SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ

ಇನ್‌ಸ್ಟಾಗ್ರಾಮ್ನಲ್ಲೂ ಮೋದಿ ಅಗ್ರಗಣ್ಯ

13 pm_modi_instagram
೩೦೦ ಲಕ್ಷ  ದಾಟಿದ  ಹಿಂಬಾಲಕರ ಸಂಖ್ಯೆ

ನವದೆಹಲಿ: ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಗಳ (ಫಾಲೋಯರ್ಸ್) ಸಂಖ್ಯೆ  2019 ಅಕ್ಟೋಬರ್ 13ರ ಭಾನುವಾರ ೩೦೦ ಲಕ್ಷದ/ ೩ ಕೋಟಿಯ (೩೦ ಮಿಲಿಯನ್) ಗಡಿ ದಾಟಿತು. ಇದರೊಂದಿಗೆ ಮೋದಿಯವರು ಫೊಟೋ ಹಂಚಿಕೊಳ್ಳುವ ಅಪ್ಲಿಕೇಶನ್ನಿನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಮೋದಿಯವರು ಇನ್‌ಸ್ಟಾಗ್ರಾಮ್‌ನಲ್ಲಿ ೩೦ ಮಿಲಿಯನ್ ಮೈಲಿಗಲ್ಲು ತಲುಪಿದ ಏಕೈಕ ಜಾಗತಿಕ ನಾಯಕರಾಗಿದ್ದಾರೆ. ಹಿಂಬಾಲಕರನ್ನು ಪಡೆಯುವಲ್ಲಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನೂ ಹಿಂದಿಕ್ಕಿದ್ದಾರೆ. ಕೇವಲ ಒಂದು ತಿಂಗಳ ಹಿಂದೆ ಪ್ರಧಾನಿಯವರು ಟ್ವಟ್ಟರಿನಲ್ಲಿ ೫೦ ಮಿಲಿಯನ್ (೫೦೦ ಲಕ್ಷ) ಅನುಯಾಯಿಗಳ ಗಡಿಯನ್ನು ದಾಟಿದ್ದರು.

ಪ್ರಧಾನಿ ಮೋದಿಯವರು ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಸಕ್ರಿಯರಾಗಿದ್ದು, ನಿಯಮಿತವಾಗಿ ಪೋಸ್ಟ್‌ಗಳನ್ನು ಮತ್ತು ಅಪ್ ಡೇಟ್‌ಗಳನ್ನು ಮಾಡುತ್ತಿರುತ್ತಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರ ಅನುಯಾಯಿಗಳ ಸಂಖೆಯ ೩೦ ಮಿಲಿಯನ್ ದಾಟಿದೆ. ಅವರು ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಜಾಗತಿಕ ನಾಯಕರಾಗಿದ್ದಾರೆ. ಹಿಂಬಾಲಕರನ್ನು ಗಳಿಸುವಲ್ಲಿ ಅವರು ಅಮೆರಿಕದ ಅಧ್ಯಕ್ಷ ಟ್ರಂಪ್ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಒಬಾಮಾ ಅವರಿಂದಲೂ ಮುಂದೆ ಸಾಗಿದ್ದಾರೆ. ಇದು ಅವರ ಜನಪ್ರಿಯತೆ ಮತ್ತು ಯುವಕರ ಜೊತೆಗಿನ ಸಂಪರ್ಕಕ್ಕೆ ಇನ್ನೊಂದು ಸಾಕ್ಷಿಯಾಗಿದೆ’ ಎಂದು ಬಿಜೆಪಿ ಕಾರ್‍ಯಾಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಒಂದರಲ್ಲಿ ತಿಳಿಸಿದರು.

ಇತರ ವಿಶ್ವ ನಾಯಕರ ಪೈಕಿ ಇಂಡೋನೇಶ್ಯಾದ ಅಧ್ಯಕ್ಷ ಜೊಕೊ ವಿಡೊಡೊ ಅವರು ೨೫.೬ ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದರೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ೨೪.೮ ಮಿಲಿಯನ್ ಹಿಂಬಾಲಕರೊಂದಿಗೆ ಮೂರನೇ ಸ್ಥಾನದಲ್ಲಿ ಇದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ೧೪.೯ ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಕೂಡಾ ಪ್ರಧಾನಿ ಮೋದಿಯವರು ಅತ್ಯಂತ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಾಜಕೀಯ ನಾಯಕರಾಗಿದ್ದಾರೆ. ಭಾರತದಲ್ಲಿ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಉಪಸ್ಥಿತಿ ಹೊಂದಿರುವ ರಾಜಕೀಯ ನಾಯಕರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿ ಇದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಟ್ವಿಟ್ಟರಿನಲ್ಲಿ ೧೦.೧ ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದು, ಫೇಸ್‌ಬುಕ್‌ನ ೩ ಮಿಲಿಯನ್ ಅನುಯಾಯಿಗಳಿಗಿಂತ  ಹೆಚ್ಚು ಹಿಂಬಾಲಕರನ್ನು ಪಡೆದಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರ ಅಧಿಕೃತ ಟ್ವಿಟ್ಟರ್ ಖಾತೆಯು ೩.೬ ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಫೇಸ್‌ಬುಕ್‌ನಲ್ಲಿ ಮಮತಾ ಬ್ಯಾನರ್ಜಿ ೩.೨ ಮಿಲಿಯನ್ ಅನುಯಾಯಿಗಳನ್ನು ಪಡೆದಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಟಿಎಂಸಿ ಮುಖ್ಯಸ್ಥರ ಹಿಂಬಾಲಕರ ಸಂಖ್ಯೆ ೨೯.೪ ಸಾವಿರ.

October 14, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಜ್ಯ, ರಾಷ್ಟ್ರೀಯ, ವಿಶ್ವ/ ಜಗತ್ತು, ಸಾಮಾಜಿಕ  ಮಾಧ್ಯಮ, Flash News, General Knowledge, India, Nation, News, Prime Minister, Spardha, World | | Leave a comment

೩೭೦ನೇ ವಿಧಿ  ಪುನಃಸ್ಥಾಪಿಸಿ: ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲು

13 modi challange
ನವದೆಹಲಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ ೩೭೦ನೇ ವಿಧಿಯನ್ನು ಪುನಃಸ್ಥಾಪನೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು  2019 ಅಕ್ಟೋಬರ್ 13ರ ಭಾನುವಾರ ವಿರೋಧ ಪಕ್ಷಗಳಿಗೆ ಸವಾಲು ಹಾಕಿದರು.

ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ೩೭೦ನೇ ವಿಧಿ ರದ್ದು ಪಡಿಸಿದ್ದಕ್ಕೆ ಸಂಬಂಧಿಸಿದಂತೆ ತಳೆದ ನಿಲುವಿಗಾಗಿ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷವನ್ನು (ಎನ್‌ಸಿಪಿ) ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ತಮ್ಮ ಮೊಸಳೆ ಕಣ್ಣೀರಿನ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿರುವ ಈ ನಾಯಕರು ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ಪುನಃ ತರಬಲ್ಲರೇ? ಭಾರತದ ಜನರು ಅವರಿಗೆ ಹೀಗೆ ಮಾಡಲು ಅವಕಾಶ ನೀಡುತ್ತಾರೆಯೇ? ಭಾರತದ ಜನರು ಇದನ್ನು ಸ್ವೀಕರಿಸುತ್ತಾರೆಯೇ? ೩೭೦ನೇ ವಿಧಿಯನ್ನು ಪುನಃ ತರುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸುವಂತೆ ನಾನು ವಿರೋಧ ಪಕ್ಷಗಳಿಗೆ ಸವಾಲು ಹಾಕುತ್ತೇನೆ’ ಎಂದು ಮೋದಿ ನುಡಿದರು.

ಬಿಜೆಪಿಯ ಪಾಲಿಗೆ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇವಲ ಭೂಮಿಯ ತುಂಡಲ್ಲ ಅಥವಾ ಪ್ರದೇಶವಲ್ಲ. ಅದು ಭಾರತದ ಕಿರೀಟವಾಗಿದೆ. ಭದ್ರತಾ ಅಗತ್ಯಗಳನ್ನು ಪರಿಗಣಿಸಿ, ನಾವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲ ನಕಾರಾತ್ಮಕ ಶಕ್ತಿಗಳ ನಡುವೆಯೂ ಪ್ರದೇಶದಲ್ಲಿ ಸಹಜ ಸ್ಥಿತಿಯ ಖಾತರಿಗಾಗಿ ಸಾಧ್ಯವಿರುವ ಎಲ್ಲ ಅತ್ಯುತ್ತಮ ಪ್ರಯತ್ನಗಳನ್ನು ನಾವು ಮಾಡಿದ್ದೇವೆ’ ಎಂದು ಪ್ರಧಾನಿ ಹೇಳಿದರು.

ವಾಲ್ಮೀಕಿ ಸಮುದಾಯದ ಹಕ್ಕುಗಳನ್ನು ಪುನಸ್ಥಾಪಿಸಿದ್ದು ಸೇರಿದಂತೆ ಹಲವಾರು ಚಾರಿತ್ರಿಕ ವಿಷಯಗಳ ಜೊತೆ ೩೭೦ನೇ ವಿಧಿಯನ್ನು ರದ್ದು ಪಡಿಸಿದ ಆಗಸ್ಟ್ ೫ರ ಸರ್ಕಾರದ ನಿರ್ಧಾರಕ್ಕೆ ಸಂಬಂಧವಿದೆ’ ಎಂದು ರಾಮಾಯಣ ಕೃತಿಯ  ಸೃಷ್ಟಕರ್ತ ವಾಲ್ಮೀಕಿ ಋಷಿಯ ಜನ್ಮದಿನವಾದ ಈದಿನ ನಡೆದ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ನುಡಿದರು.

೩೭೦ನೇ ವಿಧಿಯ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವಾಲ್ಮೀಕಿ ಸಮುದಾಯದ ಜನರಿಗೆ ಯಾವುದೇ ಹಕ್ಕುಗಳೂ ಇರಲಿಲ್ಲ. ಅಲ್ಲಿದ್ದದ್ದು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಮಾತ್ರ ಎಂದು ಪ್ರಧಾನಿ ಹೇಳಿದರು.

ಪಾಕಿಸ್ತಾನದ ಹೆಸರನ್ನು ಉಲ್ಲೇಖ ಮಾಡದೆಯೇ ಆ ರಾಷ್ಟ್ರವನ್ನು ಟೀಕಿಸಿದ ಮೋದಿ, ’ನೆರೆಯ ರಾಷ್ಟವು ಜಮ್ಮು ಮತ್ತು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಸಂಚು ಹೂಡಿದೆ’ ಎಂದು ಆಪಾದಿಸಿದರು.

ಸರ್ಕಾರವು ಅಲ್ಲಿ ಆದಷ್ಟೂ ಶೀಘ್ರ ಸಹಜಸ್ಥಿತಿ ಸ್ಥಾಪನೆಗೆ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು.

‘ಭದ್ರತೆಯ ಸಲುವಾಗಿ ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ಪರಿಸ್ಥಿತಿಯನ್ನು ಸಹಜಗೊಳಿಸಲು ನಾವು ಶ್ರಮಿಸುತ್ತಿದ್ದೇವೆ. ೪೦ ವರ್ಷಗಳಿಂದ ಕೆಟ್ಟು ಹೋಗಿರುವ ಪರಿಸ್ಥಿತಿಯನ್ನು ಮಾಮೂಲಿಗೆ ತರಲು ನಾಮಗೆ ನಾಲ್ಕು ತಿಂಗಳುಗಳು ಕೂಡಾ ಬೇಕಾಗಿಲ್ಲ’ ಎಂದು ಪ್ರಧಾನಿ ನುಡಿದರು.

ಮಹಾರಾಷ್ಟ್ರದ ಮುಂಬರುವ ವಿಧಾನಸಭಾ ಚುನಾವಣೆಯ ಲಾಭಕ್ಕಾಗಿ ಕಾಶ್ಮೀರ ಕುರಿತ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸ್ ರಾಜಕೀಯಗೊಳಿಸುತ್ತಿದೆ ಎಂದು ಅವರು ಅಪಾದಿಸಿದರು.

‘ಕೆಲವು ಪಕ್ಷಗಳು ಓಟು ಗಳಿಸುವ ಸಲುವಾಗಿ ಮಹಾರಾಷ್ಟ್ರದಲ್ಲಿ ಕೂಡಾ ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ರಾಜಕೀಯ ಮಾಡುತ್ತಿವೆ. ಕಾಂಗ್ರೆಸ್ ಮತ್ತು ಎನ್‌ಸಿಪಿ ರಾಷ್ಟ್ರವು ಏನು ಚಿಂತನೆ ಮಾಡುತ್ತಿದೆಯೋ ಅದಕ್ಕೆ ವಿರುದ್ಧವಾಗಿ ಯೋಚಿಸುತ್ತಿವೆ. ಅವರು ನೆರೆಯ ರಾಷ್ಟ್ರದ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಮತ್ತು ರಾಷ್ಟ್ರದ ಪರ ನಿಲ್ಲಲು ಹಿಂಜರಿಯುತ್ತಿದ್ದಾರೆ’ ಎಂದು ಮೋದಿ ಹೇಳಿದರು.

ರಾಜ್ಯದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ದೇವೇಂದ್ರ ಫಡ್ನವಿಸ್ ಸರ್ಕಾರಕ್ಕೆ ಮತ ನೀಡುವಂತೆ ಪ್ರಧಾನಿ ಮಹಾರಾಷ್ಟ್ರದ ಜನತೆಗೆ ಮನವಿ ಮಾಡಿದರು.

‘ನಾಲ್ಕು ತಿಂಗಳ ಹಿಂದೆ ನೀವು ನವಭಾರತಕ್ಕಾಗಿ ಮತ ನೀಡಿದಿರಿ. ವಿಶ್ವವು ಭಾರತವನ್ನು ಹೊಸ ಕುತೂಹಲದೊಂದಿಗೆ ನೋಡುತ್ತಿದೆ. ನಿಮ್ಮ ವೋಟು ಭಾರತದ ಪ್ರಜಾಪ್ರಭುತ್ವವನ್ನು ಅಲಂಕರಿಸಿದೆ. ನವಭಾರತಕ್ಕೆ ವೇಗ ಲಭಿಸಿರುವುದು ಮೋದಿಯಿಂದಲ್ಲ, ಬದಲಿಗೆ ನಿಮ್ಮ ಒಂದು ವೋಟಿನಿಂದ’ ಎಂದು ಪ್ರಧಾನಿ ನುಡಿದರು.

ಮಹಾರಾಷ್ಟ್ರ ರಾಜ್ಯ ವಿಧಾನಸಭೆಗೆ ಅಕ್ಟೋಬರ್ ೨೧ರಂದು ಮತದಾನ ನಡೆಯಲಿದೆ. ಅಕ್ಟೋಬರ್ ೨೪ರಂದು ಮತಗಳ ಎಣಿಕೆ ನಡೆಯಲಿದೆ.

October 14, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, Nation, News, Pakistan, Politics, Spardha, World | , | Leave a comment

ಪಾಕಿಸ್ತಾನಕ್ಕೆ ’ಸೌಮ್ಯವಾಗಿಯೇ’ ಕಠಿಣ ಎಚ್ಚರಿಕೆ ರವಾನಿಸಿದ ರಾಜನಾಥ್ ಸಿಂಗ್

13 rajnath-singh
ಈಗಾಗಲೇ ಇಬ್ಭಾಗ, ಯೋಚನೆಯ ಧಾಟಿ ಬದಲಿಸದಿದ್ದರೇ ಶೀಘ್ರವೇ ಹಲವು ಭಾಗ

ನವದೆಹಲಿ: ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗುವ ೩೬ ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲ ವಿಮಾನವನ್ನು ಔಪಚಾರಿಕವಾಗಿ ಸ್ವೀಕರಿಸಿದ ಬಳಿಕ ಫ್ರಾನ್ಸಿನಿಂದ ವಾಪಸಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಾಶ್ಮೀರ ವಿಚಾರದಲ್ಲಿ ಕಾಲು ಕೆರೆಯುತ್ತಿರುವ ಪಾಕಿಸ್ತಾನಕ್ಕೆ ಹರಿಯಾಣದಲ್ಲಿ 2019 ಅಕ್ಟೋಬರ್ 13ರ ಭಾನುವಾರ ಸೌಮ್ಯವಾಗಿಯೇ ಕಠಿಣ ಎಚ್ಚರಿಕೆಯನ್ನು ರವಾನಿಸಿದರು.

ಕಾಶ್ಮೀರ ಕುರಿತ ಯೋಚನೆಯ ಧಾಟಿಯನ್ನು ಬದಲಿಸಿಕೊಳ್ಳುವಂತೆ ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕೆ ಮನವಿ ಮಾಡಿದ ರಕ್ಷಣಾ ಸಚಿವರು ತಮ್ಮ ಮನವಿಯನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿದರು. ಸಚಿವರು ’ಅತ್ಯಂತ ಸೌಮ್ಯವಾಗಿಯೇ’  ಪಾಕಿಸ್ತಾನಕ್ಕೆ ತಮ್ಮ ಮನವಿಯನ್ನು ಮಾಡಿದರು.

’ಈದಿನ ಅತ್ಯಂತ ಸೌಮ್ಯವಾಗಿಯೇ, ನಾನು ಪಾಕಿಸ್ತಾನಕ್ಕೆ ತನ್ನ ಯೋಚನೆಯ ದಿಕ್ಕನ್ನು ಬದಲಿಸಿಕೊಳ್ಳಬೇಕು ಎಂಬದಾಗಿ ಸಲಹೆ ಮಾಡಬಯಸುತ್ತೇನೆ, ಇಲ್ಲದೇ ಇದ್ದಲ್ಲಿ ಈಗಾಗಲೇ ಇಬ್ಭಾಗವಾಗಿರುವ ಪಾಕಿಸ್ತಾನ ಈಗ ಹಲವು ಹೋಳುಗಳಾಗಿ ವಿಭಜನೆಗೊಳ್ಳಬಹುದು’ ಎಂದು ಕಠಿಣ ಎಚ್ಚರಿಕೆ ನೀಡಿದರು. ಸಿಂಗ್ ಅವರು ಹರಿಯಾಣದ ಪಟೌಡಿಯಲ್ಲಿ  ಬಿಜೆಪಿಯ ಚುನಾವಣಾ ಸಿದ್ಧತೆಗೆ ಒತ್ತು ಕೊಡುವ ಸಲುವಾಗಿ ಆಗಮಿಸಿದ್ದರು.

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ ೨೧ರಂದು ನಡೆಯಲಿದ್ದು, ಅಕ್ಟೋಬರ್ ೨೪ರಂದು ಮತಗಳ ಎಣಿಕೆ ನಡೆಯಲಿದೆ.

‘ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ, ಭಯೋತ್ಪಾದನೆಯನ್ನು ನಿವಾರಿಸುವಂತೆ, ಸಹೋದರತ್ವವನ್ನು ಉಳಿಸಿಕೊಳ್ಳುವಂತೆ ಪಾಕಿಸ್ತಾನಕ್ಕೆ ಸಲಹೆ ಮಾಡಲು ನಾನು ಬಯಸುತ್ತೇನೆ. ನಾವು ನೆರೆ ಹೊರೆಯವರು, ನಾವು ಒಟ್ಟಾಗಿ ನಡೆಯಬಯಸುತ್ತೇವೆ. ನೀವು ಭಯೋತ್ಪಾದನೆ ವಿರುದ್ಧ ಪ್ರಾಮಾಣಿಕವಾಗಿ ಹೋರಾಟ ಮಾಡದೇ ಇದ್ದಲ್ಲಿ, ಭಾರತಕ್ಕೆ ಮೂಲಭೂತವಾದಿ ಶಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಇದೆ ಎಂದು ಸ್ಪಷ್ಟವಾಗಿ ಹೇಳಲು ನಾನು ಬಯಸುತ್ತೇನೆ’ ಎಂದು ಸಚಿವರು ನುಡಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಉಗ್ರರ ಚಟುವಟಿಕೆಗಳನ್ನು ನಿಗ್ರಹಿಸದೆ ಇದ್ದಲ್ಲಿ ಅಲ್ಲಿನ  ಉಗ್ರಗಾಮಿ ಗುಂಪುಗಳು ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸುವ ಸಾಧ್ಯತೆಗಳಿವೆ ಎಂಬುದಾಗಿ ಅಮೆರಿಕ ಮತ್ತು ಇತರ ರಾಷ್ಟ್ರಗಳು ಭೀತಿಪಟ್ಟಿವೆ ಎಂದು ಅಮೆರಿಕದ ಉನ್ನತ ಅಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿದ್ದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೇಂದ್ರವು ರದ್ದು ಪಡಿಸಿದ್ದನ್ನು ಅನುಸರಿಸಿ, ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳನ್ನು ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸಜ್ಜುಗೊಳಿಸುತ್ತಿರುವ ಬಗ್ಗೆ ಭಾರತೀಯ ಅಧಿಕಾರಿಗಳು ಪದೇ ಪದೇ ಕಳವಳ ವ್ಯಕ್ತ ಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಆಗಸ್ಟ್ ೫ರಂದು ೩೭೦ನೇ ವಿಧಿಯನ್ನು ರದ್ದು ಪಡಿಸಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್‌ನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮರುವಿಂಗಡಣೆ ಮಾಡಿತ್ತು.

October 14, 2019 Posted by | ಪಾಕಿಸ್ತಾನ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Prime Minister, Spardha | , | Leave a comment

ಮೋದಿ ಸರ್ಕಾರದಿಂದ ಆರ್ಥಿಕತೆ ನಾಶ, ಐದಾರು ತಿಂಗಳಲ್ಲಿ ಸ್ಥಿತಿ ಇನ್ನಷ್ಟು ನಿಕೃಷ್ಟ

13 rahul gandhi
ಮಹಾರಾಷ್ಟ್ರ ಚುನಾವಣಾ ಸಭೆಯಲ್ಲಿ ರಾಹುಲ್ ಗಾಂಧಿ ಟೀಕಾ ಪ್ರಹಾರ

ಮುಂಬೈ: ನರೇಂದ್ರ ಮೋದಿ ಸರ್ಕಾರವು ಭಾರತದ ಆರ್ಥಿಕತೆಯನ್ನು ನಾಶಪಡಿಸುತ್ತಿದ್ದು ಮುಂದಿನ ಕೆಲವು ತಿಂಗಳುಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ಅಕ್ಟೋಬರ್ 13ರ ಭಾನುವಾರ ಆಪಾದಿಸಿದರು.

ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಔಸಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ’ಭಾರತದ ಆರ್ಥಿಕತೆಯನ್ನು ಮೋದಿ ಸರ್ಕಾರ ನಾಶ ಪಡಿಸುತ್ತಿದೆ. ಮುಂದಿನ ೫-೬ ತಿಂಗಳಲ್ಲಿ ಪರಿಸ್ಥಿತಿ ಇನ್ನಷ್ಟು ಹದಗಡೆಲಿದೆ. ಆದರೆ ನೈಜ ವಿಷಯಗಳ ಬಗ್ಗೆ ಮಾತನಾಡುವ ಬದಲು ಬಿಜೆಪಿ ಮತ್ತು ಅದರ ನಾಯಕ ಮೋದಿ ೩೭೦ನೇ ವಿಧಿ ಮತ್ತು ಚಂದ್ರಯಾನದಂತಹ ವಿಷಯ ಪ್ರಸ್ತಾಪಿಸುತ್ತಾ ಜನರ ಗಮನವನ್ನು ಬೇರೆಡೆಗೆ ತಿರುಗಿಸುತ್ತಿದ್ದಾರೆ’ ಎಂದು ಹೇಳಿದರು.

ಭವಿಷ್ಯದಲ್ಲಿ ರಾಷ್ಟ್ರದ ಆರ್ಥಿಕ ಸ್ಥಿತಿ ಇನ್ನಷ್ಟು ನಿಕೃಷ್ಟಗೊಳ್ಳಲಿದ್ದು ಅತ್ಯಂತ ಗಂಭೀರ ಪರಿಸ್ಥಿತಿ ಎದುರಾಗಲಿದೆ ಎಂದು ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಎಚ್ಚರಿಸಿದರು.

‘ಸಮಸ್ಯೆ ಈಗಷ್ಟೇ ಶುರುವಾಗಿದೆ. ಭಾರತದ ಆರ್ಥಿಕತೆಯನ್ನು ಸುಧಾರಿಸಲು ಕಾಂಗ್ರೆಸ್ ಪಕ್ಷ ಮತ್ತು ಮನಮೋಹನ್ ಸಿಂಗ್ ಅವರಿಗೆ ಹಲವು ವರ್ಷಗಳು ಬೇಕಾಗಿದ್ದವು. ಅದನ್ನು ಈಗ ನಾಶ ಪಡಿಸಲಾಗಿದೆ. ಈ ಸಮಸ್ಯೆ ಬಗ್ಗೆ ಅವರು ಒಂದಕ್ಷರವನ್ನೂ ಉಸುರುವುದಿಲ್ಲ, ಬದಲಿಗೆ ನಿಮ್ಮ ಗಮನವನ್ನು ಬೇರೆ ಕಡೆಗೆ ತಿರುಗಿಸುತ್ತಾರೆ’ ಎಂದು ಮಹಾರಾಷ್ಟ್ರದಲ್ಲಿ ಅಕ್ಟೋಬರ್ ೨೧ರ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಚಾಲನೆ ನೀಡುತ್ತಾ ರಾಹುಲ್ ಗಾಂಧಿ ನುಡಿದರು.

ಆರ್ಥಿಕತೆ ಕುಂಠಿತಗೊಂಡದ್ದನ್ನು ಅನುಸರಿಸಿ, ಭಾರತದ ಪ್ರಗತಿ ದರವನ್ನು ವಿಶ್ವಬ್ಯಾಂಕ್ ೨೦೧೮-೨೦೧೯ರ ಸಾಲಿನಲ್ಲಿ  ಶೇಕಡಾ ೬.೯ ರ ಬದಲಿಗೆ ಶೇಕಡಾ ೬ಕ್ಕೆ ನಿಗದಿ ಪಡಿಸಿತ್ತು. ಇದಾದ ಒಂದು ದಿನದ ಬಳಿಕ  ರಾಹುಲ್ ಗಾಂಂಧಿಯವರು ಮೋದಿ ಸರ್ಕಾರದ ವಿರುದ್ಧ ತಮ್ಮ ಟೀಕಾಸ್ತ್ರವನ್ನು ಎಸೆದರು.

ಚಂದ್ರಯಾನದ ವಿಚಾರದಲ್ಲೂ ಪ್ರಧಾನಿ ಮೋದಿ ಅವರನ್ನು ಟೀಕಿಸಿದ ರಾಹುಲ್, ತನ್ನ ಸಾಮರ್ಥ್ಯ ವರ್ಧನೆಗೆ ಇಸ್ರೋ ಹಲವು ವರ್ಷಗಳನ್ನು ತೆಗೆದುಕೊಂಡಿತ್ತು, ಆದರೆ ಈಗ ಬೇರೆಯವರು ಅದರ ಕೆಲಸದ ಲಾಭವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

‘ಯುವಕರು ಕೆಲಸಗಳನ್ನು ಕೇಳಿದಾಗ, ಸರ್ಕಾರವು ಅವರಿಗೆ ಚಂದ್ರನನ್ನು ನೋಡುವಂತೆ ಹೇಳುತ್ತದೆ’ ಎಂದು ಅವರು ಲೇವಡಿ ಮಾಡಿದರು.

ಕಳೆದ ವರ್ಷ ಡೊಕ್ಲಾಮ್‌ನಲಿ ಚೀನೀ ಸೇನೆಯು ಅತಿಕ್ರಮಣ ನಡೆಸಿದ್ದು ಏಕೆ ಎಂಬುದಾಗಿ ಪ್ರಧಾನಿ ಮೋದಿಯವರು ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಏಕೆ ಪ್ರಶ್ನಿಸಲಿಲ್ಲ ಎಂದು ರಾಹುಲ್ ಕೇಳಿದರು.

ರಾಹುಲ್ ಗಾಂಧಿಯವರು ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಚಾರದಿಂದ ದೂರ ಉಳಿಯುವರು ಎಂಬ ಊಹಾಪೋಹಗಳು ಹರಡಿದ್ದವು. ಅದರೆ ರಾಹುಲ್ ಗಾಂಧಿಯವರು ಅಕ್ಟೋಬರ್ ೧೩ರಂದು ಮುಂಬೈಯಲ್ಲಿ ಚುನಾವಣಾ ಪ್ರಚಾರ ನಡೆಸುವರು ಎಂದು ಪಕ್ಷದ ನಾಯಕರು ಬುಧವಾರ ದೃಢ ಪಡಿಸಿದ್ದರು.

ರಾಹುಲ್ ಗಾಂಧಿಯವರ ಚುನಾವಣಾ ಪ್ರಚಾರ ಸಭೆಗಿಂತ ಕೆಲವು ಗಂಟೆಗಳ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಜಲಗಾಂವ್‌ನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ್ದರು ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ನೇ ವಿಧಿಯನ್ನು ಪುನಃ ತರುವಂತೆ ವಿರೋಧ ಪಕ್ಷಗಳಿಗೆ ಸವಾಲು ಹಾಕಿದ್ದರು.

ಮೋದಿಯವರು ದೇಶದ ಆರ್ಥಿಕತೆ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿರಲಿಲ್ಲ.

October 14, 2019 Posted by | ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, Finance, Flash News, General Knowledge, India, Nation, News, Politics, Prime Minister, Spardha | , | Leave a comment

122 ಕಿ.ಮೀ. ಎನ್‌ಫೀಲ್ಡ್‌ ಬೈಕ್‌ ಸವಾರಿ ಮಾಡಿದ ಅರುಣಾಚಲ ಮುಖ್ಯಮಂತ್ರಿ

13 arunachal cm bike ride
ಇಟಾನಗರ
: ಮುಖ್ಯಮಂತ್ರಿಗಳು ರಸ್ತೆ ವೀಕ್ಷಣೆಗೆ ಕಾರಿನಲ್ಲಿ,ಕೆಲವೊಮ್ಮೆ ಸಂಪುಟ ಸಚಿವರೊಂದಿಗೆ ಬಸ್ಸಿನಲ್ಲಿ ಹೋಗುವುದು ಉಂಟು, ಆದರೆ ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಯಿಂಗ್‌ಕಿಯಾಂಗ್‌ ಮತ್ತು ಪಸಿಘಾಟ್‌ ಮಧ್ಯೆ 2019 ಅಕ್ಟೋಬರ್ 13ರ ಭಾನುವಾರ  ಬೈಕ್‌ ಸವಾರಿ ಮಾಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು.

ಅದೂ 122 ಕಿ.ಮೀ. ದೂರದ ದಾರಿಯನ್ನು ಅವರು ಎನ್‌ಫೀಲ್ಡ್‌ ಇಂಟರ್‌ಸೆಪ್ಟರ್‌ 650 ಬೈಕ್‌ನಲ್ಲಿ ಕ್ರಮಿಸಿದರು.

ಈ ದಾರಿ ಡಾಮರೀಕರಣವಾಗಿ ಅತ್ಯುತ್ತಮವಾಗಿದ್ದು ಬೈಕರ್‌ಗಳಿಗೆ ಹೇಳಿಮಾಡಿಸಿದ್ದಾಗಿದೆ. ಆದ್ದರಿಂದ ಆಸಕ್ತರು ಇಲ್ಲಿಗೊಮ್ಮೆ ಭೇಟಿ ಕೊಡಿ ಎಂದು ರಾಜ್ಯದ ಪ್ರವಾಸೋದ್ಯಮದ ಕುರಿತೂ ಅವರು ಪ್ರಚಾರ ಮಾಡಿದರು. ಈ ವಿಚಾರವನ್ನು ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡರು.

October 14, 2019 Posted by | Auto World, ಆಟೋ ಜಗತ್ತು, ಭಾರತ, ಮೋಟಾರು ವಾಹನ,, ರಾಷ್ಟ್ರೀಯ, Flash News, General Knowledge, India, Nation, News, Spardha | | Leave a comment

ಭಾರತ-ಚೀನಾ ರಕ್ಷಣೆ, ವ್ಯಾಪಾರ ಬಾಂಧವ್ಯ ವೃದ್ಧಿಗೆ ‘ಚೆನ್ನೈ ಸೇತು’

Mahabalipuram: Prime Minister Narendra Modi and Chinese President Xi Jinping exchange gifts on the 2nd day of an Informal Summit, in Tamil Nadu's Mahabalipuram on Oct 12, 2019. (Photo: IANS/PIB)
ಮಹಾಬಲಿಪುರಂ (
ಮಾಮಲ್ಲಪುರಂ): ’ಚೆನ್ನೈ ಸೇತು’ವಿನೊಂದಿಗೆ (ಚೆನ್ನೈ ಕನೆಕ್ಟ್) ಭಾರತ ಮತ್ತು ಚೀನಾ ಮಧ್ಯೆ ಸಹಕಾರದ ಹೊಸ ಯುಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಾಚೀನ ಕರಾವಳಿ ಪಟ್ಟಣದಲ್ಲಿ ಚೀನೀ ಅಧ್ಯಕ್ಷ ಕ್ಸಿ -ಜಿನ್‌ಪಿಂಗ್ ಜೊತೆಗಿನ ಎರಡು ದಿನಗಳ ಅವಧಿಯಲ್ಲಿನ ಐದೂವರೆ ಗಂಟೆಗಳ ಮುಖಾಮುಖಿ ಮಾತುಕತೆಗಳ ಬಳಿಕ  2019 ಅಕ್ಟೋಬರ್ 12ರ ಶನಿವಾರ ಇಲ್ಲಿ ಹೇಳಿದರು.

ಭಾರತ- ಚೀನಾ ನಡುವಣ ಎರಡನೇ ಅನೌಪಚಾರಿಕ ಶೃಂಗಸಭೆಯ ಅಂಗವಾಗಿ ನಡೆದ ಮಾತುಕತೆಗಳು ದ್ವಿಪಕ್ಷೀಯ ಬಾಂಧವ್ಯಗಳ ಬಗೆಗಿನ ’ಬಿಚ್ಚು ಮನಸ್ಸಿನ’ ಹಾಗೂ ಮನಃಪೂರ್ವಕವಾದ ಉತ್ತಮ ಮಾತುಕತೆಗಳಾಗಿದ್ದವು ಎಂದು ಹೇಳಿದ ಕ್ಸಿ, ’ಭಾರತ-ಚೀನಾ ಬಾಂಧವ್ಯವು ತಮ್ಮ ಸರ್ಕಾರದ ದೃಢ ನೀತಿಯಾಗಿದೆ’ ಎಂದು ನುಡಿದರು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನವನ್ನು ರದ್ದು ಪಡಿಸಿದ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಬಿಗಡಾಯಿಸಿದ ಬಾಂಧವ್ಯಗಳನ್ನು ಮರುಸ್ಥಾಪನೆ ಮಾಡುವ ಯತ್ನ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಉಭಯ ನಾಯಕರು ಆಡಿದ ಪ್ರಾಸ್ತಾವಿಕ ಮಾತುಗಳಲ್ಲಿ ಪ್ರತಿಫಲಿಸಿತು.

‘ವುಹಾನ್ ಸ್ಫೂರ್ತಿಯು ನಮ್ಮ ಬಾಂಧವ್ಯಗಳಿಗೆ ಹೊಸ ವೇಗವನ್ನು ಮತ್ತು ಒತ್ತನ್ನು ನೀಡಿತು. ಈಗ ನಮ್ಮ ಚೆನ್ನೈ ಸೇತು (ಚೆನ್ನೈ ಕನಿಕ್ಟ್) ಉಭಯ ರಾಷ್ಟ್ರಗಳ ನಡುವೆ ಸಹಕಾರದ ಹೊಸ ಯುಗಕ್ಕೆ ನಾಂದಿ ಹಾಡಿದೆ’ ಎಂದು ಮೋದಿಯವರು ಮೊದಲ ಅನೌಪಚಾರಿಕ ಶೃಂಗದ ಬಗ್ಗೆ ಉಲ್ಲೇಖಿಸುತ್ತಾ ನುಡಿದರು. ಉಭಯ ನಾಯಕರ ಮೊದಲ ಅನೌಪಚಾರಿಕ ಶೃಂಗಸಭೆಯು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ನಡೆದಿತ್ತು.

ವುಹಾನ್ ಶೃಂಗಸಭೆಯು ಭಾರತ – ಚೀನಾ ಬಾಂಧವ್ಯದ ಸ್ಥಿರತೆಯನ್ನು ಹೆಚ್ಚಿಸಿ, ಆಯಕಟ್ಟಿನ ಸಂಪರ್ಕ ಹೆಚ್ಚಳದ ಮೂಲಕ ಹೊಸ ವೇಗವನ್ನು ನೀಡಿದೆ ಎಂದು ಮೋದಿ ಹೇಳಿದರು.

‘ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಪ್ರೌಢತೆಯೊಂದಿಗೆ ನಿಭಾಯಿಸಬೇಕು ಮತ್ತು ಅವು ಘರ್ಷಣೆಗಳಾಗಲು ಬಿಡಬಾರದು ಎಂದು ನಾವು ತೀರ್ಮಾನಿಸಿದ್ದೆವು. ಪರಸ್ಪರರ ಕಾಳಜಿಗಳ ಬಗ್ಗೆ ನಾವು ಸೂಕ್ಷ್ಮವಾಗಿರೇಕು ಮತ್ತು ನಮ್ಮ ಬಾಂಧವ್ಯಗಳು ವಿಶ್ವಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ದಾರಿ ಮಾಡಬೇಕು ಎಂದು ನಾವು ನಿರ್ಧರಿಸಿದ್ದೆವು ಎಂದು ಮೋದಿ ಹೇಳಿದರು.

‘ಇವು ನಮ್ಮ ದೊಡ್ಡ ಸಾಧನೆಗಳಾಗಿದ್ದು, ಭವಿಷ್ಯದಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು ಸಾಧನೆಗೆ ನಮಗೆ ಪ್ರೇರಣೆ ನೀಡಲಿವೆ’ ಎಂದು ಮೋದಿ ನುಡಿದರು.

ಭಾರತ ಮತ್ತು ಚೀನಾ  ಕಳೆದ ೨೦೦೦ ವರ್ಷಗಳಿಂದ ಪ್ರಮುಖ ಜಾಗತಿಕ ಆರ್ಥಿಕ ಶಕ್ತಿಗಳಾಗಿದ್ದು, ಈಗ ಕ್ರಮೇಣ ಪುನಃ ಅದೇ ಹಂತಕ್ಕೆ ಮರಳುತ್ತಿವೆ ಎಂದು ಪ್ರಧಾನಿ ಹೇಳಿದರು. ’ಕಳೆದ ೨೦೦೦ ವರ್ಷಗಳಲ್ಲಿ, ಭಾರತ ಮತ್ತು ಚೀನಾ ವಿಶ್ವದ ಮುಂಚೂಣಿಯ ಆರ್ಥಿಕ ಶಕ್ತಿಗಳಾಗಿದ್ದವು. ಈಗ ಈ ಶತಮಾನದಲ್ಲಿ ನಾವು ಒಟ್ಟಾಗಿ ಈ ಸ್ಥಾನಮಾನವನ್ನು ಮತ್ತೆ ಪಡೆಯುತ್ತಿದ್ದೇವೆ’ ಎಂದು ಮೋದಿ ನುಡಿದರು.

‘ಮೊದಲ ಅನೌಪಚಾರಿಕ ಶೃಂಗ ಸಭೆಯು ಗೋಚರವಾಗುವಂತಹ ಪ್ರಗತಿಯನ್ನು ಸಾಧಿಸಿದೆ ಎಂದು ಕ್ಸಿ ಹೇಳಿದರು. ’ನಾವು ಆಳವಾದ ಆಯಕಟ್ಟಿನ ಸಂಪರ್ಕ ಸಾಧಿಸಿದ್ದೇವೆ. ಹೆಚ್ಚು ಪರಿಣಾಮಕಾರಿಯಾದ ಮತ್ತು ಪ್ರಾಯೋಗಿಕವಾದ ಸಹಕಾರ, ಉಭಯ ರಾಷ್ಟ್ರಗಳ ಜನ ಸಮುದಾಯಗಳ ಮಧ್ಯೆ ಹೆಚ್ಚಿನ ಸಾಂಸ್ಕೃತಿಕ ವಿನಿಮಯ ಮತ್ತು ಬಹುರಾಷ್ಟ್ರೀಯ ಸಂದರ್ಭಗಳಲ್ಲಿ ನಿಕಟ ಸಹಕಾರವನ್ನು ಸಾಧಿಸಿದ್ದೇವೆ’ ಎಂದು ಅವರು ನುಡಿದರು.

‘ಇಂತಹ ಅನೌಪಚಾರಿಕ ಶೃಂಗಸಭೆಯ ಮೂಲಕ ನಾವು ಸಮರ್ಪಕವಾದುದನ್ನು ಮಾಡಿದ್ದೇವೆ ಎಂಬುದು ಘಟನಾವಳಿಗಳಿಂದ ಸಾಬೀತಾಗಿದೆ. ಮತ್ತು ಈ ಮಾದರಿಯ ಸಭೆಗಳನ್ನು ನಾವು ಮುಂದುವರೆಸಬೇಕಾಗಿದೆ’ ಎಂದು ಚೀನೀ ನಾಯಕ ಹೇಳಿದರು.

‘ಶುಕ್ರವಾರ ಮತ್ತು ಶನಿವಾರ ಬೆಳಗ್ಗೆ, ಪ್ರಧಾನಿಯವರೇ, ನೀವು ಹೇಳಿದಂತೆ ನೀವು ಮತ್ತು ನಾನು ಗೆಳೆಯರಂತೆ ಬಿಚ್ಚು ಮನಸ್ಸಿನ ಮಾತುಕತೆ ನಡೆಸಿದ್ದೇವೆ. ದ್ವಿಪಕ್ಷೀಯ ಬಾಂಧವ್ಯ, ದ್ವಿಪಕ್ಷೀಯ ಬಾಂಧವ್ಯಗಳಿಗೆ ಸಂಬಂಧಿಸಿದ ಈ ಹೃತ್ಪೂರ್ವಕ ಮಾತುಕತೆಗಳಲ್ಲಿ ನಾವು ನಿಜವಾಗಿಯೂ ಅತ್ಯಂತ ಆಳವಾಗಿ ತೊಡಗಿಸಿಕೊಂಡಿದ್ದೆವು ಮತ್ತು ಉತ್ತಮ ಮಾತುಕತೆಗಳನ್ನು ನಡೆಸಿದೆವು’ ಎಂದು ಮೋದಿಯವರ ಪಕ್ಕದಲ್ಲೇ ಕುಳಿತುಕೊಂಡು ಕ್ಸಿ ಹೇಳಿದರು.

ಮಾತುಕತೆಗಳ ಬಳಿಕ ಟ್ವೀಟ್ ಮಾಡಿದ ಮೋದಿಯವರು ’ಭಾರತ-ಚೀನಾ ಬಾಂಧವ್ಯಗಳನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಫಲಪ್ರದ ಚರ್ಚೆ ನಡೆಸಿದ್ದೇವೆ’ ಎಂದು ಬರೆದರು.

ನಿಯೋಗ ಮಟ್ಟದ ಮಾತುಕತೆಗಳಿಗೆ ಮುನ್ನ ಮೋದಿಯವರು ಕ್ಸಿ ಅವರ ಜೊತೆಗೆ ಸಮುದ್ರ ತಡಿಯಲ್ಲಿನ ಮೀನುಗಾರರ ಕೊವ್ ರೆಸಾರ್ಟ್‌ನಲ್ಲಿ ಒಂದು ಗಂಟೆ ಕಾಲ ಮುಖಾಮುಖಿ ಮಾತುಕತೆ ನಡೆಸಿ, ಹೆಚ್ಚಿನ ದ್ವಿಪಕ್ಷೀಯ ಬಾಂಧವ್ಯ ವರ್ಧನೆ ಬಗ್ಗೆ ಸುಳಿವು ನೀಡಿದರು.

ಉಭಯ ನಾಯಕರು ಸಮುದ್ರ ದಂಡೆಯಲ್ಲಿ ಸುತ್ತಾಡುತ್ತಲೂ ಮಾತುಕತೆ ನಡೆಸಿದರು.

ಇದಕ್ಕೆ ಮುನ್ನ ಉಭಯ ನಾಯಕರು ಗೋಲ್ಫ್ ಕಾರ್ಟ್‌ಗೆ ಜೊತೆಯಾಗಿ ಬಂದರು. ಕ್ಸಿ ಅವರು ೨೪ ಗಂಟೆಗಳ ತಮ್ಮ ಪ್ರವಾಸವನ್ನು ಮುಕ್ತಾಯಗೊಳಿಸಿ ಮಧ್ಯಾಹ್ನ ೧೨.೪೫ಕ್ಕೆ ಮಾಮಲ್ಲಪುರಂನಂದ ಚೆನ್ನೈ ವಿಮಾನ ನಿಲ್ದಾಣದತ್ತ ಹೊರಟರು.

ಚೀನೀ ಅಧ್ಯಕ್ಷರು ಶುಕ್ರವಾರ ಬಂದರು ನಗರಕ್ಕೆ ಆಗಮಿಸಿದ್ದರು. ಶುಕ್ರವಾರ ಮೋದಿ ಮತ್ತ ಕ್ಸಿ ಅವರು ರಾತ್ರಿಯ ಭೋಜನಕೂಟದಲ್ಲಿ ಸುಮಾರು ಎರಡೂವರೆ ಗಂಟೆ ಕಾಲ ಮುಖಾಮುಖಿ ಮಾತುಕತೆ ನಡೆಸಿದ್ದರು. ಭಯೋತ್ಪಾದನೆ, ತೀವ್ರಗಾಮಿತ್ವವನ್ನು ನಿಗ್ರಹಿಸುವ ಬಗ್ಗೆ ಮತ್ತು ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ವಿಸ್ತರಣೆ ಬಗೆ ಅವರು ಚರ್ಚಿಸಿದರು.

ಸುಂದರವಾದ ಕರಾವಳಿ ದೇಗುಲ ಸಮುಚ್ಛಯದ ಬಳಿ ವರ್ಣರಂಜಿತ ಶಾಮಿಯಾನದ ಆವರಣದಲ್ಲಿ ನಡೆದ ಭೋಜನಕೂಟಕ್ಕೆ ರುಚಿ ರುಚಿಯಾದ ಸ್ಥಳೀಯ ಸ್ವಾದದ ಶಾಕಾಹಾರ ಮತ್ತು ಮಾಂಸಾಹರದ ಭಕ್ಷಗಳನ್ನು ಸಿದ್ಧ ಪಡಿಸಲಾಗಿತ್ತು.

‘ಉಭಯ ನಾಯಕರು ತೀವ್ರವಾಗಿತ್ವ ಮತ್ತು ಭಯೋತ್ಪಾದನೆಗಳು ಉಭಯ ರಾಷ್ಟ್ರಗಳ ಬಹು -ಸಂಸ್ಕೃತಿ, ಬಹು-ಜನಾಂಗ ಮತ್ತು ಬಹುಧಾರ್ಮಿಕ ಸಮಾಜಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಒಟ್ಟಾಗಿ ಶ್ರಮಿಸಲು ಒಪ್ಪಿದರು’ ಎಂದು ಶೃಂಗಸಭೆಯ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಜಂಯ್ ಗೋಖಲೆ ಹೇಳಿದರು.

ಉಭಯ ನಾಯಕರು ವ್ಯಾಪಾರ ಮತ್ತು ಆರ್ಥಿಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿ, ಹೂಡಿಕೆ ಮತ್ತು ವ್ಯವಹಾರ ವಿಸ್ತರಣೆಯ ಹೊಸ ಕ್ಷೇತ್ರಗಳನ್ನು ಗುರುತಿಸುವ ನಿಟ್ಟಿನಲ್ಲಿ ಬೆಳಕು ಚೆಲ್ಲಲು ನಿರ್ಧರಿಸಿದರು. ವ್ಯಾಪಾರ ಕೊರತೆ ಮತ್ತು ವ್ಯಾಪಾರ ಅಸಮತೋಲನ ಬಗೆಗೂ ಚರ್ಚಿಸಲಾಯಿತು ಎಂದು ವಿದೇಶಾಂಗ ಕಾರ್ಯದರ್ಶಿ ನುಡಿದರು.

ವ್ಯಾಪಾರ ಕೊರತೆ ಇಳಿಸಲು ಸಮಗ್ರ ಕ್ರಮಗಳನ್ನು ಕೈಗೊಳ್ಳಲು ಚೀನಾ ಸಿದ್ಧವಿದೆ. ವುಹಾನ್ ಸ್ಫೂರ್ತಿಯನ್ನು ಇನ್ನಷ್ಟು ವಿಸ್ತರಿಸುವ ಮಾತನಾಡಿದ ಪ್ರಧಾನಿ ಮೋದಿಯವರು ಭಾರತ-ಚೀನಾ ಮಧ್ಯೆ ಸಹಕಾರದ ಹೊಸ ಯುಗಾರಂಭಕ್ಕಾಗಿ  ’ಚೆನ್ನೈ ಸೇತು’ ಬಗ್ಗೆ ಮಾತನಾಡಿದರು ಎಂದು ಗೋಖಲೆ ಹೇಳಿದರು.

ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದ ವಿಷಯಗಳಿಗಾಗಿ ಹೊಸ ವ್ಯವಸ್ಥೆ ರೂಪಿಸುವ ಬಗ್ಗೆ ಮಾತಕತೆ ನಡೆಯಿತು. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಕುರಿತ ಭಾರತದ ಕಾಳಜಿ ಬಗೆ ಚರ್ಚಿಸುವುದಾಗಿ ಅಧ್ಯಕ್ಷ ಕ್ಸಿ ಭರವಸೆ ನೀಡಿದರು ಎಂದು ವಿದೇಶಾಂಗ ಕಾರ್ಯದರ್ಶಿ ನುಡಿದರು.

ನಿಯಮ ಆಧಾರಿತ ಜಾಗತಿಕ ವ್ಯಾಪಾರ ವ್ಯವಸ್ಥೆಯ ಮಹತ್ವದ ಬಗ್ಗೆ ಮೋದಿ ಮತು ಕ್ಸಿ ಒತ್ತು ನೀಡಿದರು. ರಕ್ಷಣಾ ಸಹಕಾರ ವಿಸ್ತರಣೆ ಬಗೆಗೂ ಕ್ಷಿ ಮಾತನಾಡಿದರು ಎಂದು ಗೋಖಲೆ ಹೇಳಿದರು.

ಕ್ಸಿ ಮತ್ತು ಮೋದಿ ಇಬ್ಬರು ಉಭಯ ರಾಷ್ಟ್ರಗಳು ಭವಿಷ್ಯದತ್ತ ನೋಡುವ ಅಗತ್ಯವನ್ನು ಪ್ರತಿಪಾದಿಸಿದರು. ಭಯೋತ್ಪಾದನೆಯ ಸವಾಲು ಎದುರಿಸುವ ನಿಟ್ಟಿನಲ್ಲಿ ಒಟ್ಟಾಗಿ ದುಡಿಯಲು ಉಭಯ ರಾಷ್ಟ್ರಗಳು ಒಪ್ಪಿದವು.

ಅನೌಪಚಾರಿಕ ಶೃಂಗಸಭೆಯಲ್ಲಿ ಕಾಶ್ಮೀರದ ವಿಚಾರ ಚರ್ಚೆ ನಡೆಯಲಿಲ್ಲ ಎಂದು ಗೋಖಲೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು

October 14, 2019 Posted by | ಆರ್ಥಿಕ, ನರೇಂದ್ರ ಮೋದಿ, ಪ್ರಧಾನಿ, ಭಯೋತ್ಪಾದಕ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Finance, Flash News, General Knowledge, India, Nation, News, Prime Minister, Spardha, World | , | Leave a comment

ಇಮ್ರಾನ್ ಖಾನ್ ಭೇಟಿ ಬಗ್ಗೆ ಹೇಳಿದ ಕ್ಸಿ, ಸುಮ್ಮನೇ ಕೇಳಿಸಿಕೊಂಡ ಪ್ರಧಾನಿ ಮೋದಿ

12 vijay_gokhale
ನವದೆಹಲಿ
: ತಮಿಳುನಾಡಿನ ಚಾರಿತ್ರಿಕ ತಾಣ ಮಹಾಬಲಿಪುರಂ (ಮಾಮಲ್ಲಪುರಂ) ಪಟ್ಟಣದಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗ ಸಭೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಗೊಳ್ಳಲಿಲ್ಲ, ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಬಗ್ಗೆ ಉಸುರಿದರು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೇ ಕೇಳಿಸಿಕೊಂಡರು ಅಷ್ಟೆ.

ಎರಡು ದಿನಗಳ ಶೃಂಗಸಭೆ ಸಮಾಪ್ತಿಯ ಬಳಿಕ  2019 ಅಕ್ಟೋಬರ್ 12ರ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ವಿಷಯವನ್ನು ತಿಳಿಸಿದರು.

‘ಈ (ಕಾಶ್ಮೀರ) ವಿಷಯದ ಪ್ರಸ್ತಾಪವಾಗಲಿಲ್ಲ, ಅಥವಾ ಚರ್ಚೆ ನಡೆಯಲಿಲ್ಲ. ಏನಿದ್ದರೂ, ಇದು ಭಾರತದ ಆಂತರಿಕ ವಿಷಯ ಎಂಬ ನಮ್ಮ ನಿಲುವಂತೂ ಸ್ಪಷ್ಟವಾಗಿದೆ’ ಎಂದು ಹೇಳಿದರು.

ಆದಾಗ್ಯೂ ಕ್ಸಿ ಅವರು ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ಈ ವಾರಾರಂಭದಲ್ಲಿ ಬೀಜಿಂಗ್‌ಗೆ ನೀಡಿದ್ದ ಭೇಟಿಯ ಬಗ್ಗೆ ವಿವರಿಸಿದರು. ಪ್ರಧಾನಿ ಮೋದಿಯವರು ಅದನ್ನು ಸುಮ್ಮನೇ ಕೇಳಿಸಿಕೊಂಡರು, ಆದರೆ ಪ್ರತಿಕ್ರಿಯಿಸಲಿಲ್ಲ ಎಂದು ಗೋಖಲೆ ನುಡಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಬಳಿಕ ಕಳೆದ ಕೆಲವು ತಿಂಗಳುಗಳಲ್ಲಿ ಭಾರತ-ಚೀನಾ ಬಾಂಧವ್ಯ ಪ್ರಕ್ಷುಬ್ಧಗೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ -ಚೀನಾ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮವನ್ನು ವಿರೋಧಿಸಿದ ಪಾಕಿಸ್ತಾನವನ್ನು ಚೀನಾ ಬೆಂಬಲಿಸಿದ್ದರಿಂದ ಆ ದೇಶದ ಜೊತೆಗಿನ ಭಾರತದ ಬಾಂಧವ್ಯ ಬಿಗಡಾಯಿಸಿತ್ತು.

ಚೀನೀ ಅಧ್ಯಕ್ಷರು ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಭಾರತ ಪ್ರವಾಸ ಮಾಡುವುದಕ್ಕೆ ಮುಂಚಿತವಾಗಿ ಚೀನಾಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಧ್ಯಕ್ಷ ಕ್ಸಿ ಅವರು ಕಾಶ್ಮೀರದ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತ್ತು

October 14, 2019 Posted by | ನರೇಂದ್ರ ಮೋದಿ, ಪಾಕಿಸ್ತಾನ, ಪ್ರಧಾನಿ, ಭಾರತ, ರಾಷ್ಟ್ರೀಯ, ವಿಶ್ವ/ ಜಗತ್ತು, Flash News, General Knowledge, India, Nation, News, Pakistan, Prime Minister, Spardha, World | , | Leave a comment

ಜಮ್ಮು-ಕಾಶ್ಮೀರದಲ್ಲಿ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆ ಪುನಾರಂಭ

12 mobile services started in j and k
ನವದೆಹಲಿ:
ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಸಂಪರ್ಕ ಇಲ್ಲದೇ ಇರುವ ಬಾಕಿ ಸ್ಥಳಗಳಲ್ಲೂ ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಪುನಾರಂಭಗೊಳ್ಳಲಿವೆ ಎಂದು ಸರ್ಕಾರವು 2019 ಅಕ್ಟೋಬರ್ 12ರ ಶನಿವಾರ ಪ್ರಕಟಿಸಿತು.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ವಿಧಿಸಿದ ಬಳಿಕ ಮೊಬೈಲ್ ಸೇವೆ ಸೇರಿದಂತೆ ಎಲ್ಲ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದಾಗಿ ಎರಡಕ್ಕೂ ಹೆಚ್ಚು ತಿಂಗಳುಗಳ ಬಳಿಕ ಎಲ್ಲ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಸೋಮವಾರ ಪುನಾರಂಭಿಸಾಗುವುದು ಎಂದು ಸರ್ಕಾರ ಹೇಳಿತು.

ವಿಶೇಷ ಸ್ಥಾನಮಾನ ರದ್ದು ಪಡಿಸಿ ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಜನರ ಸಂಚಾರ, ದೂರವಾಣಿ ಮತ್ತು ಇಂಟರ್ ನೆಟ್ ಸೇವೆಗಳನ್ನು ಅಮಾನತುಗೊಳಿಸಿ ಜನರ ಚಲನವಲನಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆಗಸ್ಟ್ ೫ರಿಂದ ರಾಜ್ಯದ ನೂರಾರು ನಾಯಕರನ್ನೂ ಬಂಧಿಸಲಾಗಿತ್ತು.

ಭಯೋತ್ಪಾದನೆ ನಿಗ್ರಹ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಲಾಗಿದೆ ಎಂದು ಸರ್ಕಾರ ಹೇಳಿತ್ತು.

‘ಪರಿಸ್ಥಿತಿಯ ಪುನರ್ ಪರಿಶೀಲನೆಯ ಬಳಿಕ, ಜಮ್ಮು ಮತ್ತು ಕಾಶ್ಮೀರದ ಉಳಿದ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಪುನಾರಂಭಿಸುವ ನಿರ್ಧಾರವನ್ನು ಈಗ ಕೈಗೊಳಲಾಗಿದೆ ಎಂದು ರಾಜ್ಯದ ಮುಖ್ಯ ಕಾರ್‍ಯದರ್ಶಿ ರೋಹಿತ್ ಕಂಸಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಎಲ್ಲ ಪೋಸ್ಟ್  ಪೇಯ್ಡ್ ಸೇವೆಗಳನ್ನು  ಸೋಮವಾರ ಮಧ್ಯಾಹ್ನ ೧೨ ಗಂಟೆಯಿಂದ ಪುನಾರಂಭಿಸಲಾಗುವುದು. ಕಾಶ್ಮೀರ ಪ್ರಾಂತದ ಎಲ್ಲ ೧೦ ಜಿಲ್ಲೆಗಳಿಗೂ ಈ ನಿರ್ಣಯ ಅನ್ವಯಿಸುವುದು’ ಎಂದು ಕಂಸಲ್ ನುಡಿದರು.

ಸ್ಥಿರ ದೂರವಾಣಿಗಳು (ಟೆಲಿಫೋನ್ ಲ್ಯಾಂಡ್ ಲೈನ್‌ಗಳು) ಮುಂದಿನ ಆರು ವಾರಗಳಲ್ಲಿ ಸಂಪೂರ್ಣವಾಗಿ ಪುನಃಸ್ಥಾಪನೆಯಾಗಲಿವೆ ಎಂದು ಹಿರಿಯ ಅಧಿಕಾರಿ ನುಡಿದರು.

ಹಂತಹಂತವಾಗಿ ಮೊಬೈಲ್ ಫೋನುಗಳ ಪುನಾರಂಭ ಮಾಡುವುದರಿಂದ ಕಾನೂನು ಸುವ್ಯವಸ್ಥೆಯ ಮೇಲೆ ಯಾವುದೇ ದುಷ್ಪರಿಣಾಮವಾಗದು ಎಂಬುದಾಗಿ ಭದ್ರತಾ ಸಂಸ್ಥೆಗಳು ತಿಳಿಸಿದ ಬಳಿಕ ಈ ಕ್ರಮ ಕೈಗೊಳ್ಳಾಯಿತು ಎಂದು ಅವರು ನುಡಿದರು.

ಜಮ್ಮು ಪ್ರದೇಶದಲ್ಲಿ ಮೊಬೈಲ್ ಸಂಪರ್ಕವನ್ನು ಸೆಪ್ಟೆಂಬರ್ ಎರಡನೇ ವಾರದಲ್ಲಿ ಪುನಃಸ್ಥಾಪನೆ ಮಾಡಲಾಗಿತ್ತು. ಆದರೆ ಊಹಾಪೋಹಗಳನ್ನು ಅನುಸರಿಸಿ ಮೊಬೈಲ್ ಸಂಪರ್ಕಗಳನ್ನು ಪುನಃ ಸ್ಥಗಿತಗೊಳಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು  ೬ ಲಕ್ಷ ಮೊಬೈಲ್ ಫೋನ್ ಸಂಪರ್ಕಗಳಿವೆ.

ಕುಪ್ವಾರ ಮತ್ತು ಹಂದ್ವಾರಗಳಲ್ಲಿ ಸೆಪ್ಟೆಂಬರ್ ೧೨ರ ವೇಳೆಗೆ ಗಮನಾರ್ಹ ಸಂಖ್ಯೆಯ ಮೊಬೈಲುಗಳು ಕಾರ್ಯ ನಿರ್ವಹಿಸುವ ಸ್ಥಿತಿಗೆ ಬಂದಿದ್ದವು ಎಂದು ಕಂಸಲ್ ನುಡಿದರು.

ಆಗಸ್ಟ್ ೧೬ರಿಂದ ಕ್ರಮ ಕ್ರಮವಾಗಿ ನಿರ್ಬಂಧಗಳನ್ನು ಕಿತ್ತು ಹಾಕಲಾಗುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿತ್ತು ಎಂದು ಅಧಿಕಾರಿ ನುಡಿದರು.

೮-೧೦ ಪೊಲೀಸ್ ಠಾಣೆ ವ್ಯಾಪ್ತಿಗಳನ್ನು ಹೊರತು ಪಡಿಸಿ, ಎಲ್ಲ ಕಡೆ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಜಮ್ಮ ಮತ್ತು ಕಾಶ್ಮೀರದ ಶೇಕಡಾ ೯೯ರಷ್ಟು ಪ್ರದೇಶಗಳಲ್ಲಿ ಸಂಚಾರದ ಮೇಲೆ ಯಾವುದೇ ನಿರ್ಬಂಧಗಳು ಇಲ್ಲ ಎಂದು ಅವರು ಹೇಳಿದರು.

ಸಂಪರ್ಕ ನಿರ್ಬಂಧ ಮತ್ತು ರಾಜಕಾರಣಿಗಳು ಸೇರಿದಂತೆ ನೂರಾರು ಜನರ ಬಂಧನ ಕ್ರಮಕ್ಕೆ ದೇಶ ಹಾಗೂ ಜಾಗತಿಕವಾಗಿ ತೀವ್ರ ಟೀಕೆ ವ್ಯಕ್ತವಾಗಿತ್ತು.

ನಿರ್ಬಂಧಗಳ ರದ್ದಿನೊಂದಿಗೆ ಈಗ ಪ್ರವಾಸಿಗರು ಯಾವುದೇ ಅಡೆತಡೆ, ಫೋನ್ ಸಂಪರ್ಕಕ್ಕೆ ಅಡಚಣೆ ಇಲ್ಲದೆ ರಾಜ್ಯದಲ್ಲಿ ಪ್ರವಾಸ ನಡೆಸಬಹುದು. ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾದ ವೇಳೆಯಲ್ಲಿ ತಮ್ಮ ಹೆತ್ತವರೊಂದಿಗೆ ಸಂಪರ್ಕ ಸಾಧಿಸಬಹುದು.   ವ್ಯಾಪಾರಿಗಳು ತಮ್ಮ ಗ್ರಾಹಕರ ಜೊತೆ, ಸಾಗಣೆದಾರರು ತಮ್ಮ ಅಂಗಡಿದಾರರ ಜೊತೆ ಮತ್ತು ಕಾಂಟ್ರಾಕ್ಟರುಗಳು ತಮ್ಮ ಕೆಲಸಗಾರರ ಜೊತೆ ಸಂಪರ್ಕ ಸಾಧಿಸಬಹುದು’ ಎಂದು ಕಂಸಲ್ ಹೇಳಿದರು.

October 14, 2019 Posted by | ಭಾರತ, ರಾಷ್ಟ್ರೀಯ, Flash News, General Knowledge, Nation, News, Spardha | | Leave a comment

ಸಮುದ್ರ ದಡದಲ್ಲಿ ಕಸ ಆಯ್ದು ಸ್ವಚ್ಛತೆಯ ಸಂದೇಶ ಸಾರಿದ ಪ್ರಧಾನಿ ಮೋದಿ

12 modi plogging
ಚೆನ್ನೈ
: ಪ್ರಧಾನಿ ಮೋದಿ 2019 ಅಕ್ಟೋಬರ್ 12ರ ಶನಿವಾರ ಬೆಳ್ಳಂಬೆಳಗ್ಗೆ ಮಹಾಬಲಿಪುರಂನಲ್ಲಿರುವ ಸಮುದ್ರ ದಂಡೆಯಲ್ಲಿ ಕಸ ತೆಗೆಯುವ (ಪ್ಲಾಗಿಂಗ್ = ಪ್ಲಾಸ್ಟಿಕ್ ಹೆಕ್ಕುತ್ತಾ ಜಾಗಿಂಗ್ ಮಾಡುವುದು) ಕೆಲಸ ಮಾಡುವ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ಸಾರಿದರು. ಸದ್ಯ ಈ ವಿಡಿಯೋ ಎಲ್ಲೆಡೆ ಭಾರೀ ವೈರಲ್​ ಆಯಿತು. ದೇಶದ ಪ್ರಧಾನಿ ಇಂತಹ ಸ್ವಚ್ಛತಾ ಕಾರ್ಯ ಮಾಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಪ್ರಧಾನಿ ಮೋದಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಮುದ್ರದ ತೀರದಲ್ಲಿ ವಾಕಿಂಗ್ ಮಾಡಿದರು. ಇದೇ ವೇಳೆ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್​ ತ್ಯಾಜ್ಯಗಳು, ಮತ್ತಿತರ ಕಸವನ್ನು ಬ್ಯಾಗ್​ವೊಂದಕ್ಕೆ ತುಂಬಿಸಿದರು. ಈ ವಿಡಿಯೋವನ್ನು ಮೋದಿ ಟ್ವಿಟರ್​ನಲ್ಲಿ ಹಂಚಿಕೊಂಡರು.

“ಇಂದು ಬೆಳಗ್ಗೆ ಮಹಾಬಲಿಪುರಂನ ಸಮುದ್ರ ತೀರವೊಂದರಲ್ಲಿ ಪ್ಲಾಗಿಂಗ್​  ಮಾಡಿದೆ. ಈ ವೇಳೆ ಸಮುದ್ರದ ದಡದಲ್ಲಿ ಬಿದ್ದಿದ್ದ ಕಸವನ್ನು ಬ್ಯಾಗ್​ಗೆ ತುಂಬಿಸಿದೆ. ಬಳಿಕ ಆ ಬ್ಯಾಗನ್ನು ಹೋಟೆಲ್​ ಸಿಬ್ಬಂದಿ ಜಯರಾಜ್​ಗೆ ಕೊಟ್ಟೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಜೊತೆಗೆ ನಾವು ಸಹ ಸದೃಢ ಹಾಗೂ ಆರೋಗ್ಯವಾಗಿರಬೇಕು,” ಎಂದು ಮೋದಿ ಟ್ವೀಟ್​ ಮಾಡಿದರು. ಪ್ಲಾಗಿಂಗ್ ಎಂದರೆ ವಾಕ್ ಮಾಡುತ್ತಾ ಅಥವಾ ಜಾಗಿಂಗ್ ಮಾಡುತ್ತಾ ರಸ್ತೆಯಲ್ಲಿ ಬಿದ್ದ ಕಸವನ್ನು ಆಯ್ದು ಸ್ವಚ್ಛಗೊಳಿಸುವುದು.

ಮಹಾಬಲಿಪುರಂ ಸಮುದ್ರ ತೀರದಲ್ಲಿ ಮನಸ್ಸಿಗೆ ಆಹ್ಲಾದ ಉಂಟು ಮಾಡುವ ನಡಿಗೆ ಎಂದು ಮೋದಿ ಮತ್ತೊಂದು ಟ್ವೀಟ್​ನಲ್ಲಿ ಬರೆದುಕೊಂಡರು.

ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಷಿ ಜಿನ್​ಪಿಂಗ್​ ಜೊತೆ ಅನೌಪಚಾರಿಕ ಸಭೆ ನಡೆಸಲು ತಮಿಳುನಾಡಿನ ಮಹಾಬಲಿಪುರಂಗೆ ಬಂದಿದ್ದರು.

October 14, 2019 Posted by | ನರೇಂದ್ರ ಮೋದಿ, ಪ್ರಧಾನಿ, ಭಾರತ, ರಾಷ್ಟ್ರೀಯ, environment /endangered species, Flash News, General Knowledge, India, Nation, News, News, Environment, ಸುದ್ದಿ, ಪರಿಸರ, ಸಾಮಾನ್ಯ ಜ್ಞಾನ, ವಿಜ್ಞಾನ, Spardha, World | , , , | Leave a comment

ಶ್ರೀನಗರದಲ್ಲಿ ಗ್ರೆನೆಡ್ ದಾಳಿ: ೮ ಜನರಿಗೆ ಗಾಯ

12 grenade attack-in-srinagar
ಶ್ರಿನಗರ:  ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 2019 ಅಕ್ಟೋಬರ್ 12ರ ಶನಿವಾರ ಶಂಕಿತ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ೮ ಮಂದಿ ಗಾಯಗೊಂಡರು  ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.

ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಜನ ಸಂಚಾರದ ಮೇಲೆ ನಿರ್ಬಂಧಗಳನ್ನು ವಿಧಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ ಈ ಮಾದರಿಯ ಮೂರನೇ ಘಟನೆ ಇದಾಯಿತು.

ಶಂಕಿತ ಭಯೋತ್ಪಾದಕರು ಹರಿ ಸಿಂಗ್ ಹೈ ಸ್ಟ್ರೀಟಿನಲ್ಲಿ ಗ್ರೆನೇಡ್ ಎಸೆದಿದ್ದು, ಅದು ಲಾಲ್ ಚೌಕದಿಂದ ಕೆಲವು ನೂರು ಮೀಟರ್ ದೂರ ರಸ್ತೆ ಬದಿಯಲ್ಲಿ ಸ್ಫೋಟಗೊಂಡಿದೆ. ಈ ಸ್ಥಳವು ನಾಗರಿಕ ಸಚಿವಾಲಯ ಮತ್ತು ರಾಜ್ಯ ವಿಧಾನಸಭೆಗೆ ಸಮೀಪವಿರುವ ಸ್ಥಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಿರ್ಬಂಧಗಳ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿದ್ದು, ಪ್ರದೇಶದಲ್ಲಿ ಹಣ್ಣು ಮತ್ತು ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಮಾರುವ ವ್ಯಾಪಾರಿಗಳ ಕೈಗಾಡಿಗಳು ಇದ್ದವು ಎಂದು ಅವರು ಹೇಳಿದರು.

October 14, 2019 Posted by | ಭಯೋತ್ಪಾದಕ, ಭಾರತ, ರಾಷ್ಟ್ರೀಯ, Flash News, General Knowledge, India, Nation, News, Pakistan, Spardha, Terror | | Leave a comment

WordPress.com

WordPress.com is the best place for your personal blog or business site.

SPARDHA

General Knowledge ಸ್ಪರ್ಧಾ ಸಾಮಾನ್ಯ ಜ್ಞಾನ