SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಮುಂಬೈಯ ಆರೇ ಕಾಲೋನಿ: ಮೆಟ್ರೋಕಾರ್ ಶೆಡ್‌ಗಾಗಿ ಮರಗಳಿಗೆ ಕೊಡಲಿ

This slideshow requires JavaScript.

ತೀವ್ರ ಪ್ರತಿಭಟನೆ, ೩೮ ಜನರ ಸೆರೆ, ಬಂಧಿತರ ಜಾಮೀನಿಗೆ ನಕಾರ,
ತಡೆ ಕೋರಿದ ಹೊಸ ಅರ್ಜಿಗೂ ತಿರಸ್ಕಾರ

ಮುಂಬೈ:  ಮಹಾನಗರದ ಆರೇ ಕಾಲೋನಿಯಲ್ಲಿ ಮುಂಬೈ ಮೆಟ್ರೋ ರೈಲು ಕಾರ್ಪೋರೇಷನ್ನಿನ (ಎಂಎಂಆರ್‌ಸಿ) ಮೆಟ್ರೋ ಕಾರು ಶೆಡ್ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳ ನಾಶವನ್ನು ವಿರೋಧಿಸಿ ಪ್ರತಿಭಟಿಸಿದ ೩೮ ಮಂದಿಯನ್ನು ಪೊಲೀಸರು  2019 ಅಕ್ಟೋಬರ್ 05ರ ಶನಿವಾರ ಬಂಧಿಸಿದ್ದು, ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. ಇದರ ಜೊತೆಗೆ ಮರಗಳ ನಾಶಕ್ಕೆ ತಡೆ ಕೋರಿ ಪರಿಸರ ಕಾರ್ಯಕರ್ತರು ಸಲ್ಲಿಸಿದ ಹೊಸ ಅರ್ಜಿಯನ್ನೂ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತು.

ಮರ ಕಡಿಯುವುದನ್ನು ಪ್ರತಿಭಟಿಸಿದ ೩೮ ಮಂದಿ ಪರಿಸರ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಅವರಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು. ಇವರ ಹೊರತಾಗಿ ೫೫ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

ಈಮಧ್ಯೆ ಆರೇ ಕಾಲೋನಿಯಲ್ಲಿ ಮರಗಳನ್ನು ಕಡೆಯುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವುದರ ನಡುವೆ ಮರಕಡಿಯಲು ಶುಕ್ರವಾರ ಒಪ್ಪಿಗೆ ನೀಡಿದ್ದ ಬಾಂಬೆ ಹೈಕೋರ್ಟ್, ಮರ ಕಡಿಯುವುದಕ್ಕೆ ತಡೆಯಾಜ್ಞೆ ಕೋರಿ ಪರಿಸರವಾದಿಗಳು ಹೊಸದಾಗಿ ಸಲ್ಲಿಸಿದ ಅರ್ಜಿಯನ್ನೂ  ಈದಿನ  ತಿರಸ್ಕರಿಸಿತು.

“ಮರಗಳನ್ನು ಕಡಿಯಲು ಮುನಿಸಿಪಲ್ ಕಾರ್ಪೋರೇಷನ್ನಿನ  ಮರ ಪ್ರಾಧಿಕಾರವು ಸೆಪ್ಟೆಂಬರ್ ೧೩ರಂದು ಅನುಮತಿ ನೀಡಿತ್ತು. ಹೈಕೋರ್ಟ್ ಮರ ಕಡಿಯುವುದರ ವಿರುದ್ಧ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿದ್ದಲ್ಲದೆ, ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ೫೦,೦೦೦ ರೂಪಾಯಿ ದಂಡವನ್ನೂ ವಿಧಿಸಿದೆ’ ಎಂದು ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಹೇಳಿದರು.

‘ಅವರ ಚಟುವಟಿಕೆಗಳು ಅಕ್ರಮವಷ್ಟೇ ಅಲ್ಲ, ಭಂಡತನದ್ದೂ ಆಗಿವೆ. ನೀವು ನ್ಯಾಯಾಲಯದಲ್ಲಿ ಸೋತರೆ, ಗೌರವಪೂರ್ವಕವಾಗಿ ಅದನ್ನು ಅಂಗೀಕರಿಸುವುದು ಒಳ್ಳೆಯದು, ಬೀದಿಗೆ ಒಯ್ಯುವುದಲ್ಲ’ ಎಂದು ಆಕೆ ಟ್ವೀಟ್ ಮಾಡಿದರು.

ಆರೇಯಲ್ಲಿ ಮರಗಳನ್ನು ಕಡಿಯಲು ಹೊಸದಾಗಿ ಅನುಮತಿ ಪಡೆಯಬೇಕು ಎಂಬ ಪರಿಸರವಾದಿಗಳ ಪ್ರತಿಪಾದನೆಯನ್ನು ಮುಂಬೈ ಮೆಟ್ರೋ ರೈಲು ನಿಗಮವು (ಎಂಎಂಆರ್‌ಸಿ) ತಳ್ಳಿಹಾಕಿತು.

ಹಿಂದಿನ ದಿನ ತಡರಾತ್ರಿ ಎಂಎಂಆರ್‌ಸಿಯು ಮುಂಬೈ ಮೆಟ್ರೋದ ಮೂರನೇ ಹಂತಕ್ಕಾಗಿ ಕಾರು ಶೆಡ್ ನಿರ್ಮಿಸಲು ಕಡಿಯಲು ಆರಂಭಿಸಿದಾಗ ಆರೇ ಕಾಲೋನಿಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು.

ಎಂಎಂಆರ್‌ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಅವರು ಸರಣಿ ಟ್ವೀಟ್‌ಗಳ ಮೂಲಕ ಪರಿಸರವಾದಿಗಳು ನ್ಯಾಯಾಲಯದಲ್ಲಿ ತಮಗೆ ಆಗಿರುವ ಪರಾಭವವನ್ನು ಗೌರವಪೂರ್ವಕವಾಗಿ ಅಂಗೀಕರಿಸಬೇಕು ಎಂದು ಆಗ್ರಹಿಸಿದರು.

ಮೆಟ್ರೋ ಯೋಜನೆಗಾಗಿ ೨,೫೦೦ಕ್ಕೂ ಹೆಚ್ಚು ಮರಗಳನ್ನು ಕಡಿಯಲು ನ್ಯಾಯಾಲಯ ಒಪ್ಪಿಗೆ ನೀಡಿದ ಒಂದು ದಿನದ ಬಳಿಕ ಪ್ರತಿಭಟನಕಾರರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಆರೇಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಸೆಕ್ಷನ್ ೧೪೪ರ ಅಡಿಯಲ್ಲಿ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಯಿತು.

ಆರೇ ಪ್ರದೇಶವು ಕಾಡು ಎಂಬುದಾಗಿ ಮಾನ್ಯ ಮಾಡಲು ಹೈಕೋರ್ಟ್  ಅಕ್ಟೋಬರ್ 4ರ ಶುಕ್ರವಾರ ನಿರಾಕರಿಸಿ, ಅಧಿಕಾರಿಗಳಿಗೆ ಮುಂಬೈ ಮೆಟ್ರೋಕ್ಕಾಗಿ ಶೆಡ್ ನಿರ್ಮಿಸಲು ಮರಗಳನ್ನು ಕಡಿಯಲು ಅನುಮತಿ ನೀಡಿತ್ತು. ನ್ಯಾಯಾಲಯದ ಆದೇಶವನ್ನು ತತ್ ಕ್ಷಣವೇ ಪಾಲಿಸಿದ ಅಧಿಕಾರಿಗಳು ಶನಿವಾರ ನಸುಕಿನ ೩.೧೫ರ ವೇಳೆಯಲ್ಲಿ ಪೊಲೀಸರ ನೆರವಿನೊಂದಿಗೆ ಸುಮಾರು ೨೦೦ ಮರಗಳನ್ನು ಕಡೆದಿದ್ದಾರೆ ಎಂದು ಪರಿಸರ ಕಾರ್‍ಯಕರ್ತರು ಆಪಾದಿಸಿದ್ದಾರೆ.

ಇದರ ಬೆನ್ನಲ್ಲೇ ಆರೇ ಹೋರಾಟ ರಾಜಕೀಯ ತಿರುವು ಪಡೆದುಕೊಂಡಿತು. ವಿರೋಧ ಪಕ್ಷಗಳು ಮಾತ್ರವೇ ಅಲ್ಲ, ಬಿಜಿಪಿಯ ಮಹಾರಾಷ್ಟ್ರದ ಮಿತ್ರ ಪಕ್ಷ ಶಿವಸೇನೆ ಕೂಡಾ ಸರ್ಕಾರದ ನಿರ್ಧಾರವನ್ನು ಟೀಕಿಸಿತು. ಪೊಲೀಸರು ಬಂಧಿಸಿರುವ ಪ್ರತಿಭಟನಕಾರರಲ್ಲಿ ಶಿವಸೇನಾ ನಾಯಕಿ ಪ್ರಿಯಾಂಕ ಚತುರ್ವೇದಿ ಕೂಡಾ ಸೇರಿದ್ದಾರೆ. ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ’ನಮ್ಮ ಸರ್ಕಾರವು ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿದೆ ಮತ್ತು ಮರಗಳ ಈ ಕೊಲೆಗಡುಕರನ್ನು ಏನು ಮಾಡಬೇಕು ಎಂದು ನಾವು ನೋಡುತ್ತೇವೆ’ ಎಂದು ಹೇಳಿದರು.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಉದ್ಧವ್ ಠಾಕ್ರೆ ಪುತ್ರ ಯುವ ಸೇನಾ ಮುಖ್ಯಸ್ಥ ಆದಿತ್ಯ ಠಾಕ್ರೆ ಕೂಡಾ ಮರಗಳನ್ನು ಕಡಿಯುವ ಕ್ರಮವನ್ನು ಖಂಡಿಸಿದರು.

ಮುಂಬೈ ಮೆಟ್ರೋ ನಿಗಮವು ಅತ್ಯಂತ ತ್ವರಿತವಾಗಿ ಮರಗಳನ್ನು ಕಡಿದು ಆರೇ ಪರಿಸರಕ್ಕೆ ಹಾನಿ ಉಂಟುತ್ತಿರುವುದು ನಾಚಿಕೆಗೇಡು ಮತ್ತು ಭ್ರಮನಿರಸನದಾಯಕ. ಈ ಅಧಿಕಾರಿಗಳನ್ನು ಪಾಕ್ ಆಕ್ರಮಿಕ ಕಾಶ್ಮಿರದಲ್ಲಿ ನಿಯೋಜಿಸಿ, ಮರಗಳನ್ನು ಕಡಿಯುವ ಬದಲಿಗೆ ಭಯೋತ್ಪಾದನಾ ಶಿಬಿರಗಳನ್ನು ನಾಶ ಪಡಿಸುವ ಹೊಣೆಗಾರಿಕೆ ವಹಿಸಿದರೆ ಹೇಗೆ?’ ಎಂದು ಟ್ವೀಟ್ ಮಾಡಿದರು.

ಈ ಕೋಲಾಹಲದ ಮಧ್ಯೆ ಕೇಂದ್ರ ಪರಿಸರ ಸಚಿವ ಪ್ರಕಾಶ ಜಾವಡೇಕರ್ ಅವರು ದೆಹಲಿ ಹಾಗೂ ಮುಂಬೈ ಮಧ್ಯೆ ಕೆಲವು ಸಾಮ್ಯತೆಗಳಿವೆ ಎಂದು ಪ್ರತಿಪಾದಿಸಿದರು. ’ಬಾಂಬೆ ಹೈಕೋರ್ಟ್ ಆರೇಯು ಕಾಡು ಅಲ್ಲ ಎಂಬುದಾಗಿ ತೀರ್ಪು ನೀಡಿದೆ. ದೆಹಲಿಯಲ್ಲಿ ಮೊದಲ ಮೆಟ್ರೋ ನಿಲ್ದಾಣ ನಿರ್ಮಿಸುವಾಗ ೨೦-೨೫ ಮರಗಳನ್ನು ಕಡಿಯಲಾಗಿತ್ತು. ಜನರು ಆಗಲೂ ಪ್ರತಿಭಟಿಸಿದ್ದರು. ಆದರೆ ಕಡಿದ ಪ್ರತಿಯೊಂದು ಮರಕ್ಕೆ ಬದಲಿಯಾಗಿ ೫ ಮರಗಳನ್ನು ನೆಟ್ಟು ಬೆಳೆಸಲಾಗಿದೆ ಎಂದು ಸಚಿವರು ಹೇಳಿದರು.

ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಜೊತೆ ಜೊತೆಯಾಗಿ ಸಾಗಬಲ್ಲುದು ಎಂಬುದಕ್ಕೆ ದೆಹಲಿ ಉತ್ತಮ ಉದಾಹರಣೆಯಾಗಿದೆ. ಮುಂಬೈಯಲ್ಲೂ ಇದು ಸಾಧ್ಯ ಎಂದು ಅವರು ಪ್ರತಿಪಾದಿಸಿದರು.

೧,೨೮೭ ಹೆಕ್ಟೇರ್ ವ್ಯಾಪ್ತಿಯ ಆರೇ ಕಾಲೋನಿ ಮೆಟ್ರೋಪಾಲಿಟನ್ ನಗರದ ಪ್ರಮುಖ ಹಸಿರು ತಾಣವಾಗಿರುವ ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕಿಗೆ ಸೇರಿಕೊಂಡಂತಿರುವ ಪ್ರದೇಶವಾಗಿದೆ. ಹಲವಾರು ಬಾಲಿವುಡ್ ಗಣ್ಯರು ಮತ್ತು ರಾಜಕಾರಣಿಗಳು ಕೂಡಾ ಆರೇ ಕಾಲೋನಿಯಲ್ಲಿ ಮರಗಳನ್ನು ಕಡಿಯುವುದರ ವಿರುದ್ಧ ಪರಿಸರವಾದಿಗಳು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

ಹಸಿರುಮಯವಾಗಿದೆ ಎಂಬ ಕಾರಣಕ್ಕಾಗಿ ಆರೇಯನ್ನು ಕಾಡು ಎಂಬುದಾಗಿ ಘೋಷಿಸಲು ಸಾಧ್ಯವಿಲ್ಲ ಎಂದು ಮಹಾರಾಷ್ಟ್ರ ಸರ್ಕಾರವು ಸೆಪ್ಟಂಬರ್ ೨೦ರಂದು ನ್ಯಾಯಾಲಯಕ್ಕೆ ತಿಳಿಸಿತ್ತು.

ಯೋಜನೆಯು ಮುಂಬೈ ಮಹಾನಗರಕ್ಕೆ ಅತ್ಯಂತ ಅಗತ್ಯವಾದ ಯೋಜನೆಯಾಗಿದ್ದು ದೂರಗಾಮೀ ಮಹತ್ವವನ್ನು ಹೊಂದಿದೆ ಎಂದು ಮುಂಬೈ ಮೆಟ್ರೋ ರೈಲು ನಿಗಮ ನಿಯಮಿತವು ಪ್ರತಿಪಾದಿಸಿದೆ. ’ಸ್ಥಳೀಯ ಉಪನಗರ ರೈಲುಗಳಲ್ಲಿ ಜನಸಂದಣಿಯಿಂದಾಗಿ ಪ್ರತಿದಿನ ೧೦ ಪ್ರಯಾಣಿಕರು ಸಾವನ್ನಪ್ಪುತ್ತಾರೆ. ಮೆಟ್ರೋ ಯೋಜನೆಯು ಈ ಜನಸಂದಣಿಯ ಒತ್ತಡವನ್ನು ನಿವಾರಿಸಲಿದೆ’ ಎಂದು ಎಂಎಂಆರ್‌ಸಿಎಲ್ ವಕೀಲ ಅಶುತೋಶ್ ಕುಂಭಕೋಣಿ ಹೇಳಿದರು.

ಪತ್ರಿಕಾಹೇಳಿಕೆಯೊಂದನ್ನು ನೀಡಿರುವ ಪೊಲೀಸರು ಪ್ರತಿಭಟಿಸುತ್ತಿದ್ದ ೧೦೦ರಿಂದ ೨೦೦ರಷ್ಟು ಜನರ ಪೈಕಿ ಕೆಲವರು ಪೊಲೀಸ್ ಅಧಿಕಾರಿಗಳ ಜೊತೆಗೆ ಘರ್ಷಣೆಗೆ ಇಳಿದರು ಮತ್ತು ಹಲ್ಲೆ ನಡೆಸಿದರು. ಇದನ್ನು ಅನುಸರಿಸಿ ೬ ಮಹಿಳೆಯರು ಸೇರಿದಂತೆ ೨೯ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಬಂಧಿತರನ್ನು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ಅಸಂಖ್ಯಾತ ಪ್ರತಿಭಟನಕಾರರನ್ನು ಬಲವಂತವಾಗಿ ಆರೇ ಚೆಕ್ ಪೋಸ್ಟಿನಿಂದ ತೆರವುಗೊಳಿಸಿ ಗೋರೆಗಾಂವ್ ಸ್ಥಳೀಯ ಪೊಲೀಸ್ ಠಾಣೆಗೆ ಒಯ್ಯಲಾಯಿತು ಎಂದು ಪೊಲೀಸರು ಹೇಳಿದರು.

ಇದಕ್ಕೆ ಮುನ್ನ ಬೆಳಗ್ಗೆ ಪೊಲೀಸರು ಪ್ರತಿಭಟನಕಾರರು ಆರೇ ಕಾಲೋನಿ ಕಡೆಗೆ ಬಾರದಂತೆ ತಡೆಯಲು ಚೆಕ್ ಪೋಸ್ಟ್ ನಿರ್ಮಿಸಿದ್ದರು.

ಮರ ಕಡಿಯುವ ಕಾರ್‍ಯಾಚರಣೆಗೆ ಕಾಂಗ್ರೆಸ್ ಪಕ್ಷವು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ. ’ಪ್ರಧಾನಿ ನರೇಂದ್ರ ಮೋದಿ ಅವರು ಪರಿಸರ ಸಂರಕ್ಷಣೆ ಬಗ್ಗೆ ’ಡಬಲ್ ಸ್ಟ್ಯಾಂಡರ್ಡ್’ ಹೊಂದಿದ್ದಾರೆ ಎಂದು ಅದು ಟೀಕಿಸಿತು.

’ಪರಿಸರ ಸಂರಕ್ಷಣೆಯ ಯೋಧ ಎಂಬಂತೆ ಜಾಗತಿಕ ವೇದಿಕೆಗಳಲ್ಲಿ ತಮ್ಮನ್ನು ಬಿಂಬಿಸಿಕೊಂಡಿರುವ ಪ್ರಧಾನಿ ಮೋದಿಯವರ ಪರಿಸರ ಸಂರಕ್ಷಣೆಯ ಪೊಳ್ಳುತನ ಅನಾವರಣಗೊಂಡಿದೆ. ದೇಶದಲ್ಲಿ ಅವರ ಸರ್ಕಾರದ ಕ್ರಮಗಳು ಸಂಪೂರ್ಣ ವಿರುದ್ಧ’ ಎಂದು ಕಾಂಗ್ರೆಸ್ ಟೀಕಿಸಿತು.

October 5, 2019 Posted by | ಭಾರತ, ರಾಷ್ಟ್ರೀಯ, environment /endangered species, Finance, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Politics, Spardha | , , , , , , , , , , , , , | 2 Comments

ಅಮೆರಿಕ ವಲಸಿಗರ ವೀಸಾ ನೀತಿಗೆ ಮಾರ್ಪಾಡು: ಘೋಷಣೆಗೆ ಟಂಪ್ ಸಹಿ

President Trump Signs Executive Order In Oval Office Of The White House
ಸ್ವಯಂ ಆರೋಗ್ಯ ಕಾಳಜಿ ವಹಿಸಿಕೊಳ್ಳಲಾಗದ ಅಸ್ವಸ್ಥರಿಗೆ ಅಮೆರಿಕ ಪ್ರವೇಶ ಇಲ್ಲ

ವಾಷಿಂಗ್ಟನ್: ಅಮೆರಿಕದ ವೀಸಾಗಳಿಗಾಗಿ ಅರ್ಜಿ ಸಲ್ಲಿಸುವ ವಲಸಿಗರು ತಮ್ಮ ಆರೋಗ್ಯದ ಕಾಳಜಿಯನ್ನು ತಾವೇ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಅಂತಹವರಿಗೆ ಅಮೆರಿಕ ಪ್ರವೇಶವನ್ನ ನಿರಾಕರಿಸುವ ಘೋಷಣೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್  2019 ಅಕ್ಟೋಬರ್  04ರ ಶುಕ್ರವಾರ (ಭಾರತದಲ್ಲಿ  ಅಕ್ಟೋಬರ್ 5ರ ಶನಿವಾರ) ಸಹಿ ಮಾಡಿದರು.

ಹೊಸ ನಿಯಮಾವಳಿಗಳು ವಿದೇಶದಿಂದ ಅಮೆರಿಕಕ್ಕೆ ಬರಲು ವಲಸೆಗಾರರ ವೀಸಾ ಕೋರುವವರಿಗೆ ಅನ್ವಯವಾಗುತ್ತದೆ ಹೊರತು ಈಗಾಗಲೇ ಅಮೆರಿಕದಲ್ಲಿ ಇರುವವರಿಗೆ ಅಲ್ಲ. ಅಮೆರಿಕದ ಕಾನೂನುಬದ್ಧ ನಿವಾಸಿಗಳಿಗೆ ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ. ಈ ನೂತನ ನಿಯಮಾವಳಿ ಆಶ್ರಯ ಕೋರುವವರಿಗೆ, ನಿರಾಶ್ರಿತರಿಗೆ ಅಥವಾ ಮಕ್ಕಳಿಗೆ ಅನ್ವಯಿಸುವುದಿಲ್ಲ.

ಆದರೆ ಅಮೆರಿಕದ ನಾಗರಿಕರ ಸಂಗಾತಿಗಳು ಮತ್ತು ಹೆತ್ತವರಿಗೆ (ತಂದೆ, ತಾಯಿಗಳು) ಈ ನೂತನ ವೀಸಾ ನಿಯಮಾವಳಿಗಳು ಅನ್ವಯವಾಗುತ್ತದೆ. ತಮ್ಮ ಹೆತ್ತವರನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಯತ್ನಿಸುತ್ತಿರುವ ಕುಟುಂಬಗಳ ಮೇಲೆ ಈ ನಿಯಮಾವಳಿಗಳು ಪ್ರಭಾವ ಬೀರಲಿವೆ.

ಅಮೆರಿಕ ಪ್ರವೇಶಿಸಿದ ೩೦ ದಿನಗಳ ಒಳಗಾಗಿ ಆರೋಗ್ಯ ವಿಮಾ ಮಾಡಿಸಿಕೊಳ್ಳದೇ ಇದ್ದಲ್ಲಿ ಅಥವಾ ತಮ್ಮ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಾಕಾಗುವಷ್ಟ್ ಆರ್ಥಿಕ ಸಂಪನ್ಮೂಲ ಹೊಂದಿರದೇ ಇದ್ದಲ್ಲಿ ಅಂತಹ ವಲಸೆಗಾರರು ದೇಶ ಪ್ರವೇಶಿಸದಂತೆ ನಿಷೇಧಿಸಲಾಗುವುದು ಎಂದು ಘೋಷಣೆ ತಿಳಿಸಿದೆ. ಈ ಹೊಸ ನಿಮಮಾವಳಿಗಳು ನವೆಂಬರ್ ೩ರಿಂದ ಜಾರಿಗೆ ಬರಲಿವೆ.

ಕುಟುಂಬ ಆಧಾರಿತ ವಲಸೆ ವ್ಯವಸ್ಥೆಯಿಂದ ದೂರವಾಗಿ ಅರ್ಹತೆ ಆಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಟ್ರಂಪ್ ಆಡಳಿತವು ಯತ್ನಿಸುತ್ತಿದ್ದು, ಶುಕ್ರವಾರದ ಘೋಷಣೆಯು ವಲಸಿಗರಿಗೆ ಸಾರ್ವಜನಿಕ ಕಾರ್‍ಯಕ್ರಮಗಳ ಲಾಭ ಲಭಿಸದಂತೆ ಮಾಡುವ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನವಾಗಿದೆ.

ಅಮೆರಿಕ ಸರ್ಕಾರವು ಇದಕ್ಕೆ ಮುನ್ನ ಈ ವರ್ಷ ಕೆಲವೊಂದು ಸಾರ್ವಜನಿಕ ನೆರವನ್ನು ಬಳಸಿಕೊಳ್ಳುವ ವಲಸೆಗಾರರಿಗೆ ಗ್ರೀನ್ ಕಾರ್ಡ್ ನಿರಾಕರಿಸಲು ಸಾಧ್ಯವಾಗುವಂತೆ ನಿಯಮಾವಳಿಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿತ್ತು.

ಸಂಗಾತಿಗಳಿಂದ ಕಲ್ಯಾಣ ಆಧಾರಿತ ಪಾವತಿಗಳನ್ನು ಮರುವಸೂಲಿ ಮಾಡುವಂತೆ ಮತ್ತು ಸಾರ್ವಜನಿಕ ವಸತಿ ಸವಲತ್ತುಗಳನ್ನು ಕೋರುವ ಯರೇ ವ್ಯಕ್ತಿಯ ವಲಸೆ ಸ್ಥಾನಮಾನವನ್ನು ಪರಿಶೀಲಿಸುವಂತೆ ಶ್ವೇತಭವನವು ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಅಗತ್ಯವಿರುವ ವಿಮಾವನ್ನು ವ್ಯಕ್ತಿಯು ವೈಯಕ್ತಿಕವಾಗಿ ಖರೀದಿಸಬೇಕಾಗುತ್ತದೆ ಅಥವಾ ಉದ್ಯೋಗದತರು ಒದಗಿಸಬೇಕಾಗುತ್ತದೆ. ಇದು ಅಲ್ಪಾವಧಿಯದ್ದಾಗಿರಬಹುದು ಅಥವಾ ವಿಕೋಪಕ್ಕೆ ಸಂಬಂಧಿಸಿದ್ದಾಗಿರಬಹುದು.

ವೈದ್ಯಕೀಯ ನೆರವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗುವುದಿಲ ಮತ್ತು ವಲಸೆಗಾರನು ವಿಮಾ ಖರೀದಿಸುವ ವೇಳೆಯಲ್ಲಿ ಕೈಗೆಟಕುವ ಕಾಳಜಿ ಕಾಯ್ದೆಯ (ಅಫೋರ್ಡೆಬಲ್ ಕೇರ್ ಆಕ್ಟ್- ಎಸಿಎ) ಸಬ್ಸಿಡಿಗಳನನ್ನು ಬಳಸುತ್ತಿದ್ದರೆ ಅಂತಹ ವಲಸಿಗನಿಗೆ ವೀಸಾ ಪಡೆಯಲು ಸಾಧ್ಯವಾಗುವುದಿಲ್ಲ. ಈ ಸಬ್ಸಿಡಿಗಳನ್ನು ಫೆಡರಲ್ ಸರ್ಕಾರ ಪಾವತಿ ಮಾಡುತ್ತದೆ.

ಕಾನೂನುಬದ್ಧ ವಲಸಿಗರಿಗರು ಎಸಿಎ ಸಬ್ಸಿಡಿಗಳಿಗೆ ಅರ್ಹರಾದರೂ, ಅವರು ಕ್ಯಾಚ್ -೨೨ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ ಏಕೆಂದರೆ ಘೋಷಣೆಯ ಪ್ರಕಾರ ಸಬ್ಸಿಡಿಸಹಿತ ರಕ್ಷಣೆಯು ವಿಮೆಗೆ ಅರ್ಹವಾಗುವುದಿಲ್ಲ’ ಎಂದು ಕೈಸೆರ್ ಫ್ಯಾಮಿಲಿ ಫೌಂಡೇಷನ್ ನ ಆರೋಗ್ಯ ಪಾಲಿಸಿಯ ಎಕ್ಸಿಕ್ಯೂಟಿವ್ ಉಪಾಧ್ಯಕ್ಷರಾದ ಲಾರಿ ಲೀವಿಟ್ ಟ್ವೀಟ್ ಮಾಡಿದರು.

ಅಮೆರಿಕನ್ ಪ್ರಜೆಗಳಲ್ಲದ ಹಲವಾರು ಮಂದಿ ದೇಶದ ಉದಾರ ಸಾರ್ವಜನಿಕ ಆರೋಗ್ಯ ಯೋಜನೆಗಳ ಲಾಭ ಪಡೆದುಕೊಳ್ಳುತ್ತಿದ್ದಾರೆ ಮತ್ತು ವಲಸೆಗಾರರು ’ಪರಿಹಾರರಹಿತ ಆರೋಗ್ಯ ಕಾಳಜಿ ವೆಚ್ಚಗಳ’ ಸಮಸ್ಯೆಗೆ ಕಾಣಿಕೆ ನೀಡುತ್ತಿದ್ದಾರೆ ಎಂದು ಶ್ವೇತಭವನ ಹೇಳಿಕೆಯೊಂದು ತಿಳಿಸಿತು.

ಮೈಗ್ರೇಷನ್ ಪಾಲಿಸಿ ಇನ್ ಸ್ಟಿಟ್ಯೂಟ್ ಪ್ರಕಾರ ಶೇಕಡಾ ೫೭ರಷ್ಟು ಅಮೆರಿಕನ್ ವಲಸೆಗಾರರು ೨೦೧೭ರಿಂದ ಖಾಸಗಿ ಆರೋಗ್ಯ ವಿಮೆ ಹೊಂದಿದ್ದಾರೆ. ಶೇಕಡಾ ೬೯ರಷ್ಟು ಅಮೆರಿಕ ಸಂಜಾತರು ಖಾಸಗಿ ಆರೋಗ್ಯ ವಿಮೆ ಹೊಂದಿದ್ದಾರೆ. ಅಮೆರಿಕ ಸಂಜಾತರು ಶೇಕಡಾ ೩೦ರಷ್ಟು ಮಾತ್ರ ಸಾರ್ವಜನಿಕ ಆರೋಗ್ಯ ವಿಮಾ ರಕ್ಷಣೆ ಹೊಂದಿದ್ದರೆ, ದೇಶದಲ್ಲೆ ಜನಿಸಿದವರು ಶೇಕಡಾ ೩೬ರಷ್ಟು ಸಾರ್ವಜನಿಕ ಆರೋಗ್ಯ ವಿಮಾ ರಕ್ಷಣೆ ಪಡೆದಿದ್ದಾರೆ.

ವಿಮೆ ರಹಿತ ವಲಸೆಗಾರರ ಪ್ರಮಾಣ ೨೦೧೩ರಲ್ಲಿ ಇದ್ದ ಶೇಕಡಾ ೩೨ರಿಂದ ೨೦೧೭ರಲ್ಲಿ ಅಫೋರ್ಡಬಲ್ ಕೇರ್ ಆಕ್ಟ್ ಜಾರಿಯ ಬಳಿಕ ಶೇಕಡಾ ೨೦ಕ್ಕೆ  ಇಳಿದಿದೆ.

ಅಮೆರಿಕದಲ್ಲಿ ಪ್ರತಿವರ್ಷವೂ ೧.೧ ಮಿಲಿಯನ್ (೧೧ ಲಕ್ಷ) ಜನರು ಹಸಿರು ಕಾರ್ಡ್ ಪಡೆಯುತ್ತಾರೆ.

ವಲಸೆ ನಿಷೇಧದ ಈ ಹೊಸ ಯತ್ನ ನಾಚಿಕೆಗೇಡಿನದು ಮತ್ತು ದಿಗ್ಭ್ರಮೆ ಹುಟ್ಟಿಸುವಂತಹುದು ಎಂದು ಒಬಾಮಾ ಆಡಳಿತದ ಮಾಜಿ ಅಧಿಕಾರಿ, ಬೌಂಡ್ ಲೆಸ್ ಇಮಿಗ್ರೇಷನ್ ನ ಸಹ ಸಂಸ್ಥಾಪಕ ಡೌಗ್ ರಾಂಡ್ ಟ್ವೀಟ್ ಮಾಡಿದರು.

October 5, 2019 Posted by | ಭಾರತ, ವಿಶ್ವ/ ಜಗತ್ತು, Flash News, General Knowledge, Health, India, Nation, News, Spardha, World | , , | Leave a comment

ಹರಿಯಾಣದ ಮಾಜಿ ಕಾಂಗ್ರೆಸ್ ಮುಖ್ಯಸ್ಥ ಅಶೋಕ ತನ್ವರ್ ರಾಜೀನಾಮೆ

05 ashok-tanwar
ರಾಜ್ಯ ಅಸೆಂಬ್ಲಿ ಚುನಾವಣೆಗೂ ಮುನ್ನವೇ ಭುಗಿಲೆದ್ದ ಅಂತಃಕಲಹ

ನವದೆಹಲಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗಾಗಿ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ಪಕ್ಷದ ಟಿಕೆಟ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆಪಾದಿಸಿ ಪಕ್ಷದ ಚುನಾವಣಾ ಸಮಿತಿಯನ್ನು ತ್ಯಜಿಸಿದ್ದ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಶೋಕ ತನ್ವರ್  ಅವರು ಎರಡು ದಿನಗಳ ಬಳಿಕ 2019 ಅಕ್ಟೋಬರ್ 5ರ ಶನಿವಾರ ಪಕ್ಷದ  ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದರು.

‘ಪಕ್ಷದ ಕಾರ್ಯಕರ್ತರ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ, ಎಲ್ಲ ಕಾಂಗ್ರೆಸ್ಸಿಗರು ಮತ್ತು ಸಾರ್ವಜನಿಕರಿಗೆ ಗೊತ್ತಿರುವ ಕಾರಣಗಳಿಗಾಗಿ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಈ ಮೂಲಕ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ತನ್ವರ್  ಟ್ವೀಟ್ ಮಾಡಿದರು.

ಕಾಂಗ್ರೆಸ್ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ತನ್ವರ್ ’ಕಾಂಗ್ರೆಸ್ ಪಕ್ಷವು ವಿರೋಧಿಗಳ ಕಾರಣದಿಂದಾಗಿ ಅಲ್ಲ, ಬದಲಿಗೆ ಗಂಭೀರವಾದ ಆಂತರಿಕ ವಿರೋಧಾಬಾಸಗಳ ಕಾರಣಕ್ಕಾಗಿ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ’ ಎಂದು  ಆಪಾದಿಸಿದರು.

‘ನನ್ನ ಬೆವರು ಮತ್ತು ರಕ್ತ ಹರಿಸಿ ಬೆಳೆಸಿದ್ದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಲವಾರು ತಿಂಗಳುಗಳ ಪರಿಗಣನೆಯ ಬಳಿಕ ನಾನು ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಹೋರಾಟ ವೈಯಕ್ತಿಕವಲ್ಲ, ಬದಲಿಗೆ ಹಳೆಯ ಮಹಾನ್ ಪಕ್ಷವನ್ನು ನಾಶಪಡಿಸುತ್ತಿರುವ ವ್ಯವಸ್ಥೆಯ ವಿರುದ್ಧ’ ಎಂದು ತನ್ವರ್ ಪತ್ರ ಹೇಳಿತು..

ತನ್ವರ್ ಅವರು ಹರಿಯಾಣ ವಿಧಾನಸಭಾ ಚುನಾವಣೆಗಾಗಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ನಿವಾಸದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು.

ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪೀಂದರ್ ಸಿಂಗ್ ಹೂಡಾ ಅವರ ವಿರುದ್ಧ ಗುರುವಾರ ತೀವ್ರ ದಾಳಿ ನಡೆಸಿದ್ದ ತನ್ವರ್ ಸೋನಿಯಾ ಗಾಂಧಿ ಅವರಿಗೆ ಎರಡು ಪುಟಗಳ ಪತ್ರ ಬರೆದು ತಮ್ಮ ನೋವುಗಳನ್ನು ಪಟ್ಟಿ ಮಾಡಿದ್ದರು ಮತ್ತು ಹರಿಯಾಣದಲ್ಲಿನ ಪಕ್ಷದ ನಾಯಕರ ಒಂದು ವರ್ಗವು ತಮ್ಮ ವಿರುದ್ಧ ದಾಳಿ ನಡೆಸುತ್ತಿದ್ದು, ತಾವು  ಪಕ್ಷದ ರಾಜ್ಯ ಮುಖ್ಯಸ್ಥರಾಗಿದ್ದಾಗ  ವಿಧ್ವಂಸಕ ಚಟುವಟಿಕೆ ನಡೆಸಿತ್ತು ಎಂದು ಆಪಾದಿಸಿದ್ದರು.

ಕಳೆದ ತಿಂಗಳು ತನ್ವರ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಉಚ್ಚಾಟಿಸಿ ಅವರ ಸ್ಥಾನಕ್ಕೆ ಕೇಂದ್ರದ ಮಾಜಿ ಸಚಿವೆ ಕುಮಾರಿ ಸೆಲ್ಜಾ ಅವರನ್ನು ನೇಮಿಸಲಾಗಿತ್ತು. ತನ್ವರ್ ಅವರನ್ನು ಬದಲಾಯಿಸಬೇಕು ಎಂಬುದು ರೋಹ್ತಕ್‌ನ ಪ್ರಬಲ ನಾಯಕ ಹೂಡಾ ಅವರ ಮುಖ್ಯ ಬೇಡಿಕೆಯಾಗಿತ್ತು. ಹೂಡಾ ಅವರು ಪಕ್ಷದ ಚುನಾವಣಾ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿಯೂ ನೇಮಕಗೊಂಡಿದ್ದಾರೆ.

ಆದರೆ ಪಕ್ಷದ ರಾಜ್ಯ ಘಟಕದ ಒಳಜಗಳವನ್ನು ನಿವಾರಿಸುವ ಕಾಂಗ್ರೆಸ್ ಪಕ್ಷದ ಯತ್ನ ತನ್ವರ್ ಬದಲಾವಣೆಯ ಬಳಿಕವೂ ಯಶಸ್ವಿಯಾಗಲಿಲ್ಲ. ಬಣ ಕಲಹದಲ್ಲಿ ಮುಳುಗಿದ ಪಕ್ಷದ ಹರಿಯಾಣ ಘಟಕದಲ್ಲಿ ಬಿರುಕುಗಳು ತೀವ್ರಗೊಂಡಿದ್ದವು.

ಹರಿಯಾಣದ ೯೦ ಸದಸ್ಯಬಲದ ವಿಧಾನಸಭೆಗೆ ಅಕ್ಟೋಬರ್ ೨೧ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ ೨೪ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

October 5, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, India, Nation, Politics, Spardha | , | Leave a comment

   

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ