲ್‌ನ ಹಿರಿಯ ಕಾರ್ಯ ನಿರ್ವಾಹಕರಾದ  ರಾಕೇಶ್ ವಧವಾನ್ ಮತ್ತು ಸಾರಂಗ್ ವಧವಾನ್ ಅವರನ್ನು ಪೊಲೀಸರು ಅಕ್ಟೋಬರ್ ೯ರ ವರೆಗೆ ಬಂಧನದಲ್ಲಿರಿಸಿದ್ದರು.

ದಿವಾಳಿಯಾಗಿರುವ ಎಚ್‌ಡಿಐಎಲ್‌ಗೆ ಪಿಎಂಸಿ ಬ್ಯಾಂಕ್ ಶೇ. ೭೫ ರಷ್ಟು ಸಾಲವನ್ನು ನೀಡಿತ್ತು. ಎಚ್‌ಡಿಐಎಲ್ ಪ್ರವರ್ತಕರು ಸಾಲ ಪಡೆಯುವುದಕ್ಕಾಗಿ  ೨೧,೦೦೦ ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪವಿತ್ತು.

ರಿಯಲ್ ಎಸ್ಟೇಟ್ ಸಂಸ್ಠೆಯಾದ ಎಚ್‌ಡಿಐಎಲ್‌ಗೆ ಸಾಲ ನೀಡಿದ್ದರೂ ವಾರ್ಷಿಕ ವರದಿಯಲ್ಲಿ ಪಿಎಂಸಿ ಈ ಬಗ್ಗೆ ಉಲ್ಲೇಖಿಸಿರಲಿಲ್ಲ. ಎಚ್‌ಡಿಐಎಲ್ ದಿವಾಳಿಯಾಗುತ್ತಿದ್ದರೂ ಪಿಎಂಸಿ ಬ್ಯಾಂಕ್  ಸಾಲ ಕೊಡುತ್ತಲೇ ಇತ್ತು ಎಂದು ತನಿಖಾಧಿಕಾರಿಗಳು ಹೇಳಿದರು.

October 4, 2019 Posted by | ಆರ್ಥಿಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Spardha | , , , | Leave a comment

ಮಾನವ ದ್ವಂದ್ವಗಳ ಮಧ್ಯೆ ಸೇತುವೆಯಾಗಬಲ್ಲ ಅನನ್ಯ ಶಕ್ತಿ ಮಹಾತ್ಮಗೆ ಇತ್ತು

02 modi in new york times

ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಒಪೆಡ್ ಲೇಖನ ಬರೆದ ಪ್ರಧಾನಿ ಮೋದಿ

ನವದೆಹಲಿ: ಮಾನವ ಸಮಾಜದ ಕೆಲವೊಂದು ಮಹಾನ್ ದ್ವಂದ್ವಗಳ ಮಧ್ಯೆ ಸೇತುವೆಯಾಗಬಲ್ಲಂತಹ ಅನನ್ಯ ಸಾಮರ್ಥ್ಯ ಮಹಾತ್ಮ ಗಾಂಧಿ ಅವರಿಗೆ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ೧೫೦ನೇ ಗಾಂಧಿ ಜಯಂತಿ ಅಂಗವಾಗಿ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ  2019 ಅಕ್ಟೋಬರ್ 02ರ  ಬುಧವಾರ ಬರೆದ ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟರು.

ಮಹಾತ್ಮ ಗಾಂಧಿಯವರು ರಾಷ್ಟ್ರೀಯವಾದಕ್ಕೆ ಮಹತ್ವ ನೀಡಿದ್ದೇಕೆ ಎಂಬುದಕ್ಕೆ ಲೇಖನದಲ್ಲಿ ಒತ್ತು ನೀಡಿದ ಪ್ರಧಾನಿ ಮೋದಿಯವರು, ೧೯೨೫ರಷ್ಟು ಹಿಂದೆಯೇ ’ರಾಷ್ಟ್ರೀಯತೆ ವಾಸ್ತವವಾದಾಗ ಮಾತ್ರವೇ ಅಂತಾರಾಷ್ಟ್ರೀಯತೆ ಸಾಧ್ಯ’ ಎಂಬುದಾಗಿ ಹೇಳಿದ್ದನ್ನು ಉಲ್ಲೇಖಿಸಿದರು.

‘ಆದರೆ  ಗಾಂಧೀಜಿಯವರು ಭಾರತದ ರಾಷ್ಟ್ರೀಯತೆಯನ್ನು ಎಂದಿಗೂ ಸಂಕುಚಿತ ಅಥವಾ ಪ್ರತ್ಯೇಕವಾಗಿರದ, ಆದರೆ ಮಾನವೀಯತೆಯ ಸೇವೆಗಾಗಿ ಕೆಲಸ ಮಾಡುವಂತಹುದ್ದು  ಎಂಬುದಾಗಿ ಕಲ್ಪಿಸಿಕೊಂಡಿದ್ದರು’ ಎಂದು ಪ್ರಧಾನಿ ಹೇಳಿದರು.

‘ಭಾರತ ಮತ್ತು ಜಗತ್ತಿಗೆ ಗಾಂಧಿ ಏಕೆ ಬೇಕು’ ಶೀರ್ಷಿಕೆಯ ಲೇಖನದಲ್ಲಿ ಭಾರತ ಮತ್ತು ಅದರಿಂದಾಚೆಗೆ ವ್ಯಾಪಿಸಿದ ಮಹಾತ್ಮ ಗಾಂಧಿಯವರ ಚಿಂತನೆಯ ಶಕ್ತಿ ಮತ್ತು ಪರಿಣಾಮದ ಬಗ್ಗೆ ’ಒಂದು ವಿಶೇಷವಾದ ಐನ್‌ಸ್ಟೀನ್ ಸವಾಲು’ ಎಂಬುದಾಗಿ ಬಣ್ಣಿಸಿ ಪ್ರಧಾನಿ ಮೋದಿ ಬರೆದರು.

‘ರಕ್ತ ಮತ್ತು ಮಾಂಸಭರಿತವಾದ ಇಂತಹ ವ್ಯಕ್ತಿಯೊಬ್ಬ ಈ ಭೂಮಿಯಲ್ಲಿ ನಡೆದಾಡಿದ್ದ ಎಂಬುದನ್ನು ನಂಬಲು ಕೂಡಾ ಮುಂಬರುವ ತಲೆಮಾರುಗಳು ಹೆದರಬಹುದು’ ಎಂಬುದಾಗಿ ಮಹಾತ್ಮ ಗಾಂಧಿಯವರ ಬಗ್ಗೆ ಆಲ್ಬರ್ಟ್ ಐನ್‌ಸ್ಟೀನ್ ಅವರು ಹೇಳಿದ್ದನ್ನು  ಪ್ರಧಾನಿ ಉಲ್ಲೇಖಿಸಿದರು.

‘ಭವಿಷ್ಯದ ತಲೆಮಾರುಗಳು ಗಾಂಧಿಯವರ ಆದರ್ಶಗಳನ್ನು ನೆನಪಿಟ್ಟುಕೊಳ್ಳುವಂತೆ ಖಾತರಿ ಮಾಡಿಕೊಳ್ಳುವುದು ಹೇಗೆ? ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ, ಹೊಸ ಆವಿಷ್ಕಾರಗಳ ಮೂಲಕ ಗಾಂಧಿಯವರ ಆದರ್ಶಗಳನ್ನು ಹರಡುವ ನಿಟ್ಟಿನಲ್ಲಿ ನಾಯಕತ್ವ ವಹಿಸುವಂತೆ ಚಿಂತಕರು, ಉದ್ಯಮಿಗಳು ಮತ್ತು ತಂತ್ರಜ್ಞಾನ ನಾಯಕರಿಗೆ ಸೂಚಿಸಿದರು.

ಮಾರ್ಟಿನ್ ಲೂಥರ್ ಕಿಂಗ್ ೧೯೫೯ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ ತಾವು ಯಾತ್ರಾರ್ಥಿಯಾಗಿ  ಭಾರತಕ್ಕೆ ಬರುತ್ತಿರುವುದಾಗಿ ಹೇಳಿದ್ದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ’ಭಾರತವು ಅಹಿಂಸಾತ್ಮಕ ಸಾಮಾಜಿಕ ಬದಲಾವಣೆಯ ತಂತ್ರಗಳು ಬೆಳೆದಿರುವ ಭೂಮಿ’ ಎಂಬುದಾಗಿ ಅಮೆರಿಕದಲ್ಲಿ ನಾಗರಿಕ ಹಕ್ಕುಗಳ ಚಳವಳಿಯ ಮಹಾನ್ ನಾಯಕರಾದ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಹೇಳಿದ್ದರು ಎಂದು ಪ್ರಧಾನಿ ಬರೆದರು.

ಮಹಾತ್ಮಾ ಗಾಂಧಿಯವರಿಂದ ಸ್ಫೂರ್ತಿ ಪಡೆದವರು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕವಾಗಿ ಪಾಲ್ಗೊಳ್ಳುತ್ತಿದ್ದುದು ಗಾಂಧಿ ಹೋರಾಟವನ್ನು ವಿಶಿಷ್ಟ ಹೋರಾಟವನ್ನಾಗಿ ಮಾಡಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.

‘ಅವರು ಎಂದೂ ಆಡಳಿತಾತ್ಮಕ ಅಥವಾ ಚುನಾಯಿತ ಹುದ್ದೆಯನ್ನು ಹೊಂದಿರಲಿಲ್ಲ. ಅವರು ಎಂದೂ ಅಧಿಕಾರದ ಆಮಿಷಕ್ಕೆ ಒಳಗಾಗಲಿಲ್ಲ’ ಎಂಬುದಾಗಿ ಬರೆದ ಮೋದಿ, ’ಈ ಹಿನ್ನೆಲೆಯಲ್ಲಿಯೇ ನೆಲ್ಸನ್ ಮಂಡೇಲಾ ಅವರು ಗಾಂಧಿಯವರನ್ನು ’ಪವಿತ್ರ ಯೋಧ’ ಎಂಬುದಾಗಿ ಬಣ್ಣಿಸಿದ್ದರು ಎಂದು ಹೇಳಿದರು.

ಮಹಾತ್ಮ ಗಾಂಧಿಯವರು ಸಮಾಜದ ಎಲ್ಲ ವರ್ಗಗಳಿಂದಲೂ ವಿಶ್ವಾಸ ಪಡೆದುಕೊಂಡಿದ್ದರು ಎಂದು ಬರೆದ ಮೋದಿ, ೧೯೧೭ರಲ್ಲಿ ಅಹ್ಮದಾಬಾದಿನಲ್ಲಿ ನಡೆದ ಗುಜರಾತಿನ ಭಾರೀ ಜವುಳಿ ಮುಷ್ಕರವನ್ನು ಬಗೆಹರಿಸಲು ಮಿಲ್ ಕಾರ್ಮಿಕರು ಮತ್ತು ಮಾಲೀಕರು ಹೇಗೆ ಅವರ ಬಳಿಗೆ ಬರುತ್ತಿದ್ದರು ಎಂಬುದನ್ನು ನೆನಪಿಸಿದರು.

‘ಆರ್ಥಿಕ ಸ್ವಾವಲಂಬನೆ ಮತ್ತು ರಾಷ್ಟ್ರದ ಸಬಲೀಕರಣದ ಸಂಕೇತಳಾಗಿ ಚರಖಾ, ಖಾದಿ ಮತ್ತು ಮನೆಯಲ್ಲೇ ನೇಯ್ದ ಬಟ್ಟೆಯನ್ನು ಬಳಸಲು ಬೇರೆ ಯಾರಿಗೆ ಸಾಧ್ಯವಿತ್ತು? ಒಂದು ಮುಷ್ಠಿ ಉಪ್ಪಿನ ಮೂಲಕ ಬೇರೆ ಯಾರಿಗಾದರೂ ಸಾಮೂಹಿಕ ಚಳವಳಿ ಸೃಷ್ಟಿಸಲು ಸಾಧ್ಯವಿತ್ತೆ?’ ಎಂದು ಲೇಖನದಲ್ಲಿ ಪ್ರಶ್ನಿಸಿದ ಪ್ರಧಾನಿ ಮೋದಿ, ’ಅರಬ್ಬಿ ಸಮುದ್ರ ದಂಡೆಯಲ್ಲಿ ಒಂದು ಹಿಡಿಯಷ್ಟು ಪ್ರಮಾಣದ ಉಪ್ಪನ್ನು ಕೈಗೆತ್ತಿಕೊಳ್ಳುವ ಮೂಲಕ ಭಾರೀ ಚಳವಳಿಯನ್ನೇ ಗಾಂಧೀಜಿ ನಡೆಸಿದ್ದರು’ ಎಂದು ನೆನಪಿಸಿದರು.

October 3, 2019 Posted by | ನರೇಂದ್ರ ಮೋದಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Education, Flash News, General Knowledge, India, Nation, News, Prime Minister, Spardha, World | , , , , , | Leave a comment

Ganesha came Again..!

Ganesha came Again..!

Ganesha-Festival original

Ganesha Festival came again. Inspite of  problems like price rise,  draught in some places and heavy rains in some other places, Swine Flu, Dengue Fever, Chikun Gunya etc people got ready to welcome Ganesha with all preparations. Here is an article published in Sudha Magazine in the year 2001.  Do you see any change regarding the celebration of Ganesha Festival?

Click the image to read the article”.

Nethrakere Udaya Shankara

August 23, 2009 Posted by | culture, Festival, Memory, Nenapu | , , , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ